Homeಮುಖಪುಟಅಶ್ವಯುಗ: ಪೆಗಸಸ್, ಕುದುರೆ ಮತ್ತು ಕುದುರೆ ವ್ಯಾಪಾರ

ಅಶ್ವಯುಗ: ಪೆಗಸಸ್, ಕುದುರೆ ಮತ್ತು ಕುದುರೆ ವ್ಯಾಪಾರ

- Advertisement -
- Advertisement -

ಇಕಾನಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (Economist Intelligence Unit- EIU) ಎಂಬ ಅಂತಾರಾಷ್ಟ್ರೀಯ ಸಂಸ್ಥೆ ಪ್ರತಿ ವರ್ಷವೂ ಎಲ್ಲಾ ದೇಶಗಳ ’ಪ್ರಜಾಪ್ರಭುತ್ವ ಸೂಚ್ಯಾಂಕ’ವನ್ನು ಪ್ರಕಟಿಸುತ್ತದೆ. ಆ ವರದಿಯು 2020ಕ್ಕೆ ಸಂಬಂಧಿಸಿದಂತೆ ಭಾರತದ ಸೂಚ್ಯಾಂಕವನ್ನು ಎರಡು ಸ್ಥಾನ ಕೆಳಗೆ ಇಳಿಸಿದೆ; ಮೊದಲು 51ನೆಯ ಸ್ಥಾನದಲ್ಲಿದ್ದ ಭಾರತವು ಕಳೆದ ವರ್ಷ 53ನೆಯ ಸ್ಥಾನಕ್ಕೆ ಇಳಿಯಿತು. ಭಾರತದಲ್ಲಿ ಈಗ ಪ್ರಜಾಪ್ರಭುತ್ವ ವ್ಯವಸ್ಥೆಯು ಆಕ್ರಮಣಕ್ಕೆ ಒಳಗಾಗಿದೆ ಎಂಬುದನ್ನು ತಿಳಿಯಲು ವಿಶೇಷ ’ಅಶ್ವಜ್ಞಾನ’ವೇನೂ ಬೇಕಿಲ್ಲ. ದಿನನಿತ್ಯದ ಅಗತ್ಯಗಳನ್ನು ಪೂರೈಸಲು ಸದಾ ಹೋರಾಡಬೇಕಾಗಿರುವ ಭಾರತೀಯ ಪ್ರಜೆಗಳಿಗೆ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯುತ್ತಿದೆ ಎಂಬುದು ’ಗ್ರೀಕ್ ಅಥವಾ ಲ್ಯಾಟಿನ್’ ಆಗಿ ಉಳಿದಿಲ್ಲ; ಅದೊಂದು ಹೊಸ ಸುದ್ದಿಯೇ ಅಲ್ಲ; ಮತ್ತು ಎಂತಹ ಕೆಟ್ಟ ಕಾಲದಲ್ಲಿ ನಾವು ಬದುಕುತ್ತಿದ್ದೇವೆ ಎಂಬುದನ್ನು ಅರಿಯಲು ಆರ್ಥಿಕ ಸಂಸ್ಥೆಯೊಂದರ ಸಮೀಕ್ಷೆಯೂ ಅವಶ್ಯಕವಲ್ಲ. ಆದರೂ ಹೊಸದಾಗಿ ಮೂಡುತ್ತಿರುವ ’ಗ್ರೀಕ್-ಲ್ಯಾಟಿನ್’ ಸಂಬಂಧ ನಮ್ಮ ದೈನಿಕ ವಾಸ್ತವವನ್ನು ಒಂದು ಕುತೂಹಲಕಾರಿ ಸುದ್ದಿಯಾಗಿ ಮಾರ್ಪಡಿಸುತ್ತಿದೆ. ಈ ಸುದ್ದಿಯು ಈಗ ಸಂಸತ್ತಿನಲ್ಲಿ ನಡೆಯುತ್ತಿರುವ ’ಕುದುರೆ ಚೇಷ್ಟೆ,’ ಎಂದರೆ ಕೂಗು-ಗದ್ದಲಗಳಿಗೆ ಸಂಬಂಧಿಸಿದುದಲ್ಲ, ಅಥವಾ ವಿಧಾನಸಭೆಗಳಲ್ಲಿ ನಡೆಯುವ ಕುದುರೆ-ವ್ಯಾಪಾರದ ಬಗ್ಗೆಯೂ ಅಲ್ಲ. ಈ ಸುದ್ದಿ ಪೌರಾಣಿಕ-ಚಾರಿತ್ರಿಕ ಕುದುರೆಗಳಿಗೆ ಸಂಬಂಧಿಸಿದ್ದು.

ದೇವತೆಗಳು ಮಾನವರಿಗಿಂತ ಮೊದಲು ಸೃಷ್ಟಿಯಾದವರೆಂದು ಮತ್ತು ಅವರಿಗೆ ಅಲೌಕಿಕ ರೂಪಗಳು ಹಾಗೂ ಗುಣಗಳು ಇದ್ದುವು ಎಂದು ಪ್ರಾಚೀನ ನಾಗರಿಕತೆಗಳು ನಂಬಿದ್ದರೂ, ನಿಜವಾಗಿ ದೇವತೆಗಳು ಮಾನವನ ಕಲ್ಪನಾಶಕ್ತಿಯ ಉತ್ಪನ್ನಗಳು. ಆ ದೇವತೆಗಳು ವಿಶ್ವಾತ್ಮಕ ಸಾಹಸಕೃತ್ಯಗಳನ್ನು ಮಾಡುವಂತಹವರಾಗಿದ್ದರು, ಹಾಗೆಯೇ ಭಯಂಕರ ತಪ್ಪುಗಳನ್ನು ಮಾಡಬಲ್ಲವರೂ ಆಗಿದ್ದರು. ಪ್ರಾಚೀನ ಗ್ರೀಕರು ಅವರ ದೇವ-ದೇವತೆಗಳನ್ನು ತಮ್ಮ ಹಾಗೆಯೇ ಇರುವವರೆಂದು ಕಲ್ಪಿಸಿಕೊಂಡಿದ್ದರು; ಆದುದರಿಂದ ಅಂತಹ ದೇವ-ದೇವತೆಗಳಲ್ಲಿ ಅನೇಕ ದೋಷಗಳು ಹಾಗೂ ಇತಿಮಿತಿಗಳು ಇದ್ದುವು. ಗ್ರೀಕ್ ದೇವತೆಗಳಲ್ಲಿ ಒಬ್ಬನಾದ ಸಮುದ್ರದೇವ ಪೊಸೈಡನ್ ಒಲಿಂಪಸ್ ಪರ್ವತದ ಮೇಲೆ ವಾಸಿಸುತ್ತಿದ್ದನು. ಅವನನ್ನು ಸಂಪೂರ್ಣವಾಗಿ ಶ್ವೇತವರ್ಣೀಯನೆಂದು ಮತ್ತು ತುಂಬಾ ಎಚ್ಚರಿಕೆಯಿಂದ ಕಾಪಾಡಿಕೊಂಡ ಬಿಳಿಯ ಗಡ್ಡ ಅವನಿಗಿತ್ತೆಂದು ಗ್ರೀಕ್ ಪುರಾಣಗಳು ಚಿತ್ರಿಸುತ್ತವೆ. ಆ ಪುರಾಣಗಳು ದಾಖಲಿಸುವಂತೆ ಪೊಸೈಡನ್ ಎರಡು ಕುದುರೆಗಳಿಗೆ ತಂದೆಯಾಗಿದ್ದನು – ಅವನ ಮತ್ತು ಡಿಮೀಟರ್ ಎಂಬ ಸ್ತ್ರೀಯ ಅಸ್ವಾಭಾವಿಕ ಸಂಬಂಧದಿಂದ ಜನಿಸಿದ, ತುಂಬಾ ವೇಗಶಾಲಿ ಹಾಗೂ ರೌದ್ರವಾದ ಅರೇಯನ್ ಎಂಬ ಕುದುರೆ; ಮತ್ತು ತಲೆಕೂದಲುಗಳಲ್ಲಿ ಹಾವುಗಳು ತುಂಬಿದ್ದ ಮತ್ತು ರೆಕ್ಕೆಗಳಿದ್ದ ಮಿಡೂಸ ಎಂಬ ರಾಕ್ಷಸಿಯಿಂದ ಜನಿಸಿದ ಪೆಗಸಸ್ ಎಂಬ ರೆಕ್ಕೆಗಳುಳ್ಳ ಕುದುರೆ. ಈ ಪೆಗಸಸ್ ಕುದುರೆಗೆ ಕುತ್ತಿಗೆಯ ಮೇಲೆ ಅದರ ತಂದೆಯ ಬಿಳಿ ಗಡ್ಡದಂತಿದ್ದ ಉದ್ದವಾದ ಕೂದಲಿತ್ತು, ಮತ್ತು ತಾಯಿಗಿದ್ದಂತಹ ರೆಕ್ಕೆಗಳಿದ್ದುವು. ಅನೇಕ ಸಹಸ್ರಮಾನಗಳ ಅವಧಿಯಲ್ಲಿ ಜನರ ನೆನಪಿನಿಂದ ಮಾಯವಾಗಿದ್ದ ಈ ಪೆಗಸಸ್ ಈಗ ಮತ್ತೆ ಸುದ್ದಿಯಲ್ಲಿದೆ – ಗ್ರೀಸ್ ರಾಷ್ಟ್ರದಿಂದ ಸಾವಿರಾರು ಮೈಲಿ ದೂರದಲ್ಲಿರುವ ಭಾರತದಲ್ಲಿ.

