ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ಈ ದೇಶವನ್ನು ಆಕ್ರಮಿಸಿ ನಮ್ಮನ್ನು ಶೋಷಿಸಿ, ತಮ್ಮ ಭೋಗ ಜೀವನಕ್ಕೆ ಈ ದೇಶದ ಸಂಪತ್ತನ್ನು ದುರುಪಯೋಗ ಮಾಡಿಕೊಂಡಿದ್ದನ್ನು ಕಾಲಕಾಲಕ್ಕೆ ದೇಶದಾದ್ಯಂತ ಕೆಲವರು ಪ್ರತಿರೋಧಿಸಿದ್ದು ಇತಿಹಾಸ. ಇಡೀ ವಿಶ್ವವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದ ಅತ್ಯಂತ ಬಲಿಷ್ಠರಾದ ಬ್ರಿಟಿಷ್ ಸಾಮ್ರಾಜ್ಯಶಾಹಿಗಳನ್ನು ಎದುರು ಹಾಕಿಕೊಂಡಾಗ ಸಹಜವಾಗಿಯೇ ಅದರ ಪರಿಣಾಮಗಳು ಏನಾಯ್ತು ಎಂಬುದನ್ನು ಇತಿಹಾಸ ಗುರುತಿಸಿದೆ. ಲಕ್ಷಾಂತರ ಜನ ಸ್ವಾಭಿಮಾನಿ ಭಾರತೀಯರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತಮ್ಮ ದೇಹತ್ಯಾಗ ಮಾಡಿದ್ದರು. ಅವರ ಜೀವಿತಾವಧಿಯಲ್ಲಿ ಅನೇಕರಿಗೆ ಸ್ವಾತಂತ್ರ್ಯವೂ ಸಿಗಲಿಲ್ಲ. ಹಲವರಿಗೆ ಮನ್ನಣೆಯೂ ಸಿಕ್ಕಲಿಲ್ಲ. ಆದರೂ ಅವರೆಲ್ಲರ ಪರಿಶ್ರಮದ ಫಲ ನಾವು ಇವತ್ತು ಬಹು ಅಪೇಕ್ಷಿತ ಸ್ವಾತಂತ್ರ್ಯವನ್ನು ಗಳಿಸಿಕೊಂಡಿದ್ದೇವೆ.

ತ್ಯಾಗ ಬಲಿದಾನಗಳನ್ನು ಮಾಡಿದವರೆಲ್ಲರೂ ದೇಶಕ್ಕೆ ಸ್ವಾತಂತ್ರ್ಯ ಬಂದನಂತರ ಯಾವುದೇ ಪ್ರತಿಷ್ಠಿತ ಸ್ಥಾನಗಳಿಗೆ ಬರಲಿಲ್ಲ. ಅವರು ಯಾವುದೇ ಪ್ರಚಾರವನ್ನೂ ಬಯಸಲಿಲ್ಲ. ಹಾಗೆಯೇ ಕಣ್ಮರೆಯಾಗಿದ್ದಾರೆ. ಸ್ವಾತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದು, ನಂತರದ ದಿನಗಳಲ್ಲಿ ಸ್ವತಂತ್ರ ಭಾರತದ ಪರಿಪಾಲನೆಯಲ್ಲಿ ಅನೇಕ ಅವಕಾಶಗಳನ್ನು ಪಡೆದು, ಜವಾಬ್ದಾರಿಯುತ ಸ್ಥಾನಗಳಿಗೆ ಬಂದವರೂ, ಅಪಾರ ಭ್ರಷ್ಟರಾಗಿ ಕೊನೆಯಾಗಿದ್ದನ್ನೂ ಇತಿಹಾಸ ಗುರುತಿಸಿದೆ. ಸ್ವಾತಂತ್ರ್ಯಾನಂತರ ಪರಕೀಯರ ವಿಚಾರ ಬದಿಗೆ ಬಿದ್ದುಹೋಯಿತು. ನಮ್ಮವರೇ ನಮ್ಮ ಜನರನ್ನು, ಬ್ರಿಟಿಷರೂ ನಾಚಿ ತಲೆತಗ್ಗಿಸುವ ರೀತಿಯಲ್ಲಿ ಶೋಷಣೆ ಮಾಡಲು ಪ್ರಾರಂಭಿಸಿದರು. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರ ವಿರುದ್ಧ, ಸ್ವಾತಂತ್ರ್ಯಾ ನಂತರ ನಮ್ಮಲ್ಲೆ ಉದ್ಭವಿಸಿದ ಭ್ರಷ್ಟರ ವಿರುದ್ಧ, ಯಾವುದೇ ರಾಜಿಯಿಲ್ಲದೆ ತಮ್ಮ ಬದುಕಿನ ಕಡೆಯ ಕ್ಷಣದವರೆವಿಗೆ ಬದ್ಧತೆಯಲ್ಲಿ ಬದಲಾವಣೆ ಇಲ್ಲದೆ, ವೈಯಕ್ತಿಕ ಭದ್ರತೆ ಅನ್ನುವ ಪದಕ್ಕೆ ಅರ್ಥವನ್ನು ಹುಡುಕುವ ಪ್ರಯತ್ನವನ್ನೂ ಮಾಡದೆ ಜೀವನ ನಡೆಸಿ, ನಮ್ಮನ್ನು ಅಗಲಿದವರು ಎಚ್.ಎಸ್ ದೊರೆಸ್ವಾಮಿಯವರು.

