ನ್ಯಾಯಮೂರ್ತಿಗಳ ಸಂಬಂಧಿಕರಿಗೇ ಹುದ್ದೆ ನೀಡುವ ಕ್ರಮ ಪರಿಶೀಲಿಸಲು ಮುಂದಾಗಿರುವ ಸುಪ್ರೀಂ ಕೋರ್ಟ್ ಕೊಲಿಜಿಯಂನ ನಿರ್ಧಾರವನ್ನು ಹಿರಿಯ ವಕೀಲ ಹಾಗೂ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಅವರು ಸ್ವಾಗತಿಸಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಕೊಲಿಜಿಯಂ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ಮಾಜಿ ನ್ಯಾಯಮೂರ್ತಿಗಳ ನಿಕಟ ಸಂಬಂಧಿಗಳನ್ನು ನ್ಯಾಯಮೂರ್ತಿ ಹುದ್ದೆಗೆ ನೇಮಕ ಮಾಡುವ ಸಂಪ್ರಾಯದ ಪರಿಶೀಲನೆಗೆ ಮುಂದಾಗಿದೆ.
ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರೊಬ್ಬರ ಪ್ರಸ್ತಾವನೆ ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಪದೋನ್ನತಿ ಸಂಬಂಧ ವಿವಿಧ ಹೈಕೋರ್ಟ್‌ಗಳು ಶಿಫಾರಸು ಮಾಡಿದ ಅಭ್ಯರ್ಥಿಗಳೊಂದಿಗೆ ಕೊಲಿಜಿಯಂ ಸಂವಹನ ನಡೆಸಲೂ ಮುಂದಾಗಿದೆ. ಈ ಎರಡೂ ನಿರ್ಧಾರಗಳು ಅತ್ಯುತ್ತಮವಾಗಿವೆ. ಇವುಗಳನ್ನು ಅತಿ ಬೇಗನೆ ಕಾರ್ಯಗತಗೊಳಿಸಬೇಕು ಎಂದು ಸಿಂಘ್ವಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಾಚೀನ ಕಾಲದಲ್ಲಿ ಕೆಲವು ಸುಲ್ತಾನರು ನಿಜವಾದ ಸಮಸ್ಯೆಗಳನ್ನು ಅರಿಯಲು ಮಾಡುತ್ತಿದ್ದಂತೆ, ಕೊಲಿಜಿಯಂ ನ್ಯಾಯಮೂರ್ತಿಗಳು ವೇಷ ಮರೆಸಿಕೊಂಡು ನ್ಯಾಯಮೂರ್ತಿ ಹುದ್ದೆಯ ಅಭ್ಯರ್ಥಿಗಳು ವಿಚಾರಣೆ ನಡೆಸುವ ನ್ಯಾಯಾಲಯದ ಕೊಠಡಿಗಳಲ್ಲಿ ಕೂತು ಮೌಲ್ಯಮಾಪನ ಮಾಡಬೇಕು. ಈ ಬಗ್ಗೆ ನಾನು ದಶಕದ ಹಿಂದೆಯೇ ಬರೆದಿದ್ದೆ ಎಂದು ಸಿಂಘ್ವಿ ಹೇಳಿದ್ದಾರೆ.
ಅಭ್ಯರ್ಥಿಗಳ ಸಿವಿಗೂ ವಾಸ್ತವಿಕತೆಗೂ, ಕಾಗದದ ಮೇಲಿನ ಮೌಲ್ಯಮಾಪನಕ್ಕೂ ಅಭ್ಯರ್ಥಿಗಳ ನ್ಯಾಯಾಲಯ ಕ್ಷಮತೆಗೂ ಇರುವ ವ್ಯತ್ಯಾಸ ಕಂಡು ಆಶ್ಚರ್ಯವಾಗಿದೆ. ಅಭ್ಯರ್ಥಿಗಳ ಬಗ್ಗೆ ನಡೆಸುತ್ತಿರುವ ಸಂದರ್ಶನಗಳು ಉತ್ತಮವಾಗಿಲ್ಲ. ಆದರೆ, ಮಾರುವೇಷದಲ್ಲಿ ದಿಢೀರನೆ ನಡೆಸುವ ಮೌಲ್ಯಮಾಪನ ಸಂಪೂರ್ಣ ಅವಾಸ್ತವಿಕವಲ್ಲ ಎಂದಿದ್ದಾರೆ.
1/2If true, both proposals under SC collegium consideration, seemingly radical, are good &shd be implemented sooner rather than later. I wrote decades ago tht collegium judges shd disguise themselves &sit in courts of those judges being consd for elevation or lawyers in action b4…
— Abhishek Singhvi (@DrAMSinghvi) December 30, 2024
ನ್ಯಾಯಾಂಗ ನೇಮಕಾತಿ ಮೂಲತಃ ಭಾವಿಸಿದ್ದಕ್ಕಿಂತ ಹೆಚ್ಚು ಅಸ್ಪಷ್ಟವಾಗಿದ್ದು, ಅಷ್ಟೇನೂ ವಸ್ತುನಿಷ್ಠವಾಗಿಲ್ಲ. ಸ್ವಜನ ಪಕ್ಷಪಾತ, ವಂಶಪಾರಂಪರ್ಯತೆ ಇತ್ಯಾದಿಗಳು ನ್ಯಾಯಾಧೀಶರಾಗಲು ಬಯಸುವ ಉಳಿದವರನ್ನು ನಿರಾಶೆಗೊಳಿಸುತ್ತಿವೆ. ಇಂತಹ ನೇಮಕಾತಿ ನ್ಯಾಯಾಂಗಕ್ಕೆ ಅಪಖ್ಯಾತಿ ತರುತ್ತಿದೆ. ನ್ಯಾಯಮೂರ್ತಿಗಳ ಸಂಬಂಧಿಕರು ಅದೇ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡುವಂತಹ ಚಟುವಟಿಕೆಗಳನ್ನು ನಿರ್ಬಂಧಿಸಲು ಸಾಧ್ಯವಾಗುತ್ತಿಲ್ಲ ಎಂದು ಸಿಂಘ್ವಿ ಹೇಳಿದ್ದಾರೆ.
ಪ್ರಸ್ತುತ ಸುಪ್ರೀಂ ಕೋರ್ಟ್ ಕೊಲಿಜಿಯಂನಲ್ಲಿ ಸಿಜೆಐ ಸಂಜೀವ್ ಖನ್ನಾ ಅವರು ಮಾತ್ರವಲ್ಲದೆ ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ, ಸೂರ್ಯ ಕಾಂತ್, ಹೃಷಿಕೇಶ್ ರಾಯ್ ಹಾಗೂ ಎ.ಎಸ್ ಓಕಾ ಸದಸ್ಯರಾಗಿದ್ದಾರೆ.
ಇದನ್ನೂ ಓದಿ : ಬಿಜೆಪಿ ಆಡಳಿತದ ರಾಜ್ಯಗಳು ದಲಿತ ದೌರ್ಜನ್ಯ ಪ್ರಯೋಗಶಾಲೆಗಳಾಗಿ ಮಾರ್ಪಟ್ಟಿವೆ: ಕುಮಾರಿ ಸೆಲ್ಜಾ


