ಕೊರೊನಾ ವಿರುದ್ಧದ ಹೋರಾಟಕ್ಕೆ ಸರ್ವ ಪಕ್ಷ ಸಮಿತಿಯನ್ನು ರಚಿಸಿದ ಸ್ಟಾಲಿನ್‌ ಸರ್ಕಾರ: ದ್ವೇಷ ರಾಜಕಾರಣಕ್ಕೆ ತಾತ್ಕಾಲಿಕ ತೆರೆ

ರಾಜಕೀಯವೆಂದರೆ ಭಾರತದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ಕೆಸರೆರೆಚಾಟ. ಆರೋಪ ಪ್ರತ್ಯಾರೋಪ, ಶಾಸಕರ, ಸಂಸದರ ಖರೀದಿಯಾಗಿ ಮಾರ್ಪಾಡುಗೊಂಡು ಹಲವು ವರ್ಷಗಳು ಕಳೆದಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದಷ್ಟೇ ಜವಾಬ್ಧಾರಿಯನ್ನು ವಿರೋಧಪಕ್ಷಗಳು ಹೊಂದಿವೆ ಎಂದು ಸಂವಿಧಾನ ಹೇಳುತ್ತದೆ. ಆದರೆ ವಾಸ್ತವದಲ್ಲಿ ಆಡಳಿತ ಪಕ್ಷವು ವಿರೋಧ ಪಕ್ಷವನ್ನು ನಿರ್ನಾಮ ಮಾಡುವುದನ್ನೇ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವನ್ನಾಗಿಸಿಕೊಂಡಿರುವುದನ್ನು ಕಳೆದ ಅನೇಕ ವರ್ಷಗಳಿಂದ ನಾವು ನೋಡುತ್ತಿದ್ದೇವೆ.

ಇತ್ತೀಚೆಗೆ ಕೊನೆಗೊಂಡ ಪಶ್ಚಿಮ ಬಂಗಾಳ ಚುನಾವಣೆಯ ಸಂದರ್ಭದಲ್ಲದಂತೂ ಆಡಳಿತ-ವಿರೋಧಪಕ್ಷಗಳ ಜಟಾಪಟಿ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿ ಪರಸ್ಪರ ಹೊಡೆದಾಟ, ಹತ್ಯೆಯಲ್ಲಿ ಕೊನೆಗೊಂಡಿದೆ. ಜಗತ್ತಿನ ಬೇರೆ ಬೇರೆ ಗಣತಂತ್ರಗಳಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಒಟ್ಟಾಗಿ ಕೆಲಸ ಮಾಡುವುದನ್ನು ಹಿಂದೆ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಭಾರತದಲ್ಲಿ ಈ ತತ್ವದ ಒಂದಂಶದ ಸಾಧ್ಯತೆಯನ್ನು ಸದ್ಯದ ಪರಿಸ್ಥಿತಿಯಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ರಾಜಕೀಯ ಜಟಾಪಟಿಗಳ ಅಖಾಡವೆಂದೇ ಕರೆಯಲಾಗುವ ತಮಿಳುನಾಡಿನಲ್ಲಂತೂ ಇದರ ಸಾಧ್ಯತೆಯನ್ನು ಯಾವ ರಾಜಕೀಯ ಪಂಡಿತರು ಊಹಿಸಲು ಸಾಧ್ಯವಿಲ್ಲ.

ಒಂದನ್ನೊಂದು ಸದಾ ದ್ವೇಷಿಸುತ್ತ, ಪರಸ್ಪರ ಕಚ್ಚಾಡುತ್ತ ಮೂರು ದಶಕಗಳನ್ನೇ ಕಳೆದಿರುವ ಎರಡು ಕಟ್ಟರ್‌ ದ್ರಾವಿಡ ಪಕ್ಷಗಳ ರಾಜಕೀಯ ಮೇಲಾಟಕ್ಕೆ ತಮಿಳುನಾಡಿನ ಜನ ಇದುವರೆಗೆ ಸಾಕ್ಷಿಯಾಗಿದ್ದರೆ. ಆದರೆ ಅಪರೂಪದ ಬೆಳವಣಿಗೆಯೆಂಬಂತೆ ಇತ್ತೀಚಿನ ಚುನಾವಣೆಯವರೆಗೂ ಸೆಣೆಸಿದ ಪಕ್ಷಗಳು ಸದ್ಯಕ್ಕೆ ಕದನ ವಿರಾಮ ಘೋಷಿಸಿದಂತಿದೆ. ಇದಕ್ಕೆ ಸಾಕ್ಷಿಯೆಂಬಂತೆ ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಕೋವಿಡ್‌ ವಿರುದ್ಧ ಹೋರಾಡಲು ಸರ್ವಪಕ್ಷಗಳ ಶಾಸಕರನ್ನೊಳಗೊಂಡ ಸಮಿತಿಯೊಂದನ್ನು ರಚಿಸಿದ್ದಾರೆ. ಆಶ್ಚರ್ಯವೆಂದರೆ ಈ ಸಮಿತಿಯಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷದ ಬದ್ಧ ವೈರಿ ಎಐಡಿಎಂಕೆ ಪಕ್ಷದ ಶಾಸಕರೂ ಸೇರಿದ್ದಾರೆ.

