Homeಪುಸ್ತಕ ವಿಮರ್ಶೆ'ಹಿಂಡೆಕುಳ್ಳು' ಕಥಾಸಂಕಲನ ವಿಮರ್ಶೆ: ಆಯ್ದ ಚಿತ್ರ ಕಟ್ಟಿಕೊಡುವ ಜಾಣ್ಮೆಯ ಕಥನ ಶೈಲಿ

‘ಹಿಂಡೆಕುಳ್ಳು’ ಕಥಾಸಂಕಲನ ವಿಮರ್ಶೆ: ಆಯ್ದ ಚಿತ್ರ ಕಟ್ಟಿಕೊಡುವ ಜಾಣ್ಮೆಯ ಕಥನ ಶೈಲಿ

ಅಮರೇಶರ ಕಥನದ ತಂತ್ರಗಳು, ಪಟ್ಟುಗಳು ಮತ್ತು ಬದುಕನ್ನು ನೋಡುವ ಮನೋಧರ್ಮ ಎಲ್ಲವೂ ಈ ಕಥಾಸಂಕಲದನದಲ್ಲಿ ಅರ್ಥವಾಗುತ್ತದೆ ಎನ್ನುತ್ತಾರೆ ಖ್ಯಾತ ವಿಮರ್ಶಕರಾದ ನರೇಂದ್ರ ಪೈರವರು.

- Advertisement -
- Advertisement -

ಅಮರೇಶ ಗಿಣಿವಾರ ಅವರ ಚೊಚ್ಚಲ ಕಥಾಸಂಕಲನ ‘ಹಿಂಡೆಕುಳ್ಳು’ ಓದಿದ ಮೇಲೆ, ಕತೆಗಾರನಿಂದ ಕಥನ ಶೈಲಿಯ ಕೆಲವು ವಿಶಿಷ್ಟ ಮತ್ತು ಹೊಸತನದ ವಿಧಾನಗಳನ್ನು ಕಲಿತೆ ಎನ್ನಬಹುದು. ಬಹುಶಃ ಅವು ಮುಂದಿನ ಕತೆಗಳಲ್ಲಿ ಹೆಚ್ಚು ವಿಕಾಸಗೊಂಡು, ಹೆಚ್ಚು ಸ್ಪಷ್ಟವಾದ ಚೌಕಟ್ಟನ್ನು ಕಂಡುಕೊಳ್ಳಬಹುದು ಅನಿಸುತ್ತದೆ. ಆ ಬಗ್ಗೆ ಎರಡು ಮಾತು.

‘ಹಿಂಡೆಕುಳ್ಳು’ ಸಂಕಲನದಲ್ಲಿ ಸಿದ್ಧಮಾದರಿಯ ಕತೆಗಳಲ್ಲಿ ಕಂಡುಬರುವಂಥ ಪೂರ್ಣಮಟ್ಟದ ಕತೆ ಎನ್ನುವುದಿಲ್ಲ. ಆದರೆ, ನಿರೂಪಣೆಯಲ್ಲಿ ಬರದೇ ಇರುವ, ಕಥಾನಕದ ಹಿಂದಿನ ಮತ್ತು ಕೆಲವೊಮ್ಮೆ ಮುಂದಿನ ಕತೆಗಳ ಹೊಳಹುಗಳನ್ನು ಸ್ಪಷ್ಟವಾಗಿ ಕಾಣಿಸುತ್ತವೆ. ಹಾಗೆ ಕಾಣಿಸುವುದರ ಮೂಲಕವೇ ಪೂರ್ಣಮಟ್ಟವನ್ನು ತಲುಪಿವೆ ಎನ್ನುವ ಭಾವ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದು, ಭಾಷೆ ಮತ್ತು ವಿವರಗಳು ಸಶಕ್ತವಾಗಿವೆ ಹಾಗು ಅಚ್ಚರಿ ಹುಟ್ಟಿಸುವಷ್ಟು ಆಕರ್ಷಕವಾಗಿವೆ. ಹೀಗೆ, ಅಮರೇಶರ ಕತೆಗಳಲ್ಲಿ ಒಂದು ನಿರ್ದಿಷ್ಟ ಚಿತ್ರವಷ್ಟೇ ಇದೆ. ಇದು ನನಗೆ ಒಂದು ಸ್ಥಿರಚಿತ್ರ, ಅದನ್ನು ನೋಡುವ ವೀಕ್ಷಕನಲ್ಲಿ ಮೂಡಿಸುವ ಹಿಂದು-ಮುಂದಿನ ಕಥನದ ಪ್ರತಿಮಾವಿಧಾನವನ್ನು ಸಶಕ್ತವಾಗಿ ಬಳಸಿಕೊಳ್ಳುವ ಕಥನಕ್ರಮದಂತೆ ಕಂಡಿದೆ. ಇದು ಕನ್ನಡಕ್ಕೆ ಹೊಸದು ಮತ್ತು ಕತೆಗಾರನ ಸಾಮರ್ಥ್ಯಕ್ಕೆ ನಿಜವಾದ ಒರೆಗಲ್ಲು ಕೂಡಾ. ಅದರಲ್ಲಿ ಕಥೆಗಾರ ಗೆದ್ದಿದ್ದಾರೆ.

