Homeಕರ್ನಾಟಕಪ್ರಗತಿಪಥದಲ್ಲಿನ ದೊಡ್ಡ ಕಂದರ- ಸಾಮಾಜಿಕ ಅನಿಷ್ಟ!

ಪ್ರಗತಿಪಥದಲ್ಲಿನ ದೊಡ್ಡ ಕಂದರ- ಸಾಮಾಜಿಕ ಅನಿಷ್ಟ!

- Advertisement -
- Advertisement -

1943ರ ಬಂಗಾಳ ಕ್ಷಾಮ, ದೇಶ ವಿಭಜನೆ, ಸ್ವಾತಂತ್ರ್ಯ ಪಡೆದ ಎರಡೇ ತಿಂಗಳಲ್ಲಿ ಎದುರಿಸಿದ ಮೊದಲ ಯುದ್ಧ, ಬರ-ನೆರೆಯ ಹೊಡೆತ, ಹಸಿವಿನ ಚಕ್ರಗಳು, ನೆರೆಹೊರೆಯ ರಾಜ್ಯಗಳಿಂದ ಸೃಷ್ಟಿಯಾದ ಆಂತರಿಕ ಭಿನ್ನಾಭಿಪ್ರಾಯಗಳು, ನಕ್ಸಲ್‌ವಾದ, ಧಾರ್ಮಿಕ ಭಿನ್ನಾಭಿಪ್ರಾಯಗಳು, ನೆರೆ ದೇಶಗಳಿಂದ ಭಯೋತ್ಪಾದನೆ ಸಾಕಷ್ಟು ಹಿಂಸೆ ಕೊಟ್ಟಿದೆ.

ಇಂತಹ 76 ವರ್ಷಗಳ ಪ್ರಯಾಣ ಅಷ್ಟು ಸುಲಭದಿಂದ ಕೂಡಿರುವುದಿಲ್ಲ. 14 ಬಿಲಿಯನ್ ಜನಸಂಖ್ಯೆ ಹೊಂದಿರುವ ದೇಶ ನಮ್ಮದಾಗಿದೆ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಹಲವು ಅಪಾಯಗಳನ್ನು ಎದುರಿಸಿಯೂ, ವೈವಿಧ್ಯತೆಯಿಂದ ರೋಮಾಂಚನಗೊಳಿಸುವ ದೇಶವಾಗಿ ಉಳಿದುಕೊಂಡಿದೆ. ಜೊತೆಗೆ ಕೊರೊನಾದಂತಹ ಕ್ರೂರ ಸೋಂಕಿನ ಸಮಯದಲ್ಲಿ, ಜಾತೀಯತೆ, ಸ್ವಜನಪಕ್ಷಪಾತ, ಭ್ರಷ್ಟಾಚಾರ, ದೌರ್ಜನ್ಯ, ಅತ್ಯಾಚಾರ, ಕೋಮುವಾದ, ಪಿತೃಪ್ರಧಾನ ವ್ಯವಸ್ಥೆ, ಅತ್ಯಾಚಾರದಂತಹ ಸಾಮಾಜಿಕ ಪಿಡುಗುಗಳ ದುರಂತಗಳನ್ನು ಎದುರಿಸಿಯೂ ಹೇಗೋ ಉಳಿದುಕೊಂಡಿದೆ; ಇದೊಂದು ರೀತಿ ಸಾಧನೆಯೇ!

ಇನ್ನೂ ನಮ್ಮ ದೇಶ ಆರ್ಥಿಕವಾಗಿ ‘ಸೂಪರ್ ಪವರ್’ ಆಗಲು ಬೇಕಿರುವ ‘ಮಾನವಶಕ್ತಿ’ ನಮ್ಮಲ್ಲಿದೆ. ಆದರೆ ಪ್ರಗತಿಪಥದೆಡೆಗೆ ಸಾಗುವ ಮುಂಚೆ ಹಿಂದಕ್ಕಿಡಿದು ಜಗ್ಗುವ ‘ಸಾಮಾಜಿಕ ಅನಿಷ್ಟ’ಗಳನ್ನು ಮೊದಲು ನಿವಾರಿಸಿಕೊಳ್ಳಬೇಕಿದೆ. 19ನೇ ಶತಮಾನದಲ್ಲಿ ವಸಾಹತುಶಾಹಿ ಆಳ್ವಿಕೆಯಿಂದ ಮುಕ್ತಿಪಡೆದ ಹಲವು ದೇಶಗಳಿಗಿಂತ ನಮ್ಮ ದೇಶ ಭಿನ್ನವಾಗಿದೆ. ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲ್ಪಟ್ಟ ಪ್ರಜಾಪ್ರಭುತ್ವ ತತ್ವಗಳಲ್ಲಿ ಅಚಲ ನಂಬಿಕೆ ಹೊಂದಿರುವುದು ಅತ್ಯಗತ್ಯ. ಆದಾಗ್ಯೂ ಸಂವಿಧಾನದ ಪ್ರತಿಜ್ಞೆಗಳನ್ನು ಅಥವಾ ಮೌಲ್ಯಗಳನ್ನು ಸರಿಯಾದ ಮಾರ್ಗದಲ್ಲಿ ಆಚರಿಸುತ್ತಿದ್ದೇವೆಯೇ ಎಂಬುದನ್ನು ವಿಶ್ಲೇಷಿಸಿ ನೋಡುವ ಅಗತ್ಯವಿದೆ.

