ಅಭಿವೃದ್ಧಿ ಎಂಬ ವಿನಾಶ
ಕೆಲವು ಪದಗಳ ಅರ್ಥಗಳು ತುಂಬಾ ಬದಲಾಗುತ್ತವೆ, ಅವುಗಳು ಒಮ್ಮೆ ವಿಭಿನ್ನ ಅರ್ಥವನ್ನು ಹೊಂದಿದ್ದವು ಎಂಬುದನ್ನೇ ನಾವು ಮರೆತುಬಿಡುತ್ತೇವೆ. ನಾವು ಹತ್ತು ಹದಿನೈದು ವರ್ಷಗಳಿಂದ “ಉದಾರೀಕರಣ” ಎಂಬ ಪದವನ್ನು ಬಳಸುತ್ತಿದ್ದೇವೆ. ಸಾಮಾನ್ಯವಾಗಿ ಉದಾರ ಎಂದರೆ ಒಳ್ಳೆಯ ಪದ. ಇದರರ್ಥ ಒಳ್ಳೆಯತನ, ವಿಸ್ತಾರ ಮನಸ್ಸು ಎಂದಾಗುತ್ತದೆ. ನಾವೆಲ್ಲರೂ ಬಾಲ್ಯದಲ್ಲಿ ಇದನ್ನು ಬಳಸುತ್ತಿದ್ದೆವು. ಇನ್ನೂ ಕೆಲವು ಬೇರೆ ಸಂದರ್ಭಗಳಲ್ಲೂ ಬಳಸಲಾಗುತ್ತದೆ. ಆದರೆ ಉದಾರೀಕರಣ ಎಂಬುದೀಗ ಭಯಹುಟ್ಟಿಸುವ ಪದವಾಗಿಬಿಟ್ಟಿದೆ.
ಉದಾರೀಕರಣ ಎಂದರೇನು? ಬಂಡವಾಳಶಾಹಿ ಕಂಪನಿಗಳಿಗೆ, ಕಂಪನಿಗಳನ್ನು ಸ್ಥಾಪಿಸುವ ಮತ್ತು ವ್ಯಾಪಾರ ಮಾಡುವ ನಿಯಮಗಳನ್ನು ಅವರಿಗೆ ಸರಳಗೊಳಿಸಲಾಗಿದೆ. ಈ ಕಾರಣದಿಂದಾಗಿ ಅವರು ಸುಲಭವಾಗಿ ಕಂಪನಿಗಳನ್ನು ಸ್ಥಾಪಿಸಬಹುದು. ಅನುಮತಿಗಳು ಸುಲಭವಾಗಿ ಸಿಗುತ್ತವೆ. ಆಮದುಗಳನ್ನು ಸುಲಭವಾಗಿ ಮಾಡಬಹುದು. ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಎಲ್ಲರೂ ಅವರಿಗೆ ಎಲ್ಲಾ ಅನುಮತಿಗಳನ್ನು ಸುಲಭವಾಗಿ ನೀಡುತ್ತಾರೆ. ಅವರಿಗೆ ಉದಾರವಾಗಿರುವುದು ಎಂದರೆ ಎಲ್ಲವನ್ನೂ ಸರಳಗೊಳಿಸುವುದು, ಆದ್ದರಿಂದ ನಮಗೆ ಕಷ್ಟವಾಯಿತು. ಆದ್ದರಿಂದ ಉದಾರೀಕರಣವು ಕೆಟ್ಟ ಪದವಾಗಿ ಮಾರ್ಪಟ್ಟಿದೆ.
ಅಭಿವೃದ್ಧಿ ಎಂಬುದೂ ಈಗ ಅಂತಹದೇ ಒಂದು ಮಾತಾಗಿಬಿಟ್ಟಿದೆ. ಶಾಲೆ, ಕಾಲೇಜಿನಲ್ಲಿ ಓದುತ್ತಿದ್ದಾಗ ಅಭಿವೃದ್ಧಿಯ ಬಗ್ಗೆ ನಾವು ಚಿಂತಿಸುತ್ತಿದ್ದೆವು. ವಿಶಾಖಪಟ್ಟಣದಲ್ಲಿ ಉಕ್ಕಿನ ಕಾರ್ಖಾನೆ ಬೇಕೆಂದು ಹೋರಾಟ ಮಾಡಿದೆವು. ನಾನು ತಿರುಪತಿಯಲ್ಲಿ ಓದುತ್ತಿದ್ದೆ. ವಿಶಾಖಪಟ್ಟಣಂ ಎಲ್ಲಿದೆ ಎಂದು ನಾನು ತಿಳಿದಿದ್ದೆನಾದರೂ, ನನ್ನ ಗೆಳೆಯರಿಗೆ ಯಾರಿಗೂ ಗೊತ್ತಿರಲಿಲ್ಲ – ಗೋಡೆಗಳ ಮೇಲೆ “ವಿಶಾಖ ಉಕ್ಕು ಆಂಧ್ರರ ಹಕ್ಕು” ಎಂದು ಬರೆಯುತ್ತಿದ್ದೆವು. ಅಭಿವೃದ್ಧಿ ಎಂದರೆ ಸಾಮಾನ್ಯವಾಗಿ ಒಂದು ದೃಶ್ಯ, ಒಂದು ಚಿತ್ರಣವಿದೆ ನಮಗೆ. ಆ ಚಿತ್ರಣ ಯಾವುದು? ರಸ್ತೆಗಳಿಲ್ಲದ ಹಳ್ಳಿಗಳಿಗೆ ರಸ್ತೆ ಬರುತ್ತದೆ, ಬಸ್ಸುಗಳಿಲ್ಲದ ಊರಿಗೆ ಬಸ್ಸು ಬರುತ್ತದೆ. ಶಾಲೆ ಇಲ್ಲದ ಊರಿಗೆ ಶಾಲೆ ಬರುತ್ತದೆ. ಆಸ್ಪತ್ರೆ ಬರುತ್ತದೆ. ಒಂದು ಕಾರ್ಖಾನೆ ಬಂದರೆ ನೂರು ಜನರಿಗೆ ಉದ್ಯೋಗ ಕೊಡುತ್ತದೆ. ಹಿಂದುಳಿದ ಪ್ರದೇಶಗಳಲ್ಲಿ, ಕೃಷಿಯು ಅಷ್ಟಾಗಿ ಲಾಭದಾಯಕವಾಗಿರದ ಆ ಪ್ರದೇಶಗಳಲ್ಲಿ ಕೃಷಿ ಬಿಟ್ಟು, ಕಾರ್ಖಾನೆಯಲ್ಲಿ ಕೆಲಸ ಮಾಡುವ ಅವಕಾಶಗಳು ಲಭಿಸುತ್ತವೆ. ಈ ಚಿತ್ರ ಇದ್ದ ಕಾರಣ ನಮಗೆ ಅಭಿವೃದ್ಧಿ ಬೇಕೆನ್ನುತ್ತಿದ್ದೆವು. ಹಾಗಾದರೆ ನಾವು ಆಗ ಮೂರ್ಖರಾಗಿದ್ದೇವೆ? ಅಥವಾ ನಾವು ಚಿಕ್ಕವರಿದ್ದಾಗ ನಮಗೆ ಬೇಕಿತ್ತೆಂದು, ಈಗ ಅದು ನಿಮಗೆ ಬರುತ್ತಿದ್ದರೆ ನಾವು ಬೇಡವೆನ್ನುತ್ತಿದ್ದೇವೆಯೇ- ಅದನ್ನು ಕೂಡ ಆಲೋಚಿಸಬೇಕು.
ಸಮಸ್ಯೆ ಎಂದರೆ ಅಭಿವೃದ್ಧಿಯ ಅರ್ಥವೇ ಬದಲಾಗಿದೆ. ಹಾಗಾಗಿ ಇದು ಭಯ ಹುಟ್ಟಿಸುವ ಪದವಾಯಿತು. ಹಳ್ಳಿಗಳಿಗೆ ರಸ್ತೆಗಳು, ಶಾಲೆಗಳು, ಬಸ್ಸುಗಳು ಬೇಕು ಎನ್ನುವುದು ಈಗಲೂ ಅಭಿವೃದ್ಧಿಯೇ. ಸರ್ಕಾರ ಕೂಡ ಅವು ತಮಗೆ ಬೇಡ ಎಂದು ಹೇಳುವುದಿಲ್ಲ. ಆದರೆ ಸರಕಾರ ಇಂತಹ ಸೌಲಭ್ಯಗಳನ್ನು ಒಂದು ಕಾರ್ಯವನ್ನಾಗಿ ತೆಗೆದುಕೊಂಡು ಸೌಲಭ್ಯಗಳನ್ನು ಕಲ್ಪಿಸುತ್ತಾ ಹೋದರೆ ಇರುವ ಹಣವೆಲ್ಲವೂ ಅವುಗಳಿಗೇ ಖರ್ಚಾಗುತ್ತದೆ. ಬದಲಾಗಿ ಸರಕಾರ ತನ್ನಲ್ಲಿರುವ ನಿಧಿಯನ್ನು, ತನ್ನಲ್ಲಿರುವ ರಾಷ್ಟ್ರದ ಸಂಪತ್ತನ್ನು ಬಂಡವಾಳಿಗರಿಗೆ ಭಾರೀ ಬಂಡವಾಳ ಹೂಡಲು ಬೇಕಾದ ಸೌಕರ್ಯಗಳನ್ನು ಒದಗಿಸಿದರೆ, ಅವರು ಬಂದು ಹೂಡಿಕೆ ಮಾಡಿದರೆ, ಅದರಿಂದ ಸಂಪತ್ತು ಹೆಚ್ಚಾದರೆ, ಹೆಚ್ಚಿದ ಸಂಪತ್ತಿನಿಂದ ಸಾರ್ವಜನಿಕರಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಅನುಕೂಲಗಳು ಒದಗುತ್ತವೆ. ಈಗಿನ ಸರ್ಕಾರ ಅದನ್ನೇ ಮಾತನಾಡುತ್ತಿದೆ. ಅಲ್ಲಿಯೇ ನಮಗೂ ಅದಕ್ಕೂ ವ್ಯತ್ಯಾಸ ಇರುವುದು.
ನಮ್ಮ ದೇಶವು ಒಂದು ಯೋಜನಾ ಆಯೋಗವನ್ನು ಹೊಂದಿದೆ. ಇದನ್ನು ಯೋಜನಾ ಆಯೋಗ ಎಂದು ಕರೆಯಲಾಗುತ್ತದೆ. ಮೊನ್ನೆ 11ನೇ ಯೋಜನಾ ಆಯೋಗದ ವರದಿ ಬಂದಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ಯೋಜನಾ ಆಯೋಗವು ವರದಿಯನ್ನು ಸಿದ್ಧಪಡಿಸುತ್ತದೆ. ದೇಶದ ಅಭಿವೃದ್ಧಿಯನ್ನು ಹೇಗೆ ಸಾಧಿಸಬೇಕು ಎಂದು ಅವರು ಒಂದಷ್ಟು ಬರೆಯುತ್ತಾರೆ. ಅದರ ಭಾಗವಾಗಿ ಅಭಿವೃದ್ಧಿ. ಪ್ರಗತಿಯನ್ನು ವ್ಯಾಖ್ಯಾನಿಸಿ, ಸೂಚಕಗಳನ್ನು ಬರೆದಿರುತ್ತಾರೆ. ಸೂಚಕ ಎಂದರೇನು? ಐದು ವರ್ಷಗಳ ಕೆಳಗೆ ಪೂರ್ಣಗೊಂಡ 8ನೇ ಪಂಚವಾರ್ಷಿಕ ಯೋಜನೆ ಮತ್ತು ನಂತರ ಪೂರ್ಣಗೊಂಡ 9ನೇ ಪಂಚವಾರ್ಷಿಕ ಯೋಜನೆ ನಡುವೆ ಯಾವ ಬದಲಾವಣೆಗಳು ಸಂಭವಿಸಿದವು? ಏನಾದರೂ ಅಭಿವೃದ್ಧಿ ಬಂತೇ? ಪ್ರಗತಿಯಾಗಿದೆಯೇ? ಇವುಗಳಿಗೆ ಮಾಪಕಗಳ ಅಗತ್ಯವಿದೆ ಮತ್ತು ಆ ಮಾಪಕಗಳೇ ಸೂಚಕಗಳಾಗಿವೆ. ಆಗ ಇದ್ದ ಸೂಚಕಗಳು ಯಾವುವು? ಉದಾಹರಣೆಗೆ, ಬಡತನರೇಖೆಗಿಂತ ಕೆಳಗಿರುವ ಜನರ ಸಂಖ್ಯೆ ಎಷ್ಟು ಕಡಿಮೆಯಾಗಿದೆ? ಅದೊಂದು ಸೂಚಕ- ಒಂದು ಅಳತೆಯಾಗಿದೆ; ಎಷ್ಟು ಪ್ರಗತಿ ಸಾಧಿಸಿದೆ ಎಂಬುದರ ಒಂದು ಅಳತೆಯಾಗಿದೆ.
ಸರಿಯಾದ ವೈದ್ಯಕೀಯ ಸೇವೆ ಅಥವಾ ಸರಿಯಾದ ಆಸ್ಪತ್ರೆಯಿಲ್ಲದೆ ಎಷ್ಟು ಮಹಿಳೆಯರು ಹೆರಿಗೆಯಲ್ಲಿ ಸಾಯುತ್ತಾರೆ? ಆ ಸಂಖ್ಯೆ ಕಡಿಮೆಯಾಗಿದೆಯೇ? ಸಾವಿರ ಜನನಕ್ಕೆ 60 ಹೆಣ್ಣು ಮರಣಗಳಿದ್ದರೆ ಈಗ ಅದು ನೂರಕ್ಕೆ 40ಕ್ಕೆ ಇಳಿದಿದೆಯೇ, ಹೆಚ್ಚಾಗಿದೆಯೇ? ಅದೊಂದು ಸೂಚಕ. ಬಾಲ್ಯ ಮುಗಿಯುವ ಮೊದಲು ಸಾಯುವ ಮಕ್ಕಳನ್ನು ಇಂಗ್ಲಿಷ್‌ನಲ್ಲಿ Child Mortality (ಶಿಶು ಮರಣ) ಎಂದು ಕರೆಯುತ್ತಾರೆ, ಅದು ಕಡಿಮೆಯಾಗಿದೆಯೇ? ಅಥವಾ ಹೆಚ್ಚಿದೆಯೇ? ಸಾಕ್ಷರತೆ, ಶಾಲೆಗೆ ಬರುವ ಮಕ್ಕಳ ಸಂಖ್ಯೆ ಇತ್ಯಾದಿಗಳನ್ನು ಬರೆದು ಅವುಗಳ ಜೊತೆಗೆ ಇನ್ನೊಂದು ಸೂಚಕವನ್ನು ಸೇರಿಸಲಾಯಿತು. ಒಟ್ಟಾರೆ ಆರ್ಥಿಕ ಬೆಳವಣಿಗೆ ದರ ಎಷ್ಟು? ಅಂದರೆ ಖಾಸಗಿ ವಲಯ, ಸರ್ಕಾರಿ ವಲಯ, ಕೃಷಿ ಕ್ಷೇತ್ರ, ಕೈಗಾರಿಕಾ ವಲಯ ಮತ್ತು ಹೋಟೆಲ್‌ಗಳು ಸೇರಿದಂತೆ ದೇಶದ ಒಟ್ಟು ಉತ್ಪಾದನೆಯು ಒಟ್ಟು ರಾಷ್ಟ್ರೀಯ ಉತ್ಪನ್ನವಾಗಿದೆ. ಜಿ.ಡಿ.ಪಿ. ಎಂದು ಇದನ್ನು ಇಂಗ್ಲಿಷ್‌ನಲ್ಲಿ ಕರೆಯಲಾಗುತ್ತದೆ – ಅದು ಎಷ್ಟು ಬೆಳೆದಿದೆ. ಅದು ಒಂದು ಸೂಚಕವಾಗಿತ್ತು.