’ಶಿವನ ಕುದುರೆ’ ಕತೆಯನ್ನು ಗಮನಿಸಿದರೆ, ಇದು ತಂದೆಯನ್ನು ಮೀರಲು ಹೊರಟ ಮಗನ ಕತೆಯಂತೆ ಭಾಸವಾಗುವುದು. ಇಂಥ ಅನೇಕ ಕನ್ನಡ ಕತೆಗಳು ಪ್ರಕಟವಾಗಿವೆ. ಉದಾಹರಣೆಗೆ, ಜಯಂತ ಕಾಯ್ಕಿಣಿಯವರ ’ತೆರೆದಷ್ಟೇ ಬಾಗಿಲು’, ಅಶೋಕ ಹೆಗಡೆಯವರ ’ಉಳಿದದ್ದೆ ದಾರಿ’, ’ಹೊಳೆದದ್ದೆ ತಾರೆ’, ವಿ ಆರ್ ಕಾರ್ಪೆಂಟರ್ ಅವರ ’ನನ್ನ ಅಪ್ಪನ ಪ್ರೇಯಸಿ’, ಪದ್ಮನಾಭ ಭಟ್ ಶೇವ್ಕಾರ ಅವರ ’ಕತೆ’ ಇತ್ಯಾದಿ ಹಲವಾರು ಕತೆಗಳು ತಂದೆ ಮಗನ ನಡುವಿನ ಒಂದು ’ಲವ್-ಹೇಟ್ ಸಂಬಂಧದ ನೆಲೆಗಟ್ಟನ್ನು ಹೊಂದಿರುವ ಕತೆಗಳೇ. ಆದರೆ ಅಮರೇಶ ಅದನ್ನು ಇಷ್ಟೊಂದು ಸಂಕ್ಷಿಪ್ತವಾಗಿ ಮತ್ತು ಸಾಕಷ್ಟು ಸಂಕೀರ್ಣವಾಗಿ ಕೂಡ ಕಟ್ಟಿಕೊಟ್ಟಿರುವುದು ಮೆಚ್ಚುಗೆಯ ಸಂಗತಿ.

’ನರಿಮಳೆ’ ಕತೆ ತೀರ ಸಾಮಾನ್ಯ ಎಳೆಯನ್ನು ಹೊಂದಿರುವ ಕತೆ. ಆದರೆ ಅದರ ದೈನಂದಿನಗಳ ವಿವರಗಳಲ್ಲಿ ಸಾಕಷ್ಟು ಹೊಸತನವಿದೆ. ಕನ್ನಡ ಕಥಾಸಾಹಿತ್ಯದಲ್ಲಿ ಇದುವರೆಗೂ ಬಂದಿರದ ಒಂದು ಬದುಕು ಇಲ್ಲಿ ಅನಾವರಣಗೊಳ್ಳುತ್ತಿದೆ ಎನ್ನುವುದರಿಂದ ಈ ಕಥೆಯ ಓದು ಖುಷಿ ಕೊಡುತ್ತದೆ.

