Homeಮುಖಪುಟ#SaveLakshadweep-ಬಿಜೆಪಿಯ ದ್ವೇಷ ರಾಜಕೀಯಕ್ಕೆ ಹೊಸ ಬಲಿ; ಲಕ್ಷದ್ವೀಪದಲ್ಲಿ ಏನಾಗುತ್ತಿದೆ?

#SaveLakshadweep-ಬಿಜೆಪಿಯ ದ್ವೇಷ ರಾಜಕೀಯಕ್ಕೆ ಹೊಸ ಬಲಿ; ಲಕ್ಷದ್ವೀಪದಲ್ಲಿ ಏನಾಗುತ್ತಿದೆ?

ಬಿಜೆಪಿಯ ದ್ವೇಷದ ಬಾವುಟ ಹಿಡಿದ ಆಡಳಿತಾಧಿಕಾರಿ ದ್ವೀಪವನ್ನು ಶೀಘ್ರದಲ್ಲೇ ದೊಡ್ಡ ಜೈಲನ್ನಾಗಿ ಪರಿವರ್ತಿಸುವ ಹಂತದಲ್ಲಿದ್ದಾರೆ.

- Advertisement -
- Advertisement -

ಕಳೆದ ವರ್ಷ ಭಾರತವು ಕೊರೊನಾ ಒಂದನೆ ಅಲೆಯಿಂದ ತತ್ತರಿಸುತ್ತಿದ್ದರೆ, ಇತ್ತ ಒಂದೇ ಒಂದು ಕೊರೊನಾ ಪ್ರಕರಣ ದಾಖಲಾಗದ ಪ್ರದೇಶವಾಗಿ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ ಹೊರಹೊಮ್ಮಿತ್ತು. ಸಹಜ ಪ್ರಾಕೃತಿಕ ಸೌಂಧರ್ಯವನ್ನು ಇನ್ನೂ ತನ್ನಲ್ಲಿ ಹಾಗೆ ಉಳಿಸಿಕೊಂಡಿರುವ ಲಕ್ಷದ್ವೀಪದವು ಕೊರನಾ ಎರಡನೆ ಅಲೆಗೆ ತುತ್ತಾಗಿ ಸಂಕಷ್ಟಕ್ಕೆ ಒಳಗಾಗಿದೆ. ಇದಕ್ಕೆ ಕಾರಣ ಲಕ್ಷದ್ವೀಪಕ್ಕೆ ಆಡಳಿತಾಧಿಕಾರಿಯಾಗಿ ಆಗಮಿಸಿದ ಗುಜರಾತಿನ ಮಾಜಿ ಗೃಹ ಮಂತ್ರಿ ಪ್ರಫುಲ್‌ ಖೋಡಾ ಪಟೇಲ್‌ ಎಂದು ಅಲ್ಲಿನ ನಿವಾಸಿಗಳು ಆರೋಪಿಸುತ್ತಿದ್ದಾರೆ.

ದ್ವೀಪವಾಸಿಗಳ ಈ ಆರೋಪ ಇಷ್ಟಕ್ಕೆ ಮುಗಿಯುವುದಿಲ್ಲ, ಶತಮಾನಗಳ ಸಾಂಸ್ಕೃತಿಕ ಪರಂಪರೆಯನ್ನು ಕೂಡಾ ಈ ಆಡಳಿತಾಧಿಕಾರಿ ನಾಶಪಡಿಸುತ್ತಿದ್ದಾರೆ ಎಂದೂ ಅವರು ದೂರುತ್ತಿದ್ದಾರೆ. ಜನವಿರೋಧಿ ನೀತಿಗಳನ್ನು ಪ್ರಫುಲ್ ಪಟೇಲ್‌ ಹೇರುತ್ತಿದ್ದು ಅವರನ್ನು ವಾಪಾಸು ಕರೆಸಿಕೊಳ್ಳಬೇಕೆಂದು ಅವರು ಕೇಂದ್ರ ಸರ್ಕಾರದೊಂದಿಗೆ ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ‘ಮುಗ್ಧ ಜನರ ರಕ್ತವನ್ನು ಮೊಸಳೆ ಕಣ್ಣೀರಿನಿಂದ ಅಳಿಸಲಾಗುವುದಿಲ್ಲ’ – #CrocodileTears ಟ್ರೆಂಡ್‌!