ಇದನ್ನು ಪ್ರಸ್ತಾಪಿಸಲು ಕಾರಣ, ಕುಡಿಯುವ ನೀರಿನ ಮಡಿಕೆಯಿಂದ ನೀರೆತ್ತಿ ಕುಡಿದ ಕಾರಣಕ್ಕಾಗಿಯೇ, ಬಡಿದು ಜೀವ ತೆಗೆದ ಪ್ರಕರಣ ಈ ದೇಶದಲ್ಲಿ ದಾಖಲಾಗಿದೆ. ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಪತ್ರಾಬಜಾರ್‌ನ ಕೊಂಕಟಿ ಕ್ರಾಸಿಂಗ್‌ನಲ್ಲಿ ಕೋಳಿ ಮಾಂಸದ ಅಂಗಡಿ ಇದೆ. ಇಲ್ಲಿ 2 ಸಾವಿರ ಹಣ ಕಳವು ಮಾಡಿದರೆಂಬ ಶಂಕೆಯ ಮೇಲೆ ಇಬ್ಬರು ಬಾಲಕರಿಗೆ ಬಲವಂತವಾಗಿ ಮೂತ್ರ ಕುಡಿಸಲಾಗಿದೆ. ಅವರ ಗುದದ್ವಾರಕ್ಕೆ ಹಸಿಮೆಣಸಿನಕಾಯಿ ಖಾರ ಸವರಿ, ಪೆಟ್ರೋಲ್ ಇಂಜಕ್ಷನ್‌ಗಳನ್ನು ನೀಡಿ ವಿಕೃತಿ ಮೆರೆಯಲಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್ ಖಾಸಗಿ ಶಾಲೆಯ ಶಿಕ್ಷಕ ಶಿವಕುಮಾರ್ 8ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ 8ರಿಂದ 9 ತಿಂಗಳ ಕಾಲ ಅತ್ಯಾಚಾರ ಎಸಗಿರುತ್ತಾನೆ. ಬಾಲಕಿ ಹೊಟ್ಟೆನೋವಿಗೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದಾಗ 5 ತಿಂಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಐ.ಟಿ. ಕಾರಿಡಾರ್‌ಗೆ ಹೊಂದಿಕೊಂಡಿರುವ ಗುಂಜೂರಿನ ಖಾಸಗಿ ಶಾಲೆಯ 65 ವರ್ಷದ ಪ್ರಾಂಶುಪಾಲ 2ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮಣಿಪುರದ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದು ಸಾಮೂಹಿಕ ಅತ್ಯಾಚಾರ ನಡೆದಿದ್ದರೂ ಮೊದಲಿಗೆ ಜೀರೊ ಎಫ್‌ಐಆರ್ ದಾಖಲಿಸಲಾಗಿತ್ತು. ನಂತರ ಅಧಿಕೃತ ಎಫ್‌ಐಆರ್ ಆಗಿ ಪರಿವರ್ತಿಸಲಾಗಿದೆ. ‘ಮಹಿಳಾ ದೌರ್ಜನ್ಯ’ ಪ್ರಕರಣಗಳ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸಲು ಅಲ್ಲಿನ ಪೊಲೀಸರು ಅಸಮರ್ಥರಾಗಿದ್ದಾರೆ. ಇಡೀ ಪೊಲೀಸ್ ವ್ಯವಸ್ಥೆಗೆ ಜಡತ್ವ ಆವರಿಸಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠ ತರಾಟೆಗೆ ತೆಗೆದುಕೊಂಡಿದೆ. ದೇಶದ 84 ಪಕ್ಷಗಳು ಮತ್ತು ಪಕ್ಷೇತರರು ಸೇರಿದಂತೆ, 4033 ಶಾಸಕರ, 4001 ಪ್ರಮಾಣಪತ್ರಗಳಂತೆ, ಪ್ರತಿಯೊಬ್ಬ ಶಾಸಕರ ಸರಾಸರಿ ಆಸ್ತಿ 13.63 ಕೋಟಿ ಎಂದು ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ADR) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (NEW) ವರದಿ ತಿಳಿಸಿದೆ. ಅಂದರೆ, 4001 ಶಾಸಕರ ಬಳಿ 54,545 ಕೋಟಿ ಮೌಲ್ಯದ ಸಂಪತ್ತು ಶೇಖರಣೆಗೊಂಡಿದೆ.

