Homeಮುಖಪುಟಕಡಿದಾಳು ಶಾಮಣ್ಣ ಜತೆ ಹೀಗೊಂದು ಸಂಜೆ

ಕಡಿದಾಳು ಶಾಮಣ್ಣ ಜತೆ ಹೀಗೊಂದು ಸಂಜೆ

- Advertisement -
- Advertisement -

ಒಂದು ಹಾಲುಗಲ್ಲದ ಹಸುಳೆಗೆ ಬಿಳಿ ಗಡ್ಡ ಬೆಳೆದು, ಆ ಗಡ್ಡದ ರಾಶಿಯ ನಡುವಿನಿಂದ ಆ ಮಗು ಕಿಲಕಿಲ ನಕ್ಕರೆ ಹೇಗೆ ಕಾಣಬಹುದೋ, ಹಾಗೆ ಶಾಮಣ್ಣ ನಮ್ಮೆದುರು ನಗುತ್ತಾ ಕೂತಿದ್ದರು. ಹೌದು, ಅವರು ಕಡಿದಾಳು ಶಾಮಣ್ಣ. ನಾನು ತೇಜಸ್ವಿಯವರನ್ನು ಓದಲು ಶುರು ಮಾಡಿದಾಗಿನಿಂದ, ಶಾಮಣ್ಣನವರ ಬಗೆಗೂ ಒಂದು ರೀತಿಯ ಬೆರಗು ನನ್ನನ್ನು ಆವರಿಸಿತ್ತು. ಬದುಕನ್ನು ಅಷ್ಟು ಸರಳವಾಗಿ, ಸಲೀಸಾಗಿ, ಪ್ರಕೃತಿಗೆ ಅಷ್ಟು ಸನಿಹವಾಗಿ ಕಳೆದ ತೇಜಸ್ವಿ ಮತ್ತು ಶಾಮಣ್ಣನವರದು ಎಂತವರನ್ನೂ ಆಕರ್ಷಿಸಬಲ್ಲ ವ್ಯಕ್ತಿತ್ವಗಳು. “ಥೋ…. ಸಾಕು ಮಾರಾಯ” ಎಂದು ಈ ಜಗತ್ತಿನ ಮೇಲೆ ಬೇಸರಿಸಿಕೊಂಡವರಂತೆ ಬಲುಬೇಗನೆ ನಮ್ಮನ್ನಗಲಿ ಹೋದ ತೇಜಸ್ವಿಯವರನ್ನು ನೋಡಬೇಕೆಂಬ ನನ್ನ ಆಸೆ ಆಸೆಯಾಗಿಯೇ ಉಳಿಯಿತು. ಕಡೇಪಕ್ಷ ಶಾಮಣ್ಣನವರನ್ನಾದರೂ ಒಮ್ಮೆ ಭೇಟಿ ಮಾಡಿ ಮಾತಾಡಿಸಬೇಕೆಂದು ತುಂಬಾ ದಿನಗಳಿಂದ ಕಾತರಿಸುತ್ತಿದ್ದೆ. ಅವಕಾಶ ಒದಗಿಬಂದಿರಲಿಲ್ಲ.

ಮೊನ್ನೆ ಅಚಾನಕ್ಕಾಗಿ ಅದೃಷ್ಟ ಒಲಿದುಬಂತು. ನಾನು ಮತ್ತು ಕೆ.ಎಲ್. ಅಶೋಕ್ ಅವರು, ಹಿರಿಯ ರೈತ ಹೋರಾಟಗಾರ ಎಚ್.ಆರ್.ಬಸವರಾಜಪ್ಪನವರ ಬದುಕನ್ನು ತಿರುಗಣೆಯಾಗಿಸಿಕೊಂಡು ಕರ್ನಾಟಕ ರಾಜ್ಯ ರೈತ ಸಂಘದ ಹಾಗೂ ರೈತ ಹೋರಾಟಗಳ ಚರಿತ್ರೆಯನ್ನು ಕಟ್ಟಿಕೊಡುವ ಒಂದು ಪುಸ್ತಕ ಬರೆಯುವ ಪ್ರಯತ್ನದಲ್ಲಿದ್ದೇವೆ. ಬರವಣಿಗೆಯ ಕೆಲಸ ಬಹುಪಾಲು ಮುಗಿದಿದ್ದು, ಅದೀಗ ಸಂಪಾದನೆಯ ಹಂತದಲ್ಲಿದೆ. ಅದಕ್ಕೆ ಶಾಮಣ್ಣನವರಿಂದ ಬೆನ್ನುಡಿ ಬರೆಸಿದರೆ ಹೇಗೆಂಬ ಆಲೋಚನೆ ಬಂದಿದ್ದರಿಂದ ನಾವು ಭಗವತಿಕೆರೆಯ ಶಾಮಣ್ಣನವರ ಆ ಪುಟ್ಟ ಕಾನನ ಕುಟೀರಕ್ಕೆ ಹೋಗುವ ಅವಕಾಶ ಸೃಷ್ಟಿಸಿಕೊಂಡೆವು.

