Homeಮುಖಪುಟಮತ ಮತ್ತು ಮೌಢ್ಯದ ನಡುವೆ ಏನೀ ಅನುಬಂಧ?

ಮತ ಮತ್ತು ಮೌಢ್ಯದ ನಡುವೆ ಏನೀ ಅನುಬಂಧ?

- Advertisement -
- Advertisement -

ನಮ್ಮ ದೇಶ ಕಲೆ, ಸಂಸ್ಕೃತಿ, ಸಾಹಿತ್ಯ, ಧರ್ಮ, ವಿಜ್ಞಾನ, ಜಾನಪದ ಹಾಗೂ ಪುರಾಣಗಳ ಭಂಡಾರ. ಹಾಗೆಯೇ ಕಟ್ಟುಕಥೆಗಳ ಫಲವತ್ತಾದ ಪ್ರಸವಭೂಮಿಯೂ ಆಗಿದೆ. ಇದನ್ನು ಹಲವು ಧಾರ್ಮಿಕ ಪಂಥಗಳು, ಸ್ವಯಂಘೋಷಿತ ದೇವಮಾನವರು, ಹಸ್ತಸಾಮುದ್ರಿಕರು, ಶಾಸ್ತ್ರ ಹೇಳುವವರು, ಸಂಖ್ಯಾಶಾಸ್ತ್ರಜ್ಞರು, ವಾಸ್ತುಶಾಸ್ತ್ರಜ್ಞರು ಪೋಷಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ. 4ನೇ ಶತಮಾನದಿಂದ ಸುಧಾರಣೆಗಾಗಿ ಚಳವಳಿ ನಡೆಯುತ್ತಿದ್ದರೂ, ನಮ್ಮ ಮನಸ್ಥಿತಿ ಬದಲಾಗಿರುವುದೇ ಇಲ್ಲ. ನಮ್ಮ ಸಾಕ್ಷಿಪ್ರಜ್ಞೆ ‘ಮೂಢನಂಬಿಕೆ’ ಹಾಗೂ ‘ಪೂರ್ವಾಗ್ರಹ’ಗಳೆಂಬ ಕರಿಮೋಡಗಳಿಂದ ಮುಚ್ಚಲ್ಪಟ್ಟಿದೆ.

ಹೌದು ಈ ದೇಶದಲ್ಲಷ್ಟೇ ಅಲ್ಲ; ಕೀನ್ಯಾದ ಮಲಿಂಡಿ ಎಂಬ ಪಟ್ಟಣದಲ್ಲಿ ಪಾದ್ರಿ ಮಕನ್ಜೈ ಐನ್‌ಥೆಂಗಿಯ ಮಾತು ನಂಬಿ 47 ಜನ ಏಸುಕ್ರಿಸ್ತನನ್ನು ಭೇಟಿಯಾಗಲು ಉಪವಾಸ ಕೂತು ಜೀವ ತ್ಯಜಿಸಿದ್ದಾರೆ. ಮೃತಪಟ್ಟ 4 ಜನರ ಶವ ಮಲಿಂಡಿ ಪಟ್ಟಣದ 800 ಎಕರೆ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿತ್ತು.

