ಕಳೆದ ಭಾನುವಾರ ಮಂಡೂರಿನಲ್ಲಿ ಹಬ್ಬದ ವಾತಾವರಣ. ಮಂಡೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳ ಮಹಿಳೆಯರು ಬೆಳಗ್ಗೆಯೇ ತಮ್ಮ ಮನೆಕೆಲಸಗಳನ್ನು ಮುಗಿಸಿ ನೀಟಾದ ಸೀರೆ ತೊಟ್ಟು, ಕೂದಲಲ್ಲಿ ಹೂ ಮುಡಿದು ಹಾಜರಾಗಿದ್ದರು. ಯುವಕರು ಉತ್ಸಾಹದಿಂದ ಓಡಾಡುತ್ತಿದ್ದರು. ಮಕ್ಕಳು ಅಲ್ಲಲ್ಲಿ ಆಟದಲ್ಲಿ ಮುಳುಗಿದ್ದರು. ಹತ್ತಾರು ವೃದ್ಧರೂ ಕಾರ್ಯಕ್ರಮ ಶುರುವಾಗುವುದನ್ನೇ ಕಾಯುತ್ತಾ ಕೂತಿದ್ದರು.
ಅಲ್ಲಿನ ಜನರಲ್ಲಿ ಹಬ್ಬದ ಹುಮ್ಮಸ್ಸು ಇದ್ದಿದ್ದಕ್ಕೆ ಕಾರಣವೂ ಇತ್ತು. ಕಳೆದ ವರ್ಷ ಅವರೆಲ್ಲ ಜೊತೆಗೂಡಿ ನಡೆಸಿದ ಹೋರಾಟ ಯಶಸ್ವಿಯಾಗಿತ್ತು.

ಅವರೆಲ್ಲರಿಗೆ ನೈತಿಕ ಬೆಂಬಲ ನೀಡಿದ್ದಲ್ಲದೆ ಅವರ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ರವಿಕೃಷ್ಣ ರೆಡ್ಡಿ ಅವರಿಗೆ ಸನ್ಮಾನಿಸುವ ಮೂಲಕ ತಮ್ಮ ಧನ್ಯದಾದಗಳನ್ನು ವ್ಯಕ್ತಪಡಿಸಲು ಮಂಡೂರಿನ ಜನ ಅಂದಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

PC : Twitter, (ರವಿಕೃಷ್ಣ ರೆಡ್ಡಿ)

ಎಲ್ಲರಿಗೂ ಗೊತ್ತಿರುವಂತೆ ಮಂಡೂರು ಹೋದ ವರ್ಷ ದೊಡ್ಡ ಸುದ್ದಿಯಾಗಿತ್ತು. ಕಳೆದ ಏಳು ವರ್ಷಗಳಿಂದ ಬೆಂಗಳೂರಿನ ಜನ ಪ್ರತಿದಿನ ’ಉತ್ಪಾದಿಸುವ’ 4,500 ಟನ್ ಕಸವನ್ನು, ನಗರಪಾಲಿಕೆಯ ಗುತ್ತಿಗೆದಾರರು ಮಂಡೂರಿಗೆ ಸಾಗಿಸಿ ಅಲ್ಲಿ ಬಿಸಾಡುತ್ತಿದ್ದರು. ನೋಡುನೋಡುತ್ತಿದ್ದಂತೆ ಅಲ್ಲಿನ 150 ಎಕರೆಗಳಲ್ಲಿ ಕಸದ ಬೆಟ್ಟಗಳೇ ನಿರ್ಮಾಣವಾದವು. 2013ರ ಹೊತ್ತಿಗೆ ಅಲ್ಲಿ ಒಟ್ಟು ಬಿಸಾಡಿದ್ದ ಕಸದರಾಶಿ 40 ಲಕ್ಷ ಟನ್‌ನಷ್ಟಾಯಿತು.

