‘ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಉತ್ತೇಜಿಸಿದ ಆರೋಪ’ದ ಮೇಲೆ ತನ್ನ ವಿರುದ್ದ ದಾಖಲಾಗಿರುವ ಪ್ರಕರಣವನ್ನು ಪ್ರಶ್ನಿಸಿ ಆಲ್ಟ್ ನ್ಯೂಸ್‌ನ ಸಹ ಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್ ಝುಬೈರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ಅಲಹಾಬಾದ್ ಹೈಕೋರ್ಟ್ ಪೀಠ ಹಿಂದೆ ಸರಿದಿದೆ ಎಂದು ವರದಿಯಾಗಿದೆ.
ನ್ಯಾಯಮೂರ್ತಿಗಳಾದ ಮಹೇಶ್ ಚಂದ್ರ ತ್ರಿಪಾಠಿ ಮತ್ತು ಪ್ರಶಾಂತ್ ಕುಮಾರ್ ಅವರ ಪೀಠ ಅರ್ಜಿಯ ವಿಚಾರಣೆಯಿಂದ ಸ್ವಯಂ ಹಿಂದೆ ಸರಿದಿದೆ ಎಂದು ವರದಿ ಹೇಳಿದೆ.
ಯತಿ ನರಸಿಂಹಾನಂದ ಸರಸ್ವತಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಉದಿತಾ ತ್ಯಾಗಿ ಅವರ ದೂರಿನ ಆಧಾರದ ಮೇಲೆ ಉತ್ತರ ಪ್ರದೇಶದ ಗಾಝಿಯಾಬಾದ್ ಪೊಲೀಸರು ಝುಬೈರ್ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 152 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಝುಬೈರ್ ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಕೃತ್ಯಗಳನ್ನು ಮಾಡಿರುವ ಅಪರಾಧ ಹೊರಿಸಿದ್ದಾರೆ.
ಝುಬೈರ್ ವಿರುದ್ದದ ಪ್ರಕರಣ ಯತಿ ನರಸಿಂಹಾನಂದ ಮಾಡಿದ್ದ ದ್ವೇಷ ಭಾಷಣದ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಾಕಿದ್ದ ಪೋಸ್ಟ್‌ಗೆ ಸಂಬಂಧಿಸಿದೆ.
ಗುರುವಾರ (ಡಿ.3) ನ್ಯಾಯಮೂರ್ತಿಗಳಾದ ಮಹೇಶ್ ಚಂದ್ರ ತ್ರಿಪಾಠಿ ಮತ್ತು ಪ್ರಶಾಂತ್ ಕುಮಾರ್ ಅವರ ಪೀಠವು, ಝುಬೈರ್ ಅರ್ಜಿಯನ್ನು ಕೈಗೆತ್ತಿಕೊಂಡು ಸುಮಾರು 20 ನಿಮಿಷಗಳ ಕಾಲ ವಿಚಾರಣೆ ನಡೆಸಿತು. ಬಳಿಕ ವಿಚಾರಣೆಯಿಂದ ಹಿಂದೆ ಸರಿಯಿತು. ಮತ್ತೊಂದು ಪೀಠದ ಮುಂದೆ ಪ್ರಕರಣವನ್ನು ಪಟ್ಟಿ ಮಾಡುವಂತೆ ನ್ಯಾಯಾಲಯದ ರಿಜಿಸ್ಟ್ರಿಗೆ ಸೂಚಿಸಿತು.
ಈ ವರ್ಷದ ಅಕ್ಟೋಬರ್ 3ರಂದು ಝುಬೈರ್ ಎಕ್ಸ್‌ನಲ್ಲಿ ಮೂರು ಪೋಸ್ಟ್‌ಗಳನ್ನು ಹಾಕಿದ್ದರು. ಈ ಪೈಕಿ ಮೊದಲನೆಯದ್ದು, ದಾಸ್ನಾ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಅವರು ಸೆಪ್ಟೆಂಬರ್ 29 ರಂದು ಗಾಝಿಯಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮುಹಮ್ಮದರ ಬಗ್ಗೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿರುವ ವಿಡಿಯೋವನ್ನು ಒಳಗೊಂಡಿತ್ತು.
