| ರಾಣಾ ಅಯ್ಯೂಬ್ |
ಅನುವಾದ: ನಿಖಿಲ್ ಕೋಲ್ಪೆ
ಮೇ 17ರಂದು ಪ್ರಧಾನಿ ನರೇಂದ್ರ ಮೋದಿ ತನ್ನ ಮೊತ್ತಮೊದಲ ಪತ್ರಿಕಾಗೋಷ್ಟಿ ನಡೆಸುವರೆಂಬ ಸುದ್ದಿಯಿಂದ ಭಾರತೀಯ ಪತ್ರಕರ್ತರೆಲ್ಲಾ ಗಡಿಬಿಡಿಗೊಂಡಿದ್ದರು. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸದ ಮೊದಲ ಪ್ರಧಾನಿ ಮೋದಿ ಎನಿಸಿದ್ದರು. ಆದರೆ, ಪತ್ರಿಕಾಗೋಷ್ಟಿಯಲ್ಲಿ ಮೋದಿ ಆಡಿದ್ದು ಕೇವಲ ಒಂಟಿ ಮಾತು ಮಾತ್ರ. ಪ್ರಶ್ನೆಗಳನ್ನು ಕೇಳಿದಾಗಲೆಲ್ಲ ಆತ ತನ್ನ ಎಡಕ್ಕೆ, ಆಳುವ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಕಡೆಗೆ ನೋಡುತ್ತಿದ್ದರು. ಶಾ ಅವರು ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ಎಂದಿದ್ದರು ಮೋದಿ. ಈಗ ಕೆಲವು ವರ್ಷಗಳಿಂದ ಮಾಡುತ್ತಿರುವಂತೆ ಶಾ ಮೋದಿಯ ನೆರವಿಗೆ ಮುಂದಾದರು.
ಅಮಿತ್ ಶಾ ಭಾರತದಲ್ಲಿಯೇ ಎರಡನೇ ಅತ್ಯಂತ ಶಕ್ತಿಶಾಲಿ ವ್ಯಕ್ತಿ. ಪಕ್ಷದಲ್ಲಿ ಅನೇಕರು ಆತನನ್ನು ಅದೃಷ್ಯ ಪ್ರಧಾನಿ ಎಂದು ಕರೆಯುತ್ತಾರೆ. ಆತ ಮೋದಿಯ ನೆರಳು, ನಿಷ್ಟಾವಂತ ಬೇಟೆನಾಯಿ, ವಕ್ತಾರ ಮತ್ತು ಪ್ರಚಾರ ತಂತ್ರಗಾರ. ಈಗ ಶಾರನ್ನು ಸಂಪುಟದ ಅತ್ಯಂತ ಪ್ರಭಾವಿ ಹುದ್ದೆಗಳಲ್ಲಿ ಒಂದಾದ ಗೃಹ ಮಂತ್ರಿಯನ್ನಾಗಿ ಮಾಡಲಾಗಿದೆ.
54 ವರ್ಷ ಪ್ರಾಯದ ಶಾ 90ರ ದಶಕದಿಂದಲೇ ಮೋದಿ ನಿಷ್ಟ. ಮೋದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೃಪ್ತನಾಗಿರದ-ಅಧಿಕಾರವನ್ನು ಬಯಸುತ್ತಿದ್ದ ಗುಜರಾತಿನ ಮೊದಲ ದಿನಗಳಿಂದಲೂ ಇವರಿಬ್ಬರೂ ಹೀಗೆಯೇ ಇದ್ದರು. 2001ರಲ್ಲಿ ಮೋದಿ ಗುಜರಾತಿಗೆ ಬಂದ ಕೆಲವೇ ದಿನಗಳಲ್ಲಿ ಶಾ ನೆರವಿನೊಂದಿಗೆ ಅಲ್ಲಿನ ಮುಖ್ಯಮಂತ್ರಿಯಾದರು. ಶಾ ಮೋದಿಯ ಸರಕಾರದ ರಾಜ್ಯ ಸಂಪುಟದಲ್ಲಿ ಹಲವಾರು ಜವಾಬ್ದಾರಿ ಇರುವ ಕಿರಿಯ ಸಚಿವರಾಗಿ ಕಾರ್ಯಾರಂಭ ಮಾಡಿದರು. ಮೋದಿಯ ದಾರಿಗಡ್ಡಬಂದ ಎಲ್ಲಾ ತೊಂದರೆಗಳನ್ನು ನಿವಾರಿಸುವುದು ಅತನ ಕೆಲಸವಾಗಿದ್ದು, ಆತನ ಕಚೇರಿಗೆ ಮುಖ್ಯಮಂತ್ರಿಯ “ಕೊಳಕು ತಂತ್ರಗಳ ಇಲಾಖೆ” ಎಂಬ ಕುಖ್ಯಾತಿ ಬಂದಿತ್ತು.