ಬೆಂಗಳೂರಿನ ಕಮ್ಮನಹಳ್ಳಿ ನಿವಾಸಿ ಟಾಮ್ ಮ್ಯಾಥ್ಯೂ ಕುಡಿದ ಅಮಲಿನಲ್ಲಿ ‘ನಾನೇ ದೇವರೆಂದು’ ಇಲ್ಲಿನ ಸೇಂಟ್ ಮೆರೀಸ್ ಚರ್ಚ್‌ಗೆ ನುಗ್ಗಿ ಬಾಗಿಲು ಮುರಿದು ದಾಂಧಲೆ ನಡೆಸಿದ್ದ. ಉತ್ತರ ಪ್ರದೇಶದ ಶಾಸಕ ಸುರೇಂದ್ರ ಸಿಂಗ್ ಗೋಮೂತ್ರ ಕುಡಿದರೆ ಕೊರೊನಾ ಅಂಟುವುದಿಲ್ಲ ಎಂದು ಗೋಮೂತ್ರ ಸೇವಿಸಿದ್ದ. ಗುಜರಾತ್‌ನ ಹಲವೆಡೆ ಹಸುವಿನ ಸಗಣಿಯಲ್ಲಿ ಕೊರೊನಾ ನಿವಾರಿಸುವ ಗುಣ ಇದೆ ಎಂದು ಸಗಣಿಯನ್ನು ಮೈಗೆ ಹಚ್ಚಿಕೊಳ್ಳುತ್ತಿದ್ದರು. ಕೊರೊನಾ ಲಸಿಕೆಯಲ್ಲಿ ಝೈಡಸ್ ಕ್ಯಾಡಿಲಾ ಸಂಸ್ಥೆ ಕೂಡ ಪ್ರಮುಖ ಪಾತ್ರವಹಿಸಿತ್ತು. ಇದರಲ್ಲಿ ಗೌತಮ್ ಮಣಿಲಾಲ್ ಬೋರಿಸಾ ಅವರು ಸಹಾಯಕ ವ್ಯವಸ್ಥಾಪಕರಾಗಿದ್ದರು. ಇವರು ಅಹಮದಾಬಾದ್ ಬಳಿಯ ಛರೋಡಿಯ ಶ್ರೀ ಸ್ವಾಮಿನಾರಾಯಣ ಗುರುಕುಲ ವಿದ್ಯಾ ಪ್ರತಿಷ್ಠಾನದಲ್ಲಿ ಸಗಣಿ-ಗೋಮೂತ್ರ ಚಿಕಿತ್ಸೆ ಪಡೆದಿದ್ದರು. ಕೊರೊನಾ ಸೋಂಕು ತಗುಲಿದ್ದಾಗ ಸಗಣಿ-ಗೋಮೂತ್ರ ಪಡೆದಿದ್ದರಿಂದ ಚೇತರಿಸಿಕೊಳ್ಳಲು ಸಾಧ್ಯವಾಯಿತೆಂದು ಹೇಳಿದ್ದರು. ಬಳ್ಳಾರಿ ತಾಲೂಕಿನ ಡಿ. ಕಗ್ಗಲ್ ಗ್ರಾಮದಲ್ಲಿ ಕೊರೊನಾ ದೂರವಾಗಲೆಂದು ತಿನ್ನುವ ಅನ್ನವನ್ನು ಮಣ್ಣುಪಾಲು ಮಾಡಲಾಗಿತ್ತು. ಜಪಾನ್‌ನಲ್ಲಿ 187 ಅಡಿಯ ಬೌದ್ಧ ದೇವತೆಯ ಪ್ರತಿಮೆಗೆ ಕೊರೊನಾ ಅಂಟದಿರಲೆಂದು 30 ಕೆಜಿ ತೂಕದ ಬಟ್ಟೆಯ ಮಾಸ್ಕ್‌ನ್ನು ಅಳವಡಿಸಲಾಗಿತ್ತು.