ಎಲ್ಲವೂ ಶುರುವಾಗಿದ್ದು ಡಿಸೆಂಬರ್ 5, 2020 ರಂದು ಪ್ರಫುಲ್ ಪಟೇಲ್‌ ಲಕ್ಷದ್ವೀಪದ 35 ನೇ ಆಡಳಿತಾಧಿಕಾರಿಯಾಗಿ ರಾಷ್ಟ್ರಪತಿ ರಾಮಾಥ್‌ ಕೋವಿಂದ್ ನೇಮಿಸಿದ ನಂತರ. ಈ ಹಿಂದಿನ ಆಡಳಿತಾಧಿಕಾರಿ ದಿನೇಶ್ವರ್‌ ಶರ್ಮಾ ಅವರ ನಿಧನದಿಂದಾಗಿ ತೆರವುಗೊಂಡ ಹುದ್ದೆಗೆ ಪ್ರಫುಲ್‌ ಅವರನ್ನು ಲಕ್ಷದ್ವೀಪದ ಆಡಳಿತಾಧಿಕಾರಿಯಾಗಿ ನೇಮಿಸಲಾಗಿತ್ತು.

ಪ್ರಫುಲ್ ಪಟೇಲ್‌

ಅವರು ನೇಮಕವಾಗಿ ಮೊದಲು ಮಾಡಿದ ಕೆಲಸವೇನೆಂದರೆ, ದ್ವೀಪದಲ್ಲಿ ಸಾಂಕ್ರಮಿಕ ಹರಡದಂತೆ ತಡೆಯಲು ಹೇರಿದ್ದ ‘ಪ್ರಮಾಣಿತ ಕಾರ್ಯಾಚರಣಾ ವಿಧಾನ’ವನ್ನು ಏಕಪಕ್ಷೀಯವಾಗಿ ಬದಲಾಯಿಸಿದ್ದು. ಈ ಹಿಂದೆ ದ್ವೀಪ ಪ್ರವೇಶಿಸುವವರು ಕೇರಳದಲ್ಲಿ ನಿರ್ದಿಷ್ಟ ದಿನದವರೆಗೆ ಕ್ವಾರೆಂಟೈನ್‌ನಲ್ಲಿ ಇದ್ದು ದ್ವೀಪ ಪ್ರವೇಶಿಸಬೇಕಿತ್ತು. ಆದರೆ ನಿಯಮಗಳ ಬದಲಾವಣೆಯ ಪರಿಣಾಮ 2020 ರವರೆಗೂ ಒಂದೇ ಒಂದು ಪ್ರಕರಣ ವರದಿಯಾಗದ ದ್ವೀಪದಲ್ಲಿ ಇಂದು 6,611 ಜನರಿಗೆ ಕೊರೊನಾ ತಗುಲಿದೆ. 64 ಸಾವಿರ ಜನಸಂಖ್ಯೆ ಇರುವ ದ್ವೀಪದಲ್ಲಿ ಈಗಾಗಲೆ 10% ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಅಧೀಕೃತ ವರದಿ ಹೇಳುತ್ತಿದೆ. ಇದುವರೆಗಿನ ಮಾಹಿತಿಯಂತೆ 24 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಇಷ್ಟೇ ಅಲ್ಲದೆ ಶತಮಾನಗಳ ಇತಿಹಾಸವಿರುವ ಅಲ್ಲಿನ ಸಂಸ್ಕೃತಿಯನ್ನು ಕೂಡಾ ಹೊಸ ಆಡಳಿತಾಧಿಕಾರಿ ನಾಶ ಪಡಿಸುತ್ತಿದ್ದಾರೆ ಎಂದು ದ್ವೀಪವಾಸಿಗಳ ಆರೋಪವಾಗಿದೆ. ಒಟ್ಟು 36 ದ್ವೀಪಗಳಿರುವ ಲಕ್ಷದ್ವೀಪದಲ್ಲಿ ಕೇವಲ 10 ದ್ವೀಪಗಳಲ್ಲಿ ಮಾತ್ರ ಜನವಾಸವಿದ್ದು, ‘ಕವರತ್ತಿ’ ಇಲ್ಲಿನ ಪ್ರಧಾನ ದ್ವೀಪವಾಗಿದ್ದು ಆಡಳಿತ ಕೇಂದ್ರವಾಗಿದೆ. 99% ಮುಸ್ಲಿಮರೆ ವಾಸವಾಗಿರುವ ಈ ದ್ವೀಪದಲ್ಲಿ ಇದೀಗ ಗೋ ಹತ್ಯೆಯನ್ನು ನಿಷೇಧಿಸಲಾಗಿದೆ.