ಆ ಕಾಲದಿಂದಲೂ ಶಾ ಇನ್ನಷ್ಟು ಪ್ರಬಲರಾಗುತ್ತಲೇ ಬಂದಿದ್ದಾರೆ. ಆತ ಭಾರತದಲ್ಲಿಯೇ ಅತ್ಯಂತ ವೈರತ್ವಸಾಧಕ ಮತ್ತು ವಿಭಜನಕಾರಿ ರಾಜಕಾರಣಿ. ಬಿಜೆಪಿ ವಿರುದ್ಧ ಮತವನ್ನು ಪಾಕಿಸ್ತಾನದಲ್ಲಿ ಆಚರಿಸಲಾಗುತ್ತದೆ ಎಂದಾತ ತನ್ನ ಕೇಳುಗರಿಗೆ ಹೇಳುತ್ತಿದ್ದರು. ಆತ ಮುಸ್ಲಿಂ ವಲಸಿಗರನ್ನು “ಗೆದ್ದಲು”ಗಳೆಂದು ಬಣ್ಣಿಸಿ, ಅವರನ್ನು ಬಂಗಾಳ ಕೊಲ್ಲಿಗೆ ಎಸೆಯಬೇಕೆಂದು ಹೇಳಿದ್ದರು. ಮುಸ್ಲಿಮರನ್ನು ಹೊರತುಪಡಿಸಿ ನೆರೆಯ ದೇಶಗಳಿಂದ ವಲಸೆ ಬಂದವರಿಗೆ ಪೌರತ್ವ ನೀಡುವ ಕಾಯಿದೆ ಕೂಡಾ ಆತನದ್ದೇ ಚಿಂತನೆ.
ಹೆಚ್ಚು ಆತಂಕದ ವಿಷಯವೆಂದರೆ ಮಾನವಹಕ್ಕುಗಳ ವಿಷಯದಲ್ಲಿ ಈತ ಕುಖ್ಯಾತಿಯ ಹಿನ್ನೆಲೆ ಹೊಂದಿರುವುದು. ಭಯೋತ್ಪಾದಕರೆಂಬ ಹಣೆಪಟ್ಟಿ ಕಟ್ಟಿ ಮುಸ್ಲಿಮರನ್ನು ಕಾನೂನುಬಾಹಿರವಾಗಿ ಕೊಲ್ಲಿಸಿದ ಆರೋಪ ಈತನ ಮೇಲಿದೆ.