ಆತ್ಮವಂಚಕತೆ ನಮ್ಮ ಬದುಕಿನ ಒಂದು ಅವಿಭಾಜ್ಯ ಅಂಗವಾಗಿದೆ. ರಾಜ್ಯಾಂಗದ ಹೆಸರಿನಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸುವುದು, ನಂತರ ರಾಜ್ಯಾಂಗದ ಮೂಲ ಆಶಯಗಳಿಗೆ ಪೆಟ್ಟು ಕೊಡುವುದು, ನಮಗೆ ರಕ್ತಗತವಾಗಿಬಿಟ್ಟಿದೆ. ಗಾಂಧಿ ಜಯಂತಿಯ ಆಚರಣೆ, ಗಾಂಧಿ ಮೂರ್ತಿಯ ಸ್ಥಾಪನೆ, ಎಲ್ಲ ರಸ್ತೆಗಳಿಗೆ ಗಾಂಧಿ ನಾಮಕರಣ, ಇದಕ್ಕೂ ಮೇಲ್ಪಟ್ಟು ತಲೆಯ ಮೇಲೆ ಗಾಂಧಿಯ ಟೋಪಿ. ವಾಸ್ತವವಾಗಿ ಗಾಂಧಿ, ಟೋಪಿಯನ್ನು ಧರಿಸಲೂ ಇಲ್ಲ. ಹಾಕಲೂ ಇಲ್ಲ. ಗಾಂಧಿ ಒಬ್ಬ ದೇಶಭಕ್ತನಾಗಿ ಕುಟುಂಬದ ವಿಚಾರದಲ್ಲಿ ನಡೆದುಕೊಂಡ ರೀತಿ, ಕಸ್ತೂರ್ ಬಾ ಪೂನಾದ ಅಘಾಖಾನ್ ಪ್ಯಾಲೇಸ್‌ನಲ್ಲಿ ನಿಧನರಾದಾಗಿನ ಸನ್ನಿವೇಶ, ಗಾಂಧೀಜಿ ಪಾರ್ಥಿವಶರೀರದ ಅಂತಿಮ ಯಾತ್ರೆ ಹೊರಟಾಗ, ಅವರಿಂದ ದೂರವಾಗಿದ್ದ ಹಿರಿಯ ಮಗ, ಮದ್ಯವ್ಯಸನಿ ಹರಿಲಾಲ್ ಗಾಂಧಿ ಭಾಗಿಯಾಗದೆ ಇದ್ದಿದ್ದು, ಈ ವಿಷಯಗಳು ಗಾಂಧಿಯ ಬದುಕಿನಲ್ಲಿ ನಾವು ಗಮನಿಸಲೇಬೇಕಾದ ಮುಖ್ಯ ವಿಷಯಗಳು. ಅಸ್ಪೃಶ್ಯತೆಯ ಬಗ್ಗೆ 1932 ರಲ್ಲಿ ಡಾ|| ಬಿ. ಆರ್ ಅಂಬೇಡ್ಕರ್ ಅವರನ್ನು ಭೇಟಿಯಾಗಿ ಚರ್ಚಿಸಿದ ಮೇಲೆ ತನ್ನಲ್ಲಿ ತಾನು ಸುಧಾರಣೆಗಳನ್ನು ಅಳವಡಿಸಿಕೊಂಡಿದ್ದಲ್ಲದೆ, ಮತ್ತೊಬ್ಬರ ವಿಚಾರಗಳು ಜನಪರವಾಗಿದ್ದರೆ ಅದನ್ನು ಗೌರವಿಸುವುದು, ಗಾಂಧಿಯ ಅಪರೂಪದ ಗುಣ. ಕೋಮುಸಾಮರಸ್ಯದ ವಿಚಾರದಲ್ಲಿ ತನ್ನ ಬದುಕನ್ನೇ ಮುಡಿಪಾಗಿಟ್ಟು, ಒಬ್ಬ ಮತಾಂಧನ ಗುಂಡಿಗೆ ಬಲಿಯಾದ ವ್ಯಕ್ತಿ. ಅವರು ಯಾವುದೇ ಸ್ಥಾನಗಳನ್ನು ಅಲಂಕರಿಸಲು ಮುಂದಾಗಲಿಲ್ಲ. ಕುಟುಂಬದ ಸದಸ್ಯರನ್ನು ರಾಜಕೀಯ ಕ್ಷೇತ್ರಗಳಲ್ಲಿ ಮುನ್ನಲೆಗೆ ತರಲು ಪ್ರಯತ್ನಿಸಲಿಲ್ಲ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯನಾಗಿಯೂ ಉಳಿಯಲಿಲ್ಲ. ಈ ಗಾಂಧಿಗೆ ಅನುಚರರು ಬಹಳ ಕಡಿಮೆ. ಬದಲಾಗಿ ಗಾಂಧಿಗೆ ಟೋಪಿ ತೊಡಿಸಿದವರು, ಮೂರ್ತಿಯನ್ನು ಸ್ಥಾಪಿಸಿ ಕಾಗೆ ಮತ್ತು ಗೂಬೆಗಳನ್ನು ಅದರ ಮೇಲೆ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟವರು ಮತ್ತು ಗಾಂಧಿಯ ಹೆಸರಿನಲ್ಲಿ ತಮ್ಮ ಸ್ವಾರ್ಥವನ್ನು ಸಂಪೂರ್ಣವಾಗಿ ಸಾಧಿಸಿದವರೇ ಹೆಚ್ಚು.

ನಮ್ಮದೊಂದು ಮೂಕ ಸಮಾಜ. ಕೆಟ್ಟದ್ದನ್ನು ಪ್ರತಿಭಟಿಸುವ ಧೈರ್ಯವೂ ನಮಗೆ ಇಲ್ಲ. ಒಳ್ಳೆಯದನ್ನು ಬಹಿರಂಗವಾಗಿ ಆರಾಧಿಸಲು ನಮಗೆ ಸಮಯವೂ ಇಲ್ಲ. ಆದರೆ ದೊರೆಸ್ವಾಮಿಯಂತಹ ಅನರ್ಘ್ಯ ರತ್ನಗಳು ಶಾಶ್ವತವಾಗಿ ನಮ್ಮಿಂದ ದೂರಾದಾಗ ಹೇಳಿಕೊಳ್ಳಲು ಸಾಧ್ಯವಿಲ್ಲದ ಸಂಕಟವನ್ನು ಅನುಭವಿಸುತ್ತೇವೆ. ಖಿನ್ನತೆಗೆ ಒಳಗಾಗುತ್ತೇವೆ. ನಮಗೆಲ್ಲರಿಗೂ ವೈಯಕ್ತಿಕ ಜೀವನದಲ್ಲಿ ಭದ್ರತೆ ಎನ್ನುವ ಅಂಶ ಬಲವಾಗಿ ಕಾಡುತ್ತೆ. ಆದರೆ ಗಾಂಧೀಜಿಯವರಿಗೆ ಅಭದ್ರತೆ ಎನ್ನುವ ಆಲೋಚನೆ ಸುಳಿಯಲೇ ಇಲ್ಲ. ಹಾಗೆಯೇ ವೈಯಕ್ತಿಕ ಜೀವನದಲ್ಲಿ ಅಭದ್ರತೆ ಎನ್ನುವ ಪದದ ಅರ್ಥವನ್ನೇ ಅರಿಯದ ದೊರೆಸ್ವಾಮಿಗಳು ಬದ್ಧತೆಗೆ ಮಾತ್ರ ಸೀಮಿತರಾಗಿದ್ದರು. ಈ ಕಾರಣಕ್ಕಾಗಿ ಅವರನ್ನು ಗಾಂಧಿವಾದಿಯೆಂದು ಸಂಬೋಧಿಸಲು ಯಾವ ಹಿಂಜರಿಕೆಯೂ ಬೇಕಾಗಿಲ್ಲ. ಅತ್ಯಂತ ಸರಳತೆಯಿಂದ, ಎಂತಹ ಸನ್ನಿವೇಶದಲ್ಲೂ ಎಲ್ಲ ನ್ಯಾಯಪರವಾದ ಹೋರಾಟಗಳಿಗೂ, ತಾನೊಬ್ಬ ಸ್ವಯಂಸೇವಕನಂತೆ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು.

