ತಮಿಳುನಾಡಿನಲ್ಲಿ ಹೊಸದಾಗಿ ರಚನೆಗೊಂಡ M.K.ಸ್ಟಾಲಿನ್ ನೇತೃತ್ವದ ಸರ್ಕಾರದಲ್ಲಿ ಗೀತಾ ಮೋಹನ್ ಮತ್ತು ಕಯಲ್ವಿಳಿ ಸೆಲ್ವರಾಜ್ ಎಂಬ ಕೇವಲ ಇಬ್ಬರು ಮಹಿಳೆಯರು ಮಾತ್ರ ಸಚಿವ ಸ್ಥಾನ ಪಡೆದಿದ್ದಾರೆ. ಪ್ರಗತಿಪರ ಪಕ್ಷವೆಂದು ಕರೆದುಕೊಳ್ಳುವ ಡಿಎಂಕೆ ಮಹಿಳೆಯರಿಗೇಕೆ ಹೆಚ್ಚಿನ ಸ್ಥಾನಮಾನ ನೀಡಿಲ್ಲ ಎಂದು ದಿ ಕ್ವಿಂಟ್ ವಿವರವಾದ ವರದಿ ಮಾಡಿದೆ. ನಾನುಗೌರಿ ಓದುಗರಿಗಾಗಿ ಅದನ್ನು ಕನ್ನಡದಲ್ಲಿ ಪ್ರಕಟಿಸುತ್ತಿದ್ದೇವೆ

ಕೃಪೆ: ಸ್ಮಿತಾ ಕೆ.ಎಸ್ (ದಿ ಕ್ವಿಂಟ್)

ಕನ್ನಡಕ್ಕೆ – ರಾಜೇಶ್ ಹೆಬ್ಬಾರ್

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನವೇ ಎಂ.ಕೆ. ಸ್ಟಾಲಿನ್ ರಾಜ್ಯಾದ್ಯಂತ ಸರ್ಕಾರಿ ಸಾರಿಗೆ ವಾಹನದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಘೋಷಿಸಿದ್ದಾರೆ. ದೇಶಾದ್ಯಂತ ಈ ಯೋಜನೆ ಕುರಿತು ಪ್ರಶಂಸೆಗಳು ಕೇಳಿ ಬರುತ್ತಿವೆ. ಆದರೆ ಈ ಹಿಂದೆ ಜಯಲಲಿತಾರಂತಹ ಪ್ರಬಲ ಮಹಿಳೆ ಮುಖ್ಯಮಂತ್ರಿಯಾಗಿದ್ದ ರಾಜ್ಯದಲ್ಲಿ ಎಂ.ಕೆ ಸ್ಟಾಲಿನ್ ತಮ್ಮ ಮಂತ್ರಿಮಂಡಳದಲ್ಲಿ ಮಹಿಳೆಯರಿಗೆ ಕೊಟ್ಟ ಪ್ರಾತಿನಿಧ್ಯವೆಷ್ಟು? ಸ್ಟಾಲಿನ್ ರವರೆ ನಿಮ್ಮ ಸರ್ಕಾರದಲ್ಲಿ ಮಹಿಳಾ ಮಂತ್ರಿಗಳೆಲ್ಲಿ ಎಂಬ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ.

ಮೇ 7 ರಂದು ಚೆನ್ನೈನ ತಮಿಳು ನಾಡು ರಾಜಭವನದಲ್ಲಿ ಎಂ.ಕೆ. ಸ್ಟಾಲಿನ್ 33 ಮಂತ್ರಿ ಮಂಡಳದ ಸಹುದ್ಯೋಗಿಗಳೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಈ ಸಂದರ್ಭದಲ್ಲಿ ಮಂತ್ರಿಮಂಡಳದ ಸದಸ್ಯರ ಪಟ್ಟಿಯಲ್ಲಿದ್ದುದು ಕೇವಲ ಇಬ್ಬರು ಮಹಿಳೆಯರ ಹೆಸರು ಮಾತ್ರ. ಅದು ಗೀತಾ ಮೋಹನ್ ಮತ್ತು ಕಯಲ್ವಿಳಿ ಸೆಲ್ವರಾಜ್.