2010ರಲ್ಲಿ ನಾನು ಈ ಕೊಲೆಗಳ ಬಗ್ಗೆ ವರದಿ ಮಾಡಿದ್ದೆ. ನಾನು ಶಾರ ದೂರವಾಣಿ ಕರೆಗಳ ದಾಖಲೆ ಮತ್ತು ಗುಜರಾತ್ ರಾಜ್ಯದ ಗುಪ್ತಚರ ಇಲಾಖೆಯ ಆಂತರಿಕ ದಾಖಲೆಯನ್ನೂ ಮುಂದಿಟ್ಟಿದ್ದೆ. ಕೊಲ್ಲಬೇಕಾದವರನ್ನು ಕೊಂಡೊಯ್ಯುತ್ತಿರುವಾಗಲೇ ಈತ ಅಧಿಕಾರಿಗಳ ಜೊತೆಯಲ್ಲಿ ಮಾತುಕತೆಯಲ್ಲಿ ತೊಡಗಿದ್ದುದನ್ನು ಈ ದಾಖಲೆಗಳು ಸಾಬೀತುಪಡಿಸುತ್ತಿದ್ದವು. ನನ್ನ ತನಿಖಾ ವರದಿ ಪ್ರಕಟವಾದ ಎರಡು ವಾರಗಳಲ್ಲಿ ಶಾ ಬಂಧನವಾಗಿತ್ತು. (ಆತ ಈ ಆರೋಪಗಳನ್ನು ಅಲ್ಲಗೆಳೆದು, ಅವುಗಳನ್ನು ಕಟ್ಟುಕತೆ ಮತ್ತು ರಾಜಕೀಯ ಪ್ರೇರಿತ ಎಂದು ಕರೆದಿದ್ದರು.)
ಸಿಬಿಐ (ಕೇಂದ್ರೀಯ ತನಿಖಾ ಸಂಸ್ಥೆ) ಸೊಹ್ರಾಬುದ್ದೀನ್ ಮತ್ತು ಆತನ ಪತ್ನಿ ಕೌಸರ್ ಬೀ ಎಂಬ ಮುಸ್ಲಿಮರ ಕೊಲೆಯಲ್ಲಿನ ಪಾತ್ರದ ಬಗ್ಗೆ ಶಾ ವಿರುದ್ಧ ತನಿಖೆ ನಡೆಸುತ್ತಿತ್ತು. ಸುಪ್ರೀಂಕೋರ್ಟ್ ಕಣ್ಗಾವಲಿನಲ್ಲಿ ಶಾರನ್ನು ಈ ಅಪರಾಧದ ಮುಖ್ಯ ಆರೋಪಿ ಮತ್ತು ಸಂಚುಕೋರ ಎಂದು ಹೆಸರಿಸಲಾಗಿತ್ತು. ಅದಲ್ಲದೇ ಆತನನ್ನು ಭೂಗತ ಗೂಂಡಾಗಳು ಮತ್ತು ರಾಜಕಾರಣಿಗಳನ್ನು ಒಳಗೊಂಡ ವಸೂಲಿ ದಂಧೆಯ ಮುಖ್ಯಸ್ಥ ಎಂದೂ ಹೆಸರಿಸಿತ್ತು. ಈ ಆರೋಪಗಳು ಎಷ್ಟು ಗಂಭೀರವಾಗಿದ್ದವು ಎಂದರೆ, ಆತ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಮತ್ತು ಬೆದರಿಸದಂತೆ ಸುಪ್ರೀಂಕೋರ್ಟ್ ಆತನನ್ನು ತನ್ನ ತವರು ರಾಜ್ಯ ಪ್ರವೇಶಿಸದಂತೆ ಗಡಿಪಾರು ಮಾಡಿತ್ತು. ಕಾನೂನುಬಾಹಿರವಾಗಿ ಬಂಧಿಸಲಾಗಿತ್ತು ಎಂದು ಹೇಳಲಾದ ಇಶ್ರತ್ ಜಹಾನ್ ಎಂಬ 19 ವರ್ಷಗಳ ಯುವತಿಯ ಅಪಹರಣ ಮತ್ತು ಕೊಲೆಯಲ್ಲಿ ಆತನ ಪಾತ್ರದ ಬಗ್ಗೆಯೂ ತನಿಖೆ ನಡೆದಿತ್ತು.