ವಯೋಸಹಜ ವೃದ್ಧಾಪ್ಯ ಕಾರಣಕ್ಕೆ ಅವರೀಗ ಮೊದಲಿನಷ್ಟು ಲವಲವಿಕೆಯಿಂದಿಲ್ಲ, ಅಲ್ಲದೇ, ಕೆಲ ದಿನಗಳ ಕೆಳಗೆ ಮನೆಯಲ್ಲೇ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡ ನಂತರ ಅವರ ನೆನಪಿನ ಶಕ್ತಿಯೂ ಕುಂದಿದೆ, ಹಾಗಾಗಿ ಅವರು ಬರೆಯಲಾರರು ಎಂಬ ಮಾಹಿತಿಗಳು ನಮಗೆ ತಲುಪಿದವು. ಆದರೆ ಅವರನ್ನು ನೋಡುವ ಈ ಅವಕಾಶ ಮಿಸ್ ಮಾಡಿಕೊಳ್ಳಲು ನನಗೆ ಇಷ್ಟವಿರಲಿಲ್ಲ. ಅಂತೂ ಹೊರಟೆವು. ಮೊದಲೇ ಅವರ ಮನೆಯವರಿಗೆ ಫೋನ್ ಮಾಡಿ, ಭೇಟಿಗೆ ಅನುಮತಿ ಪಡೆದಿದ್ದೆವು. ಹಾಗಾಗಿ, ಸಂಜೆಯ ನಸುಗತ್ತಲಿನ ನಮ್ಮ ಆಗಮನವನ್ನು ಮನೆಯವರ ಬೆಚ್ಚನೆಯ ಆತಿಥ್ಯ ಸ್ವಾಗತಿಸಿತು.

ಶಾಮಣ್ಣನವರ ಅನಾರೋಗ್ಯದ ಬಗ್ಗೆ ಬಹಳಷ್ಟು ಅನುಕಂಪದ ಮಾತುಗಳನ್ನು ಕೇಳಿದ್ದ ನನ್ನ ತಲೆಯ ತುಂಬಾ, ಹಾಸಿಗೆ ಹಿಡಿದು ಮಲಗಿರುವ ಶಾಮಣ್ಣನವರ ಚಿತ್ರಣವೇ ತುಂಬಿಹೋಗಿತ್ತು. ನನ್ನಿಷ್ಟದ ವ್ಯಕ್ತಿತ್ವವನ್ನು ಆ ಪರಿಸ್ಥಿತಿಯಲ್ಲಿ ನೋಡಬೇಕಲ್ಲ ಎಂಬ ಬೇಸರವೂ ಕಾಡುತ್ತಿತ್ತು.

