Homeಅಂಕಣಗಳುಸುದ್ದಿಯೇನೇ ಮನೋಲ್ಲಾಸಿನಿ: ಎಲ್ಲಾ ಸರಿ ಈ ಪೆಗಸಸ್ ಅಂದರೆ ಏನು?

ಸುದ್ದಿಯೇನೇ ಮನೋಲ್ಲಾಸಿನಿ: ಎಲ್ಲಾ ಸರಿ ಈ ಪೆಗಸಸ್ ಅಂದರೆ ಏನು?

- Advertisement -
- Advertisement -

ಒಲಿಂಪಿಕ್ ಶುರು ಆಗಲಿಕ್ಕೆ ಬಂದವು. ಅದಕ್ಕ ಸಂಬಂಧಪಟ್ಟ ಒಂದು ಕತಿ ಕೇಳೋಣ. ಒಂದಾನೊಂದು ಕಾಲದಾಗ, ಏಟೊಂದು ಮುದ ಇದ್ದ ಕಾಲದಾಗ ಗ್ರೀಕ್ ದೇಶದೊಳಗ ಒಬ್ಬವ ರಾಜಾ ಇದ್ದ. ಅವನ ಹೆಸರು ಪೊಸಯಿಡೋನ. ಆತ ಸಮುದ್ರ, ಭೂಕಂಪನ ಹಾಗೂ ಕುದುರೆಗಳ ದೇವರು. ಅವನ ಕೈಯಾಗ ಒಂದು ತ್ರಿಶೂಲ ಇತ್ತು. ತನ್ನ ತ್ರಿಶೂಲದಿಂದ ಭೂಮಿಮ್ಯಾಲೆ ಗೆರೆ ಹೊಡದು ನೀರಿನ ಝರಿಗಳನ್ನು ಆತ ಸೃಷ್ಟಿ ಮಾಡುತ್ತಿದ್ದ. ಇಡೀ ವಿಶ್ವವನ್ನೇ ಅಲುಗಾಡಿಸಬಲ್ಲ ಶಕ್ತಿ ಉಳ್ಳವನು ಅಂತ ಅವನಿಗೆ ‘ಭೂಕಂಪನಾಧೀಶ’ ಅಂತ ಹೆಸರು ಇತ್ತು. ಆತ ಹುಚ್ಚು ಕುದುರೆಗಳನ್ನು ಹತೋಟಿಗೆ ತರುವ ಕುಶಲತೆ ಇದ್ದವನು ಅನ್ನುವುದು ಅವನ ಹೆಗ್ಗಳಿಕೆ. ಎಲ್ಲಕ್ಕಿಂತ ಮುಖ್ಯವಾಗಿ ಆತ ಒಲಿಂಪಿಕ್ ಆಟಗಾರ.

ಅಣ್ಣಾ ತಮ್ಮಂದಿರ ನಡುವೆ ಆಸ್ತಿ ಬಟವಾಡೆ ಆದ ನಂತರ ತನ್ನ ಪಾಲಿಗೆ ಬಂದ ಸಮುದ್ರವನ್ನ ಇಟಗೊಂಡು ತಮ್ಮ ಪೊಸಯಿಡೋನ ತಣ್ಣಗೆ ಕೂತವನು. ದೇವ ಸಹಜ ಆಸೆ-ಆಕಾಂಕ್ಷೆಗಳಿಂದ ಬಳಲಿದವನು. ಒಂದುನೂರಕ್ಕಿಂತ ಹೆಚ್ಚು ಪತ್ನಿ-ಉಪ ಪತ್ನಿಯರ ಕಟ್ಟಿಕೊಂಡು ಸುಮಾರು ಮೂರುನೂರು ಜನ ಮಕ್ಕಳಿಗೆ ಜನ್ಮ ಕೊಟ್ಟವನು.

