Homeಮುಖಪುಟಪ್ರಕಟಣಪೂರ್ವ; ಡೊನಾಲ್ಡ್ ಆಂಡರ್ಸನ್ ಅವರ ’ಕೊನೆಯ ಬಿಳಿ ಬೇಟೆಗಾರ’ ಪುಸ್ತಕದಿಂದ ಆಯ್ದ ಅಧ್ಯಾಯದ ಭಾಗ: ಕಾಡಿನ...

ಪ್ರಕಟಣಪೂರ್ವ; ಡೊನಾಲ್ಡ್ ಆಂಡರ್ಸನ್ ಅವರ ’ಕೊನೆಯ ಬಿಳಿ ಬೇಟೆಗಾರ’ ಪುಸ್ತಕದಿಂದ ಆಯ್ದ ಅಧ್ಯಾಯದ ಭಾಗ: ಕಾಡಿನ ಬುಡಕಟ್ಟು ಜನಾಂಗಗಳು

- Advertisement -
- Advertisement -

ಆದಿನಗಳಲ್ಲಿ ಶಿಕಾರಿ ಮಾಡುತ್ತಿದ್ದ ಯಾರೇ ಆಗಲಿ, ಕಾಡಿನ ಆದಿವಾಸಿ ಬುಡಕಟ್ಟು ಜನರ ಸೇವೆಯನ್ನು ತಮ್ಮ ಶಿಕಾರಿಯಲ್ಲಿ ಸಹಾಯಕ್ಕಾಗಿ ಬಳಸಿಕೊಳ್ಳುತ್ತಿದ್ದರು. ನಾನು ಸಹ ಆದಿವಾಸಿ ಸಮುದಾಯದ ಜನರ ಸಹಕಾರ ಪಡೆಯಲು ನನ್ನ ಹಣ, ವಿದ್ಯೆ ಮತ್ತು ಪ್ರಕಟವಾಗಿ ಕಾಣಿಸುತ್ತಿದ್ದ ಸಾಮಾಜಿಕ ಸ್ಥಾನಮಾನಗಳನ್ನು ಬಳಸಿಕೊಳ್ಳುತ್ತಿದ್ದೆ. ಇಂದಿನ ಜನರು ಇದನ್ನು ರಾಜಕೀಯ ದೃಷ್ಟಿಯಿಂದ ಸರಿಯಲ್ಲದ ಸಂಗತಿ ಅನ್ನಬಹುದು ಮತ್ತು ಆ ಕಾಲದ ನನ್ನ ಕ್ರಿಯೆಗಳು ಇಂದಿನವರಲ್ಲಿ ಅಸಮ್ಮತಿಯನ್ನು ಉಂಟುಮಾಡಬಹುದು. ಆದರೆ, ಈಗ ಲಭ್ಯವಿರುವ ಜ್ಞಾನವ್ಯವಸ್ಥೆಗಳಿಗೆ ಹೋಲಿಸಿದರೆ, ನನಗೆ ತುಂಬ ಅನುಕೂಲ ಮಾಡಿದಂತಹ ಆದಿವಾಸಿಗಳ ಸಾಂಪ್ರದಾಯಿಕ ಜ್ಞಾನವ್ಯವಸ್ಥೆಯ ಬಗ್ಗೆ ನನಗೆ ಅಪಾರ ಗೌರವವಿತ್ತು. ಅವರಲ್ಲಿ ಎಂತಹ ಅದ್ಭುತ ಕೌಶಲ್ಯಗಳು ಇದ್ದವು! ತಂದೆತಾಯಿಯರಿಂದ ಮಕ್ಕಳಿಗೆ ಈ ಕೌಶಲ್ಯಗಳು ಸಾಗಿ ಬರುತ್ತಿದ್ದವು. ‘ನಾನು ಈ ಭೂಮಿ ಬಿಟ್ಟು ಹೋದ ಮೇಲೆ ಒಂದು ದಿನ ಬರುತ್ತದೆ, ಅಂದು ಈ ಕೌಶಲ್ಯಗಳು ಹೇಳಹೆಸರಿಲ್ಲದೆ ಮಾಯವಾಗಿರುತ್ತವೆ ಮತ್ತು ಹೀಗಾಗಲು ಹೆಚ್ಚೇನೂ ತಡವಿಲ್ಲ’ ಎಂಬ ತುಂಬಾ ಭಯಂಕರ ಯೋಚನೆಯೊಂದು ಆಗಾಗ ನನಗೆ ಬರುತ್ತದೆ. ಆ ಆದಿವಾಸಿಗಳಿಂದ ಪ್ರಯೋಜನ ಪಡೆದ ದಿನಗಳನ್ನು ನೆನಪಿಸಿಕೊಂಡಾಗ ನನಗನ್ನಿಸುತ್ತೆ, ಆ ದಿನಗಳಲ್ಲಿ ‘ಇವರ ಸೇವೆ ನನಗೆ ಹಕ್ಕಿನಿಂದ ಸಿಗಬೇಕಾದದ್ದು’ ಎಂಬ ಗಾಢ ಭಾವನೆ ನನ್ನಲ್ಲಿತ್ತು. ನಾನು ಅವರ ಒಡೆಯನೆಂಬಂತೆ ವರ್ತಿಸುತ್ತಿದ್ದೆ, ನಾನು ಎಲ್ಲಿ ಯಾವಾಗ ಕರೆದರೂ ತಕ್ಷಣ ಅವರು ‘ಓ ಯಜಮಾನ್ರೇ, ಬಂದೆ’ ಎಂದು ಬರುತ್ತಿದ್ದರು. ಹಾಗಿದ್ದವು ಆ ದಿನಗಳು. ನಾನು ಅವರನ್ನು ಯಾವಾಗಲೂ ಗೌರವದಿಂದ ನಡೆಸಿಕೊಳ್ಳುತ್ತಿದ್ದೆನಾದರೂ, ಅವರು ಜಾಡುತೋರುಗರು ಅಥವಾ ಶಿಕಾರಿ ಮಾರ್ಗದರ್ಶಕರಾಗುವುದಕ್ಕಿಂತ ಯಾವ ಹೆಚ್ಚಿನ ಮಹತ್ವಾಕಾಂಕ್ಷೆಯನ್ನೂ ಹೊಂದಿಲ್ಲ ಎಂಬ ಭಾವನೆ ಆಗ ನನ್ನ ಮನಸ್ಸಿನಲ್ಲಿ ಇತ್ತು. ಇವತ್ತು ಅವರು ಪ್ರಧಾನವಾಹಿನಿಯಲ್ಲಿ ಮೇಳೈಸಿ ಹೋಗಿದ್ದಾರೆ ಮತ್ತು ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಜೀವನ ಮಾಡುವ ಯಾವುದೇ ವ್ಯಕ್ತಿ ಹೊಂದಿರುವ ಹಂಬಲಗಳನ್ನು ಅವರೂ ಸಹ ಹೊಂದಿದ್ದಾರೆ.

