ರಸ್ತೆ ಅಪಘಾತವನ್ನೇ ನೆಪವಾಗಿಟ್ಟುಕೊಂಡು ದರ್ಗಾಕ್ಕೆ ಆಗಮಿಸುತ್ತಿದ್ದವರ ಕಾರನ್ನು ಅಡ್ಡಗಟ್ಟಿ ಬಜರಂಗದಳದ ಕಾರ್ಯಕರ್ತರೆನ್ನಲಾದ ತಂಡವೊಂದು ಹಲ್ಲೆ ನಡೆಸಿದ ಘಟನೆ ಶೃಂಗೇರಿಯಲ್ಲಿ ಭಾನುವಾರ (ಫೆ.9) ರಾತ್ರಿ ನಡೆದಿರುವುದು ವರದಿಯಾಗಿದೆ ಎಂದು ವಾರ್ತಾ ಭಾರತಿ ಸುದ್ದಿ ಮಾಡಿದೆ.
ಹಲ್ಲೆಯಿಂದ ಗಾಯಗೊಂಡವರನ್ನು ಶೃಂಗೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.
ಕೊಪ್ಪ ಮೂಲದ ಕುಟುಂಬವೊಂದು ಮೂರು ಕಾರುಗಳಲ್ಲಿ ಶೃಂಗೇರಿ ಪಟ್ಟಣದಲ್ಲಿನ ದರ್ಗಾಕ್ಕೆ ಭೇಟಿ ನೀಡುವ ಉದ್ದೇಶದಿಂದ ಆಗಮಿಸಿದ್ದರು. ಈ ವೇಳೆ ಹರಿಹರಪುರದಲ್ಲಿ ಇವರಿದ್ದ ಕಾರು ಮತ್ತು ಬೈಕೊಂದರ ಮಧ್ಯೆ ಢಿಕ್ಕಿ ಸಂಭವಿಸಿದೆ ಎನ್ನಲಾಗಿದೆ. ಇದೇ ವಿಚಾರವಾಗಿ ಬಜರಂಗದಳದ ಕಾರ್ಯಕರ್ತರೆನ್ನಲಾದ ತಂಡವು ಶೃಂಗೇರಿ ಬಸ್ ನಿಲ್ದಾಣದ ಬಳಿ ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಐವರ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದೆ ಎಂದು ದೂರಲಾಗಿದೆ. ಹಲ್ಲೆಯಿಂದ ಗಾಯಗೊಂಡವರು ಶೃಂಗೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವಾರ್ತಾ ಭಾರತಿ ವರದಿ ವಿವರಿಸಿದೆ.
ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಬೈಕ್-ಕಾರು ಅಪಘಾತ ಪ್ರಕರಣ ಹಾಗೂ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ತಿಳಿಸಿದ್ದಾರೆ ಎಂದು ವರದಿ ಹೇಳಿದೆ.