ಇಂತಹದ್ದರಲ್ಲಿ ‘ಹರ್ ಘರ್ ತಿರಂಗ’ ಎಂದು ಬಾವುಟ ಹಾರಿಸಿ, ರಾಷ್ಟ್ರಭಕ್ತಿ ಪ್ರದರ್ಶಿಸುವುದು ಹಿಪೋಕ್ರಸಿ ಎನಿಸುತ್ತಿದೆ. ಮನೆಯೊಳಗಡೆ ಶೌಚಾಲಯ ಇಲ್ಲವೆಂದು, ಹೊರಹೋದ ಯುವತಿಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಇವೆಲ್ಲವನ್ನು ಕಂಡಾಗ ನಮ್ಮ ದೇಶ ‘ಅನನುಕೂಲತೆ’ ಮತ್ತು ‘ಬಯಕೆ’ಯ ಭೂಮಿಯಾಗಿ ಉಳಿದೆಯೇ ಎಂದು ಕಾಡುತ್ತದೆ.

ನಮ್ಮ ದೇಶ 76ನೇ ವರ್ಷಕ್ಕೆ ಕಾಲಿಡುತ್ತಿರುವಾಗ, 75ನೇ ವರ್ಷದಲ್ಲಿ ಪ್ರಧಾನಿಯವರು ಮಾಡಿದ ಗುಡುಗು-ಸಿಡಿಲಿನ ಭಾಷಣದ ಸುತ್ತಲೇ ನನ್ನ ಮನಸ್ಸು ತಿರುಗುತ್ತಿದೆ. ಅದೊಂದು ಶಿಳ್ಳೆ-ಚಪ್ಪಾಳೆ ಗಿಟ್ಟಿಸಿದ ಭಾಷಣ. ದೆಹಲಿಯ ಕೆಂಪುಕೋಟೆ ಭೂಮಿಯ ಮೇಲಿನ ಅದ್ಭುತ ವೇದಿಕೆ. ಅಲ್ಲಿ 82 ನಿಮಿಷಗಳ ಕಾಲ ಭಾಷಣ ಮಾಡಿದ್ದರು. ಕೊನೆಯಲ್ಲಿ ಹೇಳಿದ್ದ ‘ಸಂಕಲ್ಪ್’ ಎಂಬ ಶಬ್ದ ರಿಂಗಣಿಸುತ್ತಲೇ ಇದೆ. ಜೊತೆಗೆ ಗುಲಾಮಗಿರಿ ಮನಸ್ಥಿತಿಯಿಂದ ಹೊರತರಲು ಬೋಧಿಸಿದ 5 ಪ್ರತಿಜ್ಞೆಗಳು 5 ಪಂಚರತ್ನಗಳೆಂದೇ ದೇಶವಾಸಿಗಳು ಭಾವಿಸಿದ್ದಾರೆ. ಇದರಲ್ಲಿ ಎರಡಂತೂ ಬಹುತೇಕರಿಗೆ ವಿಶೇಷವೆನಿಸಬಹುದು. ಭಾಷಣದ ಉಳಿದ ಭಾಗ ನಿರೀಕ್ಷಿತ ಸಾಲುಗಳಾಗಿವೆ. ಅಂದರೆ ಸಂಪ್ರದಾಯದಂತೆ, ಷ್ಟಾಚಾರ, ಸ್ವಜನಪಕ್ಷಪಾತ, ವಂಶಾಡಳಿತದ ಬಗ್ಗೆ ಖಂಡನೆ ಇತ್ತು. ಜೊತೆಗೆ ಅಭಿವೃದ್ಧಿ, ಸ್ವಾವಲಂಬನೆಗೆ ಕರೆ ಕೊಡಲಾಗಿತ್ತು. ನಮ್ಮ ಪರಂಪರೆಯ ಕುರಿತು ಹೆಮ್ಮೆ, ಒಗ್ಗಟ್ಟು, ಸಹಕಾರ, ಜನಾಂಗೀಯ, ಪ್ರಾದೇಶಿಕ ಮತ್ತು ಸರ್ವರಿಗೂ ಸಮಾನತೆಯ ಕರೆಗಳು ಮೊಳಗಿದ್ದವು.

ಭವಿಷ್ಯದ 25 ವರ್ಷಗಳಲ್ಲಿ ಅಭ್ಯುದಯ ಸಾಧಿಸಲು ದೇಶವಾಸಿಗಳು ಪಂಚಪ್ರತಿಜ್ಞೆಗಳನ್ನು ಅಳವಡಿಸಿಕೊಳ್ಳಲು ಕಳೆದ ವರ್ಷ ಕರೆಕೊಟ್ಟಿದ್ದರು. ಅಂದು ನೂರಾರು ವರ್ಷಗಳ ದಾಸ್ಯ ಮತ್ತು ಅವಲಂಬನೆಯ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಇದ್ಹೇಗೆ ಜನರ ಮನಸ್ಥಿತಿಯನ್ನು ವಿರೂಪಗೊಳಿಸುತ್ತದೆ ಎಂಬುದನ್ನು ಹೇಳಿದ್ದರು. ಹಾಗೆಯೇ ದಾಸ್ಯದ ಕುರುಹುಗಳನ್ನು ಕಿತ್ತೊಗೆಯುವಂತೆಯೂ ಕರೆಕೊಟ್ಟಿದ್ದರು. ಇನ್ನು ಮುಂದೆ ಜಗತ್ತಿನ ಮಾನ್ಯತೆ ಪ್ರಮಾಣಪತ್ರಗಳ ಅಗತ್ಯವಿಲ್ಲವೆಂದು ಹೇಳಿದ್ದರು. ಭಾರತದ ರಾಷ್ಟ್ರೀಯ ಹಿತಾಸಕ್ತಿಯ ಏಕಮನಸ್ಸಿನ ಅನ್ವೇಷಣೆ ಎಂದು ಮಾಧ್ಯಮಗಳು ಯಥಾಪ್ರಕಾರ ವರದಿ ಮಾಡಿದ್ದವು.