ಇದೇ ರೀತಿ ಭೂಮಿಯ ಮೇಲಿನ ಬಹುಸಂಖ್ಯಾತ ಜನ ಮೂಢನಂಬಿಕೆ, ಕಟ್ಟುಕಥೆ, ಭ್ರಮೆಗಳನ್ನು ಹೊತ್ತು ಬದುಕುತ್ತಿದ್ದಾರೆ. ಇವರುಗಳಲ್ಲಿ ಕೆಲವರು ಹುಟ್ಟಿನಿಂದಲೂ, ಕೆಲವರು ಅಂತರ್ಗತವಾಗಿಯೂ ಬಂದ ಪೂರ್ವಾಗ್ರಹಗಳ ಹೊರೆ ಹೊತ್ತು ಸಾಗುತ್ತಿದ್ದಾರೆ. ವಿಚಾರವಾದಿಗಳೆಂದು ಘೋಷಿಸಿಕೊಂಡಿರುವವರಲ್ಲಿ ಕೂಡ ಎಷ್ಟೋ ಜನ ಕೂಡ ಮೂಢನಂಬಿಕೆಯಿಂದ ಹೊರಬಂದೇ ಇಲ್ಲ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಶಿವಗಂಗೆ ಬಳಿಯ ವೀರಸಾಗರದ 55 ವರ್ಷದ ಮಹಿಳೆಗೆ ಉಸಿರಾಟದ ತೊಂದರೆಯಾಗಿತ್ತು. ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸದೆ ದುಷ್ಟಶಕ್ತಿಯ ಕಾಟ ಇದೆಂದು ದೇಗುಲಕ್ಕೆ ಕರೆದೊಯ್ದು ದೆವ್ವ ಬಿಡಿಸಲು ಪೂಜೆ ಮಾಡಿಸಿದ್ದರು. ಮತ್ತೊಂದು ಭೀಕರ ಘಟನೆಯಲ್ಲಿ ಮಾಗಡಿಯಲ್ಲಿ 10 ವರ್ಷದ ಬಾಲಕಿಯನ್ನು ಅಪಹರಿಸಿ, ಬಾಯಿಗೆ ಬಟ್ಟೆ ಕಟ್ಟಿ, ಕೈಗಳನ್ನು ಹಿಂದಕ್ಕೆ ಕಟ್ಟಿ, ಸೊಂಟಕ್ಕೆ ಗೋಣಿ ಚೀಲ ಸುತ್ತಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು; 20 ಮೀಟರ್ ದೂರದಲ್ಲಿ ಕತ್ತರಿಸಿದ ನಿಂಬೆಹಣ್ಣು ಹೂ ಚೆಲ್ಲಿರುವುದು ಕಂಡುಬಂದಿತ್ತು. ಛತ್ತೀಸ್‌ಗಡದ ದುರ್ಗ್ ಪಟ್ಟಣದ ಕೈಲಾಶ್‌ನಗರದಲ್ಲಿ ಮಮತಾ ನಿಷಾದ್ ಎಂಬ ಮಹಿಳೆಯನ್ನು ಸುಡುವ ಕಲ್ಲಿದ್ದಲ ಮೇಲೆ 12 ಬಾರಿ ಹಾಗೂ ಕಬ್ಬಿಣದ ಮೊಳೆಗಳ ಮೇಲೆ 9 ಬಾರಿ ನಡೆಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ತನ್ನ ಸಂಬಂಧಿಕೆಯೊಬ್ಬಳ ಮೇಲೆ ವಾಮಾಚಾರದ ಆಪಾದನೆ ಹೊರಿಸಿ ಜೀವಂತವಾಗಿ ಹೂತುಹಾಕಲಾಗಿದೆ. ಉಸಿರಿರುವ ಮನುಷ್ಯನನ್ನು ಜೀವಂತವಾಗಿ ಜೀವಸಮಾಧಿ ಮಾಡಿದವರು ಅಪರಿಚಿತರೇನಲ್ಲ. ಹಿಮಾಚಲ ಪ್ರದೇಶದ ಹಳ್ಳಿಯೊಂದರಲ್ಲಿ ಉನ್ಮಾದದ ಅಲೆಯಲ್ಲಿದ್ದ ಗುಂಪೊಂದು 89 ವರ್ಷದ ವಯೋವೃದ್ಧೆಯ ಮುಖಕ್ಕೆ ಮಸಿಬಳಿದು, ಬೂಟಿನ ಹಾರ ಹಾಕಿ ಮೆರವಣಿಗೆ ಮಾಡಲಾಗಿತ್ತು. ಇನ್ನೊಂದು ಪ್ರಕರಣದಲ್ಲಿ ಒಡಿಶಾದ ಹಳ್ಳಿಯೊಂದರಲ್ಲಿ ಮಹಿಳೆ ಮತ್ತು ನಾಲ್ಕು ಅಪ್ರಾಪ್ತ ಮಕ್ಕಳನ್ನು ನಿದ್ದೆಯಲ್ಲಿದ್ದಾಗ ಬರ್ಬರವಾಗಿ ಕೊಲ್ಲಲಾಗಿತ್ತು.

ಇಂತಹ ಅನೇಕ ಪ್ರಕರಣಗಳು ಅಮಾಯಕ ಮಹಿಳೆಯರಿಗೆ ‘ಮಾಟಗಾತಿ’ ಎಂಬ ಹಣೆಪಟ್ಟಿ ಹಚ್ಚಿ ನಡೆಸಿರುವ ದುಷ್ಕೃತ್ಯಗಳಾಗಿವೆ. ಪ್ಲಾಸ್ಟಿಕ್ ಕರೆನ್ಸಿ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ವಿಶ್ವಗುರು ಎಂಬ ಬಿರುದುಬಾವಲಿಗಳನ್ನು ಹೊತ್ತ ನಮ್ಮ ದೇಶದಲ್ಲಿ ಇವೆಲ್ಲವೂ ನಡೆದಿದೆ ಎಂದರೆ, ‘ಮೂಢನಂಬಿಕೆ’ ಇನ್ನೂ ನಮ್ಮನ್ನು ಆಳುತ್ತಿದೆ ಎಂಬುದನ್ನು ಮನಗಾಣಬಹುದು.

ಇದನ್ನೂ ಓದಿ: ನ್ಯಾಯಾಂಗ ವ್ಯವಸ್ಥೆಗೆ ಮಾರಕವಾಗುತ್ತಿದೆ ‘ಪಂಚಾಂಗ’!

