ಆಂಧ್ರ ಪ್ರದೇಶ ವಿಧಾನಸಭೆ ವಿರೋಧ ಪಕ್ಷವಾದ ತೆಲುಗು ದೇಶಂ ಪಾರ್ಟಿಯ (ಟಿಡಿಪಿ) ನಾಲ್ವರು ಸದಸ್ಯರನ್ನು ಬಜೆಟ್ ಅಧಿವೇಶನದಿಂದ ಅಮಾನತು ಮಾಡಲಾಗಿದೆ.
ಶಾಸಕರು ಅಶಿಸ್ತಿನ ವರ್ತನೆ ತೋರಿದ್ದಾರೆಂದು ಆರೋಪಿಸಿ ಸ್ಪೀಕರ್ ತಮ್ಮಿನೇನಿ ಸೀತಾರಾಮ್ ಅಮಾನತು ಮಾಡಿದ್ದಾರೆ. ಅಶೋಕ್ ಬೆಂದಾಲಂ, ವೆಲಗಪುಡಿ ರಾಮಕೃಷ್ಣ ಬಾಬು, ಮಂಟೆನಾ ರಾಮರಾಜು ಮತ್ತು ಅನಗಣಿ ಸತ್ಯ ಪ್ರಸಾದ್ ಅಮಾನತಾದವರು.
ಪಶ್ಚಿಮ ಗೋದಾವರಿ ಜಿಲ್ಲೆಯ ಜಂಗಾರೆಡ್ಡಿಗುಡೆಂ ಪಟ್ಟಣದಲ್ಲಿ ಅಕ್ರಮ ಮದ್ಯ ಸೇವನೆಯಿಂದ ಸಾವುಗಳು ಸಂಭವಿಸಿವೆ ಎಂಬ ವಿಷಯದ ಚರ್ಚೆಗೆ ಒತ್ತಾಯಿಸಿ ಟಿಡಿಪಿ ಸದಸ್ಯರು ಸದನದಲ್ಲಿ ಗದ್ದಲ ಎಬ್ಬಿಸಿದರು.
ದಿನದ ಮಟ್ಟಿಗೆ ಸಭೆ ಸೇರುತ್ತಿದ್ದಂತೆಯೇ ಪ್ರತಿಪಕ್ಷದ ಶಾಸಕರು ಈ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸಿದರು. ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಕಳೆದ ವಾರವೇ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿ ಹೇಳಿಕೆ ನೀಡಿರುವುದನ್ನು ಉಲ್ಲೇಖಿಸಿ ಚರ್ಚೆಗೆ ಸ್ಪೀಕರ್ ನಿರಾಕರಿಸಿದರು.
ಜಂಗಾರೆಡ್ಡಿಗುಡೆಮ್‌ನಲ್ಲಿ ಸಂಭವಿಸಿದ ಅನೇಕ ಅಕ್ರಮ ಮದ್ಯದ ಸಾವುಗಳು ವಾಸ್ತವವಾಗಿ ನೈಸರ್ಗಿಕ ಕಾರಣಗಳಿಂದ ಅಥವಾ ಇತರ ಸಂಬಂಧವಿಲ್ಲದ ಕಾರಣಗಳಿಂದ ಸಂಭವಿಸಿವೆ ಎಂದು ವೈಎಸ್‌ಆರ್‌ಸಿಪಿ ಸರ್ಕಾರವು ಹೇಳಿಕೊಂಡಿದೆ. ಅಕ್ರಮವಾಗಿ ತಯಾರಿಸಿದ ಮದ್ಯ ಸೇವನೆಯಿಂದ ಸಂಭವಿಸಿದ ಸಾವುಗಳು ಎಂದು ಟಿಡಿಪಿ ತಪ್ಪಾಗಿ ಬಿಂಬಿಸುತ್ತಿದೆ ಎಂದು ಸರ್ಕಾರ ಆರೋಪಿಸಿದೆ.
ಆದರೆ, ಸರ್ಕಾರ ಮದ್ಯ ಸೇವನೆಯಿಂದಾದ ಸಾವುಗಳನ್ನು ಸಾಮಾನ್ಯ ಸಾವು ಎಂದು ಬಿಂಬಿಸುವ ಮೂಲಕ ಸತ್ಯವನ್ನು ಮರೆಮಾಚುತ್ತಿದೆ ಎಂದು ಆರೋಪಿಸಿದ ಟಿಡಿಪಿ ಸದಸ್ಯರು ಈ ಬಗ್ಗೆ ಚರ್ಚೆಗೆ ಒತ್ತಾಯಿಸಿದರು.
ಸದನದಲ್ಲಿ ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆಯೇ ಅವರು ಸದನದ ಬಾವಿಗೆ ನುಗ್ಗಿ ಘೋಷಣೆಗಳನ್ನು ಕೂಗಿದರು. ಶಿಳ್ಳೆ ಊದಿದ ಕೆಲ ಟಿಡಿಪಿ ಸದಸ್ಯರಿಗೆ ಸ್ಪೀಕರ್ ತಾಕೀತು ಮಾಡಿದರು. ತಮ್ಮ ಅಶಿಸ್ತಿನ ವರ್ತನೆಯ ಮೂಲಕ ಸದನಕ್ಕೆ ಅಪಖ್ಯಾತಿ ತರುತ್ತಿದ್ದಾರೆ ಎಂದರು. ಅವರು ನಾಲ್ಕು ಸದಸ್ಯರನ್ನು ಹೆಸರಿಸಿ, ಅಧಿವೇಶನದ ಮುಂದಿನ ಅವಧಿಯಲ್ಲಿ ಪಾಲ್ಗೊಳ್ಳದಿರುವಂತೆ ಆದೇಶಿಸಿದರು.
ಅಮಾನತುಗೊಂಡಿರುವ ಟಿಡಿಪಿ ಶಾಸಕರು ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಸರ್ಕಾರವು ನಮ್ಮನ್ನು ಅಮಾನತುಗೊಳಿಸುವ ಮೂಲಕ ಪ್ರತಿಪಕ್ಷಗಳ ಧ್ವನಿಗೆ ಮೂಗುದಾರ ಹಾಕಲು ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಟಿಡಿಪಿ ಸದಸ್ಯರು ಅಕ್ರಮ ಮತ್ತು ಅಗ್ಗದ ಮದ್ಯದಿಂದ ಉಂಟಾದ ಸಾವುಗಳ ಬಗ್ಗೆ ಚರ್ಚೆಗೆ ಒತ್ತಾಯಿಸಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಪ್ರತಿಪಕ್ಷಗಳ ಪ್ರತಿಭಟನೆಯಿಂದಾಗಿ ಸದನವನ್ನು ಮುಂದೂಡಲಾಗಿದೆ.
ಇದನ್ನೂ ಓದಿರಿ: ತಮಿಳುನಾಡು: ಬೆತ್ತಲೆ ಚಿತ್ರೀಕರಿಸಿ ಬ್ಲಾಕ್‌ಮೇಲ್; ದಲಿತ ಮಹಿಳೆಯ ಮೇಲೆ ನಿರಂತರ ಗ್ಯಾಂಗ್ ರೇಪ್