ಆದರೆ ಅಲ್ಲಿ ನಾನು ಕಂಡಿದ್ದೇ ಬೇರೆ. ಕೈಯಲ್ಲೊಂದು ಊರುಗೋಲು ಹೆಚ್ಚುವರಿಯಾಗಿ ಸೇರ್ಪಡೆಗೊಂಡಿತ್ತು ಎಂಬುದನ್ನು ಬಿಟ್ಟರೆ, ನನ್ನ ಹಳೆಯ ನೆನಪುಗಳಲ್ಲಿ ಶಾಮಣ್ಣನವರ ಯಾವ ರೂಪ ಅಚ್ಚೊತ್ತಿತ್ತೋ, ಅದೇ ಪ್ರತಿರೂಪದಲ್ಲಿ ಶಾಮಣ್ಣ ನಗುನಗುತ್ತಾ ವರಾಂಡದಲ್ಲಿ ನಿಂತಿದ್ದರು. ತಲೆಮೇಲೆ ಟೊಪ್ಪಿ, ಕುತ್ತಿಗೆಯಲ್ಲಿ ಕ್ಯಾಮೆರಾ ಇರಲಿಲ್ಲ ಅನ್ನುವುದನ್ನು ಬಿಟ್ಟರೆ ಅದೇ ಬಿಳಿ ಜುಬ್ಬ, ಪೈಜಾಮಾ, ಹಸಿರು ಶಲ್ಯ, ನಗುಮುಖ. ಶಾಮಣ್ಣ ಶಾಮಣ್ಣರಾಗಿಯೇ ನಮಗೆ ಸಿಕ್ಕರು. ನಮ್ಮ ಜೊತೆಗಿದ್ದ ಬಸವರಾಜಪ್ಪನವರನ್ನು ಗುರುತು ಹಿಡಿದು ಕುಶಲೋಪರಿಯ ಮಾತುಗಳನ್ನಾಡಿ ಸ್ವಾಗತಿಸಿದರು.

ಅವರ ಸ್ಮೃತಿಯಲ್ಲಿ ದಾಖಲಾಗಿದ್ದ ಹಳೆಯ ನೆನಪುಗಳು ಛಂಗನೆ ಚಿಮ್ಮಿ ಮುನ್ನೆಲೆಗೆ ಬರುತ್ತಿಲ್ಲ ಮತ್ತು ಪ್ರಸ್ತುತ ಈಗ ಅವರ ಸುತ್ತ ನಡೆಯುತ್ತಿರುವ ಘಟನೆಗಳು ಸಮರ್ಪಕವಾಗಿ ದಾಖಲಾಗುತ್ತಿಲ್ಲ ಎಂಬ ಲಕ್ಷಣಗಳಂತವನ್ನು ಬಿಟ್ಟರೆ, ಅವರು ಅಪ್ಪಟ ಆರೋಗ್ಯವಂತ. ಬದುಕನ್ನು ನಾವು ಊಹಿಸಿದ್ದಕ್ಕಿಂತ ವೈವಿಧ್ಯವಾಗಿ, ಸೊಗಸಾಗಿ, ಪರೋಪಕಾರಿಯಾಗಿ ಬದುಕಬಹುದೆಂಬುದನ್ನು ತೋರಿಸಿಕೊಟ್ಟ ಆ ಕಲರ್‌ಫುಲ್ ನೆನಪುಗಳಿಲ್ಲದ ಶಾಮಣ್ಣನವರನ್ನು ಕಾಣಲು ಆಪ್ತರಿಗೆ ಕಷ್ಟವಾಗಬಹುದು. ಜೊತೆಗೆ, ಕಲ್ಲನ್ನೂ ಮಾತಾಡಿಸುವ ಛಾತಿಯಿದ್ದ ಅವರು ಈಗ ಮಾತಿಗಿಂತ ಹೆಚ್ಚಾಗಿ ಬುದ್ಧನಂತೆ ನಗುತ್ತಾ ಕೂತಿರುವುದನ್ನು ನೋಡಲೂ ಬೇಸರವಾಗಬಹುದು. ಆದರೆ ಒಂದು ನೆಮ್ಮದಿಯ ಸಂಗತಿಯೆಂದರೆ, ಬೇರೆಲ್ಲ ಕಾಯಿಲೆಗಳಲ್ಲಿ ರೋಗಿ ನರಳುವುದನ್ನು ನೋಡಿ ನಾವೂ ಸಂಕಟ ಅನುಭವಿಸುತ್ತೇವೆ. ಆದರೆ ಶಾಮಣ್ಣನವರ ವಿಚಾರದಲ್ಲಿ, ಅವರಿಗೆ ಹೀಗಾಗಿದೆಯಲ್ಲ ಎಂದು ನಾವು ವ್ಯಥೆ ಪಡಬಹುದೇ ವಿನಾ, ಆ ಕೊರಗು ಅವರಿಗಿಲ್ಲ. ತಮ್ಮ ಬಳಿ ಇರುವಷ್ಟೆ ನೆನಪಿನ ಕಣಜದೊಂದಿಗೆ ನೆಮ್ಮದಿಯಾಗಿದ್ದಾರೆ, ಅದೇ ಹಳೆಯ ಶಾಮಣ್ಣನಂತೆ!

