ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಭಾರತೀಯ ಪೌರತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ಸೋಮವಾರ (ಮೇ.5) ವಿಲೇವಾರಿ ಮಾಡಿದೆ.
ಕರ್ನಾಟಕ ಮೂಲದ ವಕೀಲ ಹಾಗೂ ಬಿಜೆಪಿ ಕಾರ್ಯಕರ್ತ ಎಸ್. ವಿಘ್ನೇಶ್ ಶಿಶಿರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಆರ್ ಮಸೂದಿ ಮತ್ತು ರಾಜೀವ್ ಸಿಂಗ್ ಅವರ ಪೀಠ, “ಈ ವಿಷಯವು ಎರಡು ದೇಶಗಳ ನಡುವಿನ ಸಂವಹನವಾಗಿದ್ದು, ಭಾರತ ಸರ್ಕಾರ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು”ಎಂದು ನಿರ್ದೇಶಿಸಿದೆ.
ಅರ್ಜಿದಾರರ ದೂರನ್ನು ಪರಿಹರಿಸಲು ಕೇಂದ್ರ ಸರ್ಕಾರವು ಯಾವುದೇ ಕಾಲಮಿತಿಯನ್ನು ನೀಡಲು ಸಾಧ್ಯವಾಗದ ಕಾರಣ, ಅರ್ಜಿಯನ್ನು ಬಾಕಿ ಇಡಲು ಆಗುವುದಿಲ್ಲ. ಸರ್ಕಾರ ಕ್ರಮ ಕೈಗೊಳ್ಳಲು ವಿಫಲವಾದರೆ ಅರ್ಜಿದಾರರು ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸಬಹುದು. ರಾಹುಲ್ ಗಾಂಧಿಯ ಭಾರತೀಯ ಪೌರತ್ವವವನ್ನು ನಿರ್ಧರಿಸುವ ಹೊಣೆಗಾರಿಗೆ ಭಾರತ ಸರ್ಕಾರದ ಮೇಲಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೆ ನ್ಯಾಯಾಂಗ ನಿಂದನೆಗೆ ಒಳಪಡುತ್ತದೆ ಎಂದು ಪೀಠ ಹೇಳಿದೆ.
ರಾಹುಲ್ ಗಾಂಧಿ ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್‌ನ (ಯುಕೆ) ದ್ವಿಪೌರತ್ವವನ್ನು ಹೊಂದಿದ್ದು, ಸಂವಿಧಾನದ 84 (ಎ) ವಿಧಿಯ ಅಡಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವರು ಅನರ್ಹರು ಎಂದು ಅರ್ಜಿದಾರ ವಿಘ್ನೇಶ್ ಶಿಶಿರ್ ಹೇಳಿದ್ದರು.
ಏಪ್ರಿಲ್ 21ರಂದು ನಡೆದ ಅರ್ಜಿ ವಿಚಾರಣೆ ವೇಳೆ, ರಾಹುಲ್ ಗಾಂಧಿ ಅವರು ಬ್ರಿಟಿಷ್ ಪೌರತ್ವ ಹೊಂದಿದ್ದಾರೆ ಎಂಬ ಆರೋಪದ ಬಗ್ಗೆ ವಿವರಗಳನ್ನು ಕೋರಿ ಯುಕೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ತಿಳಿಸಿತ್ತು. ಅಲ್ಲಿನ ಸರ್ಕಾರದಿಂದ ಮಾಹಿತಿ ಪಡೆಯಲು ಕೇಂದ್ರ ಸರ್ಕಾರ ಹೆಚ್ಚುವರಿ ಸಮಯ ಕೋರಿದ ಹಿನ್ನೆಲೆ, ನ್ಯಾಯಾಲಯವ ಗೃಹ ಸಚಿವಾಲಯಕ್ಕೆ ಮೇ 5ರವರೆಗೆ ಕಾಲಾವಕಾಶ ನೀಡಿತ್ತು.