ಅವನ ಹೆಂಡತಿ ಮೆಡುಸ್ಸಾ. ಅಕಿನ್ನ ಯಾರಾದರೂ ಕಣ್ಣಿನೊಳಗ ಕಣ್ಣು ಇಟ್ಟು ನೋಡಿದರ ಅವರು ಕಲ್ಲಾಗಿಬಿಡತಿದ್ದರು. ಅಕಿ ತಲಿಮ್ಯಾಲೆ ಕೂದಲು ಇರಲಿಲ್ಲ. ಅದರ ಬದಲಿಗೆ ಸಣ್ಣ ಸಣ್ಣ ಹಾವು ಇದ್ದವು. ಆ ಹಾವುಗಳನ್ನ ಅಕಿ ತನ್ನ ಸೇವಕರ ತರಹ ಉಪಯೋಗ ಮಾಡತಿದ್ದಳು. ಅಕಿಗೆ ಅಣಿಮಾ-ಗರಿಮಾ ಶಕ್ತಿಗಳು ಸಿದ್ಧಿಸಿಬಿಟ್ಟಿದ್ದವು. ತಾನು ಬಯಸಿದಲ್ಲಿ ಪ್ರವಾಸ ಮಾಡುವ ಶಕ್ತಿ ಇತ್ತು.

ಕೊನೆಗೆ ಅವಳ ಸಂಹಾರ ಮಾಡಿದವ ಯಾರು ಅಂದರ ಗ್ರೀಕ್ ದೇವತೆ ಪರ್ಸಿಯಸ್. ಆತ ತನ್ನ ಕಣ್ಣು ಕಟ್ಟಿಕೊಂಡು ಅವಳ ರುಂಡ ಕತ್ತರಿಸಿಬಿಟ್ಟ. ಆ ರುಂಡವನ್ನು ತನ್ನ ಈಟಿಗೆ ಚುಚ್ಚಿಕೊಂಡು ತಿರುಗಾಡುತ್ತಿದ್ದ. ಮೆಡುಸ್ಸಾ ಸತ್ತ ಮೇಲೆ ಸಹಿತ ಅವಳ ಶಾಪ ಕೊಡುವ ಶಕ್ತಿ ಹೋಗಲಿಲ್ಲ. ಇದನ್ನು ಅರಿತ ಪರ್ಸಿಯಸ್ ಅವಳ ತಲೆಯನ್ನ ಒಂದು ಆಯುಧದ ರೀತಿ ಬಳಸಿ ತನ್ನ ವೈರಿಗಳನ್ನು ಕೊಂದ.

ಇಷ್ಟೆಲ್ಲಾ ಆತಲ್ಲಾ, ಈಗ ನೋಡ್ರಿ. ಇಲ್ಲೇ ಐತಿ ಮಜಾ. ಮೆಡುಸ್ಸಾನ ಹತ್ಯೆ ಮಾಡುವಾಗ ಪರ್ಸಿಯಸ್ ಒಂದು ಚಮತ್ಕಾರಿ ವಾಹನ ಬಳಸಿದ್ದ. ಅದು ಯಾವುದು ಅಂದರ ಆಕಾಶದಲ್ಲಿ ಹಾರಾಡಬಲ್ಲ ಬಿಳಿಯ ಕುದುರೆ. ತನ್ನ ಎರಡೂ ಕಡೆಗಳಲ್ಲಿ ಇದ್ದ ರೆಕ್ಕೆಗಳನ್ನು ಬಳಸಿ ಅದು ಹಾರಬಹುದಿತ್ತು. ಮೂರುಲೋಕ ಸಂಚಾರ ಮಾಡಬಹುದಿತ್ತು.

ಆ ಶ್ವೇತಾಶ್ವದ ಹೆಸರು ಪೆಗಸಸ್. ಈ ದೈವಿ ಕುದುರೆಯ ತಾಯಿ ತಂದೆಗಳು ಯಾರು ಅಂದರ ಮೆಡುಸ್ಸಾ ಮತ್ತು ಪೊಸಯಿಡೋನ. ತನ್ನ ತಾಯಿಯ ಕೊಲೆಗಾರ ತನ್ನನ್ನು ವಾಹನವನ್ನಾಗಿ ಬಳಸಲಿಕ್ಕೆ ಹತ್ತಿಬಿಟ್ಟಾನು ಅಂತ ಅದಕ್ಕ ಗೊತ್ತಿತ್ತೋ ಇಲ್ಲೋ, ಒಟ್ಟಿನಲ್ಲಿ ತನ್ನ ಹೆತ್ತ ತಾಯಿಯ ಕೊಲೆಗೆ ಅದು ಭಾಗಿ ಆತು. ಹಿಂಗ ಮಾತೃ ಹತ್ಯೆ ಪಾಪದ ಲೇಪ ಅಂಟಿದ ಈ ಕುದುರೆ ಒಂದು ದಿನ ತನ್ನ ಮೇಲೆ ಏರಿದ ಸವಾರನನ್ನು ಕೆಳಗೆ ಕೆಡವಿ ಕೊಂದುಬಿಟ್ಟಿತು.