’ಹಿಂಡೆಕುಳ್ಳು ಕಥಾನಕ ಕೂಡ ’ನರಿಮಳೆ’ ಕತೆಯದೇ ಇನ್ನೊಂದು ಮಗ್ಗುಲನ್ನು ತೋರಿಸುತ್ತಿದೆಯಾದರೂ ಇಲ್ಲಿ ನೇರವಾಗಿ ಗಂಡನ ಸಾವು – ಬದುಕುಳಿವ ಹೆಂಡತಿ, ಮಕ್ಕಳ ಬದುಕಿಗೆ ಲಿಬರೇಟಿಂಗ್ ಆಗಿಬಿಡುವುದೇ ಬಹಳ ಮುಖ್ಯವಾದ ಸಂಗತಿ ಅನಿಸುತ್ತದೆ. ಇದನ್ನು ನಾವು ಸಾಮಾನ್ಯವಾಗಿ ಒಪ್ಪಿಕೊಳ್ಳಲು ಹಿಂಜರಿಯುತ್ತೇವೆ ಎನ್ನುವ ಕಾರಣಕ್ಕೆ ಸತ್ಯ ಸುಳ್ಳಾಗುವುದಿಲ್ಲ. ಈ ಕತೆ ಹೆಚ್ಚು ವಾಸ್ತವಿಕ ನೆಲೆಗಟ್ಟಿನಿಂದ, ಮಗುವಿನ ಮೂಲಕ ಸತ್ಯ ಹೇಳಿಸುವ ತಂತ್ರದ ಮೂಲಕವೂ ಗಮನ ಸೆಳೆಯುತ್ತದೆ.

’ಗೋಡೆಗಳ ಸೇಡು’ ಕತೆ ದಾಯಾದಿ ಕಲಹದ ಸಾಮಾನ್ಯ ವಸ್ತುವನ್ನೇ ಹೊಂದಿದೆಯಾದರೂ ಅದನ್ನು ವಿವರವಿವರವಾಗಿ ತೆರೆದಿಟ್ಟಿರುವ ರೀತಿ ಮತ್ತು ಕ್ರಿಯೆಯಲ್ಲಿ ಕಾಣಿಸದ ಅದರ ಕ್ರೌರ್ಯವನ್ನು, ಅದೂ ಹೆಣ್ಣಿನ ಮನಸ್ಸಿನ ನಂಜಿನ ಮೂಲಕವೇ ಕಾಣಿಸಿರುವ ರೀತಿ ಮೆಚ್ಚುಗೆಗೆ ಕಾರಣವಾಗುತ್ತದೆ.

’ಮಾಯಮ್ಮ ಕತೆ ಸಣ್ಣಪುಟ್ಟ ಸಂತೋಷಗಳಿಗೂ ಎರವಾಗುವ ಬಾಲ್ಯದ ಕುರಿತಾಗಿದ್ದರೂ ಇಲ್ಲಿ ಕೆಲಸ ಮಾಡುವ ಪ್ರಜ್ಞೆ ಬೆಳೆದವರದ್ದೇ. ಮತ್ತು ಅದಕ್ಕೆ ’ದೊಡ್ಡವರಾಗುವ’ ಒಂದು ಹಂತವನ್ನೇ ಆರಿಸಿಕೊಂಡಿರುವುದು ಹೆಚ್ಚು ಸಮಂಜಸವಾಗಿದೆ. ಪ್ರಬುದ್ಧರ, ಹಿರಿಯರ ಬದುಕಿನ ಅತ್ಯಂತ ದೊಡ್ಡ ನೋವು ಕೂಡ ಇಂಥ ಬಾಲ್ಯದ ಸಣ್ಣಪುಟ್ಟ ಖುಷಿಗಳಿಗೆ ಎರವಾಗಿ ಬೆಳೆದ ಹಂತದೊಂದಿಗೆ ತಳುಕು ಹಾಕಿಕೊಂಡಿರುತ್ತದೆ ಎನ್ನುವುದು ಸುಳ್ಳಲ್ಲ. ಈ ಕಾರಣಕ್ಕಾಗಿಯೇ ತುಂಬ ಮಹತ್ವದ ಕತೆಯಿದು.