ಹಲವು ವರ್ಷಗಳಿಂದ ನಾನು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಹಲವು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಶಾಸನಾಸಭಾ ಕಲಾಪಗಳಲ್ಲಿ ಸಭೆಯ ಸದಸ್ಯರಾಗಿದ್ದವರು, ಮಾಜಿ ಸದಸ್ಯರಾಗಿದ್ದವರು, ದೇಶಕ್ಕೆ ಬೇರೆ ಬೇರೆ ರೀತಿಯ ಸೇವೆ ಸಲ್ಲಿಸಿದವರು, ಮೇಧಾವಿಗಲಿ, ವಿಜ್ಞಾನಿಗಳಾಗಲಿ, ಕಲಾವಿದರಾಗಲಿ, ಸಾಹಿತಿಗಳಾಗಳಲಿ ನಮ್ಮನ್ನು ಅಗಲಿ ಹೋದಾಗ ಅವರಿಗೆ ಸಂತಾಪ ಸೂಚನೆ ಮಾಡತಕ್ಕಂತಹ ಒಂದು ಪದ್ಧತಿ ಇದೆ. ಈ ಸಂತಾಪ ಸೂಚಕ ನಿರ್ಣಯ ಮಂಡನೆ ಮತ್ತು ಅದರಲ್ಲಿ ಭಾಗವಹಿಸುವಿಕೆ ಕೇವಲ ಔಪಚಾರಿಕ ಕ್ರಿಯೆಯಾಗಿ ಉಳಿದು ತನ್ನ ಘನತೆ ಮತ್ತು ಗಾಂಭೀರ್ಯವನ್ನು ಕಳೆದುಕೊಂಡಿದೆ. ಸತ್ತವರು ಯಾರೂ ಕೂಡಾ ಸಂತಾಪಸೂಚಕ ನಿರ್ಣಯ ಮಂಡನೆಯಾಗುತ್ತಿದೆಯೆಂದು, ತಮ್ಮ ಪಯಣದ ಅರ್ಧ ದಾರಿಯಲ್ಲಿ ನಿಲ್ಲುವುದಿಲ್ಲ. ಅವರು ಹೇಗೆ ಹೋಗುತ್ತಾರೋ, ಎಲ್ಲಿಗೆ ಹೋಗುತ್ತಾರೋ ಅರಿವಿಲ್ಲ.

