Homeಮುಖಪುಟಬಂಗಾಳಿ ಚಂಡಮಾರುತ: ಕೊಚ್ಚಿ ಹೋದ ಸಂಘಪರಿವಾರದ ಅಜೆಂಡಾ!

ಬಂಗಾಳಿ ಚಂಡಮಾರುತ: ಕೊಚ್ಚಿ ಹೋದ ಸಂಘಪರಿವಾರದ ಅಜೆಂಡಾ!

ಸೋತು ಗೆದ್ದ ದೀದಿ ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸುವರೇ?

- Advertisement -
- Advertisement -

ನಾಯಕರಾದವರು ಕೆಲವೊಮ್ಮೆ ರಿಸ್ಕ್ ತೆಗೆದುಕೊಳ್ಳುತ್ತಾರೆ. ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅಂತಹ ರಿಸ್ಕ್ ತೆಗೆದುಕೊಂಡರು, ಅಲ್ಲಿ ಅವರು ಸೋತರಾದರೂ ಇಡೀ ರಾಜ್ಯವನ್ನೇ ಗೆದ್ದುಕೊಂಡರು ಮತ್ತು ಇಡೀ ದೇಶದ ಕೋಮುವಾದಕ್ಕೆ ವಿರೋಧವಾಗಿರುವ ಎಲ್ಲರ ಮೆಚ್ಚುಗೆ ಪಡೆದರು.

ಧ್ರುವೀಕರಣ ಮಾಡಲು ಹೆಣಗಾಡಿದವರನ್ನು ನೇರಾನೇರ ಎದುರಿಸಿದರು. ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾಗಳ ಜೊತೆಗೆ ಚುನಾವಣಾ ಆಯೋಗ ಮತ್ತು ಅರೆಸೇನಾ ಪಡೆಗಳನ್ನೂ ದೀದಿ ವಿರುದ್ಧ ಪ್ರಯೋಗಿಸಲಾಗಿತ್ತು ಎಂಬ ಆರೋಪಗಳು ಕೂಡ ಕೇಳಿ ಬರುತ್ತಲೇ ಇದ್ದವು. ಆದರೆ, ಮಮತಾ ಬೀರಿರುವ ಗೆಲುವಿನ ಚಂಡಮಾರುತದ ಎದುರು ಮೋದಿ-ಶಾಗಳೆಂಬ ’ಚುನಾವಣಾ ದಿಗ್ಗಜರು’ ಕೊಚ್ಚಿ ಹೋಗಿದ್ದಾರೆ.

ರಾಜಕೀಯ ಚಿಂತಕ ಪ್ರೊ. ಮುಜಾಫರ್ ಅಸ್ಸಾದಿ ಅವರ ಮಾತುಗಳಲ್ಲಿ ಕೇಳುವುದಾದರೆ, “ಮಮತಾ ದುರ್ಗಿಯಂತೆ ಕಾಣುತ್ತಿದ್ದಾರೆ. ಇದು ಕೋಮುವಾದದ ವಿರುದ್ಧ ಗೆಲುವು. ಎಲ್ಲವನ್ನೂ ನಿಯಂತ್ರಿಸಲು ಹೊರಟಿರುವ ಇಬ್ಬರು ಘಟಾನುಘಟಿಗಳನ್ನು ಮಣ್ಣು ಮುಕ್ಕಿಸಿದ ಗೆಲುವು” ಎನ್ನುತ್ತಾರೆ.

ಈ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶ ನಲುಗುತ್ತಿರುವಾಗ ಬಂಗಾಳ ಚುನಾವಣೆಯ ಪ್ರಚಾರಗಳಲ್ಲೇ ಕಾಲ ಕಳೆದ ಈ ದೇಶದ ಪ್ರಧಾನಿ ಮತ್ತು ಗೃಹ ಸಚಿವರ ವಿರುದ್ಧ ಭುಗಿಲೆದ್ದಿರುವ ಅಸಮಾಧಾನ, ಆಕ್ರೋಶದ ಪ್ರತೀಕದಂತೆ ಬಂಗಾಳದ ಫಲಿತಾಂಶ ಹೊರ ಬಂದಿದೆ. ಕೇರಳ, ತಮಿಳುನಾಡು ಫಲಿತಾಂಶಗಳು ಕೂಡ ಸರ್ವಾಧಿಕಾರಿ ಧೋರಣೆ, ಅತಿಯಾದ ಕೇಂದ್ರೀಕರಣದ ವಿರುದ್ಧವೇ ಇದ್ದರೂ, ಬಂಗಾಳ ಚುನಾವಣೆಯ ಫಲಿತಾಂಶ ಬಹುಮುಖ್ಯ ಸಂದೇಶವೊಂದನ್ನು ರಾಷ್ಟ್ರಕ್ಕೆ ನೀಡಿದೆ.