ಲ್ಯಾಟಿನ್ ಭಾಷೆಯಲ್ಲಿ ಕುದುರೆಗೆ ’ಎಕ್ವಸ್’ ಎಂಬ ಹೆಸರಿದೆ; ಮತ್ತು ಈ ಹೆಸರನ್ನು ಕತ್ತೆಗಳು, ಜ಼ೀಬ್ರಾಗಳು ಮತ್ತು ಕುದುರೆಯನ್ನು ಹೋಲುವ ಎಲ್ಲಾ ಪ್ರಾಣಿಗಳಿಗೂ ಅನ್ವಯಿಸಲಾಗುತ್ತಿತ್ತು. ಮೇಲೆ ಹೇಳಿದ, ಗ್ರೀಕ್ ಪುರಾಣಗಳಲ್ಲಿ ಬರುವ ಅತಿ ಭಯಂಕರ ಕುದುರೆಗಳಿಗೆ ವಿರುದ್ಧವಾಗಿ, ಲ್ಯಾಟಿನ್ ಭಾಷೆಯ ’ಎಕ್ವಸ್’ ಎಂಬ ಪ್ರಾಣಿ ಸಂಪೂರ್ಣವಾಗಿ ಸಸ್ಯಾಹಾರಿಯಾಗಿತ್ತು ಮತ್ತು ಆ ಜಾತಿಯ ಎಲ್ಲಾ ಸ್ತ್ರೀ ಪ್ರಾಣಿಗಳು ಒಂದು ಗಂಡು ಕುದುರೆಯ ಯಜಮಾನಿಕೆಯನ್ನು ಒಪ್ಪಿಕೊಳ್ಳುತ್ತಿದ್ದುವು. ಕುದುರೆ ವಂಶಕ್ಕೆ ಸೇರಿದ ಅನೇಕ ತಳಿಗಳಲ್ಲಿ ಕೆಲವನ್ನಾದರೂ ಮನುಷ್ಯರು ಪಳಗಿಸಿದರು ಹಾಗೂ ಕುದುರೆಗಳನ್ನು ಪಳಗಿಸುವ ಈ ಕಾರ್ಯ ಉಕ್ರೇನ್ ಮತ್ತು ಕಜ಼ಕಿಸ್ಥಾನ್‌ಗಳಲ್ಲಿ ಕ್ರಿ. ಪೂ. 4000 ವರ್ಷಗಳ ಹಿಂದೆ ಪ್ರಾರಂಭವಾಯಿತು. ಮುಂದಿನ ಎರಡು ಸಾವಿರ ವರ್ಷಗಳ ಅವಧಿಯಲ್ಲಿ ಕುದುರೆಗಳನ್ನು ಪಳಗಿಸುವುದು ಮಾನವ ಬದುಕಿನ ಒಂದು ಮುಖ್ಯ ಭಾಗವೇ ಆಗಿತ್ತು.

