ಅಮೆರಿಕದ ಹಲವಾರು ನಗರಗಳಲ್ಲಿ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸರ್ಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥ ಎಲಾನ್ ಮಸ್ಕ್ ವಿರುದ್ಧ ಆಕ್ರೋಶಗೊಂಡ ಪ್ರತಿಭಟನಾಕಾರರು ರ್‍ಯಾಲಿ ನಡೆಸಿದರು.
ಟ್ರಂಪ್ ದೇಶವನ್ನು ನಡೆಸುತ್ತಿರುವ ರೀತಿ ವಿರೋಧಿಸಿ ಜನರು ಗುಂಪುಗೂಡಿದ್ದಾರೆ. ‘ಹ್ಯಾಂಡ್ಸ್ ಆಫ್’ ಚಳವಳಿಯನ್ನು ಅಮೆರಿಕದ 50 ರಾಜ್ಯಗಳಲ್ಲಿ 1,200 ಕ್ಕೂ ಹೆಚ್ಚು ಸ್ಥಳಗಳಲ್ಲಿ ನಾಗರಿಕ ಹಕ್ಕುಗಳ ಸಂಘಟನೆಗಳು, ಕಾರ್ಮಿಕ ಸಂಘಗಳು, ಎಲ್‌ಜಿಬಿಟಿಕ್ಯೂ+, ವಕೀಲರು, ಚುನಾವಣಾ ಕಾರ್ಯಕರ್ತರು ಸೇರಿದಂತೆ 150 ಕ್ಕೂ ಹೆಚ್ಚು ಗುಂಪುಗಳು ಆಯೋಜಿಸಿದ್ದವು. ಇಲ್ಲಿಯವರೆಗೆ ಯಾವುದೇ ಬಂಧನಗಳ ವರದಿಗಳಿಲ್ಲದೆ ರ್‍ಯಾಲಿಗಳು ಶಾಂತಿಯುತವಾಗಿ ನಡೆಯುತ್ತಿವೆ.
ಮಿಡ್‌ಟೌನ್ ಮ್ಯಾನ್‌ಹ್ಯಾಟನ್‌ನಿಂದ ಅಲಾಸ್ಕಾದ ಆಂಕಾರೇಜ್‌ವರೆಗೆ ಪ್ರತಿಭಟನಾಕಾರರು ಜಮಾಯಿಸಿದರು. ಸರ್ಕಾರದ ಉದ್ಯೋಗ ಕಡಿತ, ಆರ್ಥಿಕತೆ, ವಲಸೆ ಮತ್ತು ಮಾನವ ಹಕ್ಕುಗಳ ಕುರಿತು ಟ್ರಂಪ್ ಮತ್ತು ಬಿಲಿಯನೇರ್ ಎಲಾನ್ ಮಸ್ಕ್ ಅವರ ಕ್ರಮಗಳನ್ನು ಟೀಕಿಸುತ್ತಾ ಅನೇಕ ರಾಜ್ಯ ರಾಜಧಾನಿಗಳಲ್ಲಿ ಸೇರಿದಂತೆ ಪ್ರತಿಭಟನಾಕಾರರು ಜಮಾಯಿಸಿದರು.
ಪ್ರತಿಭಟನಾಕಾರರಲ್ಲಿ ಒಬ್ಬರಾದ, ಓಹಿಯೋದ ಡೆಲವೇರ್ ಕೌಂಟಿಯಿಂದ ನಿವೃತ್ತರಾದ 66 ವರ್ಷದ ರೋಜರ್ ಬ್ರೂಮ್, “ತಾವು ರೇಗನ್ ರಿಪಬ್ಲಿಕನ್ ಆಗಿದ್ದೆ. ಆದರೆ, ಟ್ರಂಪ್ ಅವರಿಂದ ದೂರವಾಗಿದ್ದೇನೆ” ಎಂದು ಹೇಳಿದರು. “ಅವರು (ಟ್ರಂಪ್) ಈ ದೇಶವನ್ನು ಹರಿದು ಹಾಕುತ್ತಿದ್ದಾರೆ” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಇದು ಕುಂದುಕೊರತೆಗಳ ಆಡಳಿತ
ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ, ಪ್ರತಿಭಟನಾಕಾರರು “ಒಲಿಗಾರ್ಕಿ ವಿರುದ್ಧ ಹೋರಾಡಿ” ಎಂಬ ಘೋಷಣೆಗಳನ್ನು ಹೊಂದಿರುವ ಫಲಕಗಳನ್ನು ಹಿಡಿದಿದ್ದರು. ಪೋರ್ಟ್ಲ್ಯಾಂಡ್, ಒರೆಗಾನ್ ಮತ್ತು ಲಾಸ್ ಏಂಜಲೀಸ್ ಸೇರಿದಂತೆ ಅಮೆರಿಕದ ನಗರಗಳಲ್ಲಿ ಪ್ರತಿಭಟನಾಕಾರರು ಬೀದಿಗಿಳಿದು, ಅಲ್ಲಿ ಅವರು ಪರ್ಶಿಂಗ್ ಸ್ಕ್ವೇರ್‌ನಿಂದ ಸಿಟಿ ಹಾಲ್‌ಗೆ ಮೆರವಣಿಗೆ ನಡೆಸಿದರು.
