ಭಾರತದ ಪ್ರಸಿದ್ದ ಸೂಫಿ ಸಂತ ಖ್ವಾಜಾ ಮುಈನುದ್ದೀನ್ ಚಿಸ್ತಿ ಅವರ ಅಜ್ಮೀರ್ ದರ್ಗಾ ಶರೀಫ್‌ನ ಉರೂಸ್‌ಗೆ ಪ್ರಧಾನಿ ನರೇಂದ್ರ ಮೋದಿ ಚಾದರ್ ಅರ್ಪಿಸಿದ್ದಾರೆ.
ಪ್ರತಿವರ್ಷ ಉರೂಸ್‌ಗೆ ಕೇಂದ್ರ ಸರ್ಕಾರದಿಂದ ಚಾದರ್ ಅರ್ಪಿಸುವುದು ಸಂಪ್ರದಾಯ. ಈ ವರ್ಷ 813ನೇ ಉರೂಸ್ ಸಮಾರಂಭಕ್ಕೆ ಚಾದರ್ ಅರ್ಪಿಸುವ ಮೂಲಕ ಪ್ರಧಾನಿ ಮೋದಿ ಅದನ್ನು ಮುಂದುವರಿಸಿದ್ದಾರೆ.
ಈ ಹಿಂದೆ ದೇಶದ ಎಲ್ಲಾ ಪ್ರಧಾನ ಮಂತ್ರಿಗಳು ಅಜ್ಮೀರ್ ದರ್ಗಾದ ಉರೂಸ್‌ಗೆ ಚಾದರ್ ಅರ್ಪಿಸಿದ್ದಾರೆ. 2014ರಲ್ಲಿ ಮೋದಿಯವರು ಪ್ರಧಾನಿಯಾದ ಬಳಿಕವೂ ಆ ಸಂಪ್ರದಾಯ ಮುಂದುವರೆದಿದೆ.
ಆದರೆ, ಈ ಬಾರಿ ಮೋದಿ ಚಾದರ್ ಅರ್ಪಿಸಿರುವುದು ಬಹಳ ಮಹತ್ವ ವಿಷಯವಾಗಿದೆ. ಏಕೆಂದರೆ, ಮೋದಿಯವರ ಬಿಜೆಪಿ ಪಕ್ಷವನ್ನು ಬೆಂಬಲಿಸುವ ಹಿಂದುತ್ವ ಗುಂಪು ‘ಹಿಂದೂ ಸೇನೆ’ ಅಜ್ಮೀರ್ ದರ್ಗಾವನ್ನು ದೇವಸ್ಥಾನವೆಂದು ಪ್ರತಿಪಾದಿಸಿ ಕೋರ್ಟ್ ಮೆಟ್ಟಿಲೇರಿದೆ.
ಆ ಪ್ರಕರಣ ಅಜ್ಮೀರ್ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಈ ನಡುವೆ ಮೋದಿ ಚಾದರ್ ಅರ್ಪಿಸಿ, ಉರೂಸ್ ಸಮಾರಂಭಕ್ಕೆ ಶುಭ ಕೋರಿರುವುದು ಗಮನಾರ್ಹವಾಗಿದೆ.
ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮೂಲಕ ಪ್ರಧಾನಿ ಮೋದಿ ಅಜ್ಮೀರ್ ಉರೂಸ್‌ಗೆ ಚಾದರ್ ನೀಡಿದ್ದಾರೆ. ಈ ವಿಚಾರವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಕಿರಣ್ ರಿಜಿಜು ಅವರು ” ಅಜ್ಮೀರ್ ದರ್ಗಾದ ಉರೂಸ್ ಸಮಾರಂಭಕ್ಕೆ ಪ್ರಧಾನಿ ಮೋದಿ ಚಾದರ್ ಅರ್ಪಿಸಿದ್ದಾರೆ. ಪ್ರಧಾನಿಯ ಈ ನಡೆ ಭಾರತದ ಶ್ರೀಮಂತ ಆಧ್ಯಾತ್ಮಿಕ ಪರಂಪರೆ ಮತ್ತು ಸಾಮರಸ್ಯಕ್ಕೆ ಅವರು ನೀಡುವ ಗೌರವವನ್ನು ಪ್ರತಿಬಿಂಬಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.
ಕಿರಣ್ ರಿಜಿಜು ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ” ಖ್ವಾಜಾ ಮುಈನುದ್ದೀನ್ ಚಿಸ್ತಿಯವರ ಉರೂಸ್‌ಗೆ ಶುಭಾಷಯಗಳು. ಈ ಸಂದರ್ಭ ಪ್ರತಿಯೊಬ್ಬರ ಜೀವನದಲ್ಲಿ ಸುಖ, ಶಾಂತಿಯನ್ನು ತರಲಿ” ಎಂದು ಹಾರೈಸಿದ್ದಾರೆ.
Greetings on the Urs of Khwaja Moinuddin Chishti. May this occasion bring happiness and peace into everyone’s lives. https://t.co/vKZDwEROli
— Narendra Modi (@narendramodi) January 2, 2025
ಹಿಂದುತ್ವ ಸಂಘಟನೆ ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಅಜ್ಮೀರ್ ದರ್ಗಾವನ್ನು ಶಿವ ಮಂದಿರವೆಂದು ಘೋಷಿಸುವಂತೆ ಕೋರಿ ಅಜ್ಮೀರ್‌ನ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ 2024ರ ನವೆಂಬರ್‌ನಲ್ಲಿ ನ್ಯಾಯಾಲಯ ಒಪ್ಪಿಕೊಂಡಿದೆ. ಅರ್ಜಿ ಸಂಬಂಧ ದರ್ಗಾ ಸಮಿತಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಗೆ ಸಮನ್ಸ್ ನೀಡುವಂತೆ ಸೂಚಿಸಿದೆ.
ಮೇಲೆ ಉಲ್ಲೇಖಿಸಿದ ಪ್ರತಿವಾದಿಗಳಿಗೆ ನ್ಯಾಯಾಲದಿಂದ ಸಮನ್ಸ್ ನೀಡಲಾಗಿದೆಯಾ? ಎಂಬುವುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 20ಕ್ಕೆ ನಿಗದಿಪಡಿಸಿತ್ತು.
ಆದರೆ, ಡಿಸೆಂಬರ್ 12ರಂದು ಮಧ್ಯಂತರ ಆದೇಶ ನೀಡಿರುವ ಸುಪ್ರೀಂ ಕೋರ್ಟ್ ಮುಂದಿನ ಆದೇಶದವರೆಗೆ ಮಸೀದಿಗಳ ಸಮೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಅಥವಾ ಅಂತಿಮ ಆದೇಶಗಳನ್ನು ನೀಡದಂತೆ ದೇಶದ ಎಲ್ಲಾ ನ್ಯಾಯಾಲಯಗಳಿಗೆ ಸೂಚಿಸಿದೆ.
ಇದನ್ನೂ ಓದಿ : ಆರಾಧನಾ ಸ್ಥಳಗಳ ಕಾಯ್ದೆ ಪರಿಣಾಮಕಾರಿ ಅನುಷ್ಠಾನ ಕೋರಿ ಓವೈಸಿ ಅರ್ಜಿ : ವಿಚಾರಣೆಗೆ ಒಪ್ಪಿದ ಸುಪ್ರೀಂ ಕೋರ್ಟ್