ಈ ಕಸದರಾಶಿಯಿಂದಾಗಿ ಎಲ್ಲೆಡೆ ಗಬ್ಬುನಾಥ, ವಾಯುಮಾಲಿನ್ಯದ ಜೊತೆಗೆ ಕುಡಿಯುವ ನೀರು ವಿಷಕಾರಿ ಆಯಿತು. ನಾಯಿ ಮತ್ತು ಸೊಳ್ಳೆಗಳ ಕಾಟ ನಿರಂತರವಾಯಿತು. ಸೊಳ್ಳೆಗಳು ಕಾಯಿಲೆಗಳನ್ನು ಹಬ್ಬಿಸುವುದರಿಂದ ಸುತ್ತಮುತ್ತ ಹಳ್ಳಿಗಳ ಮಕ್ಕಳು ಅನಾರೋಗ್ಯಪೀಡಿತರಾದರು. ಹಿರಿಯರು ಶ್ವಾಸಕೋಶ ಸಮಸ್ಯೆಗಳಿಗೆ ಬಲಿಯಾಗಲಾರಂಭಿಸಿದರು. ಆದರೆ ಕಸ ವಿಲೇವಾರಿ ಮಾಡುತ್ತಿದ್ದ ಗುತ್ತಿಗೆದಾರರೊಂದಿಗೆ ರಾಜಕಾರಣಿಗಳು ಕೈಜೋಡಿಸಿದ್ದರಿಂದ ಮಂಡೂರಿನ ಜನತೆಯ ಗೋಳನ್ನು ಕೇಳುವವರೇ ಇಲ್ಲದಂತಾಗಿತ್ತು.

ದಿನನಿತ್ಯ ಅಲ್ಲಿನ ಜನರು ಅನುಭವಿಸುತ್ತಿದ್ದ ಕಷ್ಟಗಳು ಅಸಹನೀಯವಾದಾಗ ಅವರು ಅಧಿಕಾರಸ್ಥರನ್ನು ಎಡತಾಕಲಾರಂಭಿಸಿದರು. ಆಗ ಶಾಸಕರಾಗಿದ್ದ ಬಿಜೆಪಿಯ ಲಿಂಬಾವಳಿ “ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ” ಎಂದರೆ ಹೊರತು ಆ ನಿಟ್ಟಿನಲ್ಲಿ ಏನನ್ನೂ ಮಾಡಲಿಲ್ಲ. ಇನ್ನು ನಗರಪಾಲಿಕೆಯ ಅಧಿಕಾರಿಗಳು “ಪರ್ಯಾಯ ವ್ಯವಸ್ಥೆಯನ್ನು ಮಾಡುವವರೆಗೂ ಸಹಕರಿಸಿ, ಸಮಯ ಕೊಡಿ” ಎನ್ನುತ್ತಿದ್ದರೇ ಹೊರತು ಅಲ್ಲಿ ಕಸದರಾಶಿ ಹಾಕುವುದನ್ನು ಮಾತ್ರ ನಿಲ್ಲಿಸಲಿಲ್ಲ. ಪರ್ಯಾಯವನ್ನೂ ಹುಡುಕಲಿಲ್ಲ.