ಶಾಲೆಗಳಲ್ಲಿನ ಊಟದ ಮೆನುವಿನಿಂದ ಮಾಂಸಾಹಾರವನ್ನು ಕಿತ್ತು ಹಾಕಲಾಗಿದೆ. ಮಧ್ಯಾಹ್ನದ ಊಟ ತಯಾರಿಸುವವರನ್ನು ಮತ್ತು ಕ್ರೀಡಾ ಶಿಕ್ಷಕರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಸುಮಾರು 30 ಕ್ಕಿಂತ ಹೆಚ್ಚು ಅಂಗನವಾಡಿಗಳನ್ನೂ ಮುಚ್ಚಲಾಗಿದೆ. ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗದಲ್ಲಿದ್ದ ದ್ವೀಪವಾಸಿಗಳನ್ನು ವಜಾ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆಯೊಂದರಲ್ಲೇ ಸುಮಾರು 190 ದ್ವೀಪವಾಸಿಗಳನ್ನು ವಜಾಮಾಡಲಾಗಿದೆ.

ಇದನ್ನೂ ಓದಿ: ಕೋವಿಡ್ ಕಾಲಘಟ್ಟದಲ್ಲಿ ಶಿಕ್ಷಣದ ಆರ್ಥಿಕತೆಯ ಬಗ್ಗೆ ಅಸಡ್ಡೆ ತೋರುತ್ತಿರುವ ಸರ್ಕಾರ!

ದ್ವೀಪದಲ್ಲಿ ಹೆಸರಿಗಷ್ಟೆ ಒಂದು ಪೊಲೀಸ್ ಠಾಣೆಯಿದ್ದು, ಯಾವುದೆ ಅಪರಾಧಗಳು ನಡೆಯದೆ ಇರುವುದರಿಂದ ಅಲ್ಲಿನ ಜೈಲುಗಳು ಖಾಲಿ ಬಿದ್ದು ಬೀಗ ಹಾಕಲ್ಪಟ್ಟಿದ್ದವು. ಆದರೆ ಅಲ್ಲೀಗ ಏಕಾಏಕಿಯಾಗಿ ಗೂಂಡಾ ಕಾಯ್ದೆಗೆ ಸಮಾನವಾದ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಪ್ರಫುಲ್ ಪಟೇಲ್‌ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ದ್ವೀಪದಲ್ಲಿ ಸಿಎಎ ವಿರುದ್ದ ಘೋಷಣೆಗಳಿರುವ ಪೋಸ್ಟರ್‌ಗಳು ಮತ್ತು ಬೋರ್ಡ್‌ಗನ್ನು ಹಾಕಿರುವ ಹಲವರನ್ನು ಬಂಧಿಲಾಗಿದೆ ಎಂದು ಆರೋಪಿಸಲಾಗಿದೆ.

ಒಂದೇ ಒಂದು ಕ್ರಿಮಿನಲ್ ಕೃತ್ಯಗಳಿಲ್ಲದ ದ್ವೀಪದಲ್ಲಿ ಗೂಂಡಾ ಕಾಯ್ದೆ ಯಾಕೆ ಎಂದು ಕುತೂಹಲದಿಂದ ಪ್ರಶ್ನಿಸುತ್ತಾರೆ ಅಲ್ಲಿನ ನಿವಾಸಿಗಳು.

ದ್ವೀಪದ ಪ್ರಧಾನ ಉದ್ಯೋಗ ಮೀನುಗಾರಿಕೆಯಾಗಿದೆ. ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ತೊಡಗಿರುವ ಇವರ ಮೀನುಗಾರಿಕಾ ಶೆಡ್ಡುಗಳನ್ನು ಯಾವುದೆ ಮುನ್ಸೂಚನೆಯಿಲ್ಲದೆ ಕಳೆದ ರಂಜಾನಿನ ಸಮಯದಲ್ಲಿ ನೆಲಸಮ ಮಾಡಲಾಗಿದೆ ಎಂದು ದ್ವೀಪವಾಸಿಗಳು ಕಣ್ಣೀರು ಹಾಕುತ್ತಿದ್ದಾರೆ.