ಮೇಲೆ ಉಲ್ಲೇಖಿಸಿದಂತೆ ನಮ್ಮ ದೇಶದ ಹಲವೆಡೆ ನರಬಲಿ ನೀಡುತ್ತಿರುವ ಹತ್ತಾರು ಉದಾಹರಣೆಗಳಿವೆ. ಪ್ರೇತಾತ್ಮಗಳನ್ನು, ಕ್ಷುದ್ರ ದೇವತೆಗಳನ್ನು ಸಂತೃಪ್ತಿಗೊಳಿಸಲು ಕುರಿ-ಕೋಳಿ ಕಡಿದಂತೆ ಮನುಷ್ಯರನ್ನು ಕಡಿಯಲಾಗುತ್ತಿದೆ. ಇನ್ನೂ ವಿಚಿತ್ರ ಎಂದರೆ, ಪ್ರಾಣಿಗಳನ್ನು ನುಂಗಿ ನೊಣೆಯುವ ‘ಹೆಬ್ಬಾವು’ ಮೂರ್ಖ ಜನರಿಗೆ ಸಂಪತ್ತು ನೀಡುವ ದೈವವಾಗಿದೆ. ಸಿರಿಸಂಪತ್ತಿನ ಭಾಗ್ಯಕ್ಕಾಗಿ ಕೆಲವೊಂದು ಋತುಗಳಲ್ಲಿ ‘ಹೆಬ್ಬಾವನ್ನು’ ಸಂಪ್ರೀತಗೊಳಿಸಲು ಬಟ್ಟಲಲ್ಲಿ ಹಾಲು-ನೀರು ಇಡುವಂತೆ ಮನುಷ್ಯರ ರಕ್ತವನ್ನು ಇಡಲಾಗುತ್ತಿದೆ.

ಇನ್ನೂ ರಾಜಕೀಯದಲ್ಲಿ ‘ಮಾಟಗಾತಿ-ಬೇಟೆ’ ಎಂಬುದು ಸಲೀಸಾಗಿ ಬಳಕೆಯಾಗುವ ರೂಪಕ. ಇದರ ಬೇರು ಲಿಂಗಾಧಾರಿತ ಶ್ರೇಷ್ಠತೆಯಲ್ಲಿ ಅಡಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರಕಾರ2001ರಿಂದ 2014ರವರೆಗೆ 2 ಸಾವಿರಕ್ಕೂ ಹೆಚ್ಚು ವಾಮಾಚಾರ ಪ್ರೇರಿತ ಕೊಲೆಗಳು ನಡೆದಿವೆ. ಮಾಟಗಾತಿಯರೆಂಬ ಆರೋಪದಲ್ಲಿ 2011ರಿಂದ 2013ರವರೆಗೆ 494 ಮಹಿಳೆಯರನ್ನು ಬಲಿಪಡೆಯಲಾಗಿದೆ ಎಂದು RLEK (Rural Litigation and Entitlement Kendra) ತಿಳಿಸಿದೆ. ಬಲಿಯಾದವರಲ್ಲಿ ಮಹಿಳೆಯರ ಪಾಲು ದೊಡ್ಡದಿದೆ. ದೆಹಲಿ ಮೂಲದ ಕಾನೂನು ಸಂಪನ್ಮೂಲ ಗುಂಪು, ಪಾರ್ಟನರ್ಸ್ ಫಾರ್ ಲಾ ಇನ್ ಡೆವಲಪ್‌ಮೆಂಟ್ (PLD)ನ ಕ್ಷೇತ್ರ ವರದಿಯಂತೆ, ಇದೊಂದು ಆಳವಾದ ಸಮಸ್ಯೆಯಾಗಿದೆ. ಸಮಸ್ಯೆಯ ಒಂದು ಭಾಗ ಮಾತ್ರ ಕಂಡುಬರುತ್ತಿದ್ದು, ಇಲ್ಲಿ ಅತ್ಯಂತ ಭಯಾನಕ ಘಟನೆಗಳು ಮಾತ್ರ ವರದಿಯಾಗಿವೆ. ಬಹುತೇಕ ಘಟನೆಗಳು ವರದಿಯಾಗದೆ, ದಾಖಲು ಆಗಿರುವುದಿಲ್ಲ. 2014ರಲ್ಲಿ PLDಯು ಬಿಹಾರ್, ಜಾರ್ಖಂಡ್, ಛತ್ತೀಸ್‌ಘಡ್‌ನಲ್ಲಿ ನಡೆಸಿದ ಅಧ್ಯಯನದಂತೆ, ದುರ್ಬಲ, ಪಕ್ಷಪಾತ ತನಿಖೆ ಹಾಗೂ ಸಾಕ್ಷಿಗಳ ಅಸಹಕಾರ ಇಂಥ ಪ್ರಕರಣಗಳನ್ನು ದುರ್ಬಲಗೊಳಿಸಿವೆ.