ಪ್ರಾಕ್ತನ ಶಾಸ್ತ್ರಜ್ಞರು ಸಿನ್ಟಾಷ್ಟ ಮತ್ತು ಪೆಟ್ರೋವ್ಕ ಪ್ರದೇಶಗಳಲ್ಲಿ ಮಾಡಿದ ಶೋಧಗಳ ಪ್ರಕಾರ ಸುಮಾರು ಕ್ರಿ. ಪೂ. 2000ದ ಸುತ್ತಮುತ್ತ ಕುದುರೆಗಳನ್ನು ಹೂಳಿದ ಗೋರಿಗಳನ್ನು ಬೆಳಕಿಗೆ ತಂದಿವೆ. ಎಲ್ಲಾ ಬಗೆಯ ಕುದುರೆ ತಳಿಗಳೂ ಮೂಲತಃ ’ಹ್ಯಾಪ್ಲೊಟೈಪ್’ ಎಂಬ ಒಂದೇ ಒಂದು ತಳಿಯಿಂದ ಜನಿಸಿರುವ ಸಾಧ್ಯತೆಯನ್ನು ವಂಶಾವಳಿ ಸಂಶೋಧನೆಯು ದಾಖಲಿಸುತ್ತದೆ. ನಿಸ್ಸಂದೇಹವಾಗಿ, ಈ ಎಲ್ಲಾ ಬಗೆಯ ಮಾಹಿತಿಯೂ ಕೋವಿಡ್ ಸಾಂಕ್ರಾಮಿಕ, ನಿರುದ್ಯೋಗ, ಗಗನಕ್ಕೇರಿದ ಬೆಲೆಗಳು, ವೈಯಕ್ತಿಕ ಅಸುರಕ್ಷತೆ ಮತ್ತು ಜನತಂತ್ರದ ಸಂಸ್ಥೆಗಳ ಕುಸಿತ ಹಾಗೂ ಸಾಧ್ಯವಿರುವ ಎಲ್ಲಾ ದಿಕ್ಕುಗಳಿಂದಲೂ ಬರುತ್ತಿರುವ ಬೆದರಿಕೆಗಳು ಇತ್ಯಾದಿಗಳ ವಿರುದ್ಧ ಹೋರಾಡುತ್ತಿರುವ ಇಂದಿನ ಸಮಾಜಕ್ಕೆ ಅಪ್ರಸ್ತುತವೆಂದು ತೋರಬಹುದು. ಆದರೆ, ಇಸ್ರೇಲ್‌ನಲ್ಲಿ ನೋಂದಣಿಯಾಗಿರುವ ಮತ್ತು ಓಮ್ರಿ ಲವಿ, ಶಲೇವ್ ಹುಲಿಒ ಮತ್ತು ನಿವ್ ಕಾರ್ಮಿ ಎಂಬುವವರ ಒಡೆತನದಲ್ಲಿರುವ, ಎನ್‌ಎಸ್‌ಒ ಗ್ರೂಪ್ (NSO Group) ಎಂಬ ಸಂಸ್ಥೆಯಿಂದ ಮಾರಾಟ ಮಾಡಲ್ಪಡುವ, ಮತ್ತು ’ಸರಕಾರಗಳಿಗೆ ಮಾತ್ರ’ ಮಾರಲ್ಪಡುವ ಹಾನಿಕಾರಕ ಸ್ಪೈವೇರ್ ’ಪೆಗಸಸ್’ ಹೆಸರು ಮತ್ತೆ ಸುದ್ದಿಯಾಗಿದೆ, ಮತ್ತು ಈ ಸ್ಪೈವೇರ್ ಟಿ.ವಿ. ವಾರ್ತಾವಾಹಿನಿಗಳ ಕೊಠಡಿಗಳನ್ನು, ಮುದ್ರಣ ಮಾಧ್ಯಮಗಳನ್ನು, ಮತ್ತು ಭಾರತೀಯ ಕುಟುಂಬಗಳ ಡ್ರಾಯಿಂಗ್ ರೂಮ್‌ಗಳನ್ನು ಆಕ್ರಮಿಸಿಕೊಂಡಿದೆ. ಇನ್ನೂ ವಿಶೇಷವೆಂದರೆ, “ಪಾಶ್ಚಾತ್ಯ-ಮಾರ್ಕ್ಸಿಸ್ಟ್-ದೇಶದ್ರೋಹಿ” ಇತಿಹಾಸಜ್ಞರ ವಿರುದ್ಧ ಆರ್‌ಎಸ್‌ಎಸ್ ಇತಿಹಾಸಜ್ಞರು ಮಾಡಿರುವ, ಹಿಂದೆಂದೂ ಕಾಣದಷ್ಟು ಆಕ್ರಾಮಕ ದಾಳಿ ಈ ’ಕುದುರೆ’ಯನ್ನು ಮತ್ತೆ ವೆಬಿನಾರ್‌ಗಳ ಹಾಗೂ ಸುಳ್ಳುಸುದ್ದಿಗಳ ಪ್ರವಾಹವನ್ನೇ ಹರಿಸುವ ವಾಟ್ಸ್‌ಆಪ್ ಗುಂಪುಗಳ ಕೇಂದ್ರಕ್ಕೆ ತಂದು ಕೂರಿಸಿದೆ.

