Homeಕರ್ನಾಟಕವಿಶ್ಲೇಷಣೆ; ದಲಿತ ರಾಜಕಾರಣ ಮುಂದೇನು?

ವಿಶ್ಲೇಷಣೆ; ದಲಿತ ರಾಜಕಾರಣ ಮುಂದೇನು?

- Advertisement -
- Advertisement -

ಕರ್ನಾಟಕ ವಿಧಾನಸಭೆಯ ಅವಧಿ ಇನ್ನು ಕೇವಲ ಒಂದು ಮುಕ್ಕಾಲು ವರ್ಷವಷ್ಟೇ ಉಳಿದಿದೆ. ಯಡಿಯೂರಪ್ಪನವರೇ ಅಧಿಕಾರ ತ್ಯಾಗ ಮಾಡಲು ಒಪ್ಪಿಕೊಂಡಿರುವ ಕಾರಣ ಅಥವಾ ಆರೆಸ್ಸೆಸ್ ಒಪ್ಪಿಸಿರುವ ಕಾರಣ ಕರ್ನಾಟಕದ ಮುಖ್ಯಮಂತ್ರಿ ಕುರ್ಚಿಗೆ ಸ್ವತಃ ಬಿ.ಜೆ.ಪಿ ಪಕ್ಷದಲ್ಲಿಯೇ ಕಚ್ಚಾಟ ಹೆಚ್ಚಾಗಿದೆ. ಯಥಾಪ್ರಕಾರ ಕರ್ನಾಟಕದ ಮುಖ್ಯಮಂತ್ರಿ ಪದವಿಯನ್ನು ತಮ್ಮ ಮನೆಯ ಆಸ್ತಿಯನ್ನಾಗಿಸಿಕೊಂಡಿರುವ ಲಿಂಗಾಯತ ಮತ್ತು ಒಕ್ಕಲಿಗರು ಕರ್ಚೀಫ್ ಹಾಕಿಕೊಂಡಿದ್ದಾರೆ. ಸದಾ ಮೇಲ್ಜಾತಿ ರಾಜಕಾರಣವನ್ನೇ ಮಾಡಿಕೊಂಡು ಬಂದಿರುವ ಬಿಜೆಪಿಗೆ ದಲಿತರ ಓಟ್ ಬೇಕೇ ಬೇಕು. ಅದಕ್ಕಾಗಿ ಖಂಡಿತಾ ಆರೆಸ್ಸೆಸ್ ತನ್ನ ನಿಯತ್ತಿನ ದಲಿತನನ್ನು ಮುಂದಿನ ದಿನಮಾನಗಳಲ್ಲಿ ಸಿಎಂ ಅಥವಾ ಪಿಎಂ ಮಾಡಿದರೂ ಆಶ್ಚರ್ಯವಿಲ್ಲ. ನನಗೆ ಆಗಾಗ ದಲಿತ ಪಿ.ಎಂ ಹೆಸರಿನಲ್ಲಿಯೇ ಸಂವಿಧಾನ ಬದಲಾಯಿಸುವ ಕನಸುಗಳೂ ಬೀಳುತ್ತಿರುತ್ತವೆ.

ಕಳೆದ ವಿಧಾನಸಭೆಯಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡಕ್ಕೂ ದಲಿತ ಸಿಎಂ ಮಾಡಬೇಕೆಂಬ ಜ್ಞಾನೋದಯವಾಗಲಿಲ್ಲ. ಸಿದ್ದರಾಮಯ್ಯನವರೂ ಸಹ ಚಾತುರ್ವರ್ಣ ಪರಿಪಾಲಕರಂತೆ ಏಣಿಶ್ರೇಣಿಯ ಅಡಿಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ಶೂದ್ರರ ನಂತರ ದಲಿತರು ಎಂಬಂತೆ ತಾವೇ ಅಧಿಕಾರಿ ಹಿಡಿದುಬಿಟ್ಟರು. ಆದರೆ ಇದುವರೆಗೆ ದೇಶದಲ್ಲಿ ಯಾವುದೇ ದಲಿತೇತರ ರಾಜಕೀಯ ಪಕ್ಷವೂ ಸಹ ಮನ:ಪೂರ್ವಕವಾಗಿ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದಿಲ್ಲ. ಆದರೆ ಸ್ಪೀಕರ್, ರಾಷ್ಟ್ರಪತಿಯಂತಹ ಶಾಸನಾಧಿಕಾರವಿಲ್ಲದ ಸ್ಥಾನಗಳಿಗೆ ನೇಮಿಸಲು ಮರೆಯುವುದಿಲ್ಲ.

ಈಗ ಜುಜುಬಿ ಒಂದು ಮುಕ್ಕಾಲು ವರ್ಷ ಇರುವ ಅಧಿಕಾರಕ್ಕೆ ದಲಿತ ಸಿಎಂ ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ಪಕ್ಷದವರು ಕಳ್ಳಾಟ ಆಡುತ್ತಿದ್ದಾರೆ. ದಲಿತರಿಗೆ ಖಂಡಿತಾ ಅಧಿಕಾರ ಬೇಕು. ಆದರೆ ಅದು ಮೇಲ್ಜಾತಿಗಳ ಭಿಕ್ಷೆಯಾಗಿಯಲ್ಲ. ದಲಿತರ ಮೇಲಿನ ಸಿಂಪಥಿಯಾಗಿಯೂ ಅಲ್ಲ. ಬದಲಾಗಿ ಸಾಮಾಜಿಕ ನ್ಯಾಯದ ಭಾಗವಾಗಿ ಬೇಕು. ದಲಿತರಿಗೂ ಅಧಿಕಾರ ಅನುಭವಿಸಬೇಕಾದ್ದು ಅವರ ಹಕ್ಕು ಎಂಬ ನಿಶ್ಕಲ್ಮಶ ಭಾವದಿಂದ ಬೇಕು.

ಹಾಗಾಗಿ, ಈಗ ದಲಿತ ಸಿಎಂ ಎಂದು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಾ ಕೂಗುತ್ತಿರುವವರು ದಯಮಾಡಿ ತಮ್ಮ ಬಾಯಿಗಳನ್ನು ಮುಚ್ಚಿಕೊಳ್ಳಬೇಕಾಗಿ ವಿನಂತಿ.