ಇಷ್ಟೇ ಅಲ್ಲದೆ ದ್ವೀಪದಲ್ಲಿನ ಡೈರಿ ಪಾರ್ಮ್‌ಗಳನ್ನು ಮುಚ್ಚಿಲಾಗುತ್ತಿದ್ದು, ಗುಜರಾತ್‌ ಮೂಲದ ಅಮೂಲ್‌ ಉತ್ಪನ್ನಗಳು ದ್ವೀಪದ ಕಡೆ ಆಗಮಿಸುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಇದುವರೆಗೂ ಮದ್ಯಕ್ಕೆ ದ್ವೀಪದಲ್ಲಿ ನಿಷೇಧವಿದ್ದರೂ, ಪ್ರವಾಸೋದ್ಯಮದ ಕಾರಣಕ್ಕೆ ರೆಸಾರ್ಟ್‌‌ಗಳಲ್ಲಿ ಮಾತ್ರ ಅನುಮತಿಯಿತ್ತು. ಆದರೆ ಇದೀಗ ದ್ವೀಪದಾದ್ಯಂತ ಹಲವು ಮದ್ಯದಂಗಡಿಗಳನ್ನು ತೆರೆಯಲಾಗುತ್ತಿದೆ.

ಇದನ್ನೂ ಓದಿ: ಯುಪಿ ಸಿಎಂ ಆದಿತ್ಯನಾಥ್ ಭೇಟಿಗೆ ತೆರಳಿದ್ದ ವೈದ್ಯರಿಗೆ ಅವಕಾಶ ನಿರಾಕರಣೆ!

ಕೆಲವೆ ಗಂಟೆಗಳಲ್ಲಿ ಸುತ್ತಿ ಮುಗಿಸಬಹುದಾದ, ಬೈಕು ಮತ್ತು ಸಣ್ಣ ವಾಹನಗಳು ಮಾತ್ರವೆ ಇರುವ ದ್ವೀಪದಲ್ಲಿ ಏಳು ಮೀಟರ್‌ನ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ಬಹುಕೋಟಿಯ ಕಂಪೆನಿಗಳ ರೆಸಾರ್ಟ್‌ಗಳಿಗೆ ದಾರಿ ಮಾಡಿಕೊಡಲಾಗುತ್ತಿದೆ ಎನ್ನಲಾಗಿದೆ.

ಆಡಳಿತವು ಅಲ್ಲಿನ ನಿವಾಸಿಗಳಿಗೆ ತಮ್ಮದೆ ನೆಲದ ಹಕ್ಕನ್ನು ಇಲ್ಲವಾಗಿಸುವ ‘ಲಕ್ಷದ್ವೀಪ್ ಡೆವಲಪ್‌ಮೆಂಟ್‌ ಅಥಾರಿಟಿ ರೆಗ್ಯುಲೇಷನ್‌ ಡ್ರಾಫ್ಟ್‌’ ಎಂಬ ಹೊಸ ಮಸೂದೆಯನ್ನು ಪರಿಚಯಿಸಲಾಗುತ್ತಿದೆ. “ಆಡಳಿತವು ತಮಗೆ ಬೇಕಾದಾಗ ಭೂಮಿಯನ್ನು ಸ್ವಾಧೀನ ಮಾಡಬಹುದು. ಅದರ ಪರಿಹಾರ ಕೊಡಬೇಕೋ ಅಥವಾ ಬೇಡವೊ ಎಂಬುವುದನ್ನು ಕೂಡಾ ಆಡಳಿತವೆ ತೀರ್ಮಾನ ಮಾಡುವ ಕರಾಳ ಮಸೂದೆಯಾಗಿದೆ ಇದು” ಎಂದು ನಿವಾಸಿಗಳು ಆರೋಪಿಸುತ್ತಾರೆ. ಇದರ ವಿರುದ್ದ ದ್ವೀಪದಲ್ಲಿ ಹೆಚ್ಚಿನ ಪ್ರತಿಭಟನೆಗಳು ಕೂಡಾ ಈಗಾಗಲೆ ನಡೆದಿದೆ.

