| ಸಂಪಾದಕೀಯ |
ಜಗತ್ತಿನ ಒಟ್ಟು ಶುದ್ಧ ಕುಡಿಯುವ ನೀರಿನಲ್ಲಿ ಐದನೇ ಒಂದು ಭಾಗವನ್ನು ಪೂರೈಸುವ ಅಮೆಜಾನ್ (ನದಿ ಮತ್ತು ಕಾಡು)ಗೆ ಬೆಂಕಿ ಬಿದ್ದಿದೆ. ಕಳೆದ ತಿಂಗಳೊಂದರಲ್ಲೇ 26,000 ಕಡೆ ಬೆಂಕಿ ಬಿದ್ದಿದೆ. ವರ್ಷದ ಆರಂಭದಿಂದ ಲೆಕ್ಕಕ್ಕೆ ತೆಗೆದುಕೊಂಡರೆ 80,000 ಕಡೆ ಕಾಡಿಗೆ ಬೆಂಕಿ ಬಿದ್ದಿದೆ. ಇದು ಬಿದ್ದ ಬೆಂಕಿ ಅಲ್ಲ, ಹಚ್ಚಿದ ಬೆಂಕಿ ಮತ್ತು ಇದಕ್ಕೆ ಆ ದೇಶದ ಮುಖ್ಯಸ್ಥರ ಬೆಂಬಲವಿದೆ ಎಂಬುದೇ ಕಳವಳದ ಸಂಗತಿ. ಆ ದೇಶದ ಮುಖ್ಯಸ್ಥರ ಬೆಂಬಲವಷ್ಟೇ ಅಲ್ಲದೇ ಅಮೆರಿಕಾದ ಕೃಷಿ ವ್ಯವಹಾರಸ್ಥರ ಬೆಂಬಲವೂ ಇದೆ ಎಂದು ಹೇಳಲಾಗುತ್ತಿದೆ. ಬ್ರೆಜಿಲ್‍ನ ಈಗಿನ ಅಧ್ಯಕ್ಷ ಬೊಲ್ಸೆನಾರೋ ಚುನಾವಣೆಗೆ ಸ್ಪರ್ಧಿಸಿದ್ದಾಗ ನೀಡಿದ್ದ ಚುನಾವಣಾ ಭರವಸೆಯಲ್ಲೇ ಅಮೆಜಾನ್ ಕಾಡನ್ನು ರಕ್ಷಿಸುವ ಕಾಯ್ದೆಗಳನ್ನು ಸಡಿಲಿಸುವುದೂ ಸೇರಿತ್ತು.
ಆ ದೇಶದಲ್ಲಿ ಕಾಡೆಷ್ಟಿರಬೇಕು, ಅಲ್ಲಿ ವ್ಯವಸಾಯ ಮಾಡಲು ಬಯಸುವವರಿಗೆ ಭೂಮಿ ಒದಗಿಸಲು ಯಾವ ರೀತಿಯ ನೀತಿಯಿರಬೇಕು ಎಂಬುದನ್ನು ಅವರು ತಾನೇ ನಿರ್ಧರಿಸಬೇಕು? ಅದೇ ಮಾತನ್ನು ಬೊಲ್ಸೆನಾರೋ ಹೇಳುತ್ತಿರುವುದು. ಈ ಬೆಂಕಿಯನ್ನು ನಂದಿಸಿ ಕಾಡನ್ನು ರಕ್ಷಿಸಲು 20 ಮಿಲಿಯನ್ ಡಾಲರ್ ಕೊಡುತ್ತೇವೆಂದು ಜಿ 7 ರಾಷ್ಟ್ರಗಳ ಶೃಂಗಸಭೆ ಹೇಳಿದಾಗ, ‘ಅದರ ಅಗತ್ಯವಿಲ್ಲ. ಇದು ನಮ್ಮ ಆಂತರಿಕ ವಿಚಾರ’ ಎಂದು ಬೋಲ್ಸೆನಾರೋ ಹೇಳಿಯಾಗಿದೆ.