ಸುಮಾರು ಒಂದು ವರ್ಷದ ಕೆಳಗೆ ಇಂದಿನ ವಿಧಾನಸಭೆಯ ಒಬ್ಬ ಗೌರವಾನ್ವಿತ ಸದಸ್ಯರು ದೊರೆಸ್ವಾಮಿಯವರನ್ನು ಕುರಿತು ಅತ್ಯಂತ ಅಗೌರವಯುತವಾದ ಭಾಷೆಯಲ್ಲಿ ತುಚ್ಛೀಕರಿಸಿ ವ್ಯಾಖ್ಯಾನ ಮಾಡಿದರು. ರೋಚಕತೆಯನ್ನೇ ಬಯಸುವ ಮಾಧ್ಯಮಗಳೂ ಕೂಡ, ಇದನ್ನು ಒಂದು ಮನರಂಜನಾ ವಿಷಯವಾಗಿ ಬಳಸಿಕೊಂಡವು. ಸದನದಲ್ಲಿ ಪ್ರತಿಪಕ್ಷಗಳಿಗೆ ಸೇರಿದ ಮುಖಂಡರಾದಿಯಾಗಿ ಕೆಲವರು, ಈ ಸದಸ್ಯರ ವಿಚಾರದಲ್ಲಿ ತಮ್ಮ ಅಸಮಾಧಾನವನ್ನೂ ವ್ಯಕ್ತಪಡಿಸಿದರು. ಮಾನ್ಯ ಸಭಾಧ್ಯಕ್ಷರು ಮೌನ ವಹಿಸಿದರು. ಸಭಾನಾಯಕರು ಅಸಹಾಯಕರಾಗಿದ್ದರು. ಮಾನ್ಯ ಸದಸ್ಯರು ಯಾವ ಪಕ್ಷಕ್ಕೆ ಸೇರಿದ್ದರೋ ಅವರ ಸಂಗಾತಿಗಳು ಕೂಡ ಇಂತಹ ಒಂದು ಹಿರಿಯ ಚೇತನಕ್ಕೆ ಆದ ಅಪಚಾರದ ಬಗ್ಗೆ ಚಕಾರ ಎತ್ತಲಿಲ್ಲ. ಅಂತಹ ಮಹಾನ್ ವ್ಯಕ್ತಿಗೆ, ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದಂಥವರಿಗೆ, ಆ ಸ್ವಾತಂತ್ರ್ಯದಿಂದ ಉದ್ಭವವಾದ ಶಾಸನಸಭೆಯಲ್ಲಿ ಇಂತಹ ಸ್ಥಿತಿ ಒದಗಿಬಂದದ್ದೇ, ಅತಿ ದುಃಖದ ವಿಷಯ. ಸ್ವಾರ್ಥಿಗಳನ್ನು, ಭ್ರಷ್ಟರನ್ನು, ದ್ರೋಹಿಗಳನ್ನು ನಿಂದಿಸಲು ನಮಗೆ ಧೈರ್ಯ ಇಲ್ಲ. ಎದುರಿಸಲು ಯೋಗ್ಯತೆ ಇಲ್ಲ. ಆದರೆ ದೊರೆಸ್ವಾಮಿಯವರ ತೇಜೋವಧೆ ಬಹಳ ವಿಜೃಂಭಣೆಯಿಂದ ಕರ್ನಾಟಕ ವಿಧಾನಸಭೆಯಲ್ಲಿ ನಡೆದುಹೋಯಿತು. ಇಂದಿನ ವಿಧಾನಸಭೆಯಲ್ಲೂ ನಾನು ಸದಸ್ಯನಾಗಿದ್ದೇನೆ. ಬಹುಶಃ ಇಂದಲ್ಲ ಮುಂದೊಂದು ದಿನ, ವಿಧಾನಸಭೆಯ ಅಧಿವೇಶನ ಆಗಲಿಕ್ಕೇ ಬೇಕು. ಅಂದು ವಿಧಾನಸಭೆ ದೊರೆಸ್ವಾಮಿಯವರಿಗೆ ಶ್ರದ್ಧಾಂಜಲಿ ಅರ್ಪಿಸುವ ನಿರ್ಣಯವನ್ನು ಮಂಡಿಸಬಹುದಾ ಎನ್ನುವಂತಹ ಕುತೂಹಲ ನನ್ನನ್ನು ಕಾಡುತ್ತಿದೆ. ಕರ್ನಾಟಕ ವಿಧಾನಸಭೆಗೆ ಅಂತಹ ಸಂತಾಪಸೂಚಕ ನಿರ್ಣಯವನ್ನು ಮಂಡಿಸುವ ಕನಿಷ್ಟ ಗೌರವವಾಗಲೀ, ಅರ್ಹತೆಯಾಗಲೀ ಉಳಿದಿಲ್ಲ. ನಾವು ಆ ಸಾಹಸಕ್ಕೆ ಕೈ ಹಾಕದಿದ್ದರೆ ಬಹುಶಃ ಅದು, ದೊರೆಸ್ವಾಮಿಗಳಿಗೆ ತೋರಿಸುವ ಅತಿ ಹೆಚ್ಚಿನ ಗೌರವವಾಗುತ್ತದೆ ಎಂಬುದು ನನ್ನ ದೃಢವಾದ ನಂಬಿಕೆ.