ಝುಬೈರ್ ಪೋಸ್ಟ್ ಮಾಡಿದ್ದ ವಿಡಿಯೋದಲ್ಲಿ , ದ್ವೇಷ ಭಾಷಣದಲ್ಲಿ ಕುಖ್ಯಾತಿ ಪಡೆದಿರುವ ಯತಿ ನರಸಿಂಹಾನಂದ, ಪ್ರವಾದಿ ಮುಹಮ್ಮದರ ಪ್ರತಿಕೃತಿಯನ್ನು ಸುಡುವಂತೆ ಕರೆ ಕೊಟ್ಟಿದ್ದ ದೃಶ್ಯವಿತ್ತು. ಯತಿ ನರಸಿಂಹಾನಂದನ ಪ್ರವಾದಿ ವಿರುದ್ದದ ಕರೆ ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿತ್ತು. ನರಸಿಂಹಾನಂದನ ವಿರುದ್ದ ಕಠಿಣ ಕ್ರಮಕ್ಕೆ ಮುಸ್ಲಿಮರು ಒತ್ತಾಯಿಸಿದ್ದರು.
ಎರಡನೇ ಪೋಸ್ಟ್‌ನಲ್ಲಿ ಝುಬೈರ್ ಅವರು “ಯತಿ ನರಸಿಂಹಾನಂದನನ್ನು ಬೆಂಬಲಿಸುವವರಿಗೆ, ಯತಿ ನರಸಿಂಹಾನಂದ ಸರಸ್ವತಿ ಮಹಾರಾಜ್ ಅವರು ರಾಜಕೀಯದಲ್ಲಿರುವ ಮಹಿಳೆಯರ ಬಗ್ಗೆ, ವಿಶೇಷವಾಗಿ ರಾಜಕೀಯದಲ್ಲಿರುವ ಬಿಜೆಪಿ ಮಹಿಳಾ ನಾಯಕರ ಬಗ್ಗೆ (2021) ಕೆಟ್ಟ ಹೇಳಿಕೆಗಳನ್ನು ನೀಡಿರುವ ವಿಡಿಯೋ ಇಲ್ಲಿದೆ” ಎಂದು ಬರೆದುಕೊಂಡಿದ್ದರು. ಜೊತೆಗೆ ನರಸಿಂಹಾನಂದ ಮಹಿಳಾ ರಾಜಕಾರಣಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ವಿಡಿಯೋ ಹಂಚಿಕೊಂಡಿದ್ದರು. 2022 ರಲ್ಲಿ ಪೃಥ್ವಿರಾಜ್ ಚವಾಣ್ ಕುರಿತು ನರಸಿಂಹಾನಂದ ನೀಡಿದ್ದ ಅವಹೇಳನಕಾರಿ ಹೇಳಿಕೆಯ ವಿಡಿಯೋ ಕೂಡ ಅದರ ಜೊತೆಗೆ ಇತ್ತು.
ಯತಿ ನರಸಿಂಹಾನಂದ ಅವರ ಹಳೆಯ ಕೋಮುದ್ವೇಷದ, ಮಹಿಳಾ ವಿರೋಧಿ ಹೇಳಿಕೆಗಳ ವಿಡಿಯೋಗಳನ್ನು ಹಂಚಿಕೊಂಡಿದ್ದಕ್ಕೆ ಝುಬೈರ್ ವಿರುದ್ದ ನರಸಿಂಹಾನಂದ ಟ್ರಸ್ಟ್‌ನ ಉದಿತಾ ತ್ಯಾಗಿ ದೂರು ದಾಖಲಿಸಿದ್ದರು. ಮುಸ್ಲಿಮರನ್ನು ನರಸಿಂಹಾನಂದ ವಿರುದ್ದ ಎತ್ತಿಕಟ್ಟಿ ಹಿಂಸಾಚಾರವನ್ನು ಪ್ರಚೋದಿಸುವ ಸಲುವಾಗಿ ಝುಬೈರ್ ಹಳೆಯ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಉದಿತಾ ತ್ಯಾಗಿ ದೂರು ಸ್ವೀಕರಿಸಿದ ಪೊಲೀಸರು, ಬಿಎನ್‌ಎಸ್ ಸೆಕ್ಷನ್‌ಗಳಾದ 196 (ಧಾರ್ಮಿಕ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 228 (ಸುಳ್ಳು ಪುರಾವೆಗಳನ್ನು ಸೃಷ್ಟಿಸುವುದು), 299 (ಧಾರ್ಮಿಕ ಭಾವನೆಗಳನ್ನು ಅತಿರೇಕಗೊಳಿಸುವುದು), 356 (3) (ಮಾನನಷ್ಟ), ಮತ್ತು 351 (2) (ಅಪರಾಧ ಬೆದರಿಕೆ) ಅಡಿಯಲ್ಲಿ ಝುಬೈರ್ ವಿರುದ್ದ ಎಫ್‌ಐಆರ್ ದಾಖಲಿಸಿದ್ದರು.