ವರದಿಗಳನ್ನು ನಂಬಬಹುದಾದರೆ, ಯಾವಾಗ ಕರ್ನಾಟಕದಲ್ಲಿ ಪ್ರಜಾತಾಂತ್ರಿಕವಾಗಿ ಚುನಾಯಿಸಲ್ಪಟ್ಟ ಸರಕಾರವನ್ನು ಬೀಳಿಸಲು ’ಆಪರೇಶನ್ ಕಮಲ’ ಎಂಬ ಹೆಸರಿನ ಕುದುರೆ ವ್ಯಾಪಾರದ ಅವ್ಯಾಹತ ಕಾರ್ಯಕ್ರಮವು ನಡೆಯಿತೋ ಆವಾಗಲೇ ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪರ್ಸನಲ್ ಸೆಕ್ರೆಟರಿಗಳು ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಆಪ್ತರು, ಇವರುಗಳ ದೂರವಾಣಿ ಸಂಖ್ಯೆಗಳು ಪೆಗಸಸ್ ಸಂಸ್ಥೆಗೆ ಕಳಿಸಲ್ಪಟ್ಟಿದ್ದುವು – ರಾಜಕೀಯ ಪ್ರಮುಖ ಸ್ಥಾನಗಳನ್ನು ಮತ್ತು ಸ್ಥಿರತೆಯನ್ನು ನಾಶಮಾಡಲು. ರೆಕ್ಕೆಗಳುಳ್ಳ ಕುದುರೆಯ ಈ ಆಧುನಿಕ ಅವತಾರವನ್ನು ಕೇವಲ ’ನಾಮಧಾರಿ’ಗಳ ಮೇಲೆ ಮಾತ್ರವಲ್ಲದೆ ’ಕಾಮ್‌ಧಾರಿ’ಗಳ ಮೇಲೂ ಪ್ರಯೋಗಿಸಲಾಗಿತ್ತು ಮತ್ತು ಭಾರತೀಯ ಸಂವಿಧಾನವು ಅಧಿಕಾರದ ಮೂರು ’ರೆಕ್ಕೆ’ಗಳನ್ನು ನಮಗೆ ದಯಪಾಲಿಸಿರುವುದರಿಂದ, ಕಾರ್ಯಾಂಗ-ಶಾಸಕಾಂಗ-ನ್ಯಾಯಾಂಗ ಈ ಮೂರೂ ಕ್ಷೇತ್ರಗಳಲ್ಲಿ ಬೇಹುಗಾರಿಕೆಯನ್ನು ನಡೆಸಲು ಮೇಲೆ ಹೇಳಿದ ಎರಡು ’ರೆಕ್ಕೆ’ಗಳ ಕುದುರೆಯನ್ನು ಕೋರಲಾಗಿತ್ತು. ನಮ್ಮ ಸಂವಿಧಾನಕ್ಕೆ ಸಂಪೂರ್ಣ ಬದ್ಧವಾಗಿಯೇ ಈ ಕಾರ್ಯಕ್ರಮವು ಇತ್ತು, ಅಲ್ಲವೆ!