ಇದೇನೇ ಇರಲಿ, ನಾನು ಅರ್ಧ ಶತಮಾನದ ಕಾಲ ಬೇರೆಬೇರೆ ಹಂತಗಳಲ್ಲಿ ಮತ್ತು ವಿವಿಧ ಕೆಲಸಗಳಿಗಾಗಿ ಅವರನ್ನು ಅವಲಂಬಿಸಿದ್ದೆ ಹಾಗೂ ಅವರು ನನಗೆ ಕಲಿಸಿದ ವಿಷಯಗಳಿಗಾಗಿ ನಾನು ಅವರಿಗೆ ತುಂಬ ಕೃತಜ್ಞನಾಗಿದ್ದೇನೆ. ಅವರು ನನಗೆ ಕಾಡಿನ ಜೀವಿಗಳನ್ನು ಕುರಿತಾಗಿ ಅಮೂಲ್ಯ ಒಳನೋಟಗಳನ್ನು ಕೊಟ್ಟರು. ಅವರು ತಮ್ಮ ಅನುಭವದಿಂದ ಏನನ್ನು ನನಗೆ ಕಲಿಸಿದರೋ ಅದು ಅತ್ಯಂತ ಬೆಲೆಬಾಳುವ ಕಲಿಕೆ ಎಂದು ನಾನು ಪರಿಗಣಿಸಿದ್ದೇನೆ. ಅವರು ಅನೇಕ ಸಂದರ್ಭಗಳಲ್ಲಿ ನನ್ನ ಪ್ರಾಣ ಉಳಿಸಿದವರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ, ಅಲ್ಲವೇ? ಮತ್ತು ಇವೆಲ್ಲಕ್ಕಾಗಿ ನಾನು ಅವರಿಗೆ ಸದಾ ಆಭಾರಿಯಾಗಿದ್ದೇನೆ. ನನಗೆ ಗೊತ್ತು, ಇವತ್ತು ನಾನು, ಹಿಂದೆ ಯಾರ ಸೇವೆಯನ್ನು ಬಳಸಿಕೊಂಡಿದ್ದೆನೋ ಆ ಆದಿವಾಸಿ ಸಮುದಾಯದ ಒಬ್ಬ ಯುವಕನನ್ನು ಭೇಟಿ ಮಾಡಿದರೆ, ಸಂಚಾರಿ ದೂರವಾಣಿಗಳ ಬಗ್ಗೆ ನನಗೆ ಗೊತ್ತಿರುವುದಕ್ಕಿಂತ ಹೆಚ್ಚು ಅವನಿಗೆ ಗೊತ್ತಿರುತ್ತದೆ, ಮತ್ತು ಪ್ರಾಣಿಗಳ ಜಾಡನ್ನರಿಯುವ ಬಗ್ಗೆ ನನಗೆ ಅವನಿಗಿಂತ ಜಾಸ್ತಿ ಗೊತ್ತಿರುತ್ತದೆ- ಇದೇ ನೋಡಿ, ಈ ಸನ್ನಿವೇಶದ ದುಃಖಮಯ ಸ್ಥಿತಿ.

ನಾನು ಆದಿವಾಸಿಗಳೊಂದಿಗಿದ್ದಾಗ ಅವರ ಸಾಮರ್ಥ್ಯಗಳನ್ನು ನೋಡಿ ಅನೇಕ ಸಲ ತೀರಾ ಆಶ್ಚರ್ಯಚಕಿತನಾಗುತ್ತಿದ್ದೆ. ಹುಲ್ಲಿನ ಗರಿಗಳು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ತಿರುಗಿರುವುದು, ಯಾವುದೋ ಒಂದು ಕಲ್ಲು ಅಥವಾ ಜಲ್ಲಿಕಲ್ಲು ಹೊಸದಾಗಿ ದಾರಿಯಲ್ಲಿ ಬಿದ್ದಿರುವುದು, ಮುರಿದ ರೆಂಬೆಗಳು – ಇಂಥ ಯಾವ ಸಂಕೇತಗಳೂ ಅವರ ಕಣ್ಣಿನಿಂದ ತಪ್ಪಿಸಿಕೊಂಡು ಹೋಗುತ್ತಿರಲಿಲ್ಲ ಹಾಗೂ ಇವೆಲ್ಲವೂ ಕೂಡ ಆಗಿರಬಹುದಾದ ಘಟನಾವಳಿಗಳನ್ನು ಒಂದು ಕಥೆಯಾಗಿ ಕಟ್ಟಲು ಅವರಿಗೆ ಸಹಾಯ ಮಾಡುತ್ತಿದ್ದವು. ಪಂಜಾ ಗುರುತುಗಳನ್ನು ನೋಡಿ ಅವರು ಅದು ಹುಲಿಯೋ, ಚಿರತೆಯೋ, ಗಂಡೋ ಹೆಣ್ಣೋ, ಆ ಗುರುತು ಆಗಿ ಎಷ್ಟು ಸಮಯ ಕಳೆದಿದೆ ಎಂಬುದನ್ನು ಕುರಿತ ಒಂದು ಮಟ್ಟದ ನಿಖರ ವಿವರ – ಇವನ್ನೆಲ್ಲ ಹೇಳಬಲ್ಲವರಾಗಿದ್ದರು. ಅವರಿಗೆ ಆ ನೆಲ ಎಷ್ಟು ಪರಿಚಿತವಿತ್ತು ಎಂಬುದನ್ನು ಅವಲಂಬಿಸಿ, ಆ ಪ್ರಾಣಿಯನ್ನು ಎಲ್ಲಿ ಕಾಣಬಹುದು, ಕಡೇ ಪಕ್ಷ ಎಲ್ಲಿ ಕಾದು ಕುಳಿತರೆ ಅದನ್ನು ನೋಡಬಹುದು ಎಂದು ಹೇಳುತ್ತಿದ್ದರು. ಇವುಗಳಲ್ಲಿ ಕೆಲವು ಸಾಧ್ಯವಾಗುವುದು ಸೂಕ್ಷ್ಮವಾದ ಅವಲೋಕನದಿಂದ. ಕಾಲಕಳೆದಂತೆ, ಇಂತಹ ಕೆಲವು ಚಿಹ್ನೆಗಳನ್ನು ನಾನು ಗುರುತಿಸುವುದನ್ನು ಕಲಿತೆ, ಆದರೂ, ನನ್ನ ಅಭಿಪ್ರಾಯದಲ್ಲಿ ಯಾವ ನಗರವಾಸಿಯೂ ಕೌಶಲ್ಯಗಳ ವಿಷಯದಲ್ಲಿ ಇವರಿಗೆ ಸಮನಾಗಲು ಸಾಧ್ಯವಿಲ್ಲ. ನಾನು ಅನೇಕ ಆದಿವಾಸಿ ಬುಡಕಟ್ಟು ಜನರನ್ನು ಭೇಟಿ ಮಾಡಿದ್ದೇನಾದರೂ, ಹೆಚ್ಚಾಗಿ ಯಾರ ಜೊತೆ ಕೆಲಸ ಮಾಡಿದ್ದೇನೋ ಆ ಬುಡಕಟ್ಟು ಜನರಲ್ಲಿ ಕೆಲವರನ್ನು ಕುರಿತು ವಿವರಿಸುತ್ತೇನೆ. ಅವರೆಂದರೆ ಬಿ.ಆರ್.ಹಿಲ್ಸ್‌ನ (ಬಿಳಿಗಿರಿರಂಗನ ಬೆಟ್ಟ) ಸೋಲಿಗರು, ಹೈದರಾಬಾದ್‌ನ ಚೆಂಚುಗಳು. ನೀಲಗಿರಿಯ ಇರುಳರು, ಕುರುಂಬರು ಮತ್ತು ಕಾಟುನಾಯಕರು, ಮತ್ತು ತಾಂತ್ರಿಕವಾಗಿ ದಕ್ಷಿಣ ಭಾರತೀಯ ಮೂಲದವರಲ್ಲವಾದರೂ ಲಂಬಾಣಿಗಳನ್ನು ಸಹ ಈ ಪಟ್ಟಿಗೆ ಸೇರಿಸಬೇಕು ಎಂದು ನನಗನ್ನಿಸುತ್ತದೆ.