ಈ ಪೆಗಸಸ್ ಬುದ್ಧಿವಂತರ ದೇಶ ಅಂತ ಹೆಸರು ಪಡೆದ ಇಸ್ರೇಲ್‌ನ ಅತಿ ಬುದ್ಧಿವಂತರು ಸೃಷ್ಟಿಸಿದ ತಂತ್ರಾಂಶ. ಇದನ್ನು ಎನ್‌ಎಸ್‌ಒ ಅನ್ನೋ ಕಂಪನಿಯವರು ಕೇವಲ ಸರಕಾರಿ ಸಂಸ್ಥೆಗಳಿಗೆ ಮಾತ್ರ ಮಾರಾಟ ಮಾಡತಾರೆ. ಅದನ್ನು ಭಯೋತ್ಪಾದಕರು, ರಾಷ್ಟ್ರ ವಿರೋಧಿ ಶಕ್ತಿಗಳು ಮುಂತಾದವರ ವಿರುದ್ಧ ಗೂಢಚಾರಿಕೆ ಮಾಡಲಿಕ್ಕೆ ಉಪಯೋಗ ಮಾಡತಾರ.

ಭಾರತದ ಘನ ಸರಕಾರ ತೆರಿಗೆದಾರರು ಬೆವರು-ರಕ್ತ ಸುರಿಸಿ ಕಟ್ಟಿದ ಸುಂಕದ ಹಣವನ್ನು ತೊಗೊಂಡು ಈ ಬಿಳಿ ಕುದುರೆಯ ಬಲಕ್ಕೆ ಕಟ್ಟಿಬಿಟ್ಟೆದ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಇರೋ ದೇಶ ಸರ್ವಾಧಿಕಾರಿ ದೇಶಗಳು ಮತ್ತು ಅರೆ ಪ್ರಜಾಪ್ರಭುತ್ವವಾದಿ ದೇಶಗಳ ಸಾಲಿನಲ್ಲಿ ಸೇರಿಕೊಂಡುಬಿಟ್ಟದ.

ಅಜರ್ಬೈಜಾನ್ ಬಹರೈನ್, ಸೌದಿ ಅರೇಬಿಯಾ, ಹಂಗೇರಿ, ಮೆಕ್ಸಿಕೋ, ಮುಂತಾದ ದೇಶಗಳ ಜೊತೆಗೆ ಸ್ಪರ್ಧೆಗೆ ಬಿದ್ದಂಗ ಮಾಡಿ ಎರಡು ವರ್ಷದಲ್ಲಿ ಕನಿಷ್ಟ 600 ಕೋಟಿ ರೂಪಾಯಿ ಲಪಟಾಯಿಸಿಬಿಟ್ಟದ. ಸುಮಾರು ಮೂರು ನೂರು ಜನರ ಮ್ಯಾಲೆ ಎರಡು ವರ್ಷಗಟ್ಟಲೆ ಗೂಢಚಾರಿಕೆ ಮಾಡಿ ಅವರ ಖಾಸಗಿ ಮಾಹಿತಿ ಎಲ್ಲ ಸಂಗ್ರಹ ಮಾಡೆದ.