ಈಗ ಗ್ರೀಕ್ ಕುದುರೆಗಳಿಂದ ಲ್ಯಾಟಿನ್ ಕುದುರೆಗಳಿಗೆ ಬಂದರೆ, ನಾವು ಒಪ್ಪಿಕೊಳ್ಳಲೇಬೇಕಾದ ಸಂಗತಿ ಒಂದಿದೆ. ಕುದುರೆಗಳು ಹೊರದೇಶಗಳಿಂದ ಭಾರತಕ್ಕೆ ಬಂದವೆ ಮತ್ತು ಬರುವಾಗ ತಮ್ಮೊಡನೆ ಒಂದು ಹೊಸ ಭಾಷೆ, ಭಿನ್ನ ಮೌಖಿಕ ಕಾವ್ಯ ಮತ್ತು ಭಿನ್ನ ಸಂಸ್ಕೃತಿಗಳನ್ನು ತಮ್ಮೊಡನೆ ಇಲ್ಲಿಗೆ ತಂದವೆ? ಅಥವಾ, ಭಾರತದಿಂದಲೇ ಹೊರಗೆ ಓಡಿ, ಇಡೀ ’ಹಳೆಯ ವಿಶ್ವ’ದಲ್ಲಿ ತಮ್ಮ ಯಜಮಾನಿಕೆಯನ್ನು ಸ್ಥಾಪಿಸಿ, ತಮ್ಮ ಆರ್ಯ ಒಡೆಯರ ಭಾಷೆಯನ್ನು ಪ್ರಸರಿಸಿದುವೆ? ಇಡೀ ಭಾರತೀಯ ಇತಿಹಾಸದಲ್ಲಿ ಈ ಪ್ರಶ್ನೆ ಇಂದು ಎಂದಿಲ್ಲದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇಲ್ಲಿಯವರೆಗೆ ನಡೆದಿರುವ ಸಂಶೋಧನೆಯೆಲ್ಲವೂ ’ಆರ್ಯರು ಭಾರತದ ಮೂಲನಿವಾಸಿಗಳು’ ಎಂಬ ಕಲ್ಪನೆಯ ವಿರುದ್ಧವೇ ಇವೆ. ಆದರೆ, ಅಕಸ್ಮಾತ್ತಾಗಿ ದೊರಕಿರುವ ಹರಪ್ಪಾ ಸಂಸ್ಕೃತಿಯ ಕಾಲಕ್ಕೆ ಸೇರಿದ ಕುದುರೆಯ ಹಲ್ಲೊಂದು, ಸಂಸ್ಕೃತ ಭಾಷೆಯ ಉಗಮಕ್ಕೆ ಅಂತಾರಾಷ್ಟ್ರೀಯ ಸಂಶೋಧಕರು, ಭಾಷಾಶಾಸ್ತ್ರಜ್ಞರು, ಪ್ರಾಕ್ತನ ಶಾಸ್ತ್ರಜ್ಞರು ಮತ್ತು ಇತಿಹಾಸಜ್ಞರು ಕೊಟ್ಟಿರುವ ಕಾಲಕ್ಕಿಂತ ಆ ಉಗಮವನ್ನು ತುಂಬಾ ಹಿಂದಕ್ಕೆ ಒಯ್ಯುತ್ತದೆ.

PC : Telegraph India

ಬಲಪಂಥೀಯ ಇತಿಹಾಸಶಾಸ್ತ್ರವು ಸರಸ್ವತಿ-ಸಿಂಧು ನದಿಗಳ ಸಂಸ್ಕೃತಿಯೇ ವೇದಜ್ಞಾನದ ತೊಟ್ಟಿಲು ಎಂಬುದನ್ನು ಸ್ಥಾಪಿಸಲು ತುಂಬಾ ಆಸಕ್ತಿಯನ್ನು ಹೊಂದಿದೆ. ಈ ಒಂದು ವಿಚಾರವನ್ನು ತಾರ್ಕಿಕವಾಗಿ ಸರ್ವಸಮ್ಮತವಾಗಿ ಮಂಡಿಸಲು ಸಾಧ್ಯವಾದರೆ ’ಹಿಂದೂ ರಾಷ್ಟ್ರ’ಕ್ಕೆ ಸಂಬಂಧಿಸಿದಂತೆ ’ಪರಕೀಯರು-ಸ್ಥಳೀಯರು’ ಎಂಬ ಪ್ರಶ್ನೆಯನ್ನು ತುಂಬಾ ಸುಲಭವಾಗಿ, ಬೆಣ್ಣೆಮುದ್ದೆಯನ್ನು ಚಾಕುವಿನಿಂದ ಸುಲಭವಾಗಿ ಕುಯ್ಯುವಷ್ಟು ಬಗೆಹರಿಸಬಹುದು ಎಂದು ನಂಬಿ, ಆ ದಿಕ್ಕಿನಲ್ಲಿ ಕಾರ್ಯನಿರತವಾಗಿದೆ. ಕುದುರೆ, ರಥ, ಆಯುಧಗಳು, ಯುದ್ಧಗಳು, ಭಾಷೆ, ಇವೆಲ್ಲವೂ ಸೇರಿರುವ ಈ ಕಥನವು ಭಾರತದ ಪೂರ್ವಚರಿತ್ರೆಯನ್ನು ಶುದ್ಧೀಕರಿಸಿ, ಅದನ್ನು ಆರಾಮವಾಗಿ ಹಿಂದುತ್ವದ ಸಿಂಹಾಸನದ ಮೇಲೆ ಕೂರಿಸಬಹುದು. ಆದರೆ, ಈ ಕಥನದಲ್ಲಿರುವ ಒಂದು ಸರಳ ತೊಂದರೆಯೆಂದರೆ ಹಾಗೆ ಮಾಡುವಾಗ ಅವೈಜ್ಞಾನಿಕ ಪೂರ್ವ ನಿರ್ಧಾರಗಳು, ಸಾಕ್ಷ್ಯ ಹಾಗೂ ತೀರ್ಮಾನಗಳು ಇವುಗಳೆಲ್ಲವೂ ಒಂದೆಡೆ ಸೇರುವುದರಿಂದ, ಭಾರತದ ಗತಕಾಲವು ಹರ್ಕ್ಯುಲೀಸ್ ಶುದ್ಧ ಮಾಡಲು ತೊಡಗಿದ ಏಜಿಯನ್ ಕುದುರೆಲಾಯಗಳಂತೆ ಶುದ್ಧಮಾಡಲು ಅಸಾಧ್ಯವಾಗುವಷ್ಟು ಕೊಳಕಾಗುತ್ತದೆ; ಅದನ್ನು ತೊಳೆಯುವುದೇನೂ ಸಾಮಾನ್ಯ ಕೆಲಸವಾಗುವುದಿಲ್ಲ.

