ಸೈಫ್ ಅಲಿಖಾನ್ ಮತ್ತು ಡಿಂಪಲ್ ಕಪಾಡಿಯ ನಟಿಸಿರುವ ಹೊಸ ವೆಬ್ ಸೀರೀಸ್ ‘ತಾಂಡವ್’ನಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಲಾಗಿದೆ ಎಂದು ಆರೋಪಸಿರುವ ಮಹಾರಾಷ್ಟ್ರ ಬಿಜೆಪಿ ಶಾಸಕ ರಾಮ್ ಕದಮ್, ಇದರ ನಿರ್ಮಾಪಕರು, ನಿರ್ದೇಶಕರು ಮತ್ತು ನಟರ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಸೀರೀಸ್‌ನಲ್ಲಿ ಶಿವನನ್ನು ಅಪಹಾಸ್ಯ ಮಾಡಲಾಗಿದೆ ಎಂದು ಆರೋಪಿಸಿರುವ ಶಾಸಕ, ಆ ದೃಶ್ಯಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ನಟ ಮೊಹಮ್ಮದ್ ಜೀಶನ್ ಅಯೂಬ್ ಕ್ಷಮೆಯಾಚಿಸಬೇಕು ಎಂದೂ ಅಗ್ರಹಿಸಿದ್ದಾರೆ.
ಕೇಂದ್ರ ಸಚಿವ ಪ್ರಕಾಶ್ ಜಾವಾಡೇಕರ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಶಾಸಕ, “ಪ್ರೈಮ್ ಮತ್ತು ನೆಟ್‌ಫ್ಲಿಕ್ಸ್‌ನಂತಹ ಒಟಿಟಿಗಳಲ್ಲಿ ಪ್ರಸಾರವಾಗುವ ಸಿನಿಮಾಗಳಿಗೆ ಸೆನ್ಸಾರ್ ಮಾಡಬೇಕು” ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ: JNU ಪ್ರತಿಭಟನೆ ಆಧಾರಿತ ಚಿತ್ರಕ್ಕೆ ತಡೆಯೊಡ್ಡಿದ ಸೆನ್ಸಾರ್ ಮಂಡಳಿಯ ಬಿಜೆಪಿ ಮುಖಂಡ!
“ಹಿಂದೂ ದೇವತೆಗಳನ್ನು ಕೀಳಾಗಿ ಕಾಣುವ ಪ್ರವೃತ್ತಿ ಚಲನಚಿತ್ರ ಮತ್ತು ವೆಬ್ ಸೀರೀಸ್ ತಯಾರಕರಲ್ಲಿ ಯಾಕೆ ಟ್ರೆಂಡ್ ಆಗುತ್ತಿದೆ? ಇದಕ್ಕೆ ಇತ್ತೀಚಿನ ಉದಾಹರಣೆ ‘ತಾಂಡವ್’ ವೆಬ್ ಸೀರೀಸ್. ಸೈಫ್ ಅಲಿಖಾನ್ ಮತ್ತೊಮ್ಮೆ ಹಿಂದೂ ದೇವತೆಗಳನ್ನು ಗುರಿಯಾಗಿಸುವ ವೆಬ್ ಸೀರೀಸ್‌ನ ಭಾಗವಾಗಿದ್ದಾರೆ. ನಿರ್ದೇಶಕ ಅಲಿ ಅಬ್ಬಾಸ್ ಅಪಹಾಸ್ಯ ದೃಶ್ಯವನ್ನು ತೆಗೆದುಹಾಕಬೇಕು” ಎಂದು ಒತ್ತಾಯಿಸಿದ್ದಾರೆ.