ಆದರೆ ಇಂದು ದಲಿತ ಸಿಎಂ ಎಂದು ಕಳ್ಳಾಟ ಆಡುತ್ತಿರುವವರಿಗೆ ಸತ್ಯದ ಅರಿವಾಗುವ ಕಾಲ ಬಂದೇ ಬರುತ್ತದೆ. ದಲಿತರಂತೆಯೇ ಅವಕಾಶ ವಂಚಿತ ಸಮುದಾಯಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಸಮಾಜ ವಿಜ್ಞಾನ ತಜ್ಞರು, ತಂತ್ರಜ್ಞಾನಿಗಳು, ವಿಜ್ಞಾನಿಗಳು, ಸಂಘಟಕರು, ಪತ್ರಕರ್ತರು, ವೈದ್ಯರು ಮುಂತಾದವರು ಈ ದೇಶದ ಪ್ರತಿಯೊಬ್ಬರಿಗೂ ತಮ್ಮ ಸಾಮರ್ಥ್ಯವನ್ನು ಮೀಸಲಿಟ್ಟಿದ್ದಾರೆಂದು ಸಾಬೀತುಮಾಡಿದ್ದಾರೆ. ನೆನಪಿಡಿ ದಲಿತ ಸಮುದಾಯಕ್ಕೆ ಶೈಕ್ಷಣಿಕ ತರಬೇತಿಯ ಜೊತೆಗೆ ಸಾಮಾಜಿಕ ಅನುಭವದಿಂದ ಬರುವ ವಿಶಿಷ್ಟ ಜ್ಞಾನವೂ ಇರುತ್ತದೆ. ಹಾಗಾಗಿ ದಲಿತ ಸಮುದಾಯಕ್ಕೆ ಅವಕಾಶ ಒದಗುವುದು ಯಾರೋ ಮಾಡುವ ಉಪಕಾರವಲ್ಲ, ತಮಗೆ ಮಾಡಿಕೊಳ್ಳುವ ಅನುಕೂಲವೂ ಹೌದು ಎಂಬ ಸತ್ಯ ಆದಷ್ಟು ಬೇಗ ಅಂತಹವರಿಗೆಲ್ಲ ಅರಿವಾಗುತ್ತದೆ.

ಆ ಅರಿವಾದ ದಿನ ದಲಿತರ ನಾಯಕತ್ವದಲ್ಲಿ ದಲಿತೇತರರೂ ಒಗ್ಗೂಡಿ ಈ ದೇಶದ ಸಂಪೂರ್ಣ ಸ್ವಾತಂತ್ರ್ಯದ ನಡಿಗೆ ಆರಂಭವಾಗುತ್ತದೆ. ಆದರೆ ಇದಷ್ಟು ಸುಲಭದ ಮಾತೇ? ಈ ಪ್ರಶ್ನೆಯನ್ನು ಪ್ರಾಮಾಣಿಕ ಭಾರತೀಯರು ಹಾಗೂ ದಲಿತಪರರು ಆಲೋಚನೆ ಮಾಡಿ ಪ್ರಾಯೋಗಿಕವಾಗಿ ಮುನ್ನಡೆಯಬೇಕಿದೆ. ಆ ಕಾರಣಕ್ಕಾಗಿ ಒಂದಷ್ಟು ಇತಿಹಾಸದ ಪಾಠಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟಿಷರು ಹಿಂದೂ ಮತ್ತು ಮುಸ್ಲಿಂ ಒಗ್ಗಟ್ಟನ್ನು ಮುರಿಯುವ ತಂತ್ರವನ್ನು ಆರಂಭಿಸಿದರು. ಇದರ ಭಾಗವಾಗಿ 1865ರ ನಂತರ ಸ್ವತಃ ಬ್ರಿಟಿಷರೇ ಭಾರತದ ಇತಿಹಾಸ ರಚನೆಗೆ ಕೈ ಹಾಕಿದರು. ಹಿಂದೂ ಮೂಲಭೂತವಾದ ಹಾಗೂ ಮುಸ್ಲಿಂ ಮೂಲಭೂತವಾದ ಎರಡಕ್ಕೂ ಬೆಂಬಲ ನೀಡಿದರು. ಮುಂದುವರೆದು ಬಂಗಾಳ ವಿಭಜನೆ ಹಾಗೂ ಮಾರ್ಲೆ ಮಿಂಟೋ ಸುಧಾರಣೆ- ಲಖನೌ ಒಪ್ಪಂದದ ಮೂಲಕ ಮುಸ್ಲೀಮರಿಗೆ ಪ್ರತ್ಯೇಕ ಕೋಮುವಾರು ಮತಕ್ಷೇತ್ರಗಳು ದಕ್ಕಿದವು. ಮುಸ್ಲಿಮರಲ್ಲಿನ ಪ್ರಜ್ಞಾವಂತ ವರ್ಗವೊಂದು ರಾಜಕೀಯ ಹಕ್ಕನ್ನು ಸರಿಯಾಗಿ ಅನುಭವಿಸಿ ಬಹುದೊಡ್ಡ ಶಕ್ತಿಯಾಯಿತು. ಮುಸ್ಲಿಮರಿಗೆ ನಂತರ ಸಿಖ್ಖರಿಗೆ, ಅಲ್ಪಸಂಖ್ಯಾತರು ಎಂದು ಪರಿಗಣಿಸಿ ನೀಡಿದ ಪ್ರತ್ಯೇಕ ಮತಕ್ಷೇತ್ರದ ಮಾದರಿಯಲ್ಲಿಯೇ ಅಂಬೇಡ್ಕರರ ಪರಿಶ್ರಮದಿಂದಾಗಿ ದಲಿತರಿಗೂ 1932ರ ದುಂಡು ಮೇಜಿನ ಪರಿಷತ್ತಿನಲ್ಲಿ ಪ್ರತ್ಯೇಕ ಹಾಗೂ ಎರಡು ಓಟುಗಳನ್ನು ಚಲಾಯಿಸುವ ಹಕ್ಕು ಸಿಕ್ಕಿತು. ಆದರೆ ನಮಗೆಲ್ಲಾ ತಿಳಿದಂತೆ ಗಾಂಧೀಜಿ ಹಾಗೂ ಕಾಂಗ್ರೆಸ್‌ನವರ ರಾಜಕೀಯದಿಂದಾಗಿ ಅದನ್ನು ದಲಿತರು ಕಳೆದುಕೊಂಡು ಅಸ್ಪೃಶ್ಯರ ಪರವಾಗಿ ಅಂಬೇಡ್ಕರ್ ಮತ್ತು ಹಿಂದೂಗಳ ಪರವಾಗಿ ಹಿಂದೂ ಮಹಾಸಭಾದ ಮೂಂಜೆ ನಡುವೆ ಮೀಸಲು ಕ್ಷೇತ್ರಗಳನ್ನು ನೀಡುವ ಪೂನಾ ಒಪ್ಪಂದ ಜಾರಿಗೆ ಬಂದಿತು. ಇದರ ಭಾಗವಾಗಿ ಬಾಬಾಸಾಹೇಬ್ ಅಂಬೇಡ್ಕರ್ ’ಇಂಡಿಪೆಂಡೆಂಟ್ ಲೇಬರ್ ಪಾರ್ಟಿ (ILP)’ಯನ್ನು ಸ್ಥಾಪಿಸಿದರೆ ಕಾಂಗ್ರೆಸ್ ಉತ್ತರ ಭಾರತದ ದಲಿತ ನಾಯಕರಾದ ಬಾಬು ಜಗಜೀವನ್ ರಾಮ್‌ಜಿಯವರನ್ನು ಮುನ್ನೆಲೆಗೆ ತಂದಿತು. ಎಂ.ಸಿ.ರಾಜಾ ಸಹ ಅಂಬೇಡ್ಕರರನ್ನು ತೊರೆದು ಗಾಂಧಿಯವರ ಕಡೆ ವಾಲಿದರು.