ಈಗ ವಿಶ್ವಬ್ಯಾಂಕ್ ಹೇಳಿರುವುದು ಈ ಎಲ್ಲಾ ಸೂಚಕಗಳನ್ನು ಇಟ್ಟುಕೊಂಡು, ಇದಕ್ಕೆ 15 ಕೋಟಿ, ಅದಕ್ಕೆ 30 ಕೋಟಿ, ಇದಕ್ಕೆ 40 ಕೋಟಿ- ಹೀಗೆ ಖರ್ಚು ಮಾಡಿದರೆ ದೇಶ ಅಭಿವೃದ್ಧಿಯಾಗುವುದಿಲ್ಲ. ಅಭಿವೃದ್ಧಿಯಾಗುವುದೆಂದರೆ ವಿಶ್ವಬ್ಯಾಂಕ್‌ನ ಪರಿಕಲ್ಪನೆಯೇನು? ದೇಶ ಅಮೆರಿಕದಂತಾಗಬೇಕು, ಭಾರತ ಅಮೆರಿಕವನ್ನು ಅನುಸರಿಸಬೇಕು. ಇಂಗ್ಲೆಂಡ್‌ನಂತಿರಬೇಕು, ಫ್ರಾನ್ಸ್‌ನಂತಿರಬೇಕು. ನಿಮ್ಮ ದೇಶವನ್ನು ಹಾಗೆ ಮಾಡಬಯಸಿದರೆ, ನೀವು ಹತ್ತು ಹನ್ನೆರಡು ಸೂಚಕಗಳನ್ನು ಇಟ್ಟುಕೊಂಡು ತಾಯಂದಿರ ಮರಣ ಪ್ರಮಾಣವನ್ನು ಕಡಿಮೆ ಮಾಡಲು 500 ಕೋಟಿ ರೂ. ನಾವು ಖರ್ಚು ಮಾಡುತ್ತಿದ್ದೇವೆ, ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಈ 700 ಕೋಟಿ ಖರ್ಚು ಮಾಡುತ್ತಿದ್ದೇವೆ. ಸಾಕ್ಷರತೆ ಹೆಚ್ಚಿಸಲು ಈ ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ- ಹೀಗೆ ವೆಚ್ಚ ಮಾಡುತ್ತಾ ಹೋದರೆ ಫಲಿತಾಂಶ ಸಿಗುವುದಿಲ್ಲ. ನೀವು ಏನು ಮಾಡಬೇಕೆಂದರೆ ಮಾಡುವ ಎಲ್ಲಾ ವೆಚ್ಚವನ್ನು ನಮ್ಮ ಮುಖೇಶ್ ಅಂಬಾನಿ, ಇಲ್ಲದಿದ್ದರೆ ಅನಿಲ್ ಅಂಬಾನಿಯವರು ಅಥವಾ ಜಿಂದಾಲ್‌ನವರು, ಮಿತ್ತಲ್‌ನವರು, ಇಲ್ಲದಿದ್ದರೆ ಅವರ ಅಮೆರಿಕನ್ ಸ್ನೇಹಿತರು… ಇವರೆಲ್ಲ ಇದ್ದಾರಲ್ಲ ಭಾರತದಲ್ಲಿ ಹೂಡಿಕೆ ಮಾಡಲು- ಅವರಿಗೆ ಸಾಕಷ್ಟು ಸೌಲಭ್ಯಗಳು ಬೇಕಾಗುತ್ತವೆ. ಅವರಿಗೆ ಅತ್ಯುತ್ತಮವಾದ ರಸ್ತೆಗಳು ಬೇಕು, ಅತ್ಯುತ್ತಮ ವಿಮಾನ ನಿಲ್ದಾಣಗಳು ಬೇಕು. ವಿಶಾಲವಾದ ಭೂಪ್ರದೇಶ ಬೇಕು. ಇಂತಹ ರಸ್ತೆಗಳಿರುವ ಗ್ರಾಮಗಳು ಅವರಿಗೆ ಬೇಡ. ಅವರಿಗೆ ಅಂತಾರಾಷ್ಟ್ರೀಯ ಮಾನದಂಡಗಳನ್ನು ಹೊಂದಿರುವ ಟೌನ್‌ಶಿಪ್‌ಗಳು ಬೇಕು, ಅಂತಾರಾಷ್ಟ್ರೀಯ ಗುಣಮಟ್ಟದ ನಗರಗಳು ಬೇಕು. ನೆಲದ ಮೇಲೆ ರೈಲುಗಳು ಓಡಿದರೆ ಸಾಕಾಗುವುದಿಲ್ಲ. ನಮ್ಮ ಹೈದರಾಬಾದಿನಲ್ಲಿ ಈಗ ಗಾಳಿಯಲ್ಲಿ ಚಲಿಸುವಂತಹ ರೈಲು ಬರುತ್ತಿದೆಯಂತೆ. ಹತ್ತು ವರ್ಷಗಳ ನಂತರ ನೀವು ಹೈದರಾಬಾದ್‌ಗೆ ಬಂದರೆ ನೀವು ಆ ರೈಲಿನಲ್ಲಿ ಹೋಗಬಹುದು- ನಾವು ಅಲ್ಲಿದ್ದರೆ ಹಾಗೆಯೇ ನೀವು ಇನ್ನೂ ಇದ್ದರೆ, ಹೈದರಾಬಾದ್ ಇನ್ನೂ ಆಗ ಉಳಿದುಕೊಂಡಿದ್ದರೆ. ಅಂತಾರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯ ಎಂದರೆ 24 ಗಂಟೆ ಕರೆಂಟ್, ಕೇಳಿದಷ್ಟು ನೀರು ಬೇಕು, ಪಕ್ಕದಲ್ಲೇ ಹಡಗಿನ ಬಂದರು ಅಗತ್ಯ. ಪ್ರತಿ ಜಿಲ್ಲೆಗೆ ಒಂದು ವಿಮಾನ ನಿಲ್ದಾಣದ ಅಗತ್ಯವಿದೆ. ಇವುಗಳ ಮೇಲೆ ನೀವು ಖರ್ಚು ಮಾಡಿ. ಇತರ ವಿಷಯಗಳಿಗೆ ಅನಗತ್ಯವಾಗಿ ಖರ್ಚು ಮಾಡಬೇಡಿ. ನೀವು ಇವುಗಳ ಮೇಲೆ ಖರ್ಚು ಮಾಡಿದರೆ ದೊಡ್ಡ ಬಂಡವಾಳಶಾಹಿ ಕಂಪನಿಗಳು- ಸ್ಥಳೀಯ ಮತ್ತು ವಿದೇಶಿ- ಬಂದು ಹೂಡಿಕೆ ಮಾಡುತ್ತವೆ.
ನಿಮ್ಮ ದೇಶದಲ್ಲಿ ಕಾರ್ಮಿಕ ಕಾನೂನುಗಳು ತುಂಬಾ ಕಠಿಣವಾಗಿವೆ- ಯಾವುದು ಕಟ್ಟುನಿಟ್ಟಾಗಿದೆ? ಕಾರ್ಮಿಕ ಮುಖಂಡರು ಯಾರೂ ಮಾತನಾಡುತ್ತಿಲ್ಲವಾದರೂ, ಅವರು ಅಂದುಕೊಳ್ಳುತ್ತಿದ್ದಾರೆ, ಅದು ಇಲ್ಲಿ ಕಠಿಣವಾಗಿದೆ ಎಂದು. ಉದ್ಯೋಗದಿಂದ ತೆಗೆದುಹಾಕಬೇಕೆಂದರೆ ಕಷ್ಟ, ಸಂಖ್ಯೆ ಕಡಿತಗೊಳಿಸಬೇಕೆಂದರೆ ಕಷ್ಟ, ಲೇ ಆಫ್ ಮಾಡುವುದು ಕಷ್ಟ. ನಿಮ್ಮ ದೇಶದಲ್ಲಿ ಇವೆಲ್ಲವನ್ನೂ ಸರಳಗೊಳಿಸಿ. ಉದಾರೀಕರಣ ಎಂದರೆ ಇದೇ. ಅದಕ್ಕೇ ಅದು ನಮಗೆ ಕೆಟ್ಟ ಪದವಾಗಿ ಪರಿಣಮಿಸಿದೆ. ಕೆಲಸ ಇದ್ದರೆ ಕೆಲಸ ಕೊಡುತ್ತಾನೆ, ಇಲ್ಲದಿದ್ದರೆ ಮನೆಗೆ ಕಳುಹಿಸುತ್ತಾನೆ. ಹೈರ್ ಮತ್ತು ಫೈರ್ ಎಂಬುದು ಇಂಗ್ಲಿಷ್‌ನಲ್ಲಿ ಬಹಳ ಪ್ರಾಸಬದ್ಧವಾದ ಪದವಾಗಿದೆ. ಅಂತಹ ಕಾರ್ಮಿಕ ಸಂಬಂಧಗಳು ಇರಬೇಕು. ಇದಕ್ಕೆ ಹಣ ವ್ಯಯಿಸಿದರೆ ಹೂಡಿಕೆಯೂ ದೊಡ್ಡದಾಗಿ ಬರುತ್ತದೆ. ಉತ್ಪಾದಕತೆ ಮಹತ್ತರವಾಗಿ ಹೆಚ್ಚಾಗುತ್ತದೆ. ಬೆಳವಣಿಗೆಯ ದರವು ಅಸಾಧಾರಣವಾಗಿರುತ್ತದೆ. ಸಂಪತ್ತು ಬಹಳ ವೃದ್ಧಿಯಾಗುತ್ತದೆ. ಇದು ಕೆಲವು ಹಂತದಲ್ಲಿ ಕಡಿಮೆಯಾಗುವುದೂ ಇರುತ್ತದೆ ಎನ್ನಿ. ಪಿರಮಿಡ್‌ನ ಮೇಲ್ಭಾಗದಲ್ಲಿ ಇದನ್ನು ಹೆಚ್ಚಿಸಿದರೆ, ಒಂದು ಹಂತದಲ್ಲಿ ಅದು ಪಿರಮಿಡ್‌ನ ಕೆಳಭಾಗದಲ್ಲಿರುವ ಹತ್ತು ಜನರಿಗೂ ಒಂದಲ್ಲಾ ಒಂದು ದಿನ ತಲುಪದೇ ಇರುವುದಿಲ್ಲ. ಆ ರೀತಿಯಾಗಿ ಬಡವರಿಗೂ ಮುಂದೊಂದು ದಿನ ಅನ್ನ ಸಿಗುತ್ತದೆ. ಉದ್ಯೋಗಗಳು ಸಿಗಲಿವೆ. ಈ ಕ್ರಮದಲ್ಲಿ ಏನು ಸಿಗುತ್ತದೆಯೋ ಅದು ಸಿಕ್ಕಂತೆ. ಇಲ್ಲದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. “ನೀವು ಸಂಕ್ಷೇಮ, ಬಹುಮುಖಿ ಅಭಿವೃದ್ಧಿ ಎಂದು ವಿಶಾಲ ತಳಹದಿಯ ಮೇಲೆ ಅನಗತ್ಯವಾಗಿ ಖರ್ಚು ಮಾಡಬೇಡಿ” ಎಂದು ವಿಶ್ವಬ್ಯಾಂಕ್ ಹೇಳಿತು. ನಮ್ಮವರಿಗೆ ಅದು ಚೆನ್ನಾಗಿದೆ. ನಮ್ಮವರೆಂದರೆ ಅವರಿಗೆ ಸಂಬಂಧಿಸಿದವರೇ ಎಲ್ಲರೂ ಕೂಡ. ನಮ್ಮವರೆಂದರೆ ಕೇಂದ್ರ ಸಂಪುಟ ಮತ್ತು ರಾಜ್ಯ ಸಚಿವಸಂಪುಟದಲ್ಲಿ ಇರುವವರ ಸಂಬಂಧಿಗಳು ಎಂದರ್ಥ. ಸಾಧ್ಯವಿದ್ದರೆ ಈ ಕಂಪನಿಗಳಿಗೆ ನೇರ ಏಜೆಂಟರು, ಇಲ್ಲದಿದ್ದರೆ ಅವರಿಗೆ ಗುತ್ತಿಗೆದಾರರು. ದೆಹಲಿಯಲ್ಲಿದ್ದರೆ ಏಜೆಂಟ್‌ಗಳು, ಹೈದರಾಬಾದ್‌ನಲ್ಲಿದ್ದರೆ ಗುತ್ತಿಗೆದಾರರು, ದಲ್ಲಾಳಿಗಳು. ಆದ್ದರಿಂದ, ಅವರು ಅಭಿವೃದ್ಧಿ ಎಂದು ಯಾವುದರ ಬಗ್ಗೆ ಮಾತನಾಡುತ್ತಿದ್ದಾರೆಂದರೆ ಹಳ್ಳಿಗೆ ರಸ್ತೆ, ಬಸ್ಸು, ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸುವುದು ಎಂದಲ್ಲ- ಹೂಡಿಕೆದಾರರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಖರ್ಚು ಮಾಡುವುದನ್ನು ಅಭಿವೃದ್ಧಿ ಎಂದು ಹೇಳುತ್ತಿದ್ದಾರೆ. ಅದರಿಂದ ನಮಗೆ ಹೊಟ್ಟೆ ಉರಿಯುತ್ತದೆ. ಅಭಿವೃದ್ಧಿ ಎಂದರೆ ಕೋಪ ಬರುತ್ತದೆ ಇಂದು.
ಅವರ ವಾದವೇನು? ಎಸ್.ಇ.ಜಡ್ ವಿಷಯದಲ್ಲಿ ಮಾಡಲಾಗುತ್ತಿರುವ ವಾದವೇನು? ನಿಮಗೆ ಉದ್ಯೋಗ ಸಿಗುತ್ತದೆ, ಜೀವನಾಧಾರ ದೊರೆಯುತ್ತದೆ. ಇದನ್ನು ಬಹಳ ಒತ್ತಿ ಯಾಕೆ ಹೇಳಲಾಗುತ್ತಿದೆ ಎಂದರೆ ಗ್ರಾಮೀಣ ಭಾಗದಲ್ಲಿ ಮುಖ್ಯವಾಗಿ ಸಣ್ಣ ರೈತರು, ಕೃಷಿಕ ಕುಟುಂಬಗಳಲ್ಲಿ, ಈ ಕೃಷಿ ಬಿಟ್ಟು ಉದ್ಯೋಗಕ್ಕೆ ಸೇರಿದರೆ ನೆಮ್ಮದಿಯಾಗಿ ಬದುಕಬಹುದು ಎಂಬ ಆಶಾಭಾವನೆ ತಪ್ಪದೆ ಇರುತ್ತದೆ. ಏಕೆಂದರೆ ಕೃಷಿಗೆ ಹೆಚ್ಚಿನ ಭೂಹಿಡುವಳಿ ಇದ್ದರೆ ಬೇರೆ ವಿಷಯ, ಇಲ್ಲದಿದ್ದರೆ ಅದು ತುಂಬಾ ಸಮಸ್ಯಾತ್ಮಕ ವಿಷಯ. ಬೆಳೆ ಬರುವುದೂ ಗೊತ್ತಾಗುವುದಿಲ್ಲ. ಬೆಳೆ ಆಗದಿರುವುದೂ ಗೊತ್ತಾಗುವುದಿಲ್ಲ. ಬೆಲೆ ಹೆಚ್ಚಾಗುವುದೂ ತಿಳಿಯುವುದಿಲ್ಲ, ಇಳಿಯುವುದೂ ತಿಳಿಯುವುದಿಲ್ಲ. ಮಳೆ ಬರುತ್ತದೋ ಇಲ್ಲವೋ ಗೊತ್ತಿಲ್ಲ. ಎಷ್ಟೋ ಉದ್ಯೋಗಿಗಳು ಮಾಸಿಕ ಸಂಬಳ ಕೊಡುವ ಕೆಲಸವಿದ್ದರೂ ಯಾವುದೇ ಕೆಲಸ ಮಾಡುವುದಿಲ್ಲ. ರೈತರೂ ಅದನ್ನು ನೋಡುತ್ತಿರುತ್ತಾರೆ. ಹಾಗಾಗಿ ಅವರಿಗೆ ಉದ್ಯೋಗ ಎಂದರೆ ನೆಮ್ಮದಿಯ ಜೀವನ ಎಂಬ ಭಾವನೆ ಇದೆ. ರಾಜಶೇಖರ ರೆಡ್ಡಿ 25 ಲಕ್ಷ ಉದ್ಯೋಗ, 30 ಲಕ್ಷ ಉದ್ಯೋಗ ಸೃಷ್ಟಿಯಾಗುವುದಾಗಿ ಹೇಳುತ್ತಿದ್ದಾರೆ. ನಾವು ವಿಶ್ಲೇಷಿಸಿ ಕೇಳಬೇಕಾದ ಪ್ರಶ್ನೆಯೆಂದರೆ ಆಂಧ್ರಪ್ರದೇಶದಲ್ಲಿ ಈವರೆಗೆ 58 ಎಸ್.ಇ.ಜಡ್.ಗಳನ್ನು ಅನುಮೋದಿಸಲಾಗಿದೆ. ದೇಶದಲ್ಲಿ ನಾವು ನಂಬರ್ 2. ಮಹಾರಾಷ್ಟ್ರ ನಂಬರ್ 1. ನಮ್ಮ ಹಿಂದೆ ತಮಿಳುನಾಡು ಇದೆ. ಉಳಿದವರು ಪೈಪೋಟಿಗಿಳಿದು ಮೇಲಕ್ಕೆ ಬರುತ್ತಿದ್ದಾರೆ. ರಾಜಶೇಖರ ರೆಡ್ಡಿ ಅವರು ಈ 58 ಎಸ್.ಇ.ಜಡ್.ಗಳಲ್ಲಿ 50 ಲಕ್ಷ ಉದ್ಯೋಗಗಳ ಸೃಷ್ಟಿಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಈ 58 ಎಸ್.ಇ.ಜಡ್.ಗಳಲ್ಲಿ 37 ಎಸ್.ಇ.ಜಡ್.ಗಳು ಐ.ಟಿ. ವಲಯಕ್ಕೆ ಸೇರಿದವುಗಳು. ಐಟಿ ಎಂದರೆ ಮಾಹಿತಿ ತಂತ್ರಜ್ಞಾನ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಗಳು ಹತ್ತಾರು ಇರುತ್ತವೆಯೇ ಹೊರತು ನೂರಾರು ಸಂಖ್ಯೆಯಲ್ಲಿ ಕೂಡ ಇರುವುದಿಲ್ಲ. ಇನ್ನು ಸಾವಿರ ಸಂಖ್ಯೆ, ಲಕ್ಷ ಸಂಖ್ಯೆಗಳನ್ನು ಮರೆತುಬಿಡಿ.