ಬದುಕಿನ ರೀತಿ, ನಿಲುವು, ಒಲವುಗಳಲ್ಲಿ ಕಿಂಚಿತ್ತೂ ಬದಲಾಗಿಲ್ಲ. ಅವರ ಹಿರಿಯ ಮಗಳು ಉಲುಪಿಯವರು ಹೇಳಿದ ಇತ್ತೀಚಿನ ಒಂದು ಪ್ರಸಂಗ ಇದಕ್ಕೆ ಸಾಕ್ಷಿ.

ಮನುಷ್ಯರ ಜೊತೆಗಿನ ಒಡನಾಟದ ನೆನಪುಗಳು ಕೊಂಚ ಮಾಸಿಹೋಗಿದ್ದರೂ, ಗಿಡ-ಮರಗಳ ಜತೆಗಿನ ನಂಟು ಅವರಲ್ಲಿ ಇನ್ನೂ ಹಸಿರಾಗಿಯೇ ಇದೆ. ಮರದ ಸಣ್ಣ ಕೊಂಬೆ ಕತ್ತರಿಸುವುದಕ್ಕೂ ಅವರು ಒಪ್ಪುವುದಿಲ್ಲವಂತೆ. ಇತ್ತೀಚೆಗೆ ಒಂದು ಮಧ್ಯಾಹ್ನ ಶಾಮಣ್ಣನವರು ಮನೆಯೊಳಗೆ ಕೂತಿರಬೇಕಾದರೆ ಪಕ್ಕ ಎಲ್ಲಿಂದಲೋ ಮರ ಕಡಿಯುತ್ತಿರುವ ಕಟ್-ಕಟ್ ಸದ್ದು ಕಿವಿಗೆ ಬಿದ್ದಿದೆ. ಕೂಡಲೇ ಊರುಗೋಲು ಕೈಗೇರಿಸಿಕೊಂಡು, ತಡವರಿಕೆಯ ಹೆಜ್ಜೆಗಳನ್ನಿಡುತ್ತಾ, ಮೆಟ್ಟಿಲಿಳಿದು ಸದ್ದಿನ ದಿಕ್ಕನ್ನು ಅನುಸರಿಸಿ ಹೊರಟಿದ್ದಾರೆ. ಅಲ್ಲಿ, ತೋಟ ನೋಡಿಕೊಳ್ಳುವ ಕೆಲಸದ ಮನುಷ್ಯ ಮರದ ಕೊಂಬೆಯೊಂದನ್ನು ಕತ್ತರಿಸುತ್ತಿರುವುದು ಕಣ್ಣಿಗೆ ಬಿದ್ದಿದೆ. ಕೂಡಲೇ ಆತನನ್ನು ಕೆಳಗಿಳಿಸಿದ ಶಾಮಣ್ಣ, “ಯಾಕಪ್ಪಾ? ಈ ಕೊಂಬೆ ಯಾಕೆ ಕತ್ತರಿಸುತಿದೀಯಾ?” ಅಂತ ಕೇಳಿದ್ದಾರೆ.

ಇವರ ಪರಿಸರ ಪ್ರೇಮದ ಬಗ್ಗೆ ತಿಳಿದಿದ್ದ ಆತ ಅಳುಕುತ್ತಲೇ “ಇಲ್ಲಾ ಅಯ್ಯಾ, ಈ ಕೊಂಬೆ ಅಡಿಕೆ ಮರಗಳಿಗೆ ಸ್ವಲುಪ ಸ್ವಾಲೆಯಾಗಿ ತ್ರಾಸು ಕೊಡ್ತಿತ್ತು. ಅದುಕ್ಕೇ ಚೂರು ಸವರುತಿದೀನಿ ಆಟೆಯಾ” ಎಂದಿದ್ದಾನೆ.

“ಈ ಕೊಂಬೆಯಿಂದ ನಮಿಗೆ ತೊಂದ್ರೆ ಆಗ್ತಾ ಐತೆ ಅಂತ ಅಡಿಕೆ ಮರಗಳು ನಿನ್ನತ್ರ ದೂರು ಹೇಳಿದ್ವಾ?” ಶಾಮಣ್ಣನವರ ಪ್ರಶ್ನೆ ತೂರಿಬಂದಿದೆ.

