ಎರಡು ಅವಧಿಗಳ ನಂತರ ಈಗ ಮತ್ತೆ ಅಧಿಕಾರಕ್ಕೆ ಬಂದಿರುವ ಡಿಎಂಕೆಯ ಮುಖ್ಯಮಂತ್ರಿ ಸ್ಟಾಲಿನ್ ಅಲ್ಲೀಗ ಕೋವಿಡ್ ನಿರ್ವಹಣೆಗೆ 13 ಪಕ್ಷಗಳ ಸದಸ್ಯರ ಸರ್ವಪಕ್ಷ ಸಮಿತಿ ರಚಿಸಿದ್ದಾರೆ. ಪ್ರತಿ ವಾರಕ್ಕೊಮ್ಮೆ ಈ ಸಮಿತಿ ಸಭೆ ಸೇರಿ ಕೋವಿಡ್ ನಿರ್ವಹಣೆಯ ಪರಿಶೀಲನೆ ನಡೆಸಿ, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಿದೆ.
ಜಯಲಲಿತಾ, ಕರುಣಾನಿಧಿ ಕಾಲದಲ್ಲಿ ಸದನದಲ್ಲೇ ಬಡಿದಾಟವಾಗಿದ್ದವು. ಡಿಎಂಕೆ ಶಾಸಕನೊಬ್ಬ ಜಯಲಲಿತಾರ ಸೀರೆಯನ್ನೂ ಜಗ್ಗಿದ್ದ. ಜಯಲಲಿತಾ ಮತ್ತು ಕರುಣಾನಿಧಿ ಒಬ್ಬರನ್ನೊಬ್ಬರು ಜೈಲಿಗೆ ಕಳಿಸುವ ಬಗ್ಗೆಯೇ ತಂತ್ರ ಹೆಣೆಯುತ್ತಿದ್ದರು.
ಆದರೆ, ಕಾಲ ಸ್ಟಾಲಿನ್ ಅವರನ್ನು ಹೆಚ್ಚು ಪಕ್ವಗೊಳಿಸಿದಂತೆ ಅಥವಾ ಸ್ಪಷ್ಟ ಬಹುಮತ ಕೊಟ್ಟ ರಾಜ್ಯದ ಜನತೆಯನ್ನು ಕೋವಿಡ್‌ನಿಂದ ಕಾಪಾಡುವ ತುಮುಲವಿದ್ದಂತೆ ಕಾಣುತ್ತಿದೆ. ಎರಡು ಅವಧಿಯವರೆಗೆ ವಿಪಕ್ಷ ನಾಯಕನ ಸ್ಥಾನದಲ್ಲಿ ಕುಳಿತಿದ್ದು ವಾಸ್ತವ ಅರಿಯಲು ಸಾಧ್ಯವಾಗಿದೆ.
ಇದನ್ನೂ ಓದಿ: ಇಸ್ರೇಲ್‌ನ ಬಯೋತ್ಪಾದನೆ ಮುಗಿಯದ ರಕ್ತಚರಿತ್ರೆ: ಬಿ ಶ್ರೀಪಾದ್ ಭಟ್
ಕೇರಳದಲ್ಲಿ ಕೋವಿಡ್ ಒಂದನೇ ಅಲೆಯ ಸಮಯದಿಂದಲೂ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಕೆಲಸ ಮಾಡುತ್ತ ಬಂದಿದ್ದಾರೆ.
