ಶಾಲೆಯಲ್ಲಿ ಶಿಕ್ಷಕರಿಂದ ಜಾತಿ ತಾರತಮ್ಯಕ್ಕೆ ಒಳಗಾಗಿ ತನ್ನ ಮಗ ಆಘಾತಕ್ಕೊಳಗಾಗಿದ್ದಾನೆ. ಅಧಿಕಾರಿಗಳಿಂದ ನನಗೆ ನ್ಯಾಯ ಸಿಕ್ಕಿಲ್ಲ. ಹಾಗಾಗಿ, ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಕೇರಳದ ದಲಿತ ಬಾಲಕನೋರ್ವನ ತಾಯಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿರುವ ಕೇರಳದ ಇಡುಕ್ಕಿಯ ದಲಿತ ಮಹಿಳೆ ಪ್ರಿಯಾಂಕಾ ಸೋಮನ್ ಎಂಬವರು ತನ್ನ ಆರು ವರ್ಷದ ಮಗ ಪ್ರಣವ್ ಸಿಜಾಯ್ ಎಂಬಾತನಿಗೆ, ಆತ ಓದುತ್ತಿದ್ದ ಸ್ಲೀವಮಾಲಾದ ಸೇಂಟ್ ಬೆನೆಡಿಕ್ಟ್ಸ್ ಎಲ್ ಪಿ ಶಾಲೆಯಲ್ಲಿ ಜಾತಿ ದೌರ್ಜನ್ಯ ನಡೆಸಿದ ಆರೋಪ ಮಾಡಿದ್ದಾರೆ.
ಬಾಲಕ ಸಿಜಾಯ್‌ನ ಸಹಪಾಠಿಯೋರ್ವ ಅನಾರೋಗ್ಯದ ಕಾರಣ ತರಗತಿಯಲ್ಲಿ ವಾಂತಿ ಮಾಡಿಕೊಂಡಿದ್ದ. ಅದನ್ನು ಜಾತಿಯ ಕಾರಣಕ್ಕೆ ಶಿಕ್ಷಕರು ಸಿಜಾಯ್ ಕೈಯಲ್ಲಿ ಸ್ವಚ್ಚ ಮಾಡಿಸಿದ್ದಾರೆ ಎಂದಿದ್ದಾರೆ.
ಶಿಕ್ಷಕಿ ಮರಿಯಾ ಜೋಸೆಫ್ ಎಂಬಾಕೆ ತನ್ನ ಮಗನಿಂದ ಒತ್ತಾಯಪೂರ್ವಕವಾಗಿ ಸಹಪಾಠಿ ವಾಂತಿ ಮಾಡಿದ್ದನ್ನು ಸ್ವಚ್ಚ ಮಾಡಿಸಿದ್ದಾರೆ. ಇದರಿಂದ ಆತ ಭಯಬೀತನಾಗಿದ್ದಾನೆ. ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಶಾಲೆಗೆ ಹೋಗಲು ಕೇಳುತ್ತಿಲ್ಲ ಎಂದು ಪ್ರಿಯಾಂಕಾ ಸೋಮನ್ ಆರೋಪಿಸಿದ್ದಾರೆ.
ಪ್ರಿಯಾಂಕಾ ಅವರು ಮಕ್ಕಳ ಸಹಾಯವಾಣಿ, ಜಿಲ್ಲಾಧಿಕಾರಿ, ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಸೇರಿದಂತೆ ಹಲವರಿಗೆ ದೂರುಗಳನ್ನು ನೀಡಿದ ಬಳಿಕ, ಶಾಲಾ ಆಡಳಿತ ಮಂಡಳಿಯು ಪ್ರಕರಣವನ್ನು ಕುಶಲತೆಯಿಂದ ನಿರ್ವಹಿಸಲು ಪ್ರಾರಂಭಿಸಿದೆ.