ಇದನ್ನೂ ಓದಿ: ‘ತೂತುಕುಡಿ ಹತ್ಯಾಕಾಂಡ’ ಸಂತ್ರಸ್ತರನ್ನು ಸರ್ಕಾರಿ ಉದ್ಯೋಗಕ್ಕೆ ನೇಮಕ ಮಾಡಿದ ತಮಿಳುನಾಡು ಸಿಎಂ

ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಮತ್ತು ಜಯಲಲಿತಾ ಸತತ ಮೂರು ದಶಕಗಳ ಕಾಲ ಹಗೆತನವನ್ನು ಸಾಧಿಸಿಕೊಂಡು ಬಂದಿದ್ದರು. ಅದೇ ಹಗೆತನವನ್ನು ಮುಂದುವರೆಸುತ್ತಲೇ ತಮಿಳುನಾಡು ರಾಜಕೀಯದಿಂದ ಕಣ್ಮರೆಯಾದರು. ಜಯಲಲಿತಾ ಮತ್ತು ಕರುಣಾನಿಧಿ ನಡುವಿನ ರಾಜಕೀಯ ದ್ವೇಷ ಎಷ್ಟು ವಿಪರೀತಕ್ಕೆ ಹೋಗಿತ್ತೆಂದರೆ ಜಯಲಲಿತಾ ಸರ್ಕಾರ 2001 ರಲ್ಲಿ ಡಿಎಂಕೆ ನಾಯಕ ಕರುಣಾನಿಧಿಯವರನ್ನು ರಾಜಕೀಯ ಉದ್ಧೇಶದಿಂದ ಬಂಧಿಸಿತ್ತು. ಇದಕ್ಕೂ ಮೊದಲು 1999 ರಲ್ಲಿ ಜಯಲಲಿತಾ ಅವರನ್ನು ಕರುಣಾನಿಧಿ ಸರ್ಕಾರ ಜೈಲಿಗಟ್ಟಿತ್ತು.

1984 ರಿಂದ ಮೂರು ದಶಕಗಳ ಪ್ರತಿಕಾರ ರಾಜಕಾರಣದಲ್ಲಿ ತೊಡಗಿದ್ದ ಈ ಇಬ್ಬರು ತಮಿಳುನಾಡು ಕಂಡ ಪ್ರಭಾವಿ ನಾಯಕರುಗಳು. ತಮ್ಮ ರಾಜಕೀಯ ಜೀವನುದ್ದಕ್ಕೂ ಎಲ್ಲಿಯೂ ಒಮ್ಮೆ ಕೂಡ ಸೌಹಾರ್ದ ಭೇಟಿಗೂ ಸಿದ್ಧರಾಗಿರಲಿಲ್ಲ. ಅದೇ ಹಗೆ, ರಾಜಕೀಯ ವೈಷಮ್ಯ, ಕೆಚ್ಚಿನೊಂದಿಗೆ ರಾಜಕೀಯ ಜೀವನ ಕೊನೆಗೊಳಿಸಿದರು. ಸದ್ಯ ಇವರ ಉತ್ತರಾಧಿಕಾರಿಗಳು ಈ ಐತಿಹಾಸಿಕ ಕದನಕ್ಕೆ ತಾತ್ಕಾಲಿಕ ವಿರಾಮವನ್ನು ನೀಡಲು ಮುಂದಾಗಿರುವಂತೆ ಕಾಣುತ್ತಿದೆ. ಕಳೆದ ದಶಕಗಳಲ್ಲಿ ಕಾವೇರಿಯ ಪರಸ್ಪರ ವಿರುದ್ಧ ದಂಡೆಗಳಷ್ಟು ದೂರನ ಸರಿದಿದ್ದ ಎರಡು ದ್ರಾವಿಡ ಪಕ್ಷಗಳು ಸಮನ್ವಯದ ಹಾದಿ ಹಿಡಿದಂತಿದೆ. ಅಥವಾ ಸದ್ಯದ ಕೋವಿಡ್‌ ಸಾಂಕ್ರಾಮಿಕದ ಸಂದರ್ಭವನ್ನು ರಾಜಕೀಯ ಕಿತ್ತಾಟಕ್ಕೆ ಬಳಸಿಕೊಳ್ಳದಿರುವ ಒಪ್ಪಂದವೊಂದಕ್ಕೆ ಬಂದಂತಿದೆ.