PC : New Indian Express

“ಇದು ಕೇವಲ ಪಶ್ಚಿಮ ಬಂಗಾಳದ ಗೆಲುವಲ್ಲ, ಇಡೀ ಭಾರತದ ಗೆಲುವು. ಇಡೀ ದೇಶವನ್ನೇ ನಾವು ಆಳಲಿದ್ದೇವೆ ಎಂಬ ಮನುವಾದದ ಗರ್ವ ಮತ್ತು ಅಹಂ ಇತ್ತಲ್ಲ, ಅದಕ್ಕೆ ಈ ಫಲಿತಾಂಶ ದೊಡ್ಡ ಪೆಟ್ಟು ನೀಡಿದೆ” ಎಂದು ಜಾನಪದ ವಿವಿಯ ಸಂಶೋಧಕ, ಪ್ರಾಧ್ಯಾಪಕ ಅರುಣ್ ಜೋಳದಕೂಡ್ಲಿಗಿ ಹೇಳುತ್ತಾರೆ.

“ಅಲ್ಲಿ ಮಮತಾ ಎಷ್ಟು ಜನಪರ ಕೆಲಸ ಮಾಡಿದ್ದಾರೆ ಎನ್ನುವುದಕ್ಕಿಂತಲೂ ಇಲ್ಲಿ, ಇಡೀ ದೇಶವನ್ನೇ ದುಸ್ಥಿತಿಗೆ ತಂದಿದ್ದಕ್ಕೆ ಕೇಂದ್ರದ ವಿರುದ್ಧ ಆಡಳಿತ ವಿರೋಧಿ ಅಲೆ, ತಳಸ್ತರದಲ್ಲಿ ಹುಟ್ಟಿಕೊಳ್ಳುತ್ತಿದೆ ಎಂಬುದಕ್ಕೆ ಬಂಗಾಳ ಫಲಿತಾಂಶ ಒಂದು ಪ್ರಾತಿನಿಧಿಕ ಮತ್ತು ಸಾಂಕೇತಿಕ ಮುನ್ಸೂಚನೆ” ಎನ್ನುತ್ತಾರೆ ಅರುಣ್.

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಖುದ್ದು ಪ್ರಧಾನಿ ಬೃಹತ್ ಜನಸ್ತೋಮಗಳನ್ನು ಕಂಡು ಉತ್ಸುಕರಾಗಿ ವೀರನಗೆ ಬೀರುವುದು ಆದರೆ ದೆಹಲಿಗೆ ಬಂದು ಜನರು ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಹೇಳಿ ವಿರೋಧಾಭಾಸವನ್ನು ಪ್ರದರ್ಶಿಸುವುದು ಈ ಚುನಾವಣೆ ಸಂದರ್ಭದಲ್ಲಿ ಜನರಿಗೆ ದಟ್ಟವಾಗಿ ಗೋಚರಿಸಿತ್ತು.

ಒಬ್ಬ ಮಹಿಳಾ ನಾಯಕಿಯ ಮೇಲೆ ಅತ್ಯಂತ ಕೀಳು ಟೀಕೆಗಳನ್ನು, ಅಸಭ್ಯ ವ್ಯಂಗ್ಯಗಳನ್ನು ಬಿಜೆಪಿ ಪಕ್ಷದಿಂದ ಮಾಡಲಾಗಿತು. ಕಾಂಗ್ರೆಸ್-ಎಡಪಕ್ಷ ಈ ದುರುದ್ದೇಶದ, ಕೀಳುಮಟ್ಟದ ಪ್ರಚಾರವನ್ನು ಆಕ್ಷೇಪಿಸಬೇಕಿತ್ತು. ಅವು ಹಿನ್ನಲೆಗೆ ಸರಿದವು. ಆದರೆ ಇವೆಲ್ಲವನ್ನೂ ಮೀರಿ ಮಮತಾ ನಾಯಕತ್ವದ ಟಿಎಂಸಿ ಹುಟ್ಟುಹಾಕಿದ್ದ ಚಂಡಮಾರುತದ ಅಲೆಯಲ್ಲಿ ಇಬ್ಬರು ರಾಷ್ಟ್ರೀಯ ಲೀಡರುಗಳಿಗೆ ತಾವು ಎಣಿಸಿದ್ದರಲ್ಲಿ ಓಂದನೇ ಮೂರು ಭಾಗದಷ್ಟು ಅಷ್ಟೇ ಗಳಿಸಲು ಸಾಧ್ಯವಾಯಿತು.

