ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಮತ್ತು ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಕೇಳಿ ಬಂದಿರುವ ಅಕ್ರಮ ಡಿನೋಟಿಫಿಕೇಷನ್ ಹಗರಣ ಆರೋಪ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಲೋಕಾಯುಕ್ತ ಅಧಿಕಾರಿಗಳು, ಅಕ್ರಮ ಡಿನೋಟಿಫಿಕೇಷನ್ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಹಲವು ಅಧಿಕಾರಿಗಳ ಹೇಳಿಕೆಯನ್ನು ನಿಯಮ 164ರ ಅಡಿಯಲ್ಲಿ ನ್ಯಾಯಾಧೀಶರ ಎದುರು ದಾಖಲಿಸಲು ಮುಂದಾಗಿದ್ದಾರೆ ಎಂದು ಈದಿನ.ಕಾಮ್ ವರದಿ ಮಾಡಿದೆ.
ಹಗರಣಕ್ಕೆ ಸಂಬಂಧಿಸಿದಂತೆ 2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ಕಾರ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರಿಂದ ತನಿಖಾಧಿಕಾರಿಗಳು ಈ ಹಿಂದೆಯೇ ಹೇಳಿಕೆ ದಾಖಲಿಸಿದ್ದಾರೆ ತಿಳಿದು ಬಂದಿದೆ.
ಗುರುವಾರ (ಸೆ.19) ಬೆಂಗಳೂರಿನ 36ನೇ ಎಸಿಎಂಎಂ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಎದುರು ಹಾಜರಾಗಿದ್ದ ರಾಕೇಶ್ ಸಿಂಗ್, ನಿಯಮ 164ರ ಅಡಿಯಲ್ಲಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ‘ಕುಮಾರಸ್ವಾಮಿ ಅವರ ನಿರ್ದೇಶನದ ಮೇರೆಗೆ, ಬೆಂಗಳೂರು ಮಹಾನಗರದ ಗಂಗಾನಗರ (ಗಂಗೇನಹಳ್ಳಿ) ಪ್ರದೇಶದಲ್ಲಿರುವ 1 ಎಕರೆ 11 ಗುಂಟೆ ಭೂಮಿಯನ್ನು ಡಿನೋಟಿಫಿಕೇಷನ್ ಪ್ರಕ್ರಿಯೆ ಆರಂಭಿಸಲಾಗಿತ್ತು’ ಎಂದು ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ ಎಂದು ಈದಿನ.ಕಾಮ್ ವರದಿ ತಿಳಿಸಿದೆ.
ಬೆಂಗಳೂರಿನ ಆರ್‌ಟಿ ನಗರದ ಬಳಿಯ ಗಂಗಾನಗರದಲ್ಲಿ 1 ಎಕರೆ 11 ಗುಂಟೆ ಭೂಮಿಯನ್ನು ಸತ್ತವರ ಹೆಸರಿನಲ್ಲಿ ಹಾಲಿ ಕೇಂದ್ರ ಸಚಿವ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಜಂಟಿಯಾಗಿ ಡಿನೋಟಿಫೈ ಮಾಡಿಸಿರುವ ಆರೋಪ ಕೇಳಿ ಬಂದಿದೆ.
ಡಿನೋಟಿಫೈ ಆಗಿದ್ದ ಭೂಮಿಯನ್ನು ಕುಮಾರಸ್ವಾಮಿ ಅವರ ಬಾಮೈದ ಡಾ.ಚನ್ನಪ್ಪ ಎಂಬವರ ಹೆಸರಿಗೆ ನೋಂದಣಿ ಮಾಡಿಕೊಡಲಾಗಿದೆ ಎನ್ನಲಾಗಿದ್ದು, ಈ ಬಗ್ಗೆ 2015ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಆದರೆ, ದೂರು ದಾಖಲಾಗಿ 9 ವರ್ಷಗಳು ಕಳೆದರೂ ಲೋಕಾಯುಕ್ತ ತನಿಖೆ ಪೂರ್ಣಗೊಳಿಸಿಲ್ಲ.
ಇದನ್ನೂ ಓದಿ : ಯಡಿಯೂರಪ್ಪ, ಕುಮಾರಸ್ವಾಮಿಯಿಂದ ಅಕ್ರಮ ಡಿನೋಟಿಫಿಕೇಷನ್ ಆರೋಪ : ದಾಖಲೆ ಬಿಡುಗಡೆಗೊಳಿಸಿದ ಸಚಿವರು