’ಪಾತ್ರಧಾರಿ’ ಕತೆಯ ನಿರೂಪಣೆಯಲ್ಲಿ ಹೆಚ್ಚು ಲಘುವಾದ ಮನೋಧರ್ಮವೊಂದು ಕೆಲಸ ಮಾಡಿದೆ. ಗಂಭೀರವಾದ ದೈನಂದಿನವನ್ನು ಕೂಡ ತಮಾಷೆಯಾಗಿ ಗಮನಿಸುತ್ತ ಅದರ ಗಹನತೆಯನ್ನು ಮನಗಾಣಿಸುವಲ್ಲಿ ಕತೆ ಯಶಸ್ವಿಯಾಗಿದೆ.

’ರಂಗೋಲಿ ಹಾಕಿದರೆ ಗಂಗೂಲಿ ಬರೋದಿಲ್ಲಾ,
ರಂಗೋಲಿ ಯಾಕ ನಮ್ಮನಿಗಿ,
ರಂಗೋಲಿಯಾಕ ನಮ್ಮನಿಗಿ ನಾಗೇಂದ್ರ,
ಅಂಗೈಲಿ ಒಂದು ಮರಿ ಬೇಕು’

– ಎಂಬ ಜಾನಪದ ಹಾಡಿನ ಸೊಲ್ಲಿನಲ್ಲಿ ಎಷ್ಟೆಲ್ಲಾ ಸತ್ಯವಡಗಿದೆ ಮತ್ತು ಅದೇ ಕಾಲಕ್ಕೆ ಅದೆಷ್ಟು ತಮಾಷೆಯಾಗಿಯೂ ಇದೆ ಎನ್ನುವುದನ್ನು ಕಂಡುಕೊಂಡರೆ, ಅಮರೇಶರ ಕಥನದ ತಂತ್ರಗಳು, ಪಟ್ಟುಗಳು ಮತ್ತು ಬದುಕನ್ನು ನೋಡುವ ಮನೋಧರ್ಮ ಎಲ್ಲವೂ ಅರ್ಥವಾಗುತ್ತದೆ ಅನಿಸುತ್ತದೆ. ಇದು ಮುಂದೆ ಅಮರೇಶರಲ್ಲಿ ಹೇಗೆ ಹೊಸ ಬಗೆಯ ವಸ್ತು, ನಿರೂಪಣೆ ಮತ್ತು ತಂತ್ರಗಳಿಗೆ ನೀರೆರೆದು ಪೋಷಿಸಬಹುದು ಎಂಬುದು ತುಂಬ ಕುತೂಹಲಕರವಾಗಿ ಕಾಣುತ್ತದೆ.

’ಮನೆ ನಂಬರ್ 84’ ಕೂಡ ಮೇಲಿನ ಮಾತುಗಳಿಗೆ ಪುಷ್ಟಿಕೊಡುವಂಥದೇ ಕತೆ. ಇಲ್ಲಿ ಸಂಘಟನೆಯಿದೆ, ಕಾರ್ಮಿಕರಿದ್ದಾರೆ ವರ್ಗ ಸಂಘರ್ಷವಿದೆ ಓಸಿ ಮತ್ತು ಭ್ರಷ್ಟ್ಟಾಚಾರವೂ ಇದೆ. ಎಲ್ಲವೂ ಎಲ್ಲರಲ್ಲೂ ಇದೆ ಎನ್ನುವುದು ಹೆಚ್ಚು ವಿಶೇಷವಾದದ್ದು ಆದರೆ ಕತೆಯಲ್ಲಿ ಎಲ್ಲಿಯೂ ಇದನ್ನೆಲ್ಲ ಅರಿತು, ಪ್ರಜ್ಞಾಪೂರ್ವಕವಾಗಿ ಕಾಣಿಸಲು ಹೊರಟಿದ್ದೇನೆ ಎಂಬ ಧಾಟಿ ಇಲ್ಲ. ಇದನ್ನು ನಿಭಾಯಿಸಿರುವ ರೀತಿ ಅಮರೇಶರನ್ನು ಪ್ರಬುದ್ಧ ಕತೆಗಾರರ ಸಾಲಿನಲ್ಲಿ ನಿಲ್ಲಿಸುತ್ತದೆ.