“ಇಲ್ಲಾ ಅಯ್ಯಾ” ಆತ ತಲೆ ಕೆರೆದುಕೊಳ್ಳುತ್ತಾ ಉತ್ತರಿಸಿದ್ದಾನೆ.

“ಮತ್ತೆ, ಮರಗಳಿಗೆ ತೊಂದ್ರೆ ಆಗ್ತಾ ಐತೆ ಅಂತ ನಿನಿಗೆ ಹ್ಯೆಂಗೆ ಗೊತ್ತಾತು? ಅದು ನಿನ್ನ ಅಭಿಪ್ರಾಯ ಅಷ್ಟೆ. ಪರಿಸರದಲ್ಲಿ ಮರಗಿಡಗಳು ಒಂದಕ್ಕೊಂದು ಹೊಂದಿಕೊಂಡು ಬಾಳೋದನ್ನು ನಮಿಗಿಂತ ಚೆನ್ನಾಗಿ ತಿಳ್ಕಂಡವೆ. ನಮ್ಮ ಸಹಾಯ ಅವುಕ್ಕೆ ಬೇಕಿಲ್ಲ” ಶಾಮಣ್ಣನವರ ಈ ಮಾತು ಕೇಳಿಸಿಕೊಂಡ ವ್ಯಕ್ತಿ “ತೆಪ್ಪಾಯ್ತಯ್ಯಾ” ಎಂದೇಳಿ ಹೊರಟುಹೋದನಂತೆ.

ಮಗಳು ಈ ಪ್ರಸಂಗ ವಿವರಿಸುವಾಗ ಶಾಮಣ್ಣ ಯಥಾಪ್ರಕಾರ ನಗುತ್ತಾ ಕೂತಿದ್ದರು. ನಾವು ಬಂದ ಉದ್ದೇಶವನ್ನು ಅರುಹಿದಾಗಲೂ ನಕ್ಕು ಪ್ರತಿಕ್ರಿಯಿಸಿದರೆ ಹೊರತು ಬೇರೇನೂ ಹೇಳಲಿಲ್ಲ. ಅವರ ಮಡದಿ ಶ್ರೀದೇವಿಯಮ್ಮನವರ ತಾಯ್ತನದ ಆತಿಥ್ಯ, ಆತ್ಮೀಯತೆಗಳು ನಮ್ಮನ್ನು ಮತ್ತಷ್ಟು ಉಲ್ಲಸಿತರಾಗಿಸಿತು. ಶಾಮಣ್ಣನವರು ನಮ್ಮ ಕೋರಿಕೆಯನ್ನು ಮನ್ನಿಸಿ, ತಮ್ಮ ನೆನಪುಗಳಿಂದ ಮಾತುಗಳನ್ನು ಹೆಕ್ಕಲು ಒಂದಷ್ಟು ಶ್ರಮ ಹಾಕಿದರು. ಆದರೆ ಸ್ಮೃತಿ ಅವರಿಗೆ ಸಾಥ್ ಕೊಡಲಿಲ್ಲ. ನಾವು ಕೆದಕಿ, ಉತ್ತೇಜಿಸಿದ್ದರೆ ನೆನಪುಗಳು ಮುನ್ನೆಲೆಗೆ ಬರುತ್ತಿದ್ದವೇನೋ, ಆದರೆ ನಮ್ಮ ಒತ್ತಾಯವು ಅವರಲ್ಲಿ ತನಗೇನೋ ನೆನಪಿನ ಶಕ್ತಿಯ ಸಮಸ್ಯೆಯಿದೆ ಎಂಬ ಕಿರಿಕಿರಿ ಹುಟ್ಟುಹಾಕುವುದು ನಮಗೆ ಇಷ್ಟವಾಗಲಿಲ್ಲ. ನಿಧಾನಕ್ಕೆ ಯೋಚಿಸಿ, ಸಾಧ್ಯವಾದರೆ ದಾಖಲಿಸಿ ಎಂದು ಹೇಳಿ ನಮ್ಮ ನಿರೀಕ್ಷೆಯನ್ನು ಕೈಚೆಲ್ಲಿದೆವು.

