ಸಾಂಸ್ಥಿಕ ಹಣಕಾಸು ಸಂಸ್ಥೆಗಳ ಸಾಲ ಮರುಪಾವತಿ ಕಂತು ಕಟ್ಟಿಸಿಕೊಳ್ಳುವುದನ್ನು ಆರು ತಿಂಗಳುಗಳ ಕಾಲ ಮುಂದೂಡುವಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ವಕೀಲರ ಒಕ್ಕೂಟ ಆಗ್ರಹಿಸಿದೆ.
ಕೊರನ ವೈರಸ್ ರೋಗದ ಕಾರಣ ಸಮಾಜದಲ್ಲಿ ಆರ್ಥಿಕ ಚಟುವಟಿಕೆಗಳು ಭಾಗಶಃ ಸ್ಥಗಿತಗೊಂಡಿರುವುದರಿಂದ ಸಮಾಜದ ಕೆಳಸ್ಥರದ ದುಡಿಯುವ ಜನತೆಗೆ ಹಲವು ರೀತಿಯ ಸಮಸ್ಯೆಗಳು ಸೃಷ್ಟಿಯಾಗಿ ಅವರ ಆದಾಯ ಕುಂಠಿತವಾಗಿದೆ ಎಂದಿರುವ ಅಖಿಲ ಭಾರತ ವಕೀಲರ ಒಕ್ಕೂಟ, ಸಾಂಸ್ಥಿಕ ಹಣಕಾಸು ಸಂಸ್ಥೆಗಳ ಸಾಲ ಮರುಪಾವತಿಯನ್ನು ಆರು ತಿಂಗಳುಗಳ ಕಾಲ ಮುಂದೂಡುವಂತೆ ಆಗ್ರಹಿಸಿದೆ.
“ಮಹಿಳೆಯರಿಂದ ಕಾರ್ಯನಿರ್ವಹಿಸುವ ಸಣ್ಣ ಹಣಕಾಸು ಸಂಸ್ಥೆಗಳ ಸಾಲಗಳು, ಸ್ವ ಸಹಾಯ ಸಂಘದ ಸಾಲಗಳನ್ನು ಮಹಿಳೆಯರು ಮರುಪಾವತಿಸಲು ಕಷ್ಟವಾಗುತ್ತಿದೆ. ಆಟೋ, ಕ್ಯಾಬ್, ಸರಕು ಸಾಗಣೆ ವಾಹನಗಳ ಡ್ರೈವರ್ ಮತ್ತು ಮಾಲೀಕರು ವಾಹನದ ಸಾಲದ ಕಂತನ್ನು ಮರುಪಾವತಿಸಲು ಕಷ್ಟವಾಗುತ್ತಿದೆ” ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕುಮಾರ ಮತ್ತು ಅಧ್ಯಕ್ಷರಾದ ಎಸ್.ಶಂಕರಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಣ್ಣ ಕೈಗಾರಿಕೆಗಳು, ಕೃಷಿಕರು, ಕುಕ್ಕುಟೋಧ್ಯಮ, ಹೈನುಗಾರಿಕೆ, ತೋಟಗಾರಿಕೆ, ಮತ್ಸ್ಯಧ್ಯಮಗಳಲ್ಲಿ ಸಾಲ ಪಡೆದಿರುವವರು ಸಹ ಸಾಲವನ್ನುಮರುಪಾವತಿಸಉವುದು ಕಷ್ಟಕರವಾಗಿದೆ, ಎಂದ ಒಕ್ಕೂಟ ” ಎಲ್ಲಾ ರೀತಿಯ ಹಣಕಾಸಿನ ಸಂಸ್ಥೆಗಳು, ಬ್ಯಾಂಕುಗಳು ಹಾಗೂ ಬ್ಯಾಂಕಿಂಗೇತರ ಸಂಸ್ಥೆಗಳ ಸಾಲ ಮರುಪಾವತಿ ಕ್ರಮವನ್ನು ಕೂಡಲೇ ನಿಲ್ಲಿಸುವಂತೆ ಹಾಗೂ ಆರು ತಿಂಗಳುಗಳ ಅವಧಿಗೆ ಮರುಪಾವತಿ ಯಿಂದ ಸಂಪೂರ್ಣ ವಿನಾಯಿತಿ ನೀಡುವಂತೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು” ಎಂದು ಒಕ್ಕೂಟ ಆಗ್ರಹಿಸಿದೆ.