’ನಶಿಪುಡಿ’ ಕತೆಯಲ್ಲಿ ಮತ್ತೆ ಮೇಲಿನ ಸಂಗತಿಗಳೇ ಬೇರೊಂದು ನೆಲೆಯಲ್ಲಿ ಮರುಕಳಿಸುತ್ತವೆ. ಇಲ್ಲಿ ನಕ್ಸಲೈಟ್ ಚಳವಳಿ, ಸರಕಾರ ಜನಸಾಮಾನ್ಯರ ಬಗ್ಗೆ ಕಾಳಜಿ ಹೊಂದಿದೆ ಎಂದು ತೋರಿಸಿಕೊಳ್ಳುವುದಕ್ಕೆಂದೇ ಲೆಕ್ಕ ಕೊಡುವ ಅಭಿವೃದ್ಧಿ ಕಾರ್ಯಕ್ರಮದ ಲಕ್ಷಾಂತರ ರೂಪಾಯಿಗಳ ಬಿಡುಗಡೆ, ಅದನ್ನು ನುಂಗಿ ನೀರು ಕುಡಿಯಲು ಕಾದಿರುವ ಹಲವು ಹಂತದ ಆಡಳಿತ ವ್ಯವಸ್ಥೆಯ ಮೆಟ್ಟಿಲುಗಳು ಮತ್ತು ತೀರ ತಳಮಟ್ಟದಲ್ಲಿ ನಕ್ಸಲೈಟ್ ಎಂದು ಉಚ್ಚರಿಸಲು ಕೂಡ ಬಾರದ ದರಿದ್ರ ಮಂದಿ ಎಲ್ಲರೂ ಇದ್ದಾರೆ. ಆದರೆ ಎಲ್ಲಿಯೂ ಯಾವುದನ್ನೂ ಹೆಚ್ಚು ತಿದ್ದಿ ದಪ್ಪಕ್ಷರಗಳಲ್ಲಿ ಕಾಣಿಸುವ ಯತ್ನವಿಲ್ಲ. ಗಾತ್ರದಲ್ಲಿ ಯಾವ ಕತೆಯೂ ಐದಾರು ಪುಟ ಮೀರುವುದಿಲ್ಲ.

’ವಾಪಾಸು ಬಂದ ಪತ್ರ ಕತೆ ತಂತ್ರಗಾರಿಕೆಯನ್ನು ಕಾಣಿಸುವ ಒಂದು ಸಾಮಾನ್ಯ ಪ್ರೇಮಕತೆ ಅನಿಸಿದರೂ ಇಲ್ಲಿ ಇರುವುದು ಒಂದು ಸರಳ ಪ್ರೇಮದ ಕತೆಯಲ್ಲ ಎನ್ನುವುದು ಯಾರಿಗೂ ಅರ್ಥವಾಗುವಂಥದ್ದೇ. ಅದರ ಒಟ್ಟಾರೆ ಚಂದ ಇರುವುದೇ ಅದು ಯಾಕೆ ವಾಪಾಸು ಮರಳಿತು ಎನ್ನುವುದರಲ್ಲೇ ಎನ್ನುವುದು ನಿಜವಾದರೂ ಅದು ಮರಳಿ ಬರಬಹುದಾದ ಹಲವು ಸಾಧ್ಯತೆಗಳನ್ನು ತನ್ನ ಒಡಲಲ್ಲಿ ಇರಿಸಿಕೊಂಡಿರುವುದು, ಪತ್ರವನ್ನು ಓದುತ್ತಿದ್ದಂತೆ ಓದುಗನಿಗೂ ಅದು ಅರಿವಾಗುವುದರಲ್ಲೇ ಅದರ ಗುರುತ್ವ ಇದೆ. ಹಾಗಾಗಿ ಅಂತ್ಯದ ಆಕರ್ಷಕ ಅಂಶದ ಹೊರತಾಗಿಯೂ, ಒಂದು ತೆಳ್ಳನೆಯ ಕತೆಯಾಗಬಹುದಾಗಿದ್ದ ಇದು ಹೆಚ್ಚು ಸಾಂದ್ರವಾಗಿ ಮನಸ್ಸಿನಲ್ಲಿ ಉಳಿಯುವಂತಾಗಿದೆ.

