ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (ಐಐಎಂ-ಬಿ) ನಲ್ಲಿ ನಡೆಯುತ್ತಿರುವ ವ್ಯವಸ್ಥಿತ ತಾರತಮ್ಯ ಮತ್ತು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯ ವಿರುದ್ದ ಅಖಿಲ ಭಾರತ ಒಬಿಸಿ ವಿದ್ಯಾರ್ಥಿಗಳ ಸಂಘ (AIOBCSA) ಮತ್ತು ಡಾ. ಬಿಆರ್ ಅಂಬೇಡ್ಕರ್ ರಾಷ್ಟ್ರೀಯ ಇಂಜಿನಿಯರ್‌ಗಳ ಸಂಘ (BANAE) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನವೆಂಬರ್ 20ರಂದು ಪ್ರತಿಭಟನೆ ಹಮ್ಮಿಕೊಂಡಿದೆ.
ಐಐಟಿ, ಐಐಎಂ ಸೇರಿದಂತೆ ಭಾರತದ ಉನ್ನತ ವಿದ್ಯಾಸಂಸ್ಥೆಗಳಲ್ಲಿ ವೈವಿದ್ಯತೆ ಮತ್ತು ಒಳಗೊಳ್ಳುವಿಕೆ ಕುರಿತು ಆರ್‌ಟಿಐ ಮೂಲಕ ಮಾಹಿತಿ ಪಡೆಯಲಾಗಿದೆ. ಆ ಮಾಹಿತಿಯ ಪ್ರಕಾರ, ಮೀಸಲಾತಿ, ರೋಸ್ಟರ್ ನಿಯಮಗಳನ್ನು ಪಾಲನೆ ಮಾಡಲಾಗುತ್ತಿಲ್ಲ. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಜಾತಿ-ಆಧಾರಿತ ತಾರತಮ್ಯವನ್ನು ಅನುಭವಿಸುತ್ತಿದ್ದಾರೆ. ವೈಯಕ್ತಿಕ ಕಿರುಕುಳದ ತೀವ್ರ ಪ್ರಕರಣಗಳು ವರದಿಯಾಗಿವೆ. ವಿಶೇಷವಾಗಿ ಬೆಂಗಳೂರಿನ ಐಐಎಂನ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ಕುರಿತು ಕಳವಳಕಾರಿ ಮಾಹಿತಿ ಹೊರಬಿದ್ದಿದೆ ಎಂದು ಅಖಿಲ ಭಾರತ ಒಬಿಸಿ ವಿದ್ಯಾರ್ಥಿಗಳ ಸಂಘ ಹೇಳಿದೆ.
From RTI Activism to Resistance on the Road
Demonstration on Caste Discrimination in IIM Bangalore.
The All India OBC Students Association (AIOBCSA) has filed RTIs on diversity and inclusion issues in IIMs, IITs, and other premier institutions. Many of these institutions are… pic.twitter.com/1xDzr9bNlf
— All India OBC Students Association (AIOBCSA) (@aiobcsa) November 7, 2024
“ತುಳಿತಕ್ಕೊಳಗಾದ ಸಮುದಾಯಗಳ ವಿರುದ್ಧ, ನಿರ್ದಿಷ್ಟವಾಗಿ ಪರಿಶಿಷ್ಟ ಜಾತಿಗಳು (ಎಸ್), ಪರಿಶಿಷ್ಟ ಪಂಗಡಗಳು (ಎಸ್‌ಟಿ), ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ವಿರುದ್ದದ ತಾರತಮ್ಯವನ್ನು ಪರಿಹರಿಸಲು ವಿಫಲವಾದ ಆರೋಪ ಹೊತ್ತಿರುವ ಬೆಂಗಳೂರು ಐಐಎಂ ಆಡಳಿತ ಮಂಡಳಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ನಿರ್ದೇಶಕ ರಿಷಿಕೇಶ ಟಿ ಕೃಷ್ಣನ್ ಮತ್ತು ಡೀನ್ (ಅಧ್ಯಾಪಕ) ದಿನೇಶ್ ಕುಮಾರ್ ಸೇರಿದಂತೆ ಪ್ರಮುಖ ನಾಯಕತ್ವದ ವ್ಯಕ್ತಿಗಳನ್ನು ತಕ್ಷಣವೇ ಹುದ್ದೆಯಿಂದ ತೆಗೆದು ಹಾಕಬೇಕು ಎಂಬುವುದು ನಮ್ಮ ಪ್ರತಿಭಟನೆಯ ಪ್ರಾಧಮಿಕ ಬೇಡಿಕೆ ಎಂದು ಅಖಿಲ ಭಾರತ ಒಬಿಸಿ ವಿದ್ಯಾರ್ಥಿಗಳ ಸಂಘ ಮಾಹಿತಿ ನೀಡಿದೆ.