ಈ ಕುರಿತು ಪತ್ರಕರ್ತೆ ಸ್ವಾತಿ ಚತುರ್ವೇದಿ ದಿ ವೈರ್‌ನಲ್ಲಿ ಹೀಗೆ ಬರೆಯುತ್ತಾರೆ: “ಎಂಟು ಹಂತಗಳ ಚುನಾವಣೆ ನಡೆಸುವ ಮೂಲಕ ಬಿಜೆಪಿ ಪರ ಚುನಾವಣಾ ಆಯೋಗ ಕೆಲಸ ಮಾಡಿತು. ಕೇಂದ್ರದ ಅಧೀನದಲ್ಲಿರುವ ಎಲ್ಲ ಆಡಳಿತ ಶಕ್ತಿಗಳನ್ನೂ ಬಿಜೆಪಿ ಬಳಸಿಕೊಂಡಿತು. ದೇಶದಲ್ಲಿನ ಕೋವಿಡ್ ಎರಡನೆ ಅಲೆಯ ತೀವ್ರತೆಯನ್ನು ನಿರ್ಲಕ್ಷಿಸಿದ ಪ್ರಧಾನಿ ಮೋದಿ ಬಂಗಾಳದಲ್ಲಿ 20 ಬೃಹತ್ ರ್‍ಯಾಲಿಗಳನ್ನು, ಬಂಗಾಳ ಚುನಾವಣೆಯ ಸ್ಟ್ರಾಟಜಿಸ್ಟ್ ಆಗಿದ್ದ ಗೃಹ ಸಚಿವ ಅಮಿತ್ ಶಾ 50 ರ್‍ಯಾಲಿಗಳನ್ನು ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ 40 ರ್‍ಯಾಲಿಗಳನ್ನು ನಡೆಸಿದರು. ನಾನು ಒಬ್ಬ ರಾಜಕೀಯ ವಿಶ್ಲೇಷಕಿ ನಿಜ, ಆದರೆ ಒಬ್ಬ ಮಹಿಳೆಯಾಗಿ ನನ್ನ ಮೈ ಉರಿದು ಹೋಗಿದ್ದು, ’ದೀದಿ ಹೋ ದೀದಿ’ ಎಂದು ವ್ಯಂಗ್ಯಭರಿತ ವಿಕಾರದ ಧ್ವನಿಯಲ್ಲಿ ಈ ದೇಶದ ಪ್ರಧಾನಿ ಅರಚಿದ್ದನ್ನು ನೋಡಿದಾಗ… ಇದು ಈಗ ತಿರುಗೇಟು ನೀಡಿದೆ….”.

ಪ್ರೊ. ಮುಜಾಫ್ರ್ ಅಸ್ಸಾದಿ ಕೂಡ ಇದೇ ಮಾತುಗಳನ್ನು ಧ್ವನಿಸುತ್ತಾರೆ. “ದೀದಿ ಹೋ ದೀದಿ ಎನ್ನುವುದು ಮಮತಾರಿಗೆ ಅಷ್ಟೇ ಅಲ್ಲ, ಇಡೀ ಬಂಗಾಳದ ಅಸ್ಮಿತೆಗೆ, ಮಹಿಳೆಯರಿಗೆ ಅವಮಾನ ಮಾಡಿದ ಪ್ರಸಂಗವಾಗಿತ್ತು, ಅದು ಪ್ರಚಾರದ ಅಸಹ್ಯತೆಗೆ ಸಾಕ್ಷಿಯಾಗಿದೆ” ಎನ್ನುತ್ತಾರೆ.

ಈ ಗೆಲುವಿನ ಮಹತ್ವವೇನು?

ಒಂದು ತಿಂಗಳ ಕಾಲ ನಡೆದ ಚುನಾವಣಾ ಪ್ರಚಾರದಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರ ದೊಡ್ಡ ತಂಡವೇ ಅಲ್ಲಿ ಜಮಾಯಿಸಿತ್ತು. ಬಿಜೆಪಿಯ ಐಟಿ ಸೆಲ್ ಕೊಲ್ಕೊತ್ತಾಕ್ಕೆ ಸ್ಥಳಾಂತರಗೊಂಡಿತ್ತು.

