ಬಿಜೆಪಿಯು ಒಕ್ಕೂಟ ಸರ್ಕಾರದ ತನಿಖಾ ಸಂಸ್ಥೆಗಳನ್ನು ಬಳಸಿ ನಮ್ಮನ್ನು ಬೆದರಿಸುತ್ತಿದ್ದು, ನಮ್ಮ ಶಾಸಕರ ಉಳಿವಿಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೆಂದು ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆಗೆ ಪತ್ರ ಬರೆದಿದ್ದಾರೆ.
ಪ್ರತಾಪ್ ಸರ್ನಾಯಕ್ ಥಾಣೆಯ ಮಜಿವಾಡ ಕ್ಷೇತ್ರದ ಶಾಸಕರಾಗಿದ್ದು, ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ, “ನನ್ನನ್ನು ಸೇರಿಸಿದಂತೆ ಶಿವಸೇನೆ ನಾಯಕರುಗಳಾದ ಅನಿಲ್ ಪರಬ್, ರವೀಂದ್ರ ವಾಯ್ಕರ್ ಹಾಗೂ ನಮ್ಮ ಕುಟುಂಬದ ಸದಸ್ಯರಿಗೆ ಒಕ್ಕೂಟ ಸರ್ಕಾರದ ತನಿಖಾ ಸಂಸ್ಥೆಗಳು ನಿರಂತರ ಮಾನಸಿಕ ಹಿಂಸೆ ನೀಡುತ್ತಿವೆ” ಎಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಕೊರೊನಾ 3ನೇ ಅಲೆಯಲ್ಲಿ ರಾಜ್ಯದಲ್ಲಿ 3.4 ಲಕ್ಷ ಮಕ್ಕಳಿಗೆ ಸೋಂಕು ಸಾಧ್ಯತೆ: ತಜ್ಞರ ಸಮಿತಿ
ಪತ್ರದಲ್ಲಿ ಅವರು, “ಶಿವಸೇನೆಯ ನಾಯಕರುಗಳನ್ನು ಇಂತಹ ಮಾನಸಿಕ ಹಿಂಸೆಗಳಿಂದ ರಕ್ಷಿಸಿಕೊಳ್ಳಲು ಶಿವಸೇನೆಯು ಬಿಜೆಪಿಯೊಂದಿಗೆ ಸಖ್ಯ ಬೆಳೆಸಿಕೊಳ್ಳಬೇಕು. ತುಂಬಾ ತಡವಾಗುವ ಮೊದಲು ಶಿವಸೇನೆಯ ಉನ್ನತ ನಾಯಕರು ಈ ಕುರಿತು ಮುಂದುವರೆಯಬೇಕು. ಮೈತ್ರಿ ಅಲ್ಲದಿದ್ದರೂ ಉತ್ತಮ ಬಾಂಧವ್ಯವನ್ನಾದರೂ ಬೆಳೆಸಬೇಕು” ಎಂದು ಆಗ್ರಹಿಸಿದ್ದಾರೆ.
ಮಹಾರಾಷ್ಟ್ರದ ಮುಂಬೈ, ಥಾಣೆ ಮೊದಲಾದ ಮಹಾನಗರ ಪಾಲಿಕೆಗಳ ಚುಣಾವಣೆ ಮುಂದಿನ ದಿನಗಳಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಶಾಸಕ ಪ್ರತಾಪ್ ಸರ್ನಾಯಕ್ ಅವರ ಪತ್ರದಲ್ಲಿನ ಆರೋಪಗಳು ಗಂಭೀರನಿಸಿದೆ.
ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವು ಚುನಾವಣೆಗಳು ನಡೆಯಲಿರುವ ಸಮಯದಲ್ಲೇ ತನ್ನ ರಾಜಕೀಯ ಎದುರಾಳಿಗಳ ಮೇಲೆ ತನಿಖಾ ಸಂಸ್ಥೆಗಳ ಮೂಲಕ ದಾಳಿ ನಡೆಸಿರುವ ಹಲವು ಉದಾಹರಣೆಗಳಿವೆ. ಇತ್ತೀಚೆಗೆ ವಿಧಾನಸಭಾ ಚುನಾವಣೆ ಎದುರಿಸಿದ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ರಾಜ್ಯದಲ್ಲೂ ಇಂತಹ ವಿದ್ಯಾಮಾನಗಳು ನಡೆದಿದ್ದವು.