ಎರಡು ದ್ರಾವಿಡ ಪಕ್ಷಗಳ ಸಮನ್ವಯತೆಗೆ ಮೊತ್ತಮೊದಲ ಪ್ರಯತ್ನವಾಗಿ ಎಂ.ಕೆ. ಸ್ಟಾಲಿನ್‌ ಮುನ್ನುಡಿ ಬರೆದಿದ್ದಾರೆ. ಕೋವಿಡ್ ಸಾಂಕ್ರಾಮಿಕವನ್ನು ಎದುರಿಸಲು ವಿರೋಧಪಕ್ಷದ ಸಹಕಾರವನ್ನು ಕೋರಿದ್ದಾರೆ. ಜೊತೆಗೆ ಕೊರೊನ ಎದುರಿಸಲು ಸರ್ಕಾರಕ್ಕೆ ಸಲಹಾ ಸಮಿತಿಯೊಂದನ್ನು ರಚಿಸಿ ವಿರೋಧಪಕ್ಷದ ಶಾಸಕರನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ. ಇದಕ್ಕೆ ಎಐಡಿಎಂಕೆ ಪಕ್ಷದ ಶಾಸಕರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಕೋವಿಡ್‌ ಎರಡನೇ ಅಲೆಯನ್ನು ಎದುರಿಸಲು ತಮಿಳುನಾಡು ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರವನ್ನೂ ನೀಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ‘ಎಚ್ಚರಿಕೆ; ಬೇಕಾಬಿಟ್ಟಿ ಬಿಸಿ ನೀರಿನ ಆವಿ (ಸ್ಟೀಮ್‌) ಪಡೆಯದಿರಿ’-ತಮಿಳುನಾಡು ವೈದ್ಯಕೀಯ ಸಚಿವ

ಮೇ 13, 2021 ರಂದು ಚೆನ್ನೈನ ತಮಿಳುನಾಡು ಸೆಕ್ರೇಟ್ರಿಯೇಟ್‌ ಭವನದಲ್ಲಿ ನಡೆದ ಸರ್ವ ಪಕ್ಷ ಸಭೆಯ ನಡಾವಳಿಯಂತೆ ಮೇ 16, 2021 ರಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಅಧಿಕೃತವಾಗಿ ಸರ್ವಪಕ್ಷ ಸಲಹಾ ಸಮಿತಿಯನ್ನು ರಚಿಸಿದ್ದಾರೆ. ಸಮಿತಿಯು ಸರ್ಕಾರಕ್ಕೆ ಕೋವಿಡ್‌ ಸಂಬಂಧಿಸಿದ ಕಾನೂನು ಜಾರಿಗೊಳಿಸಲು, ಕೊರೋನಾ ಎರಡನೇ ಅಲೆಯ ನಿಯಂತ್ರಣಕ್ಕೆ ಅಗತ್ಯ ಸಲಹೆಗಳನ್ನು ನೀಡಲಿದೆ. ಕೋವಿಡ್‌ ವಿರುದ್ಧದ ಹೋರಾಟದ ತಂತ್ರ ರೂಪಿಸಲು ಸರ್ವಪಕ್ಷ ಸಲಹಾ ಸಮಿತಿ ಸ್ಟಾಲಿನ್‌ ನೇತೃತ್ವದ ಸರ್ಕಾರಕ್ಕೆ ನೆರವಾಗಲಿದೆ.