ವ್ಯಕ್ತಿಯೊಬ್ಬ ‘ಮಾನಸಿಕ ಅಸ್ವಸ್ಥ’ನಾದರಂತೂ ‘ವಾಮಾಚಾರ’ ನಡೆಸಿಬಿಟ್ಟಿದ್ದಾರೆಂಬ ದೃಢ ನಿರ್ಧಾರಕ್ಕೆ ಬಂದುಬಿಡುವುದು ದೇಶದ ಹಲವೆಡೆ ಸಾಮಾನ್ಯವಾಗಿಬಿಟ್ಟಿದೆ. ‘ಮಾನಸಿಕ ಅಸ್ವಸ್ಥತೆ’ಗೆ ಒಳಗಾದ ವ್ಯಕ್ತಿಯಂತೂ ವೈದ್ಯಕೀಯ ಚಿಕಿತ್ಸೆಗೆ ಬೇಗ ಸ್ಪಂದಿಸುವುದಿಲ್ಲ. ರೋಗ ನಿರ್ಣಯ ಮಾಡುವುದು ಹಗುರವಾದ ಕೆಲಸವಲ್ಲ. ಅಲ್ಲಿಯವರೆವಿಗೂ ಔಷಧಗಳಿಗೆ ಸ್ಪಂದಿಸುವುದು ಕಷ್ಟಕರ. ಆಗ ‘ಸಂತ್ರಸ್ತ’ ಕುಟುಂಬದ ಸದಸ್ಯರು ಆರೋಗ್ಯ ಸಮಸ್ಯೆ ಉಲ್ಬಣಕ್ಕೆ ‘ಮಾನಸಿಕ ಆರೋಗ್ಯ’ವೇ ಕಾರಣವೆಂದು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಅಂತಹ ಹೊತ್ತಿನಲ್ಲಿ ತಮ್ಮೊಳಗಿನ ಕೋಪ-ತಾಪ-ಹತಾಶೆಗಳನ್ನು ಹೊರಹಾಕಲು ‘ಬಲಿಪಶು’ ಒಂದರ ಅಗತ್ಯ ಇರುತ್ತದೆ. ಇಂತಹವರ ಕುಟುಂಬದೊಳಗಡೆ ನೆರೆ-ಹೊರೆಯಲ್ಲಿ ‘ವೈಧವ್ಯ’ ಹೊತ್ತ ಮಹಿಳೆಯರು ಇದ್ದರಂತೂ ನೂರಕ್ಕೆ ನೂರರಷ್ಟು ಅವರೇ ‘ಬಲಿಪಶು.’

ಹೀಗೆ ‘ಮಾಟಗಾತಿ’ ಹೆಸರಿನ ‘ಬೇಟೆ’ ಮಹಿಳೆಯರ ವಿರುದ್ಧದ ಹಿಂಸೆಯ ಮತ್ತೊಂದು ರೂಪವೆಂದು ‘ಲಿಂಗ ಸಮಾನತೆ’ಗಾಗಿ ಶ್ರಮಿಸುತ್ತಿರುವ ಗುಜರಾತ್ ಮೂಲದ ಏರಿಯಾನೆಟ್ ವರ್ಕಿಂಗ್ ಮತ್ತು ಡೆವಲಪ್‌ಮೆಂಟ್ ಇನಿಶಿಯೇಟಿವ್ಸ್ (ANANDI) ಸಂಸ್ಥೆ ಬಣ್ಣಿಸಿದೆ. ಮಹಿಳೆಯರ ಮೇಲಿನ ಭಾರತ ಸರ್ಕಾರದ ಸ್ಥಿತಿಯ 2015ರ ವರದಿಯು ಇದೊಂದು ‘ಸಂಪೂರ್ಣ ತಾರತಮ್ಯದಿಂದ ಕೂಡಿದ ಮತ್ತು ಮಹಿಳೆಯರನ್ನು ನಿಯಂತ್ರಿಸುವ ಮಾರ್ಗವಾಗಿದೆ’ ಎಂದು ವಿವರಿಸಿದೆ. ಇಂತಹ ದುಷ್ಕೃತ್ಯವನ್ನು ‘ಮೂಢನಂಬಿಕೆ’ ಅಥವಾ ‘ಅನಕ್ಷರತೆ’ ಮಾತ್ರ ಉತ್ತೇಜಿಸುತ್ತಿಲ್ಲ. ಜೊತೆಗೆ ಇವು ಯಾವುದೇ ಒಂದು ಜಾತಿ, ಧರ್ಮ, ವರ್ಗಕ್ಕೂ ಸೀಮಿತವಾಗಿಲ್ಲ. ಪಾವರ್ಟಿ ಲೈನ್ ಡೆಫಿನೇಶನ್‌ನಂತೆ ‘ಮೂಢನಂಬಿಕೆ’ ಎಂಬುದು ಸಂಕೀರ್ಣ ವಿವರಣೆಯ ಒಂದು ಭಾಗವಾಗಿದೆ.