2016ರ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿದ ಮೂರು ವರ್ಷಗಳ ನಂತರ, 2019ರ ಲೋಕಸಭಾ ಚುನಾವಣೆ ಫಲಿತಾಂಶವು ತೃಣಮೂಲ ಕಾಂಗ್ರೆಸ್‌ಗೆ ಎಚ್ಚರಿಕೆಯ ಸಂದೇಶ ನೀಡಿತ್ತು. ಬಿಜೆಪಿ 40 ಲೋಕಸಭಾ ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದಿತ್ತು ಮತ್ತು ಶೇ.40 ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿತ್ತು. ಆಗ ಎಚ್ಚೆತ್ತುಕೊಂಡ ಟಿಎಂಸಿ, ಮೊದಲೇ ಜಾರಿಯಲ್ಲಿದ್ದ ಬಡವರ ಕಲ್ಯಾಣ ಯೋಜನೆಗಳ ಜಾಲವನ್ನು ದ್ವಿಗುಣಗೊಳಿಸಿತು. ಕಳೆದ ಒಂದು ದಶಕದಲ್ಲಿ, ತೃಣಮೂಲವು ರೂಪಶ್ರೀ, ಕನ್ಯಾಶ್ರೀ ಮತ್ತು ಸಬೂಜ್ ಸಾಥಿಯಂತಹ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇವೆಲ್ಲವೂ ದೀನದಲಿತರಿಗೆ ವಿತ್ತೀಯ ಲಾಭಗಳನ್ನು ತಲುಪಿಸುತ್ತಿವೆ.

ಇಲ್ಲಿ ಎರಡು ವಿಷಯ: ಮೊದಲನೆಯದಾಗಿ, ತೃಣಮೂಲವು ಜನರಿಗೆ ಈ ಯೋಜನೆಗಳ ಫಲ ಸುಲಭವಾಗಿ ತಲುಪುವಂತೆ ಕೇಂದ್ರೀಕರಿಸಿದೆ. ಅಲ್ಲದೆ ಡುಯರೆ ಸರ್ಕಾರ್ ಮತ್ತು ದೀದಿ ಕೆ ಬೊಲೊ ಫ್ರೀ ಕಾಲ್ ಸೆಂಟರ್‌ಗಳ ಮೂಲಕ ಯಾರಾದರೂ ಸರಿ ದೂರು ಸಲ್ಲಿಸುವ ಅವಕಾಶವಿದೆ. ಉದಾಹರಣೆಗೆ, ಕೆಲವು ಪ್ರದೇಶಗಳಲ್ಲಿ ಎಸ್‌ಸಿ ಪ್ರಮಾಣಪತ್ರಗಳ ಕೊರತೆಯೇ ಸಾಮಾನ್ಯ ದೂರುಗಳಲ್ಲಿ ಒಂದಾಗಿದೆ, ನಂತರ ಅದನ್ನು ಉಚಿತವಾಗಿ ವಿತರಿಸಲಾಯಿತು ಎಂದು ತೃಣಮೂಲ ನಾಯಕರು ಹೇಳಿದ್ದಾರೆ. ಎರಡನೆಯದಾಗಿ, ಈ ಹಲವು ಯೋಜನೆಗಳ ಕೇಂದ್ರಬಿಂದುವೆಂದರೆ ಮಹಿಳೆಯರು. ಜಿಲ್ಲೆಗಳಾದ್ಯಂತ, ಒಂದು ಮನೆಯ ಪುರುಷರು ಬಿಜೆಪಿಗೆ ಮತ ಹಾಕುತ್ತಿದ್ದರೂ, ಅದೇ ಮನೆಯ ಅನೇಕ ಮಹಿಳೆಯರು ಮಮತಾ ದೀದಿಗೆ ಓಟ್ ಹಾಕಿದ್ದಾರೆ ಎನ್ನುತ್ತವೆ ಫಲಿತಾಂಶೋತ್ತರ ವಿಶ್ಲೇಷಣೆಗಳು!