“ಈ ಮಂತ್ರಿಮಂಡಳ ಪುರುಷರ ಕೂಟ. ನಮಗೇನು ಆಶ್ಚರ್ಯ ಇಲ್ಲ ಯಾಕೆಂದರೆ ದ್ರಾವಿಡಿಯನ್ ಪಕ್ಷದಿಂದ ಮಹಿಳೆಯರಿಗೆ ನ್ಯಾಯೋಚಿತ ಪ್ರಾತಿನಿಧ್ಯ ದೊರೆಯುತ್ತದೆ ಎಂಬ ಯಾವ ನಿರೀಕ್ಷೆಯು ನಮಗಿರಲಿಲ್ಲ” ಎನ್ನುತ್ತಾರೆ ದಲಿತ ಬರಹಗಾರ್ತಿ ಶಾಲಿನ್ ಲಾರೆನ್ಸ್..

ತಮಿಳಾನಾಡು ವಿಧಾನಸಭೆಯಲ್ಲಿ ಕೇವಲ 5% ಮಹಿಳಾ ಜನಪ್ರತಿನಿಧಿಗಳು

ತಮಿಳು ನಾಡು ವಿಧಾನಸಭೆಗೆ 2016 ರ ವಿಧಾನಸಭಾ ಚುನಾವಣೆಯಲ್ಲಿ 21 ಜನ ಮಹಿಳೆಯರು ಶಾಸಕಿಯರಾಗಿ ಆಯ್ಕೆಯಾಗಿದ್ದರು. 2021 ರ ಚುನಾವಣೆಯಲ್ಲಿ ಆ ಪ್ರಮಾಣ 12 ಕ್ಕೆ ಕುಸಿತ ಕಂಡಿದೆ. ಹಿಂದೆ 9% ರಷ್ಟಿದ್ದ ಮಹಿಳೆಯರ ಪ್ರಾತಿನಿಧ್ಯ ಈ ಚುನಾವಣೆಯಲ್ಲಿ 5% ಕ್ಕೆ ಕುಸಿದಿದೆ.

2021 ತಮಿಳು ನಾಡು ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 12 ಜನ ಮಹಿಳೆಯರು ಆಯ್ಕೆಯಾಗಿದ್ದಾರೆ. ಅವರಲ್ಲಿ ಏಳು ಜನ ಡಿಎಂಕೆ ಒಕ್ಕೂಟದಿಂದ ಗೆದ್ದಿದ್ದರೆ ಉಳಿದ ಐದು ಜನರು ಎಐಡಿಎಂಕೆ ಒಕ್ಕೂಟದಿಂದ ಆಯ್ಕೆಯಾಗಿದ್ದಾರೆ. ಇವರಲ್ಲಿ ಬಹುತೇಕರು ಈ ಹಿಂದೆ ಅಧಿಕಾರದಲ್ಲಿದ್ದವರು ಅಥವಾ ಚುನಾಯಿತ ಪ್ರತಿನಿಧಿಗಳೇ ಆಗಿರುವುದು ವಿಶೇಷ.

ಇನ್ನೊಂದು ಮಹತ್ವದ ಗಮನಿಸಬೇಕಾದ ಅಂಶ 2021 ರ ಚುನಾವಣೆಯಲ್ಲಿ ಆಡಳಿತಪಕ್ಷ, ವಿರೋಧ ಪಕ್ಷವೂ ಸೇರಿದಂತೆ ಕೇವಲ 10% ರಷ್ಟು ಮಹಿಳೆಯರು ಮಾತ್ರ ಚುನಾವಣೆಯ ಕಣದಲ್ಲಿ ಸ್ಪರ್ಧಿಸಿದ್ದಿದು. ಮಕ್ಕಳ ನಿಧಿ‌ ಮಯ್ಯಮ್ ಪಕ್ಷದ ಅಧ್ಯಕ್ಷ, ನಟ ಕಮಲ್ ಹಾಸನ್ ಸೇರಿದಂತೆ ಇನ್ನಿತಿರರು ತಮಿಳುನಾಡು ರಾಜಕೀಯದ ಪ್ರಮುಖ ಪಕ್ಷಗಳಲ್ಲಿ ಮಹಿಳೆಯರಿಗೆ ನೀಡಲಾಗುತ್ತಿರುವ ಸ್ಥಾನಮಾನದ ಕುರಿತು ಸತತವಾಗಿ ಟೀಕೆ ಮಾಡುತ್ತಲೇ ಬಂದಿದ್ದಾರೆ. ಆದರೂ ಒಟ್ಟಾರೆಯಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸಿದ ಮಹಿಳೆಯರ ಪ್ರಮಾಣ ಮಾತ್ರ ಸರಿ ಸುಮಾರು ಶೇ. 8 ಕ್ಕಿಂತಲೂ ಕಡಿಮೆ.