20ನೆಯ ಶತಮಾನದ ವಿಶ್ವವು ವಂಶಪಾವಿತ್ರ್ಯವನ್ನಾಧರಿಸಿದ ರಾಷ್ಟ್ರೀಯತೆ ಎಷ್ಟು ದೂರ ಹೋಗಬಹುದು ಮತ್ತು ಆ ನೆಲೆಯಲ್ಲಿ ’ಇತರರು’ ಎಷ್ಟು ಅಪಮಾನ-ತಿರಸ್ಕಾರಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಪರೀಕ್ಷಿಸಿಯಾಗಿದೆ. ’ಕಟ್ಟಲ್ಪಟ್ಟ’ ಚರಿತ್ರೆ ಮತ್ತು ಹಿಂದುತ್ವ ಇವುಗಳ ಬೆಸುಗೆಯ ಪರಿಣಾಮವೆಂದರೆ ಧರ್ಮಾಧಾರಿತ ರಾಷ್ಟ್ರ ಮತ್ತು ವರ್ಣಾಧಾರಿತ ರಾಜಕೀಯ ವ್ಯವಸ್ಥೆ ಇವುಗಳ ಬೆಸುಗೆ. ನಮ್ಮ ರಾಷ್ಟ್ರದ 75ನೆಯ ಸ್ವಾತಂತ್ರ್ಯದಿನವನ್ನು ಬರುವ ಆಗಸ್ಟ್ ತಿಂಗಳಿನಲ್ಲಿ ನಾವು ಆಚರಿಸುವಾಗ, ಸ್ವಾತಂತ್ರ್ಯ ಹೋರಾಟದಲ್ಲಿ ನಾನಾಬಗೆಯ ತ್ಯಾಗ-ಬಲಿದಾನಗಳನ್ನು ಮಾಡಿದ ಹುತಾತ್ಮರು, ಆ ಹೋರಾಟ ಮಾಡಿದ್ದು ಭಾರತವನ್ನು ಪ್ರಜಾಪ್ರಭುತ್ವವನ್ನಾಧರಿಸಿದ ಸ್ವಾತಂತ್ರ್ಯದ ಪ್ರಪಂಚಕ್ಕೆ ತರುವುದಕ್ಕಾಗಿ, ಸಾಮಾಜಿಕ ಸಾಮರಸ್ಯಕ್ಕಾಗಿ, ಮತ್ತು ಎಲ್ಲಾ ಪ್ರಜೆಗಳ ಸಮಾನ ಹಕ್ಕುಗಳಿಗಾಗಿ ಎಂಬುದನ್ನು ನೆನಪಿಸಿಕೊಳ್ಳುವುದು ಒಳ್ಳೆಯದು. ವಾಟ್ಸ್‌ಆಪ್ ’ಹಾಂಜೀ (ಹೌದಪ್ಪ) ಕಾರಖಾನೆಗಳು’ ನಮ್ಮನ್ನು ನಂಬಿಸುವುದಕ್ಕೆ ಎಷ್ಟೇ ‘ಹೇಷಾರವವನ್ನು’ ಮಾಡಿದರೂ, ಒಂದು ಅಶ್ವ-ಯುಗವನ್ನು, ಇಣಿಕಿ ನೋಡುವ ಕುದುರೆಗಳ ಶಕೆಯನ್ನು, ಕಪೋಲಕಲ್ಪಿತ ಅಶ್ವಚರಿತ್ರೆಗಳನ್ನು ಹಾಗೂ ಕುದುರೆ ವ್ಯಾಪಾರವನ್ನು ನಮ್ಮ ದೇಶದಲ್ಲಿ ತರಲು ಸ್ವಾತಂತ್ರ್ಯ ಹೋರಾಟವು ನಡೆಯಲಿಲ್ಲ ಮತ್ತು ಅಸಂಖ್ಯ ದೇಶಪ್ರೇಮಿಗಳು ಹುತಾತ್ಮರಾಗಲಿಲ್ಲ.

