ಸಿಗರೇಟ್ ಪ್ಯಾಕೆಟ್‌ಗಳಿದ್ದ ಬಾಕ್ಸ್‌ಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಖಾಸಗಿ ಬ್ಲಡ್ ಬ್ಯಾಂಕ್ ಮಾಲಕನೊಬ್ಬ ತನ್ನ ಬಳಿ ಕೆಲಸಕ್ಕಿದ್ದ ದಲಿತ ಯುವಕನನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಕಲಬುರಗಿಯ ಎಂ.ಬಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗುರುವಾರ (ಡಿ.12) ಸಂಜೆ ನಡೆದಿದೆ ಎಂದು ವರದಿಯಾಗಿದೆ.
ನಗರದ ಪ್ರಗತಿ ಕಾಲೊನಿಯ ನಿವಾಸಿ ಶಶಿಕಾಂತ ಮಲ್ಲಿಕಾರ್ಜುನ ನಾಟೀಕಾರ (25) ಕೊಲೆಯಾದ ಯುವಕ. ಘಟನೆ ಸಂಬಂಧ ಬ್ಲಡ್ ಬ್ಯಾಂಕ್ ಮಾಲೀಕ ಚಂದ್ರಶೇಖರ ಮಲ್ಲಿನಾಥ ಪಾಟೀಲ, ಆದಿತ್ಯ ಮರಾಠಾ, ಓಂಪ್ರಕಾಶ್ ಘೋರವಾಡಿ, ರಾಹುಲ್ ಪಾಟೀಲ ಹಾಗೂ ಅಷ್ಪಾಕ್ ಎಂಬುವವರ ವಿರುದ್ದ ಪೊಲೀಸರು ಎಫ್‌ಐಅರ್ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನಗರದ ಬಸವೇಶ್ವರ ಆಸ್ಪತ್ರೆಯ ಬಳಿ ಬ್ಲಡ್ ಬ್ಯಾಂಕ್ ನಡೆಸುತ್ತಿರುವ ಚಂದ್ರಶೇಖರ ಪಾಟೀಲ ಬಳಿ ಮೃತ ಯುವಕ ಶಶಿಕಾಂತ ಕೆಲಸ ಮಾಡುತ್ತಿದ್ದರು. ಬ್ಲಡ್ ಬ್ಯಾಂಕ್‌ನಲ್ಲಿ 1.40 ಲಕ್ಷ ರೂ. ಮೌಲ್ಯದ ಸಿಗರೇಟ್ ಬಾಕ್ಸ್ ಕಳವಾಗಿತ್ತು. ಶಶಿಕಾಂತ್ ಮತ್ತು ಆಕಾಶ್ ಸಿಗರೇಟ್ ಬಾಕ್ಸ್‌ಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ ಮಾಲೀಕ ಚಂದ್ರಶೇಖರ್, ಅಷ್ಟೂ ಹಣವನ್ನು ಕೊಡುವಂತೆ ಅವರನ್ನು ಕೂಡಿ ಹಾಕಿ ತನ್ನ ಸಹಚರರಿಂದ ಮಾರಾಣಾಂತಿಕ ಹಲ್ಲೆ ಮಾಡಿಸಿದ್ದಾರೆ ಎನ್ನಲಾಗಿದೆ.
ಬಳಿಕ ಶಶಿಕಾಂತ್ ಪೋಷಕರನ್ನು ಫೋನ್ ಮಾಡಿ ಕರೆಸಿ, ಜಾತಿ ನಿಂದನೆ ಮಾಡಿ ಬೆದರಿಸಿದ್ದಾರೆ. ಹಲ್ಲೆಗೊಳಗಾದ ಪುತ್ರ ಶಶಿಕಾಂತ್ ಅನ್ನು ಪೋಷಕರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ದಾರಿ ಮಧ್ಯೆ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಪೋಷಕರು ದೂರಿನಲ್ಲಿ ಹೇಳಿದ್ದಾಗಿ ವರದಿಗಳು ವಿವರಿಸಿವೆ.
ಯುವಕನ ಸಾವಿಗೆ ಕಾರಣರಾದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಜಿಮ್ಸ್ ಆಸ್ಪತ್ರೆ ಬಳಿ ಶುಕ್ರವಾರ (ಡಿ.13) ಸಂಜೆ ಯುವಕನ ಶವವಿಟ್ಟು ಕುಟುಂಬ ಸದಸ್ಯರು ಮತ್ತು ದಲಿತ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.
ಆರೋಪಿಗಳ ವಿರುದ್ಧ ಕೊಲೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿರುವುದರಿಂದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮೃತ ಶಶಿಕಾಂತ್ ಪೋಷಕರಿಗೆ 4.12 ಲಕ್ಷ ರೂ. ಮೊತ್ತದ ಪರಿಹಾರದ ಚೆಕ್ ವಿತರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ : ಚಿತ್ರದುರ್ಗ ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಸೇರಿದಂತೆ ಒಟ್ಟು 7 ಮಂದಿಗೆ ಜಾಮೀನು ಮಂಜೂರು