ಅಂತಹ ಜಿದ್ದಾಜಿದ್ದಿಯಿಲ್ಲದ ಕರ್ನಾಟಕದಲ್ಲೂ ಇದು ಸಾಧ್ಯವಾಗಬೇಕಿತ್ತು. ಇಲ್ಲಿ ಸಿದ್ದರಾಮಯ್ಯರ ಅನುಭವ, ಕುಮಾರಸ್ವಾಮಿ ಹೊಂದಾಣಿಕೆ ಎಲ್ಲವೂ ಇವೆ ಮತ್ತು ತಮಿಳುನಾಡಿನಂತೆ ಇಲ್ಲೇನೂ ಹಲವು ಪಕ್ಷಗಳಿಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ, ಎಚ್.ಕೆ. ಪಾಟೀಲ್, ರಮೇಶ್‌ಕುಮಾರ್ ಕೃಷ್ಣ ಬೈರೆಗೌಡ…ಅಷ್ಟೇಕೆ ಕೆಂದ್ರ ಬಿಜೆಪಿಯಿಂದ ಸಾಕಷ್ಟು ದುರುದ್ದೇಶದ ಕಿರುಕುಳ ಅನುಭವಿಸಿದ ಡಿ.ಕೆ. ಶಿವಕುಮಾರ್ ಕೂಡ ಸರ್ಕಾರದೊಡನೆ ಸಹಕರಿಸುತ್ತಿದ್ದರು.
ಸಿಪಿಐ, ಸಿಪಿಎಂ, ರೈತಸಂಘ ಎಲ್ಲವನ್ನೂ ಒಳಗೊಂಡ ಸಮಿತಿ ಮಾಡಬಹುದಿತ್ತು. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಬಹುದಾದರೂ, ಕೂಗುಮಾರಿಗಳಂತಿರುವ ಸಂಘ ಮೂಲದ ಬಿಜೆಪಿ ಶಾಸಕರು ಮತ್ತು ರಾಜಕೀಯ ನಾಯಕರು ಇದಕ್ಕೆ ಅಡ್ಡಿ ಮಾಡುತ್ತಿದ್ದರು. ಬಿ.ಎಲ್ ಸಂತೋಷ್ ಪಡೆಯ ಕಾರಣಕ್ಕೇ ಇಂತದ್ದೆಲ್ಲ ಇಲ್ಲಿ ಅಸಾಧ್ಯ. ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಮುಂತಾದವರು ಸಹಜವಾಗಿಯೇ ಈ ನಡೆ ಸ್ವಾಗತಿಸುತ್ತಿದ್ದರು.
ಇದನ್ನೂ ಓದಿ: ಜನಾಕ್ರೋಶದ ಸ್ಫೋಟ: ರಾಜ್ಯಾದ್ಯಂತ ಮನೆಗಳಲ್ಲಿಯೇ ಭುಗಿಲೆದ್ದ ಪ್ರತಿಭಟನೆಗಳು
ಆದರೆ ಈಗೇನಾಗುತ್ತಿದೆ ನೋಡಿ. ಸರ್ಕಾರಕ್ಕೆ ಸಲಹೆ ರೂಪದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಚ್.ಕೆ. ಪಾಟೀಲ, ಕುಮಾರಸ್ವಾಮಿ ಹೇಳಿಕೆ ನೀಡಿದರೆ, ಅದನ್ನು ಸ್ವಾಗತಿಸುವ ಬದಕು ಬಿಜೆಪಿಯ ಕೆಲವರು ಕೊಂಕು ಹೇಳಿಕೆಗಳನ್ನು ಕೊಡುತ್ತಾರೆ.
ಇಲ್ಲಿ ಇನ್ನೊಂದು ಕಾರಣವಿದೆ. ದೇಶದ ಕಾಂಗ್ರೆಸ್ ನಾಯಕರ ಪೈಕಿ ಮೋದಿಯ ಆಡಳಿತವನ್ನು ಯಾವ ಮುಲಾಜೂ ಇಲ್ಲದೇ ಕಟುವಾಗಿ ಟೀಕಿಸುತ್ತ ಬಂದ ಸಿದ್ದರಾಮಯ್ಯರು ಇಲ್ಲಿನ ಸಂಘಪರಿವಾರದ ಶಾಸಕರಿಗೆ ಇಷ್ಟವಾಗುವುದು ಕಷ್ಟ.
ಕೇಂದ್ರದಲ್ಲಿ ಸರ್ವಾಧಿಕಾರ!
