ಗುತ್ತಿಗೆದಾರ ಸಚಿನ್ ಮೋನಪ್ಪ ಪಾಂಚಾಲ್ ಅವರ ಆತ್ಮಹತ್ಯೆಯ ನಂತರ ವಿವಾದದಲ್ಲಿ ಸಿಲುಕಿರುವ ತಮ್ಮ ಸಂಪುಟ ಸಹೋದ್ಯೋಗಿ ಪ್ರಿಯಾಂಕ್ ಖರ್ಗೆ ಅವರನ್ನು ಗೃಹ ಸಚಿವ ಜಿ ಪರಮೇಶ್ವರ ಅವರು ಮಂಗಳವಾರ ಸಮರ್ಥಿಸಿಕೊಂಡಿದ್ದಾರೆ.
“ಖರ್ಗೆ ಅವರ ಆಪ್ತರಾಗಿದ್ದ ರಾಜು ಕಾಪನೂರ ಅವರು ಗುತ್ತಿಗೆಗಾಗಿ ಹಣ ವಸೂಲಿ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆಗೆ ಶರಣಾಗಿರುವ ಗುತ್ತಿಗೆದಾರರು, ಸಾಯುವುದಕ್ಕೂ ಮೊದಲು ಡೆತ್‌ನೋಟ್ ಬರೆದಿಟ್ಟಿದ್ದರು” ಎನ್ನಲಾಗಿದೆ.
“ಖರ್ಗೆ ವಿರುದ್ಧ ಬಿಜೆಪಿ ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ. ಘಟನೆಗೆ ಯಾವುದೇ ಖಚಿತವಾದ ಸಾಕ್ಷ್ಯಗಳಿಲ್ಲ” ಎಂದು ಪರಮೇಶ್ವರ್ ಒತ್ತಿ ಹೇಳಿದರು. “ಆತ್ಮಹತ್ಯೆ ಪತ್ರದಲ್ಲಿ ತಮ್ಮ ಹೆಸರನ್ನು ನಮೂದಿಸಿಲ್ಲ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಪುರಾವೆ ಇಲ್ಲದ ಆರೋಪ ಸರಿಯಲ್ಲ. ಈಗಾಗಲೇ ಆರಂಭವಾಗಿರುವ ಸಿಐಡಿ ತನಿಖೆಯಿಂದ ಸತ್ಯಾಂಶ ಹೊರಬೀಳಲಿದೆ” ಎಂದರು.
ಡಿಸೆಂಬರ್ 26 ರಂದು ಪಾಂಚಾಲ್ ಅವರ ಸಾವಿನ ನಂತರ ಪತ್ತೆಯಾದ ಸೂಸೈಡ್ ನೋಟ್‌ನಲ್ಲಿ ಕಪನೂರ್ ಅವರು ಒಪ್ಪಂದಕ್ಕೆ ಬದಲಾಗಿ ₹1 ಕೋಟಿಗೆ ಬೇಡಿಕೆಯಿಟ್ಟಿದ್ದಾರೆ, ಗುತ್ತಿಗೆದಾರರು ಹಣ ನೀಡದೇ ಇದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದು, ಇತರ ಏಳು ವ್ಯಕ್ತಿಗಳನ್ನು ಸಹ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಖರ್ಗೆ ಅವರ ರಾಜೀನಾಮೆಗೆ ಬಿಜೆಪಿಯ ಬೇಡಿಕೆ ಮತ್ತು ಪ್ರತಿಭಟನೆಯನ್ನು ತೀವ್ರಗೊಳಿಸುವ ಅವರ ಬೆದರಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, ವಿಪಕ್ಷಗಳು ಆಧಾರರಹಿತ ಆರೋಪಗಳಿಂದ ದೂರವಿರಬೇಕು. ಖರ್ಗೆ ಅವರ ಕೈವಾಡದ ಬಗ್ಗೆ ಪುರಾವೆಗಳಿದ್ದರೆ, ನಾವು ಅದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಆಧಾರರಹಿತ ಆರೋಪಗಳನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಅವರು ಹೇಳಿದರು.
ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ ಹಸ್ತಾಂತರಿಸಲು ಜನವರಿ 4ಕ್ಕೆ ಬಿಜೆಪಿ ಗಡುವು ವಿಧಿಸಿದ್ದು, ತಮ್ಮ ಬೇಡಿಕೆ ಈಡೇರದಿದ್ದಲ್ಲಿ ಬೃಹತ್ ಸಮಾವೇಶ ಮತ್ತು ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದೆ. ಪ್ರಸ್ತುತ ನಡೆಯುತ್ತಿರುವ ಸಿಐಡಿ ತನಿಖೆ ಸರಿಯಲ್ಲ ಎಂದು ಹೇಳಿದೆ.
ಕಪನೂರ ಬಂಧನದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಕರಣವನ್ನು ಸಿಐಡಿ ನಡೆಸುತ್ತಿದ್ದು, ತನಿಖೆಯ ವೇಳೆ ಹೆಚ್ಚಿನ ವಿವರಗಳು ಬಹಿರಂಗಗೊಳ್ಳಲಿವೆ ಎಂದು ವಿವರಿಸಿದರು.
ಇದನ್ನೂ ಓದಿ; ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ | ಪ್ರಕರಣವನ್ನು ಸಿಐಡಿಗೆ ವಹಿಸಿದ ರಾಜ್ಯ ಸರ್ಕಾರ


