ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನದ ಪಿತಾಮಹನ ಕುರಿತು ನೀಡಿರುವ ಹೇಳಿಕೆಯು ಬಿಜೆಪಿಯ ಅದೇ ಹಳೆಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಬುಧವಾರ ಆರೋಪಿಸಿದ್ದಾರೆ. “ಭಾರತದ ಸಂವಿಧಾನದ 75 ವರ್ಷಗಳ ಅದ್ಭುತ ಪಯಣ” ಎಂಬ ಎರಡು ದಿನಗಳ ಚರ್ಚೆಯ ಮುಕ್ತಾಯದಲ್ಲಿ ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಅಮಿತ್ ಶಾ ಅವರು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದರು. ಅಮಿತ್ ಶಾ ಹೇಳಿಕೆ
ರಾಜ್ಯಸಭೆಯಲ್ಲಿ ಮಾತನಾಡಿದ್ದ ಅಮಿತ್ ಶಾ ಅವರು, “ಅಭಿ ಏಕ್ ಫ್ಯಾಶನ್ ಹೋ ಗಯಾ ಹೈ – ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್. ಇತ್ನಾ ನಾಮ್ ಅಗರ್ ಭಗವಾನ್ ಕಾ ಲೇತೆ ತೋ ಸಾತ್ ಜನ್ಮೋನ್ ತಕ್ ಸ್ವರ್ಗ್ ಮಿಲ್ ಜಾತಾ” (ಈ ಒಂದು ಫ್ಯಾಶನ್ ಆಗಿ ಹೋಗಿದೆ. ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್… ಇಷ್ಟು ಬಾರಿ ಭಗವಂತನ ಹೆಸರನ್ನು ಹೇಳಿದ್ದರೆ, ಏಳು ಜನ್ಮಕ್ಕೂ ಸ್ವರ್ಗ ಸಿಗುತ್ತಿತ್ತು) ಎಂದು ಹೇಳಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಬಿಜೆಪಿ ಅಸ್ತಿತ್ವಕ್ಕೆ ಬರುವ ಮೊದಲು, ಅದರ ಪೂರ್ವಜರಾದ ಜನಸಂಘ ಮತ್ತು ಆರೆಸ್ಸೆಸ್ ಸಂವಿಧಾನವನ್ನು ಅಂಗೀಕರಿಸುವಾಗ ಬಾಬಾಸಾಹೇಬ್ ಅವರನ್ನು ವಿರೋಧಿಸಿದ್ದವು” ಎಂದು ವಂಚಿತ್ ಬಹುಜನ ಅಘಾಡಿ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಪುಣೆಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಮಿತ್ ಶಾ ಅವರ ಹೇಳಿಕೆಯು ಬಿಜೆಪಿಯ ಅದೇ ಹಳೆಯ ಮನಸ್ಥಿತಿಯನ್ನು ಮುನ್ನೆಲೆಗೆ ತಂದಿದೆ ಎಂದು ಅವರು ಹೇಳಿದ್ದಾರೆ.
ಅವರ ಹೇಳಿಕೆಯಲ್ಲಿ ಹೊಸದೇನೂ ಇಲ್ಲ, ಅವರಿಗೆ ತಮ್ಮ ಹಳೆಯ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗುತ್ತಿಲ್ಲ. ಅದು ಕಾಂಗ್ರೆಸ್‌ನಿಂದಾಗಿ ಅಲ್ಲ, ಬದಲಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕಾರಣದಿಂದ ಅವರಿಗೆ ಅದು ಸಾಧ್ಯವಾಗುತ್ತಿಲ್ಲ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ. ಅಮಿತ್ ಶಾ ಹೇಳಿಕೆ
ಇದೇ ವೇಳೆ, ಪರ್ಭಾನಿ ನಗರದಲ್ಲಿ ನಡೆದ ಸಂವಿಧಾನದ ಪ್ರತಿಕೃತಿಯನ್ನು ಅವಮಾನಿಸಿದ ಪ್ರಕರಣದ ವೇಳೆ ಭುಗಿಲೆದ್ದ ಹಿಂಸಾಚಾರದಲ್ಲಿ ಬಂಧಿತನಾಗಿ, ನ್ಯಾಯಾಂಗ ಬಂಧನದಲ್ಲಿದ್ದಾಗ ಮರಣ ಹೊಂದಿದ ಸೋಮನಾಥ ಸೂರ್ಯವಂಶಿಯ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಪ್ರಕಾಶ್ ಅಂಬೇಡ್ಕರ್ ಒತ್ತಾಯಿಸಿದ್ದಾರೆ.