ಹೊಸದಾಗಿ ಪ್ರಕಟವಾದ ನನ್ನ ’ಸ್ವಾತಂತ್ರ್ಯಪೂರ್ವ ಶಿಕಾರಿ ಕತೆಗಳು’ ಪುಸ್ತಕದ ಬಗ್ಗೆ ಹಾಗೂ ಅದಕ್ಕೆ ಮುನ್ನುಡಿ ಬರೆದ ಪ್ರದೀಪ್ ಕೆಂಜಿಗೆಯವರು ತಮ್ಮ ಬರಹದಲ್ಲಿ ಶಾಮಣ್ಣನವರ ತಂದೆ ಕಡಿದಾಳು ರಾಮಪ್ಪಗೌಡರ ಶಿಕಾರಿ ಸಾಹಿತ್ಯದ ಬಗ್ಗೆ ಪ್ರಸ್ತಾಪಿಸಿರುವುದನ್ನು ಹೇಳಿದಾಗ ಶಾಮಣ್ಣ ತುಂಬಾ ಖುಷಿಪಟ್ಟರು. ತಮ್ಮ ತಂದೆಯವರ ’ಮಲೆನಾಡಿನ ಶಿಕಾರಿಯ ಅನುಭವಗಳು’ ಪುಸ್ತಕವನ್ನು ಮನೆಯೊಳಗಿನಿಂದ ತರಿಸಿಕೊಂಡು, ಹಸ್ತಾಕ್ಷರದೊಂದಿಗೆ ನನಗೆ ಕೊಟ್ಟು ಶುಭ ಹಾರೈಸಿದರು.

ಹೊತ್ತು ಹೋದದ್ದೇ ಗೊತ್ತಾಗಲಿಲ್ಲ. ನಮಗೆ ಹೊರಡಲು ಮನಸಿರಲಿಲ್ಲ. ಆದರೆ ಆ ಪರಿಸರಕ್ಕೆ ತೀರಾ ಪರಕೀಯರಂತೆ ಪ್ರವೇಶಿಸಿದ್ದ ನಮ್ಮ ಮೇಲೆ ಸ್ಥಳೀಯ ಸೊಳ್ಳೆಗಳು ಹರತಾಳ ಆರಂಭಿಸಿದ್ದವು. ಅವುಗಳ ಕುಟುಕು ಕಾರ್ಯಾಚರಣೆಯಿಂದ ಮೈಯೆಲ್ಲೆ ತಿಂಡಿ ಏಳುತ್ತಿತ್ತು. ಆದರೆ ತಮ್ಮ ಇಡೀ ಬದುಕನ್ನು ಹೀಗೆ ಪ್ರಾಣಿ, ಪಕ್ಷಿ, ಕೀಟ, ಮೃಗ, ಗಿಡ, ಮರಗಳ ನಡುವೆಯೇ ಕಳೆದಿದ್ದ ಆ ಮನೆಯವರು ಇಂತಹ ಅನುಭವಗಳೊಂದಿಗೆ ಗೆಳೆತನ ಏರ್ಪಡಿಸಿಕೊಂಡವರಷ್ಟು ಸಲೀಸಾಗಿದ್ದರು. ಅಲ್ಲದೇ, ನಾವು ಹೊರಡುವ ರೈಲಿನ ಸಮಯ ಸಮೀಪಿಸುತ್ತಿದ್ದರಿಂದ ಬೀಳ್ಕೊಂಡು ಹೊರಡಲು ಅನುವಾದೆವು.

ಅಷ್ಟರಲ್ಲಿ ಶ್ರೀದೇವಿಯಮ್ಮನವರು ಒಂದು ಪೊಟ್ಟಣದ ತುಂಬಾ ತಮ್ಮದೇ ಮರಗಳ ಸಪೋಟಾ ಹಣ್ಣುಗಳನ್ನು ಪ್ಯಾಕ್ ಮಾಡಿ ನನ್ನ ಕೈಗಿತ್ತರು. ನಾವು ಎಷ್ಟೇ ಮನವಿ ಮಾಡಿಕೊಂಡರೂ ಹಠ ಹಿಡಿದವರಂತೆ, ಗೇಟಿನವರೆಗೂ ಬಂದು ಬೀಳ್ಕೊಡುತ್ತೇನೆ ಅಂತ ಶಾಮಣ್ಣ ಹೆಜ್ಜೆ ಹಾಕಿದರು. ಅವರ ಕುಟುಂಬವೂ ಜತೆಗೆ ಬಂತು. ನಾವು ಕಾರಿನಲ್ಲಿ ಕೂತು ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಏನೋ ಪ್ರಮಾದವಾದವರಂತೆ ಶ್ರೀದೇವಿಯಮ್ಮನವರು “ಅಯ್ಯೋ, ಎಂಥಾ ಕೆಲ್ಸ ಆಯ್ತು” ಎಂದು ಉದ್ಘರಿಸಿದರು.