ಫೆಡರಲ್ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕುವುದು, ಸಂಪೂರ್ಣ ಏಜೆನ್ಸಿಗಳನ್ನು ಮುಚ್ಚುವುದು, ಟ್ರಾನ್ಸ್‌ಜೆಂಡರ್ ಜನರಿಗೆ ರಕ್ಷಣೆಯನ್ನು ಕಡಿಮೆ ಮಾಡುವುದು, ಆರೋಗ್ಯ ನಿಧಿಯನ್ನು ಕಡಿತಗೊಳಿಸುವುದು, ಸಾಮಾಜಿಕ ಭದ್ರತಾ ಆಡಳಿತ ಕ್ಷೇತ್ರ ಕಚೇರಿಗಳನ್ನು ಮುಚ್ಚುವುದು ಸೇರಿದಂತೆ ಟ್ರಂಪ್ ಆಡಳಿತದ ನಿರ್ಧಾರವನ್ನು ವಿರೋಧಿಸುವುದು ಪ್ರತಿಭಟನೆಗಳ ಮುಖ್ಯ ಗುರಿಯಾಗಿತ್ತು.
ಪ್ರತಿಭಟನೆಗಳಿಗೆ ಪ್ರತಿಕ್ರಿಯೆಯಾಗಿ ಶ್ವೇತಭವನವು, “ಅಧ್ಯಕ್ಷ ಟ್ರಂಪ್ ಅವರ ನಿಲುವು ಸ್ಪಷ್ಟವಾಗಿದೆ; ಅವರು ಯಾವಾಗಲೂ ಅರ್ಹ ಫಲಾನುಭವಿಗಳಿಗೆ ಸಾಮಾಜಿಕ ಭದ್ರತೆ, ಮೆಡಿಕೇರ್ ಮತ್ತು ಮೆಡಿಕೈಡ್ ಅನ್ನು ರಕ್ಷಿಸುತ್ತಾರೆ” ಎಂದು ಹೇಳಿದೆ.
“ಈ ಮಧ್ಯೆ, ಡೆಮೋಕ್ರಾಟ್‌ಗಳ ನಿಲುವು ಅಕ್ರಮ ವಲಸಿಗರಿಗೆ ಸಾಮಾಜಿಕ ಭದ್ರತೆ, ಮೆಡಿಕೈಡ್ ಮತ್ತು ಮೆಡಿಕೇರ್ ಪ್ರಯೋಜನಗಳನ್ನು ನೀಡುತ್ತಿದೆ, ಇದು ಈ ಕಾರ್ಯಕ್ರಮಗಳನ್ನು ದಿವಾಳಿ ಮಾಡುತ್ತದೆ ಮತ್ತು ಅಮೇರಿಕನ್ ಹಿರಿಯ ನಾಗರಿಕರನ್ನು ಹತ್ತಿಕ್ಕುತ್ತದೆ” ಎಂದು ಹೇಳಿಕೆ ನೀಡುತ್ತಾ ಡೆಮೋಕ್ರಾಟ್‌ಗಳನ್ನು ನೇರವಾಗಿ ಟೀಕಿಸಲಾಗಿದೆ.
ಈ ಎಲ್ಲ ಪ್ರತಿಭಟನೆಗಳ ನಡುವೆ ಅಧ್ಯಕ್ಷರು ಟ್ರಂಪ್ ಶನಿವಾರ ಫ್ಲೋರಿಡಾದಲ್ಲಿ ಗಾಲ್ಫ್ ಆಡಿದರು. ಭಾನುವಾರ ಕೂಡ ಮತ್ತೆ ಹಾಗೇ ಮಾಡಲು ಯೋಜಿಸಿದ್ದಾರೆ ಎಂದು ಶ್ವೇತಭವನ ಹೇಳಿದೆ.
ಮೊದಲ ಅವಧಿಯಲ್ಲಿ, ಟ್ರಂಪ್ 2017 ರಲ್ಲಿ ಮಹಿಳಾ ಮಾರ್ಚ್‌ನೊಂದಿಗೆ ದೇಶಾದ್ಯಂತ ಪ್ರತಿಭಟನೆಗಳನ್ನು ಎದುರಿಸಿದರು. ಇದು ಸಾವಿರಾರು ಮಹಿಳೆಯರನ್ನು ವಾಷಿಂಗ್ಟನ್‌ಗೆ ಕರೆತಂದಿತು. 2020 ರಲ್ಲಿ ಮಿನ್ನಿಯಾಪೋಲಿಸ್‌ನಲ್ಲಿ ಜಾರ್ಜ್ ಫ್ಲಾಯ್ಡ್ ಅವರನ್ನು ಪೊಲೀಸರು ಕೊಂದ ನಂತರ ನಡೆದ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಪ್ರದರ್ಶನಗಳು ಸಹ ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ಎದುರಿಸಿದ ಪ್ರಮುಖ ವಿರೋಧಗಳಲ್ಲಿ ಸೇರಿವೆ.