ಶಾ ಕಂಬಿಗಳ ಹಿಂದೆ ಹೆಚ್ಚು ಕಾಲ ಕಳೆಯಲಿಲ್ಲ. ಬೇಗನೇ ಆತ ಜಾಮೀನಿನಲ್ಲಿ ಹೊರಬಂದಿದ್ದರು. ಶಾ ಪತನದೊಂದಿಗೆ ಮೋದಿಯ ಪತನವೂ ಆಗುತ್ತದೆ ಎಂದು ಊಹಿಸಲಾಗಿತ್ತು. ಆದರೆ 2013ರಲ್ಲಿ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಾಯಿತು. ಶಾರನ್ನು ಬಿಜೆಪಿಯ ಅಧ್ಯಕ್ಷ ಎಂದು ಘೋಷಿಸಲಾಯಿತು. ಕ್ರಿಮಿನಲ್ ಆರೋಪಗಳನ್ನು ಹೊತ್ತುಕೊಂಡೂ ಆ ಪದವೇರಿದ ಪಕ್ಷದ ಮೊದಲ ನಾಯಕನಾತ. ಮೋದಿ ಅಧಿಕಾರಕ್ಕೆ ಬರುತ್ತಲೇ ಶಾ ಪ್ರಕರಣದ ಸಾಕ್ಷಿಗಳು ತಿರುಗಿಬಿದ್ದರು. ನ್ಯಾಯಾಧೀಶರು ಕೇಸಿನಿಂದ ಹಿಂದೆ ಸರಿದರು. ಕೆಲವೇ ತಿಂಗಳುಗಳಲ್ಲಿ ಶಾರನ್ನು ಎಲ್ಲಾ ಕ್ರಿಮಿನಲ್ ಆರೋಪಗಳಿಂದ ದೋಷಮುಕ್ತಗೊಳಿಸಲಾಯಿತು.
2013ರಲ್ಲಿ ಯುವತಿಯೊಬ್ಬರ ಮೇಲೆ ಗುಪ್ತಚರ್ಯೆ ನಡೆಸಿದ ಆರೋಪವೂ ಶಾ ಮೇಲಿತ್ತು. ಎರಡು ಪತ್ರಿಕೋದ್ಯಮ ಸಂಸ್ಥೆಗಳು ಶಾ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿ, ಕಣ್ಗಾವಲು ಮುಂದುವರಿಸುವಂತೆ ನಿರ್ದೇಶನ ನೀಡುವ ಸಂಭಾಷಣೆಗಳಿರುವ ಟೇಪನ್ನು ಬಿಡುಗಡೆಗೊಳಿಸಿದ್ದವು. ಇದಕ್ಕೆ ಬಿಜೆಪಿಯ ವಿವರಣೆ-ಆಕೆಯ ತಂದೆ ಭದ್ರತೆ ಒದಗಿಸುವಂತೆ ಕೋರಿದ್ದರು ಎಂಬುದಾಗಿತ್ತು. ಆದರೆ ಯಾವುದೇ ಅಧಿಕೃತ ಕೋರಿಕೆ ಅಥವಾ ಆಜ್ಞೆಯನ್ನು ತೋರಿಸಲು ಪೊಲೀಸರು ವಿಫಲರಾಗಿದ್ದರು.
ತನ್ನ ವಿವಾದಾತ್ಮಕ ಹಿನ್ನೆಲೆಯ ಹೊರತಾಗಿಯೂ ಶಾ ಈಗ ಮೋದಿಯ ವಿಶ್ವಾಸಪಾತ್ರನಾಗಿ, ಕಾರ್ಯನಿರ್ವಾಹಕನಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಆತ ಪ್ರಧಾನಿಯ ಒಪ್ಪಿಗೆ ಇಲ್ಲದೆಯೂ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
2014ರಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ಭವಿಷ್ಯದ ಆಸೆಯನ್ನು ಕೈಬಿಟ್ಟಾಗ, ಶಾ 2019ಕ್ಕೆ ಸಿದ್ಧತೆಗಳನ್ನು ಆರಂಭಿಸಿದ್ದರು. ಆತ ಬಿಜೆಪಿ ಸದಸ್ಯತ್ವದ ಭಾರೀ ಅಭಿಯಾನವನ್ನು ಪುನರಾರಂಭಿಸಿದ್ದರು. ಎರಡು ವರ್ಷಗಳ ಅವಧಿಯಲ್ಲಿ ದೃಢೀಕೃತ ಬಿಜೆಪಿ ಸದಸ್ಯರ ಸಂಖ್ಯೆ ಮೂರುವರೆ ಕೋಟಿಯಿಂದ ಹನ್ನೊಂದು ಕೋಟಿಗೆ ಏರಿತ್ತು. ಅದಲ್ಲದೇ ಶಾ ದೇಶದಾದ್ಯಂತ ರಾಜಕೀಯ ಮೈತ್ರಿಯನ್ನೂ ಮಾಡಿಕೊಂಡಿದ್ದಾರೆ. ಇದು ಬಿಜೆಪಿಗೆ ಇತ್ತೀಚಿನ ಭಾರೀ ಚುನಾವಣಾ ವಿಜಯವನ್ನು ತಂದುಕೊಟ್ಟಿತು.