ಅವರು ನೇರವಾಗಿ ಸುಳ್ಳು ಹೇಳುತ್ತಿದ್ದಾರೆ. ಆಂಧ್ರಪ್ರದೇಶ ಮಾತ್ರವಲ್ಲ, ದೇಶಾದ್ಯಂತ ಅನೇಕ ಬಾರಿ ಇದನ್ನು ಚೀನಾಕ್ಕೆ ಹೋಲಿಸಿ ಹೇಳಲಾಗುತ್ತದೆ. ಆ ಹೋಲಿಕೆಯ ಒಳಿತು ಕೆಡಕುಗಳ ಬಗ್ಗೆ ನಾವು ಇನ್ನೊಂದು ಸಮಯದಲ್ಲಿ ಮಾತನಾಡಬಹುದು, ಆದರೆ ಚೀನಾ ಬಹಳ ಅದ್ಭುತವಾಗಿದೆ ಎಂದು ನಾನು ಹೇಳುತ್ತಿಲ್ಲ. ಆದರೆ ಚೀನಾದಲ್ಲಿ ಹೆಚ್ಚಿನವು ತಯಾರಿಕಾ ಕಂಪನಿಗಳು. ಅಂದರೆ ಉತ್ಪನ್ನಗಳನ್ನು ಹೆಚ್ಚಳಗೊಳಿಸುವಂತಹ ಎಸ್.ಇ.ಜಡ್.ಗಳವು. ಅಲ್ಲಿ ಹೆಚ್ಚಿನ ಉದ್ಯೋಗಗಳಿರುವ ಅವಕಾಶಗಳಿವೆ. ಆದರೂ ಬಹಳಷ್ಟು ಸಮಸ್ಯೆಗಳಿವೆ. ಎಸ್.ಇ.ಜಡ್.ಗಳಲ್ಲಿ ಕನಿಷ್ಠ ವೇತನಗಳು ಸಿಕ್ಕುತ್ತಿಲ್ಲ. ಆತ್ಮಹತ್ಯೆಗಳು ನಡೆಯುತ್ತಿವೆ ಎಂಬ ಟೀಕೆಗಳೂ ಕೇಳಿಬರುತ್ತಿವೆ. ಅದರ ಹೊರತಾಗಿ, ನಮ್ಮ ಎಸ್.ಇ.ಜಡ್.ಗಳು ಕೆಲವೇ ತಯಾರಿಕಾ ಎಸ್.ಇ.ಜಡ್.ಗಳನ್ನು ಹೊಂದಿವೆ. ಬೌದ್ಧಿಕ ಆಸ್ತಿ, ಜ್ಞಾನ ಉದ್ಯಮ, ಸೇವಾ ಉದ್ಯಮ- ಈ ಕ್ಷೇತ್ರಗಳು ಭಾರತದಲ್ಲಿ ಹೆಚ್ಚು. ಇವು ಕೆಲವೇ ಉದ್ಯೋಗಗಳನ್ನು ಒದಗಿಸುತ್ತವೆ. ಆ ಉದ್ಯೋಗಗಳಲ್ಲಿ ಹೆಚ್ಚಿನವು ಒಳ್ಳೆಯ ಶಿಕ್ಷಣದ ಪದವಿಗಳನ್ನು ಪಡೆದಿರುವ ಮತ್ತು ನಗರ ಪ್ರದೇಶಗಳ ಮೇಲ್ಜಾತಿ ಶ್ರೀಮಂತರ ಮಕ್ಕಳು ಮಾತ್ರ ಅವನ್ನು ಪಡೆಯುತ್ತಾರೆ, ಆದರೆ ಪ್ರಪಂಚದ ಉಳಿದವರಿಗೆ ಅಂದರೆ ತಮ್ಮ ಭೂಮಿಯನ್ನು ಕಳೆದುಕೊಳ್ಳುವವರಿಗೆ ಇವು ದೊರೆಯುವ ಸಂಭವವಿಲ್ಲ.
ಎರಡನೆಯದಾಗಿ, ನಾವು ಹಕ್ಕುಗಳ ಚಳವಳಿಯಲ್ಲಿ ಕೆಲಸ ಮಾಡುವಾಗ, ಸರ್ಕಾರ ಹೇಳುವುದೆಲ್ಲವೂ ಸುಳ್ಳು ಎಂದು ಯಾವಾಗಲೂ ಪೂರ್ತಿ ತಳ್ಳಿ ಹಾಕಿಬಿಡಬಾರದು ಎಂದು ನಾವು ಮತ್ತೆಮತ್ತೆ ಹೇಳುತ್ತೇವೆ. ಆದರೆ ಏನು ಮರೆಮಾಚಲಾಗಿದೆ ಎಂಬುದನ್ನು ನೋಡೋಣ. ಸರ್ಕಾರ ಕೆಲವು ವಾಸ್ತವಗಳನ್ನು ಹೇಳುತ್ತದೆ. ಕೆಲವು ಭಾಗಶಃ ವಾಸ್ತವಗಳನ್ನು ಹೇಳುತ್ತದೆ. ಕೆಲವು ವಕ್ರೀಕರಣಗಳನ್ನು ಹೇಳುತ್ತದೆ. ಬಹಳಷ್ಟು ಮರೆಮಾಚುತ್ತದೆ. ಅಡಗಿಸಿಟ್ಟಿರುವವುಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲು ಕಲಿತರೆ ಎಲ್ಲಾ ವಿಷಯಗಳು ಕ್ರಮೇಣ ಹೊರಬರುತ್ತವೆ. ನಮ್ಮ ಆಲೋಚನೆ ಪರಿಪೂರ್ಣವಾಗುತ್ತದೆ.
ಯಾವಾಗಲಾದರೂ ಸರಕಾರ ಹತ್ತು ಸಾವಿರ ಎಕರೆ ಜಮೀನು ತೆಗೆದುಕೊಳ್ಳುತ್ತಿದ್ದೇವೆ, ಇಲ್ಲಿ ಎಸ್.ಇ.ಜಡ್. ಬರುತ್ತದೆ, ಇಂತಹದೊಂದು ಕೈಗಾರಿಕೆ ಬರುತ್ತದೆ, 25 ಸಾವಿರ ಉದ್ಯೋಗಗಳು ಸೃಷ್ಟಿಯಾಗುತ್ತವೆ ಇಲ್ಲಿ ಎಂದು ಹೇಳಿದಾಗ- ಈಗ ಆ ಹತ್ತು ಸಾವಿರ ಎಕರೆಯಲ್ಲಿ ಎಷ್ಟು ಜನ ದುಡಿದು ಬದುಕುತ್ತಿದ್ದಾರೆ? ಸರ್ಕಾರ ಆ ಸಂಖ್ಯೆಯನ್ನು ಏಕೆ ಹೇಳುವುದಿಲ್ಲ? ಆ 10,000 ಎಕರೆಯನ್ನು ಕೃಷಿಗೋ, ದನ ಮೇಯಿಸುವುದಕ್ಕೋ, ಮೀನುಗಾರಿಕೆಗೋ, ಬಟ್ಟೆ ಒಗೆದುಕೊಳ್ಳುವುದಕ್ಕೋ ಹೀಗೆ ಬೇರೆಬೇರೆಯ ಉದ್ದೇಶಗಳಿಗೆ ಬಳಕೆಯಾಗುತ್ತಿರುತ್ತದೆ ತಾನೇ. 25 ಸಾವಿರ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳುವವರು ಎಷ್ಟು ಸಾವಿರ ಉದ್ಯೋಗ ಕಳೆದುಹಾಕುತ್ತಿದ್ದೇವೆಂದೂ ನೋಡಬೇಕಿತ್ತಲ್ಲವೇ? ಉದ್ಯೋಗವೆಂದರೆ ಸಂಬಳ ಬರುವ ಕೆಲಸವೇ ಆಗಿರಬೇಕೆಂದಿಲ್ಲ.
ಆದರೆ ಒಂದು ಎಸ್.ಇ.ಜಡ್. ಅನ್ನೋ ಅಥವಾ ಕಾರ್ಖಾನೆಯನ್ನೋ ಸ್ಥಾಪಿಸುವಾಗ ಎಷ್ಟು ಸಾವಿರ ಜನರು ತಮ್ಮ ಜೀವನಾಧಾರ ಕಳೆದುಕೊಳ್ಳುತ್ತಾರೆಂಬುದನ್ನು ಸರ್ಕಾರ ಎಂದಾದರೂ ಹೇಳುತ್ತದೆಯೇ? ಅವರು ಮಾತನಾಡುವ ರೀತಿ ಹೇಗಿರುತ್ತದೆಯೆಂದರೆ ಶೂನ್ಯದೊಳಗಿಂದ ನೀಡುತ್ತಿದ್ದಾರೆ ಎಂಬಂತೆ ಹೇಳುತ್ತಾರೆ. ತಾವು ಎಸ್.ಇ.ಜಡ್.ಗೆ ಕೊಡುತ್ತಿರುವ ಭೂಮಿ ಶೂನ್ಯದಲ್ಲಿರುವಂತೆ, ಅಲ್ಲಿ ಈಗ ಏನೂ ಇಲ್ಲವೆಂಬಂತೆ, ಬೆಳೆ ಬೆಳೆಯುತ್ತಿಲ್ಲ, ಕೆಲಸ ದೊರೆಯುತ್ತಿಲ್ಲ, ಅದು ಖಾಲಿಯಿದೆ ಎಂಬಂತೆ ಮಾತನಾಡುತ್ತಾರೆ. ವಾಸ್ತವವಾಗಿ, ಭಾರತದಲ್ಲಿ ಎಲ್ಲಿಯೂ ಅಂತಹ ಖಾಲಿ ಜಾಗವಿಲ್ಲ. ಥಾರ್ ಮರುಭೂಮಿಯಲ್ಲೂ ಇಲ್ಲ. ಥಾರ್ ಮರುಭೂಮಿಯಲ್ಲಿ ಒಂಟೆ ತಿರುಗಾಡಿಸುವ ವ್ಯಕ್ತಿ ಇದ್ದಾನೆ. ಭಾರತದಲ್ಲಿ ಭೂಮಿಯ ಅವಶ್ಯಕತೆ ಎಷ್ಟಿದೆಯೆಂದರೆ ಈ ದೇಶದಲ್ಲಿ ಯಾವುದೇ ಸಣ್ಣ ಫಲ ದೊರೆತರೂ ತೆಗೆದುಕೊಂಡು ಬದುಕುವವರೇ ಹೆಚ್ಚು ಜನರಿದ್ದಾರೆ. ನಮ್ಮ ದೇಶವೇ ಹಾಗೆ. ನಾವು ಕೇಳಬೇಕಾದ ಮೊದಲ ವಿಷಯವೆಂದರೆ, ನೀವು ಕಳೆದುಹಾಕುತ್ತಿರುವವುಗಳ ಸಂಖ್ಯೆಯನ್ನು ನಮಗೆ ತಿಳಿಸಿ, ನೀವು ಹೇಳುತ್ತಿರುವ ಸಂಖ್ಯೆಯಲ್ಲಿ ವಾಸ್ತವವಾಗಿ ದೊರೆಯುವುದು ಎಷ್ಟು ಮತ್ತು ನೀವು ಎಷ್ಟು ಸುಳ್ಳು ಹೇಳುತ್ತಿದ್ದೀರಿ ಎಂದು ನಾವು ನಿಮಗೆ ಹೇಳುತ್ತೇವೆ. ಇಂದು ಕಾಕಿನಾಡ, ಯು.ಕೊತ್ತಪಲ್ಲಿ, ತೊಂಡಂಗಿಯೊಳಗಿನ ಈ 10,000 ಎಕರೆಯ ಎಸ್.ಇ.ಜಡ್ ಬಗ್ಗೆ ಅವರು ಏನು ಹೇಳುತ್ತಿದ್ದಾರೆ? 50 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕಾಕಿನಾಡ ಎಸ್.ಇ.ಜಡ್ ಲಿಮಿಟೆಡ್ ತಮ್ಮ ಆಂತರಿಕ ದಾಖಲೆಯಲ್ಲಿ ಬರೆದುಕೊಂಡಿದೆ. 16 ಗ್ರಾಮಗಳ ಜಮೀನನ್ನು ಅವರು ಪಡೆದು 50 ಸಾವಿರ ಉದ್ಯೋಗ ಸೃಷ್ಟಿಸಲಿದ್ದಾರಂತೆ. ಕೊಟ್ಟರೂ ಆ 50 ಸಾವಿರ ಉದ್ಯೋಗಗಳು ಸ್ಥಳೀಯರಿಗೆ ಬರುವುದಿಲ್ಲ. ಸಾವಿರ, ಎರಡು ಸಾವಿರ, ಮೂರು ಸಾವಿರ ಬರಬಹುದೆನ್ನುವುದನ್ನು ಪಕ್ಕಕ್ಕಿಡಿ. ಆ 16 ಹಳ್ಳಿಗಳು ಈಗ 50 ಸಾವಿರ ಜನರಿಗೆ ಅನ್ನ ನೀಡುತ್ತಿಲ್ಲವೇ? ಯಾಕಿಲ್ಲ? 50 ಸಾವಿರಕ್ಕೂ ಹೆಚ್ಚು ಜನರಿಗೆ ಊಟ ನೀಡುತ್ತಿರುವ ಆ ಗ್ರಾಮಗಳನ್ನು ತೆಗೆದುಹಾಕಿ 50 ಸಾವಿರ ಜನರಿಗೆ ಕೆಲಸ ನೀಡುತ್ತಿರುವುದಾಗಿ ಹೇಳಿ, ಆ 50 ಸಾವಿರ ಜನರಲ್ಲಿ 40 ಸಾವಿರ ಹೊರಗಿನವರನ್ನು ಕರೆತರುತ್ತೀರಾ? ಹತ್ತು ಸಾವಿರ ಸ್ಥಳೀಯರಿಗೆ ಉದ್ಯೋಗ ಸಿಕ್ಕರೂ ತಾನೆ ಏನು ಉಳಿದಂತೆ? ಮಿಕ್ಕ 40 ಸಾವಿರ ಮಂದಿ ನಿರುದ್ಯೋಗಿಗಳಾದಂತೆಯೇ ಲೆಕ್ಕ. ಅಷ್ಟೇ ತಾನೇ. ಹಾಗಾದರೆ ಏನು ನಡೆಯುತ್ತಿದೆ ಈಗಲ್ಲಿ? ಅಭಿವೃದ್ಧಿಯ ಹೆಸರಿನಲ್ಲಿ ಅವರು ಜೀವನಾಧಾರ ಕಲ್ಪಿಸುತ್ತಿಲ್ಲ. ಇರುವ ಜೀವನಾಧಾರವನ್ನೇ ಕಸಿದುಕೊಳ್ಳುತ್ತಿದ್ದಾರೆ. ಅದನ್ನು ಮುಚ್ಚಿಟ್ಟು ಸುಳ್ಳುಗಳನ್ನು ಹೇಳುತ್ತಿದ್ದಾರೆ. ಆ ಸುಳ್ಳುಗಳನ್ನು ಹೊರಗೆಳೆದು ಸತ್ಯವನ್ನು ಬಹಿರಂಗಪಡಿಸುವುದು ಮಾನವ ಹಕ್ಕುಗಳ ವೇದಿಕೆಗಳು, ಇತರ ಸಂಘಟನೆಗಳು, ಚಳುವಳಿಗಳು ಮತ್ತು ರಾಜಕೀಯ ಚಳುವಳಿಗಳ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ. ಸುಳ್ಳು ಮತ್ತು ಅಸತ್ಯಗಳನ್ನು ಹೊರತಂದು ಜನರ ಮುಂದೆ ಚರ್ಚೆಗಿಡುವುದು ಬಹಳ ಅವಶ್ಯಕ.
ಎರಡನೆಯದಾಗಿ, ಒಂದು ಕಂಪನಿಗೆ ಸರ್ಕಾರ 10 ಸಾವಿರ ಎಕರೆ ನೀಡುತ್ತದೆ, ಕಾಗದಪತ್ರಗಳಲ್ಲಿ ಏನು ತೋರಿಸುತ್ತದೆ? ವ್ಯವಸಾಯ ಭೂಮಿಯನ್ನು ಮಾತ್ರ ತೋರಿಸುತ್ತದೆ. ಜನರಿಗೆ ಅನ್ನ ನೀಡುವ ಏಕೈಕ ಭೂಮಿ ಇದು ಮಾತ್ರ ಎಂಬಂತೆ. ಸಾಗುವಳಿ ಭೂಮಿ ಅಲ್ಲದ ಸರ್ಕಾರಿ ಜಮೀನನ್ನೆಲ್ಲ ಯಾರಿಗೂ ಹೇಳದೆ ಕೊಟ್ಟುಬಿಡುತ್ತದೆ. ನಮ್ಮ ಭೂಮಿ ನಾವು ಕೊಟ್ಟಿದ್ದೇವೆ ಎನ್ನುತ್ತಿದೆ. ಅನಂತಪುರ ಜಿಲ್ಲೆಯಲ್ಲಿ ಲೇಪಾಕ್ಷಿ ಜ್ಞಾನ ಎಸ್.ಇ.ಜಡ್. ಎಂಬುದೊಂದು ಬರುತ್ತಿದೆ. 11,500 ಎಕರೆ ಭೂಮಿ. ಇದೆಲ್ಲವೂ ಸರ್ಕಾರಿ ಜಮೀನಿನ ಅಡಿಯಲ್ಲಿ ಖಾತೆಯಾಗಿದೆ. ಅಂದರೆ ಆ 11,500 ಎಕರೆ ಇನ್ನೂ ಖಾಲಿ ಇದೆಯೇ? ಕೃಷಿ ಎಲ್ಲೆಡೆ ಇದೆ. ಯಾರು ಕೃಷಿ ಮಾಡುತ್ತಿದ್ದಾರೆ? ಸರ್ಕಾರವೇ ನಿಯೋಜಿಸಿ ಹಕ್ಕುಪತ್ರ ಕೊಡಬೇಕಿದ್ದ ಬಡವರೇ ಕೃಷಿ ಮಾಡುತ್ತಿದ್ದಾರೆ. ಸರ್ಕಾರ ಏನು ಹೇಳುತ್ತಿದೆ, ನಾನು ನನ್ನ ಭೂಮಿಯನ್ನು ನೀಡುತ್ತಿದ್ದೇನೆ, ಹಾಗಾಗಿ ನಾನು ಅದರ ಅಂಕಿಅಂಶಗಳನ್ನು ತೋರಿಸಬೇಕಾಗಿಲ್ಲ. ಅಲ್ಲಿ ಎಷ್ಟು ಜನರು ಜೀವನಾಧಾರ ಹೊಂದಿದ್ದಾರೆ, ಎಷ್ಟು ಜನ ಕೆಲಸ ಕಳೆದುಕೊಳ್ಳುತ್ತಾರೆ ಎಂಬುದರ ಕುರಿತು ತಾನು ಏನನ್ನೂ ಹೇಳಬೇಕಾಗಿಲ್ಲ ಎಂದು ಅದು ಭಾವಿಸುತ್ತದೆ. ಅಲ್ಲಿ ಜ್ಞಾನ ಸಂಬಂಧಿ ಎಸ್.ಇ.ಜಡ್. ಬರುತ್ತದೆ. ಉದ್ಯೋಗ ಸಿಗಲಿದೆ ಎಂದು ಹೇಳುತ್ತಿದೆ. ಏನು ಕೆಲಸ? ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಎರಡರಲ್ಲೂ ನಗರ ಪ್ರದೇಶದ ಮೇಲ್ಜಾತಿಗೆ ಸೇರಿದ ಶ್ರೀಮಂತರ ಮಕ್ಕಳಿಗೆ ಮಾತ್ರ ಕೆಲಸ ಸಿಗುತ್ತದೆ. ಅದು ಇತರರಿಗೆ ಸಿಗುವುದಿಲ್ಲ. ಹೋಗಲಿರುವುದು ಮಾತ್ರ 11,500 ಎಕರೆ ಭೂಮಿಯಲ್ಲಿ ನಿಯೋಜಿತ ಪಟ್ಟಾಗಳೊಂದಿಗೆ ಕೃಷಿ ಮಾಡುತ್ತಿರುವ ಕೆಲವು ಸಾವಿರ ಬಡವರ ಬದುಕು. ಅದು ಬರಡು ಭೂಮಿಯಾಗಿದ್ದರೂ ಸರಿ, ದನ ಮೇಯಿಸುವವ ಜೀವನಾಧಾರ ಏನಾಗಬೇಕು? ತೆಲಂಗಾಣ ಮತ್ತು ರಾಯಲಸೀಮಾ ಪ್ರದೇಶಗಳಲ್ಲಿ ತಾಳೆ ಮರ ಮತ್ತು ಈಚಲುಮರಗಳ ಸೇಂದಿ ತೆಗೆಯುವ ದೊಡ್ಡ ದೊಡ್ಡ ಜಾತಿಗಳಿವೆ. ಅದೊಂದು ದೊಡ್ಡ ವೃತ್ತಿ. ಆ ಪ್ರದೇಶಗಳಲ್ಲಿ ಕೆರೆ, ಕೊಳಗಳಿದ್ದರೆ ಮೀನು ಹಿಡಿಯುವವರು, ಬಟ್ಟೆ ಒಗೆಯುವವರು ಬಹಳ ಜನ ಇರುತ್ತಾರೆ. ಈ ಎಲ್ಲಾ ಕುಲ ಕಸಬುಗಳನ್ನು ನಮ್ಮ ಹಿಂದೂ ಸಮಾಜದಲ್ಲಿ ಕೆಳಸ್ತರದಲ್ಲಿರುವವರೇ ಮಾಡುತ್ತಾರೆ. ಅವರ ಇಡೀ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ಎಲ್ಲೂ ಹೇಳದೆ ಸರ್ಕಾರ ಇದನ್ನು ಅಭಿವೃದ್ಧಿ ಎಂದು ಮಾತನಾಡುತ್ತದೆ. ಅದಕ್ಕಾಗಿಯೇ ನಾವು ನಿಜವಾದ ಅಭಿವೃದ್ಧಿಯ ಬಗ್ಗೆ ನಿಮ್ಮ ದೃಷ್ಟಿಕೋನ ಏನು? ನಿಮ್ಮ ಮಾದರಿ ಯಾವುದು? ಎಂಬ ಮೂಲಭೂತ ಪ್ರಶ್ನೆ ಕೇಳುತ್ತೇವೆ. ಸರ್ಕಾರವು ಜನರ ಜೀವನವನ್ನು ವಿವಿಧ ರೂಪಗಳಲ್ಲಿ ನೇರವಾಗಿ ಸುಧಾರಿಸುವ ಅಗತ್ಯವೇನೂ ಇಲ್ಲ. ಬಂಡವಾಳಿಗರ ಕಂಪನಿಗಳಿಗೆ ಹೂಡಿಕೆ ಮಾಡಲು ಅಗತ್ಯ ಮೂಲಸೌಕರ್ಯ ಒದಗಿಸಿದರೆ ಸಾಕು. ಅದರಿಂದಲೇ ಜನರು ಅಭಿವೃದ್ಧಿ ಹೊಂದುತ್ತಾರೆ ಎಂಬ ಆಲೋಚನೆಯು ದುಷ್ಟ ಆಲೋಚನೆಯಾಗಿದೆ. ಅದು ನಮ್ಮ ವಿಮರ್ಶೆಯ ಒಂದು ಪ್ರಮುಖ ಭಾಗವಾಗಿದೆ.