ಬಾಬು ಜಗಜೀವನ್ ರಾಮ್‌ಜಿ

1937ರ ಸಾರ್ವತ್ರಿಕ ಚುನಾವಣೆಯಲ್ಲಿ ILP ಬಾಂಬೆಯಲ್ಲಿ ಭರ್ಜರಿ ಗೆಲುವು ಸಾಧಿಸಿತು. 15 ಮೀಸಲು ಕ್ಷೇತ್ರಗಳಲ್ಲಿ 11ನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಮಧ್ಯ ಮತ್ತು ಬೆರಾರ್ ಸಂಸ್ಥಾನಗಳಲ್ಲಿಯೂ ಉತ್ತಮ ಸ್ಥಾನ ಗಳಿಸಿತು. ಆದರೆ ಇದೇ ಹೊತ್ತಲ್ಲಿ, ಪಶ್ಚಿಮ ಭಾರತವನ್ನು ಹೊರತುಪಡಿಸಿ ಮಿಕ್ಕೆಲ್ಲ ಕಡೆ ಅಂಬೇಡ್ಕರರ ಪ್ರಭಾವ ಅಷ್ಟಕ್ಕಷ್ಟೆ ಎಂಬುದನ್ನೂ ತಿಳಿಸಿತು. ಒಟ್ಟು ಭಾರತದಲ್ಲಿ 151 ಮೀಸಲು ಕ್ಷೇತ್ರಗಳಲ್ಲಿ 73 ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಂಡಿತು. ಈ ಮೂಲಕ ಕಾಂಗ್ರೆಸ್ ಕೂಡ ದಲಿತರನ್ನು ಇಡಿಯಾಗಿ ಪ್ರತಿನಿಧಿಸುವಲ್ಲಿ ವಿಫಲವಾಯಿತು. ಇತರೆ 78 ಕ್ಷೇತ್ರಗಳಲ್ಲಿ ದಲಿತರು ಕಾಂಗ್ರೆಸ್ಸೇತರ ಇಂಡಿಪೆಂಡೆಂಟ್ ಪಕ್ಷಗಳಿಗೆ ಮತ ಚಲಾಯಿಸಿದ್ದರು.

1940ರ ನಂತರ ಭಾರತಕ್ಕೆ ಸ್ವತಂತ್ರ ಹಾಗೂ ರಾಜಕೀಯ ಅಧಿಕಾರ ನೀಡುವ ಸಲುವಾಗಿ ಬ್ರಿಟಿಷರು ಮನಸ್ಸು ಮಾಡಿದ್ದರು. ಹಾಗಾಗಿ ರಾಜಕೀಯಾಧಿಕಾರದ ಭಾಗವಾಗಿ ಅಸ್ಪೃಶ್ಯರಿಗಾಗಿ ಒಂದು ಸಂಘಟನೆ ಇರಲೇಬೇಕಾದ ಅವಶ್ಯಕತೆ ಇತ್ತು. ಇಲ್ಲವಾದರೆ ಕಾಂಗ್ರೆಸ್ ಹಾಗೂ ಹಿಂದೂ ಮಹಾಸಭಾ ತನ್ನ ಹಳೆಯ ವರಸೆಯಂತೆ ಅಸ್ಪೃಶ್ಯರ ಪ್ರತಿನಿಧಿ ತಾನೇ ಎಂದು ವಾದಿಸಲು ತುದಿಗಾಲಿನಲ್ಲಿ ನಿಂತಿತ್ತು. ಇದನ್ನು ಬಹಳ ಮುಂಚೆಯೇ ಮನಗಂಡ ಅಂಬೇಡ್ಕರರು ಅಖಿಲ ಭಾರತ ಮಟ್ಟದಲ್ಲಿ ಪಕ್ಷ ಸಂಘಟಿಸಲು 1942ರಲ್ಲಿ ILPಯನ್ನು ವಿಸರ್ಜಿಸಿ ಹೊಸ ಪಕ್ಷ ’ಆಲ್ ಇಂಡಿಯಾ ಶೆಡ್ಯುಲ್ಡ್ ಕ್ಯಾಸ್ಟ್ ಫೆಡರೇಷನ್ (AISCF)’ ಅನ್ನು ಸ್ಥಾಪಿಸಿದರು. ಆದರೆ 1942ರಲ್ಲಿಯೇ ನಡೆದ ಚುನಾವಣೆಯಲ್ಲಿ AISCF ಬಹಳ ನಿರಾಶಾದಾಯಕ ಫಲಿತಾಂಶವನ್ನು ಕಂಡಿತು. ILP ದುಡಿವ ಜನರೆಲ್ಲರ ಪಕ್ಷದಂತೆ ಕಂಡುಬಂದಿತ್ತು ಆದರೆ AISCF ದಲಿತ ಜಾತಿಗಳ ಒಕ್ಕೂಟವಾಗುವಲ್ಲಿ ವಿಫಲವಾಯಿತು. ಇದಕ್ಕೆ ಕಾಂಗ್ರೆಸ್‌ನಲ್ಲಿದ್ದ ದೂರಾಲೋಚನೆಯಿಲ್ಲದ ದಲಿತ ನಾಯಕರೂ ಕಾರಣವಾಗಿದ್ದರು. ಮುಂದೆ 1946ರಲ್ಲಿ ಬಂದ ಕ್ಯಾಬಿನೆಟ್ ಮಿಷನ್, ಅಂಬೇಡ್ಕರರ ಸಂಘಟನೆ ಹಾಗೂ ಪಕ್ಷವನ್ನು ಅಸ್ಪೃಶ್ಯರ ಏಕೈಕ ಸಂಘಟನೆ ಎಂದು ಭಾವಿಸಲು ನಿರಾಕರಿಸಿತು. ಇದಕ್ಕೆ ಮುಖ್ಯ ಕಾರಣ AISCF ಗೆ ಚುನಾವಣೆಯಲ್ಲಾದ ಸೋಲಾಗಿತ್ತು ಹಾಗೂ ಬಾಬು ಜಗಜೀವನ್ ರಾಮ್‌ರವರನ್ನೂ ಒಳಗೊಂಡಂತೆ ಹಲವು ದಲಿತ ನಾಯಕರು ಕಾಂಗ್ರೆಸ್ ಪರ ವಾದಿಸಿದ್ದರಿಂದ ಅಂಬೇಡ್ಕರರಿಗೆ ಸೋಲುಂಟಾಯಿತು. ಹಾಗಾಗಿ ಬ್ರಿಟಿಷರ ಮಧ್ಯಸ್ಥಿಕೆಯಲ್ಲಿ ಅಂಬೇಡ್ಕರರು ಹಾಗೂ ಅವರ ಅನುಯಾಯಿಗಳು ಪೂನಾ ಪ್ಯಾಕ್ಟಿನಲ್ಲಿ ಕಳೆದುಕೊಂಡ ಪ್ರತ್ಯೇಕ ಮತಕ್ಷೇತ್ರಕ್ಕೆ ಒಳಗೂ ಹೊರಗೂ ಸ್ವಾತಂತ್ರ್ಯದವರೆಗೂ ಒತ್ತಾಯಿಸುತ್ತಿದ್ದರು.