ಈ ಬುಡಕಟ್ಟು ಜನಾಂಗಗಳು ಕಾಡನ್ನು ಕುರಿತ ಜ್ಞಾನದ ವಿಷಯದಲ್ಲಿ ತುಂಬ ಅಂದರೆ ತುಂಬಾ ಸಂಪನ್ಮೂಲಭರಿತವಾಗಿದ್ದವು. ಆ ಜನರಿಗೆ ಜೇನು ಮತ್ತು ಇತರ ಕಾಡಿನ ಉತ್ಪನ್ನಗಳನ್ನು ಎಲ್ಲಿ ಸಂಗ್ರಹಿಸಬೇಕು, ಯಾವ ಕಾಡುಹಣ್ಣುಗಳನ್ನು ತಿನ್ನಬೇಕು, ಚಿಕ್ಕಪುಟ್ಟ ಕಾಯಿಲೆಗಳಿಗೆ ಕಾಡಿನ ಸಸ್ಯಗಳಿಂದ ಔಷಧಿಯನ್ನು ಹೇಗೆ ತಯಾರಿಸಬೇಕು ಎಂದು ಚೆನ್ನಾಗಿ ಗೊತ್ತಿತ್ತು. ಹೌದು, ದೆವ್ವಭೂತಗಳ ಮೇಲೆ ಅವರಿಗಿದ್ದ ನಂಬಿಕೆಯು ನಿಮ್ಮಲ್ಲಿ ಸಿಟ್ಟು ತರಿಸಬಹುದು, ಆದರೆ ಅದು ನಾಣ್ಯದ ಇನ್ನೊಂದು ಮುಖ, ಅವರು ಸರಳ ಜನ. ಒಂದು ಸಲ ನೀವು ಅವರ ನಂಬಿಕೆ ಗಳಿಸಿದಿರಿ ಅಂದರೆ ತುಂಬ ಶ್ರದ್ಧೆಯಿಂದ ನಿಮ್ಮ ಸೇವೆ ಮಾಡುವಂಥವರು. ಇದು ಕೇವಲ ನೀವು ಅವರೊಂದಿಗೆ ಹೇಗೆ ವರ್ತಿಸುತ್ತೀರಿ ಅಥವಾ ಅವರನ್ನು ಹೇಗೆ ನೋಡಿಕೊಳ್ಳುತ್ತೀರಿ ಎಂಬುದರ ವಿಷಯದಲ್ಲಿನ ಮಾತ್ರ ನಂಬಿಕೆ ಅಲ್ಲ, ಇದು ಒಬ್ಬ ಶಿಕಾರಿಯಾಗಿ ನಿಮ್ಮ ಸಾಮರ್ಥ್ಯದ ಬಗ್ಗೆ ಅವರ ನಂಬಿಕೆ ಮತ್ತು ಸಂದರ್ಭವು ಬೇಡಿದಾಗ ನೀವು ದಕ್ಷತೆಯಿಂದ ಕಾರ್ಯ ನಿರ್ವಹಿಸಬಲ್ಲಿರಿ ಎಂಬುದನ್ನು ಕುರಿತ ಅವರ ಭರವಸೆಯ ವಿಷಯ ಕೂಡ ಹೌದು.

ಲಂಬಾಣಿಗಳು ರೋಮಾನಿ ಜಿಪ್ಸಿಗಳ ಜೊತೆ ಭ್ರಾತೃತ್ವ ಹೊಂದಿದವರು, ಅವರದೇ ವಂಶದವರು ಅನ್ನಲಾಗುತ್ತದೆ. ಲಂಬಾಣಿ ಬುಡಕಟ್ಟಿನ ಜನರಿಗೆ ಅವರದ್ದೇ ಆದ ವಿಶಿಷ್ಟ ಚಹರೆ ಇರುತ್ತದೆ – ಅವರಲ್ಲಿನ ಹೆಂಗಸರು ಹೊಳೆಹೊಳೆಯುವ ಆಭರಣಗಳು ಹಾಗೂ ಕನ್ನಡಿಗಳು ಮತ್ತು ಮಣಿಗಳ ಕಸೂತಿಯುಳ್ಳ ಲಂಗಗಳನ್ನು ಮತ್ತು ತೋಳುಗಳ ತುಂಬ ಬಳೆಗಳನ್ನು ಧರಿಸುತ್ತಾರೆ. ಅವರು