ಇದನ್ನೂ ಓದಿ: ಮತ ಮತ್ತು ಮೌಢ್ಯದ ನಡುವೆ ಏನೀ ಅನುಬಂಧ?

ಎರಡನೆಯದಾಗಿ, ಪ್ರಧಾನಿಯಿಂದ ಮುಖ್ಯಮಂತ್ರಿಯವರೆಗೂ ಎಲ್ಲರೂ ನಾಗರಿಕ ಕರ್ತವ್ಯಗಳಿಗೆ ಬದ್ಧರಾಗಿರಬೇಕೆಂದು ಹೇಳಿದ್ದರು. ನಮ್ಮ ದೇಶದ ರಾಜಕಾರಣಕ್ಕಿದು ವ್ಯಾಪಕವಾದ ಪ್ರಾರಿಣಾಮವನ್ನು ಬೀರುತ್ತದೆ. ಹೇಗೆಂದರೆ, ಪ್ರಮಾಣಿಕ ಮತ್ತು ಕಾನೂನುಬದ್ಧವಾಗಿರಲು ರಾಜಕಾರಣಿಗಳಿಗೆ ಹೇಳಿದ ಕಿವಿಮಾತು ಇದಾಗಿತ್ತು. ‘ಚುನಾವಣೆ’ಗಾಗಿ ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ರಾಜಿಯಾಗದಂತೆ ಹೇಳಿದ ಬುದ್ಧಿಮಾತು ಇದೆಂದು ಮತ್ತೆ ಮಾಧ್ಯಮಗಳು ಕೊಂಡಾಡಿದ್ದರು.

ಇವೆರಡು ಪ್ರತಿಜ್ಞೆಗಳ ಹೊರತಾಗಿ, ಮತ್ತೊಬ್ಬರ ಪರಂಪರೆಯ ಬಗ್ಗೆ ಹೆಮ್ಮೆಪಡಲು ಕರೆಕೊಟ್ಟಿದ್ದರು. ಏಕತೆಯನ್ನು ಬಲಪಡಿಸಿಕೊಳ್ಳಲು, ಸಂಕಲ್ಪಶಕ್ತಿಯೊಂದಿಗೆ ಮುನ್ನಡೆಯಲು ಕರೆ ಕೊಟ್ಟಿದ್ದರು. ದೇಶವನ್ನು ದಾಸ್ಯಮುಕ್ತಗೊಳಿಸಲು ಹೋರಾಡಿದ ಚೇತನಗಳನ್ನು ಪಕ್ಷಾತೀತವಾಗಿ, ಸೈದ್ಧಾಂತಿಕ ರೇಖೆಗಳನ್ನು ದಾಟಿ ನೆಹರು, ಜೆ.ಪಿ., ಲೋಹಿಯಾ ಅವರುಗಳಿಗೆ ಗೌರವ ಸಲ್ಲಿಸಿದರು.

ಇವು ನಿಜಕ್ಕೂ ಉದಾತ್ತವಾಗಿದೆ. ಪ್ರಧಾನಿ ಕರೆಕೊಟ್ಟು ಹೇಳಿದ 5 ಪ್ರತಿಜ್ಞೆಗಳನ್ನು ದೇಶವಾಸಿಗಳಾಗಿ ನಾವು ಗೌರವಿಸಬೇಕಿತ್ತು. ರಾಜಕಾರಣಿ, ಅಧಿಕಾರಿಗಳು ಸೇರಿದಂತೆ ಎಲ್ಲರೂ ಗೌರವಿಸಬೇಕು. ಆದರೆ ಅವು ಅನುಷ್ಠಾನಗೊಂಡಿಲ್ಲವೆಂಬ ಅನುಮಾನ ನಿಮ್ಮಲ್ಲಿ ಮೂಡಿರಬಹುದು.

ಆದರೆ ಇದೀಗ ಅಂತರ್ಗತ ರಾಷ್ಟ್ರೀಯತೆಯು ಪ್ರತ್ಯೇಕವಾದ ಹಿಂದೂ ರಾಷ್ಟ್ರೀಯತೆಯಾಗಿ ರೂಪಾಂತರಗೊಂಡಿದೆ. ಅಲ್ಪಸಂಖ್ಯಾತರನ್ನು ‘ಅವರು’ ಆಗಿ ಪರಿವರ್ತಿಸಲಾಗಿದೆ. ಏನೇ ಇರಲಿ, ಸುಮಾರು ಶೇ.15ರಷ್ಟಿರುವ ಜನರನ್ನು ಪ್ರತ್ಯೇಕಗೊಳಿಸುವುದರಿಂದ, ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ‘ಪ್ರಾದೇಶಿಕ ಶಕ್ತಿ’ಯಾಗಿಯೂ ಬೆಳೆಸಲು ಕಷ್ಟಕರವಾಗುತ್ತದೆ.