ಆದರೆ ಬ್ರಿಟಿಷರಿಗೆ ಈ ತಲೆನೋವುಗಳೆಲ್ಲ ಬೇಕಿರಲಿಲ್ಲ. ದೇಶದ ಆಡಳಿತ ಚುಕ್ಕಾಣಿಯನ್ನು ಕಾಂಗ್ರೆಸ್ ಹಾಗೂ ಹಿಂದೂ ಮಹಾಸಭಾದ ನಾಯಕರ ಕೈಗಿತ್ತು ಹೊರಡುವ ಆತುರದಲ್ಲಿದ್ದರು. ಅವರಿಗೆ ಈ ಬ್ರಾಹ್ಮಣ-ಬನಿಯಾ ಜುಗಲ್ ಬಂಧಿಗಳನ್ನೆಲ್ಲ ಅರ್ಥಮಾಡಿಕೊಳ್ಳಲು ಇಷ್ಟವಿರಲಿಲ್ಲ. ಇದೇ ಸಮಯದಲ್ಲಿ ಜೋಗೇಂದ್ರನಾಥ ಮಂಡಲ್ (AISCF), ಮುಸ್ಲಿಂ ಲೀಗ್ ಹಾಗೂ ಕಮ್ಯುನಿಸ್ಟ್ ಪಾರ್ಟಿ (CPI) ಸದಸ್ಯರು ಪಶ್ಚಿಮ ಬಂಗಾಲದಿಂದ ಅಂಬೇಡ್ಕರರನ್ನು ಸಂವಿಧಾನ ಸಭೆಗೆ ಆಯ್ಕೆ ಮಾಡಿದ್ದು ಪಾಕಿಸ್ತಾನ ವಿಭಜನೆ ಮೂಲಕ ಮಣ್ಣುಪಾಲಾಯಿತು. ವಿಧಿಯಿಲ್ಲದೆ ಅಂಬೇಡ್ಕರರು ಕಾಂಗ್ರೆಸ್ ಕರೆಗೆ ಓಗೊಡಬೇಕಾಯಿತು. ಇಲ್ಲದಿದ್ದರೆ ಅವರು ಸಂವಿಧಾನ ಸಭೆಯಿಂದಲೇ ದೂರ ಉಳಿದುಬಿಡುತ್ತಿದ್ದರು. ಹೀಗೆ ಸಂವಿಧಾನ ಸಭೆಯ ಸದಸ್ಯರಾದ ಬಾಬಾಸಾಹೇಬ್ ನಂತರ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದರು. ಭಾರತದ ಬಹುತ್ವಕ್ಕೆ ತಕ್ಕಂತಹ ಸಂವಿಧಾನ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಈ ಕಾಂಗ್ರೆಸ್ ಹೊಂದಾಣಿಕೆ ಬಹಳ ಕಾಲ ಉಳಿಯಲಿಲ್ಲ. ಹಿಂದೂ ಕೋಡ್ ಬಿಲ್ ಸೋಲು, ಹಿಂದುಳಿದ ವರ್ಗಗಳ ಆಯೋಗ ರಚನೆಯಲ್ಲಿ ಆದ ವಿಳಂಬದ ವಿರುದ್ಧ ದನಿ ಎತ್ತಿ ಅಂಬೇಡ್ಕರರು ರಾಜೀನಾಮೆ ನೀಡಿ ಕಾಂಗ್ರೆಸ್ ಮಂತ್ರಿಮಂಡಲದಿಂದ ಹೊರಬಂದರು. 1952ರಲ್ಲಿ ನಡೆಯುತ್ತಿದ್ದ ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಗೆ AISCF ಕಟ್ಟಲು ಆರಂಭಿಸಿದರು. ಆದರೆ ಅದು ಬಹಳ ತಡವಾಗಿತ್ತು. ಚಿತ್ರೆ ಇದನ್ನು ಪಕ್ಷದ ಸಂಘಟನಾತ್ಮಕ ಸೋಲು ಎಂದೇ ಭಾವಿಸಿದ್ದಾರೆ. 1952ರ ಚುನಾವಣೆಯಲ್ಲಿ ಸ್ವತಃ ಅಂಬೇಡ್ಕರರೂ ಸೇರಿದಂತೆ AISCF ಮತ್ತೆ ನಿರಾಶೆಯನ್ನುಂಟು ಮಾಡಿತು. ಅಂಬೇಡ್ಕರರಿಗೆ ಸರಿಸಾಟಿಯೇ ಅಲ್ಲದ ವ್ಯಕ್ತಿಯೊಬ್ಬ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರ ಬೆಂಬಲದಿಂದ ಅವರನ್ನು ಸೋಲಿಸಿದ್ದನು.