ಸುಮಾರು ಹತ್ತು ವರ್ಷಗಳ ಕೆಳಗೆ ದೊರೆಸ್ವಾಮಿಗಳು ಒಂದು ಪತ್ರಿಕಾಗೋಷ್ಠಿಯಲ್ಲಿ ವೈಯಕ್ತಿಕವಾಗಿ ನನ್ನ ಮೇಲೆ ಕೆಲವು ಆಪಾದನೆಗಳನ್ನು ಮಾಡಿದ್ದರು. ಅದಕ್ಕೂ ಮೊದಲು ಅವರ ಕೆಲವು ಹೋರಾಟಗಳಲ್ಲಿ ನಾನೂ ಭಾಗಿಯಾಗಿದ್ದೆ. ನನ್ನ ಪರಿಚಯ ಅವರಿಗೆ ಚೆನ್ನಾಗಿತ್ತು. ಇಷ್ಟಾದರೂ ಕೆಲವರು ಅವರಿಗೆ ದಾರಿತಪ್ಪಿಸಿ ನನ್ನ ಮೇಲೆ ಆಪಾದನೆಗಳನ್ನು ಅವರ ಮುಖಾಂತರ ಹೊರಿಸಿದ್ದರು. ನಾನು ಒಂದು ಪತ್ರ್ರದ ಮುಖೇನ ಆ ಆಪಾದನೆಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು, ನ್ಯಾಯಾಲಯದ ತೀರ್ಪನ್ನು ಕಳುಹಿಸಿಕೊಟ್ಟು, ನನ್ನ ವೈಯಕ್ತಿಕ ಪರಿಚಯವಿದ್ದಾಗ್ಯೂ ಕನಿಷ್ಠ ಸೌಜನ್ಯಕ್ಕಾದರೂ ನನ್ನನ್ನು ಸಂಪರ್ಕಿಸದೆ ನನ್ನ ಮೇಲೆ ಈ ರೀತಿ ಆಪಾದನೆ ಮಾಡಿದ್ದು ಸರಿಯೇ ಎಂದು ನಾನು ಪ್ರಶ್ನಿಸಿದ್ದೆ. ಅದಾದ ಕೆಲವು ದಿವಸಗಳ ನಂತರ ಕೋಲಾರದಲ್ಲಿ ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರ ಪರಿಶಿಷ್ಟ ಜನಾಂಗದಲ್ಲಿ ಜನಿಸಿ, ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿದ್ದು, ಹಲವು ಅಧಿಕಾರಗಳನ್ನು ಅನುಭವಿಸಿ ಸಾಮಾನ್ಯ ಮನುಷ್ಯರಾಗಿ ಉಳಿದ ಟಿ. ಚನ್ನಯ್ಯ ಅವರ ಜನ್ಮಶತಾಬ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ರಾಜ್ಯ ಸಮತಾ ಸೈನಿಕ ದಳದ ಹಿರಿಯ ಮುಖಂಡ ವೆಂಕಟಸ್ವಾಮಿ ಈ ಕಾರ್ಯಕ್ರಮ ಆಯೋಜಿಸಿದ್ದರು. ಅದೇ ಸಭೆಯಲ್ಲಿ ದೊರೆಸ್ವಾಮಿಗಳೂ ಪಾಲ್ಗೊಂಡಿದ್ದರು. ಸಭೆಯಲ್ಲಿ ಮೊದಲು ಮಾತನಾಡುವ ಅವಕಾಶ ನನಗೆ ದೊರಕಿದಾಗ ನನ್ನ ಭಾಷಣದಲ್ಲಿ ಮನಸ್ಸಿನಲ್ಲಿದ್ದ ಸಿಟ್ಟ್ಟನ್ನು ಸ್ವಾಭಾವಿಕವಾಗಿಯೇ ಹೊರಹಾಕಿದೆ. ಕ್ಷಣಾರ್ಧದಲ್ಲಿ ಅಂತಹ ಹಿರಿಯ ವ್ಯಕ್ತಿ ಎದ್ದು ನಿಂತು, ತಾನು ಮಾಡಿದ್ದ ಆಪಾದನೆಗಳು ಆತುರದ ಕ್ರಮ ಆಯ್ತು. ಅದರಿಂದ ರಮೇಶಕುಮಾರ್ ಅವರಿಗೆ ಅಪಚಾರ ಆಯ್ತು. ಅವರು ಕಳುಹಿಸಿದ ಎಲ್ಲ ದಾಖಲೆಗಳನ್ನು ನೋಡಿದ್ದೇನೆ. ನನ್ನ ಮನಸ್ಸಿಗೆ ನೋವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಹಿಮಾಲಯದ ಬೆಟ್ಟದಷ್ಟಿದ್ದ ನನ್ನ ಸಿಟ್ಟು ಒಂದು ಗಳಿಗೆಯಲ್ಲಿ ಕರಗಿಹೋಗಿ ಇದೆಂತಹ ದೊಡ್ಡತನ ಎಂದು, ನಾನು ತಕ್ಷಣ ಮುಜುಗರಕ್ಕೆ ಒಳಗಾದೆ. ನಂತರ ಅವರಲ್ಲಿಗೆ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಆಶೀರ್ವಾದ ಪಡೆದು ಮುಂದೆ ಹೋದೆ.