ಎರಡನೆಯದಾಗಿ, ಬದುಕಿಗಾಗುವ ನೇರ ನಷ್ಟ ಮಾತ್ರವಲ್ಲದೆ, ವಿಶೇಷವಾಗಿ ನಿಮ್ಮ ಪ್ರದೇಶ ಮತ್ತು ಕರಾವಳಿಯಲ್ಲಿ ಮೀನುಗಾರರಿಗೆ ಬರಲಿರುವ ಅಪಾಯ ಎಷ್ಟು ಭಯಂಕರವಾಗಿರುತ್ತದೆಂದರೆ ಇಡೀ ಕರಾವಳಿ ಪ್ರದೇಶದಲ್ಲಿ ಕೈಗಾರಿಕೆಗಳು ಬರಲಿವೆ. ಅದರಲ್ಲಿ ಬಹಳಷ್ಟು ಉಷ್ಣ ಸ್ಥಾವರಗಳಿವೆ- ನೆಲ್ಲೂರಿನಿಂದ ಶ್ರೀಕಾಕುಳಂವರೆಗೆ ತನಕ. ಇಲ್ಲಿ ಯಾಕೆ ಹಾಕುತ್ತಿದ್ದೀರಿ? ಥರ್ಮಲ್ ಪ್ಲಾಂಟ್ ಸ್ಥಾಪಿಸಲು ಕಲ್ಲಿದ್ದಲು ಲಭ್ಯವಿಲ್ಲ ಇಲ್ಲಿ. ನಮ್ಮ ರಾಜ್ಯದಲ್ಲಿ ಕಲ್ಲಿದ್ದಲು ತೆಲಂಗಾಣದಲ್ಲಿದೆ. ಆ ಕಲ್ಲಿದ್ದಲು ಸಾಕಾಗದಿದ್ದರೆ ಮಧ್ಯಪ್ರದೇಶ ಛತ್ತೀಸ್‌ಘಡದಿಂದ ತರಬೇಕು. ಅವು ಇನ್ನೂ ಬಹಳ ದೂರದಲ್ಲಿವೆ- ನೆಲ್ಲೂರಿಗೆ ಅಥವಾ ಶ್ರೀಕಾಕುಳಂಗೆ. ಹಾಗಿದ್ದಾಗಲೂ ಇಲ್ಲಿ ಯಾಕೆ ಶುರು ಮಾಡುತ್ತಿದ್ದೀರಿ? ಒಂದೇಒಂದು ವಿಷಯವನ್ನು ಗಮನದಲ್ಲಿಟ್ಟುಕೊಂಡಿದ್ದಾರೆ. ಉಷ್ಣ ಸ್ಥಾವರಕ್ಕೆ ನೀರು ಬೇಕು. ಇಲ್ಲಿ ಸಮುದ್ರವಿದೆ. ಆ ನೀರು ಇದೆ. ಈ ನೀರು ದೂರದ ಊರಿಗೆ ಕೊಂಡೊಯ್ಯಬೇಕಾದರೆ ಖರ್ಚು ಜಾಸ್ತಿ. ಹಾಗಾಗಿ ಹತ್ತಿರದಲ್ಲಿ ನೀರಿದ್ದರೆ ಕಡಿಮೆ ಖರ್ಚಾಗುತ್ತದೆ ಎಂಬ ಒಂದೇ ವಿಷಯ ಪರಿಗಣಿಸಿಕೊಂಡಿದ್ದಾರೆ. ಎಲ್ಲವೂ ಖಾಸಗಿ ಕಂಪನಿಗಳು. ಇವುಗಳಿಂದ ಉಂಟಾಗುವ ಮಾಲಿನ್ಯವು ಅತ್ಯಂತ ಭಯಾನಕವಾಗಿರಲಿದೆ.
ಮಧ್ಯಪ್ರದೇಶದಲ್ಲಿ 12,000 ಮೆಗಾವ್ಯಾಟ್ ಉಷ್ಣ ವಿದ್ಯುತ್ ಉತ್ಪಾದಿಸುವ ಒಂದು ಪ್ರದೇಶವಿದೆ. ಅಲ್ಲಿ ಅನೇಕ ಕಂಪನಿಗಳಿವೆ. ಅಲ್ಲಿ ಎಷ್ಟು ಅಪಾಯಕಾರಿ ಮಾಲಿನ್ಯ ಉಂಟಾಗಿದೆಯೆಂಬುದನ್ನು ಒಮ್ಮೆ ನೋಡಿದರೆ ಶ್ರೀಕಾಕುಳಂ ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಏನಾಗಲಿದೆ ಎಂಬುದು ಅರ್ಥವಾಗುತ್ತದೆ. ಅದೇ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಲಿರುವ ಈ ಇಡೀ ಪ್ರದೇಶವು ಯಾವ ರೀತಿಯ ಮಾಲಿನ್ಯವನ್ನು ಭರಿಸಬೇಕಾಗುತ್ತದೆಯೋ? ಆ ಮಾಲಿನ್ಯದ ಮುಖ್ಯ ಬಲಿಪಶುಗಳು ಮೀನುಗಾರರು. ಏಕೆಂದರೆ ನಮ್ಮ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಅನುಮತಿಗಳನ್ನು ನೀಡುವಾಗ ನೀವು ಹೊರಗೆ ಬಿಡುವ ತ್ಯಾಜ್ಯ ವಸ್ತುಗಳನ್ನು ಸಂಸ್ಕರಿಸಿ ನಂತರ ಅದನ್ನು ಸಮುದ್ರಕ್ಕೆ ಬಿಡುವುದು ಎಂದು ಹೇಳಿರುತ್ತದೆ. ಇದು ಎಷ್ಟು ಸ್ವಚ್ಛಗೊಳಿಸುತ್ತದೆ? ಅದನ್ನು ಸಮಗ್ರವಾಗಿ ಮಾಡಲಾಗುತ್ತಿದೆಯಾ? ಥರ್ಮಲ್ ಪ್ಲಾಂಟ್ ಸ್ವಲ್ಪಮಟ್ಟಿಗಾದರೂ ಆ ಕೆಲಸ ಮಾಡುತ್ತದೆ. ಕರಾವಳಿ ಕಾರಿಡಾರ್‌ನ ಭಾಗವಾಗಿ ಈ ಪ್ರದೇಶದಲ್ಲಿ ಉಷ್ಣ ಸ್ಥಾವರಗಳ ಜೊತೆಗೆ ರಾಸಾಯನಿಕ ಕೈಗಾರಿಕೆಗಳು ಮತ್ತು ಔಷಧಿ ತಯಾರಿಕೆಯ ಉದ್ಯಮಗಳು ಬರಲಿವೆ. ನಾವು ಹೈದರಾಬಾದ್‌ನಲ್ಲಿ ರಾಸಾಯನಿಕ ಕೈಗಾರಿಕೆಗಳು ಮತ್ತು ಔಷಧೀಯ ಉದ್ಯಮಗಳ ಮಾಲಿನ್ಯವನ್ನು ನೋಡುತ್ತಿದ್ದೇವೆ. ಹೈದರಾಬಾದ್ ದೇಶದ ಔಷಧ ಉದ್ಯಮದಲ್ಲಿ ಮೊದಲ ಸ್ಥಾನದಲ್ಲಿದೆ. ಪಟಾನ್‌ಚೆರು ಪ್ರದೇಶ ನಿಮಗೆ ಗೊತ್ತಿದೆ, ಅನೇಕ ಜನರು ಬರುತ್ತಿರುತ್ತಾರೆ ಹೈದರಾಬಾದ್‌ಗೆ. ಇದು ಕೂಕಟ್‌ಪಲ್ಲಿಗೆ ಸಮೀಪದಲ್ಲಿದೆ. ಮಾಲಿನ್ಯವು ಮೂಸೀ ನದಿಯನ್ನು ಎಷ್ಟು ನಾಶ ಮಾಡಿದೆ, ಈ ಪ್ರದೇಶದ ಕೆರೆಗಳು ಹೇಗೆ ನಾಶವಾಗಿವೆ ಎಂಬುದನ್ನು ನಾವು ನೋಡುತ್ತಲೇ ಇದ್ದೇವೆ. ಮಾನವ ಹಕ್ಕುಗಳ ಸಂಘಗಳಾಗಿ ನಾವು 30 ವರ್ಷಗಳಿಂದ ಆ ಪ್ರದೇಶಗಳಿಗೆ ಹೋಗತ್ತಲೇ ಇದ್ದೇವೆ. ದೂರುಗಳನ್ನು ನೀಡುತ್ತಲೇ ಇರುತ್ತೇವೆ. ನಾವು ಮೊಕದ್ದಮೆಗಳನ್ನು ದಾಖಲಿಸುತ್ತಲೇ ಇದ್ದೇವೆ. ಆದರೂ ಮಾಲಿನ್ಯ ಮುಂದುವರಿದಿದೆ. ಏಕೆಂದರೆ ಎಷ್ಟೇ ರಾಸಾಯನಿಕ ಮಾಲಿನ್ಯ ಮತ್ತು ಔಷಧೀಯ ಮಾಲಿನ್ಯವನ್ನು ಶುದ್ಧೀಕರಿಸಿದರೂ ಶೇಕಡಾ ಹತ್ತರಷ್ಟು ಉಳಿದುಕೊಂಡಿರುತ್ತದೆ ಎನ್ನುತ್ತಾರೆ ತಜ್ಞರು. ನಾಳೆ ಸಮುದ್ರಕ್ಕೆ ಮಾಲಿನ್ಯವನ್ನು ಸುರಿಯುವುದನ್ನು ಮುಂದುವರೆಸಿದರೆ, ಮುಂದಿನ ದಿನಗಳಲ್ಲಿ ಸಮುದ್ರದಲ್ಲಿ ಮೀನುಗಳು ಇರುತ್ತವೆಯೇ? ಜಲಚರಗಳು ಸಂತಾನೋತ್ಪತ್ತಿ ಮಾಡಬಹುದೇ? ಕ್ರಮೇಣ ಎಲ್ಲವೂ ಸಾಯುತ್ತವೆ. ಟ್ರಾಲರ್ ಮತ್ತು ಯಂತ್ರ ದೋಣಿಗಳೊಂದಿಗೆ ದೂರ ಹೋಗುವವರಿಗೆ ಮೀನು ಸಿಗಬಹುದು. ಆದರೆ, ಸಮೀಪದಲ್ಲೇ ಮೀನುಗಾರಿಕೆ ನಡೆಸುವ ಈ ಭಾಗದ ಮೀನುಗಾರರ ಬದುಕು ಮಾತ್ರ ದುಸ್ತರಗೊಳ್ಳುತ್ತದೆ. ಇದರರ್ಥ ನೇರ ಜೀವನಾದಾಯ ನಷ್ಟ ಮಾತ್ರವಲ್ಲ, ಮಾಲಿನ್ಯ ಮತ್ತು ಪರಿಸರನಾಶದ ಮೂಲಕವೂ ನಷ್ಟಕ್ಕೀಡಾಗುತ್ತದೆ.
ಪ್ರಕೃತಿಯೇ ಜನಸಾಮಾನ್ಯರ ಜೀವನಾಧಾರ. ನೈಸರ್ಗಿಕ ಸಂಪನ್ಮೂಲಗಳ ಶೋಷಣೆಯ ಕುರಿತು ಮಾತನಾಡುತ್ತಿದ್ದೇವೆಂದರೆ, ನಮ್ಮ ಅನಿಲವನ್ನು ಕೊಂಡೊಯ್ಯುತ್ತಿದ್ದಾನೆ, ನಮ್ಮ ನೀರನ್ನು ಕಸಿದುಕೊಳ್ಳುತ್ತಿದ್ದಾನೆ ಎಂದು ಮಾತ್ರ ಅರ್ಥವಲ್ಲ- ಅವನು ಪ್ರಕೃತಿಯ ಮೇಲೆ ಅವಲಂಬಿತವಾಗಿ ಬದುಕುವ ಹಕ್ಕನ್ನು ಕೂಡ ಕಸಿಯುತ್ತಿದ್ದಾನೆ ಎಂದು. ಅದು ಫಲವತ್ತಾದ ಮಣ್ಣಿನ ರೂಪದಲ್ಲಿರಬಹುದು, ಮೀನುಗಳನ್ನು ಹೊಂದಿರುವ ನೀರಿನ ರೂಪದಲ್ಲಿರಬಹುದು; ಆರೋಗ್ಯವನ್ನು ಕಾಪಾಡುವ ಗಾಳಿಯ ರೂಪದಲ್ಲಿರಬಹುದು; ಇದು ಅನೇಕ ರೀತಿಯ ಜೀವನಕ್ಕೆ ಅಗತ್ಯವಾದ ಸಂಪತ್ತನ್ನು ಒದಗಿಸುವ ಕಾಡುಗಳ ರೂಪದಲ್ಲಿರಬಹುದು. ಅದು ಗಾಳಿ, ನೀರು, ಮಣ್ಣು ಅಥವಾ ಮರಗಳು- ಇವು ಕೇವಲ ಪ್ರಕೃತಿಯಲ್ಲ. ಜನಸಾಮಾನ್ಯರ ಜೀವನಾಧಾರ. ಸರ್ಕಾರದ ದೃಷ್ಟಿಯಲ್ಲಿ ಎರಡೇ ಎರಡು ವರ್ಗಗಳು. ಪಟ್ಟಾಗಳಿದ್ದರೆ ಸಾಗುವಳಿ ಭೂಮಿ, ಪರಿಹಾರ ನೀಡುತ್ತೇವೆ. ಉಳಿದಿರುವುದು ಕೃಷಿಗೆ ಅನುಪಯುಕ್ತವಾದ ಪಾಳುಭೂಮಿ. ಅದು ನಮ್ಮದೇ ಆದ್ದರಿಂದ ಯಾರಿಗೂ ಏನನ್ನೂ ಕೊಡಬೇಕಾದುದಿಲ್ಲ. ಆದರೆ ವಾಸ್ತವವಾಗಿ ಅದೆಲ್ಲವೂ ಜೀವನಕ್ಕೆ ಆಧಾರವಾಗಿರುವ ಭೂಮಿಯೇ. ಅವರಿಗೆ ಆ ಪ್ರಜ್ಞೆ ಯಾವಾಗಲೂ ಇಲ್ಲ. ಗೊತ್ತಿಲ್ಲದೇ ಅಲ್ಲ, ಅವರಿಗದು ಲೆಕ್ಕಕ್ಕಿಲ್ಲ. ಅದನ್ನು ಬಚ್ಚಿಟ್ಟು, ಪಟ್ಟಾ ಇದೆಯೇ, ಇದ್ದರೆ ಪರಿಹಾರ ಕೊಡುತ್ತೇವೆ, ತೆಗೆದುಕೊಂಡು ಇಲ್ಲಿಂದ ಹೋಗು. ಅವನು ಎಲ್ಲಿಗೆ ಹೋಗುತ್ತಾನೆ? ಎಷ್ಟು ಜನ ಎಲ್ಲಿಗೆ ಹೋಗಬಲ್ಲರು? ಎಷ್ಟು ಜನ ಆ ಹಣವನ್ನು ತೆಗೆದುಕೊಂಡು ವ್ಯಾಪಾರ ಮಾಡಿ ಗಳಿಸಲು ಸಾಧ್ಯ? ಎಷ್ಟು ಜನ ಆ ಹಣ ತೆಗೆದುಕೊಂಡು ಮತ್ತೆ ಜಮೀನು ಖರೀದಿಸಿ ಬೇಸಾಯ ಮಾಡಲು ಸಾಧ್ಯ?