ಪ್ರಣವ್ ಸಿಜಾಯ್ ಮಾತ್ರವಲ್ಲದೆ ಎಲ್ಲಾ ವಿದ್ಯಾರ್ಥಿಗಳಿಂದ ನಾವು ವಾಂತಿ ಮಾಡಿದ್ದನ್ನು ಸ್ವಚ್ಚ ಮಾಡಿಸಿದ್ದೇವೆ. ಕೇವಲ ಸಿಜಾಯ್ ಅನ್ನು ಮಾತ್ರ ಗುರಿಯಾಗಿಸಿಲ್ಲ ಎಂದು ಶಾಲಾ ಆಡಳಿತ ಮಂಡಳಿ ಹೇಳಿದೆ. ಆದರೆ, ಈ ಹೇಳಿಕೆ ಆಡಳಿತ ಮಂಡಳಿಗೆ ಸಂಕಷ್ಟ ತಂದಿಟ್ಟಿದೆ. ಮಕ್ಕಳಿಂದ ವಾಂತಿ ಸ್ವಚ್ಚ ಮಾಡಿಸುವ ಮೂಲಕ ಬಾಲ ಕಾರ್ಮಿಕ ಮತ್ತು ಮಕ್ಕಳ ಹಕ್ಕುಗಳ ಕಾನೂನುಗಳನ್ನು ಉಲ್ಲಂಘಿಸಿರುವುದನ್ನು ಆಡಳಿತ ಮಂಡಳಿ ಒಪ್ಪಿಕೊಂಡಿದೆ ಎಂದು ವರದಿಗಳು ಹೇಳಿವೆ.
ಶಾಲಾ ಆಡಳಿತ ಮಂಡಳಿ ಸ್ವತಃ ತಪ್ಪು ಒಪ್ಪಿಕೊಂಡಿದೆ. ಮಕ್ಕಳು ಕೂಡ ಹೇಳಿಕೆಗಳನ್ನು ನೀಡಿದ್ದಾರೆ. ಆದರೂ, ಪೊಲೀಸರು ಮತ್ತು ಶಾಲಾ ಆಡಳಿತ ಮಂಡಳಿಯವರು ಪ್ರಕರಣದ ಗಂಭೀರತೆಯನ್ನು ಕುಗ್ಗಿಸಲು ನೋಡುತ್ತಿದ್ದಾರೆ. ಸ್ಥಳಿಯಾಡಳಿತದ ಅಧಿಕಾರಿಗಳು ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪೊಲೀಸರು ಉದ್ದೇಶಪೂರ್ವಕವಾಗಿ ತನಿಖೆ ವಿಳಂಬ ಮಾಡುತ್ತಿದ್ದಾರೆ. ಈ ಮೂಲಕ ಶಾಲಾ ಆಡಳಿತ ಮಂಡಳಿಯನ್ನು ರಕ್ಷಿಸುತ್ತಿದ್ದಾರೆ ಎಂದು ದಿ ಮೂಕನಾಯಕ್ ವರದಿ ಮಾಡಿದೆ.
“ನಾನು ನನ್ನ ಮಗನಿಗಾಗಿ ಮಾತ್ರ ಹೋರಾಟ ಮಾಡುತ್ತಿಲ್ಲ. ಇದು ಎಲ್ಲರಿಗೆ ಸಂಬಂಧಪಟ್ಟಿದ್ದು, ಈ ರೀತಿಯ ಕೃತ್ಯಗಳು ಕೊನೆಯಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಾಲೆಗಳಲ್ಲಿ ಸ್ವಚ್ಚತಾ ಸಿಬ್ಬಂದಿಯನ್ನು ನೇಮಿಸುವುದನ್ನು ಕಡ್ಡಾಯಗೊಳಿಸಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ಹಕ್ಕುಗಳ ಕಡ್ಡಾಯ ಪಾಲನೆ ಖಚಿತಪಡಿಸಬೇಕು ಎಂದು ಪ್ರಿಯಾಂಕಾ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.