ರಾಹುಲ್ ಗಾಂಧಿಯವರ ದ್ವಿಪೌರತ್ವದ ಬಗ್ಗೆ ಸಕ್ಷಮ ಪ್ರಾಧಿಕಾರಕ್ಕೆ ಎರಡು ಬಾರಿ ದೂರುಗಳನ್ನು ನೀಡಿದ್ದರೂ, ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದರು.
ಸುಬ್ರಮಣಿಯನ್ ಸ್ವಾಮಿ ದೂರು
2019ರಲ್ಲಿ, ಆಗಿನ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರ ದೂರಿನ ಮೇರೆಗೆ ಗೃಹ ಸಚಿವಾಲಯ ರಾಹುಲ್ ಗಾಂಧಿ ಅವರ ಪೌರತ್ವಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿತ್ತು.
2003ರಲ್ಲಿ ಯುನೈಟೆಡ್ ಕಿಂಗ್‌ಡಂನಲ್ಲಿ ಬ್ಯಾಕಾಪ್ಸ್ ಲಿಮಿಟೆಡ್ ಎಂಬ ಕಂಪನಿಯನ್ನು ನೋಂದಾಯಿಸಲಾಗಿದ್ದು, ರಾಹುಲ್ ಗಾಂಧಿಯನ್ನು ಆ ಕಂಪನಿಯ ನಿರ್ದೇಶಕರು ಮತ್ತು ಕಾರ್ಯದರ್ಶಿಗಳಲ್ಲಿ ಒಬ್ಬರಾಗಿ ಪಟ್ಟಿ ಮಾಡಲಾಗಿದೆ ಎಂದು ಸ್ವಾಮಿ ಆರೋಪಿಸಿದ್ದರು.
ಕಂಪನಿಯ ಅಧಿಕೃತ ದಾಖಲೆಗಳಲ್ಲಿ ರಾಹುಲ್ ಗಾಂಧಿ ತನ್ನ ರಾಷ್ಟ್ರೀಯತೆಯನ್ನು ಬ್ರಿಟಿಷ್ ಎಂದು ಘೋಷಿಸಿಕೊಂಡಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದರು.
ಗೃಹ ಸಚಿವಾಲಯದ ನೋಟಿಸ್‌ನಲ್ಲಿ, “ಅಕ್ಟೋಬರ್ 10, 2005ಮತ್ತು ಅಕ್ಟೋಬರ್ 31, 2006ರಂದು ಸಲ್ಲಿಸಲಾದ ಕಂಪನಿಯ ವಾರ್ಷಿಕ ರಿಟರ್ನ್ಸ್‌ನಲ್ಲಿ, ನಿಮ್ಮ ಜನ್ಮ ದಿನಾಂಕವನ್ನು ಜೂನ್ 19, 1970 ಮತ್ತು ರಾಷ್ಟ್ರೀಯತೆಯನ್ನು ಬ್ರಿಟಿಷ್ ಎಂದು ಘೋಷಿಸಿಕೊಂಡಿದ್ದೀರಿ. ಫೆಬ್ರವರಿ 17, 2009ರಂದು ಕಂಪನಿಯ ವಿಸರ್ಜನೆ ಅರ್ಜಿಯಲ್ಲಿಯೂ ರಾಷ್ಟ್ರೀಯತೆಯನ್ನು ಬ್ರಿಟಿಷ್ ಎಂದು ಉಲ್ಲೇಖಿಸಿದ್ದೀರಿ” ಎಂದಿತ್ತು. ಈ ಕುರಿತು ಪ್ರತಿಕ್ರಿಯೆ ನೀಡುವಂತೆ ರಾಹುಲ್ ಗಾಂಧಿಯನ್ನು ಕೇಳಿತ್ತು.
ಕೋರ್ಟ್ ಮೆಟ್ಟಿಲೇರಿದ ಸುಬ್ರಮಣಿಯನ್ ಸ್ವಾಮಿ
ರಾಹುಲ್ ಗಾಂಧಿಯ ಭಾರತೀಯ ಪೌರತ್ವ ಪ್ರಶ್ನಿಸಿ ಸುಬ್ರಮಣಿಯನ್ ಸ್ವಾಮಿ ದೆಹಲಿ ಹೈಕೋರ್ಟ್‌ಗೆ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಈ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ.


