ಮಣಿಪುರದ ವಿವಿಧ ಕಾಲೇಜುಗಳ ಕನಿಷ್ಠ 200 ಬುಡಕಟ್ಟು ವಿದ್ಯಾರ್ಥಿಗಳು ಇಲ್ಲಿನ ರಾಜಭವನದ ಬಳಿ 2023-24ರ ಪರಿಶಿಷ್ಟ ಪಂಗಡದ ವಿದ್ಯಾರ್ಥಿವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲ ಕಾಲೇಜು ಬುಡಕಟ್ಟು ವಿದ್ಯಾರ್ಥಿ ಒಕ್ಕೂಟದ (ಎಸಿಟಿಎಸ್‌ಯು) ನೇತೃತ್ವದಲ್ಲಿ ರಾಜಭವನದ ಬಳಿಯ ಜಿಪಿ ಮಹಿಳಾ ಕಾಲೇಜು ಎದುರು ಜಮಾಯಿಸಿದ ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.
ಸ್ಥಳದಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಪಡೆಗಳು ಅವರನ್ನು ರ್ಯಾಲಿ ನಡೆಸದಂತೆ ತಡೆದರು. ಇದು ಸ್ವಲ್ಪ ಸಮಯದ ಘರ್ಷಣೆಗೆ ಕಾರಣವಾಯಿತು. ಧರಣಿ ನಿರತ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಕೆಲವು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು. “ಕೆಲವು ವಿದ್ಯಾರ್ಥಿಗಳು ಉಸಿರಾಟದ ತೊಂದರೆಗಳ ಬಗ್ಗೆ ದೂರು ನೀಡಿದ್ದಾರೆ. ಆದರೆ, ಯಾವುದೇ ಗಂಭೀರ ಗಾಯಗಳು ವರದಿಯಾಗಿಲ್ಲ” ಎಂದು ಪೊಲೀಸರು ಸೇರಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿ ಪ್ರತಿನಿಧಿ ಜಿ ಪನ್ಮೆ, ”2023-24ರ ನಮ್ಮ ಎಸ್‌ಟಿ ವಿದ್ಯಾರ್ಥಿವೇತನ ಇನ್ನೂ ಬಿಡುಗಡೆಯಾಗಿಲ್ಲ. ನಂತರ ಬುಡಕಟ್ಟು ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಸ್ಥಿತಿಯ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದರು.
ಇದನ್ನೂ ಓದಿ; ಆಂಧ್ರಪ್ರದೇಶ: ವಕ್ಫ್ ಮಂಡಳಿಯನ್ನು ಪುನರ್ ರಚಿಸಿದ ಚಂದ್ರಬಾಬು ನಾಯ್ಡು ಸರ್ಕಾರ