ಒಂದು ಗ್ರಾಮದಲ್ಲಿ ಇಬ್ಬರು ರೈತರಿಂದ ಜಮೀನು ತೆಗೆದುಕೊಂಡು ತಲಾ ಎರಡು ಲಕ್ಷ ಕೊಟ್ಟರೆ ಮತ್ತೊಂದು ಗ್ರಾಮದಲ್ಲಿ ಕೊಂಡುಕೊಳ್ಳಬಲ್ಲರು. 10,000 ಎಕರೆ ಭೂಮಿ ತೆಗೆದುಕೊಂಡು ಹಣ ಕೊಟ್ಟರೆ ಸುತ್ತಲಿನ ಜಮೀನುಗಳ ಬೆಲೆಯೂ ಹತ್ತು ಪಟ್ಟು ಹೆಚ್ಚುತ್ತದೆ. ಇವೆಲ್ಲ ಗೊತ್ತಿರುವ ಸಂಗತಿಗಳು. ನಡೆಯುತ್ತಿರುವ ಸಂಗತಿಗಳೇ. ಸರ್ಕಾರ ಏನು ಮಾತನಾಡುತ್ತಿದೆ ಇಂದು? ಕಾನೂನು ಪ್ರಕಾರ ನೀಡಬೇಕಾದುದಕ್ಕಿಂತ ದುಪ್ಪಟ್ಟು ನೀಡುತ್ತಿದ್ದೇವೆಲ್ಲಾ ಎನ್ನುತ್ತಿದೆ. ಕೆಲವೆಡೆ ನೀಡಲಾಗುತ್ತಿದೆ, ಇಲ್ಲವೆಂದಲ್ಲ. ಇದನ್ನು ಆರಾಮವಾಗಿ ಬದುಕಿಕೋ ಹೋಗು ಎನ್ನುತ್ತಾರೆ. ಹಾಯಾಗಿ ಬದುಕಿಕೋ ಹೋಗು ಎನ್ನುವಷ್ಟರಲ್ಲಿ ಬೆಲೆಗಳು ನಾಲ್ಕು ಪಟ್ಟು ಹೆಚ್ಚಾಗಿರುತ್ತವೆ. ಏಕೆಂದರೆ ನೀವು ಯಾರೋ ಒಬ್ಬರಿಗೆ ಮಾತ್ರ ಕೊಡುತ್ತಿಲ್ಲ; ಎಷ್ಟು ಜನರಿಗೆ ಕೊಡುತ್ತಿದ್ದೀರಿ? 10 ಸಾವಿರ ಎಕರೆಗಳಿಗೆ ನೀಡುತ್ತಿದ್ದೀರಿ. 10 ಸಾವಿರ ಎಕರೆ ರೈತರು ಹಣ ಪಡೆದುಕೊಂಡು ಬೇರೆ ಕಡೆ ಭೂಮಿ ಖರೀದಿಸಲು ಹೋದರೆ ಭೂಮಿಯ ಬೆಲೆ ಏರದಿರುತ್ತದೆಯೇ? ದರಗಳು ಚೆನ್ನಾಗಿ ಏರುತ್ತವೆ. ಹಾಗಾಗಿ ಭೂಸ್ವಾಧೀನದಲ್ಲಿ ಜಮೀನು ಕಳೆದುಕೊಂಡವರಿಗೆ ಹೆಚ್ಚು ಪರಿಹಾರ ನೀಡಿದರೂ ಕಡಿಮೆ ಭೂಮಿ ಖರೀದಿಸಲು ಮಾತ್ರ ಅವರಿಗೆ ಸಾಧ್ಯವಾಗುತ್ತಿದೆ ಎಂಬುದು ಎಲ್ಲರ ಅನುಭವ. ಮೊದಲಿನ ಜಮೀನಿಗೆ ಸಮನಾಗಿ ಅಲ್ಲ ಅದರ ಅರ್ಧದಷ್ಟನ್ನೂ ಖರೀದಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇನ್ನು ಭೂಮಿ ಇಲ್ಲದ ಉಳಿದ ಜನರು, ಬಟ್ಟೆ ಒಗೆಯುವವರು, ಕ್ಷೌರಿಕರು, ಕೃಷಿ ಕೂಲಿಗಳು, ಇವರೆಲ್ಲರ ಗತಿಯೇನು? ಅದೇನೆಂದರೆ, ಅವರನ್ನು ಭಿಕಾರಿಗಳನ್ನಾಗಿಸಿ, ಜನಸಾಮಾನ್ಯರ ಜೀವನಾಧಾರವಾದ ಪ್ರಕೃತಿಯನ್ನು ಬಂಡವಾಳಕ್ಕೆ ಒಂದು ಕಚ್ಚಾವಸ್ತುವನ್ನಾಗಿ ನೋಡುವುದು ಒಂದು ದುಷ್ಟ ಆಲೋಚನೆ. ಅದೇ ದೊಡ್ಡ ದರೋಡೆ.
ಇದನ್ನೂ ಓದಿ: ಪ್ರಕಟಣಪೂರ್ವ; ಡೊನಾಲ್ಡ್ ಆಂಡರ್ಸನ್ ಅವರ ’ಕೊನೆಯ ಬಿಳಿ ಬೇಟೆಗಾರ’ ಪುಸ್ತಕದಿಂದ ಆಯ್ದ ಅಧ್ಯಾಯದ ಭಾಗ:…
ಒಂದು ಅಥವಾ ಇನ್ನೊಂದು ಪ್ರದೇಶದ ಸಂಪನ್ಮೂಲಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎನ್ನುವ ಪ್ರಶ್ನೆ ಅಲ್ಲ ಇದು. ಪ್ರಕೃತಿ ಎಂಬುದೇ ಜನಸಾಮಾನ್ಯರ ಜೀವನಾಧಾರ. ಜನರಿಗೆ ಜೀವನಾಧಾರವಾದ ಪ್ರಕೃತಿಯನ್ನು ಬಂಡವಾಳ ಮತ್ತು ಹೂಡಿಕೆಯ ಕಚ್ಚಾವಸ್ತುವಾಗಿ ಕೊಟ್ಟು, ಹಣ ಕೊಡುತ್ತಿದ್ದೇವೆ ತಾನೆ, ಕಾಲೋನಿ ಕಟ್ಟಿಸಿಕೊಡುತ್ತಿದ್ದೇವೆ ತಾನೇ, ನೀವಲ್ಲಿ ಜೀವಿಸಿರಿ ಎಂದು ನಿಮ್ಮನ್ನು ಓಡಿಸುವುದೇ ದರೋಡೆ. ಬೇರೆ ದರೋಡೆಯ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಮತ್ತೆ ಅಭಿವೃದ್ಧಿ ಯಾವಾಗ ಬರುತ್ತದೆ? ಅದು ಹೇಗೆ ಅದು ಎಲ್ಲಿಂದ ಬರುತ್ತದೆ? ಅದೆಲ್ಲ ಅಸಂಬದ್ಧ. ಅಮೆರಿಕದಲ್ಲಿ ನಡೆಯಲಿಲ್ಲವೇ? ಇಂಗ್ಲೆಂಡಿನಲ್ಲಿ ನಡೆಯಲಿಲ್ಲವೇ? ಅಂದರೆ ಆ ದೇಶಗಳು ಈ ಮಾದರಿಯಲ್ಲಿ ಬೆಳೆಯಲು ಸಾಧ್ಯವಾಗಲು ಕಾರಣ ಅವುಗಳಿಗೆ ವಸಾಹತುಗಳಿದ್ದವು. ವಸಾಹತುಗಳನ್ನು ಲೂಟಿ ಹೊಡೆದು ಮತ್ತು ವಸಾಹತು ದೇಶಗಳ ಕಚ್ಚಾವಸ್ತುಗಳನ್ನು ಬಳಸಿಕೊಂಡು ಅದನ್ನು ಪೂರಕವಾಗಿ ಬಳಸಿಕೊಂಡು ಅವರು ತಮ್ಮ ದೇಶಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಯಿತು. ಅದು ಈಗ ಯಾವ ದೇಶಕ್ಕೂ ಸಾಧ್ಯವಿಲ್ಲ. ಈ ಮಾದರಿಯಲ್ಲಿ ಅಭಿವೃದ್ಧಿ ಹೊಂದಿ ಎಲ್ಲರ ಬದುಕನ್ನು ಸುಧಾರಿಸಲು ಯಾರಿಂದಲೂ ಸಾಧ್ಯವಿಲ್ಲ.
ನಮಗೆ ವಸಾಹತುಗಳು ಬೇಡ. ನಾವು ಬಯಸಿದರೂ ಅವು ಅಸ್ತಿತ್ವದಲ್ಲಿಲ್ಲ. ಭಾರತ ದೇಶದಲ್ಲಿನ ಜನರ ದೈನಂದಿನ ಜೀವನ ಮತ್ತು ಜೀವನಮಟ್ಟವನ್ನು ನೇರವಾಗಿ ಸುಧಾರಿಸುವ ಅಭಿವೃದ್ಧಿಯೇ ಅಭಿವೃದ್ಧಿ ಹೊರತಾಗಿ ಬೇರೆ ಯಾವುದೇ ಮಾದರಿ ಅಭಿವೃದ್ಧಿ ಸಾಧ್ಯವಿಲ್ಲ. ಅದರ ಪೂರಕವಾಗಿ ಕೈಗಾರಿಕೆಗಳನ್ನು ಸ್ಥಾಪಿಸಿ. ಯಾರೂ ಬೇಡವೆನ್ನುವುದಿಲ್ಲ. ಕೇವಲ ಒಂದು ಮಾನದಂಡವನ್ನು ಇಟ್ಟುಕೊಳ್ಳಿ. ನೀವು ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಕೈಗೆತ್ತಿಕೊಂಡಾಗ ಯಾರದ್ದೋ ಜೀವನೋಪಾಯಕ್ಕೆ ತೊಂದರೆಯಾದರೆ ಅದೇ ಪ್ರಮಾಣದಲ್ಲಿ ಜೀವನಾಧಾರ ಹೊಂದುವಂತೆ ಅವರಿಗೆ ಪುನರ್ವಸತಿ ನೀಡಲಾಗುವುದೇ ಅಥವಾ ಇಲ್ಲವೇ? ಈವರೆಗೂ ಭಾರತದಲ್ಲಿ ಅಂತಹ ಕಾನೂನು ಇಲ್ಲ. ಭಾರತದಲ್ಲಿ ಅಭಿವೃದ್ಧಿಗಾಗಿ ಯಾರಾದರೂ ಭೂಮಿ ಕಳೆದುಕೊಂಡರೆ, ಯಾರಾದರೂ ಜೀವನ ಕಳೆದುಕೊಂಡರೆ, ಅಷ್ಟೇ ಪ್ರಮಾಣದ ಭೂಮಿ ಅಥವಾ ಅದೇ ಪ್ರಮಾಣದ ಜೀವನೋಪಾಯವನ್ನು ಅವರು ಪಡೆಯಬೇಕು ಎಂದು ಹೇಳುವ ಯಾವುದೇ ಕಾನೂನು ಇಲ್ಲ. ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಸರ್ಕಾರ ಪರಿಹಾರ ನೀಡಲಿದೆ. ನೀವು ಏನು ಬೇಕೋ ಅದನ್ನು ಮಾಡಿಕೊಳ್ಳಿ ಎಂಬ ಮಾತಿನ ವರಸೆ ಇದೆ. ಮೂರು ವರ್ಷಗಳಿಂದಲೂ ಸಂಸತ್ತಿನಲ್ಲಿ ಎರಡು ಮಸೂದೆಗಳು ಬಾಕಿ ಇವೆ. ಮೂರು ವರ್ಷಗಳಿಂದ ಈ ಬಗ್ಗೆ ಚರ್ಚೆ ನಡೆದಾಗಲೆಲ್ಲಾ ಪ್ರಧಾನಿ ಏನು ಹೇಳುತ್ತಾರೆ- ನಾವು ಹೊಸ ಭೂಸ್ವಾಧೀನ ಕಾಯ್ದೆ ಮಾಡುತ್ತಿದ್ದೇವೆ. ಹೊಸ ಪುನರ್ವಸತಿ ಕಾಯಿದೆ ಮಾಡುತ್ತಿದ್ದೇವೆ, ಭಯಪಡಬೇಡಿ ನೀವು ಎಂದು. ಅದನ್ನು ಮಾಡುವುದಿಲ್ಲ. ಅವು ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ಈ ಮೂರು ವರ್ಷಗಳಲ್ಲಿ ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿಸಿದ ಭೂಸ್ವಾಧೀನ ಕಾರ್ಯ ಮಾತ್ರ ನಡೆಯುತ್ತಲೇ ಇರುತ್ತದೆ. ಹೋಗಲಿ ಆ ಕಾನೂನುಗಳಾದರೂ ಚೆನ್ನಾಗಿವೆಯಾ? ನಾವು ನಮ್ಮ ಬುಲೆಟ್ಟಿನಲ್ಲಿ ಅದರ ವಿಶ್ಲೇಷಣೆಯನ್ನು ಬರೆದಿದ್ದೇವೆ. ಆ ಕಾನೂನುಗಳು ಈಗ ಅಸ್ತಿತ್ವದಲ್ಲಿರುವ ಕಾನೂನುಗಳಿಗಿಂತ ಉತ್ತಮವಾದ ಕಾನೂನುಗಳಾಗಿದ್ದರೂ, ಮರಳಿ ಅದೇ ಪ್ರಮಾಣದ ಜೀವನೋಪಾಯ ಒದಗಿಸುವ ಕಾನೂನುಗಳಲ್ಲ ಅವು. ನಾಳೆ ಈ ಮಸೂದೆಗಳು ಕಾಯ್ದೆಗಳಾದರೂ ಅಭಿವೃದ್ಧಿಗಾಗಿ ಬದುಕು ಕಳೆದುಕೊಂಡವರಿಗೆ ಅದೇ ಪ್ರಮಾಣದ ಜೀವನೋಪಾಯ ಕಲ್ಪಿಸುತ್ತೇವೆನ್ನುವ ಕಾನೂನುಬದ್ಧ ಭರವಸೆ, ಭದ್ರತೆ ಅದರಲ್ಲಿಲ್ಲ. ಇದು ನಡೆಯುವುದಕ್ಕೆ ಅವಕಾಶವಿಲ್ಲ.
ಹದಿನೈದು ವರ್ಷಗಳ ಹಿಂದೆ ಸಂಶೋಧಕರೊಬ್ಬರು ಬಹಳ ವಿವರವಾಗಿ ಸಂಶೋಧನೆ ನಡೆಸಿ ಹೇಳಿಕೆ ನೀಡಿದ್ದರು. ಎಲ್ಲರೂ ನಾಚಿಕೆಯಿಂದ ತಲೆತಗ್ಗಿಸಬೇಕಾದ ಮಾತು. ಭಾರತದ ಈ ಅರವತ್ತು ವರ್ಷಗಳ ಪ್ರಗತಿಯಲ್ಲಿ ಭೂಸ್ವಾಧೀನದಿಂದ ಭೂಮಿ ಕಳೆದುಕೊಂಡವರಲ್ಲಿ ಶೇ.40 ರಷ್ಟು ಜನರು ಆದಿವಾಸಿಗಳು ಎಂದು ಹೇಳಿದ್ದರು. ದೇಶದ ಜನಸಂಖ್ಯೆಯಲ್ಲಿ ಆದಿವಾಸಿಗಳ ಸಂಖ್ಯೆ ಎಷ್ಟು ಗೊತ್ತಾ? ಆದರೆ ಯೋಜನೆಗಳಿಗಾಗಿ, ಕೈಗಾರಿಕೆಗಳಿಗಾಗಿ ಜೀವನ ಕಳೆದುಕೊಂಡು ನಿರಾಶ್ರಿತರಾದವರಲ್ಲಿ 1,000ಕ್ಕೆ 400 ಮಂದಿ ಆದಿವಾಸಿಗಳು. ಇದರರ್ಥ ಈ ದೇಶ ಅಭಿವೃದ್ಧಿಗೊಂಡಿದೆ- ಆದಿವಾಸಿಗಳನ್ನು ಸದೆಬಡಿದು. ಇಂದು ಭಾರತ ವಿಶ್ವದಲ್ಲಿ ಅಭಿವೃದ್ಧಿ ಹೊಂದಿದ ದೇಶ ಎಂದು ಗುರುತು ಹೊಂದಿದೆ ಎನ್ನುತ್ತಿದ್ದಾರೆ. ಅಂದರೆ ಆದಿವಾಸಿಗಳ ಬದುಕನ್ನು ಹಾಳು ಮಾಡಿ ದೇಶ ಈ ಮಟ್ಟಕ್ಕೆ ಬಂದಿದೆ ಎಂದರೆ ನಾಚಿಕೆಗೇಡಿನ ಸ್ಥಿತಿ ಇದು! ಆ ದಿನ ಅವರಿಗೆ ಮಾತನಾಡಲು ಬಾಯಿ ಇರಲಿಲ್ಲ. ಅವರ ಪರವಾಗಿ ಮಾತನಾಡುವ ಯಾವುದೇ ಚಳವಳಿಗಳಿರಲಿಲ್ಲ. ಇನ್ನಾದರೂ ಎಚ್ಚೆತ್ತುಕೊಳ್ಳೋಣ. ಅಭಿವೃದ್ಧಿ ಎಂಬುದು ನೇರವಾಗಿ ಜನರ ಜೀವನಮಟ್ಟವನ್ನು ಹೆಚ್ಚಿಸುವಂತಿರಬೇಕು, ಆದರೆ ನಿಮ್ಮ ಮನಸ್ಸಿನಲ್ಲಿ ಒಂದು ಸಿದ್ಧಾಂತವನ್ನು ಇಟ್ಟುಕೊಂಡು ಹೂಡಿಕೆದಾರರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತಾ ಹೋದರೆ ಅದರಿಂದ ಅಭಿವೃದ್ಧಿಯಾಗುತ್ತದೆ ಎಂಬುದು ಸುಳ್ಳು. ನೀವು ಯಾರನ್ನಾದರೂ ನಿರ್ವಸಿತರನ್ನಾಗಿಸಬೇಕಾಗಿ ಬಂದರೆ ಅಥವಾ ನಿರಾಶ್ರಿತರನ್ನಾಗಿ ಮಾಡಬೇಕಾದರೆ, ಒಂದು ಸಮಾಜವಾಗಿ ಆ ಜನರು ಮತ್ತೆ ಬೇರೊಂದು ಕಡೆ ಈಗಿದ್ದ ತಮ್ಮ ಜೀವನಮಟ್ಟಕ್ಕೆ ಒಂದು ರೂಪಾಯಿಯಷ್ಟು ಕೂಡ ಕಡಿಮೆ ಮಾಡದೆ ಬದುಕಲು ಪುನರ್ವಸತಿ ಕಲ್ಪಿಸಲು ಸಾಧ್ಯವಿದ್ದರೆ ಮಾತ್ರ ಮಾಡಿ. ಬೇರೆಡೆ ಕೊಡುವುದು, ಇಲ್ಲದಿದ್ದರೆ ಮಾಡಲು ಅವಕಾಶವಿಲ್ಲ ಎಂಬ ಆಗ್ರಹವನ್ನು ಮುಂದಿಡಬೇಕಾದ ಅಗತ್ಯವಿದೆ. ಮುಖ್ಯವಾಗಿ ನಾವು ಮಾತನಾಡುತ್ತಿರುವ ಜೀವನ ಸಂಪನ್ಮೂಲಗಳ ಶೋಷಣೆ ಇದೇ.