ವ್ಯಕ್ತಿತ್ವಗಳ ಕದನ

ಎರಡು ಹಂತಗಳ ಮತದಾನದ ನಂತರ ಈ ಚುನಾವಣೆ ವ್ಯಕ್ತಿತ್ವಗಳ ನಡುವಿನ ಕದನವಾಗಿ ಮಾರ್ಪಟ್ಟಿತು. ಅದು ಮಮತಾ ವರ್ಸಸ್ ಮೋದಿ-ಶಾ ಎಂಬ ರೂಪಾಂತರಕ್ಕೆ ತಿರುಗಿತು. ಕೊನೆಯಲ್ಲಿ ಈ ರೂಪಾಂತರವೇ ’ಬಂಗಾಳಿ ಬೇಟಿ’ಯ ಗೆಲುವಿಗೆ ಅನುಕೂಲ ಮಾಡಿತು.

PC : Deccan Herald

ಸ್ಥಳೀಯ ಮಟ್ಟದ ಹಿಂಸಾಚಾರ ಮತ್ತು ಸಣ್ಣ ಪ್ರಮಾಣದ ಭ್ರಷ್ಟಾಚಾರದ ಆರೋಪ ಟಿಎಂಸಿ ಮೇಲಿದ್ದರೂ, ಈ ವಿಷಯದಲ್ಲಿ ಮತದಾರರ ಕೋಪ ತೃಣಮೂಲದ ಸ್ಥಳೀಯ ನಾಯಕರ ವಿರುದ್ಧವಿತ್ತೇ ಹೊರತು ಮಮತಾರ ಮೇಲಲ್ಲ.

ಯಾವಾಗ ಇಬ್ಬರು ದೈತ್ಯರು ತಮ್ಮೆಲ್ಲ ಶಸ್ತ್ರ, ಅಸ್ತ್ರ, ಹಣ, ಮೀಡಿಯಾಗಳನ್ನು ಇಟ್ಟುಕೊಂಡು ಒಬ್ಬ ಮಹಿಳೆಯ ಮೇಲೆ ಅಸಭ್ಯವಾಗಿ ಮುಗಿಬಿದ್ದರೋ, ಆಗಲೇ ಸುಪ್ತವಾಗಿದ್ದ ಬಂಗಾಳಿ ಅಸ್ಮಿತೆ ಕೆರಳಿತು. ಮಮತಾ ಬಂಗಾಳದ ಮಾ ಆದರು, ಬಂಗಾಳದ ಬೇಟಿಯೂ ಆದರು.

ಧ್ರುವೀಕರಣದ ರಾಜಕೀಯ ವಿಫಲ

ಧಾರ್ಮಿಕ ಧ್ರುವೀಕರಣವು ಬಿಜೆಪಿ ಅಭಿಯಾನದ ಕೇಂದ್ರಬಿಂದುವಾಗಿತ್ತು. ತೃಣಮೂಲವನ್ನು ’ಮುಸ್ಲಿಂ ಹಿತೈಷಿ’ ಎಂದು ಆರೋಪಿಸುತ್ತ ಬಂದ ಬಿಜೆಪಿ, ’ಜೈ ಶ್ರೀ ರಾಮ್ ಎಂಬ ಘೋಷಣೆಯನ್ನು ಬಹುತೇಕ ರಾಜಕೀಯ ಘೋಷಣೆಯಾಗಿ ಬಳಸಿತು. ಜೈ ಶ್ರೀರಾಮ್ ಘೋಷಣೆಗಿಂತ ’ಜೈ ಬಂಗಾಳ್ ಮುಖ್ಯ ಎಂದು ಟಿಎಂಸಿ ಪ್ರಚಾರ ಮಾಡಿತು.

ಬಿಜೆಪಿ ಅಧಿಕಾರಕ್ಕೆ ಬರಬಹುದು ಎಂಬ ಅಪಾಯವನ್ನು ಗ್ರಹಿಸಿದ ಮುಸ್ಲಿಂ ಸಮುದಾಯವು ಕಾಂಗ್ರೆಸ್ ಮತ್ತು ಎಡಪಂಥಗಳ ಭದ್ರಕೋಟೆಗಳಲ್ಲಿಯೂ ತೃಣಮೂಲವನ್ನು ಬೆಂಬಲಿಸಿತು. ಮತ್ತೊಂದೆಡೆ, ಬಿಜೆಪಿ ಶೇ. 30ರಷ್ಟಿರುವ ಮುಸ್ಲಿಂ ಮತಗಳನ್ನು ತಲುಪದೆ ಬಂಗಾಳವನ್ನು ಗೆಲ್ಲುವ ಅತ್ಯುತ್ಸಾಹ ಹೊಂದಿತ್ತು. ಅಲ್ಲಿ ಧ್ರುವೀಕರಣ ಮಾಡುವ ಮೂಲಕವೇ ಅದು ಗೆಲ್ಲಲು ಉದ್ದೇಶಿಸಿತ್ತು.