ಕೇಂದ್ರ ಸರ್ಕಾರ ಕೋವಿಡ್ ಮೊದಲ ಸಂದರ್ಭದಲ್ಲೇ ಸರ್ವಪಕ್ಷ ಸಮಿತಿ ಮಾಡಿ ಸಲಹೆಗಳನ್ನು ಕೇಳಿದ್ದರೆ, ತಜ್ಞರ ವೈಜ್ಞಾನಿಕ ನೆಲೆಗಟ್ಟಿನ ಸಲಹೆಗಳಿಗೆ ಮಾನ್ಯತೆ ನೀಡಿದ್ದರೆ ಕೋವಿಡ್ ಎರಡನೆ ಅಲೆ ಈ ಮಟ್ಟದ ವಿಕೋಪಕ್ಕೆ ಹೋಗುತ್ತಿರಲಿಲ್ಲ.
ಇದನ್ನೂ ಓದಿ: #SaveLakshadweep-ಬಿಜೆಪಿಯ ದ್ವೇಷ ರಾಜಕೀಯಕ್ಕೆ ಹೊಸ ಬಲಿ; ಲಕ್ಷದ್ವೀಪದಲ್ಲಿ ಏನಾಗುತ್ತಿದೆ?
ಆದರೆ ಅಲ್ಲಿರುವುದು ಸರ್ವಾಧಿಕಾರ. ಎಲ್ಲವನ್ನೂ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಪ್ರಧಾನಿ ಸುತ್ತಲಿನ ಭಟ್ಟಂಗಿ ಅಧಿಕಾರಿಗಳೇ ನಿರ್ಣಯ ಮಾಡುವುದರಿಂದ ಅಲ್ಲಿ ಸರ್ವಪಕ್ಷ ಸಮಿತಿ ಅಸಾಧ್ಯದ ಮಾತೇ. ರಾಹುಲ್ ಗಾಂಧಿ ಮೊದಲ ಅಲೆ ಸಂದರ್ಭದಲ್ಲಿ, ಯಾವ ಹಮ್ಮೂ ಇಲ್ಲದೇ ವಿವಿಧ ತಜ್ಞರ ಜೊತೆ ಚರ್ಚಿಸಿ ಗ್ರಾಫ್‌ಗಳ ಮೂಲಕ ಮುಂದಿನ ಅಪಾಯವನ್ನು ವಿವರಿಸುತ್ತ ಬಂದಾಗ, ಬಿಜೆಪಿಯ ಹಲವು ನಾಯಕರು ಮತ್ತು ಐಟಿಸೆಲ್ ಪಡ್ಡೆಗಳು ಅವರನ್ನು ಗೇಲಿ ಮಾಡುತ್ತ ಬಂದಿದ್ದವು.
ರಾಹುಲ್ ವ್ಯಕ್ತಪಡಿಸಿದ ಆತಂಕ ನಿಜವಾಗುತ್ತ ಬಂತು. ರಾಹುಲ್ ಗಾಂಧಿ ನೀಡುತ್ತಿದ್ದುದು ತಜ್ಞರ ಜೊತೆ ಚರ್ಚಿಸಿ ನೀಡುತ್ತಿದ್ದ ಸಲಹೆಗಳಾಗಿದ್ದವು. ಅಲ್ಲಿ ಎನ್‌ಡಿಎ ಮಿತ್ರ ಪಕ್ಷಗಳ ಮಾತಿಗೇ ಬೆಲೆಯಿಲ್ಲ, ಇನ್ನು ಸರ್ವಪಕ್ಷ ಸಮಿತಿ ಕನಸಿನ ಮಾತೇ ಸರಿ.
ಇದನ್ನೂ ಓದಿ: ಟೂಲ್‌ಕಿಟ್-ಟ್ವೀಟ್ ಪ್ರಕರಣ: ಟ್ವಿಟರ್ ಕಚೇರಿಗೆ ಹೋದ ಪೊಲೀಸರು, ಯಾರೂ ಸಿಗದೆ ವಾಪಸ್