ದ್ವೀಪವಾಸಿಗಳು ಇದುವರೆಗೂ ತಮಗೆ ಹತ್ತಿರುವಿರುವ ಕೇರಳದ ಬೇಪೂರ್‌ ಬಂದರಿನಿಂದ ವ್ಯವಹಾರಗಳನ್ನು ನಡೆಸುತ್ತಿದ್ದರು. ಆದರೆ ಇದೀಗ ಅದನ್ನು ಬದಲಾಯಿಸಿ, ದೂರದ ಮಂಗಳೂರಿನ ಬಂದರಿನೊಂದಿಗೆ ಮಾತ್ರ ವ್ಯವಹರಿಸಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಇಷ್ಟೇ ಅಲ್ಲದೆ ಜನಸಂಖ್ಯಾ ಸ್ಪೋಟವಿಲ್ಲದ ದ್ವೀಪದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ನಿಯಮವನ್ನೂ ಹೇರಲಾಗಿದೆ.

ಅಲ್ಲಿನ ಏಕೈಕ ಸಂಸದ, ಎನ್‌ಸಿಪಿ ಪಕ್ಷದ ಮುಹಮ್ಮದ್ ಫೈಸಲ್‌ ಹೇಳುವಂತೆ, “ ಲಕ್ಷದ್ವೀಪದ ಜನತೆ ಬೇಡಿಕೆ ಇಡದ ಹಲವು ವಿಚಾರಗಳನ್ನು ಆಡಳಿತಾಧಿಕಾರಿ ಪ್ರಫುಲ್ ಪಟೇಲ್‌ ಅವರ ವೈಯಕ್ತಿಕ ಹಿತಾಸಕ್ತಿಗಾಗಿ ಜಾರಿಗೆ ತರುತ್ತಿದ್ದಾರೆ. ಡೈರಿ ಫಾರ್ಮ್‌‌ಗಳನ್ನು ಮುಚ್ಚಿ ಅಮೂಲ್‌ ಉತ್ಪನ್ನಗಳನ್ನು ಮಾರಾಟ ಮಾಡಲು ಬೇಕಾದ ಕಾನೂನು ಜಾರಿಗೆ ತರಲಾಗುತ್ತಿದೆ. ಮದ್ಯದ ಅಂಗಡಿ ತೆರೆಯಲು ಕೂಡಾ ಅವರ ವೈಯಕ್ತಿಯ ಹಿತಾಸಕ್ತಿಯೆ ಕಾರಣ. ಅವರು ಈ ಹಿಂದೆ ಆಡಳಿತಾಧಿಕಾರಿ ಆಗಿದ್ದಾಗ ದಾದರ್‌ ಮತ್ತು ನಗರ್‌ ಹವೇಲಿಯಲ್ಲು ಇಂತಹದೆ ಕೆಲಸವನ್ನು ಮಾಡಿದ್ದರು, ಇದೀಗ ಇಲ್ಲಿ ಕೂಡಾ ಅದನ್ನೇ ಮುಂದುವರೆಸಿದ್ದಾರೆ. ಆಡಳಿತಾಧಿಕಾರಿಯ ಜನವಿರೋಧಿ ನೀತಿಗಳನ್ನು ಕೇಂದ್ರಕ್ಕೆ ಹಲವು ಬಾರಿ ತಿಳಿಸಿದ್ದೇನೆ. ಇದೀಗ ಅವರನ್ನು ವಾಪಾಸು ಕರೆಸುವಂತೆ ಎಂದು ಕೇಂದ್ರಕ್ಕೆ ಒತ್ತಡ ಹೇರಲಿದ್ದೇವೆ”

ಇದನ್ನೂ ಓದಿ: ಇಸ್ರೇಲ್‌ನ ಬಯೋತ್ಪಾದನೆ ಮುಗಿಯದ ರಕ್ತಚರಿತ್ರೆ: ಬಿ ಶ್ರೀಪಾದ್ ಭಟ್

ದ್ವೀಪವಾಸಿಗಳು ಇದನ್ನೆಲ್ಲಾ ವಿರೋಧಿಸಿ ಹಲವು ಪ್ರತಿಭಟನೆ ಮಾಡಿದ್ದಾರೆ. ಇದೀಗ ಕೊರೊನಾ ಉಲ್ಬಣವಾಗಿರುವುದರಿಂದ ದ್ವೀಪದಲ್ಲಿ ಲಾಕ್‌ಡೌನ್‌ ಹೇರಲಾಗಿದ್ದು, ಸರ್ಕಾರ ಮಾತ್ರ ತನ್ನ ಜನವಿರೋಧಿ ನೀತಿಗಳ ಜಾರಿ ಮಾಡುತ್ತಲೆ ಇದೆ. ಆದರೆ ಇದನ್ನು ಪ್ರತಿಭಟಿಸಲು ಕೂಡಾ ಸಾಧ್ಯವಾಗುತ್ತಿಲ್ಲ ಎಂದು ದ್ವೀಪದ ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಲಕ್ಷದ್ವೀಪದ ಶತಮಾನಗಳ ಸಾಂಸ್ಕೃತಿಕ, ಆರ್ಥಿಕ ಮತ್ತು ಪ್ರಜಾಸತ್ತಾತ್ಮಕ ಜೀವನ ಶೈಲಿಯನ್ನು ಹತ್ತಿಕ್ಕಲಾಗುತ್ತಿದೆ. ಬಿಜೆಪಿಯ ದ್ವೇಷದ ಬಾವುಟ ಹಿಡಿದ ಆಡಳಿತಾಧಿಕಾರಿ ದ್ವೀಪವನ್ನು ಶೀಘ್ರದಲ್ಲೇ ದೊಡ್ಡ ಜೈಲನ್ನಾಗಿ ಪರಿವರ್ತಿಸುವ ಹಂತದಲ್ಲಿದ್ದಾರೆ.

ಲಕ್ಷದ್ವೀಪದ ಜನತೆಯ ಸಂಕಷ್ಟಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ ಕೇರಳದ ಹಲವು ರಾಜಕೀಯ ಪಕ್ಷಗಳು, ಸಿನಿಮಾ ನಟರು, ಸಾಮಾಜಿಕ ಕಾರ್ಯಕರ್ತರು ದ್ವೀಪವಾಸಿಗಳ ಬೆಂಬಲಕ್ಕೆ ನಿಂತಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡಾ ದ್ವೀಪವಾಸಿಗಳೊಂದಿಗೆ ನಿಲ್ಲುವುದಾಗಿ ಘೋಷಿಸಿದ್ದಾರೆ.

“ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ದ್ವೀಪದ ಸಾಂಪ್ರದಾಯಿಕ ಜೀವನ ಮತ್ತು ಸಂಸ್ಕೃತಿಯನ್ನು ನಾಶಮಾಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಆರೋಪಿಸಿ ಕೇರಳದ ಸಿಪಿಐ(ಎಂ) ರಾಜ್ಯಸಭಾ ಸಂಸದ ಎಲಮರಂ ಕರೀಮ್ ಅವರು ರಾಷ್ಟ್ರಪತಿಗೆ ಪತ್ರ ಬರೆದಿದ್ದು, ಪಟೇಲ್ ಅವರನ್ನು ತುರ್ತಾಗಿ ವಾಪಸ್ ಕರೆಸಿಕೊಳ್ಳುವಂತೆ ಕೋರಿದ್ದಾರೆ.

ಇದನ್ನೂ ಓದಿ: ದೇಶಕ್ಕೆ ಕಾಲಿಟ್ಟ ಯೆಲ್ಲೋ ಫಂಗಸ್: ದೆಹಲಿಯಲ್ಲಿ ಮೊದಲ ಪ್ರಕರಣ ಪತ್ತೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗಾಳಿಪಟ-2: ಯೋಗರಾಜ ಭಟ್ರ ಲಾಜಿಕ್‌ಗಳನ್ನು ‘ದೇವ್ಲೆ’ ಬಲ್ಲ!

ನೀವು ಬರಹಗಾರರಾಗಿದ್ದೀರಾ? ಹೌದಾದರೆ, ನೀವು ಆರಂಭಿಕ ದಿನಗಳಲ್ಲಿ ಬರೆದ ಒಂದು ಬರಹವನ್ನು ಮತ್ತೆ ಓದಿ ನೋಡಿ. ಎಷ್ಟೊಂದು ಪೇವಲವಾಗಿ ಬರೆದಿದ್ದೇನಲ್ಲ ಅಂತ ನಿಮಗೆಯೇ ಅನಿಸಲೂಬಹುದು. ಕಾಲ ಉರುಳಿದಂತೆ, ನಮ್ಮ ಅನುಭವಗಳು ದಟ್ಟವಾದಂತೆ ಬರವಣಿಗೆಯೂ...