ಇವತ್ತು ಅಲ್ಪಸಂಖ್ಯಾತರ ದೂಷಣೆ ಸಹಜವೆಂಬಂತಾಗಿದೆ. ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಡುವ ಜಾಗವನ್ನು ಭಯ ಆಕ್ರಮಿಸಿ ಕೂತಿದೆ. ಹೀಗಿರುವಾಗ ದೇಶದ ಅಭಿವೃದ್ಧಿ ಅದ್ಹೇಗೆ ಸಾಧ್ಯ? ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ‘ಬುಲ್ಡೋಜರ್ ನ್ಯಾಯ’ ಕೊಟ್ಟರೆ ದೇಶವನ್ನು ಕಾಡುವ ಸಮಸ್ಯೆಗಳಿಗೆ ಉತ್ತರ ಆಗುವುದಿಲ್ಲ. ವೈಶಿಷ್ಟ್ಯತೆ ಹಾಗೂ ವೈವಿಧ್ಯತೆ ಹೊಂದಿರುವ ನಮ್ಮ ದೇಶದಲ್ಲಿ ತೋಳ್ಬಲ ಯಶಸ್ವಿಯಾಗುವುದು ದೂರದ ಮಾತು.

ಇಂತಹ ವಿಷಮ ಹವಾಮಾನದಲ್ಲಿ, 1988ರಲ್ಲಿ ಭೀಮಸೇನ್ ಜೋಷಿಯವರಾದಿಯಾಗಿ ಹಲವರು ಹಾಡಿದ್ದ ‘ಮಿಲೇ ಸುರ್ ಮೇರಾ ತುಮ್ಹಾರ’ ಅಥವಾ 1987ರಲ್ಲಿ ಎ.ಆರ್. ರೆಹಮಾನ್ ಅವರ ‘ವಂದೇ ಮಾತರಂ’ ‘ಮಾ… ತುಜೇ ಸಲಾಮ್’ ಆವೃತ್ತಿಗಳ ಮರು ಸೃಷ್ಟಿಗೆ ಕೋಟ್ಯಂತರ ರೂಪಾಯಿ ವ್ಯಯಿಸಿ ಪ್ರಯೋಜನವಿಲ್ಲ. ಆದರೂ, ಕೆಲವರು ಪ್ರತಿಪಾದಿಸುವಂತೆ, ‘ಆಜಾದಿ ಕಾ ಅಮೃತ್ ಮಹೋತ್ಸವ್’ ಬದಲಾವಣೆ ತಂದಿದೆಯಂತೆ.

‘ಆಜಾದಿ ಕಾ ಅಮೃತ್ ಮಹೋತ್ಸವ್’ ಕಾರ್ಯಕ್ರಮಕ್ಕೆ 2021ರ ಮಾರ್ಚ್ 12ರಂದು ಪ್ರಧಾನಿ ಚಾಲನೆ ನೀಡಿದ್ದರು. ಅಂದರೆ 75ನೇ ಸ್ವಾತಂತ್ರ್ಯ ದಿನಾಚರಣೆಗೆ 75 ದಿನ ಮೊದಲು ಇದಾಗಿತ್ತು. ಈ ಜನೋತ್ಸವ 2023ರ ಆಗಸ್ಟ್ 15ರವರೆಗೂ ಇದೆ.

ಇದರ ಮೊದಲ ಅಂಶ ಸ್ವಾತಂತ್ರ್ಯ ಹೋರಾಟದ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ದೇಶಪ್ರೇಮ ಉಕ್ಕಿಸುವ ಉದ್ದೇಶ ಹೊಂದಲಾಗಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ವರ್ಗ ಮತ್ತು ಧರ್ಮಕ್ಕೆ ಸೇರಿದ ಹೋರಾಟಗಾರರನ್ನು ಇತಿಹಾಸದಲ್ಲಿ ದಾಖಲಿಸುವುದಾಗಿದೆ. ‘ನಾವೆಲ್ಲರೂ ಮುಸ್ಲಿಂ ಮತ್ತು ವಸಾಹತುಶಾಹಿ ಇತಿಹಾಸವನ್ನು ಓದಿಕೊಂಡು ಬಂದಿದ್ದೇವೆ. ಆದರೆ, ಅನೇಕ ವರ್ಷ ಆಳ್ವಿಕೆ ನಡೆಸಿದ ಸಾವಿರಾರು ಸಾಮಂತ ರಾಜರ ಇತಿಹಾಸ ಮತ್ತು ಹಲವರ ಹೋರಾಟ ದಾಖಲು ಮಾಡಿಲ್ಲ’ವೆಂದು ದಿ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ವಿ. ನಾಗರಾಜು ಇತ್ತೀಚೆಗೆ ಹೇಳಿದ್ದರು. ಇವನ್ನು ದಾಖಲಿಸಲು 75 ಯುವ ವಿದ್ವಾಂಸರಿಗೆ ಮಾಸಿಕ 50 ಸಾವಿರಗಳ ವಿದ್ಯಾರ್ಥಿವೇತನದೊಂದಿಗೆ ಸಂಶೋಧನೆಯೂ ನಡೆಯುತ್ತಿದೆ. ನ್ಯಾಷನಲ್ ಬುಕ್ ಟ್ರಸ್ಟ್‌ನಡಿಯಲ್ಲಿ ಇವೆಲ್ಲವೂ ಪ್ರಕಟಗೊಳ್ಳಲಿವೆ. ಇದು ಹೇಗೆ ಒಡಕು ಮೂಡಿಸುವ ಯೋಜನೆಯಾಗಿದೆ ಗಮನಿಸಿ!

