“ಹರಿಯಾಣ ಚುನಾವಣಾ ಫಲಿತಾಂಶವನ್ನು ಕಾಂಗ್ರೆಸ್ ವಿಶ್ಲೇಷಿಸುತ್ತಿದೆ, ಮತ ಎಣಿಕೆ ಪ್ರಕ್ರಿಯೆಯಲ್ಲಿ ಬಂದಿರುವ ದೂರುಗಳ ಬಗ್ಗೆ ಚುನಾವಣಾ ಆಯೋಗಕ್ಕೆ ತಿಳಿಸಲಿದೆ” ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಬೆಳಿಗ್ಗೆ ತಮ್ಮ ಪಕ್ಷದ ಆಘಾತಕಾರಿ ಸೋಲಿನ ನಂತರ ಮೊದಲ ಹೇಳಿಕೆ ನೀಡಿದ್ದಾರೆ.
“ನಾವು ಹರಿಯಾಣದ ಅನಿರೀಕ್ಷಿತ ಫಲಿತಾಂಶಗಳನ್ನು ವಿಶ್ಲೇಷಿಸುತ್ತಿದ್ದೇವೆ. ಹಲವು ವಿಧಾನಸಭಾ ಕ್ಷೇತ್ರಗಳಿಂದ ಬರುವ ದೂರುಗಳ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ತಿಳಿಸುತ್ತೇವೆ” ಎಂದು ಕಾಂಗ್ರೆಸ್ ನಾಯಕ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಹರಿಯಾಣದ ಮತದಾರರು ಮತ್ತು ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ ರಾಹುಲ್ ಗಾಂಧಿ, “ಜನರ ಹಕ್ಕುಗಳು ಮತ್ತು ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕಾಗಿ ಕಾಂಗ್ರೆಸ್ ಹೋರಾಟವನ್ನು ಮುಂದುವರೆಸುತ್ತದೆ” ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಫಲಿತಾಂಶವನ್ನು ಉಲ್ಲೇಖಿಸಿ, “ಇದು ಪ್ರಜಾಪ್ರಭುತ್ವದ ಸ್ವಾಭಿಮಾನದ ವಿಜಯ” ಎಂದರು.
ಹರಿಯಾಣದಲ್ಲಿ ಕಾಂಗ್ರೆಸ್ 37 ಸ್ಥಾನ ಪಡೆಯುವ ಮೂಲಕ ಅಂತಿಮವಾಗಿ ಸೋಲೊಪ್ಪುಕೊಂಡಿತು. ಬಹುಮತದ 46ಕ್ಕೆ ಒಂಬತ್ತು ಸ್ಥಾನಗಳ ಕೊರತೆಯಿದೆ. ಬಿಜೆಪಿ 48 ಸ್ಥಾನಗಳನ್ನು ಗಳಿಸಿದರೆ ಐಎನ್‌ಡಿಎಲ್ ಎರಡು ಸ್ಥಾನಗಳನ್ನು ಗೆದ್ದಿತು.
ಕಾಂಗ್ರೆಸ್ ಪಕ್ಷವು ನಿನ್ನೆಯ ಎಣಿಕೆ ಪ್ರಕ್ರಿಯೆಯ ಮೇಲೆ ಗಂಭೀರವಾದ ಅನುಮಾನಗಳನ್ನು ಎತ್ತಿದೆ. ಫಲಿತಾಂಶಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದೆ. ಫಲಿತಾಂಶಗಳು ವಾಸ್ತವಕ್ಕೆ ವಿರುದ್ಧವಾಗಿವೆ ಮತ್ತು ಕನಿಷ್ಠ ಮೂರು ಜಿಲ್ಲೆಗಳಲ್ಲಿ ಮತ ಯಂತ್ರಗಳ ಎಣಿಕೆ ಮತ್ತು ಕಾರ್ಯನಿರ್ವಹಣೆಯ ಪ್ರಕ್ರಿಯೆಯಲ್ಲಿ ಪಕ್ಷವು “ಅತ್ಯಂತ ಗಂಭೀರ ದೂರುಗಳನ್ನು” ಸ್ವೀಕರಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಹರಿಯಾಣದಲ್ಲಿ ಎಣಿಕೆ ಅಂಕಿಅಂಶಗಳ ನವೀಕರಣದಲ್ಲಿ ನಿಧಾನಗತಿಯನ್ನು ಆರೋಪಿಸಿದ ಕಾಂಗ್ರೆಸ್ ಜ್ಞಾಪಕ ಪತ್ರವನ್ನು ಚುನಾವಣಾ ಆಯೋಗ ತಿರಸ್ಕರಿಸಿದ ನಂತರ ಈ ಆರೋಪ ಮಾಡಿದೆ.
