ಅಲಿಗಢ ಮುಸ್ಲಿಂ ವಿಶ್ವ ವಿದ್ಯಾನಿಲಯ (ಎಎಂಯು)ದ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಪೀಠ ಇಂದು (ನ.8) 4:3 ಬಹುಮತದ ತೀರ್ಪು ನೀಡಿದ್ದು, 1967ರ ಅಝೀಝ್ ಬಾಷಾ vs ಯೂನಿಯನ್ ಆಫ್ ಇಂಡಿಯಾದ ತೀರ್ಪನ್ನು ರದ್ದುಗೊಳಿಸಿದೆ.
ಎಎಂಯು ‘ಅಲ್ಪಸಂಖ್ಯಾತ ಸ್ಥಾನಮಾನ’ ಅದನ್ನು ಯಾರು ಸ್ಥಾಪಿಸಿದರು ಎಂಬುವುದರ ಮೇಲೆ ನಿರ್ಧರಿಸಲಾಗುತ್ತದೆ ಎಂದು ಹೇಳಿದೆ.
ವಿಶ್ವ ವಿದ್ಯಾನಿಲಯವನ್ನು ಸ್ಥಾಪಿಸಿದವರು ಯಾರು ಮತ್ತು ಅದರ ಹಿಂದಿನ ಕರ್ತೃ ಯಾರು ಎಂಬುವುದನ್ನು ನ್ಯಾಯಾಲಯವು ಪರಿಶೀಲಿಸಬೇಕು. ಪರಿಶೀಲನೆಯಲ್ಲಿ ಅಲ್ಪಸಂಖ್ಯಾತ ಸಮುದಾಯ ಸ್ಥಾಪಿಸಿರುವುದು ಬಯಲಾದರೆ, ಸಂಸ್ಥೆಯು 30ನೇ ವಿಧಿಯ ಪ್ರಕಾರ ಅಲ್ಪಸಂಖ್ಯಾತ ಸ್ಥಾನಮಾನವನ್ನು ಪಡೆಯಬಹುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಎಎಂಯು ಕಾನೂನಿನಿಂದ ರಚಿಸಲ್ಪಟ್ಟಿರುವುದರಿಂದ ಅಲ್ಪಸಂಖ್ಯಾತ ಸ್ಥಾನಮಾನವನ್ನು ಪಡೆಯಲು ಸಾಧ್ಯವಿಲ್ಲ ಎಂದು 1967ರ ಅಝೀಝ್ ಬಾಷಾ vs ಯೂನಿಯನ್ ಆಫ್ ಇಂಡಿಯಾ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ಅದನ್ನು ಈಗ ತಳ್ಳಿಹಾಕಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪರವಾಗಿ ಬಹುಮತದ ತೀರ್ಪು ಬರೆದಿರುವ ಸಿಜೆಐ ಚಂದ್ರಚೂಡ್ ಅವರು, ಅಝೀಝ್ ಬಾಷಾ vsಯೂನಿಯನ್ ಆಫ್ ಇಂಡಿಯಾ ಪ್ರಕರಣದ ತೀರ್ಪನ್ನು ತಳ್ಳಿ ಹಾಕಿದೆ. ಆದರೆ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ದೀಪಂಕರ್ ದತ್ತಾ ಮತ್ತು ಎಸ್‌ಸಿ ಶರ್ಮಾ ಅವರು ಭಿನ್ನಾ ತೀರ್ಪುಗಳನ್ನು ಬರೆದಿದ್ದಾರೆ.
ಎಎಂಯು ಅಲ್ಪಸಂಖ್ಯಾತ ಸಂಸ್ಥೆಯೇ? ಎಂಬ ವಿಷಯವನ್ನು ನಿರ್ಧರಿಸಲು ಸಾಮಾನ್ಯ ಪೀಠಕ್ಕೆ ಅವಕಾಶ ನೀಡಲಾಗಿದೆ. ಈ ತೀರ್ಪಿನ ಪ್ರಕಾರ, ಎಂಎಂಯು ಅಲ್ಪಸಂಖ್ಯಾತ ಸ್ಥಾನಮಾನದ ಮೌಲ್ಯಮಾಪನ ಮಾಡಲು ಮತ್ತು 2006ರ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಮರುಮೌಲ್ಯಮಾಪನ ಮಾಡಲು ಮುಖ್ಯ ನ್ಯಾಯಾಧೀಶರು ಹೊಸ ಪೀಠವನ್ನು ರಚಿಸಲಿದ್ದಾರೆ.
ಎಎಂಯು ಕೇಂದ್ರೀಯ ಕಾನೂನು ಮೂಲಕ ಸ್ಥಾಪಿತಗೊಂಡಿರುವುದರಿಂದ, ಅದನ್ನು ಅಲ್ಪಸಂಖ್ಯಾತರ ಸಂಸ್ಥೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು 1967ರಲ್ಲಿ ತೀರ್ಪು ನೀಡಿತ್ತು. 1981ರಲ್ಲಿ ಸಾಂವಿಧಾನಿಕ ತಿದ್ದುಪಡಿ ಮೂಲಕ ಅಂದಿನ ಕೇಂದ್ರ ಸರ್ಕಾರ ಎಎಂಯುಗೆ ‘ಅಲ್ಪಸಂಖ್ಯಾತ’ ಸ್ಥಾನಮಾನ ನೀಡಿತ್ತು. ಅಲಹಾಬಾದ್ ಹೈಕೋರ್ಟ್ ಈ ಸ್ಥಾನಮಾನವನ್ನು ರದ್ದುಪಡಿಸಿ 2006ರಲ್ಲಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಯುಪಿಎ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.
ಇದನ್ನೂ ಓದಿ : ರಾಜಿ ಮಾಡಿಕೊಂಡ ಕಾರಣಕ್ಕೆ ಲೈಂಗಿಕ ಕಿರುಕುಳ ಪ್ರಕರಣ ರದ್ದಾಗದು : ಸುಪ್ರೀಂ ಕೋರ್ಟ್