(ಕನ್ನಡಕ್ಕೆ): ಸಿ. ಎನ್. ರಾಮಚಂದ್ರನ್

ಪ್ರೊ. ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ
ಭಾರತದ ಖ್ಯಾತ ಚಿಂತಕರಲ್ಲಿ ಒಬ್ಬರಾದ ದೇವಿ ಅವರು, ಪೀಪಲ್ ಲಿಂಗ್ವಿಸ್ಟಿಕ್ಸ್ ಸರ್ವೆ ಮೂಲಕ ಚಿರಪರಿಚಿತರು. ‘ಆಫ್ಟರ್ ಅಮ್ನೇಶಿಯಾ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಚಳವಳಿಗಳ ಸಂಗಾತಿಯಾಗಿರುವ ದೇವಿ ಸದ್ಯಕ್ಕೆ ದಿ ಸೌತ್ ಫೋರಮ್‌ನ ಸಂಚಾಲಕರು.


ಇದನ್ನೂ ಓದಿ: ಪ್ರಜಾಪ್ರಭುತ್ವವನ್ನೇ ಪಣಕ್ಕಿಟ್ಟು ರಾಜಕೀಯ ವಿರೋಧಿಗಳನ್ನು ಮಣಿಸುವುದಕ್ಕೆ ಹಾರುವ ಕುದುರೆಯನೇರಿ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಅದ್ಭುತ ಬರಹ. ಹಿಂದೂ ಧರ್ಮವನ್ನು ಭಾರತದ ಮೂಲ ದೇಶಿಯ ಧರ್ಮವೆಂದು ನಂಬಿಸಿ, ಬೇರೆ ಧರ್ಮದವರನ್ನು ಅನ್ಯರೆಂಬಂತೆ ಕಾಣುವವರ ಧರ್ಮವೂ ಅನ್ಯ ದೇಶದ್ದು ಎಂಬುದನ್ನು ಖಚಿತಪಡಿಸಿ, ಬಲಪಂಥೀಯರ ಮನೋಸ್ಥಿತಿಯನ್ನು ಪರಿಚಯಿಸಿದ್ದಿರಿ.

LEAVE A REPLY

Please enter your comment!
Please enter your name here

- Advertisment -

Must Read

ಒಕ್ಕಲಿಗರ ಮೀಸಲಾತಿ ಹೆಚ್ಚಳಕ್ಕೆ ಆಗ್ರಹ: ಪಕ್ಷಾತೀತವಾಗಿ ಒಗ್ಗೂಡಿದ ಸಮುದಾಯದ ನಾಯಕರು

0
ಜನಸಂಖ್ಯಾಗನುಗುಣವಾಗಿ ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಬೇಕೆಂದು ಒಕ್ಕಲಿಗ ಸಮುದಾಯ ಹೋರಾಟದ ಸೂಚನೆ ನೀಡಿದೆ. ಈ ಕುರಿತು ಬೆಂಗಳೂರಿನಲ್ಲಿ ಒಕ್ಕಲಿಗ ನಾಯಕರ ಸಭೆ ನಡೆದಿದೆ. ಒಕ್ಕಲಿಗರ ಸಂಘದ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ,...