ಆ ದೇಶದಲ್ಲಿ ಪರಿಸರ ಪ್ರೇಮಿಗಳು ಮತ್ತು ‘ರೈತ ನಾಯಕರು ಹಾಗೂ ಉದ್ದಿಮೆದಾರರ’ ನಡುವೆ ಈ ಕುರಿತು ಒಮ್ಮತವಿಲ್ಲ. ಪರಿಸರವಾದಿಗಳು ಕಾಡನ್ನುಳಿಸೋಣ ಎಂದರೆ, ನಮ್ಮ ಜೀವನಕ್ಕೆ ಕಲ್ಲು ಹಾಕಲು ಬರಬೇಡಿ ಎಂದು ಇನ್ನೊಂದು ಪಕ್ಷ ಹೇಳುತ್ತಿದೆ. ‘ಅಮೆಜಾನ್ ಉಳಿಸಿ’ ಎಂಬ ಕೂಗನ್ನು ಬ್ರೆಜಿಲ್ಲೇತರ ಜನರು ಹೇಳಿದಾಗಲೆಲ್ಲಾ ಅಲ್ಲಿ ತಲ್ಲಣವುಂಟಾಗುತ್ತದೆ. ‘ನಮ್ಮ ದೇಶದ ಕಾಡಿನ ಮೇಲೆ ಅಧಿಕಾರ ಚಲಾಯಿಸಲು ಅವರ್ಯಾರು’ ಎಂಬ ಕೂಗು ಹಾಕುತ್ತಾರೆ. ‘ಇದೊಂಥರಾ ವಸಾಹತುಶಾಹಿ ಮನಸ್ಥಿತಿ. ತಮ್ಮ ದೇಶಗಳ ಪರಿಸರವನ್ನು ಪೂರಾ ಹಾಳುಗೆಡವಿಕೊಂಡಿರುವ ಇವರು, ಮಾಜಿ ವಸಾಹತುಗಳಾದ ನಮ್ಮ ಪರಿಸರವನ್ನು ಉಳಿಸಲು ಕರೆ ಕೊಡುವುದನ್ನು ನಾವು ಒಪ್ಪಲು ಸಾಧ್ಯವೇ ಇಲ್ಲ’ ಎಂದು ಅವರು ಹೇಳುತ್ತಾರೆ.
ಅಮೆಜಾನ್‍ಗೆ ಬೆಂಕಿ ಹಚ್ಚಿ ಅಮೂಲ್ಯವಾದ ಕಾಡನ್ನು ಹಾಳು ಮಾಡುತ್ತಿರುವುದಲ್ಲದೇ, ಅದನ್ನು ರಕ್ಷಿಸಲೂ ಮುಂದಾಗದ ಬ್ರೆಜಿಲ್‍ನ ಸರ್ಕಾರವನ್ನು ಮಣಿಸಲು ‘ಬ್ರೆಜಿಲ್ ಸರಕುಗಳನ್ನು ಬಹಿಷ್ಕರಿಸಿ, ಅಮೆಜಾನ್ ಉಳಿಸಿ’ ಎಂಬ ಘೋಷಣೆಯಡಿ ಒಂದು ರೀತಿಯ ಆಂದೋಲನಕ್ಕೂ ಕರೆ ನೀಡಲಾಗಿದೆ. ಹಾಗಾದರೆ, ಅಲ್ಲಿಂದ ಬಹುದೂರದಲ್ಲಿರುವ ಇನ್ನೊಂದು ಮಾಜಿ ವಸಾಹತಾದ ಭಾರತದ ನಾವು ತೆಗೆದುಕೊಳ್ಳಬೇಕಾದ ನಿಲುವೇನು?
ನಮ್ಮೂರಿನ ನೀರನ್ನು ಹೇಗೆ ಬಳಸಬೇಕು, ಈ ನೆಲ ಪರಿಸರವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಬೇರ್ಯಾರೋ ದೊಣ್ಣೆನಾಯಕ ಹೇಳಬೇಕಿಲ್ಲ ಎಂಬುದೇನೋ ಸರಿ. ಆದರೆ, ಇನ್ಯಾರೋ ಕಾಳಜಿಯಿಂದ ಹೇಳುತ್ತಿರುವುದರಲ್ಲಿ ಅವರ ಹಿತಾಸಕ್ತಿ ಮಾತ್ರವಲ್ಲದೇ ನಮ್ಮ ಉಳಿವಿನ ಪ್ರಶ್ನೆಯೂ ಇದ್ದರೇ? ಇದು ಕೇವಲ ಇಷ್ಟೇ ಆಗಿಲ್ಲ. ವಾಸ್ತವವೇನೆಂದರೆ, ಬ್ರೆಜಿಲ್‍ನಲ್ಲಿ ಭೂರಹಿತರು ಉಳುಮೆ ಮಾಡಲು ಭೂಮಿಯಿಲ್ಲದೇ ಕಾಡನ್ನು