ಎಫ್ಐಆರ್ ಪ್ರಶ್ನಿಸಿ ಮತ್ತು ಬಂಧನದಿಂದ ರಕ್ಷಣೆ ಕೋರಿ ಝುಬೈರ್ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಝುಬೈರ್ ವಿರುದ್ಧದ ಆರೋಪಗಳನ್ನು ನಿರ್ದಿಷ್ಟಪಡಿಸಿ ಅಫಿಡವಿಟ್ ಸಲ್ಲಿಸುವಂತೆ ತನಿಖಾಧಿಕಾರಿಗೆ ಸೂಚಿಸಿತ್ತು. ಅದರಂತೆ ನವೆಂಬರ್ 27 ರಂದು ತನಿಖಾಧಿಕಾರಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದರು. ಆ ಅಫಿಡವಿಟ್‌ನಲ್ಲಿ ಐಟಿ ಕಾಯ್ದೆಯ ಸೆಕ್ಷನ್ 66 (ಕಂಪ್ಯೂಟರ್ ಸಂಬಂಧಿತ ಅಪರಾಧಗಳು) ಮತ್ತು ಬಿಎನ್‌ಎಸ್ ಸೆಕ್ಷನ್ 152 (ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯ) ಅಡಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದರು.
ನರಸಿಂಹಾನಂದರ ಹೇಳಿಕೆಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಲು ಮತ್ತು ಕಾನೂನು ಕ್ರಮಕ್ಕೆ ಸಲಹೆ ನೀಡುವ ಉದ್ದೇಶದಿಂದ ಹಳೆಯ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದೆ ಎಂದು ಝುಬೈರ್ ನ್ಯಾಯಾಲಯದಲ್ಲಿ ವಾದಿಸಿದ್ದರು. ನನ್ನ ಪೋಸ್ಟ್ ಹಿಂಸಾಚಾರ ಉತ್ತೇಜಿಸಲು ಸಾಧ್ಯವಿಲ್ಲ ಎಂದಿದ್ದರು. ನರಸಿಂಹಾನಂದರ ಹೇಳಿಕೆಯ ವಿಡಿಯೋ ಸಾರ್ವಜನಿಕ ವೇದಿಕೆಗಳಲ್ಲಿ ಇರುವುದರಿಂದ, ಅದನ್ನು ಹಂಚಿಕೊಳ್ಳುವುದರಿಂದ ಮಾನನಷ್ಟವಾಗುವುದಿಲ್ಲ ಎಂದು ಹೇಳಿದ್ದರು.
ಯತಿ ನರಸಿಂಹಾನಂದರ ಆಪಾದಿತ ಕ್ರಿಮಿನಲ್ ಚಟುವಟಿಕೆಗಳನ್ನು ಬಹಿರಂಗಪಡಿಸಿದ್ದಕ್ಕಾಗಿ ನನ್ನ ಮೇಲೆ ಎಫ್‌ಐಆರ್ ಹಾಕಿ ಧ್ವನಿ ಅಡಗಿಸಲು ದುರುದ್ದೇಶಪೂರಿತ ಪ್ರಯತ್ನ ಮಾಡಲಾಗಿದೆ ಎಂದು ಝುಬೈರ್ ಆರೋಪಿಸಿದ್ದರು.
ಇದನ್ನೂ ಓದಿ : ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಲೈಂಗಿಕ ದೌರ್ಜನ್ಯ: ಆಂತರಿಕ ದೂರು ಸಮಿತಿ ರಚಿಸಿ: ಸುಪ್ರೀಂ ಕೋರ್ಟ್