ಬರೆ ಇಷ್ಟ ಇದ್ದರ ಇದು ಸುದ್ದಿ ಆಗ್ತಾ ಇರಲಿಲ್ಲ. ಈ ಬಿಳಿ ರೆಕ್ಕೆಯ ಕುದುರೆಯಿಂದ ಯಾರದಾದರೂ ಫೋನುಗಳನ್ನು ಅದರ ಮಾಲೀಕರಿಗೆ ಗೊತ್ತಿಲ್ಲದೆ ಚಾಲೂ-ಬಂದ್ ಮಾಡಬಹುದು. ಅವರ ಫೋನು ಕ್ಯಾಮರಾದಿಂದ ಫೋಟೋ ತೆಗಿಬಹುದು, ವಿಡಿಯೋ ತೆಗಿಬಹುದು. ಅವರ ಮೆಸೇಜು, ವಾಟ್ಸಪ್ಪು, ಈಮೇಲೂ, ಇತ್ಯಾದಿಗಳ ಕಾಪಿ ಮಾಡಬಹುದು. ಅವರ ಬ್ಯಾಂಕ್ ವಹಿವಾಟಿನ ಮಾಹಿತಿ ಪಡೆಯಬಹುದು. ಅವರ ಆರೋಗ್ಯದ ಎಲ್ಲ ಮಾಹಿತಿ-ಉದಾಹರಣೆಗೆ ಅವರಿಗೆ ಇರುವ ಕಾಯಿಲೆ, ಅವರು ಆಪರೇಷನ್ ಮಾಡಿಸಿಕೊಂಡ ಮಾಹಿತಿ, ತೊಗೊಳ್ಳುವ ಔಷಧಿ, ಅವರ ವೈದ್ಯರ ನಂಬರ್ ಎಲ್ಲ ಸಂಗ್ರಹ ಮಾಡಬಹುದು.

ಇನ್ನೊಂದು ಖತರನಾಕ ವಿಚಾರ ಏನು ಅಂದರ ಎಲ್ಲೋ ದೂರ ಇಸ್ರೇಲ್-ಅಮೆರಿಕ ದೆಹಲಿಯೊಳಗ ಕುಳಿತುಕೊಂಡ ಇಂಜಿನಿಯರ್‌ಗಳು ಅಥವಾ ಪೊಲೀಸರು ನಿಮ್ಮ ಫೋನಿನ ಒಳಗ ನಿಮ್ಮನ್ನು ಕಾನೂನಿನ ಕುಣಿಕೆಗೆ ಸಿಕ್ಕಿಸುವಂತಹ ಮಾಹಿತಿ ಕಳಿಸಬಹುದು. ಅದು ನಿಮಗೆ ಗೊತ್ತಿರಲಾರದೆ ನಿಮ್ಮ ಫೋನಿನ ಒಳಗೆ ಬಂದು ಕೂತುಬಿಡುತ್ತದೆ. ನೀವು ಫೋನು ಬದಲು ಮಾಡಿದರೂ ಹೋಗೋದಿಲ್ಲ.

ನೀವು ನಿಮ್ಮ ಸ್ನೇಹಿತರಿಗೆ “ಇವತ್ತು ಸಂಜೆ ಎಂಟು ಗಂಟೆಗೆ ನಮ್ಮ ರೂಮಿನೊಳಗ ಒಂದು ಮಂಡಕ್ಕಿ ಮಿರ್ಚಿ ಮಾಡೋಣ. ಎಲ್ಲರೂ ಬನ್ನಿ. ಬರುವಾಗ ಒಂದು ಅರ್ಧ ಲೀಟರ್ ಹಾಲು, ಎರಡು ನೂರು ಗ್ರಾಂ ಚಹಾಪುಡಿ ತೊಗೊಂಡು ಬರ್ರಿ” ಅಂತ ಸಂದೇಶ ಕಳಿಸಿದರಿ ಅಂತ ತಿಳಕೋರಿ. ನಿಮ್ಮ ವಿರೋಧಿಗಳು “ಇವತ್ತು ಸಂಜೆ ಎಂಟು ಗಂಟೆಗೆ ನಮ್ಮ ರೂಮಿನೊಳಗ ಒಂದು ಟೈಮ್ ಬಾಂಬ್ ತಯಾರು ಮಾಡೋಣ. ಎಲ್ಲರೂ ಬನ್ನಿ. ಬರುವಾಗ ಒಂದು ಅರ್ಧ ಲೀಟರ್ ಸೋಡಿಯಂ ನೈಟ್ರೇಟ್ ದ್ರಾವಣ, ಎರಡು ನೂರು ಗ್ರಾ ಆರ್‌ಡಿ ಎಕ್ಸ್ ತೊಗೊಂಡು ಬರ್ರಿ” ಅಂತ ಬದಲು ಮಾಡಬಹುದು.