ಕೆ.ಜಿ ಬೇಸಿನ್ ಬಗ್ಗೆ ಗೆಳೆಯರು ಬೆಳಗ್ಗೆಯಿಂದ ಕೂಗಿದ ಘೋಷಣೆಗಳನ್ನು ಕೇಳಿಸಿಕೊಳ್ಳುತ್ತಿದ್ದೇವೆ. ನಾವು ಪತ್ರಿಕೆಯಲ್ಲಿ ನೋಡುತ್ತಿದ್ದೇವೆ. ಆದರೆ ಕೇಳಬೇಕಿರುವ ಪ್ರಶ್ನೆ ಏನು? ಕೇಳುತ್ತಿರುವ ಪ್ರಶ್ನೆ ಏನು? ಸ್ಥಳೀಯ ಸಂಪನ್ಮೂಲಗಳ ಹಕ್ಕನ್ನು ಸ್ಥಳೀಯ ಜನರಿಗೆ ನೀಡಬೇಕು ಎಂದು ಅವರು ಹೇಳುತ್ತಿದ್ದಾರೆ. ಆಂಧ್ರಪ್ರದೇಶದ ಪ್ರತಿ ಮನೆಗೆ ಗ್ಯಾಸ್ ನೀಡಿದ ನಂತರವೇ ಬೇರೆಡೆಗೆ ಕೊಡಬೇಕೆಂದು ಆವೇಶದಿಂದ ಹೇಳುತ್ತಿದ್ದೇವಾದರೂ, ನಾವು ಸ್ವಲ್ಪ ಯೋಚಿಸಿದರೆ, ಎಲ್ಲರೂ ಇದೇ ಮಾತು ಹೇಳಿದರೆ ಸಂಪನ್ಮೂಲಗಳಿಲ್ಲದ ಪ್ರದೇಶಗಳ ಗತಿಯೇನು? ದೇಶದಲ್ಲಿ ಎಲ್ಲೇ ಸಂಪನ್ಮೂಲಗಳಿದ್ದರೂ ಅದು ರಾಷ್ಟ್ರೀಯ ಸಂಪತ್ತು. ಜನರ ಸಂಪತ್ತು. ಸ್ಥಳೀಯ ಜನರ ಸಂಪತ್ತಲ್ಲ, ಜನರ ಸಂಪತ್ತು. ಸಂಪನ್ಮೂಲಗಳು ಎಲ್ಲಿದ್ದರೂ, ದೇಶದ ಎಲ್ಲಾ ಜನರಿಗೆ ಸಮಾನವಾಗಿ ಸಿಗಬೇಕೆನ್ನುವುದು ಪ್ರಜಾಪ್ರಭುತ್ವದ ತತ್ವವೇ ಹೊರತು, ಎಲ್ಲಿ ಸಂಪನ್ಮೂಲಗಳಿದ್ದರೆ ಅದು ಅಲ್ಲಿಯವರಿಗೆ ಮಾತ್ರ ದಕ್ಕಬೇಕೆನ್ನುವುದು ಪ್ರಜಾತಾಂತ್ರಿಕ ತತ್ವವಲ್ಲ. ಆಗ ಏನಾಗುತ್ತದೆಯೆಂದರೆ ಸಂಪನ್ಮೂಲಗಳಿಲ್ಲದ ಪ್ರದೇಶಗಳು ಎರಡನೇ ದರ್ಜೆಯ ನಾಗರಿಕರಾಗಿ ಬದುಕಬೇಕಾಗಿ ಬರುತ್ತದೆ. ಅದು ನ್ಯಾಯವಲ್ಲ. ನೈಸರ್ಗಿಕ ಸಂಪನ್ಮೂಲಗಳು ಜನರ ಸಂಪತ್ತು, ಸ್ಥಳೀಯ ಜನರ ಸಂಪತ್ತು ಮಾತ್ರವಲ್ಲ, ಇಡೀ ದೇಶದ ಜನರ ಸಂಪತ್ತು. ದೇಶದ ಎಲ್ಲಾ ಜನರು ಸಮಾನವಾಗಿ ಇವುಗಳನ್ನು ಪಡೆಯಬೇಕೆಂಬುದು ಪ್ರಜಾಪ್ರಭುತ್ವದ ತತ್ವವಾಗಿದೆ.
ಕೆ.ಜಿ ಜಲಾನಯನದ ಬಗ್ಗೆ ಕೇಳಬೇಕಿರುವ ಪ್ರಶ್ನೆ ಅದಲ್ಲ. ಚಳವಳಿ ನಡೆಸಬೇಕಿರುವುದು ಅದಕ್ಕಲ್ಲ. ನಾವು ಏನು ಕೇಳಬೇಕು? ಅನೇಕ ಗೆಳೆಯರು ಕೂಡ ಈ ಬಗ್ಗೆ ಹೇಳಿದ್ದಾರೆ. ಒಎನ್‌ಜಿಸಿ ಎಂಬುದು ಬಹಳ ಪರಿಣತಿಯಿರುವ ಸಂಸ್ಥೆ. ಎಂತಹ ಕೌಶಲ್ಯ ಅದರದು ಅಂದರೆ, ಏಷ್ಯಾ ಮತ್ತು ಆಫ್ರಿಕಾದ ಹಲವು ದೇಶಗಳು ತಮ್ಮ ದೇಶಗಳಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲವನ್ನು ಅನ್ವೇಷಿಸಲು ಮತ್ತು ಹೊರತೆಗೆಯಲು ಒಎನ್‌ಜಿಸಿಗೆ ಒಪ್ಪಂದಗಳನ್ನು ನೀಡುತ್ತಿವೆ. ಇಂತಹ ಒಎನ್‌ಜಿಸಿ ಭಾರತಕ್ಕೆ ಬೇಕಿಲ್ಲದೇ ಹೋಯಿತೇ? ಭಾರತಕ್ಕೆ ರಿಲಯನ್ಸ್ ಬೇಕಾಗಿ ಬಂತೇ? ಇದು ಏಕೆ ಅಗತ್ಯವಾಯಿತು? ಒಎನ್‌ಜಿಸಿ ಸಾಮರ್ಥ್ಯ, ಕೌಶಲ್ಯ ಎರಡೂ ಹೊಂದಿದೆ. ಆದರೆ ಅದರಲ್ಲಿರುವವರು ಸಂಪುಟದಲ್ಲಿರುವವರ ಸಂಬಂಧಿಗಳಲ್ಲ. ಸಚಿವ ಸಂಪುಟದಲ್ಲಿರುವವರಿಗೆ ರಾಜಕೀಯ ಸ್ನೇಹಿತರಲ್ಲ. ಇದು ಸರ್ಕಾರಿ ಕಂಪನಿಯಾದ್ದರಿಂದ ಹೆಚ್ಚು ಕಮಿಷನ್ ಬರುವುದಿಲ್ಲ. ಖಾಸಗಿ ಕಂಪನಿಗಳಿಗೆ ಕೊಟ್ಟರೆ ಕಮಿಷನ್ ಸಿಗುತ್ತದೆ. ಇದು ಬಹಳ ಅನ್ಯಾಯ.
ಎರಡನೆಯದಾಗಿ, ಹೊರತೆಗೆಯಲಾದ ಅನಿಲದ ಬೆಲೆ ಏನಾಗಿರಬೇಕು ಎಂದು ಯಾರು ನಿರ್ಧರಿಸುತ್ತಾರೆ? ನಮ್ಮ ರಾಜ್ಯದಲ್ಲಿ ಅನೇಕ ಖಾಸಗಿ ಕಂಪನಿಗಳು ವಿದ್ಯುತ್ ಉತ್ಪಾದಿಸುತ್ತಿವೆ. ಟ್ರಾನ್‌ಸ್ಕೋ ಅವರ ವಿದ್ಯುತ್‌ಅನ್ನು ಖರೀದಿಸಿ ಡಿಸ್ಕಾಂಗೆ ಮಾರಾಟ ಮಾಡುತ್ತದೆ. ಡಿಸ್ಕಾಂ ನಮಗೆ ಮಾರುತ್ತದೆ. ಯಾರು ಬೆಲೆ ನಿಗದಿಪಡಿಸುತ್ತಾರೆ? ವಿದ್ಯುತ್ ನಿಯಂತ್ರಣ ಆಯೋಗ ಒಂದಿದೆ. ಆಯೋಗವು ವರ್ಷಕ್ಕೊಮ್ಮೆ ಸಭೆ ಸೇರುತ್ತದೆ. ಸಭೆ ಸೇರಿ ಏನು ಮಾಡುತ್ತದೆ? ಟ್ರಾನ್‌ಸ್ಕೋ, ಡಿಸ್ಕಾಂ, ಜೆನ್ಕೋ, ಖಾಸಗಿ ಉತ್ಪಾದಕರು- ನಮ್ಮ ವೆಚ್ಚ ಇಷ್ಟಾಯಿತು ಎನ್ನುತ್ತಾರೆ. ತಾನಿಷ್ಟು ಸಹಾಯಧನ ನೀಡುವುದಾಗಿ ಸರಕಾರ ಹೇಳುತ್ತದೆ. ಸಾರ್ವಜನಿಕರಿಗೆ ಸೂಚನಾಪತ್ರ ಹೋಗುತ್ತದೆ. ಜನ ಬರುತ್ತಾರೆ. ಗುಣಮಟ್ಟದ ಪೂರೈಕೆ ಮಾಡುತ್ತಿಲ್ಲ, 7 ಗಂಟೆ ಕರೆಂಟ್ ನೀಡುತ್ತಿಲ್ಲ. ಪರೀಕ್ಷೆಯ ಸಮಯದಲ್ಲಿ ಕರೆಂಟ್ ಕಡಿತಗೊಳಿಸಲಾಗುತ್ತಿದೆ. ಇದು ನಮ್ಮ ಕಷ್ಟ ಎಂದು ಹೇಳಿಕೊಳ್ಳುತ್ತೇವೆ. ವಿದ್ಯುತ್ ನಿಯಂತ್ರಣ ಆಯೋಗವು ಸ್ವತಂತ್ರ ಸಂಸ್ಥೆಯಾಗಿ ಎಲ್ಲವನ್ನೂ ಆಲಿಸಿ ಬೆಲೆ ನಿಗದಿಪಡಿಸುತ್ತದೆ. ಇದು ನ್ಯಾಯವಾಗಿ ನಡೆಯುತ್ತದೆಯೇ? ನ್ಯಾಯವಾಗಿ ನಡೆಯುವುದಿಲ್ಲವೇ? ಅದು ಬೇರೆ ವಿಷಯ. ಕನಿಷ್ಠ ಇದೊಂದು ನ್ಯಾಯೋಚಿತ ವ್ಯವಸ್ಥೆ.
ಹಾಗಿದ್ದರೆ ಅನಿಲ ಬೆಲೆಯನ್ನು ಸಹ ಅದೇ ರೀತಿಯಲ್ಲಿ ನಿರ್ಧರಿಸಬೇಕು ತಾನೇ. ಪೆಟ್ರೋಲಿಯಂ ನಿಯಂತ್ರಕ ಕಾಯ್ದೆ ಒಂದಿದೆ. ಅದರ ಅಡಿಯಲ್ಲಿ, ಪೆಟ್ರೋಲಿಯಂ ನಿಯಂತ್ರಣ ಆಯೋಗವನ್ನು ಸ್ಥಾಪಿಸಬೇಕು ಮತ್ತು ಅವರು ಗ್ಯಾಸ್ ಬೆಲೆಯನ್ನು ನಿರ್ಧರಿಸಬೇಕು. ಆದರೆ ಅದು ಆಗುತ್ತಿಲ್ಲ. ಯಾರು ನಿರ್ಧರಿಸುತ್ತಿದ್ದಾರೆ ಎಂದರೆ ಕೇಂದ್ರ ಸಂಪುಟದ ಕೆಲವು ಮಂತ್ರಿಗಳು ’ಎಂಪವರ್ಡ್ ಗ್ರೂಪ್ ಆಫ್ ಮಿನಿಸ್ಟರ್ಸ್ (ಇಜಿಒಎಂ)’ ಎಂಬ ಮಂತ್ರಿಗಳ ತಂಡ ಇದನ್ನು ನಿರ್ಧರಿಸುತ್ತದೆ. ಆ ಮಂತ್ರಿಗಳು ಯಾರೆಂದು ನಮಗೆಲ್ಲರಿಗೂ ಗೊತ್ತು. ಕೇಂದ್ರ ಸಂಪುಟದ ಎಲ್ಲ ಸಚಿವರು ಕೂಡ ಒಬ್ಬರು ಮುಖೇಶ್ ಅಂಬಾನಿಗೆ, ಒಬ್ಬರು ಅನಿಲ್ ಅಂಬಾನಿಗೆ, ಒಬ್ಬರು ನವೀನ್ ಮಿತ್ತಲ್ ಮತ್ತು ಒಬ್ಬರು ಜಿಂದಾಲ್‌ಗೆ ಮಾರಾಟವಾಗಿರುವವರೇ. ಅವರು ಹೇಗೆ ನಿರ್ಧರಿಸುತ್ತಾರೆ? ನಾವು ಬೇಡಿಕೆ ಇಡಬೇಕಾಗಿರುವುದು ಸ್ವತಂತ್ರ ಪೆಟ್ರೋಲಿಯಂ ನಿಯಂತ್ರಣ ಆಯೋಗವೇ ಹೊರತು ಕೇಂದ್ರ ಸಂಪುಟದ ಬೆರಳೆಣಿಕೆಯ ಮಂತ್ರಿಗಳಾದ ಮುರಳಿ ಡಿಯೋರ ಮತ್ತು ಪ್ರಣಬ್ ಮುಖರ್ಜಿ ಗ್ಯಾಸ್ ಬೆಲೆಯನ್ನು ನಿರ್ಧರಿಸಬಾರದು ಎಂದು. ಆಯೋಗ ಸಾರ್ವಜನಿಕರಿಗೆ ನೋಟಿಸ್ ನೀಡಬೇಕು, ನಮ್ಮ ಅಭಿಪ್ರಾಯಗಳನ್ನು ಕೇಳಬೇಕು, ನಂತರ ದರ ನಿರ್ಧರಿಸಬೇಕು ಎಂಬುದನ್ನು.
ಮೂರನೆಯದಾಗಿ, ಅನಿಲವನ್ನು ಬಿಡುಗಡೆ ಮಾಡಿದ ನಂತರ, ಮಾರ್ಕೆಟಿಂಗ್‌ನಲ್ಲಿ ರಿಲಯನ್ಸ್‌ನವರಿಗೆ ಯಾವ ಮಾತ್ರದ ಪಾತ್ರವೂ ಇರಬಾರದು. ಇಂದಿನ ಪರಿಸ್ಥಿತಿ ಏನೆಂದರೆ ಕೇಂದ್ರ ಸರ್ಕಾರ ಯಾರಿಗೆ ಹೇಳುತ್ತದೋ ಅವರಿಗೆ ಕೊಟ್ಟು ಆ ನಂತರ ಮಾರ್ಕೆಟಿಂಗ್ ಮಾಡುತ್ತದೆ; ರಿಲಯನ್ಸ್ ಅದಕ್ಕೆ ಬಗೆಬಗೆಯ ತಗಾದೆಗಳು ತೆಗೆಯುವುದು ಬೇರೆ. ಕೊಡದಿದ್ದರೆ ತನಗೆ ಕೊಟ್ಟಿಲ್ಲ ಎಂದು ನ್ಯಾಯಾಲಯದಲ್ಲಿ ಮೊಕದ್ದಮೆಗಳಿವೆ. ಅನಿಲವನ್ನು ಹೊರತೆಗೆಯುವವರೆಗೂ ರಿಲಯನ್ಸ್‌ಗಾಗಲೀ, ಒಎನ್‌ಜಿಸಿಗಾಗಲೀ ಜವಾಬ್ದಾರಿ ನೀಡಿದೆ, ಮಾರಾಟ ವ್ಯವಹಾರವನ್ನೆಲ್ಲಾ ಸರ್ಕಾರವೇ ನೋಡಿಕೊಳ್ಳಬೇಕು. ಈ ಬೇಡಿಕೆಯನ್ನು ಪ್ರಧಾನವಾಗಿ ಮುಂದಿಡಬೇಕು. ಈ ಬಗ್ಗೆ ನಾವು ಆಂದೋಲನ ಕೈಗೊಳ್ಳಬೇಕಾದ ಅಗತ್ಯವಿದೆ.