ಈ ಸರ್ವಪಕ್ಷ ಸಮಿತಿಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅಧ್ಯಕ್ಷರಾಗಿದ್ದು, ಇತರ ಪಕ್ಷದ ಶಾಸಕರು ಸೇರಿದಂತೆ 13 ಜನ ಸದಸ್ಯರನ್ನು ಒಳಗೊಂಡಿದೆ. ಎಐಡಿಎಂಕೆ ನಾಯಕ ಮತ್ತು ಮಾಜಿ ಆರೋಗ್ಯ ಮಂತ್ರಿ ಸಿ. ವಿಜಯಭಾಸ್ಕರ್‌ ಸಮಿತಿಯ ಮುಖ್ಯ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಡಿಎಂಕೆ ಮತ್ತುಎಐಡಿಎಂಕೆ ಪಕ್ಷಗಳಲ್ಲದೇ ತಮಿಳುನಾಡು ವಿಧಾನಸಭೆಯಲ್ಲಿ ಶಾಸಕರನ್ನು ಹೊಂದಿರುವ ಇತರ ಪಕ್ಷಗಳಿಂದಲೂ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಸಮಿತಿಯ ಇತರ ಸದಸ್ಯರೆಂದರೆ ಡಿಎಂಕೆ ಶಾಸಕ ಡಾ. ಎನಿಲಾನ್‌, ಪಿಎಂಕೆ ಶಾಸಕ ಜಿ.ಕೆ. ಮಣಿ, ಕಾಂಗ್ರೆಸ್‌ ಪಕ್ಷದ ಎ. ಎಮ್‌. ಮಣಿರತ್ನಮ್‌, ಪಿಡಿಎಂಕೆ ಪಕ್ಷದ ಡಾ. ಸಾದನ್‌ ತಿರುಮಲೈಕುಮಾರ್‌, ಬಿಜೆಪಿಯ ನೈನಾರ್‌ ನಾಗೇಂದ್ರನ್‌, ವಿಸಿಕೆ ಪಕ್ಷದ ಎಸ್ ಎಸ್‌ ಬಾಲಾಜಿ, ಸಿಪಿಐ ಪಕ್ಷದ ಟಿ. ರಾಮಚಂದ್ರನ್‌, ಎಂಎಂಕೆ ಪಕ್ಷದ ಡಾ. ಜವಹಾರುಲ್ಲಾ, ಕೆಎಮ್‌ಡಿಕೆ ಪಕ್ಷದ ಆರ್‌ ಈಶ್ವರನ್‌, ಟಿವಿಕೆಯ ಟಿ. ವೆಲ್ಮುರುಗನ್‌, ಪಿಬಿ ಪಕ್ಷದ ಪೂವಲ್‌ ಜಗನ್‌ ಮೂರ್ತಿ ಮತ್ತು ಸಿಪಿಎಮ್‌ ಶಾಸಕ ವಿಪಿ ನಾಗಲ್‌ ಮಳ್ಳಿ.

ಇದನ್ನೂ ಓದಿ: ತಮಿಳುನಾಡು: ಸ್ಟಾಲಿನ್ ಸಂಪುಟದಲ್ಲಿ ಪುರುಷರದೇ ದರ್ಬಾರು – ಮಹಿಳೆಯರಿಗೆ ಕನಿಷ್ಠ ಪ್ರಾತಿನಿಧ್ಯ!

ಕೋವಿಡ್‌ ಸಲಹಾ ಸಮಿತಿಯು ನಿಯಮಿತವಾಗಿ ಸಭೆ ಸೇರಿ ಸರ್ಕಾರದೊಂದಿಗೆ ಕೆಲಸ ಮಾಡಲಿದೆ. ತುರ್ತು ಸಂದರ್ಭಗಳಲ್ಲಿ ತಮಿಳುನಾಡು ಆರೋಗ್ಯ ಇಲಾಖೆಯೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಲಿದೆ. ಮುಖ್ಯವಾಗಿ ಸಮಿತಿಯ ವಿಶೇಷವೆಂದರೆ ಆರೋಗ್ಯ ಸೇವೆಗಳ ಅನುಭವವಿರುವರು, ವೃತ್ತಿಯಿಂದ ವೈದ್ಯರನೇಕರು ಈ ಸಮಿತಿಯಲ್ಲಿ ಸದಸ್ಯರಾಗಿದ್ದು ಕಾಲಕಾಲಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಗೆ ತಮ್ಮ ರಾಜಕೀಯ ಭಿನ್ನಾಭಿಪ್ರಾಯ ಮರೆತು ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.

ತಮಿಳುನಾಡಿನಲ್ಲಿ ಸದ್ಯಕ್ಕೆ ಪ್ರತಿನಿತ್ಯ ಸರಾಸರಿ 33 ಸಾವಿರ ಹೊಸ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗುತ್ತಿವೆ. ವಿಧಾನಸಭೆ ಚುನಾವಣೆಯ ಪರಿಣಾಮವಾಗಿ ಕೊರೊನಾ ಸೋಂಕು ರಾಜ್ಯದಲ್ಲಿ ವಿಪರೀತವಾಗಿ ಹರಡಿದ್ದು ಸೋಂಕಿತರ ಸಂಖ್ಯೆ ಇನ್ನು ಹೆಚ್ಚಿರುವ ಸಾಧ್ಯತೆಯಿದೆ. ನೂತನವಾಗಿ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಎಂ.ಕೆ. ಸ್ಟಾಲಿನ್‌ಗೆ ಕೊರೋನಾ ಎರಡನೇ ಅಲೆ ಸವಾಲಾಗಿ ಪರಿಣಮಿಸಿದೆ.