ಈ ಪ್ರಮುಖ ಬೆಳವಣಿಗೆಯಿಂದಾಗಿ ಅಂಬೇಡ್ಕರರು ಪ್ರಮುಖ ತೀರ್ಮಾನಕ್ಕೆ ಬಂದರು. ಇಡೀ ದಲಿತ ಜಾತಿಗಳನ್ನು ಬೌದ್ಧ ಧರ್ಮದಡಿ ತಂದು ಒಂದುಗೂಡಿಸುವುದು ಹಾಗೂ ಜಾತಿಯಾಧಾರಿತ ರಾಜಕೀಯ ಪಕ್ಷವನ್ನು ವಿಸರ್ಜಿಸಿ ವರ್ಗಾಧಾರಿತ ’ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (RPI)’ ವನ್ನು ಸ್ಥಾಪಿಸುವುದು. ಈ ಮೂಲಕ ಅಂಬೇಡ್ಕರರು ಮತ್ತೆ ILP ಚುನಾವಣಾ ರಾಜಕಾರಣಕ್ಕೆ ಮರಳಲು ಬಯಸಿದ್ದರು. ದಲಿತರನ್ನು ಹಾಗೂ ದುಡಿಯುವ ಬಹುಜನರನ್ನು RPI ಪಕ್ಷದಡಿಯಲ್ಲಿ ಸಂಘಟಿಸಲು ಬಯಸಿದ್ದರು. ದುರಂತವೆಂದರೆ ಬಾಬಾಸಾಹೇಬರು ಅದಕ್ಕೂ ಮುಂಚೆ ಪರಿನಿಬ್ಬಾಣ ಹೊಂದಿದರು.

ಮಹಾರಾಷ್ಟ್ರ, ಉತ್ತರ ಕರ್ನಾಟಕ, ಹೈದರಾಬಾದ್ ಪ್ರಾಂತ್ಯ ಹಾಗೂ ಉತ್ತರಪ್ರದೇಶದಲ್ಲಿ RPI ಪಕ್ಷ ಉತ್ತಮ ಸಾಧನೆಯನ್ನೇ ಮಾಡಿತು. ಮಹಾರಾಷ್ಟ್ರದಲ್ಲಂತೂ ಪ್ರಮುಖ ಪಕ್ಷವಾಗಿ 1957ರ ಚುನಾವಣೆಯಲ್ಲಿ ಹೊರಹೊಮ್ಮಿತು. ಆದರೆ ದಲಿತ ನಾಯಕರೊಳಗೆ ಅಂಬೇಡ್ಕರ್‌ವಾದದ ಬಗೆಗಿನ ಬಿರುಕು ಮೂಡಿಸುವ ಗ್ರಹಿಕೆಗಳಿಂದಾಗಿ RPI ಇಬ್ಬಾಗವಾಯಿತು. ಒಂದು ಬಣ ಅಂಬೇಡ್ಕರರು ಸಾಂವಿಧಾನಿಕ ನಡೆಯನ್ನು ಮಾತ್ರ ಅನುಸರಿಸಲು ತಿಳಿಸಿದ್ದರೆಂದೂ ಮತ್ತೊಂದು ಬಣ ಬೀದಿ ಹೋರಾಟಗಳಲ್ಲಿ ನಂಬಿಕೆ ಇರಬೇಕೆಂದೂ ಅಂಬೇಡ್ಕರರ ಸಾಂದರ್ಭಿಕ ಹೇಳಿಕೆಗಳನ್ನು ಹಿಡಿದು ಸ್ವತಃ ಅಂಬೇಡ್ಕರರ ಆಲೋಚನೆಗಳನ್ನೇ ಪರಸ್ಪರ ಧಿಕ್ಕರಿಸಲು ಆರಂಭಿಸಿದರು. ನಂತರದಲ್ಲಿ ಇವರಿಬ್ಬರೂ ಕಾಂಗ್ರೆಸ್ ಹಾಗೂ ಪವಾರರ ನ್ಯಾಷನಲ್ ಕಾಂಗ್ರೆಸ್ ಪಾರ್ಟಿಯಲ್ಲಿ ಬೆರೆತು ಹೋದರು. ಈಗ ಉಳಿದಿರುವ ಅಠಾವಳೆಯವರು ಬಿಜೆಪಿಗೆ ಬೆಂಬಲ ನೀಡುತ್ತಾ ಮೋದಿಯವರನ್ನು ಹೊಗಳಿ ಕವನಗಳನ್ನು ಬರೆದು ಸಂಸತ್ತಿನಲ್ಲಿ ವಾಚಿಸುತ್ತಿದ್ದಾರೆ.

ಇಂತಹ ನಾಯಕರಿಗೆ ನೆನಪಿಸಬೇಕಾದ ವಿಷಯವೇನೆಂದರೆ, ಸ್ವತಃ ಅಂಬೇಡ್ಕರರು AISCF ಪ್ರಣಾಳಿಕೆಯಲ್ಲಿ ’ಯಾವುದೇ ಕಾರಣಕ್ಕೂ ಆರೆಸ್ಸೆಸ್ ಹಾಗೂ ಹಿಂದೂ ಮಹಾಸಭಾದಂತಹ ಪ್ರತಿಗಾಮಿ ಶಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು’ ಎಂದಿದ್ದರು. ’ಕಮ್ಯುನಿಸ್ಟರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು’ ಎಂದಿದ್ದರು. ಆದರೆ ರಾಮ್ ವಿಲಾಸ್ ಪಾಸ್ವಾನ್, ಶ್ರೀನಿವಾಸ್ ಪ್ರಸಾದ್, ಅಠಾವಳೆಯಂತಹ ನಾಯಕರು ಅದನ್ನೇ ಮಾಡಿದರು. ಬಿಜೆಪಿ ಆರೆಸ್ಸೆಸ್ ಸೃಷ್ಟಿಸಿರುವ ಕೂಸೇ ಆಗಿದೆ. ಅಷ್ಟೇ ಅಲ್ಲ ಅಂಬೇಡ್ಕರರು ಕಾಂಗ್ರೆಸ್ಸೇತರ ಪಕ್ಷಗಳೊಂದಿಗೆ ಹೊಂದಾಣಿಕೆ ಬಯಸಿದ್ದರು. ಆದರೆ ಬಹುತೇಕ ದಲಿತ ನಾಯಕರು ಬ್ರಾಹ್ಮಣ-ಬನಿಯಾ ರಾಜಕಾರಣ ಮಾಡುವ ಕಾಂಗ್ರೆಸ್ಸಿಗೆ ತಮ್ಮ ಶ್ರಮವೆಲ್ಲವನ್ನೂ ಧಾರೆಯೆರೆದರು. ನೆಹರೂ ಕುಟುಂಬದ ನಿಯತ್ತಿನ ಮನುಷ್ಯರಾದರು. 1974ರಲ್ಲಿ ಬಾಬು ಜಗಜೀವನ್ ರಾಮ್‌ರವರು ಕಾಂಗ್ರೆಸ್ ರಾಜಕಾರಣಕ್ಕೆ ಬೇಸತ್ತು ಅಂಬೇಡ್ಕರರನ್ನು ನೆನಪು ಮಾಡಿಕೊಂಡು ಕಾಂಗ್ರೆಸ್ ತೊರೆದಾಗಲೂ ದೇಶದ ದಲಿತ ನಾಯಕರಿಗೆ ಮುಂದಾಲೋಚನೆ ಮೂಡಲಿಲ್ಲ.