ಈ ನಡುವೆ, ಅಂಬೇಡ್ಕರ್ ಅವರನ್ನು ಅವಮಾನ ಮಾಡಿರುವ ಅಮಿತ್ ಶಾ ಅವರು ತಮ್ಮ ಕೃತ್ಯಕ್ಕೆ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಇಂಡಿಯಾ ಒಕ್ಕೂಟದ ಹಲವಾರು ಸಂಸದರು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಮಿತ್ ಶಾ ಅವರು ಸಾರ್ವಜನಿಕವಾಗಿ ಮತ್ತು ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
“ಪರ್ಭಾನಿಯಲ್ಲಿ ನಡೆದ ಹಿಂಸಾಚಾರವು ಗೋದ್ರಾದಂತಹ ಪರಿಸ್ಥಿತಿಯನ್ನು ಸೃಷ್ಟಿಸುವ ಪ್ರಯತ್ನವಾಗಿದೆ” ಎಂದು ಅವರು ಆರೋಪಿಸಿದ್ದಾರೆ. ಈ ಹಿಂಸಾಚಾರವು ಇಬ್ಬರು ಮರಾಠ ನಾಯಕರ ನಡುವಿನ ವಿವಾದದ ಪರಿಣಾಮವಾಗಿದೆ ಎಂದು ಅವರು ಹೇಳಿದ್ದು, ಅಪರಾಧಿಗಳನ್ನು ಬಹಿರಂಗಪಡಿಸಲು ಸತ್ಯಶೋಧನಾ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದ್ದಾರೆ.
ಲೋಕಸಭೆಯಲ್ಲಿ ಏಕಕಾಲಕ್ಕೆ ಚುನಾವಣೆಗೆ ಕಾರ್ಯವಿಧಾನವನ್ನು ಪರಿಚಯಿಸುವ ಮಸೂದೆಗಳ ಅಂಗೀಕಾರವು ರಾಜಕೀಯ ಪಕ್ಷಗಳ ಅಂತ್ಯವನ್ನು ಅರ್ಥೈಸುತ್ತದೆ ಎಂದು ಅವರು ಹೇಳಿದ್ದಾರೆ. “ಕಾಂಗ್ರೆಸ್‌ಗೆ ಈ ಮಸೂದೆಗಳ ಬಗ್ಗೆ ಗಟ್ಟಿ ನಿಲುವು ತೆಗೆದುಕೊಳ್ಳಲು ಕೇವಲ ಐದರಿಂದ ಆರು ದಿನಗಳು ಮಾತ್ರ ಇವೆ. ನಿಲುವು ತೆಗೆದುಕೊಳ್ಳಲು ವಿಫಲವಾದರೆ ಮತ್ತು ಮಸೂದೆಗಳ ಅಂಗೀಕಾರವಾದರೆ ರಾಜಕೀಯ ಪಕ್ಷಗಳ ಅಂತ್ಯ ಎಂದರ್ಥ. ಶರದ್ ಪವಾರ್ ನೇತೃತ್ವದ ಎನ್‌ಸಿಪಿಯ ನಿಲುವು ಇದರಲ್ಲಿ ನಿರ್ಣಾಯಕವಾಗಿದೆ” ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.
ಇದನ್ನೂ ಓದಿ: ಅಂಬೇಡ್ಕರ್‌ಗೆ ಅವಮಾನ | ಅಮಿತ್ ಶಾ ವಿರುದ್ಧ ಟಿಎಂಸಿಯಿಂದ ಹಕ್ಕುಚ್ಯುತಿ ನೋಟಿಸ್
ಅಂಬೇಡ್ಕರ್‌ಗೆ ಅವಮಾನ | ಅಮಿತ್ ಶಾ ವಿರುದ್ಧ ಟಿಎಂಸಿಯಿಂದ ಹಕ್ಕುಚ್ಯುತಿ ನೋಟಿಸ್