ಸುಡುತ್ತಿರುವ ಸಂಗತಿ ಇದಾಗಿಲ್ಲ. ಎಲ್ಲೋ ಕೆಲವೆಡೆ ಅದೂ ಇರಬಹುದಾದರೂ, ಭಾರೀ ಪ್ರಮಾಣದಲ್ಲಿ ಕಾಡಿನ ನಾಶಕ್ಕೆ ಮುಂದಾಗಿರುವುದು ಯುಎಸ್‍ಎ (ಅಮೆರಿಕದ)ನ ದೊಡ್ಡ ಕಂಪೆನಿಗಳ ಹಿತಾಸಕ್ತಿಯನ್ನು ಕಾಯಲು. ದೊಡ್ಡ ಪ್ರಮಾಣದ ಉಳುಮೆ ಭೂಮಿಯನ್ನು ಬೀಳು ಬಿಟ್ಟಿರುವ ದೊಡ್ಡ ದೊಡ್ಡ ಭೂಮಾಲೀಕರು, ಕಂಪೆನಿಗಳು ಆ ದೇಶದಲ್ಲಿವೆ. ಅಂತಹ ಭೂಮಿಗೆ ಲಗ್ಗೆ ಹಾಕಿ, ಅಲ್ಲಿ ಬೆಳೆ ಬೆಳೆದು ತಮ್ಮದಾಗಿಸಿಕೊಳ್ಳುವ ಒಂದು ಮಹತ್ವದ ಚಳವಳಿ ಬ್ರೆಜಿಲ್‍ನಲ್ಲಿದೆ. ಎಂಎಸ್‍ಟಿ ಎಂಬ ಈ ಭೂರಹಿತರ ಸಂಘಟನೆಯ ಹೋರಾಟದ ಕಾರಣಕ್ಕೆ, ಅಂತಹ ಭೂಮಿಯನ್ನು ಆ ಭೂರಹಿತರಿಗೇ ಕಾನೂನುಬದ್ಧವಾಗಿ ನೀಡುವ ನೀತಿಯೂ ಜಾರಿಗೆ ಬಂದಿದೆ.
ಈ ಕೆಳಗಿನ ಅಂಕಿ-ಅಂಶಗಳನ್ನು ನೋಡಿದರೆ ಅಸಲೀ ಸಂಗತಿ ಸ್ಪಷ್ಟವಾಗುತ್ತದೆ. 21.12 ಕೋಟಿ ಜನಸಂಖ್ಯೆಯುಳ್ಳ ಬ್ರೆಜಿಲ್‍ನ ವಿಸ್ತಾರ 8.510 ಮಿಲಿಯನ್ ಚದರ ಕಿ.ಮೀ. 136.87 ಕೋಟಿ ಜನಸಂಖ್ಯೆಯುಳ್ಳ ಭಾರತದ ವಿಸ್ತಾರ 3.287 ಮಿಲಿಯನ್ ಚದರ ಕಿ.ಮೀ ಆಗಿದೆ. ಇದರ ಮಧ್ಯೆಯೂ ಕೃಷಿ ಪ್ರಧಾನವಾದ ದೇಶವೊಂದು ತಾನು ಹೆಚ್ಚಿನ ಪ್ರಮಾಣದ ಭೂಮಿಯನ್ನು ಕೃಷಿಗೆ ತೊಡಗಿಸುತ್ತೇನೆಂದು ನಿರ್ಧರಿಸುವ ಹಕ್ಕನ್ನು ಹೊಂದಿರುತ್ತದೆ. ಆದರೆ ಇಲ್ಲಿ ಅಮೆರಿಕಾದ ಹಿತಾಸಕ್ತಿಗೆ ತಕ್ಕಂತೆ ಕುಣಿಯುತ್ತಿರುವ ಮತ್ತು ತನ್ನ ದೇಶದ ಜನರ ಹಿತಾಸಕ್ತಿಗೆ ವಿರುದ್ಧವಾಗಿಯೂ ವರ್ತಿಸುತ್ತಿರುವ ಅಧ್ಯಕ್ಷ ಮತ್ತು ಆತನ ಪಕ್ಷವು ನಾಶಕ್ಕೆ ಮುಂದಾಗಿದೆ.
ಆ ದೇಶದಲ್ಲಿ ಬೀಳುಬಿದ್ದಿರುವ ಲಕ್ಷಗಟ್ಟಲೆ ಎಕರೆ ಭೂಮಿಯನ್ನು ಜನರಿಗೆ ಹಂಚಲು ಯಾವ ಆಸಕ್ತಿ ಹೊಂದಿಲ್ಲದ ಸರ್ಕಾರ ಅದಾಗಿದೆ. ಭಾರತದಲ್ಲಿ ಮೋದಿ ಹೇಗೋ ಹಾಗೆಯೇ ಈ ಬೊಲ್ಸೆನಾರೋ ಸಹಾ ಭಾರೀ ಜನಬೆಂಬಲದೊಂದಿಗೆ ಗೆದ್ದು ಬಂದಿರುವುದು. ಹೀಗಾಗಿ ಪರಿಸ್ಥಿತಿ ಕ್ಲಿಷ್ಟವೂ, ಅಪಾಯಕಾರಿಯೂ ಆಗಿದೆ.