ಕೊನೆಗೂ ಮಂಡೂರಿನ ಜನರ ತಾಳ್ಮೆಯ ಕಟ್ಟಳೆ ಒಡೆಯಿತು. ಯಾವ ರಾಜಕಾರಣಿಯನ್ನಾಗಲಿ, ನಗರಪಾಲಿಕೆಯ ಅಧಿಕಾರಿಯನ್ನಾಗಲಿ ನಂಬದೆ ಹೋರಾಟ ಮಾಡಲು ನಿರ್ಧರಿಸಿದರು. “ಇನ್ನು ಮುಂದೆ ಯಾವ ಕಾರಣಕ್ಕೂ ನಮ್ಮೂರಲ್ಲಿ ಕಸ ಹಾಕಲು ಬಿಡುವುದಿಲ್ಲ” ಎಂದು ಎದ್ದು ನಿಂತರು. ಆಗ ಅವರ ನೆರವಿಗೆ ಧಾವಿಸಿದ್ದು ದೊರೆಸ್ವಾಮಿಯವರು. ಕಸದ ಲಾರಿಗಳು ತಮ್ಮೂರನ್ನು ಪ್ರವೇಶಿಸದಂತೆ ಊರಿನ ಅಂಚಿನಲ್ಲೇ ಅಡ್ಡಗಟ್ಟಿ ನಿಂತರು. ಆಗ ಪೊಲೀಸರು ನಿಷೇಧಾಜ್ಞೆಯನ್ನು ಘೋಷಿಸಿ ಲಾರಿಗಳು ಮುಂದೆ ಸಾಗುವಂತೆ ನೋಡಿಕೊಂಡರು. ಲಾರಿಗಳು ಊರಿನ ಹತ್ತಿರ ಬಂದರೆ ತಾನೆ ಮುಂದೆ ಸಾಗುವುದು ಎಂದು ತರ್ಕಿಸಿದ ಗ್ರಾಮಸ್ಥರು ಅವುಗಳನ್ನು ಹೈವೇಯಲ್ಲೇ ತಡೆಗಟ್ಟಲಾರಂಭಿಸಿದರು. ಅಲ್ಲಿಗೂ ಪೊಲೀಸರು ಬಂದಾಗ ತಮ್ಮ ಹೋರಾಟವನ್ನು ಕೆ.ಆರ್.ಪುರಂವರೆಗೂ ತೆಗೆದುಕೊಂಡು ಹೋದರು.

ಅಷ್ಟುಹೊತ್ತಿಗೆ ರವಿಕೃಷ್ಣ ರೆಡ್ಡಿ ಕೂಡ ಮಂಡೂರು ಹೋರಾಟಗಾರರ ಜೊತೆ ಸೇರಿದ್ದರು. ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ದೊರೆಸ್ವಾಮಿಯವರ ಮಾರ್ಗದರ್ಶನದಲ್ಲಿ ಜೂನ್ 1 ರಿಂದ ಸರಣಿ ಉಪವಾಸ ಪ್ರಾರಂಭಿಸಲು ನಿರ್ಧರಿಸಿದರು. ದೊರೆಸ್ವಾಮಿಯವರಿಗೆ 96 ವರ್ಷ ವಯಸ್ಸಾಗಿದ್ದರೂ ಪ್ರತಿದಿನ ತಮ್ಮ ಮನೆಯಿಂದ ಸುಮಾರು 40 ಕಿಲೋಮೀಟರ್ ದೂರವಿರುವ ಮಂಡೂರಿಗೆ ಹೋಗಿ ಅಲ್ಲಿನ ಜನರ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದರು. ಇಷ್ಟೆಲ್ಲ ಆಗುತ್ತಿದ್ದರೂ ಸರ್ಕಾರ “ಸಮಸ್ಯೆ ಬಗೆಹರಿಸುವುದಕ್ಕೆ ಆರು ತಿಂಗಳ ಸಮಯ ಕೊಡಿ” ಎನ್ನುತ್ತಿತ್ತೆ ಹೊರತು ಅದಕ್ಕಿಂತ ಹೆಚ್ಚಿನದೇನನ್ನೂ ಮಾಡಲು ಮುಂದಾಗಲಿಲ್ಲ.

ಆಗ ದೊರೆಸ್ವಾಮಿಯವರು “ಬಂಧನಕ್ಕೆ ಒಳಗಾದರೂ ಪರವಾಗಿಲ್ಲ, ನೀವೆಷ್ಟು ಶಾಪಗ್ರಸ್ತರು ಎಂಬುದು ಅಧಿಕಾರಿಗಳಿಗೆ ಅರ್ಥವಾಗಬೇಕು. ನಿಮ್ಮಲ್ಲಿ ಎಷ್ಟು ಜನ ಬಂಧನಕ್ಕೆ ಸಿದ್ಧರಿದ್ದೀರಿ? ಅವರೆಲ್ಲರ ಹೆಸರುಗಳನ್ನು ಪಟ್ಟಿ ಮಾಡಿ” ಎಂದು ಸೂಚಿಸಿದರು. ನೂರಕ್ಕೂ ಹೆಚ್ಚು ಜನರು ಸಿದ್ಧರಿದ್ದರು. ಆದರೆ ಆಚ್ಚರಿಯ ಸಂಗತಿ ಯಾವುದೆಂದರೆ ಮಂಡೂರಿನ ಮಹಿಳೆಯರೂ ಆ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿದ್ದರು.