ದಾದಾಸಾಹೇಬ್ ಕಾನ್ಶಿರಾಮ್‌

ಈ ಎಲ್ಲಾ ಬೆಳವಣಿಗೆಯನ್ನು ಬಹಳ ಅಚ್ಚುಕಟ್ಟಾಗಿ ಗಮನಿಸಿ, ದಲಿತ ಚುನಾವಣಾ ರಾಜಕಾರಣದ ಇತಿಹಾಸವನ್ನೂ ಹಾಗೂ ಅದರ ದೌರ್ಬಲ್ಯವನ್ನೂ ಅಂದಾಜು ಮಾಡಿದ ದಾದಾಸಾಹೇಬ್ ಕಾನ್ಶಿರಾಮ್‌ರವರು ದಲಿತರ ಒಗ್ಗಟ್ಟನ್ನು ’ಬಹುಜನ’ ಹೆಸರಿನಲ್ಲಿ ಸರಿಯಾದ ದಿಕ್ಕಿನಲ್ಲಿಯೇ ಆರಂಭಿಸಿದರು. ’ಬಹುಜನ ಸಮಾಜ ಪಕ್ಷ (BSP)’ ಬರುವವರೆಗೆ ದೇಶದಲ್ಲಿ ಫುಲೆ ದಂಪತಿಗಳು, ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ಪೆರಿಯಾರ್, ನಾರಾಯಣ ಗುರು, ಮಖ್ಖಾ ಪಾಸಿ, ಬಿರ್ಸಾ ಮುಂಡಾ, ಉಡಾ ದೇವಿ, ಜಲ್ಖಾರಿ ಬಾಯಿ ಮುಂತಾದ ’ಬಹುಜನ ವಿಮೋಚಕರು’ ಪರಿಚಯವೇ ಇರಲಿಲ್ಲ. ಕೇವಲ ಇಪ್ಪತ್ತು ವರ್ಷಗಳಲ್ಲಿಯೇ BSP ಗದ್ದುಗೆಯನ್ನು ಏರಿತು. ಬಹುಜನರ ಹೆಸರಿನಲ್ಲಿ ಹೆಚ್ಚಾಗಿ ದಲಿತರನ್ನೇ ಸಂಘಟಿಸಿತಾದರೂ ಸೋಷಿಯಲ್ ಇಂಜಿನಿಯರಿಂಗ್
ಎಂದು ಬ್ರಾಹ್ಮಣರ ಸಖ್ಯವನ್ನೂ ಬಯಸಿತು.

2007ರಲ್ಲಿ ದೇಶದ ಮೊಟ್ಟಮೊದಲ ಅದರಲ್ಲೂ ದಲಿತ ಮಹಿಳಾ ಮುಖ್ಯಮಂತ್ರಿಯನ್ನು ನೀಡಿತು. ಕಾನ್ಶಿರಾಮ್‌ರವರು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ’ಬಿಜೆಪಿಯನ್ನು ದಲಿತರು ಏಣಿಯಾಗಿ ಬಳಸಿಕೊಳ್ಳುತ್ತೇವೆ’ ಎಂದಿದ್ದರು. ಆದರೆ ಈಗ ಮಾಯಾವತಿಯವರು BSPಯನ್ನು ಬಿಜೆಪಿಗೆ ಏಣಿಯಾಗಿಸಿದ್ದಾರೆ. ಬ್ರಾಹ್ಮಣರಿಗೆ ಮೀಸಲಾತಿ, ಸಿಎಎ ಹಾಗೂ 370 ವಿಧಿ ರದ್ಧತಿಯಲ್ಲಿ ಬಿಜೆಪಿಯ ಪರ ಮತ ಚಲಾಯಿಸಿದ್ದಾರೆ. ಅಷ್ಟೇ ಅಲ್ಲ ಮುಂಬರುವ ಚುನಾವಣೆಯಲ್ಲಿ ಪರಶುರಾಮ ಹಾಗೂ ರಾಮ ಇಬ್ಬರಿಗೂ BSP ಬ್ಯಾನರ್‌ಗಳಲ್ಲಿ ಸ್ಥಾನ ನೀಡಲಿದ್ದಾರೆ. ಬ್ರಾಹ್ಮಣರ ಸಮಾವೇಶ ಆಯೋಜಿಸುತ್ತಿದ್ದಾರೆ. ಸರ್ವಜನ ಸುಖಾಯವೆಂದು ಆನೆಯನ್ನು ಗಣೇಶನನ್ನಾಗಿ ಬಡ್ತಿ ನೀಡಿದ್ದಾರೆ. ಅಲ್ಲಿಗೆ ಕಾನ್ಶಿರಾಮ್ ಅವರ ದೇಶ ಆಳುವ ಕನಸು ನೆನೆಗುದಿಗೆ ಬಿದ್ದಿದೆ.

ಇದೆಲ್ಲವನ್ನೂ ಗಮನಿಸಿದಾಗ ಇನ್ನೊಂದಿಷ್ಟು ವರ್ಷಗಳು ಅಂಬೇಡ್ಕರರು ಬದುಕಿರಬೇಕಿತ್ತು ಎನಿಸುತ್ತದೆ. ಈ ದೇಶದಲ್ಲಿ ಸಮಾನತೆ, ಜಾತಿ ವಿನಾಶ ಬಯಸುವ ಮನಸ್ಸುಗಳೊಂದಿಗೆ ತಮ್ಮ ನಿಲುವನ್ನು ಪರಿಷ್ಕರಿಸಿಕೊಳ್ಳುತ್ತಿದ್ದರೆನಿಸುತ್ತದೆ. ಅಷ್ಟೇ ಅಲ್ಲ ಕಾರ್ಮಿಕರ, ಮಹಿಳೆಯರ ಪರವಾಗಿ ತಮ್ಮ ನಾಯಕತ್ವವನ್ನು ಧಾರೆಯೆರೆಯುತ್ತಿದ್ದರೆನಿಸುತ್ತದೆ. ಅವರ ಜೀವಿತ ಅವಧಿಯಲ್ಲಿಯೇ ಸಮಾಜವಾದಿಗಳ ಬಗ್ಗೆ ಅವರಿಗೆ ಒಲವಿತ್ತು. ಆ ಕಾರಣಕ್ಕಾಗಿ ಲೋಹಿಯಾರೊಂದಿಗೆ ಮಾತುಕತೆಗೆ ಮುಂದಾಗಿದ್ದರು. ಆದರೆ ಇಂದು ಲೋಹಿಯಾವಾದಿಗಳು ಲೋಹಿಯಾರನ್ನು ಮರೆತಾಗಿದೆ. ದಲಿತ ನಾಯಕರು ಅಂಬೇಡ್ಕರರನ್ನು ಮರೆತ ಹಾಗೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ದಲಿತ ರಾಜಕಾರಣದಲ್ಲಿ ಜಿಗ್ನೇಶ್ ಮೆವಾನಿ ಹಾಗೂ ಚಂದ್ರಶೇಖರ್ ಆಜಾದ್ ರಾವಣ್‌ರಂತಹ ಯುವ ಮುಂದಾಳುಗಳು ಕಾಣುತ್ತಿದ್ದಾರೆ. ರಾವಣ್ ಇತ್ತೀಚೆಗೆ ’ಆಜಾದ್ ಸಮಾಜ್ ಪಾರ್ಟಿ’ಯನ್ನು ಸ್ಥಾಪಿಸಿದ್ದಾರೆ. ಮುಂಬರುವ ಉತ್ತರಪ್ರದೇಶ ಚುನಾವಣೆಯಲ್ಲಿ ಸ್ಪಧೆಗಿಳಿಯಲಿದ್ದಾರೆ. ಫಲಿತಾಂಶ ಕಾದು ನೋಡಬೇಕಿದೆ. ಆದರೆ ಜಿಗ್ನೇಶ್ ಮೆವಾನಿಯವರ ಚಳವಳಿ ರಾಜಕಾರಣಕ್ಕೆ ಹೊಡೆತ ಬಿದ್ದಿರುವುದು ಖಾತ್ರಿಯಾಗಿದೆ.