ಇಂತಹ ಸಂದರ್ಭದಲ್ಲಿ ಬ್ರೆಜಿಲ್ ಒಳಗಿನ ವಿವೇಕದ ದನಿಗಳಿಗೆ, ಎಂಎಸ್‍ಟಿಯಂತಹ ಸಂಘಟನೆಗಳು ಹೇಳುವ ಸಂಗತಿಗಳಿಗೆ ನಮ್ಮ ಬೆಂಬಲ ಕೊಡುವುದು ಜಗತ್ತಿನ ಎಲ್ಲರ ಕರ್ತವ್ಯವಾಗಿದೆ. ಏಕೆಂದರೆ, ಸದರಿ ಅಮೆಜಾನ್ ಕಾಡುಗಳಲ್ಲಿನ ಆದಿವಾಸಿಗಳನ್ನು ಅಲ್ಲಿಂದ ಒದ್ದೋಡಿಸಿ, ಕಾಡನ್ನು ವಶಪಡಿಸಿಕೊಳ್ಳಬೇಕು ಎಂದು ಬಹಿರಂಗವಾಗಿ ಘೋಷಿಸಿದ್ದ ವ್ಯಕ್ತಿ ಬೊಲ್ಸೆನಾರೋ; ಇದೇ ವ್ಯಕ್ತಿ ಪಾರ್ಲಿಮೆಂಟಿನಲ್ಲೇ ಈ ಹಿಂದೆ ಜನಸಾಮಾನ್ಯರ ಪರವಾಗಿ ದನಿಯೆತ್ತಿದ್ದ ಸಂಸದೆಯೊಬ್ಬರಿಗೆ ‘ನಿನ್ನನ್ನು ನಾನು ರೇಪ್ ಮಾಡುವುದೂ ಇಲ್ಲ. ಅದಕ್ಕೂ ನೀನು ಅರ್ಹಳಲ್ಲ’ ಎಂದು ಹೇಳಿದ್ದನಲ್ಲದೇ, ಸ್ವತಃ ತನ್ನ ಬಗ್ಗೆಯೇ ‘ನನಗೆ ಐದು ಮಕ್ಕಳು. ಮೊದಲ ನಾಲ್ವರು ಹುಡುಗರು. ನಂತರ ನಾನು ದುರ್ಬಲನಾದೆ. ಹಾಗಾಗಿ ಮಗಳು ಜನಿಸಿದಳು’ ಎಂದಿದ್ದ.
ಈ ಪ್ರಕರಣದಲ್ಲೂ ಫ್ರೆಂಚ್ ಅಧ್ಯಕ್ಷ ಮ್ಯಾಕ್ರೋನ್ ಅಮೆಜಾನ್ ಕಾಡಿನ ಕುರಿತು ಕಾಳಜಿ ವ್ಯಕ್ತಪಡಿಸಿದಾಗ, ಮ್ಯಾಕ್ರೋನ್ ಪತ್ನಿಯ ಕುರಿತು ಕೀಳು ಅಭಿರುಚಿಯ ಟ್ವಿಟ್ಟರ್ ಕಾಮೆಂಟ್ ಮಾಡಿದ್ದು ಇದೇ ಬ್ರೆಜಿಲ್ ಅಧ್ಯಕ್ಷ. ಬಡವರು, ದುರ್ಬಲರು, ಕಪ್ಪುವರ್ಣೀಯರು, ಆದಿವಾಸಿಗಳು, ಮಹಿಳೆಯರ ಕುರಿತಾಗಿ ಈತನ ದ್ವೇಷಪೂರಿತ ಮನೋಭಾವವೇ ಪರಿಸರದ ಕುರಿತೂ ವ್ಯಕ್ತವಾಗುತ್ತಿದೆ. ಜಗತ್ತಿನೆಲ್ಲೆಡೆ ಮನುಷ್ಯ ಕುಲದ ವಿನಾಶಕ್ಕೆ ನಿಂತಿರುವ ಬೊಲ್ಸೆನಾರೋಗಳ ವಿರುದ್ಧ ಜಗತ್ತಿನೆಲ್ಲೆಡೆಯ ಜನರೂ ಒಂದಾಗಿ ದನಿಯೆತ್ತಬೇಕಾದ ದಿನಗಳು ಬಂದಿವೆ. ಅಮೆಜಾನ್‍ಗೆ ಬಿದ್ದಿರುವ ಬೆಂಕಿ ಭಾರತವನ್ನೂ ಸುಡುತ್ತದೆ.