ಪರಿಸ್ಥಿತಿ ಬಿಗಡಾಯಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾದರು. ಅವರು ಕರೆದ ಸಭೆಗೆ ಮಂಡೂರಿನ ನೂರಾರು ಜನ ಹಾಜರಾದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದರಲ್ಲದೆ ತಮ್ಮ ಚಿಕ್ಕಪುಟ್ಟ ಮಕ್ಕಳನ್ನೂ ಕರೆತಂದಿದ್ದರು. ಆ ಸಭೆಯಲ್ಲಿ ಅಧಿಕಾರಿಗಳು ಮತ್ತದೆ ಅಸಹಾಯಕತೆ ವ್ಯಕ್ತಪಡಿಸಿ ಮತ್ತೆ ಕಾಲಾವಕಾಶವನ್ನು ಕೋರಿದರು.

ತಮ್ಮ ಬದುಕೇ ನರಕವಾಗಿದ್ದರೂ ಮುಖ್ಯಮಂತ್ರಿ ಕರೆದಿದ್ದ ಸಭೆಯಲ್ಲೂ ತಮಗೆ ಪರಿಹಾರ ಸಿಗದಿದ್ದಾಗ ಮಹಿಳೆಯರೆಲ್ಲ ಕಣ್ಣೀರಿಟ್ಟರು. ದೊರೆಸ್ವಾಮಿಯವರು ಹೇಳುವಂತೆ, “ಆ ಕ್ಷಣ ಸಿದ್ದರಾಮಯ್ಯನವರಿಗೆ ಇಲ್ಲಿನ ಜನರ ಕಷ್ಟಗಳು ಅರ್ಥವಾಯಿತು. ಮಹಿಳೆಯರು ಕಣ್ಣೀರು ಹಾಕುವಂತೆ ಮಾಡಿರುವುದು ಸರಿಯಲ್ಲ, ಇದನ್ನು ಬಗೆಹರಿಸಬೇಕೆಂದು ಅವರು ನಿರ್ಧರಿಸಿದರು. 2014ರ ನವೆಂಬರ್ ತಿಂಗಳ ನಂತರ ಮಂಡೂರಿನಲ್ಲಿ ಕಸವನ್ನು ಹಾಕುವುದಿಲ್ಲ ಎಂದು ಅವತ್ತು ಸಿದ್ದರಾಮಯ್ಯ ಮಾತು ಕೊಟ್ಟರು. ಅದರಂತೆ ನಡೆದುಕೊಂಡಿದ್ದಾರೆ”.