ಇದರ ಜೊತೆಗೆ ಬಹುಮುಖ್ಯವಾಗಿ ದಲಿತರೊಳಗಿನ ಜಾತಿಗಳನ್ನು ಒಡೆದು ಓಟ್ ಬ್ಯಾಂಕ್ ಆಗಿಸಿಕೊಳ್ಳುವ ಮೇಲ್ಜಾತಿ ಪಕ್ಷಗಳ ಹುನ್ನಾರವೇನು ಹೊಸತಲ್ಲ. ಕಾಂಗ್ರೆಸ್ ಪೂನಾ ಒಪ್ಪಂದದ ನಂತರ ಹಾಗೂ ಬಾಬಾಸಾಹೇಬರ ಪರಿನಿಬ್ಬಾಣದ ನಂತರ ಮಾಡಿದ್ದು ಇದನ್ನೇ. 2014ರಿಂದ ಬಿಜೆಪಿಯ ಮೋದಿ-ಅಮಿತ್ ಶಾ ಜೋಡಿ ಮಾಡುತ್ತಿರುವುದು ಇದನ್ನೇ. ಕಳೆದ ಉತ್ತರ ಪ್ರದೇಶದ ಚುನಾವಣೆಯಲ್ಲಿ ದಲಿತರಲ್ಲಿನ ಅಸಮಧಾನವನ್ನು ಗುರುತಿಸಿ ಜಾಟವೇತರ ದಲಿತರಿಗೆ ಸ್ಥಾನಮಾನ ನೀಡಿ ಶೇ.24ರಷ್ಟು ದಲಿತ ಓಟುಗಳನ್ನು ತೆಕ್ಕೆಗೆ ಹಾಕಿಕೊಂಡಿತು. ಪಶ್ಚಿಮ ಬಂಗಾಲ ಹಾಗೂ ಬಿಹಾರದಲ್ಲಿಯೂ ಇದೇ ತಂತ್ರವನ್ನು ಬಳಸಿ ದಲಿತರನ್ನು ಛಿದ್ರಗೊಳಿಸಿತು. ಕರ್ನಾಟಕದಲ್ಲಿ ಒಳಮೀಸಲಾತಿಯನ್ನು ಬಳಸಿಕೊಂಡು ಬಲಗೈ-ಎಡಗೈಯವರನ್ನು ಒಡೆದು ತನ್ನ ಓಟುಗಳನ್ನು ದಲಿತರಲ್ಲಿ ಹೆಚ್ಚಿಸಿಕೊಂಡಿತು. ಇದು ಇಡೀ ದೇಶದ ವಿದ್ಯಮಾನವಾಗುವ ಹೊಸ್ತಿಲಲ್ಲಿದೆ. ಹಾಗಾಗಿ ದಲಿತರಿಗೂ ಜಾತಿವಿನಾಶ ಬಹಳ ಮುಖ್ಯವಾಗಿದೆ.

ದಲಿತ ರಾಜಕಾರಣ ಇಂತಹ ಬಿಕ್ಕಟ್ಟಿನ ಸ್ಥಿತಿಯಲ್ಲಿ ಸ್ಥಗಿತವಾಗಿರುವಾಗ ಇತಿಹಾಸವು ’ದಲಿತರು ಒಂಟಿ ರಾಜಕಾರಣ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದೆ. ವಿಸ್ತರಣಾ ರಾಜಕಾರಣವೇ ದಾರಿ ಎಂದೂ ಕೂಗಿ ಸಾರುತ್ತಿದೆ. ಹಾಗಿದ್ದರೆ ದಲಿತರು ಯಾರೊಂದಿಗೆ ಚುನಾವಣಾ ರಾಜಕಾರಣವನ್ನು ವಿಸ್ತರಿಸಿಕೊಳ್ಳಬಹುದು? ಬ್ರಾಹ್ಮಣ-ಬನಿಯಾ ನವರೂಪವಾಗಿರುವ ಬ್ರಾಹ್ಮಣ-ಬಂಡವಾಳಶಾಹಿ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿಯನ್ನೋ? ಬ್ರಾಹ್ಮಣ-ಬಂಡವಾಳಶಾಹಿ ವಿರೋಧಿಗಳನ್ನೋ?