ಅರೆಕಾಲಿಕ ಶಿಕಾರಿಗಳು. ಅರಣ್ಯಗಳ ಅಂಚುಗಳಲ್ಲಿ ಬದುಕುವ ಅವರು ಸೋಲಿಗರು ಮತ್ತು ಇನ್ನಿತರ ಬುಡಕಟ್ಟು ಜನರ ಹಾಗೆ ಯಾವತ್ತೂ ಸಂಪೂರ್ಣವಾಗಿ ಕಾಡುಗಳೊಳಗೆ ಇರುವಂಥವರಲ್ಲ. ಜಾಡುತೋರುಗರಾಗಿ ಅವರ ಕೌಶಲ್ಯಗಳು ನೀಲಗಿರಿ ಅಥವಾ ಬಿಳಿಗಿರಿರಂಗನ ಬೆಟ್ಟದ ಬುಡಕಟ್ಟುಗಳಿಗೆ ಸೇರಿದ ಕೆಲವು ಜಾಡುತೋರುಗರಲ್ಲಿರುವ ಅಂತಸ್ಥ ಕೌಶಲ್ಯಗಳ ಮಟ್ಟಕ್ಕೆ ಬರುವುದಿಲ್ಲ. ಆದರೆ, ಅವರು ತುಂಬ ಧೈರ್ಯಶಾಲಿಗಳು, ಕಾರ್ಯೋತ್ಸಾಹ ಇರುವವರು ಮತ್ತು ಯುಕ್ತಿ, ಉಪಾಯಗಾರಿಕೆ ಉಳ್ಳವರು. ಸರಿಯಾದ ರೀತಿಯಲ್ಲಿ ಪುಸಲಾಯಿಸಿದರೆ ಎಂಥ ಕೆಲಸವನ್ನಾದರೂ ಪೂರೈಸಬಲ್ಲ ಸಾಮರ್ಥ್ಯ ತೋರುವವರು. ಇದಕ್ಕೆ ಕಾರಣವೇನೆಂದರೆ ಅವರು ನಂಬಿಕೆಗಳು ಮತ್ತು ಮೂಢನಂಬಿಕೆಗಳಿಂದ ತುಂಬ ನಿರ್ಬಂಧಿತರಾದವರಲ್ಲ. ಹೀಗಾಗಿ ಪ್ರಾಚೀನ ಮತ್ತು ಆಧುನಿಕ ಪ್ರಪಂಚಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಸರಿದೂಗಿಸಿಕೊಂಡು ಸಾಗಬಲ್ಲವರು. ಅವರನ್ನು ಶಿವಮೊಗ್ಗ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಬಹುದಿತ್ತು, ಆದರೂ, ಕನಕಪುರ ಮತ್ತು ಸಂಗಮದ ಬಳಿಯೂ ಅವರ ಚಿಕ್ಕ ತಾಂಡಾಗಳು ಕೆಲವಿದ್ದವು.

ನೀಲಗಿರಿಯ ಕುರುಂಬರು ಮೂಲತಃ ಕುರಿ ಕಾಯುವವರಾಗಿದ್ದರೂ ಅವರು ಕಾಡುಗಳಲ್ಲಿ ಬೇಟೆಯಾಡುತ್ತಾ, ಬಲೆ ಹಾಕಿ ಪ್ರಾಣಿಗಳನ್ನು ಹಿಡಿಯುತ್ತಾ, ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುತ್ತಾ ಬದುಕುತ್ತಿದ್ದರು. ನನ್ನ ತಂದೆ ತಾವು ಚಿಕ್ಕ ಹುಡುಗನಾಗಿದ್ದಾಗ ಈ ಜನರನ್ನು ಗುಹೆಗಳಲ್ಲಿ ನೋಡಿದ್ದು ತನಗೆ ನೆನಪಿರುವುದಾಗಿ ಹೇಳುತ್ತಿದ್ದರು. ಆದರೆ, ನಾನು ಅವರನ್ನು ನೋಡಿದಾಗಿನಿಂದ ಅವರು ಬಿದಿರು, ಮಣ್ಣು ಮತ್ತು ಹುಲ್ಲಿನಿಂದ ಮಾಡಿದ ಗುಡಿಸಲುಗಳಿದ್ದ ವಾಸ್ತವ್ಯತಾಣಗಳಲ್ಲಿ ಇದ್ದಾರೆ. ಬಹುಮಟ್ಟಿಗೆ ದಟ್ಟ ಕಾಡಿನ ನಡುವೆ ನಾನವರನ್ನು ನೋಡಿದ್ದು. ಅವರು ಸಂಘಜೀವಿಗಳು, ವಸ್ತುವಿನಿಮಯ ವ್ಯವಸ್ಥೆಯನ್ನು ಅಳವಡಿಸಿಕೊಂಡವರು. ಅವರು ಜೇನು ಮತ್ತು ಔಷಧೀಯ ಸಸ್ಯಗಳನ್ನು ಸಂಗ್ರಹಿಸಿ, ತೋಡರು, ಬಡಗರು ಮುಂತಾದ ಬೇರೆ ಬುಡಕಟ್ಟುಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತಾರೆ. ಅವರಿಗೆ ಬಡಗರ ಜೊತೆಗೆ ಒಂದು ವಿಶಿಷ್ಟ ಸಂಬಂಧ ಇದೆ. ಕುರುಂಬರಲ್ಲೊಬ್ಬ ವ್ಯಕ್ತಿ ಪುಟ್ಟ ಸಮುದಾಯವಾದ ಬಡಗರ ರಕ್ಷಕನಾಗಿ ಪಾತ್ರ ನಿರ್ವಹಿಸಲು ನಿರ್ದೇಶಿತನಾಗಿರುತ್ತಾನೆ. ನೀಲಗಿರಿಯಲ್ಲಿ ವಾಸಿಸುವ ಕುರುಂಬರಲ್ಲಿ ಅವರು ಮಾಡುವ ವೃತ್ತಿ ಅಥವಾ ಅವರು ಇರುವ ಸ್ಥಳವನ್ನು ಪರಿಗಣಿಸಿ ಐದು ರೀತಿಯ ಕುರುಂಬರಿದ್ದಾರೆ. ಅವರೆಂದರೆ, ಪಾಲು(ಹಾಲು) ಕುರುಂಬ, ಬೆಟ್ಟಕುರುಂಬ, ಜೇನುಕುರುಂಬ, ಮುಲ್ಲ(ಬಲೆ) ಕುರುಂಬ ಮತ್ತು ಉರಾಲಿ(ಹಳ್ಳಿ) ಕುರುಂಬ. ನನಗೆ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಅವರಲ್ಲಿ ಅಸಾಧಾರಣ ಕೌಶಲ್ಯಗಳಿವೆ. ಆದರೆ ಈಗ ಅವರು ತಮ್ಮ ಹಳೆಯ ಬದುಕಿನ ಕ್ರಮವನ್ನು ಬಿಟ್ಟುಬಿಟ್ಟು ನೀಲಗರಿಯ ತೋಟಗಳಲ್ಲಿ ಅಥವಾ ಈಗ ತಲೆಯೆತ್ತುತ್ತಿರುವ ವಿಶ್ರಾಂತಿತಾಣ(ರೆಸಾರ್ಟ್)ಗಳಲ್ಲಿ ದಿನಗೂಲಿಗೆ ದುಡಿಯುತ್ತಿದ್ದಾರೆ ಎಂಬುದನ್ನು ನಾನು ಗಮನಿಸಿದ್ದೇನೆ.