ಶಾಪಗ್ರಸ್ತವಾಗಿದ್ದ ಮಂಡೂರಿನ ಜನ ನಡೆಸಿದ ಹೋರಾಟ ಕುರಿತು ದೊರೆಸ್ವಾಮಿಯವರು ಒಂದು ಪುಟ್ಟ ಪುಸ್ತಿಕೆಯನ್ನು ಬರೆದಿದ್ದರು. ಒಂದೆರಡು ತಿಂಗಳ ಹಿಂದೆ ಅವರು “ಗೌರಿ, ಇದನ್ನು ನೀನು ಪ್ರಕಟಿಸುತ್ತೇಯೇನಮ್ಮ?” ಎಂದು ಕೇಳಿದಾಗ ನಾನು ಕೂಡಲೇ ಒಪ್ಪಿಕೊಂಡೆ. ಪುಸ್ತಕ ಪ್ರೆಸ್‌ನಿಂದ ಸಿದ್ಧವಾಗಿ ಬಂದಾಗ ಅದನ್ನು ಎಲ್ಲಿ ಬಿಡುಗಡೆ ಮಾಡುವುದು ಎಂಬುದರ ಬಗ್ಗೆ ಚರ್ಚೆ ನಡೆಯಿತು. ನಾನು “ಕಾರ್ಪೊರೇಷನ್ ಕಟ್ಟಡದ ಮುಂದೆಯೇ ಮಾಡಿದರೆ ಹೇಗೆ?” ಎಂದೆ. ಅದಕ್ಕೆ ದೊರೆಸ್ವಾಮಿಯವರು “ಮಂಡೂರಿನ ಜನರ ಅಭಿಪ್ರಾಯ ಕೇಳುತ್ತೇನೆ ಇರು” ಎಂದರು. ಮಂಡೂರಿನ ಹೋರಾಟದ ಮುಂಚೂಣಿಯಲ್ಲಿದ್ದವರನ್ನು ದೊರೆಸ್ವಾಮಿಯವರು ಕೇಳಿದಾಗ ಅವರೆಲ್ಲ “ನಮ್ಮೂರಲ್ಲೇ ಪುಸ್ತಕವನ್ನು ಬಿಡುಗಡೆ ಮಾಡೋಣ” ಎಂದರು.

ಅದರಂತೆ ಕಳೆದ ಭಾನುವಾರ ಮಂಡೂರಿನಲ್ಲೇ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಂಡೂರಿಗೆ ಅದು ನನ್ನ ಮೊದಲ ಭೇಟಿ. ಊರು ಹತ್ತಿರವಾಗುತ್ತಿದ್ದಂತೆ ಗಬ್ಬು ವಾಸನೆ ಮೂಗಿಗೆ ಬಡಿಯುತ್ತದೆ ಎಂದೇ ನಂಬಿದ್ದ ನನಗೆ ಮಂಡೂರು ತಲುಪಿದರೂ ವಾಸನೆ ಇಲ್ಲದಿದ್ದದ್ದು ಅಚ್ಚರಿ ಮೂಡಿಸಿತು. ಅದಕ್ಕೆ ಸಿದ್ದರಾಮಯ್ಯನವರು ಮಾತುಕೊಟ್ಟಿದ್ದಂತೆ ಕಸದ ರಾಶಿಯ ಮೇಲೆ ಮಣ್ಣಿನ ಹೊದಿಕೆ ಹಾಕಿಸಿದ್ದೇ ಕಾರಣವಾಗಿದೆ. ಅಷ್ಟರಮಟ್ಟಿಗೆ ಮಂಡೂರು ತನಗೆ ತಾಗಿದ್ದ ಶಾಪದಿಂದ ಮುಕ್ತಿ ಪಡೆದಿದೆ.

PC : Citizen Matters Bengaluru

’ರಾಕ್‌ಸ್ಟಾರ್’ ದೊರೆಸ್ವಾಮಿ ಪತ್ನಿ ಸಮೇತ ಆಗಮಿಸುತ್ತಿದ್ದಂತೆ ಅವರ ಕಾಲಿಗೆ ಬೀಳುವುದು, ಜೊತೆ ನಿಂತು ಫೋಟೋ ತೆಗೆಸಿಕೊಳ್ಳುವುದು ಎಲ್ಲವೂ ಶುರುವಾಯಿತು! ರವಿಯವರನ್ನೂ ಹತ್ತಾರು ಜನ ಅಪ್ಪಿಕೊಂಡು ಪ್ರೀತಿಯಿಂದ ಸ್ವಾಗತಿಸಿದರು.