Why is it becoming a trend amongst films and web series makers to demean Hindu gods? Latest culprit seems to be the series #Tandav. #SaifAliKhan again part of a film or series which attempts to target Hindu deities. Director Ali Abbas Zafar needs to remove that scene which mocks pic.twitter.com/AausBUh2ky
— Ram Kadam – राम कदम (@ramkadam) January 17, 2021
ಶನಿವಾರ ಬಿಜೆಪಿ ಸಂಸದ ಮನೋಜ್ ಕೊಟಕ್ ಪ್ರಕಾಶ್ ಜಾವಾಡೇಕರ್ ಅವರಿಗೆ ಪತ್ರ ಬರೆದಿದ್ದು, “ಈ ವೆಬ್ ಸೀರೀಸ್ ಲೈಂಗಿಕತೆ, ಹಿಂಸೆ, ಮಾದಕ ವಸ್ತುಗಳು, ನಿಂದನೆ ಮತ್ತು ದ್ವೇಷ ಹಾಗೂ ಕೆಲವೊಮ್ಮೆ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುತ್ತದೆ. ಹಾಗಾಗಿ ಇದರ ಮೇಲೆ ನಿಯಂತ್ರಣ ಸಾಧಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಅಂಬಾನಿ 5G ಗಾಗಿ ಥಿಯೇಟರ್ ಓಪನ್ ಮಾಡ್ತಿಲ್ಲ; ಇದು ಬಹುದೊಡ್ಡ ಹಗರಣ ಎಂದ ನಟ ದರ್ಶನ್!
ಹಿಂದೂ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹಲವು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ದೆಹಲಿ ಹಿಂಸಾಚಾರದ ಪ್ರಮುಖ ಆರೋಪಿ ಬಿಜೆಪಿಯ ಕಪಿಲ್ ಮಿಶ್ರಾ ಕೂಡಾ ಇದನ್ನು ವಿರೋಧಿಸಿದ್ದಾರೆ.
“ಈ ದಿನ ಮುಗಿಯುತ್ತದೆ. ಆದರೆ ನಮ್ಮ ಧರ್ಮ ಮತ್ತು ದೇವತೆಗಳ ವಿರುದ್ಧ ದ್ವೇಷ ಹರಡುವ ವೆಬ್ ಸೀರೀಸ್‌ಗಳು ಆನ್‌ಲೈನ್‌ನಲ್ಲಿ ಇನ್ನೂ ಲಭ್ಯವಿದೆ” ಎಂದು ಟ್ವೀಟ್ ಮಾಡಿದ್ದಾರೆ.
As this day comes to an end,
There is still this web series available online spreading massive hate against our dharma and our Gods
making hero out of terrorists and making fun of our forces
It's still up and running
शुभ रात्रि दोस्तों #BanTandavNow
— Kapil Mishra (@KapilMishra_IND) January 16, 2021
ಈ ಕಾರಣಕ್ಕೆ ತಾಂಡವ್ ವೆಬ್ ಸೀರೀಸ್ ಅನ್ನು ಬ್ಯಾನ್ ಮಾಡಬೇಕು ಎಂದು ಶನಿವಾರ ಟ್ವಿಟರ್‌ನಲ್ಲಿ ಟ್ರೆಂಡ್ ಮಾಡಲಾಗಿತ್ತು. ಈ ಹಿಂದೆಯೂ ‘ಎ ಸೂಟಬಲ್ ಬಾಯ್’ ಎನ್ನುವ ವೆಬ್ ಸೀರೀಸ್ ಸೇರಿದಂತೆ ಹಲವು ಚಿತ್ರಗಳನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಲಾಗಿತ್ತು. ಇವುಗಳಿಗೆ ಮೂಲ ಕಾರಣ ಹಿಂದೂ ದೇವತೆಗಳು ಮತ್ತು ಧರ್ಮಕ್ಕೆ ಧಕ್ಕೆಯಾಗಿದೆ ಎಂಬುದೇ ಆಗಿತ್ತು.
ಕಳೆದ ತಿಂಗಳು ಸೈಫ್ ಅಲಿಖಾನ್ ಮತ್ತೊಂದು ವಿವಾದಕ್ಕೆ ಸಿಲುಕಿದ್ದರು. ರಾವಣನ ಪಾತ್ರಕ್ಕೆ ಮಾನವೀಯ ನೆಲೆಗಟ್ಟಿದೆ ಎಂದು ಹೇಳಿದ್ದರು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ಷಮೆ ಕೇಳಿದ್ದರು.
ಇತ್ತೀಚೆಗೆ ಒಟಿಟಿಗಳನ್ನು ಕೇಂದ್ರ ಸರ್ಕಾರದ ಅಡಿಯಲ್ಲಿ ತಂದು ನಿಯಂತ್ರಿಸಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಇದನ್ನೂ ಓದಿ: ರಾವಣ ಮಾನವೀಯ ಗುಣವುಳ್ಳವನು ಎಂದಿದ್ದ ನಟ ಸೈಫ್ ಅಲಿ ಖಾನ್ ವಿರುದ್ಧ ದೂರು