ವಿಜಯೋತ್ಸವದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪ್ರತಿಯೊಂದು ಸಂಸ್ಥೆಯನ್ನು ಕಳಂಕಗೊಳಿಸಲು ಕಾಂಗ್ರೆಸ್ ಬಯಸುತ್ತಿದೆ ಎಂದು ಗೇಲಿ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಫಲಿತಾಂಶ:
ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟ 49 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ 29 ಸ್ಥಾನಗಳೊಂದಿಗೆ ಎರಡನೇ ಸ್ಥಾನ ಗಳಿಸಿದೆ. 49 ಸ್ಥಾನಗಳ ಪೈಕಿ ಆರು ಕಾಂಗ್ರೆಸ್ ಪಾಳಯದಲ್ಲಿದ್ದರೆ, ಎನ್‌ಸಿ 42 ಸ್ಥಾನಗಳನ್ನು ಪಡೆದುಕೊಂಡಿದೆ.
ಈ ಫಲಿತಾಂಶಗಳು “ಸಂವಿಧಾನದ ವಿಜಯ” ಎಂದು ರಾಹುಲ್ ಗಾಂಧಿ ಹೇಳಿದರು. “ಜಮ್ಮು ಮತ್ತು ಕಾಶ್ಮೀರದ ಜನರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ರಾಜ್ಯದಲ್ಲಿ ಇಂಡಿಯಾ ಕೂಟ ವಿಜಯವು ಸಂವಿಧಾನದ ಗೆಲುವು, ಪ್ರಜಾಪ್ರಭುತ್ವದ ಸ್ವಾಭಿಮಾನದ ಗೆಲುವು” ಎಂದು ಹೇಳಿದರು.
ಒಟ್ಟಾರೆ ಪಕ್ಷದ ನಿರಾಶಾದಾಯಕ ಪ್ರದರ್ಶನವು ಈಗಾಗಲೇ ವಿರೋಧ ಪಕ್ಷಗಳ ಕಾಂಗ್ರೆಸ್ ನಾಯಕತ್ವದ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಾಂಗ್ರೆಸ್ ಮಿತ್ರಪಕ್ಷಗಳು ಈಗ ಮುಂಬರುವ ಚುನಾವಣೆಯ ಬಿಸಿಯನ್ನು ತಿರುಗಿಸುತ್ತಿವೆ. ಇದು ಸೀಟು ಹಂಚಿಕೆ ಮತ್ತು ಕಾಂಗ್ರೆಸ್ ಚುನಾವಣಾ ತಂತ್ರದ ಮೇಲೆ ಪರಿಣಾಮ ಬೀರಬಹುದು.
ಉದ್ಧವ್ ಠಾಕ್ರೆ ಅವರ ಶಿವಸೇನಾ ಬಣವು ಹರಿಯಾಣದಲ್ಲಿ ಆಪ್‌ನಂತಹ ವಿರೋಧ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದಕ್ಕಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಮುಂಬರುವ ಮಹಾರಾಷ್ಟ್ರ ಚುನಾವಣೆಯಲ್ಲಿ ಸೀಟು ಹಂಚಿಕೆಯ ಮಾತುಕತೆಗಳಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದನ್ನೂ ಓದಿ; ದುರಹಂಕಾರ ವಿಪತ್ತಿಗೆ ಕಾರಣ: ಕಾಂಗ್ರೆಸ್ ಸೋಲಿಗೆ ಟಿಎಂಸಿ ವ್ಯಂಗ್ಯ