ಒಟ್ಟಾರೆಯಾಗಿ ರಿಲಯನ್ಸ್‌ಗೆ ಇಂದು ನೀಡಿದ ಮೂಲ ಒಪ್ಪಂದವನ್ನು ರದ್ದುಗೊಳಿಸಿ. ಅವರು ಹೇಗೂ ಖರ್ಚನ್ನು ಭರಿಸಿರಿ ಎಂದು ಕೇಳುತ್ತಾರೆ. ನ್ಯಾಯಾಲಯದ ಮೊರೆ ಹೋದರೆ ಅವರಿಗೆ ಪರಿಹಾರ ಸಿಗುತ್ತದೆ. ಕೊಟ್ಟುಬಿಡಿ. ಮಹಾರಾಷ್ಟ್ರದಲ್ಲಿ ಎನ್ರಾನ್ ಎಂಬ ಕಂಪನಿಯೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿತು, ಆದರೆ ಸರ್ಕಾರವು ಅದಕ್ಕೆ ಕಚ್ಚಾ ವಸ್ತುಗಳನ್ನು ನೀಡಲು ಸಾಧ್ಯವಾಗದೆ, ಉತ್ಪಾದನೆಯನ್ನು ಪ್ರಾರಂಭಿಸಲು ಕಂಪನಿಗೆ ಸಾಧ್ಯವಾಗದೆ, ಆ ಒಪ್ಪಂದದ ಭಾಗವಾಗಿ ಸಾವಿರ ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ಮಹಾರಾಷ್ಟ್ರ ಸರ್ಕಾರ ನೀಡಬೇಕಾಯಿತು. ಇಂತಹ ಅವಘಡಗಳು ನಡೆಯುತ್ತವೆ. ಹಾಗಾಗಿ, ಕೆ.ಜಿ. ಬೇಸಿನ್ ಗ್ಯಾಸ್‌ಅನ್ನು ಮತ್ತೆ ಒಎನ್‌ಜಿಸಿಗೆ ಹಸ್ತಾಂತರಿಸಬೇಕೆಂಬ ಬೇಡಿಕೆ ಪ್ರಧಾನವಾಗಿ ಮುಂದಕ್ಕೆ ಬರಬೇಕು.
ಸಂಪನ್ಮೂಲಗಳೆಂಬವು ಯಾವಾಗಲೂ ಇಡೀ ದೇಶಕ್ಕೆ ಸೇರಿರುತ್ತವೆ. ದೇಶದ ಜನತೆಗೆ ಸಂಪನ್ಮೂಲಗಳ ಫಲವನ್ನು ಸಮಾನವಾಗಿ ಅನುಭವಿಸುವ ಹಕ್ಕಿದೆ ಆದರೆ ಅವರ ಸಂಪತ್ತು ಅವರದ್ದೇ ಎಂಬುದು ಸರಿಯಲ್ಲ. ಬುಡಕಟ್ಟು ಪ್ರದೇಶಗಳಲ್ಲಿ ಸ್ಥಳೀಯ ಸಂಪನ್ಮೂಲಗಳು ಸ್ಥಳೀಯ ಜನರಿಗೆ ಸೇರಿವೆ ಎಂದು ಏಕೆ ಹೇಳುತ್ತೇವೆಂದರೆ ಆ ಸಂಪನ್ಮೂಲಗಳು ಅವರ ಆರ್ಥಿಕ ಜೀವನಕ್ಕೆ ಮಾತ್ರವಲ್ಲದೆ ಅವರ ಸಂಸ್ಕೃತಿಗೆ ಸಹ ಆ ಸಂಪನ್ಮೂಲಗಳು ತಳಕು ಹಾಕಿಕೊಂಡಿರುತ್ತವೆ. ಮೈದಾನ ಪ್ರದೇಶಗಳಲ್ಲಿ ಸಂಪನ್ಮೂಲಗಳೆಂಬವು ಆರ್ಥಿಕ ಜೀವನಕ್ಕೆ ಮಾತ್ರವೇ ಆಧಾರ. ಆದಿವಾಸಿಗಳಿಗೆ ಹಾಗಲ್ಲ. ಅವರ ಸಂಸ್ಕೃತಿ, ಅವರ ಸಾಮಾಜಿಕ ಅಭ್ಯಾಸಗಳು, ಆಚರಣೆಗಳು ಮತ್ತು ಪದ್ಧತಿಗಳು ಎಲ್ಲವೂ ಅವರ ಸಂಪನ್ಮೂಲಗಳಿಗೆ ಸಂಬಂಧಿಸಿವೆ, ಆದ್ದರಿಂದ ಅವರ ಸಂಪನ್ಮೂಲಗಳ ಮೇಲೆ ಅವರಿಗೇ ಯಜಮಾನಿಕೆ ಇರಬೇಕು, ಇತರರಿಗಲ್ಲ. ಇದನ್ನು ಸಾಮಾನ್ಯ ತತ್ವವನ್ನಾಗಿ ಮಾಡಿದರೆ ಕಷ್ಟ. ಯಾವುದೇ ಸಂಪನ್ಮೂಲಗಳಿಲ್ಲದ ಹಲವಾರು ಪ್ರದೇಶಗಳಿವೆ. ಕಲ್ಲಿದ್ದಲು, ಅನಿಲ, ಪೆಟ್ರೋಲ್ ಮತ್ತು ನೀರು ಇಲ್ಲದ ಅವರು ಭಾರತದಲ್ಲಿ ಬದುಕಲು ಅವಕಾಶವಿಲ್ಲವೇ? ಅವರು ಎಲ್ಲಿಂದ ಸಂಪನ್ಮೂಲಗಳನ್ನು ಪಡೆಯಬಲ್ಲರು? ಅವರು ಎರಡನೇ ದರ್ಜೆಯ ಪ್ರಜೆಗಳಾಗಿಬಿಡುವುದಿಲ್ಲವೇ? ಇದು ಸರಿಯಾದ ಧೋರಣೆಯಲ್ಲ. ಮುಂದಿಡಬೇಕಾದ ಬೇಡಿಕೆಯೆಂದರೆ- ರಿಲಯನ್ಸ್ ಕಂಪನಿಯನ್ನು ಬದಿಗಿರಿಸಿ. ಒಎನ್‌ಜಿಸಿಯನ್ನು ತೆಗೆದುಕೊಳ್ಳಿ. ಸ್ವತಂತ್ರ ನಿಯಂತ್ರಣ ಆಯೋಗದಿಂದ ಬೆಲೆಗಳನ್ನು ನಿರ್ಧರಿಸಬೇಕು ಎಂದು ಹೇಳಿ. ಗ್ಯಾಸ್ ಮತ್ತು ಮಾರ್ಕೆಟಿಂಗ್ ಮೇಲೆ ಸರ್ಕಾರ ನಿಯಂತ್ರಣ ಹೊಂದಿರಬೇಕು ಎಂಬ ಬೇಡಿಕೆಯನ್ನು ಮುಂದಿಡಿ. ಆ ಬೇಡಿಕೆಗಳಿಗಾಗಿ ಪ್ರತಿಭಟಿಸೋಣ ಎಂಬುದು ಹೋರಾಟಗಾರರಲ್ಲಿ ಮಾನವ ಹಕ್ಕುಗಳ ವೇದಿಕೆಯ ಮನವಿ.
ನಾವು ಹಕ್ಕುಗಳ ಬಗ್ಗೆ ಮಾತನಾಡುತ್ತಿರುವುದು, ಜನರು ಪ್ರಸ್ತುತಪಡಿಸುತ್ತಿರುವ ಹಕ್ಕುಗಳಾಗಿವೆ- ಇವುಗಳನ್ನು ಹೇಗೆ ವಕ್ರೀಕರಿಸಿ, ಮೊಟಕುಗೊಳಿಸಿ ಕಾನೂನುಗಳನ್ನು ಮಾಡುತ್ತಿದ್ದಾರೆ ಎಂಬುದನ್ನು ಸಹ ತಿಳಿದುಕೊಳ್ಳಿ. ಮೇಲ್ನೋಟಕ್ಕೆ ಹಕ್ಕನ್ನು ಕೊಟ್ಟ ಹಾಗೆ ಕಾಣುತ್ತದೆ. ನಾನು ಎರಡು ಉದಾಹರಣೆಗಳೊಂದಿಗೆ ಮುಕ್ತಾಯಗೊಳಿಸುತ್ತೇನೆ. ಪ್ರಸ್ತುತ, ಸರ್ಕಾರವು ಆಹಾರ ಭದ್ರತಾ ಕಾನೂನನ್ನು ಮಾಡುತ್ತಿದೆ. ಒಂದು ರೀತಿಯಲ್ಲಿ ಒಳ್ಳೆಯದೇ. ಈವರೆಗೂ ಅಗ್ಗದ ಅಕ್ಕಿ ಕೊಡುವ ನೀತಿಗಳಿದ್ದವು. ಆಂಧ್ರಪ್ರದೇಶವು ಬಿಳಿ ಕಾರ್ಡ್ ಹೊಂದಿರುವವರಿಗೆ 2 ರೂಪಾಯಿಗೆ ಒಂದು ಕೆಜಿ ಅಕ್ಕಿ ಕೊಡುವ ನೀತಿಯನ್ನು ಹೊಂದಿದೆ. ತಮಿಳುನಾಡಿನಲ್ಲಿ ಮೂರು ರೂಪಾಯಿ, ಪಂಜಾಬ್‌ನಲ್ಲಿ ಪ್ರತಿ ಕೆಜಿ ಅಕ್ಕಿ ಮತ್ತು ಗೋಧಿಗೆ ಒಂದು ರೂಪಾಯಿ ಹೀಗೇನೋ ಇದೆ. ಇದು ತಪ್ಪಲ್ಲ, ಆದರೆ ಈ ಅಗ್ಗದ ಅಕ್ಕಿ ನೀತಿ ಕೊಡುವುದು ಈವರೆಗೆ ಒಂದು ನೀತಿಯಾಗಿ ಜಾರಿಯಲ್ಲಿತ್ತು. ಈ ನೀತಿಯನ್ನು ಬೇಕಿದ್ದರೆ ನಾಳೆ ಹಿಂಪಡೆಯಬಹುದು. ಕಾನೂನಾಗಿದ್ದರೆ ಅದು ಹಕ್ಕು. ಹಾಗಾಗಿ ಅದನ್ನು ಜಾರಿಗೆ ತರುವಂತೆ ನಾವು ಆಹ್ವಾನಿಸುತ್ತೇವೆ. ಅದರಲ್ಲಿ ತಪ್ಪೇನಿಲ್ಲ. ಕಾನೂನು ರೂಪಿಸಬೇಕು. ಆದರೆ ಕೇಂದ್ರ ಸರ್ಕಾರ ಏನು ಕಾನೂನು ಮಾಡುತ್ತದೆ? ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬಕ್ಕೆ ದೇಶಾದ್ಯಂತ ಕೆಜಿಗೆ ಮೂರು ರೂಪಾಯಿಯಂತೆ 25 ಕೆಜಿ ಅಕ್ಕಿ ಅಥವಾ ಗೋಧಿಯನ್ನು ಸರಬರಾಜು ಮಾಡಲಾಗುವುದು ಎಂದು ಹೇಳುತ್ತಿದೆ. 20 ಕೊಡಬೇಕೇ, 30 ಕೊಡಬೇಕೇ, 35 ಕೊಡಬೇಕೇ ಎಂಬುದನ್ನು ಪಕ್ಕಕ್ಕೆ ಇಡಿ. ಬಡತನ ರೇಖೆಯ ವ್ಯಾಖ್ಯೆಯನ್ನು ಕೇಂದ್ರ ಸರ್ಕಾರ ಯಾವ ರೀತಿ ಮಾಡುತ್ತಿದೆಯೆಂದರೆ, ವ್ಯಾಖ್ಯಾನವನ್ನು ಸಂಕುಚಿತಗೊಳಿಸಿ, ದೇಶದಲ್ಲಿ ಕೆಲವೇ ಜನರು ಬಡವರಿದ್ದಾರೆಂಬಂತೆ, ಅವರಿಗೆ ಮಾತ್ರ ಅದು ಸಿಗುವಂತೆ ಅದನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದೆ. ಇಲ್ಲಿ ಮತ್ತೊಮ್ಮೆ ವಿಶ್ವ ಬ್ಯಾಂಕ್ ನಿರ್ದೇಶನಗಳು ಕಾರ್ಯನಿರ್ವಹಿಸುತ್ತವೆ. 1990ರ ದಶಕದಲ್ಲಿ ಭಾರತದ ಆರ್ಥಿಕತೆಯನ್ನು ಪ್ರವೇಶಿಸಿದಾಗಿನಿಂದ ವಿಶ್ವಬ್ಯಾಂಕ್ ಪದೇಪದೇ ಏನು ಹೇಳುತ್ತಿದೆ, ಅಲ್ಲಿಯವರೆಗೆ ನಮಗಿದ್ದ ಆಲೋಚನೆಗಳು ಯಾವುವು? ಒಟ್ಟಿನಲ್ಲಿ ದೇಶದಲ್ಲಿ ನಾನಾ ರೀತಿಯ ಹಿಂದುಳಿದಿರುವಿಕೆಯಿದೆ. ಬಡತನದಲ್ಲಿ ವಿವಿಧ ವಿಧಗಳಿವೆ. ಈ ಬಡತನ ಮತ್ತು ಹಿಂದುಳಿದಿರುವಿಕೆಯನ್ನು ಹಂತಹಂತವಾಗಿ ಕಡಿಮೆ ಮಾಡಿ ಎಲ್ಲರನ್ನೂ ಸಮಾನರನ್ನಾಗಿಸಬೇಕು- ಮೀಸಲಾತಿಯಾಗಲಿ, ಅಗ್ಗದ ಅಕ್ಕಿಯಾಗಲಿ, ಪಡಿತರ ಅಂಗಡಿಗಳಾಗಲಿ, ಇದೆಲ್ಲವೂ ಅದಕ್ಕಾಗಿ ಎಂಬ ಆಲೋಚನೆ ನಮಗಿತ್ತು. ಆದರೆ ವಿಶ್ವಬ್ಯಾಂಕ್‌ನ ಆಲೋಚನೆ ಏನು? ಅವರು ನಮ್ಮವರಿಗೆ ಹೇಳಿದ್ದು ಏನೆಂದರೆ, ಇದನ್ನು ಹೀಗೆ ಮುಂದುವರಿಸಿದರೆ ಸಂಪನ್ಮೂಲಗಳು ವ್ಯರ್ಥವಾಗುತ್ತವೆ ಎಂದು. ನಿಮ್ಮ ಸಂಪನ್ಮೂಲಗಳು ಪ್ರಧಾನವಾಗಿ ಯಾವುದಕ್ಕೋಸ್ಕರ ಇರಬೇಕು? ಹೂಡಿಕೆದಾರರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕು. ಸಂಕ್ಷೇಮಕ್ಕಾಗಿ ಸ್ವಲ್ಪ ಮಾತ್ರವೇ ಖರ್ಚು ಮಾಡಿ.