2021 ರ ತಮಿಳುನಾಡು ಚುನಾವಣೆಯ ಮತಗಳಿಕೆಯಲ್ಲಿ ಮೂರನೇ ಸ್ಥಾನ ಪಡೆದ ನಮ್ಮ ತಮಿಳರ್ ಕಚ್ಚಿ (NTK) ಪಕ್ಷ ಮಾತ್ರ ಶೇ. 50 ಕ್ಕೂ ಹೆಚ್ಚು ಮಹಿಳೆಯರಿಗೆ ಚುನಾವಣಾ ಟಿಕೇಟ್ ನೀಡಿತ್ತು. ಆದರೆ ಇವರಲ್ಲಿ ಒಬ್ಬರೇ ಒಬ್ಬ ಮಹಿಳೆ ಕೂಡ ವಿಧಾನಸಭೆಗೆ ಆಯ್ಕೆಯಾಗದಿರುವುದು ವಿಪರ್ಯಾಸ.

ಏಕೈಕ ಮಹಿಳಾ ಶಾಸಕಿಯೂ ಇಲ್ಲದ ಚೆನ್ನೈ ನಗರ

ಡಿಎಂಕೆ ಪಕ್ಷ ಚೆನ್ನೈ ನಗರವನ್ನು ಏಕಪಕ್ಷೀಯವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆಯಾದರೂ ಮಹಿಳಾ ಪ್ರಾತಿನಿಧ್ಯದ ವಿಚಾರಕ್ಕೆ ಬಂದರೆ ಅದರದ್ದು ಶೂನ್ಯ ಸಾಧನೆಯೇ. ಇಡೀ ಚೆನ್ನೈ ನಗರಕ್ಕೆ ಒಬ್ಬರೇ ಒಬ್ಬ ಮಹಿಳೆಯರಿಗೂ ಡಿಎಂಕೆ ಚುನಾವಣೆ ಟಿಕೆಟ್ ನೀಡಲು ಮನಸ್ಸು ಮಾಡಲಿಲ್ಲ.

ಚೆನ್ನೈ ನಗರದಲ್ಲಿ ಇಂದು ಒಬ್ಬರೆ ಒಬ್ಬ ಮಹಿಳಾ ಶಾಸಕಿ ಇರದೇ ಇರುವುದು ಕಠುಸತ್ಯ. ಬಿಜೆಪಿ ನಾಯಕಿ ಖುಷ್ಬೂ ಸುಂದರ್, ಎಐಡಿಎಂಕೆಯ ಗೋಕುಲ ಇಂದಿರಾ, ವಲಾರ್ ಮತಿ ಮುಂತಾದ ಘಟಾನುಘಟಿಗಳು 2021ರ ಚುನಾವಣಾ ಅಖಾಡದಲ್ಲಿದ್ದರಾದರೂ ಇವರ್ಯಾರು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ.

ಮಾಜಿ ಮುಖ್ಯಮಂತ್ರಿ ಜಯಲಲಿತಾರವರೇ ಚೆನ್ನೈ ನಗರದ ಕೊನೆಯ ಶಾಸಕಿ. ಅದು 2016 ರ ಚುನವಾಣೆಯಲ್ಲಿ ಜಯಲಲಿತಾ ಆಯ್ಕೆಯಾಗಿದ್ದೆ ಕೊನೆ. ಅದಾದ ನಂತರ ನಡೆದ ಯಾವುದೇ ಉಪಚುನಾವಣೆ, ಮತ್ತು 2021 ರ ವಿಧಾನಸಭೆ ಚುನಾವಣೆಯಲ್ಲಿ ಚೆನ್ನೈ ಮಹಾನಗರದಿಂದ ಮಹಿಳೆಯರಿಗೆ ವಿಧಾನಸಭೆಗೆ ಆಯ್ಕೆಯಾಗುವ ಅವಕಾಶ ಒದಗಿಬರಲಿಲ್ಲ.

ತಮಿಳುನಾಡಿನಲ್ಲಿ ಮಹಿಳೆಯರ ಅಧಿಕಾರಕ್ಕೆ ಎರಡೇ ದಾರಿಗಳು :
ಒಂದು ತೋರಿಕೆಯ ಸಮಾನತೆ, ಪ್ರಾತಿನಿಧ್ಯ. ಇನ್ನೊಂದು ಕುಟುಂಬ ರಾಜಕಾರಣ.

ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಎಲ್ ಮುರುಗನ್ ಅವರನ್ನು ಸೋಲಿಸಿ ಧರ್ಮಪುರಂ ಕ್ಷೇತ್ರದಿಂದ ಆಯ್ಕೆಯಾದ ಕಯಲ್ವಿಳಿ ಸೆಲ್ವರಾಜ್ ಅವರಿಗೆ ಡಿಎಂಕೆ ಪಕ್ಷ ಆದಿ ದ್ರಾವಿಡರ ಅಭಿವೃದ್ಧಿ ಖಾತೆಯನ್ನು ನೀಡಿದೆ. ಇನ್ನು ಮತ್ತೊಬ್ಬ ಮಹಿಳಾ ಮಂತ್ರಿ ಗೀತಾ ಮೋಹನ್ ಗೆ ಲಭಿಸಿದ್ದು ರೂಢಿಯಂತೆ ಸಮಾಜ ಕಲ್ಯಾಣ ಮತ್ತು ಮಹಿಳಾ ಸಬಲೀಕರಣ ಖಾತೆಗಳು.

ಯಾಕೆ ಮಹಿಳಾ ಮಂತ್ರಿಯರಿಗೆ ಎಂದಿನಂತೆ ಆದಿ ದ್ರಾವಿಡರ ಅಭಿವೃದ್ಧಿ, ಮಹಿಳಾ ಸಬಲೀಕರಣ ಖಾತೆಯನ್ನೇ ಕೊಡಲಾಗುತ್ತದೆ? ಇದರಿಂದ ಹೊರತಾದ ಮುಖ್ಯವೆನಿಸಿಕೊಂಡ ಖಾತೆಗಳೆಲ್ಲ ಪರುಷ ನಾಯಕರಿಗೆ ಯಾಕೆ ಮೀಸಲು? ಯಾಕೆಂದರೆ ಇದೊಂದು ಕಣ್ಣೊರೆಸುವ ತಂತ್ರ ಮತ್ತು ಸಚಿವ ಸಂಪುಟದಲ್ಲಿ ಮಹಿಳೆಯರನ್ನು ಇದ್ದು ಇರದಂತೆ ಮಾಡುವ ರೂಢಿಗತ ಸಂಪ್ರದಾಯ ಎಂದು ಲೇಖಕಿ ಶಾಲಿನ್ ಲಾರೆನ್ಸ್ ಅಭಿಪ್ರಾಯ ಪಡುತ್ತಾರೆ.

ರಾಜಕೀಯ ವಿಶ್ಲೇಷಕ ಸುಮಂತ್ ರಾಮನ್ ಹೇಳುವಂತೆ ಭಾರತದ ಇತರ ರಾಜ್ಯಗಳಂತೆ ತಮಿಳುನಾಡಿನಲ್ಲೂ ಕುಟುಂಬ ಅಥವಾ ಗಂಡನ ಪ್ರಭಾವವಿಲ್ಲದೇ ಮಹಿಳೆಯರು ರಾಜಕೀಯವಾಗಿ ಬೆಳೆಯಲು ಸಾಧ್ಯವಿಲ್ಲ. ಅವರು ಇದಕ್ಕೆ ಗೀತಾ ಮೋಹನ್ ಉದಾಹರಣೆಯನ್ನು ಕೊಡುತ್ತಾರೆ. ಗೀತಾ ಮೋಹನ್ ಕುಟುಂಬ ಕಳೆದ 3 ವರ್ಷಗಳಿಂದ ಜಿಲ್ಲೆಯ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆದಿದೆ. ರಾಜಕೀಯ ಹಿನ್ನೆಲೆಯಿರುವುದರಿಂದ ಗೀತಾ ಮೋಹನ್ ಚುನಾವಣೆಯನ್ನು ಗೆದ್ದಿದ್ದಾರೆ ಎಂದು ಸುಮಂತ್ ರಾಮನ್ ಅಭಿಪ್ರಾಯ ಪಡುತ್ತಾರೆ.