ಇರುಳರು ನೀಲಗಿರಿಯಲ್ಲಿ ಕಂಡುಬರುವ ಇನ್ನೊಂದು ಬುಡಕಟ್ಟು ಜನಾಂಗದವರು. ಇವರು ಹಣ್ಣು, ಗೆಡ್ಡೆಗಳು ಮುಂತಾದ ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ಅವುಗಳನ್ನು ಅಕ್ಕಿ, ಉಪ್ಪು ಅಷ್ಟೇ ಏಕೆ ಬಟ್ಟೆಗಳ ಜೊತೆ ವಿನಿಮಯ ಮಾಡಿಕೊಂಡು ತಮ್ಮ ಜೀವನ ನಡೆಸುತ್ತಾರೆ. ಅದರೆ ಅವರಿಗೆ ಖ್ಯಾತಿ ಬಂದಿರುವುದು ಅವರ ಜೇನು ತೆಗೆಯಬಲ್ಲ ಸಾಮರ್ಥ್ಯದಿಂದ. ಬೇರೆಯವರು ತಲುಪಲು ಅಸಾಧ್ಯ ಎಂದು ಭಾವಿಸುವ ಸ್ಥಳಗಳನ್ನು ತಲುಪಿ ಇವರು ಜೇನು ತೆಗೆಯಬಲ್ಲರು. ಸಾಂಪ್ರದಾಯಿಕವಾಗಿ ಅವರು ನೀಲಗಿರಿಯ ಬಡಗ ಸಮುದಾಯಕ್ಕೆ ಗೋವಳರಾಗಿ ಕೆಲಸ ಮಾಡಿದವರು. ಹೀಗಾಗಿ ದೊಡ್ಡ ಮಾರ್ಜಾಲಗಳ (ಹುಲಿ, ಚಿರತೆ) ಚಲನೆಯ ಬಗ್ಗೆ ಯಾವಾಗಲೂ ಅವರು ಮಾಹಿತಿಯ ಉತ್ತಮ ಆಕರವಾಗಿದ್ದರು. ಮದ್ರಾಸು ರಾಜ್ಯದ ಬೇರೆ ಭಾಗಗಳಲ್ಲಿ ಕಾಡು ಪೂಜಾರಿಗಳು ಎಂದು ಕರೆಯಲ್ಪಡುವ ಇನ್ನೊಂದು ರೀತಿಯ ಇರುಳ ಸಮುದಾಯದವರಿದ್ದಾರೆ. ನನ್ನ ತಂದೆಯ ಸ್ನೇಹಿತ ಬೈರ ಅಂತಹ ಒಬ್ಬ ಪೂಜಾರಿ. ಇವನ ಬಗ್ಗೆ ನನ್ನ ತಂದೆ ತಮ್ಮ ಪುಸ್ತಕಗಳಲ್ಲಿ ಬರೆದಿದ್ದಾರೆ.

(ಚಿರಪರಿಚಿತ ಕೆನೆತ್ ಆಂಡರ್ಸನ್ ಅವರ ಮಗ, ಬೆಂಗಳೂರಿನಲ್ಲಿಯೇ ಬಹಳ ವರ್ಷಗಳ ಕಾಲ ನೆಲೆಸಿದ್ದ ಡೊನಾಲ್ಡ್ ಆಂಡರ್ಸನ್ ಅವರ ನೆನಪುಗಳನ್ನು ಇಂಗ್ಲಿಷ್‌ನಲ್ಲಿ ಜೋಷುವಾ ಮ್ಯಾಥ್ಯೂ ನಿರೂಪಿಸಿದ್ದಾರೆ. ಇದನ್ನು ಕನ್ನಡ ಪ್ರಾಧ್ಯಾಪಕಿಯಾದ ಎಲ್ ಜಿ ಮೀರಾ ಕನ್ನಡಕ್ಕೆ ಅನುವಾದಿಸಿದ್ದಾರೆ. ಆಕೃತಿ ಪುಸ್ತಕ ಪ್ರಕಟಿಸಿರುವ ಈ ಪುಸ್ತಕ ಸೆಪ್ಟಂಬರ್ ಮೊದಲ ವಾರದಿಂದ ಲಭ್ಯವಾಗಲಿದೆ.)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ರಾಹುಲ್ ಗಾಂಧಿಯನ್ನು ಟೀಕಿಸಿರುವ ಉದ್ಧವ್ ಠಾಕ್ರೆಯ ಹಳೆಯ ಭಾಷಣ ಮತ್ತೆ ವೈರಲ್...

0
ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರು ರಾಹುಲ್ ಗಾಂಧಿಯನ್ನು ನಾಲಾಯಕ್ (ನಿಷ್ಪ್ರಯೋಜಕ) ಎಂದು ಕರೆದಿರುವುದಲ್ಲದೆ, ಅವರಿಗೆ ಹೊಡೆಯಬೇಕು ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಠಾಕ್ರೆ ಅವರು"...