2024ರಲ್ಲಿ ಪ್ರಧಾನಿ ಕುರ್ಚಿಯ ಮೇಲೆ ಶಾ ಕಣ್ಣಿಟ್ಟಿದ್ದಾರೆ ಎಂದು ಕೆಲವರು ಊಹಿಸಿದ್ದಾರೆ. ಸದ್ಯಕ್ಕಂತೂ ಆತ ಭಾರತದ ಸಂಸದೀಯ ಪ್ರಜಾಸತ್ತೆಯಲ್ಲಿ ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗುವ ಗೃಹ ಖಾತೆಯ ಮುಖ್ಯಸ್ಥರಾಗಿದ್ದು, ನ್ಯಾಯಪ್ರಧಾನ ಹಾಗೂ ಶಾಂತಿ ಮತ್ತು ಸೌಹಾರ್ದ ಪಾಲನೆಯ ಜವಾಬ್ದಾರಿ ಹೊಂದಿದ್ದಾರೆ.
ಆದರೆ, ಆತ ಅಧಿಕಾರ ದುರುಪಯೋಗಕ್ಕೆ ಸದಾಸಿದ್ಧನೆಂಬುದು ಸ್ಪಷ್ಟ. ಭಾರತವು ಅತ್ಯಂತ ಧ್ರುವೀಕರಣಗೊಂಡ ರಾಜಕೀಯ ಮತ್ತು ಸಾಮಾಜಿಕ ಕ್ಷಣಗಳಲ್ಲಿ ಬದುಕುತ್ತಿದೆ. ದೇಶಕ್ಕೆ ಗುಣಪಡಿಸುವ ಕೈಗಳು ಬೇಕಾಗಿವೆ. ಆದರೆ, ಮೋದಿ ಮತ್ತು ಶಾ ಅಧಿಕಾರವನ್ನು ಕೂಡಿಹಾಕುವುದರಲ್ಲಿ ಮಾತ್ರ ಆಸಕ್ತರಾಗಿದ್ದಾರೆ. ಅದು ಸಂಸ್ಥೆಗಳನ್ನು ದುರ್ಬಲಗೊಳಿಸುವುದರ ಮೂಲಕ, ಮಾನವಹಕ್ಕುಗಳನ್ನು ಕಡೆಗಣಿಸುವುದರ ಮೂಲಕ, ಕಾನೂನಿನ ಆಡಳಿತದ ಮೇಲಿನ ವಿಶ್ವಾಸವನ್ನು ದುರ್ಬಲಗೊಳಿಸುವುದರ ಮೂಲಕ ಆದರೂ ಅವರಿಗೆ ಪರವಾಗಿಲ್ಲ. ಭಾರತವು ಇದಕ್ಕಿಂತಲೂ ಅಪಾಯಕಾರಿ ಕೈಗಳಲ್ಲಿ ಇರುವುದು ಸಾಧ್ಯವೇ ಇಲ್ಲ.
ಕೃಪೆ: ವಾಷಿಂಗ್ಟನ್ ಪೋಸ್ಟ್