ಕಾರ್ಯಕ್ರಮಕ್ಕೂ ಮುಂಚೆ ದೊರೆಸ್ವಾಮಿ ಮತ್ತು ರವಿಯವರನ್ನು ಊರ ತುಂಬ ಮೆರವಣಿಗೆ ಮಾಡುವ ಯೋಜನೆಯನ್ನೂ ಹಾಕಿಕೊಂಡಿದ್ದರು. “ಸಿಂಪಲ್ ಆಗಿ ಮಾಡ್ರಯ್ಯಾ ಅಂದ್ರೆ, ದೊಡ್ಡ ಪ್ಲಾನ್ ಹಾಕಿಕೊಂಡಿದ್ದೀರಲ್ಲ. ನಿಮ್ಮನ್ನು ತಡೆಯುವವರೇ ಇಲ್ಲ ಎಂದು ದೊರೆಸ್ವಾಮಿಯವರು ದೂರಿದಾಗ, “ಬಿಡಿ ಸರ್, ಅವರಿಗೆ ಗೆದ್ದ ಸಂಭ್ರಮ” ಎಂದೆ.

ಒಂದು ತೆರೆದ ವಾಹನದಲ್ಲಿ ಮೆರವಣಿಗೆ ಶುರುವಾಯಿತು. ಊರಿನ ಸೋಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯೂ ನಡೆಯಿತು. ಹಲವು ಕಡೆ ಪಟಾಕಿಗಳನ್ನೂ ಸಿಡಿಸಿದರು. “ಇದರಿಂದ ವಾಯುಮಾಲಿನ್ಯ ಅಗಲ್ಲವೇ?” ಎಂದು ಯಾರೋ ತಮಾಷೆ ಮಾಡಿದಾಗ ಗ್ರಾಮಸ್ಥರೊಬ್ಬರು “ಅಯ್ಯೋ, ವಾಯುಮಾಲಿನ್ಯ ನಮ್ಮ ಬದುಕಿನ ಅಂಗವೇ ಆಗಿಹೋಗಿತ್ತು. ಅದಕ್ಕೆ ಹೋಲಿಸಿದರೆ ಇದು ಏನೇನೂ ಅಲ್ಲ’ ಎಂದು ನಗೆ ಬೀರಿದರು.

ಮಂಡೂರು ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಮಹಿಳೆಯರೇ ಕಾರ್ಯಕ್ರಮಕ್ಕೂ ದೊಡ್ಡ ಸಂಖ್ಯೆಯಲ್ಲಿ ಹಾಜರಾಗಿದ್ದರು. ಹಲವರಿಂದ ಭಾಷಣಗಳು, ಸನ್ಮಾನ, ಪುಸ್ತಕ ಬಿಡುಗಡೆ ಎಲ್ಲವೂ ಸರಾಗವಾಗಿ ಮುಗಿದ ನಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಊರಿನ ಜನ ಊಟದ ವ್ಯವಸ್ಥೆಯನ್ನು ಮಾಡಿದ್ದರು.

ಮಂಡೂರಿನ ಜನ ತಮ್ಮ ಸಂಘಟಿತ ಹೋರಾಟದಿಂದಲೇ ತಮ್ಮ ಊರಿಗೆ ಹಿಡಿದ ಶಾಪವನ್ನು ಹೋಗಲಾಡಿಸಿದ್ದಾರೆ. ಅವತ್ತು ಮಂಡೂರಿನ ಜನರ ಸಂಭ್ರಮದಲ್ಲಿ ’ಜನಶಕ್ತಿ’ ಎಂತಹದು ಎಂಬುದು ಎದ್ದು ಕಾಣಿಸುತ್ತಿತ್ತು.

(ಫೆಬ್ರವರಿ 4, 2015 ರಂದು ಗೌರಿಯವರು ಬರೆದಿದ್ದ ಕಂಡಹಾಗೆ ಅಂಕಣದ ಸಂಗ್ರಹ ಭಾಗ ಇದು)


ಇದನ್ನೂ ಓದಿ: ದಣಿವರಿಯದ ಹೋರಾಟಗಾರನಿಗೆ ಒಂದು ಸಲಾಮ್: ನ್ಯಾ. ಹೆಚ್.ಎನ್ ನಾಗಮೋಹನ್‌ದಾಸ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಗೌರಿ ಲಂಕೇಶ್
+ posts

LEAVE A REPLY

Please enter your comment!
Please enter your name here