ಕೊರೊನಾ ಸೋಂಕಿನಿಂದ ತತ್ತರಿಸಿ ಹೋಗಿರುವ ರಾಜ್ಯಗಳಿಗೆ ತುರ್ತಾಗಿ ಬೇಕಾಗಿರುವುದು ನೆರವಿನ ಹಸ್ತವೇ ಹೊರತು ಉಪದೇಶದ ಬುರುಡೆ ಮಾತಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಂಗಳವಾರ ರಾತ್ರಿ ಪ್ರಧಾನಿ ಮೋದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ಉಲ್ಬಣ ಹಿನ್ನಲೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ್ದ ಪ್ರಧಾನಿ ಮೋದಿ, ಕೊರೊನಾ ನಿರ್ವಹಣೆಗೆ ಕೊನೆಯ ಅಸ್ತ್ರವಾಗಿ ಲಾಕ್‌ಡೌನ್ ಅನ್ನು ಬಳಸುವಂತೆ ರಾಜ್ಯಗಳಿಗೆ ಕರೆ ನೀಡಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, “ಇಂದು ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣ ಅತ್ಯಂತ ನಿರಾಶದಾಯಕ. ಕೊರೊನಾ ಸೋಂಕಿನಿಂದ ತತ್ತರಿಸಿಹೋಗಿರುವ ರಾಜ್ಯಗಳಿಗೆ ತುರ್ತಾಗಿ ಬೇಕಾಗಿರುವುದು ನೆರವಿನ ಹಸ್ತವೇ ಹೊರತು ಉಪದೇಶದ ಬುರುಡೆ ಮಾತಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಎಲ್ಲಾ ಹಿಂದೂಗಳು ಮುಸ್ಲಿಮರ ಕ್ಷಮೆ ಯಾಚಿಸಬೇಕಾಗಿದೆ: ಕುಂಭಮೇಳದ ಬಗ್ಗೆ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
“ರಾಜ್ಯದಲ್ಲಿ ಕೊರೊನಾ ಸೋಂಕಿತರು ಚಿಕಿತ್ಸೆಗೆ ಆಮ್ಲಜನಕ ಇಲ್ಲದೆ, ಐಸಿಯು ಹಾಸಿಗೆಗಳಿಲ್ಲದೆ, ರೆಮಿಡಿಸಿವೆರ್‌ನಂತಹ ಪ್ರಾಣರಕ್ಷಕ ಔಷಧಿ ಸಿಗದೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆಗಳಿಗೆ ಯಾವುದೇ ಪರಿಹಾರ ನೀಡದ ಮೋದಿ ಜನತೆಗೆ ಜವಾಬ್ದಾರಿಯ ಪಾಠ ಹೇಳಿದ್ದಾರೆ. ಪ್ರಧಾನಿಗಳೇ, ಮೊದಲು ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ” ಎಂದು ಪ್ರಧಾನಿಗೆ ಕರೆ ನೀಡಿದ್ದಾರೆ.
“ಕೊರೊನಾ ಉಲ್ಭಣಗೊಂಡಿರುವ ಕಾರಣದಿಂದಾಗಿ ಲಾಕ್‌ಡೌನ್ ಅನಿವಾರ್ಯ ಎಂಬಂತೆ ರಾಜ್ಯ ಸರ್ಕಾರ ಮಾತನಾಡುತ್ತಿದೆ. ಲಾಕ್‌ಡೌನ್ ಹೇರಿದರೆ ಕಷ್ಟನಷ್ಟಕ್ಕೀಡಾಗುವ ಜನತೆಗೆ ಕೇಂದ್ರಸರ್ಕಾರ ನೀಡುವ ನೆರವಿನ ಘೋಷಣೆಯನ್ನು ಜನ ನಿರೀಕ್ಷಿಸಿದ್ದರು. ಮೋದಿ ಭಾಷಣ ‘ನಿಮ್ಮ ತಲೆ ಮೇಲೆ ನಿಮ್ಮ ಕೈ’ ಎಂಬ ಸಂದೇಶ ನೀಡಿದೆ” ಎಂದು ಕಿಡಿ ಕಾರಿದ್ದಾರೆ.
“ಕೊರೊನಾ ಪರಿಣಾಮವನ್ನು ಸಮರ್ಥವಾಗಿ ನಿರ್ವಹಿಸಲಾಗದೆ ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯ ಅಂಚಿಗೆ ಬಂದು ನಿಂತಿದೆ. ಇದಕ್ಕೆ ನ್ಯಾಯಬದ್ಧವಾಗಿ ತೆರಿಗೆ ಪಾಲನ್ನು ನೀಡದಿರುವ ಕೇಂದ್ರ ಸರ್ಕಾರವೂ ಕಾರಣ. ಪ್ರಧಾನಿಯವರೇ, ನೀವು ವಿಶೇಷ ಆರ್ಥಿಕ ನೆರವನ್ನು ಕೊಡುವುದು ಬೇಡ, ನಮ್ಮ ನ್ಯಾಯಬದ್ಧ ಪಾಲನ್ನಷ್ಟಾದರೂ ನೀಡಿ ಪುಣ್ಯ ಕಟ್ಟಿಕೊಳ್ಳಿ” ಎಂದು ಪ್ರಧಾನಿ ಜೊತೆಗೆ ಸಿದ್ದರಾಮಯ್ಯ ಕೇಳಿದ್ದಾರೆ.
ಇದನ್ನೂ ಓದಿ: ಚಳುವಳಿ ಮಾಡಿದ್ರೆ ಮಾತ್ರ ಸಾಲಲ್ಲ, ಪೊಲಿಟಿಕಲ್ ಪವರ್ ನಿಮ್ಮ ಕೈಲಿ ಹಿಡ್ಕೊಬೇಕು
ವಿಡಿಯೊ ನೋಡಿ: ದೇಶದಲ್ಲಿ ಬಿಜೆಪಿ ಮುಕ್ತ ಆಗುವ ದಿನಗಳು ದೂರವಿಲ್ಲ, ಉದ್ದಟತನ ಬಿಡಿ: ಸಿಎಂಗೆ ಕುಮಾರಸ್ವಾಮಿ