ಒಟ್ಟಾರೆ ಪ್ರಕರಣಗಳನ್ನು ಅವಲೋಕಿಸಿದಾಗ ‘ಕಹಿಸತ್ಯ’ವೊಂದು ಬೆಳಕಿಗೆ ಬರುತ್ತದೆ. ಅದು ವಿಧವೆ ಅಥವಾ ಮಹಿಳೆಯನ್ನು ಭೋಗಿಸಲು ಅಥವಾ ಆಕೆಯ ಸಂಪತ್ತನ್ನು ದೋಚಲು ಹೂಡುವ ಸಂಚು ಇದಾಗಿವೆ. ಒಂಟಿ ಮಹಿಳೆ, ಅನಕ್ಷರಸ್ಥ ದಿಕ್ಕಿಲ್ಲದ ಮಹಿಳೆ, ಪತಿ ಕಳೆದುಕೊಂಡ ಮಹಿಳೆ, ದುರುಳರ ಲೈಂಗಿಕ ದಾಹ ತಣಿಸಲು ನಿರಾಕರಿಸಿದಾಗ ಮಾಟಗಾತಿ’ ಪಟ್ಟ ಸೇರಿದಂತೆ ಹಲವು ಬಗೆಯ ಬಿರುದು-ಬಾವಲಿಗೆ ಬಲಿಯಾಗಬೇಕಾಗುತ್ತದೆ.

ತಮ್ಮೆಲ್ಲ ಪ್ರಯತ್ನ, ಭರವಸೆಗಳನ್ನು ಜೀವಂತವಾಗಿಟ್ಟುಕೊಳ್ಳಲು, ಜೀವನವನ್ನು ಸ್ಥಿರವಾಗಿಸಿಕೊಳ್ಳಲು ವಿಫಲಗೊಂಡಾಗ ದೇವರ ಹರಕೆ ಫಲಿಸದಿದ್ದಾಗ, ತ್ವರಿತ ಪರಿಹಾರಕ್ಕಾಗಿ ‘ಮಾಟ-ಮಂತ್ರ’ದ ಹುಚ್ಚಿಗೆ ಜನ ಬೀಳುತ್ತಿದ್ದಾರೆ. ಇದಕ್ಕಾಗಿ ಡೋಂಗಿ ‘ವಾಮಾಚಾರಿ’ಗಳ ಕಪಟಕ್ಕೆ ಒಳಗಾಗುತ್ತಲೇ ಇದ್ದಾರೆ. ಬಳ್ಳಾರಿಯ ಶಿರಗುಪ್ಪ ತಾಲೂಕಿನ ಶಾನವಾಸಪುರ ಗ್ರಾಮದಲ್ಲಿ ಚರ್ಚ್ ಫಾದರ್ ಒಬ್ಬ ‘ಆ ದೇವರು ತಾಳಿ ಕಟ್ಟುವಂತೆ ಆದೇಶ ನೀಡಿದ್ದಾನೆಂದು, ತಾಯಿ ಎದುರೇ ಬಾಲಕಿಯೊಬ್ಬಳಿಗೆ ತಾಳಿ ಕಟ್ಟಿದ್ದ.

ಎಲ್ಲಾ ಸಮಾಜಗಳು ‘ಮೂಢನಂಬಿಕೆ’ಯನ್ನು ತಮ್ಮ ಸಂಸ್ಕೃತಿಯ ಒಂದು ಭಾಗವನ್ನಾಗಿಸಿಕೊಂಡಿದ್ದಾರೆ. ಇದು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹಾದು ಬರುತ್ತಲೆ ಇದೆ. ಇದರ ಬಗ್ಗೆ ಪ್ರಶ್ನಿಸಿದರೆ, ಯಾವೊಂದು ಸಮುದಾಯ ಕೂಡ ತನ್ನ ‘ನಂಬಿಕೆ ವ್ಯವಸ್ಥೆ’ಯನ್ನು ನಿವಾರಿಸುವುದಿರಲಿ, ಕೈಬಿಡುತ್ತಲೂ ಇಲ್ಲ. ಚಂದ್ರಯಾನ-3 ಉಡಾವಣೆಯ ಯಶಸ್ಸಿಗಾಗಿ ವಿಜ್ಞಾನಿಗಳ ತಂಡವೊಂದು ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿತು. ತಮಿಳು ನಾಡಿನಲ್ಲಿ ಕೃಷಿಕನೊಬ್ಬ ಕೊರೊನಾ ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಹೊಲದಲ್ಲಿದ್ದ ವಿಷಪೂರಿತ ಹಾವನ್ನು ಸಾಯಿಸಿ, ಅದನ್ನು ಹಸಿಯಾಗಿಯೇ ತಿಂದಿದ್ದ. ಹಾವು ತಿನ್ನುವ ವಿಡಿಯೋ ವೈರಲ್ ಆದಾಗ ಆತನಿಗೆ 7 ಸಾವಿರ ದಂಡ ವಿಧಿಸಲಾಯಿತು.