ಸಂಕ್ಷೇಮಕ್ಕೆ ಸ್ವಲ್ಪ ಮಾತ್ರವೇ ಖರ್ಚು ಮಾಡಬೇಕೆಂದರೆ ನೀವು ಏನು ಮಾಡಬೇಕು? ನೀವು ಉದ್ದೇಶಿತ ಜನರಿಗೆ ಮಾತ್ರ ಸೌಲಭ್ಯ ಪೂರೈಸಬೇಕು. ಅಂದರೆ ತೀರಾ ಹಿಂದುಳಿದವರಿಗೆ ಸ್ವಲ್ಪ ಸ್ವಲ್ಪ ಕೊಡೋಣ. ಎಲ್ಲರೂ ಕ್ರಮೇಣ ಮೇಲಕ್ಕೆ ಬರುತ್ತಾರೆ, ಒಟ್ಟಾರೆ ಹಿಂದುಳಿದಿರುವಿಕೆಯನ್ನು ಕಡಿಮೆ ಮಾಡಲು ನೀವು ಖರ್ಚು ಮಾಡಬೇಕಾಗಿಲ್ಲ. ಅನ್ನ ಕೊಡುವುದಿದ್ದರೆ ನಾಳೆ ಸಾಯುವವನಿಗೆ ಮಾತ್ರ ಕೊಡು. ಇಂದು ಆಸ್ಪತ್ರೆಗೆ ಕರೆದುಕೊಂಡು ಹೋಗದಿದ್ದರೆ ನಾಳೆ ಸಾಯುತ್ತಾನೆ, ಅಂತಹವನಿಗೆ ಮಾತ್ರ ಆಸ್ಪತ್ರೆ ಸೌಲಭ್ಯ ಕೊಡು. ಅಂದರೆ ನೀವು ಕೊಡುವ ಸೌಲಭ್ಯಗಳು ಸಂಪೂರ್ಣ ಭಿಕಾರಿಗಳಿಗೆ ಮಾತ್ರ ಸೀಮಿತವಾಗಿರಬೇಕು. ತದನಂತರ ನಿಮ್ಮ ಎಲ್ಲಾ ಹಣವನ್ನು ಬಂಡವಾಳದಾರರಿಗೆ ಹೆದ್ದಾರಿಗಳು ಮತ್ತು ವಿಮಾನ ನಿಲ್ದಾಣಗಳನ್ನು ಒದಗಿಸಲು ಖರ್ಚು ಮಾಡಬೇಕು. ಮೂಲಸೌಕರ್ಯಕ್ಕೆ ಮಾತ್ರ ಖರ್ಚು ಮಾಡಬೇಕು ಎಂಬುದು ವಿಶ್ವಬ್ಯಾಂಕ್ ನಿರ್ದೇಶನ. ಅದರ ಭಾಗವಾಗಿ ಅವರು ಒಂದೆಡೆ ಆಹಾರ ಭದ್ರತೆಗೆ ಕಾನೂನು ರೂಪಿಸುತ್ತಿದ್ದೇವೆಂದು ಹೇಳುತ್ತಾ ಮತ್ತೊಂದೆಡೆ ಬಡವರ ವ್ಯಾಖ್ಯಾನವನ್ನೇ ಬದಲಿಸುತ್ತಿದ್ದಾರೆ. ಎರಡು ಹೊತ್ತಿನ ಊಟಕ್ಕೆ ತಾಯಿ, ಅಪ್ಪ, ಮಕ್ಕಳಿಗೆ ಒಂದಷ್ಟು ಅನ್ನ ತಿನ್ನುವ ಆದಾಯ ಇಲ್ಲದವರೂ ಇವರ ಲೆಕ್ಕಾಚಾರದಲ್ಲಿ ಸೇರಿಲ್ಲ. ಅದಕ್ಕಿಂತಲೂ ಕಡಿಮೆ ಇದ್ದರೆ ಮಾತ್ರ ಅವರ ದೃಷ್ಟಿಯಲ್ಲಿ ಬಡವ. ಪ್ರತಿಯೊಬ್ಬ ಮನುಷ್ಯನು ದಿನಕ್ಕೆ ಎರಡು ಹೊತ್ತಿನ ಊಟವನ್ನು ತಿನ್ನಲು, ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸಲು, ಉಳಿದುಕೊಳ್ಳಲು ಸ್ಥಳವನ್ನು ಹೊಂದಲು ಮತ್ತು ಕನಿಷ್ಠ ಮತ್ತು ಸ್ವಚ್ಛವಾದ ಜೀವನವನ್ನು ನಡೆಸಲು ಸಾಧ್ಯವಿರಬೇಕು. ಹಾಗೆ ಮಾಡಲು ಸಾಧ್ಯವಿಲ್ಲದವರೆಲ್ಲರಿಗೂ ಸರ್ಕಾರದ ನೆರವಿರಬೇಕೆಂಬುದರಲ್ಲಿ ಸ್ವಲ್ಪ ಅರ್ಥವಿದೆ. ಆದರೆ ಅದನ್ನು ಪರಿಣಾಮಕಾರಿಯಾಗಿ ಕಡಿತ ಮಾಡಲು ಯೋಚಿಸುತ್ತಿದ್ದಾರೆ. ಈ ಧೋರಣೆಯ ಬಗ್ಗೆ ಸಾಕಷ್ಟು ವಿರೋಧದ ಅಗತ್ಯವಿದೆ. ಪ್ರತಿ ಹಕ್ಕೂ, ನಾವು ಕೇಳುವ ಮತ್ತು ಆಗ್ರಹಿಸುವ ಹಕ್ಕನ್ನು ಒದಗಿಸಲಾಗುತ್ತದೆ. ಆದರೆ ಅದನ್ನು ಹೇಗೆ ವಕ್ರೀಕರಿಸಲಾಗುತ್ತಿದೆ ಮತ್ತು ಸಂಕುಚಿತಗೊಳಿಸಲಾಗುತ್ತಿದೆ ಎಂದು ಅರ್ಥಮಾಡಿಕೊಳ್ಳದಿದ್ದರೆ, ಯೋಚಿಸದಿದ್ದರೆ, ನಾವು ಬಹಳಷ್ಟು ಕಳೆದುಕೊಳ್ಳುತ್ತೇವೆ.
ಶಿಕ್ಷಣದ ಹಕ್ಕನ್ನು ಶಾಸನ ಮಾಡಲಾಯಿತು. ಒಳ್ಳೆಯದು ಆದರೆ ಸಂವಿಧಾನ ಏನು ಹೇಳಿದೆ? ಹದಿನಾಲ್ಕು ವರ್ಷದವರೆಗೆ ಎಲ್ಲಾ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಒದಗಿಸಬೇಕೆಂದು ಹೇಳಿದ ಅದರ ಉದ್ದೇಶವೇನು? ಅದನ್ನು ಸರ್ಕಾರ ತನ್ನ ಜವಾಬ್ದಾರಿಯಂತೆ ನಿರ್ವಹಿಸಬೇಕು ಎಂದು. ಆದರೆ ಇಂದು ಏನು ಮಾಡಲಾಗುತ್ತಿದೆ? ನಾವು ಓದುತ್ತಿದ್ದ ಕಾಲದಲ್ಲಿ, ಇಲ್ಲಿನ ದೊಡ್ಡವರೆಲ್ಲ ಓದು ಕಲಿತ ಕಾಲದಲ್ಲಿ, ಹಳ್ಳಿಯಲ್ಲಿ ಒಂದೇ ಶಾಲೆ ಇತ್ತು. ಹೈದರಾಬಾದ್ ಮತ್ತು ವಿಶಾಖಪಟ್ಟಣಂನಂತಹ ನಗರಗಳನ್ನು ಹೊರತುಪಡಿಸಿ ಉಳಿದೆಲ್ಲೆಡೆ ಸರ್ಕಾರಿ ಶಾಲೆಗಳು ಮಾತ್ರ ಇದ್ದವು. ಎಲ್ಲರೂ ಆ ಶಾಲೆಗೆ ಹೋಗುತ್ತಿದ್ದರು. ಊರಿನಲ್ಲಿ ಲಕ್ಷಾಧಿಪತಿ ಅಥವಾ ಕೋಟ್ಯಾಧಿಪತಿ ಇದ್ದರೆ ಅವರ ಮಕ್ಕಳು ಕಾರಿನಲ್ಲಿ ಬರುತ್ತಿದ್ದರು, ನಾವು ಸೈಕಲ್‌ನಲ್ಲಿ ಹೋಗುತ್ತಿದ್ದೆವು. ಅಷ್ಟು ವ್ಯತ್ಯಾಸದ ಹೊರತು ಎಲ್ಲರೂ ಒಂದೇ ಶಾಲೆಗೆ ಹೋಗುತ್ತಿದ್ದೆವು. ಒಂದೇ ಪಠ್ಯಕ್ರಮವನ್ನು ಒಂದೇ ಉಪಾಧ್ಯಾಯಿನ ಹತ್ತಿರ ಓದುತ್ತಿದ್ದೆವು ಮತ್ತು ಒಂದೇ ಪರೀಕ್ಷೆಯನ್ನು ಬರೆಯುತ್ತಿದ್ದೆವು. ಇಂದು ಶಾಲೆಗಳಿಗೆ ಏನಾಗಿದೆ? ವಿವಿಧ ಶಾಲೆಗಳು. ನಿಮ್ಮ ಜಾತಿಗೆ ಅನುಗುಣವಾಗಿ, ನಿಮ್ಮ ಹಣಕ್ಕೆ ಅನುಗುಣವಾಗಿ, ನಿಮ್ಮ ಸ್ಥಾನಮಾನಕ್ಕೆ ಅನುಗುಣವಾಗಿ ನೀವು ಶಾಲೆಯನ್ನು ಆಯ್ಕೆ ಮಾಡಬಹುದು. ಕೆಳವರ್ಗದವರು ಅಂದರೆ ಎಸ್‌ಸಿ, ಎಸ್‌ಟಿ ಮತ್ತು ತೀರಾ ಹಿಂದುಳಿದ ಜಾತಿಗಳವರು ಮಾತ್ರ ಇಂದು ಸರ್ಕಾರಿ ಶಾಲೆಗಳಿಗೆ ಹೋಗುತ್ತಿದ್ದಾರೆ. ಅದನ್ನು ಸರಿಪಡಿಸದೆ ಶಿಕ್ಷಣದ ಹಕ್ಕನ್ನು ಕೊಟ್ಟರೆ ಅದಕ್ಕೇನಾದರೂ ಅರ್ಥವಿದೆಯೇ?
ಸಾಮಾನ್ಯ ಶಾಲಾ ವ್ಯವಸ್ಥೆ ಭಾರತಕ್ಕೆ ಬರಬೇಕು ಎಂದು ಶಿಕ್ಷಣ ಹಕ್ಕುಗಳ ಗುಂಪುಗಳು ಪದೇಪದೇ ಒತ್ತಾಯಿಸುತ್ತಿವೆ. ಇದು ಅಮೆರಿಕದಲ್ಲಿದೆ. ಶ್ರೀಮಂತರು ಮತ್ತು ಕೋಟ್ಯಾಧಿಪತಿಗಳ ದೇಶವಾದರೂ ಅಮೆರಿಕದಲ್ಲಿ ಎಲ್ಲರೂ ಒಂದೇ ಶಾಲೆಗೆ ಹೋಗುತ್ತಾರೆ. ಅವರು ಆ ಪ್ರದೇಶಗಳಲ್ಲಿ ನೆರೆಹೊರೆಯ ಶಾಲೆಗಳಿಗೆ ಹೋಗುತ್ತಾರೆ. ಒಂದೇ ಪಠ್ಯಕ್ರಮವನ್ನು ಅಧ್ಯಯನ ಮಾಡುತ್ತಾರೆ. ಒಬ್ಬನೇ ಶಿಕ್ಷಕ ಕಲಿಸುತ್ತಾನೆ. ಒಂದೇ ಪರೀಕ್ಷೆಗಳನ್ನು ಬರೆಯುತ್ತಾರೆ. ಎಲ್ಲದರಲ್ಲೂ ಅಮೆರಿಕ ನಮಗೆ ಮಾದರಿ. ಆದರೆ ಶಿಕ್ಷಣಕ್ಕೆ ಮಾತ್ರ ಅದಿಲ್ಲ. ಇಲ್ಲಿ ನಾವು ಏನನ್ನು ಕೇಳುತ್ತಿದ್ದೇವೆ? ಸರ್ಕಾರಿ ಶಾಲೆಗಳು ಮಾತ್ರ ಇರಲಿ. ತೆಲುಗಿನಲ್ಲಿ ಹೇಳು, ತಮಿಳಿನಲ್ಲಿ ಹೇಳು, ಮರಾಠಿಯಲ್ಲಿ ಹೇಳು, ನಿನ್ನ ಸ್ಥಳೀಯ ಭಾಷೆಯಲ್ಲಿ ಹೇಳು. ಕಲಿಯಲು ಎಲ್ಲರಿಗೂ ಒಂದೇ ಪಠ್ಯಕ್ರಮ, ಒಂದೇ ಶಿಕ್ಷಕರು, ಒಂದೇ ಶಾಲೆ. ಹಾಗಾದಾಗ ನೀವು ಎಲ್ಲರಿಗೂ ಶಿಕ್ಷಣ ಕೊಡುತ್ತೇವೆ ಎಂದರೆ ಅರ್ಥವಿದೆಯೇ ಹೊರತು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಹೀಗೆ ವರ್ಗೀಕರಿಸಿ ಜಾತಿ, ಹಣ, ಅಂತಸ್ತು ನೋಡಿ ಆಯ್ಕೆ ಮಾಡಿಕೊಳ್ಳಬಹುದು ಎನ್ನುವ ವ್ಯವಸ್ಥೆ ಇಟ್ಟು ಈ ಕಾನೂನು ಮಾಡುವುದರಲ್ಲಿ ಅರ್ಥವೇನು? ದಿಕ್ಕಿಲ್ಲದ ಮಕ್ಕಳಿಗೆ ಶಿಕ್ಷಣ ಕೊಡದ ಶಾಲೆಗಳಲ್ಲಿ ನಾವು ಬಲವಂತವಾಗಿ ಶಿಕ್ಷಣ ಕೊಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇಂದು ಅದು ಕಾನೂನು. ಪತ್ರಿಕೆಯಲ್ಲಿ ಬರುವ ಸುದ್ದಿ ಓದಿದರೆ ಹಲವು ಹಕ್ಕುಗಳನ್ನು ನೀಡಲಾಗುತ್ತಿದೆ ಅನ್ನಿಸುತ್ತದೆ. ಆದರೆ ಅವರು ಈ ಎಲ್ಲ ಹಕ್ಕುಗಳನ್ನು ವಕ್ರೀಕರಿಸಿ, ಮೊಟಕುಗೊಳಿಸಿ, ಬುಡಮೇಲು ಮಾಡಿ ಅನುಷ್ಠಾನಗೊಳಿಸುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಾವು ಅಭಿವೃದ್ಧಿಗೆ ಮಾನವ ಹಕ್ಕುಗಳ ವ್ಯಾಖ್ಯಾನವನ್ನು ನೀಡುತ್ತಿದ್ದೇವೆ ಅಂದರೆ ಎಲ್ಲರಿಗೂ ಪೂರ್ಣ ಮಾನವರಾಗಿ ಬದುಕಲು ಮತ್ತು ಪೂರ್ಣ ಮಾನವರಾಗಿ ಬೆಳೆಯಲು ಸಮಾನ ಅವಕಾಶ ಸಿಗಬೇಕು. ನಮ್ಮ ದೃಷ್ಟಿಯಲ್ಲಿ, ಅಭಿವೃದ್ಧಿಯ ವ್ಯಾಖ್ಯಾನವೆಂದರೆ ಪ್ರತಿಯೊಬ್ಬ ಮನುಷ್ಯನು ಇಂದು ಭಾರತದಲ್ಲಿ ಇರುವ ಅಭಿವೃದ್ಧಿಯ ಮಟ್ಟದಲ್ಲೇ ಬದುಕಲು ಮತ್ತು ಬೆಳೆಯಲು ಅದೇ ಅವಕಾಶವನ್ನು ಹೊಂದಿರಬೇಕು. ಜಾತಿ, ಪುರುಷ ಅಥವಾ ಮಹಿಳೆ, ನಗರ, ಗ್ರಾಮೀಣ, ಆದಿವಾಸಿಗಳು ಅಥವಾ ಬೇರೆ ಯಾರೇ ಆಗಿರಲಿ ಎಲ್ಲರಿಗೂ ಸಮಾನವಾದ ಅವಕಾಶ ಸಿಗಬೇಕು. ಅಂತಹ ಅಭಿವೃದ್ಧಿ ನಮಗೆ ಬೇಕು. ಅದಕ್ಕೆ ವ್ಯತಿರಿಕ್ತವಾಗಿ ಜನತೆಗೆ ಕನಿಷ್ಠ ಜೀವನೋಪಾಯವನ್ನು ಒದಗಿಸುವ ನೈಸರ್ಗಿಕ ಸಂಪತ್ತನ್ನೆಲ್ಲ ಬಂಡವಾಳಶಾಹಿ ಕಂಪನಿಗಳಿಗೆ ಲಾಭದ ಬೇಟೆಗೆ ಒಪ್ಪಿಸಿ “ಮುಳುಗುವುದು, ತೇಲುವುದು ನಿಮಗೆ ಬಿಟ್ಟಿದ್ದು” ಎಂಬ ಅಭಿವೃದ್ಧಿ ಪಥವನ್ನು ಅನುಸರಿಸುತ್ತಿದ್ದಾರೆ. ನಾವೆಲ್ಲರೂ ಇದನ್ನು ಬಲವಾಗಿ ವಿರೋಧಿಸೋಣ. ಹಕ್ಕುಗಳನ್ನು ನೀಡುತ್ತಿದ್ದೇವೆ ಎಂದು ಹೇಳುತ್ತಲೇ ಅದನ್ನು ಮೊಟಕುಗೊಳಿಸುವ, ವಿರೂಪಗೊಳಿಸುವ, ತಲೆಕೆಳಗು ಮಾಡುವ ವಿಧಾನವನ್ನು ಗುರುತಿಸಿ, ವಿಶ್ಲೇಷಿಸಿ, ವಿರೋಧಿಸೋಣ. ಜನರ ಕನಿಷ್ಠ ಜೀವನ ಮಟ್ಟ ಮತ್ತು ಸಮಾನ ಅಭಿವೃದ್ಧಿಯ ಹಕ್ಕನ್ನು ರಕ್ಷಿಸುವ ಈ ಪ್ರಯತ್ನದಲ್ಲಿ ಎಲ್ಲಾ ಚಳವಳಿಗಳು ಒಗ್ಗೂಡಬೇಕೆಂದು ಕೇಳಿಕೊಳ್ಳುತ್ತಾ ನಾನು ಮಾತು ಮುಗಿಸುತ್ತಿದ್ದೇನೆ.
(ಮಾನವ ಹಕ್ಕುಗಳ ವೇದಿಕೆಯ ಬಹಿರಂಗ ಸಭೆ “ಅಭಿವೃದ್ಧಿ – ನೈಸರ್ಗಿಕ ಸಂಪನ್ಮೂಲಗಳ ಲೂಟಿ” – ಅಮಲಾಪುರಂ, 23.8.2009)
ತೆಲುಗಿನಿಂದ ಕನ್ನಡಕ್ಕೆ: ಡಾ. ಬಂಜಗೆರೆ ಜಯಪ್ರಕಾಶ

ಡಾ. ಬಂಜಗೆರೆ ಜಯಪ್ರಕಾಶ
ಕವಿ, ಸಂಸ್ಕೃತಿ ಚಿಂತಕ, ವಿಮರ್ಶಕ, ಅಂಕಣಕಾರ, ಅನುವಾದಕ ಮತ್ತು ಜನಪರ ಹೋರಾಟಗಾರ. ಪಾಪ ನಿವೇದನೆ, ಪ್ರವಾದಿ, ಬೇಗಂಪುರ, ತಲೆಮಾರು, ಹಿಂದೂಗಳು -ಬೇರೊಂದು ಚರಿತ್ರೆ ಇವರ ಅನುವಾದಿತ ಕೃತಿಗಳಲ್ಲಿ ಕೆಲವು. ಕನ್ನಡ ರಾಷ್ಟ್ರೀಯತೆ, ಮಹೂವಾ, ನಾಳೆಗಾದರೂ ಸಿಗದೆ ನಿನ್ನ ತಾವಿನ ಗುರುತು ಸೇರಿದಂತೆ ಹಲವು ಸ್ವತಂತ್ರ ರಚನೆಗಳು ಕೂಡ ಜಯಪ್ರಕಾಶ್ ಅವರ ಪುಸ್ತಕಗಳ ಪಟ್ಟಿಯಲ್ಲಿ ಸೇರಿವೆ.