ಮಾಯಾವತಿ

ಯೋಚಿಸುವ ಮಾತೇ ಇಲ್ಲ. ದಲಿತ ರಾಜಕಾರಣ ಬ್ರಾಹ್ಮಣ-ಬಂಡವಾಳಶಾಹಿ ವಿರೋಧಿ ಬಣವನ್ನೇ ಸೇರಬೇಕು. ಸ್ವತಃ ಅಂಬೇಡ್ಕರರೇ ದುಡಿಯುವ ಜನರ ಶತ್ರು ಬ್ರಾಹ್ಮಣ-ಬಂಡವಾಳಶಾಹಿ ಎಂದಿದ್ದರು. ಇಂದು ಅದು ಅಕ್ಷರಶಃ ಕಣ್ಣಿಗೆ ರಾಚುತ್ತಿದೆ. ಹೀಗಿರುವಾಗ ಎಲ್ಲರೊಂದಿಗೂ ಹೊಂದಾಣಿಕೆ ಮಾಡಿಕೊಂಡ ದಲಿತ ರಾಜಕಾರಣ ಕಮ್ಯುನಿಸ್ಟರೊಂದಿಗೆ ಏಕೆ ಹೊಂದಾಣಿಕೆ ಮಾಡಿಕೊಳ್ಳಬಾರದು? ಒಂದು ಪ್ರಯತ್ನ ಖಂಡಿತವಾಗಿಯೂ ಆಗಬೇಕಿದೆ. ಏಕೆಂದರೆ, ಇಂದು ದಲಿತರಲ್ಲಿಯೇ ಜಾತಿಪ್ರಜ್ಞೆ ಮುನ್ನೆಲೆಗೆ ಬಂದು ವಿರೋಧಿ ಪಾಳಯವನ್ನು ಸೇರುತ್ತಿರುವಾಗ ದಲಿತ ಪಕ್ಷ ಏಕಾಂಗಿಯಾಗಿ ಚಲಿಸಲು ಸಾಧ್ಯವೇ ಇಲ್ಲ. ಮಾನವಪರ ದಲಿತೇತರರ ಬೆಂಬಲ ಬೇಕಾಗಿಯೇ ಇದೆ. ಆ ದಲಿತೇತರರು ಜಾತಿವಿನಾಶ, ಸಮಾನತೆ ಬಗ್ಗೆ ದೃಢ ವಿಶ್ವಾಸವಿಟ್ಟುಕೊಂಡವರಾಗಿರಬೇಕಿದೆ. ಇಂದು ಜಾತಿವಿನಾಶ, ಸಮಾನತೆ ಬಗ್ಗೆ ನಂಬಿಕೆ ಇಟ್ಟುಕೊಂಡವರಿದ್ದರೆ ಅವರು ಕಮ್ಯುನಿಸ್ಟರಾಗಿದ್ದಾರೆ. ಬಹಳ ತಡವಾಗಿ ಅವರಿಗೆ ಅಂಬೇಡ್ಕರರು ಅರ್ಥವಾಗಿದ್ದಾರೆ. ಹಾಗಾಗಿ ದಲಿತರಿಗೆ ಉಳಿದಿರುವ ಏಕೈಕ ಚುನಾವಣಾ ಸಂಗಾತಿಗಳೆಂದರೆ ಕಮ್ಯುನಿಸ್ಟರಾಗಿದ್ದಾರೆ. ಕಮ್ಯುನಿಸ್ಟರಿಗೆ ಉಳಿದಿರುವ ಏಕೈಕ ಸಂಗಾತಿಗಳೆಂದರೆ ದಲಿತರಾಗಿದ್ದಾರೆ. ಜಾತಿ-ವರ್ಗ ರಾಜಕಾರಣವೆರಡೂ ಪ್ರತ್ಯೇಕವಾಗಿ ಸೋತು ಸುಣ್ಣವಾಗಿದೆ. ಅವೆರಡು ಒಗ್ಗಟ್ಟಾಗಿ ಗೆಲ್ಲಬೇಕಿದೆ.

ಫ್ಯಾಸಿಸ್ಟ್ ಶಕ್ತಿಗಳು ಬ್ರಾಹ್ಮಣಶಾಹಿ-ಬಂಡವಾಳಶಾಹಿ ಎಂಬ ಹತಾರಗಳೊಂದಿಗೆ ದೇಶವನ್ನೇ ಛಿದ್ರಗೊಳಿಸುತ್ತಿರುವಾಗ ದಲಿತರು ಕಹಿ ನೆನಪುಗಳನ್ನು ಬಿಟ್ಟು ಕಮ್ಯುನಿಸ್ಟರಿಗೆ ಸಹಕರಿಸುವರೇ ಹಾಗೂ ಸ್ವತಃ ಅಪವರ್ಗೀಕರಣಗೊಳ್ಳುವರೇ? ಕಮ್ಯುನಿಸ್ಟರು ಅಬ್ರಾಹ್ಮಣ್ಯೀಕರಣಗೊಂಡು ದಲಿತ ನಾಯಕತ್ವವನ್ನು ಒಪ್ಪಿಕೊಳ್ಳುವರೇ? ಇಬ್ಬರೂ ’ಜಾತಿ-ವರ್ಗ-ಲಿಂಗ ತಾರತಮ್ಯ ರಹಿತ’ ಸಮಾಜಕ್ಕಾಗಿ ಜಂಟಿಯಾಗಿ ದನಿ ಎತ್ತುವರೇ?

ಕೊನೆಯದಾಗಿ ದಲಿತ ರಾಜಕಾರಣ ವಿಮೋಚನಾ ದಾರಿಯಲ್ಲಿ ಸಾಗಬೇಕೆಂದರೆ ಕಾರ್ಮಿಕರು, ಮಹಿಳೆಯರ ಪರವಾಗಿಯೂ ದನಿ ಎತ್ತಬೇಕಿದೆ. ಇಲ್ಲಿಯವರೆಗೆ ಮಾಡಿಕೊಂಡು ಬಂದ ಜಾತಿ ಅಸ್ಮಿತೆಯ ರಾಜಕಾರಣ ದಲಿತರೊಳಗಿನ ಜಾತಿಗಳನ್ನೇ ಎದುರುಬದುರಾಗಿಸಿದೆ. ಈ ಕಾಲಘಟ್ಟದಲ್ಲಿಯಾದರೂ ದಲಿತರು ಅಂಬೇಡ್ಕರರ ಸುಪ್ರಸಿದ್ಧ ಒಳನೋಟದಂತೆ ’ಜಾತಿ ಎಂಬುದು ಆವೃತವಾದ ವರ್ಗ’ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಜಾತಿ ಶೋಷಣೆ, ವರ್ಗ ಶೋಷಣೆ ಹಾಗೂ ಲಿಂಗ ಶೋಷಣೆ ಈ ಮೂರರ ವಿರುದ್ಧವೂ ಹೋರಾಟ ರೂಪಿಸಬೇಕಿದೆ. ಇದಾಗಬೇಕೆಂದರೆ ಅವಕಾಶವಾದಿ ಹಾಗೂ ನಾಯಕಾರಾಧನೆ ರಾಜಕಾರಣದಿಂದ ದಲಿತ ಚಳವಳಿ ಬಿಡುಗಡೆ ಹೊಂದಬೇಕಿದೆ. ಹೊಂದುವುದೇ? ಹೊಂದಲೇಬೇಕು.

  • ‘ಸಾಕ್ಯ’ ಸಮಗಾರ

ಇದನ್ನೂ ಓದಿ: ಭೀಮಾ ಕೊರೆಗಾಂವ್‌‌: ಪ್ರೊ. ಹನಿ ಬಾಬು ಆರೋಗ್ಯ ವರದಿ ಸಲ್ಲಿಸುವಂತೆ ಹೈಕೋರ್ಟ್‌ ನಿರ್ದೇಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...