ಮಹಾರಾಷ್ಟ್ರದಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಬಿಕ್ಕಟ್ಟು ಕಾಣಿಸಿಕೊಂಡಿದೆ. ಬಿಜೆಪಿ, ಶಿವಸೇನೆ ಶಿಂಧೆ ಬಣ, ಎನ್‌ಸಿಪಿ ಅಜಿತ್ ಪವಾರ್ ಬಣದ ನಡುವೆ ಕ್ಷೇತ್ರಗಳ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಳೆ ಮಹಾರಾಷ್ಟ್ರಕ್ಕೆ ತೆರಳಿ ಡ್ಯಾಮೇಜ್ ಕಂಟ್ರೋಲ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಮಹಾರಾಷ್ಟ್ರದಲ್ಲಿ ಒಂದು ಕಡೆ ಬಿಜೆಪಿಯೊಳಗೆ ಆಂತರಿಕ ಭಿನ್ನಾಭಿಪ್ರಾಯಗಳಿದ್ದರೆ, ಇನ್ನೊಂದು ಕಡೆ ಸೀಟು ಹಂಚಿಕೆ ಕುರಿತು ಆಡಳಿತಾರೂಢ ಎನ್‌ಡಿಎ ಪಾಲುದಾರರ ನಡುವೆ ಅಸಮಾಧಾನ ಭುಗಿಲೆದ್ದಿದೆ. ವಿಶೇಷವಾಗಿ ವಿದರ್ಭ, ಮರಾಠವಾಡ ಮತ್ತು ಮಹಾರಾಷ್ಟ್ರ ಉತ್ತರದಲ್ಲಿ ಸೀಟು ಹಂಚಿಕೆ ದೊಡ್ಡ ಸಮಸ್ಯೆಯಾಗಿದೆ ಎನ್ನಲಾಗಿದೆ.
ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಕೆಲವು ದಿನಗಳ ನಂತರ ಶಾ ಮಹಾರಾಷ್ಟ್ರ ಭೇಟಿ ನಿಗದಿಯಾಗಿದೆ. ಅಮಿತ್ ಶಾ ವಿದರ್ಭದಲ್ಲಿ ಸಭೆಯನ್ನು ನಡೆಸಲಿದ್ದಾರೆ. ಜಲಗಾಂವ್‌ನಲ್ಲಿ ಯುವ ಸಮಾವೇಶ ಮತ್ತು ಸಂಭಾಜಿನಗರ (ಮರಾಠವಾಡ)ದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿದೆ. ಲೋಕಸಭಾ ಚುನಾವಣಾ ಪ್ರಚಾರಕ್ಕೆ ಶಾ ಅವರ ಭೇಟಿ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ಆಡಳಿತಾರೂಢ ಎನ್‌ಡಿಎ ಮೈತ್ರಿ ಪಕ್ಷಗಳ ಭಿನ್ನಾಭಿಪ್ರಾಯಗಳನ್ನು ಶಮನ ಮಾಡುವ ಉದ್ದೇಶದಿಂದ ಅಮಿತ್ ಶಾ ಭೇಟಿ ನಿಗದಿಯಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸುತ್ತಿದೆ. ಮಹಾರಾಷ್ಟ್ರದಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಬಗ್ಗೆ ಸಮಸ್ಯೆಗಳಿದ್ದು, ಅಭ್ಯರ್ಥಿಗಳ ಘೋಷಣೆಗೂ ಮುನ್ನ ಇತ್ಯರ್ಥವಾಗಬೇಕಿದೆ ಎಂದು ಪಕ್ಷದ ಆಂತರಿಕ ಮೂಲಗಳು ಹೇಳಿದೆ.