ಇನ್ನು ಮುಂದುವರೆದು ಸಮಂತ್ ರಾಮನ್ ಅವರು ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಮೇಲೆ ಕುಟುಂಬ ರಾಜಕಾರಣದ ಆರೋಪ ಮಾಡುತ್ತಾರೆ. ಸಂಸದೆ ಕನಿಮೋಳಿ ಸ್ಟಾಲಿನ್ ಕುಟುಂಬಕ್ಕೆ ಸಂಬಂಧ ಪಟ್ಟವರು. ಇನ್ನೊಬ್ಬ ಡಿಎಂಕೆ ಸಂಸದೆ ತಮಿಳಚ್ಚಿ ತಂಗಪಾಂಡಿಯನ್
ಕೂಡ ಡಿಎಂಕೆಯ ಪ್ರಭಾವಶಾಲಿ ನಾಯಕ ಮತ್ತು ಸಚಿವ ತಂಗನ್ ತೆನ್ನರಸು ಅವರ ಸಹೋದರಿಯಾಗಿದ್ದಾರೆ. ಹಾಗಾದರೆ ಡಿಎಂಕೆಯಲ್ಲಿ ಸಾಮಾನ್ಯ ಮಹಿಳೆಯರಿಗೆ ಸ್ಥಾನಮಾನ ಎಲ್ಲಿ ಇದೆ ಎಂದು ಸುಮಂತ್ ರಾಮನ್ ಪ್ರಶ್ನಿಸುತ್ತಾರೆ.

ಜಯಲಲಿತಾ ಮಹಿಳಾಪರ, ಆದರೆ ಎಐಡಿಎಂಕೆಗಿಲ್ಲದ ಮಹಿಳಾ ಪರ ಧೋರಣೆ

ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ 2016 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳು ಪುರುಷ ಅಭ್ಯರ್ಥಿಗಳಿಂತ 3.6 ಲಕ್ಷ ಅಧಿಕ ಮತವನ್ನು ಪಡೆದು ಇತಿಹಾಸ ನಿರ್ಮಿಸಿದ್ದರು. ಇದರ ಪರಿಣಾಮವಾಗಿ ಜಯಲಲಿತಾ ನೇತೃತ್ವದ ಎಐಡಿಎಂಕೆ ಪ್ರಚಂಡ ಬಹುಮತದಿಂದ ಚುನಾವಣೆಯನ್ನು ಗೆದ್ದುಕೊಂಡಿತ್ತು.

ರಾಜಕೀಯ ವಿಶ್ಲೇಷಕ ಸುಮಂತ್ ರಾಮನ್ ಹೇಳುವಂತೆ ಎಐಡಿಎಂಕೆ ಪಕ್ಷ ಮಹಿಳಾ ಪರ ಧೋರಣೆ ಹೊಂದಿಲ್ಲ. ಬದಲಾಗಿ ಅಂದಿನ ಪಕ್ಷದ ಪ್ರಶ್ನಾತೀತ ನಾಯಕಿ ಜಯಲಲಿತಾ ಅವರ ಪ್ರಭಾವ ಮತ್ತು ದೃಷ್ಟಿಕೋನದಿಂದ ಮಹಿಳಾ ಸಬಲಿಕರಣಕ್ಕೆ ಸಂಬಂಧಿಸಿದ ಯೋಜನೆ ಜಾರಿಯಾಯಿತು. ಜಯಲಲಿತಾ ಪ್ರಭಾವದಿಂದಷ್ಟೆ ಎಐಡಿಎಂಕೆ ಪಕ್ಷದಲ್ಲಿ ಬಹಳಷ್ಟು ಮಹಿಳಾ ನಾಯಕಿಯರು ಬೆಳೆಯಲು ಸಾಧ್ಯವಾಯಿತು ಅದು ಪಕ್ಷ ಕೊಟ್ಟ ಸ್ಥಾನಮಾನವಲ್ಲ..

ಜಯಲಲಿತಾ ಅವರಿಗಿದ್ದ ಸಾಮರ್ಥ್ಯವೆಂದರೆ ಹೆಚ್ಚು ಪರಿಚಿತವಲ್ಲದ ಸಾಮಾನ್ಯ ಮಹಿಳೆಯನ್ನು ಮಂತ್ರಿಯನ್ನಾಗಿಸಿ ಅವರನ್ನು ರಾಜಕೀಯವಾಗಿ ಬೆಳೆಸುವುದು. ಜಯಲಲಿತಾ ನೇತೃತ್ವದ ಸಚಿವ ಸಂಪುಟದಲ್ಲಿ ನಾಲ್ವರು ಮಹಿಳಾ ಮಂತ್ರಿಗಳಿದ್ದರು. ಅವರು ಪ್ರಭಾವಿ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು. ಆದರೆ ಇದನ್ನು ಇಂದಿನ ಡಿಎಂಕೆ ಮತ್ತು ಎಐಡಿಎಂಕೆ ಪಕ್ಷಗಳಿಂ ನಿರೀಕ್ಷಿಸಲು ಸಾಧ್ಯವಿಲ್ಲ.