ದೊರೆಸ್ವಾಮಿಗಳು ನೂರನೇ ವಸಂತಕ್ಕೆ ಕಾಲಿಟ್ಟಾಗ ಅವರ ಮನೆಗೆ ಹೋಗಿ ಅವರ ಆಶೀರ್ವಾದ ಪಡೆದುಕೊಂಡೆ. ಅತ್ಯಂತ ನಿರಾಡಂಬರದಿಂದ ಒಂದು ಸಣ್ಣ ಮನೆಯಲ್ಲಿ ವಾಸ ಇದ್ದಂತಹ ಈ ಗಾಂಧಿವಾದಿಗೆ ಬಯಸಿದ್ದರೆ ಏನು ಬೇಕಾದರೂ ಲಭಿಸುತ್ತಿತ್ತು. ಈ ಸಂದರ್ಭದಲ್ಲಿ ನಮ್ಮ ನೋವು ನಮ್ಮನ್ನು ಮತ್ತಷ್ಟು ಪುನಶ್ಚೇತನಗೊಳಿಸಿ ಅವರ ಆದರ್ಶಗಳಿಗೆ ಬದ್ಧರಾಗಿರುವುದೇ ನಾವು ಅವರಿಗೆ ಸಲ್ಲಿಸಬಹುದಾದ ಶ್ರದ್ಧಾಂಜಲಿ. ಬದ್ಧತೆಗೆ ಹೋರಾಡಿದ ಜೀವ ಅದು. ಇವರ ಆದರ್ಶಗಳು ನಮಗೆ ಚಿರಾಯುವಾಗಲಿ.

ಕೆ.ಆರ್. ರಮೇಶ್ ಕುಮಾರ್

ಕೆ.ಆರ್. ರಮೇಶ್ ಕುಮಾರ್
ಬಹಳ ಚಿಕ್ಕ ವಯಸ್ಸಿನಲ್ಲೇ ಶಾಸಕರಾಗಿ ಆಯ್ಕೆಯಾಗಿ ದೀರ್ಘ ಕಾಲದ ಅನುಭವ ಹೊಂದಿರುವ ಕೆ.ಆರ್.ರಮೇಶ್ ಕುಮಾರ್ ಅವರು ಕರ್ನಾಟಕದ ವಿಶಿಷ್ಟ ಸಂಸದೀಯ ಪಟುವಾಗಿದ್ದಾರೆ. ಭಾರತದ, ಕರ್ನಾಟಕದ ರಾಜಕೀಯ ಇತಿಹಾಸದ ಕುರಿತು ಅಪಾರ ತಿಳುವಳಿಕೆ ಹೊಂದಿರುವ ಇವರು ಎರಡು ಬಾರಿ ಸ್ಪೀಕರ್ ಆಗಿ ಛಾಪು ಮೂಡಿಸಿದ್ದಾರೆ.


ಇದನ್ನೂ ಓದಿ: ಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ಎತ್ತರ ಮರ, ಬಾಗಿದ ಕೊಂಬೆ: ಪ್ರೊ. ರಹಮತ್ ತರೀಕೆರೆ

LEAVE A REPLY

Please enter your comment!
Please enter your name here