ಆದರೆ ಭಾಷಾ ಅಸ್ಮಿತೆ, ನಾಡಿನ ಸಂಸ್ಕೃತಿಯ ಅಸ್ಮಿತೆ ಜಾಗೃತವಾದ ಪರಿಣಾಮ ಧ್ರುವೀಕರಣ ವಿಫವಾಗಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮತ್ತು ಈಗ ಬಿಜೆಪಿಗೆ ಬೇರೆ ಬೇರೆ ಕಾರಣದಿಂದ ಜನರು ವೋಟ್ ಮಾಡಿರಬಹುದು, ಆದರೆ ಅದು ಕೋಮುವಾದಿ ನೆಲೆಯಿಂದಲ್ಲ ಎಂದು ರಾಜಕೀಯ ಚಿಂತಕರು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದಾರೆ.

ಟಿಎಂಸಿಯ ಪ್ರಮುಖ ನಾಯಕರನ್ನು ತನ್ನ ಖೆಡ್ಡಾಕ್ಕೆ ಬಿಜೆಪಿ ಕೆಡವಿಕೊಂಡ ಮೇಲೆ, ಮಮತಾ ಬ್ಯಾನರ್ಜಿ, ಎಸ್‌ಸಿ/ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ ಮಾತ್ರವಲ್ಲದೇ ಸಾಮಾನ್ಯ ಕೇತ್ರಗಳಲ್ಲೂ ಆ ಸಮುದಾಯಗಳ ಹೊಸಬರಿಗೆ ಅವಕಾಶ ನೀಡಿದರು. ಮಹಿಳಾ ಅಭ್ಯರ್ಥಿಗಳ ಸಂಖ್ಯೆಯನ್ನು ಏರಿಸಿದರು. ಇದು ರಾಜಕೀಯ ಸ್ಟ್ರಾಟರ್ಜಿ ಆಗಿದ್ದರೂ, ಇಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಜನರನ್ನು ಸೆಳೆಯಿತು.

’ಗಾಯಗೊಂಡ ಬಂಗಾಳದ ಅಸ್ಮಿತೆಯ ತೀವ್ರ ಪ್ರತಿಕ್ರಿಯೆ’

PC : UNIVERSITY OF MYSORE, (ಪ್ರೊ. ಮುಜಾಫರ್ ಅಸ್ಸಾದಿ)

ಬಂಗಾಳದ ಚುನಾವಣಾ ಫಲಿತಾಂಶ ಗಾಯಗೊಂಡ ಬಂಗಾಳ ಅಸ್ಮಿತೆ ವ್ಯಕ್ತಪಡಿಸಿದ ತೀವ್ರ ಪ್ರತಿಕ್ರಿಯೆ ಆಗಿದೆ. ಇದು ಕೇವಲ ಒಂದು ಟಿಎಂಸಿ ಪಕ್ಷದ ಗೆಲುವಲ್ಲ. ಇದು ಕೋಮುವಾದ ಮತ್ತು ಫ್ಯಾಸಿಸಂ ವಿರುದ್ಧದ ಗೆಲುವು. ಇದು ವಿಪಕ್ಷಗಳನ್ನು ಒಟ್ಟಾಗಿಸುವುದಕ್ಕೆ ನೆರವಾಗಲಿದೆ.

ಮಮತಾರ ಕಾಲಿಗೆ ಆದ ಗಾಯ ಬಂಗಾಳಿ ಅಸ್ಮಿತೆಗೇ ಆದ ಗಾಯವಾಗಿತ್ತು. ಬಂಗಾಳಿಯರು ಯಾವುದ್ಯಾವುದೋ ಕಾರಣಕ್ಕೆ ಬಿಜೆಪಿಗೆ ಮತ ಹಾಕಿರಬಹುದು. ಆದರೆ ಅವರೆಂದೂ ಕಮ್ಯುನಲ್ ಅಲ್ಲ.