ಅದರ ಆಧಾರದ ಮೇಲೆ ನಿಮ್ಮನ್ನ ದೇಶದ್ರೋಹದ ಕಾನೂನು ಅಡಿಯಲ್ಲಿ ಒದ್ದು ಒಳಗಹಾಕಬಹುದು.

ಹಿಂದಿ ಪಿಕ್ಚರ್‌ದಾಗ ಪೊಲೀಸ್ ಇನ್ಸ್ಪೆಕ್ಟರ್ ಅಮರೀಷ ಪುರಿ ’ಅಬೇ ಸಾಲೇ, ನಿನ್ನ ಮನಿಯೊಳಗ ಗಾಂಜಾ ಪೊಟ್ಟಣ ಇಟ್ಟು ಬಿಡತೆನಿ. ನಿನ್ನನ್ನ ಜೈಲಿಗೆ ಹಾಕತೆನಿ’ ಅಂತ ಧಮಕಿ ಕೊಡತನಲ್ಲ, ಅದಕ್ಕೂ ಇದಕ್ಕೂ ಏನು ವ್ಯತ್ಯಾಸ ಇಲ್ಲ. ಹಿಂಗ ಆಗಬಹುದು ಅಂತ ಅಲ್ಲ. ಆಗಿ ಹೊಗೇದ.

“ಇದೇನು ಹೊಸದಲ್ಲ. ಹಿಂದಿನ ಎಲ್ಲ ಸರಕಾರಗಳು ಗೂಢಚಾರಿಕೆ ಮಾಡಿದವರೇ” ಅಂತ ಹೇಳಿ ನಮ್ಮ ಡೋಂಟ್ ಕೇರ್ ಕುಮಾರಣ್ಣ ಅವರು ಹೇಳಿಕೆ ಕೊಟ್ಟಾರ. ಹಿಂದಿನವರು ಗೂಢಚಾರಿಕೆ ಮಾಡಿರಬಹುದು. ಅದರ ಅಮರೀಷ ಪುರಿ ತಂತ್ರ ಉಪಯೋಗಿಸಿ ನಿಮ್ಮ ಫೋನ್‌ದಾಗ ಬಾಂಬ್ ತಯಾರಿಸುವ ಸಂದೇಶ ಕಳಿಸಿಲ್ಲ. ಹಂಗ ಮಾಡಲಿಕ್ಕೆ ಆವಾಗ ತಂತ್ರಜ್ಞಾನನೂ ಇರಲಿಲ್ಲ, ಅಂತ ತಿಳಿರಿ.

ಈಗ ಸದ್ಯ ಟಿವಿ ಎರಡು ದೊಡ್ಡ ಸುದ್ದಿ ತೋರಸಲಿಕ್ಕೆ ಹತ್ತಿದಾವು. ಒಂದು ಈ ಗ್ರೀಕ್ ಪುರಾಣದ ಕತಿ. ಇನ್ನೊಂದು ನಮ್ಮ ಕುಡ್ಲದ ಹುಡುಗಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರ ಪುರಾಣದ ಕತಿ. ಸುಮ್ಮನೇ ಕುಂದರಲಾರದೆ ಕುಂದ್ರಾ ಅವರು ತಯಾರಿಸಿದರು ಎನ್ನಲಾದ ಅಶ್ಲೀಲ ಚಿತ್ರದ ಬಿಸಿ ಬಿಸಿ ಸುದ್ದಿ. ನೀವು ಯಾವುದನ್ನು ನೋಡತಿರಿ ಅನ್ನೋದರ ಮ್ಯಾಲೆ ನಿಮ್ಮ ಮತ್ತು ಈ ದೇಶದ ಭವಿಷ್ಯ ನಿರ್ಭರ ಆಗತದ.

ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಐಟಿ ಸಂಸದೀಯ ಸಮಿತಿ ಮುಂದೆ ಪೆಗಾಸಸ್ ಪ್ರಕರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...