ನಮ್ಮಲ್ಲಿ ಮೂಢನಂಬಿಕೆ ಹತ್ತಿಕ್ಕಲು ಕ್ರಮ ವಹಿಸಿಲ್ಲ ಎನ್ನಲಾಗದು. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ‘ವಾಮಾಚಾರ’ವನ್ನು ನಿರ್ಬಂಧಿಸಲು ಕಾನೂನುಗಳನ್ನು ಜಾರಿ ಮಾಡಲಾಗಿದೆ. ಇದೇ ರೀತಿ ದಕ್ಷಿಣ ಭಾರತದಲ್ಲೂ ಕ್ರಮವಹಿಸಲಾಗಿದೆ. ಆದರೆ, ಆಡಳಿತಗಾರರು, ಜನಪ್ರತಿನಿಧಿಗಳು ಅವೈಜ್ಞಾನಿಕ ನಂಬಿಕೆಗಳನ್ನು, ಆಚರಣೆಗಳನ್ನು ಹತ್ತಿಕ್ಕಲು ಮುಂದಾಗುತ್ತಿಲ್ಲ. ಹಾಗೆಯೇ ಡೆಹ್ರಾಡೂನ್ ಮೂಲದ ಗ್ರಾಮೀಣ ವ್ಯಾಜ್ಯ ಮತ್ತು ಹಕ್ಕು ಕೇಂದ್ರ RLEKದಂತೆ ಯಾವೊಂದು ಸಂಸ್ಥೆಯು ಗಣನೀಯ ಕಾರ್ಯವನ್ನು ಮಾಡುತ್ತಿಲ್ಲ. 2,500ಕ್ಕೂ ಹೆಚ್ಚು ಮಹಿಳೆಯರನ್ನು ‘ಮಾಟಗಾತಿ’ಯರೆಂದು ಬಗೆದು ಜೀವ ತೆಗೆಯಲಾಗಿದೆಯೆಂದು RLEK ಸಂಸ್ಥೆಯು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ‘ಮಾಟಗಾತಿ’ಯರ ಹೆಸರಿನಲ್ಲಿ ನಡೆಯುವ ದೌರ್ಜನ್ಯ ವಿರೋಧಿಸಿ 2016ರಲ್ಲಿ ನಿಷೇಧ ಕಾನೂನು ಮಂಡನೆಯಾಗಿತ್ತು. ಇದೊಂದು ನಗರ, ರಾಜ್ಯದ ಸಮಸ್ಯೆಯಾಗುಳಿದಿಲ್ಲ. ದೇಶದ ಉದ್ದಗಲಕ್ಕೆ ಕಾಡುತ್ತಿರುವ ಸಮಸ್ಯೆ.

ಅಕ್ಷರಸ್ಥರ ನಾಡು, ದೇಗುಲಗಳ ಬೀಡು ಎಂಬ ಖ್ಯಾತಿಯ ಶಿಖರ ಹೊತ್ತಿರುವ ಕೇರಳ ಕೂಡ ‘ವಾಮಾಚಾರ’ ಪ್ರಕರಣಗಳಲ್ಲಿ ಹಿಂದೆ ಬಿದ್ದಿಲ್ಲ. ಸಂತರು-ದಾಸರು-ದಾರ್ಶನಿಕ ಪುರುಷರು, ಕುವೆಂಪು-ಕಲ್ಬುರ್ಗಿ-ಗೌರಿ ಲಂಕೇಶ್‌ರು ನೆಲೆಸಿದ್ದ ನಮ್ಮಲ್ಲಿಯೂ ‘ಮಾಟ-ಮಂತ್ರ-ತಂತ್ರ’ ಎಗ್ಗಿಲ್ಲದೆ ನಡೆಯುತ್ತಿದೆ. ನಮ್ಮವರಿಗೆ ಮೂಢನಂಬಿಕೆ ‘ಮಸಾಲೆ’ ಇದ್ದಂತೆ. ಮೂಢನಂಬಿಕೆ ಆಚರಣೆ ಹೆಚ್ಚಾಗುತ್ತಾ ಸಾಗಿದಂತೆ, ಪರಿಣಾಮಗಳು ಭೀಕರವಾಗಿ ಕಾಡಲು ಆರಂಭಿಸುತ್ತವೆ. ಸಾಮಾಜಿಕವಾಗಿಯೂ ಅತಿದೊಡ್ಡ ಬೆಲೆ ತೆರಬೇಕಾಗುತ್ತದೆ. ತಜ್ಞವೈದ್ಯ ಮಂಗಳವಾರ-ಶುಕ್ರವಾರ ಶಸ್ತ್ರಚಿಕಿತ್ಸೆ ಮಾಡುವುದಿಲ್ಲವೆಂದೂ, ಪ್ರಯೋಗಾಲಯ ತಂತ್ರಜ್ಞ ಭಾನುವಾರ, ಸೋಮವಾರ ಮಲ-ಮೂತ್ರ ಪರೀಕ್ಷೆ ಮಾಡುವುದಿಲ್ಲ ಎಂದರೆ ರೋಗಿಗಳ ಪಾಡೇನಾಗಬೇಕು?