ರಾಹುಲ್ ಗಾಂಧಿ ರ್‍ಯಾಲಿ ರದ್ದು ಮಾಡಿದ್ದಕ್ಕೆ ಕೇವಲ ಕೋವಿಡ್ ಅಷ್ಟೇ ಕಾರಣವಲ್ಲ ಅನಿಸುತ್ತದೆ. ಆ ಮೂಲಕ ಅವರು ತಮ್ಮ ಪಕ್ಷಕ್ಕೆ ಬರಬಹುದಾದ ಮತಗಳು ಟಿಎಂಸಿಗೆ ವರ್ಗಾವಣೆ ಆಗಲಿ ಎಂದು ಈ ನಿರ್ಧಾರ ತೆಗೆದುಕೊಂಡಿರಬಹುದು. ಎಡಪಕ್ಷಗಳಿಗೂ ಇದಕ್ಕೆ ಸಮ್ಮತಿಯಿತ್ತೆನಿಸುತ್ತದೆ.

ನಂದಿಗ್ರಾಮದಲ್ಲಿ ಮಮತಾ ಸೋತಿದ್ದು ಕೂಡ ಆಕೆಯ ಪಾಲಿಗೆ ಪಾಸಿಟಿವ್ ಆಗಬಹುದು. ಈಗ ಅವರು ಗಾಯಗೊಂಡ ವ್ಯಾಘ್ರ. ಈ ವ್ಯಾಘ್ರ ರಾಷ್ಟ್ರಮಟ್ಟದ ರಾಜಕೀಯ ತಲುಪಿ ಸವಾಲು ಎಸೆಯಬಹುದು.
-ಪ್ರೊ. ಮುಜಾಫರ್ ಅಸ್ಸಾದಿ, ರಾಜಕೀಯ ಚಿಂತಕರು

ಮಮತಾ ಮತ್ತು ಮೋದಿ: ಮಟ್ಟು ಅಭಿಪ್ರಾಯ

PC : Daijiworld, (ದಿನೇಶ್ ಅಮಿನ್ ಮಟ್ಟು)

ಮೂರು ತಿಂಗಳ ಹಿಂದೆಯೇ ಜನಪರ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟುರವರು ’ಹೊಸ ಮನುಷ್ಯ’ಕ್ಕೆ ಬರೆದ ಲೇಖನದಲ್ಲಿ, ಮೇನಲ್ಲಿ ಬಂಗಾಳ ಚುನಾವಣೆ ಗೆದ್ದರೆ ಮಮತಾ ರಾಷ್ಟ್ರಮಟ್ಟದಲ್ಲಿ ಮೋದಿಗೆ ಪರ್ಯಾಯವಾಗಬಲ್ಲರು ಎಂಬುದನ್ನು ಹೇಳುತ್ತಲೇ, ಮೋದಿ ಮತ್ತು ಮಮತಾರ ನಡುವಿನ ಸಾಮ್ಯತೆ ಮತ್ತು ಭಿನ್ನತೆಗಳನ್ನು ವಿವರಿಸಿದ್ದರು.

ಇಬ್ಬರದೂ ಬಡತನದ ಹಿನ್ನೆಲೆ ಎನ್ನುವ ಮಟ್ಟು, ಮೋದಿ ಅದನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡರು ಎನ್ನುತ್ತಾರೆ. ಇಬ್ಬರಲ್ಲೂ ಸರ್ವಾಧಿಕಾರಿ ಗುಣವಿದೆ, ಆದರೆ ಮಮತಾ ಕೋಮುವಾದಿಯಲ್ಲ ಎಂದು ಅವರು ಹೇಳುತ್ತಾರೆ. ತೃತೀಯ ರಂಗಕ್ಕೆ ಹೊಸ ಪ್ರಯತ್ನ ನಡೆದರೆ ಮಮತಾರೇ ಮುಂಚೂಣಿಯಲ್ಲಿ ಇರಲಿದ್ದಾರೆ ಎನ್ನುವ ಮಟ್ಟು, ಆ ಸಾಹಸ ತಂತಿ ಮೇಲಿನ ನಡಿಗೆ. ಅದಕ್ಕೆ ಸಹನೆ, ತಾಳ್ಮೆ ಬೇಕು. ಮಮತಾರಲ್ಲಿ ಆ ಕೊರತೆಯಿದೆ ಇದೆ ಎಂದು ಬರೆದಿದ್ದರು.

ಗೆಲುವಿಗೆ ಸ್ವಾಗತವಿದೆ, ಆದರೆ……

PC : Prajavani, (ಕೆ. ನೀಲಾ)

ಬಿಜೆಪಿಗೆ ಮುಖ್ಯವಾಗಿ ಮೋದಿ-ಶಾಗಳಿಗೆ ಪಾಠ ಕಲಿಸಿದ್ದಕ್ಕೆ ಟಿಎಂಸಿ ಮತ್ತು ಮಮತಾರನ್ನು ಅಭಿನಂದಿಸುತ್ತೇನೆ. ಅದಕ್ಕೂ ಹೆಚ್ಚಾಗಿ ಅಲ್ಲಿನ ಜನರನ್ನು ಅಭಿನಂದಿಸುತ್ತೇನೆ.

