ಅಮೆರಿಕಾ ಸೆಂಟ್ರಲ್ ಕಮಾಂಡ್‌ನ ಕಮಾಂಡರ್ ಜನರಲ್ ಕೆನ್ನೆತ್ ಮೆಕೆಂಜಿ ಅವರು ಆಗಸ್ಟ್ 29 ರಂದು ಅಫ್ಘಾನಿಸ್ತಾನದ ಡ್ರೋನ್ ದಾಳಿಯಲ್ಲಿ ಮೃತಪಟ್ಟ ಕುಟುಂಬಗಳೊಂದಿಗೆ ಕ್ಷಮೆಯಾಚಿಸಿದ್ದಾರೆ. 7 ಮಕ್ಕಳು ಸೇರಿದಂತೆ 10 ನಾಗರಿಕರ ಮೇಲೆ ಐಎಸ್‌ಐ ಉಗ್ರರು ಎಂದು ತಪ್ಪಾಗಿ ದಾಳಿ ನಡೆಸಲಾಗಿದೆ ಎಂದು ಮೆಕೆಂಜಿ ಒಪ್ಪಿಕೊಂಡಿದ್ದಾರೆ.
ಆಗಸ್ಟ್ 29 ರ ದಾಳಿಯ ನಂತರ ಅಮೆರಿಕಾ ರಕ್ಷಣಾ ಇಲಾಖೆಯು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕಾ ಪಡೆಗಳಿಗೆ ನೇರ ಬೆದರಿಕೆ ಒಡ್ಡಿದ ಐಎಸ್‌ಐ ಬಂಡುಕೋರರ ಮೇಲೆ ಬಾಂಬ್ ದಾಳಿ ನಡೆಸಿದ್ದೇವೆ ಎಂದು ಹೇಳಿಕೊಂಡಿತ್ತು.
ಇದನ್ನೂ ಓದಿ: ಸೋನು ಸೂದ್ ಕಚೇರಿಗಳ ಮೇಲೆ ಐಟಿ ದಾಳಿ: ತಾಲಿಬಾನ್ ಮನಸ್ಥಿತಿ ಎಂದ ಶಿವಸೇನೆ
“ಆ ದಾಳಿಯಲ್ಲಿ ಏಳು ಮಕ್ಕಳು ಸೇರಿದಂತೆ 10 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ನನಗೆ ಈಗ ಮನವರಿಕೆಯಾಗಿದೆ” ಎಂದು ಹೇಳಿರುವ ಮೆಕೆಂಜಿ, ಇದು ದೊಡ್ಡ ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ಜೊತೆಗೆ ದಾಳಿಯಲ್ಲಿ ಮೃತಪಟ್ಟ ಕುಟುಂಬ ಮತ್ತು ಸ್ನೇಹಿತರಿಗೆ ತೀವ್ರ ಸಂತಾಪ ವ್ಯಕ್ತಪಡಸಿದ್ದಾರೆ.
“ನಮ್ಮ ಪಡೆಗಳಿಗೆ ಮತ್ತು ವಿಮಾನ ನಿಲ್ದಾಣದಿಂದ ಸ್ಥಳಾಂತರವಾಗುವವರಿಗೆ ಉಂಟಾಗಿದ್ದ ಬೆದರಿಕೆಯನ್ನು ತಡೆಯಬಹುದು ಎಂಬ ತೀವ್ರ ನಂಬಿಕೆಯಿಂದ ಈ ದಾಳಿಯನ್ನು ಮಾಡಲಾಗಿತ್ತು. ಆದರೆ ಅದರಲ್ಲಿ ದೊಡ್ಡ ತಪ್ಪು ಸಂಭವಿಸಿದ್ದು, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ” ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಆಫ್ಘಾನಿಸ್ತಾನದಲ್ಲಿ ಕಾರ್ ಬಾಂಬ್ ದಾಳಿ: 43ಕ್ಕೂ ಹೆಚ್ಚು ಮಂದಿಗೆ ಗಾಯ
ಈ ದಾಳಿಯ ನಂತರ ಅಮೆರಿಕಾ ನೀಡಿದ್ದ ಹೇಳಿಕೆಯ ಬಗ್ಗೆ ಸುದ್ದಿ ಸಂಸ್ಥೆಗಳು ಅನುಮಾನವನ್ನು ವ್ಯಕ್ತಪಡಿಸಿದ್ದವು. “ಸ್ಪೋಟಕ ಹೊಂದಿದೆ ಎಂದು ಹೇಳಿ ಅಮೆರಿಕಾ ದಾಳಿ ಮಾಡಿದ್ದ ವಾಹನದ ಚಾಲಕ ಅಮೆರಿಕಾ ಸಂಸ್ಥೆಯೊಂದರಲ್ಲಿ ದೀರ್ಘಾವಧಿಯ ಉದ್ಯೋಗಿಯಾಗದ್ದರು” ಎಂದು ಮಾಧ್ಯಮಗಳು ಈ ವೇಳೆ ಉಲ್ಲೇಖಿಸಿದ್ದವು. ಇದರ ನಂತರ ದಾಳಿಯ ಬಗ್ಗೆ ಮೆಕೆಂಜಿ ಅವರು ಸೆಂಟ್ರಲ್ ಕಮಾಂಡ್ ತನಿಖೆಗೆ ಆದೇಶಿಸಿದ್ದರು.
ಅಫ್ಘಾನ್ ನಾಗರಿಕರಿಗೆ ಆಹಾರ ವಿತರಿಸುವ ಸರ್ಕಾರೇತರ ಸಂಸ್ಥೆಯಾದ, ನ್ಯೂಟ್ರಿಷನ್ ಅಂಡ್ ಎಜುಕೇಶನ್ ಇಂಟರ್‌ನ್ಯಾಷನಲ್‌ನಲ್ಲಿ ಕೆಲಸ ಮಾಡುತ್ತಿದ್ದ ಜೆಮರಿ ಅಹ್ಮದಿ ಮತ್ತು ಅವರ ಕುಟುಂಬದ ಒಂಬತ್ತು ಸದಸ್ಯರು ಈ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದರು ಎಂದು ತನಿಖೆಯು ಕಂಡುಕೊಂಡಿದೆ. ಅವರ ಕಾರಿನಲ್ಲಿ ಸ್ಫೋಟಕಗಳು ಇರಲಿಲ್ಲ, ಬದಲಾಗಿ ನೀರಿನ ಬಾಟಲಿಗಳಿದ್ದವು ಎಂದು ಮೂಲಗಳನ್ನು ಉಲ್ಲೇಖಿಸಿ ಗಾರ್ಡಿಯನ್ ವರದಿ ಮಾಡಿದೆ.
ಇದನ್ನೂ ಓದಿ: ಭಯೋತ್ಪಾದನೆಯ ಹಿಂದಿರುವುದು ಧರ್ಮವೋ… ತೈಲವೋ….? – ರಾಂ ಪುನಿಯಾನಿ ಭಾಷಣ