ಶಾಲೆಯ ತರಗತಿಯ ಮುಂಭಾಗ ಅಳವಡಿಸಿರುವ ಸಿಸಿಟಿವಿಯಲ್ಲಿ ಜನರು ತರಗತಿಯೊಳಗೆ ಹೋಗುವುದು ಬರುವುದು ಸ್ಪಷ್ಟವಾಗಿ ರೆಕಾರ್ಡ್ ಆಗಿದೆ. ಇದರಿಂದ ವಾಂತಿ ಸ್ವಚ್ಚ ಮಾಡಿಸಿರುವುದು ಸ್ಪಷ್ಟ. ಸಿಸಿಟಿವಿ ದೃಶ್ಯವನ್ನು ಸಾಕ್ಷಿಯಾಗಿ ಪರಿಗಣಿಸಿ ಶಾಲೆಯ ವಿರುದ್ದ ಕ್ರಮ ಕೈಗೊಳ್ಳಬೇಕು. ಪೊಲೀಸರು ಶಾಲೆಯನ್ನು ರಕ್ಷಿಸುವ ಕೆಲಸ ಮಾಡಬಾರದು. ನನಗೆ ಸಾಕ್ಷ್ಯಗಳನ್ನು ತಿರುಚುವ ಆತಂಕವಿದೆ. ಈ ಪ್ರಕರಣದಲ್ಲಿ ನ್ಯಾಯಯುತ ತನಿಖೆ ನಡೆಯಬೇಕು ಎಂದು ಪ್ರಿಯಾಂಕಾ ಅವರು ಆಗ್ರಹಿಸಿದ್ದಾರೆ.
ಸ್ಥಳೀಯ ಅಧಿಕಾರಿಗಳಿಂದ ನ್ಯಾಯ ಸಿಗದಿರುವ ಹಿನ್ನೆಲೆ ಪ್ರಿಯಾಂಕಾ ಅವರು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದು ನ್ಯಾಯ ಒದಗಿಸುವಂತೆ ಕೋರಿದ್ದಾರೆ. ಪತ್ರದಲ್ಲಿ ಜಾತಿ ತಾರತಮ್ಯ, ಮಕ್ಕಳ ಹಕ್ಕುಗಳು ಮತ್ತು ಬಾಲ ಕಾರ್ಮಿಕ ತಡೆ ಕಾನೂನುಗಳ ಉಲ್ಲಂಘನೆಯನ್ನು ಎತ್ತಿ ತೋರಿಸಿದ್ದಾರೆ ಎಂದು ವರದಿಯಾಗಿದೆ.
ಬಾಲಕನಿಂದ ಜಾತಿಯ ಕಾರಣಕ್ಕೆ ವಾಂತಿ ಸ್ವಚ್ಚ ಮಾಡಿಸಿದ್ದಾರೆ ಎಂಬ ವಿಚಾರ ಕೇರಳದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ಆದರೆ, ಅಧಿಕಾರಿಗಳು ಶಾಲೆಯಲ್ಲಿ ಮಕ್ಕಳಿಂದ ಸ್ವಚ್ಚತಾ ಕಾರ್ಯಗಳನ್ನು ಮಾಡಿಸುವುದು ಸಾಮಾನ್ಯ ವಿಷಯ ಎಂದಿದ್ದಾರೆ. ಶಿಕ್ಷಣ ಹೆಸರಿನಲ್ಲಿ ಮಕ್ಕಳ ಶೋಷಣೆಯನ್ನು ಸಾಮಾಣ್ಯೀಕರಿಸುವ ಮೂಲಕ ಕಾನೂನು ಜಾರಿ ಮಾಡಬೇಕಾದವರೇ ಉಲ್ಲಂಘಣೆ ಮಾಡುತ್ತಿದ್ದಾರೆ ಎಂದು ದಿ ಮೂಕನಾಯಕ್ ವರದಿ ಮಾಡಿದೆ.
ವರದಿಗಳ ಪ್ರಕಾರ, ಜಾತಿ ದೌರ್ಜನ್ಯದ ಬಳಿಕ ಬಾಲಕ ಪ್ರಣವ್ ಅವರನ್ನು ಖಾಸಗಿ ಶಾಲೆಯಿಂದ ವರ್ಗಾವಣೆ ಪಡೆದು, ಸರ್ಕಾರಿ ಶಾಲೆಗೆ ಸೇರಿಸಲು ಪೋಷಕರು ಮುಂದಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಸೌಲಭ್ಯಕ್ಕಾಗಿ ದಾಖಲಾತಿ ಬೇಕು, ದಾಖಲಾತಿಗಳಿಂದಲೇ ಸೌಲಭ್ಯ ಎಂಬಂತಾಗಬಾರದು – ಡಾ. ಅಕ್ಕಯ್ ಪದ್ಮಶಾಲಿ