ಚಂದ್ರಾಪುರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸುತ್ತಿದೆ. ಒಬಿಸಿ ಸಮುದಾಯಕ್ಕೆ ಸೇರಿದ ರಾಜ್ಯ ಸಚಿವ ಸುಧೀರ್ ಮುಂಗಂತಿವಾರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ, ಆದರೆ ಪ್ರಬಲ ಕುಂಬಿ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮೈತ್ರಿ ಪಾಲುದಾರ ಇತರ ಪಕ್ಷಗಳು ಮುಂದಾಗಿದೆ. ವಿದರ್ಭ ಸೇರಿ ನಾಗ್‌ಪುರ, ಭಂಡಾರಾ-ಗೊಂಡಿಯಾ, ಗಡ್‌ಚಿರೋಲಿ, ಚಂದ್ರಾಪುರ, ವಾರ್ಧಾ, ರಾಮ್‌ಟೆಕ್, ಬುಲ್ಧಾನ, ಯವತ್ಮಾಲ್-ವಾಶಿಮ್, ವಾರ್ಧಾ ಮತ್ತು ಅಕೋಲಾ ಬಿಜೆಪಿಗೆ ಮುಖ್ಯವಾಗಿದೆ. ರಾಜ್ಯದ 48 ಲೋಕಸಭಾ ಸ್ಥಾನಗಳಲ್ಲಿ 45 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಿದ್ದೇವೆ ಎಂದು ಬಿಜೆಪಿ ಹೇಳಿಕೊಂಡಿದೆ.
ಕೊಂಕಣ ಪ್ರದೇಶದಲ್ಲಿ ಬಿಜೆಪಿ ಮತ್ತು ಶಿಂಧೆ ಸೇನೆ ಸಿಂಧುದುರ್ಗ ರತ್ನಗಿರಿ ಕ್ಷೇತ್ರಕ್ಕೆ ಪೈಪೋಟಿ ನಡೆಸುತ್ತಿವೆ. ಕೇಂದ್ರ ಸಚಿವ ನಾರಾಯಣ ರಾಣೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ರತ್ನಗಿರಿ-ಸಿಂಧುದುರ್ಗ ಲೋಕಸಭಾ ಕ್ಷೇತ್ರವು ಬಿಜೆಪಿಗೆ ಸೇರಿದ್ದು, ನಾವೇ ಈ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಪಶ್ಚಿಮ ಮಹಾರಾಷ್ಟ್ರದ ಶಿರೂರು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಡುವೆ ಸೀಟು ಹಂಚಿಕೆ ಭಿನ್ನಾಭಿಪ್ರಾಯವಿದೆ.
ಕಳೆದ ಬಾರಿ 22 ಸ್ಥಾನಗಳಲ್ಲಿ ಸ್ಪರ್ಧಿಸಿದ್ದೆವು. ನಾವೇಕೆ ಕಡಿಮೆ ಸ್ಥಾನಕ್ಕೆ ಒಪ್ಪಿಕೊಳ್ಳಬೇಕು? ಎಂದು ಶಿಂಧೆ ಸೇನೆಯ ಹಿರಿಯ ಮುಖಂಡ ಗಜಾನನ ಕೀರ್ತಿಕರ್ ಪ್ರಶ್ನಿಸಿದ್ದಾರೆ. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಕೂಡ ಶಿಂಧೆ ಸೇನೆಗೆ ಸಮಾನವಾದ ಸ್ಥಾನಗಳಿಗೆ ಬೇಡಿಕೆ ಇಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿಯ ಉನ್ನತ ನಾಯಕತ್ವವು, ಪ್ರತಿ ಪಕ್ಷಕ್ಕೂ ತಮ್ಮ ಬೇಡಿಕೆಯನ್ನು ಪ್ರತಿಪಾದಿಸುವ ಹಕ್ಕಿದೆ. ಸೀಟು ಹಂಚಿಕೆ ಕುರಿತು ಮಾತುಕತೆಗಳು ನಡೆದಾಗ ಉನ್ನತ ನಾಯಕರು ಪ್ರಾಯೋಗಿಕ ವಿಧಾನವನ್ನು ತೆಗೆದುಕೊಳ್ಳುತ್ತಾರೆ. ಶಿಂಧೆ ಮತ್ತು ಅಜಿತ್ ಇಬ್ಬರಿಗೂ ಬಿಜೆಪಿಯ ಕಾರ್ಯವೈಖರಿಯ ಅರಿವಿದೆ. ಪ್ರತಿ ಸ್ಥಾನವನ್ನು ನೆಲದ ವಾಸ್ತವದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಕೋಮು ಸಂಬಂಧಗಳ ಸುಧಾರಣೆ, ಉತ್ತಮ ಉದ್ಯೋಗದ ಭರವಸೆ ಕಳೆದುಕೊಂಡ ಭಾರತೀಯರು: ಸಮೀಕ್ಷಾ ವರದಿ