ನಾವೆಲ್ಲ ಅವರತ್ತ ಕುತೂಹಲದಿಂದ ನೋಡುತ್ತಿರಬೇಕಾದರೆ ಶಾಮಣ್ಣನವರು, “ಏನಾಯ್ತು?” ಎಂದು ಕೇಳಿಯೇಬಿಟ್ಟರು. “ಏನಿಲ್ಲ ಗಿರೀಶ್‌ಗೆ ಕೊಡೋಕೆ ಅಂತ ಒಂದಿಷ್ಟು ರವೆ ಉಂಡೆ, ಚಕ್ಕುಲಿ ಕಟ್ಟಿಟ್ಟಿದ್ದೆ. ಗಡಿಬಿಡೀಲಿ ಮರೆತೇ ಹೋಯ್ತು” ಅಂದರು ಅಮ್ಮ.

“ಈಗೇನಾಯ್ತು, ಹೋಗಿ ತಂದುಕೊಡಬಹುದಲ್ವಾ” ಶಾಮಣ್ಣ ಪ್ರತಿಕ್ರಿಯಿಸಿದರು.

ಗೇಟಿನಿಂದ ಮನೆವರೆಗಿನ ಆ ಕತ್ತಲು ಹಾದಿಯಲ್ಲಿ ಅವರನ್ನು ಮತ್ತೆ ಕಳಿಸಿ ತೊಂದರೆಕೊಡಲು ನನಗೆ ಕೊಂಚವೂ ಇಷ್ಟವಾಗಲಿಲ್ಲ. “ಇರಲಿ ಬಿಡಿ ಸಾರ್. ಈ ಪುಸ್ತಕದ ಕುರಿತು ಮಾತಾಡಲು ಮತ್ತೆ ಬರ್ತೀನಿ. ಆಗ ತಗೊಂಡ್ ಹೋಗ್ತೀನಿ. ಈಗ ಹಣ್ಣು ಸಿಕ್ಕಿದೆಯಲ್ಲ, ಅಷ್ಟೇ ಸಾಕು” ಎಂದು ಗೋಗರೆದ ನಂತರ ಸುಮ್ಮನಾದರು. ನಾನು ಅವರ ಮನೆಗೆ ಹೋಗಿದ್ದು ಮತ್ತು ಇಡೀ ಕುಟುಂಬವನ್ನು ಭೇಟಿಯಾಗಿದ್ದೂ ಇದೇ ಮೊದಲು. ನನ್ನಂತವನಿಗೇ ಇಷ್ಟು ಪ್ರೀತಿ ತೋರುವ ಆ ಕುಟುಂಬದ ಆತ್ಮೀಯತೆ ಬೆರಗು ಹುಟ್ಟಿಸುವಂತಿತ್ತು! ಮನೆಗೆ ಯಾರೇ ಹೋಗಲಿ, ಹೋದವರಿಗೆ ಈ ಬೆಚ್ಚನೆಯ ಪ್ರೀತಿ ಕಟ್ಟಿಟ್ಟ ಬುತ್ತಿ… ಉಣ್ಣಲೇಬೇಕು, ಉಂಡು ತೇಗಲೇಬೇಕು. ಬೇರೆ ದಾರಿಯೇ ಇಲ್ಲ!

ಗಿರೀಶ್ ತಾಳಿಕಟ್ಟೆ

ಗಿರೀಶ್ ತಾಳಿಕಟ್ಟೆ
ಸಮಾಜದ ಆಗು-ಹೋಗುಗಳಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುವ ಯುವ ಬರಹಗಾರರು ಮತ್ತು ಪತ್ರಕರ್ತರು.


ಇದನ್ನೂ ಓದಿ: ಶಾಮಣ್ಣ ಮತ್ತು ಇಬ್ರಾಹಿಂ ಸಾಹೇಬರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...