ಪ್ರತಿಭಟನೆಯ ಇತರ ಬೇಡಿಕೆಗಳು
- ಎಸ್‌ಸಿ, ಎಸ್‌ಟಿ, ಒಬಿಸಿ ಸೇರಿದಂತೆ ತುಳಿತಕ್ಕೊಳಗಾದ ಮತ್ತು ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಕುಂದು ಕೊರತೆಗಳ ಆಲಿಸಲು ವಿಶೇಷ ಕೋಶವನ್ನು ಸ್ಥಾಪಿಸಬೇಕು.
- ಜಾತಿ ಆಧಾರಿತ ತಾರತಮ್ಯದ ವಿರುದ್ಧ ಮಾತನಾಡುವ ಅಧ್ಯಾಪಕರಿಗೆ ರಕ್ಷಣಾತ್ಮಕ ಕ್ರಮಗಳ ಅನುಷ್ಠಾನಗೊಳಿಸಬೇಕು
- ಪಾರದರ್ಶಕ ರೋಸ್ಟರ್ ನಿರ್ವಹಣೆಯೊಂದಿಗೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಕಾಯ್ದಿರಿಸಿದ ಅಧ್ಯಾಪಕರ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು.
- ಹಿಂದುಳಿದ ಸಮುದಾಯಗಳ ಉತ್ತಮ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಐಐಎಂ (ತಿದ್ದುಪಡಿ) ಕಾಯ್ದೆ- 2023 ರ ಅಡಿಯಲ್ಲಿ ಐಐಎಂ ಬೆಂಗಳೂರಿನ ಆಡಳಿತ ಮಂಡಳಿಯನ್ನು ಪುನರ್ ರಚನೆ ಮಾಡಬೇಕು.
ದಮನಿತ ಸಮುದಾಯಗಳನ್ನು ವ್ಯವಸ್ಥಿತವಾಗಿ ಹೊರಗಿಡುವ ನಿಟ್ಟಿನಲ್ಲಿ ಐಐಎಂಬಿಯ ಪ್ರಸ್ತುತ ನಾಯಕತ್ವ ಸತತವಾಗಿ ಪ್ರಯತ್ನ ನಡೆಸುತ್ತಿದೆ. ಅಧ್ಯಾಪಕರ ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡಬೇಕು ಮತ್ತು ತಾರತಮ್ಯದ ವಿರುದ್ಧ ಧ್ವನಿ ಎತ್ತುವವರಿಗೆ ನೀಡುತ್ತಿರುವ ಕಿರುಕುಳವನ್ನು ಕೊನೆಗೊಳಿಸಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ ಎಂದು ಅಖಿಲ ಭಾರತ ಒಬಿಸಿ ವಿದ್ಯಾರ್ಥಿಗಳ ಸಂಘ ತಿಳಿಸಿದೆ.
ಪ್ರತಿಭಟನೆಗೆ ವಿವಿಧ ಅಂಬೇಡ್ಕರ್‌ವಾದ ಮತ್ತು ಪ್ರಗತಿಪರ ಸಂಘಟನೆಗಳು ಬೆಂಬಲ ಸೂಚಿಸಿದೆ. ಅನೇಕ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿಭಟನೆಯು ಶಾಂತಿಯುತವಾಗಿರಲಿದೆ. ಬಲವಾದ ಸಾಂಸ್ಥಿಕ ಸುಧಾರಣೆಗಳನ್ನು ಸಾಧಿಸುವತ್ತ ನಮ್ಮ ಪ್ರತಿಭಟನೆ ಗಮನಹರಿಸುತ್ತದೆ ಎಂದು ಸಂಘಟಕರು ಹೇಳಿದ್ದಾರೆ.
ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಗೆ ಅಪಾಯದಲ್ಲಿರುವ ಸಂದರ್ಭದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆರ್‌ಟಿಐ ಮೂಲಕ ಪಡೆದಿರುವ ಮಾಹಿತಿಯಲ್ಲಿ ಬಹಿರಂಗವಾಗಿರುವ ಬೆಂಗಳೂರು ಐಐಎಂನ ತಾರತಮ್ಯ ನೀತಿ, ಇಡೀ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಯಾವ ರೀತಿಯ ಪರಿಸ್ಥಿತಿ ಇದೆ ಎಂಬುವುದನ್ನು ಬಿಂಬಿಸುತ್ತದೆ ಎಂದು ಅಖಿಲ ಭಾರತ ಒಬಿಸಿ ವಿದ್ಯಾರ್ಥಿಗಳ ಸಂಘ ಹೇಳಿದೆ.
ಭಾರತೀಯ ಉನ್ನತ ಶಿಕ್ಷಣದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ಪ್ರಗತಿಪರರು ಮತ್ತು ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಬೇಕು ಎಂದು ಪ್ರತಿಭಟನೆಯ ಸಂಘಟಕರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಕೋವಿಡ್ ಹಗರಣ : ಯಡಿಯೂರಪ್ಪ, ಶ್ರೀರಾಮುಲು ವಿರುದ್ದ ಕಾನೂನು ಕ್ರಮಕ್ಕೆ ನ್ಯಾ. ಡಿ’ಕುನ್ಹಾ ಆಯೋಗ ಶಿಫಾರಸು