’ಹಳ್ಳ ತೋರಿಸಿದರು’ ಕತೆಯಲ್ಲಿಯೂ ನನಗೆ ’ನರಿಮಳೆ’, ’ಪಾತ್ರಧಾರಿ’ ಮತ್ತು ’ಹಿಂಡೆಕುಳ್ಳು ಕತೆಗಳ ಅಸಮ ದಾಂಪತ್ಯದ ನೆರಳು ಕಾಣಿಸಿದೆ. ಆದರೆ ಅಂಥ ಬದುಕಿನ ಇನ್ನೊಂದು ಮಗ್ಗಲನ್ನು ಇದು ಕಾಣಿಸುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಂಕ್ಷಿಪ್ತವಾಗಿ ಅಮರೇಶ ಕಟ್ಟಿಕೊಡುವ ಕಥಾನಕದ ನಡುವಿನ ಒಂದು ’ಆಯ್ದ ಚಿತ್ರ ಏನಿದೆ, ಅದು ಮಾತ್ರ ನಮಗೆ ಈ ಕತೆಗಳಲ್ಲಿ ಸಿಗುತ್ತಿದೆ. ಕತೆಯ ಇಡೀ ಮೈ ಇಲ್ಲಿ ಇಲ್ಲ ಅನಿಸುತ್ತದೆ. ಆದರೆ ಇಡೀ ಮೈ ಇಲ್ಲದೇನೆ ಅದನ್ನು ಹೊಳಹುಗಳಲ್ಲಿ ಮರುಕಲ್ಪಿಸಬಹುದು ಎಂಬ ಅಮರೇಶರ ನಂಬುಗೆ ನನಗೆ ತುಂಬ ಇಷ್ಟವಾದ ಸಂಗತಿ. ಇದು ಬಹುಶಃ ಇವತ್ತಿನ ಕಥನದ ಅಗತ್ಯ ಕೂಡ. ಹಾಗೆಯೇ ಇದನ್ನು ಸಾಧಿಸಲು ಕೇವಲ ನಂಬುಗೆ ಮಾತ್ರ ಕೆಲಸ ಮಾಡುವುದಿಲ್ಲ, ಬದಲಿಗೆ ಅದಕ್ಕೆಲ್ಲ ಒಂದು ಸಶಕ್ತ ಭಾಷೆ, ಜಾಣ್ಮೆಯಿಂದ ಆಯ್ದ ವಿವರಗಳು ಮತ್ತು ಅಭಿವ್ಯಕ್ತಿಯಲ್ಲಿ ಚುರುಕು ಮುಟ್ಟಿಸಬಲ್ಲ ಅನುಭವದ ಕಸು ಅಗತ್ಯ ಎಂಬ ಅರಿವೂ ಕತೆಗಾರನಿಗೆ ಇದ್ದೇ ಇದೆ. ಹಾಗಾಗಿಯೇ ಎಲ್ಲ ಕತೆಗಳೂ ಇಲ್ಲಿ ಯಶಸ್ವಿಯಾಗಿವೆ.

ಹಿಂಡೆಕುಳ್ಳು
ಕಥಾ ಸಂಕಲನ
ಪ್ರಕಾಶನ: ವೈಷ್ಣವಿ ಪ್ರಕಾಶನ ರಾಯಚೂರು

ಸಂಪರ್ಕ: 9620170027


  • ನರೇಂದ್ರ ಪೈ

ಕನ್ನಡದ ಖ್ಯಾತ ವಿಮರ್ಶಕರಲ್ಲಿ ಒಬ್ಬರು. ಸಾಹಿತ್ಯದ ಓದು- ಬರಹಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಅವರು ಎರಡು ಕೃತಿಗಳನ್ನು ರಚಿಸಿದ್ದಾರೆ. ಕನ್ನಡದ ನೂರಾರು ಪುಸ್ತಕಗಳನ್ನು ವಿಮರ್ಶಿಸಿ ಲೇಖಕರನ್ನು ಪ್ರೋತ್ಸಾಹಿಸಿದ್ದಾರೆ. ಈ ಸಲುವಾಗಿ ‘ಟಿಪ್ಪಣಿಪುಸ್ತಕ’ ಎಂಬ ಬ್ಲಾಗ್ ಬರೆಯುತ್ತಿದ್ದಾರೆ.


ಇದನ್ನೂ ಓದಿ: ‘ಮಹಾಡ್ – ಮೊದಲ ದಲಿತ ಬಂಡಾಯ’ ಪುಸ್ತಕದ ಆಯ್ದ ಭಾಗಗಳು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...