ಮೋದಿ ಒಬ್ಬ ಫ್ಯಾಸಿಸ್ಟ್, ಸರ್ವಾಧಿಕಾರಿ. ಮಮತಾರನ್ನು ಹೀಗೆ ಕರೆಯಲು ಆಗದಿದ್ದರೂ, ಅವರು ಕೂಡ ತಮ್ಮ ಪಾರ್ಟಿಯಲ್ಲಿ ಸರ್ವಾಧಿಕಾರದ ನಡೆಯನ್ನೇ ತೋರುತ್ತ ಬಂದಿದ್ದಾರೆ. ಅಲ್ಲಿ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಅವರು ಅಲ್ಲಿನ ಎಡಪಕ್ಷಗಳ ಮೇಲೆ ವಿಪರೀತ ದ್ವೇಷ ಕಾರುತ್ತಾರೆ. ಆದರೆ ಅದೇ ಕೇರಳದ ಎಡ ಸರ್ಕಾರದ ಮೇಲೆ ಅವರಿಗೇನೂ ಸಿಟ್ಟಿಲ್ಲ. ಇದು ಪೊಲಿಟಿಕಲ್ ಸ್ಟ್ರಾಟರ್ಜಿ ಇರಬಹುದು. ಈಗ ಎಡಪಕ್ಷಗಳು ತೀವ್ರವಾದ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
– ಕೆ. ನೀಲಾ, ಸಿಪಿಎಂ ನಾಯಕಿ

ಸಂಘ ಪರಿವಾರದ ಅಜೆಂಡಾಕ್ಕೆ ಸೋಲು

ಬಸವರಾಜ ಸೂಳಿಬಾವಿ

ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳ ಚುನಾವಣಾ ಫಲಿತಾಂಶಗಳು ಇಲ್ಲಿ ಪ್ರಜಾಪ್ರಭುತ್ವ ಇನ್ನೂ ಜೀವಂತ ಎಂಬುದಕ್ಕೆ ಸಾಕ್ಷಿಯಾಗಿವೆ.

ಈ ಮೂರೂ ರಾಜ್ಯಗಳ ನೆಲದಲ್ಲಿ ಪ್ರತಿರೋಧದ ಅಂಶಗಳು ಹಾಸು ಹೊಕ್ಕಾಗಿವೆ, ಅಂತರ್ಗತವಾಗಿವೆ. ಯಾವುದನ್ನು ಮುಖ್ಯವಾಹಿನಿ, ಮೂಲಭೂತ ಎಂದು ಹೇರಲಾಗುತ್ತದೆಯೋ ಅದನ್ನು ಪ್ರತಿರೋಧಿಸಿ ಈ ರಾಜ್ಯಗಳು ಯಶಸ್ವಿಯಾದ ಇತಿಹಾಸವಿದೆ. 2025ಕ್ಕೆ 100 ವರ್ಷ ತುಂಬಲಿರುವ ಆರ್‌ಎಸ್‌ಎಸ್ ಸಂಘಟನೆಯ ಮೂಲ ಉದ್ದೇಶವೇ 100 ವರ್ಷಗಳಲ್ಲಿ ದೇಶವನ್ನು ಹಿಂದೂ ರಾಷ್ಟ್ರ ಮಾಡುವುದಾಗಿದೆ. ಅದಕ್ಕೆ ತಕ್ಕಂತೆ ಮೋದಿ ಆಡಳಿತ ಮಾಡುತ್ತ ಬಂದಿದ್ದಾರೆ. ಈ ಅಜೆಂಡಾವನ್ನು ಮೂರು ರಾಜ್ಯಗಳ ಜನ ಸೋಲಿಸಿದ್ದಾರೆ.
ಬಸವರಾಜ ಸೂಳಿಬಾವಿ, ಕವಿ, ಸಾಮಾಜಿಕ ಕಾರ್ಯಕರ್ತರು


ಇದನ್ನೂ ಓದಿ: ಸುವೆಂದು ಅಧಿಕಾರಿ ವಿರುದ್ಧ ಸೋಲು: ಕೋರ್ಟಿಗೆ ಹೋಗುತ್ತೇನೆಂದ ಮಮತಾ ಬ್ಯಾನರ್ಜಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...