ಹಿರಿಯ ಪತ್ರಕರ್ತೆ ಸಂಧ್ಯಾ ರವಿಶಂಕರ್ ಹೇಳುವಂತೆ ಮಾಜಿ ಮುಖ್ಯಮಂತ್ರಿ ಜಯಲಲಿತಾ ಜಾರಿಗೊಳಿಸಿದ ಮಹಿಳೆಯರಿಗೆ ಚಿನ್ನ ಕೊಡುವ ಯೋಜನೆ (Gold scheme)
ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿತು. ಪ್ರಸ್ತುತ ಸ್ಟಾಲಿನ್ ನೇತ್ರತ್ವದ ಡಿಎಂಕೆ ಸರ್ಕಾರದ ಮುಂದಿರುವ ಸವಾಲೆಂದರೆ ಮಹಿಳೆಯರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸುವುದು ಮತ್ತು ಅವರ ಸುರಕ್ಷತೆಗೆ ಒತ್ತು ನೀಡುವುದು. ಎಂ. ಕೆ. ಸ್ಟಾಲಿನ್ ಸರ್ಕಾರ ಇದೆರಡು ಅಂಶಗಳಿಗೆ ಆದ್ಯತೆ ನೀಡಬೇಕು ಎಂದು.

ಯುವತಿಯರ ಉದ್ಯೋಗಾವಕಾಶಕ್ಕೆ ಅದರಲ್ಲೂ ತಮ್ಮ ಜಿಲ್ಲೆಯನ್ನು ತೊರೆದು ಇತರ ಜಿಲ್ಲೆಗಳಿಗೆ ಉದ್ಯೋಗ ಅರಸಿ ಹೋಗುವ ಯುವತಿಯರ ಸುರಕ್ಷತೆ ಕುರಿತು ಈ ಸರ್ಕಾರ ಗಮನಹರಿಸಬೇಕಿದೆ. ಹೊರಜಿಲ್ಲೆಗಳಲ್ಲಿ ಕೆಲಸ ಮಾಡುವ ಯುವತಿಯರಿಗಾಗಿ ಹಾಸ್ಟೆಲ್ ವ್ಯವಸ್ಥೆ ಮತ್ತು ಸ್ಕೂಟರ್ ಯೋಜನೆಗಳು ಮಹಿಳೆಯರಿಗೆ ತಮ್ಮ ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡಲು ಪ್ರೇರಣೆ ನೀಡುತ್ತವೆ. ಹೊಸ ಸರ್ಕಾರದ ಮೇಲೆ ಮಹಿಳೆಯರಿಗೆ ಹೆಚ್ಚಿನ ಭರವಸೆಯಿದೆ. ಜಯಲಲಿತಾ ನಿಧನದ ನಂತರ ಎಐಡಿಎಂಕೆ ಪಕ್ಷದಲ್ಲಿ ಉಂಟಾದ ಗೊಂದಲ, ಪುರಷ ಪ್ರಧಾನ ಆಢಳಿತದಿಂದ ಮಹಿಳೆಯರಿಗೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉಂಟಾದ ಅತಂಕ ಮತ್ತು ಅಭದ್ರತೆಯನ್ನು ಹೊಸ ಸರ್ಕಾರ ಹೇಗೆ ಹೋಗಲಾಡಿಸುತ್ತದೆ ಎಂಬುದು ಮುಂದಿನ ದಿನಗಳಲ್ಲಷ್ಟೆ ತಿಳಿದು ಬರಲಿದೆ. ಸದ್ಯ ಸರ್ಕಾರದ ಮುಂದಿರುವ ದೊಡ್ಡ ಸವಾಲು ಕೊರೊನಾ ನಿಯಂತ್ರಣ ಮತ್ತು ಅದರಿಂದ ಉಂಟಾಗುವ ಉದ್ಯೋಗ ಆರ್ಥಿಕ ಸಂಕಷ್ಟದಿಂದ ಮಹಿಳೆಯರು, ಪುರುಷರು, ಮಕ್ಕಳು ಎಲ್ಲರನ್ನೂ ಕಾಪಾಡಬೇಕಿರುವುದು.


ಇದನ್ನೂ ಓದಿ: ಬಂಗಾಳಿ ಚಂಡಮಾರುತ: ಕೊಚ್ಚಿ ಹೋದ ಸಂಘಪರಿವಾರದ ಅಜೆಂಡಾ!

LEAVE A REPLY

Please enter your comment!
Please enter your name here