ಕೊರೊನಾ ನಿಯಂತ್ರಣದ ಜೊತೆ ಜೊತೆಗೆ ತಮ್ಮ ವ್ಯಯಕ್ತಿಕ ವರ್ಚಸ್ಸು, ಪಕ್ಷದ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತ ಕರುಣಾನಿಧಿಯ ಸಮರ್ಥ ಉತ್ತರಾಧಿಕಾರಿಯಾಗಿ ತಮಿಳುನಾಡು ರಾಜಕೀಯದಲ್ಲಿ ನೆಲೆ ನಿಲ್ಲುವ ಬಹುದೊಡ್ಡ ಸವಾಲು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಮುಂದಿದೆ. ಈ ಹಂತದಲ್ಲಿ ವಿರೋಧಪಕ್ಷಗಳಿಂದ ಟೀಕೆ, ಪ್ರತಿಭಟನೆ, ಸರ್ಕಾರದ ವಿರುದ್ಧದ ಅಪಪ್ರಚಾರವನ್ನು ತಡೆಯಲು ರಾಜಕೀಯ ಅಸ್ತ್ರವಾಗಿ ಸಲಹಾ ಸಮಿತಿಯನ್ನು ನೇಮಿಸಿರುವ ಸಾಧ್ಯತೆಯಿದೆ. ಆದರೆ, ಸಮಿತಿಗೆ ಅಂತಹ ಯಾವುದೇ ಮಹತ್ವವನ್ನು ಸರ್ಕಾರ ನೀಡುವುದಿಲ್ಲವೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ದಿನ ನಿತ್ಯದ ರಾಜಕೀಯ ಕೆಸರೆರಚಾಟ ಏನೇ ಇರಲಿ ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಆಡಳಿತ ಮತ್ತು ವಿರೋಧಪಕ್ಷಗಳು ಒಟ್ಟಾಗಿ ಜನರನ್ನು ಸೋಂಕಿನಿಂದ ಉಂಟಾಗುವ ಸಾವು ನೋವು, ಲಾಕ್‌ಡೌನ್‌ನಿಂದ ತಲೆದೋರುವ ಬಡತನ, ನಿರುದ್ಯೋಗದ ಸಮಸ್ಯೆಗಳಿಂದ ಕಾಪಾಡಬೇಕು. ರಾಜಕೀಯ ತಂತ್ರವೆಂದುಕೊಂಡರೂ ಸ್ಟಾಲಿನ್‌ ಸೌಹಾರ್ದ ನಡೆಯ ಸಮನ್ವಯ ಸಮಿತಿ ಕರ್ನಾಟಕ ಸೇರಿದಂತೆ ಭಾರತ ಸರ್ಕಾರಕ್ಕೂ ಮಾದರಿ. ಕೊರೊನಾ ಮಹಾ ದುರಂತದ ಈ ದುರಿತ ಕಾಲದಲ್ಲಿ ಚುನಾವಣೆ, ರಾಜಕೀಯಗಳನ್ನು ಮರೆತು ನಮ್ಮ ನಾಯಕರು, ಜನಪ್ರತಿನಿಧಿಗಳು ಮತ್ಸದಿತನವನ್ನು ತೋರಬೇಕಿರುವುದು ದೇಶಕ್ಕೆ ಈ ಹೊತ್ತು ಅಗತ್ಯ ಮತ್ತು ಅನಿವಾರ್ಯ.


ಇದನ್ನೂ ಓದಿ: ‘ಟೂಲ್‌ಕಿಟ್-ಲೆಟರ್‌ಹೆಡ್ ಫೋರ್ಜರಿ ಪ್ರಕರಣ: ಬಿಜೆಪಿಯ ರಮಣಸಿಂಗ್, ಸಂಬಿತ್ ಪಾತ್ರಾ ವಿರುದ್ಧ ಎಫ್‌ಐಆರ್ ದಾಖಲು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ರಾಜೇಶ್ ಹೆಬ್ಬಾರ್
+ posts

LEAVE A REPLY

Please enter your comment!
Please enter your name here