ಎರಡನೇ ಅಂಶ ಐಡಿಯಾಸ್@75. ಉಪಯುಕ್ತ ವಿಚಾರಗಳ ಸೃಷ್ಟಿ ಮತ್ತು ಪ್ರಚಾರ. ಪ್ರತಿಭಾವಂತ ಯುವ ಜನತೆ ದೇಶದ ಹಿತಕ್ಕೆ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಸರ್ಕಾರ ಬಯಸಿತ್ತು. ಆದರಿಲ್ಲಿ ಭಾರತಕ್ಕೆ ಜೈ ಅಂದರೆ ಪ್ರಾಣ ಕೊಡ್ತೀವಿ, ವಿರೋಧ ಮಾಡಿದ್ರೆ ಜೀವ ತೆಗೆಯುತ್ತೀವಿ ಎಂದು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯಾ ಹೇಳಿದ್ದಾರೆ.

ಮೂರನೆಯದು ಸಾಧನೆಗಳು@75 (Achievements@75). ಇದರ ಮೂಲಕ ದೇಶವಾಸಿಗಳು ಅರಿವು ಮೂಡಿಸಿ ನೂತನ ಸಾಧನೆಗಳಿಗೆ ದಾರಿ ಮಾಡಿಕೊಡುವುದಾಗಿತ್ತು. ಆದರೆ, ಮಧ್ಯಪ್ರದೇಶದ ಸಿದ್ದಿ ಜಿಲ್ಲೆಯ ಪ್ರವೇಶ್ ಶುಕ್ಲ ಎಂಬಾತ ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರವಿಸರ್ಜಿಸುತ್ತಿದ್ದ ದೃಶ್ಯ ಅನಾವರಣವಾಗಿತ್ತು. ಇದೇ ರೀತಿ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬುಡಕಟ್ಟು ವ್ಯಕ್ತಿಯೊಬ್ಬರ ಪಾದಪೂಜೆ ಮಾಡುತ್ತಿರುವ ದೃಶ್ಯವೂ ವೈರಲ್ ಆಗಿತ್ತು. ಇನ್ನೂ ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರನ್ನು ನಿಷ್ಪಕ್ಷಪಾತ ರೀತಿಯಲ್ಲಿ ನೇಮಕ ಮಾಡಬೇಕು. ಇಂಥ ನೇಮಕ ಸಂಬಂಧ ಸಂಸತ್ತು ನಿಯಮ ರೂಪಿಸುವವರೆಗೂ ಪ್ರಧಾನಿ, ಲೋಕಸಭೆಯ ವಿಪಕ್ಷ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ತ್ರಿಸದಸ್ಯ ಸಮಿತಿ ರಚಿಸಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೆ ಇದೀಗ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನೇ ಹೊರಗಿಟ್ಟು, ಅವರ ಬದಲು ಕೇಂದ್ರ ಸಚಿವರೊಬ್ಬರನ್ನು ಸಮಿತಿಯಲ್ಲಿ ಸೇರ್ಪಡೆ ಮಾಡುವಂತಹ, ’ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಆಯುಕ್ತರು (ನೇಮಕಾತಿ, ಕರ್ತವ್ಯ ನಿಬಂಧನೆಗಳು ಮತ್ತು ಅಧಿಕಾರಾವಧಿ) ಮಸೂದೆ’ಯನ್ನು ಕಾನೂನು ಸಚಿವ ಮೇಘವಾಲ್ ಅವರು ರಾಜ್ಯಸಭೆಯಲ್ಲಿ ಮಂಡಿಸಿದ್ದಾರೆ.