ಇನ್ನೂ ‘ಮಾಟಗಾತಿ’ಯ ಹೆಸರಲ್ಲಿ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ, ಅವರುಗಳನ್ನು ‘ಕೇಶಮುಂಡನ’ಗೊಳಿಸಿ, ಕತ್ತೆಯ ಮೇಲೆ ಕೂರಿಸಿ ಮೆರವಣಿಗೆ ನಡೆಸಿರುವುದು ನಡೆಯುತ್ತಲೇ ಇದೆ. ಇಂತಹ ಗುರುತರ ಅಪಮಾನಗಳನ್ನು ನಮ್ಮಲ್ಲಿ ‘ಘಾಸಿ’ ಎಂದಷ್ಟೆ ಗುರ್ತಿಸಲಾಗುತ್ತಿದೆ. ಇದರಿಂದಾಗಿ ವಲಸೆ ಹೋಗುವವರು, ಚರ-ಸ್ಥಿರಾಸ್ತಿಗಳನ್ನು ಕಳೆದುಕೊಳ್ಳುವವರು ಹೆಚ್ಚಾಗಿದ್ದಾರೆ. ಜೊತೆಗೆ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರಕ್ಕೂ ಇದು ದಾರಿಯಾಗುತ್ತಿದೆ. ಇಂತಹ ‘ಅಮಾನವೀಯ’ ಆಚರಣೆ ಮತ್ತು ಶೋಷಣೆಯನ್ನು ಬಲವಾಗಿ ತಡೆಯಬೇಕಿದೆ. ನಮ್ಮಲ್ಲಿರುವ ‘ಮೂಢನಂಬಿಕೆ’ ವಿರೋಧಿ ಕಾನೂನನ್ನು ಅಧಿಕಾರವರ್ಗ ಬಲಿಷ್ಠವಾಗಿ ಅನುಷ್ಠಾನಗೊಳಿಸಬೇಕಿದೆ.

ಡಾ. ಎಂ.ಎಸ್. ಮಣಿ

ಡಾ. ಎಂ.ಎಸ್. ಮಣಿ
ಸಾಮಾಜಿಕ ಮತ್ತು ಸಂಶೋಧನಾತ್ಮಕ ಲೇಖನಗಳನ್ನು ಬರೆಯುವ ಡಾ.ಎಂ.ಎಸ್.ಮಣಿ ಅವರು ಪತ್ರಕರ್ತರ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಲ್ಲಣ, ಹರಿವು, ಒಡಲಾಗ್ನಿ, ಭಾವಭಿತ್ತಿ, ಮನುಭಾರತ, ಸುಡು ಬಯಲು ಪುಸ್ತಕಗಳು ಪ್ರಕಟವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕರ್ನಾಟಕದಲ್ಲಿ ಮೋದಿ ಪ್ರತಿಕೃತಿ ದಹಿಸಲು ಹೋದ ಕಾಂಗ್ರೆಸ್ಸಿಗರ ಪಂಚೆಗೆ ಬೆಂಕಿ...

0
ಕರ್ನಾಟಕದಲ್ಲಿ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿ ದಹಿಸಲು ಹೋದ ಕಾಂಗ್ರೆಸ್ಸಿಗರ ಪಂಚೆಗೆ ಬೆಂಕಿ ತಗುಲಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. "ಕರ್ನಾಟಕದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯೊಂದರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರಧಾನಿ ಮೋದಿ...