ನಾಲ್ಕನೇ ಅಂಶ ಕ್ರಿಯೆಗಳು@75 (Actions@75).ಇದರಡಿ ಸರ್ಕಾರ ಮಾಡಿರುವ ಪ್ರಗತಿ ಮತ್ತು ನಿರ್ಣಯಗಳನ್ನು ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಒತ್ತಿ ಹೇಳಲಾಗಿದೆ. 2.17 ಕೋಟಿ ಗ್ರಾಮೀಣ ಬುಡಕಟ್ಟು ಕುಟುಂಬಗಳ ಪೈಕಿ 1.2 ಕೋಟಿ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕವಿದೆ. ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳಗಳಲ್ಲಿ ಶೇ.50ಕ್ಕಿಂತಲೂ ಹೆಚ್ಚು ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕವೇ ಇಲ್ಲ. ಬೆಳಗಾವಿಯ ಮೆಣಸಿನಗಲ್ಲಿಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು, ಮಾಂಗಲ್ಯ ಅಡವಿಟ್ಟು ಬಾಡಿಗೆ ಕಟ್ಟಿದ್ದಾರೆ. ದರಬಾರಗಲ್ಲಿನ ಅಂಗನವಾಡಿಗೆ 20 ತಿಂಗಳಿಂದ ಬಾಡಿಗೆ ಬಿಡುಗಡೆ ಮಾಡಿಲ್ಲ. ಮತ್ತೊಬ್ಬ ಕಾರ್ಯಕರ್ತೆ ಸಾಲ ಮಾಡಿ ಬಾಡಿಗೆ ಕಟ್ಟುತ್ತಿದ್ದಾರೆ. ಇದಲ್ಲದೆ 7 ತಿಂಗಳಿನಿಂದ ಮೊಟ್ಟೆ ಖರೀದಿ ಮಾಡಿದ ಹಣವನ್ನು ಬಿಡುಗಡೆ ಮಾಡಿರುವುದಿಲ್ಲ.

ಐದನೇ ಅಂಶ ಪರಿಹರಿಸು@75 (Resolve@75). ದೇಶದ ಅಭಿವೃದ್ಧಿಗಾಗಿ ದೇಶವಾಸಿಗಳು ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸುವುದಾಗಿದೆ. ಎಲ್ಲಾ ನಾಗರಿಕರನ್ನು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳಿಸುವ ಉದ್ದೇಶ ಇದಾಗಿದೆ. ಆದರೆ, ಸಂಸತ್ ಆರಂಭವಾಗಿ 8 ದಿನಗಳಾದರೂ ನರೇಂದ್ರ ಮೋದಿಯವರು ಕನಿಷ್ಠ ಪಕ್ಷ 20 ಸೆಕೆಂಡುಗಳ ಕಾಲವೂ ಸಂಸತ್‌ಗೆ ಬಂದಿಲ್ಲವೆಂದು ಟಿ.ಎಂ.ಸಿ. ನಾಯಕ ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ. ಆದರೆ ಪ್ರಧಾನಿ ಅವಿಶ್ವಾಸ ನಿರ್ಣಯದ ಮೇಲೆ ಲೋಕಸಭೆಯಲ್ಲಿ 130 ನಿಮಿಷಗಳ ಕಾಲ ಭಾಷಣ ಮಾಡಿ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ಮೋದಿ ಅವರ ವರ್ಚಸ್ಸು ಇಲ್ಲಿಯವರೆಗೂ ಚುನಾವಣಾ ಬ್ಯಾಲೆಟ್ ಬಾಕ್ಸ್ ತುಂಬಿಸುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಆದರೆ, ಕಳೆದೆರಡು ವರ್ಷಗಳಿಂದ ಶೇ.70ರಷ್ಟು ಲೈಂಗಿಕ ಅಪರಾಧಗಳು ಹೆಚ್ಚಾಗಿವೆ ಎಂದು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ವರದಿ ಹೇಳಿದೆ. ಎಷ್ಟೇ ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ಕೌಟುಂಬಿಕ ಹಿಂಸಾಚಾರ, ಆಸಿಡ್ ದಾಳಿಗಳು, ವೈವಾಹಿಕ ಅತ್ಯಾಚಾರಗಳು ನಡೆಯುತ್ತಲೇ ಇವೆ. ಇವೆಲ್ಲವೂ ನಿಲ್ಲಬೇಕಿದ್ದರೆ ಮನಸ್ಸಿನ ವರ್ತನೆಯಲ್ಲಿ ಬದಲಾವಣೆ ಆಗಬೇಕಿದೆ. ಇದಾಗಬೇಕೆಂದರೆ, ಯುವಕ-ಯುವತಿಯರಿಗೆ ‘ಲಿಂಗ ಸಮಾನತೆ’ಯ ಶಿಕ್ಷಣ ನೀಡುವ ಅಗತ್ಯವಿದೆ. ಇದು ಶಾಲಾಕಾಲೇಜುಗಳಲ್ಲಿ ಮಾತ್ರವಲ್ಲದೆ, ಮನೆಯಿಂದಲೇ ಆರಂಭವಾಗಬೇಕಿದೆ. ಇದನ್ನೇಕೆ ಹೇಳುತ್ತಿರುವೆನೆಂದರೆ, ‘ಗ್ರಾಮೀಣ ಭಾರತದಲ್ಲಿ ಪ್ರಾಥಮಿಕ ಶಿಕ್ಷಣದ ಸ್ಥಿತಿಗತಿ-2022’ರ ಸಮೀಕ್ಷಾ ವರದಿಯಂತೆ ಶೇ.35ರಷ್ಟು ಹೆಣ್ಣುಮಕ್ಕಳು ಪ್ರಾಥಮಿಕ ಹಂತದಲ್ಲಿ ಶಾಲೆಬಿಡುತ್ತಿದ್ದಾರೆ. ಶೇ.69ರಷ್ಟು ಪ್ರಾಥಮಿಕ ಹಂತದ ಶಿಕ್ಷಣದ ಬಳಿಕ ಶಾಲೆ ಬಿಡುತ್ತಿದ್ದಾರೆ. ಕಾರಣ, ಇಲ್ಲಿ ಕೂಡ ಪುರುಷ-ಮಹಿಳೆ ಪಾತ್ರಗಳ ಬಗ್ಗೆ ಸ್ಟೀರಿಯೋಟೈಪ್ ಪರಿಕಲ್ಪನೆ ಬೃಹದಾಕಾರವಾಗಿ ತುಂಬಿದೆ.

ಮಹಿಳೆಯರನ್ನು ‘ಭಾರತಮಾತೆ’ಯಂತೆ ’ಪೂಜ್ಯಭಾವ’ದಿಂದ ಕಾಣುವುದಾಗಿ ಹೇಳುವ ಭಾಜಪ ಕಳೆದ 9 ವರ್ಷಗಳಿಂದ ಸಂಸತ್ತಿನಲ್ಲಿ ಪ್ರಚಂಡ ಬಹುಮತ ಹೊಂದಿದೆ. ಹಲವಾರು ಮಸೂದೆಗಳು ಜಾರಿಗೆ ಬರುತ್ತಿದ್ದರೂ, ಮಹಿಳಾ ಮೀಸಲಾತಿ ಮಸೂದೆಗೆ ಮಾತ್ರ ಅನುಮೋದನೆಯ ಮುದ್ರೆ ಬಿದ್ದಿಲ್ಲ. ಇದು ರಾಜಕೀಯ ಪಕ್ಷಗಳ ರಾಜಕೀಯ ಇಚ್ಛಾಶಕ್ತಿಯ ಕೊರತೆಯನ್ನು ಒತ್ತಿ ತೋರಿಸುತ್ತದೆ.

ಇವೆಲ್ಲದರ ನಡುವೆಯೂ ನಮ್ಮ 76ರ ಹರೆಯದ ದೇಶಕ್ಕೆ ಹೆಮ್ಮೆಯಿಂದ ಬೀಗಲು ಕಾರಣವಿದೆ. ಅವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತು ವೈದ್ಯಕೀಯ ಪ್ರವಾಸೋದ್ಯಮ ಕೇಂದ್ರವಾಗಿದ್ದೇವೆ. ಸ್ಟಾರ್ಟ್-ಅಪ್ ಆರ್ಥಿಕತೆಯೊಂದಿಗೆ, ಕ್ರೀಡಾ ಕ್ಷೇತ್ರದಲ್ಲೂ ಒಂದಷ್ಟು ಸಾಧನೆಗೈದಿದ್ದೇವೆ. ಇನ್ನೂ ತ್ವರಿತವಾಗಿ ಅಭಿವೃದ್ಧಿಗೊಳ್ಳಬೇಕಾದರೆ, ಸಾಧನೆಗೈಯಲು ಎಲ್ಲಾ ಸಮುದಾಯಗಳು ಶಾಂತಿ ಮತ್ತು ಸಹಬಾಳ್ವೆಯಿಂದ ಬದುಕಬೇಕಿದೆ. ಸಂಪನ್ಮೂಲ ನ್ಯಾಯಯುತವಾಗಿ ಸಮಾನವಾಗಿ ಹಂಚಿಕೆಯಾಗಬೇಕು. ಎಲ್ಲರಿಗೂ ‘ನೈಜ ಸಮಾನತೆ’ ಮತ್ತು ‘ಸಮಾನ್ಯ ನ್ಯಾಯ’ ದೊರಕಬೇಕು. ಇದು ದೈನಂದಿನ ಜೀವನದ ತತ್ವ ಆಗಬೇಕು. ನಾವುಗಳೆಲ್ಲರೂ ಒಂದಾಗಿ, ಒಟ್ಟಾಗಿ, ಒಗ್ಗಟ್ಟಾಗಿ ಸಾಗುವ ಅಗತ್ಯವಿದೆ. ಆಗ ಮಾತ್ರ ನಮ್ಮ ಪೂರ್ವಜರ ಪರಿಶ್ರಮ, ತ್ಯಾಗ, ಹೋರಾಟ, ಬಲಿದಾನ ಫಲದಿಂದ ಗಳಿಸಿದ ‘ಸ್ವಾತಂತ್ರ್ಯ’ ನಮ್ಮ ಕೈಜಾರದಂತೆ ಎಚ್ಚರಿಕೆ ವಹಿಸಬಹುದಾಗಿದೆ.

ಡಾ. ಎಂ.ಎಸ್. ಮಣಿ

ಡಾ. ಎಂ.ಎಸ್. ಮಣಿ
ಸಾಮಾಜಿಕ ಮತ್ತು ಸಂಶೋಧನಾತ್ಮಕ ಲೇಖನಗಳನ್ನು ಬರೆಯುವ ಡಾ.ಎಂ.ಎಸ್.ಮಣಿ ಅವರು ಪತ್ರಕರ್ತರ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಲ್ಲಣ, ಹರಿವು, ಒಡಲಾಗ್ನಿ, ಭಾವಭಿತ್ತಿ, ಮನುಭಾರತ, ಸುಡು ಬಯಲು ಪುಸ್ತಕಗಳು ಪ್ರಕಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...