Homeಕರ್ನಾಟಕಹಾಸನ | ಡೆಂಘೀ ಜಾಗೃತಿಗೆ ತೆರಳಿದ್ದ ಅಂಗನವಾಡಿ ಸಹಾಯಕಿಗೆ 'ಜಾತಿ ನಿಂದನೆ': ಆರೋಪ

ಹಾಸನ | ಡೆಂಘೀ ಜಾಗೃತಿಗೆ ತೆರಳಿದ್ದ ಅಂಗನವಾಡಿ ಸಹಾಯಕಿಗೆ ‘ಜಾತಿ ನಿಂದನೆ’: ಆರೋಪ

- Advertisement -
- Advertisement -

ಡೆಂಘೀ ಜ್ವರದ ಕುರಿತು ಅರಿವು ಮೂಡಿಸಲು ತೆರಳಿದ್ದ ಅಂಗನವಾಡಿ ಸಹಾಯಕಿಗೆ ಜಾತಿ ನಿಂದನೆ ಮಾಡಿರುವ ಆರೋಪ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಿಂದ ಕೇಳಿ ಬಂದಿದೆ.

ಅಂಗನವಾಡಿ ಸಹಾಯಕಿ ತೇಜ ಅವರು ನೀಡಿದ ದೂರಿನ ಅನ್ವಯ ಕುಮಾರಸ್ವಾಮಿ ಎಂಬವರು ಮತ್ತು ಆಕೆಯ ಪತ್ನಿ ಶೃತಿ ವಿರುದ್ದ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೇಜ ಅವರು ಮನೆ ಮನೆಗೆ ತೆರಳಿ ಡೆಂಘೀ ಕುರಿತು ಅರಿವು ಮೂಡಿಸುತ್ತಿದ್ದರು. ಈ ವೇಳೆ ಗ್ರಾಮದ ಕುಮಾರಸ್ವಾಮಿ ಎಂಬವರ ಮನೆಯ ಒಳಗೆ ಹೋಗಿದ್ದರು. ತೇಜ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಎಂದು ಗೊತ್ತಾದ ಬಳಿಕ ಕುಮಾರಸ್ವಾಮಿ ಹಾಗೂ ಅವರ ಮನೆಯವರು ನಿಂದಿಸಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ತೇಜ ಅವರು ಎರಡು ವರ್ಷಗಳಿಂದ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಆದಿಕರ್ನಾಟಕ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹಾಗಾಗಿ, ಸವರ್ಣೀಯರ ಮನೆಯೊಳಗೆ ಹೋದ ಕಾರಣ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಲಾಗಿದೆ ಎಂದು ವರದಿಗಳು ಹೇಳಿವೆ.

“ಜುಲೈ 4ರಂದು ಗುರುವಾರ ಸಂಜೆ 3:30ರ ಸುಮಾರಿಗೆ ನಮ್ಮ ಗ್ರಾಮದ ಎಲ್ಲಾ ಮನೆಗಳಿಗೆ ಡೆಂಘೀ ಜ್ವರದ ಬಗ್ಗೆ ಮಾಹಿತಿ ತಿಳಿಸಲು ಅಂಗನವಾಡಿ ಕಾರ್ಯಕರ್ತೆಯ ಜೊತೆಗೆ ಸಹಾಯಕಿಯಾದ ನಾನೂ ಕೂಡ ಹೋಗಿದ್ದೆ. ಕುಮಾರಸ್ವಾಮಿ ಎಂಬವರ ಮನೆಗೆ ಭೇಟಿ ನೀಡಿದ್ದ ವೇಳೆ, ನನ್ನನ್ನು ಹಾಗೂ ಅಂಗನವಾಡಿ ಕಾರ್ಯಕರ್ತೆಯನ್ನು ಮನೆಯ ಒಳಗೆ ಕರೆದು ಕಾಫಿ, ಟೀ ಕೊಟ್ಟು ಕಳಿಸಿದ್ದರು” ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

“ಜುಲೈ 9ರಂದು ಕಾರ್ಯಕರ್ತೆ ಮತ್ತು ಆಶಾ ಕಾರ್ಯಕರ್ತೆ ಡೆಂಘೀ ಜ್ವರದ ಮಾಹಿತಿ ನೀಡಲು ಅವರ ಮನೆಗೆ ಹೋದಾಗ ಅಂಗನವಾಡಿ ಕಾರ್ಯಕರ್ತೆ ಮಂಗಳ ಗೌರಮ್ಮ ಅವರ ಹತ್ತಿರ ‘ನಿನ್ನ ಅಂಗನವಾಡಿ ಸಹಾಯಕಿ ಕೀಳು ಜಾತಿಯೆಂದು ತಿಳಿದಿದ್ದರೂ ನಮ್ಮ ಮನೆಯೊಳಗೆ ಹೇಗೆ ಕರೆದುಕೊಂಡು ಬಂದೆ. ನೀನು, ಅವಳು ಮಾಡಿದ ಅಡುಗೆಯನ್ನು ತಿಂದು ಹೇಗೆ ಒಗ್ಗಿಸಿಕೊಳ್ಳುತ್ತೀಯ, ಹೇಗೆ ಜೀರ್ಣಿಸಿಕೊಳ್ಳುತ್ತೀಯ?’ ಎಂದು ಕಾರ್ಯಕರ್ತೆಯನ್ನೂ ನಿಂದಿಸಿದ್ದಾರೆ. ನೀನು ಹೋಗಿ ಅಂಗನವಾಡಿ ಸಹಾಯಕಿಗೆ ಹೇಳಬೇಕೆಂದು ತಿಳಿಸಿದ್ದಾರೆ” ಎಂದು ಆರೋಪಿಸಿದ್ದಾರೆ.

“ಈ ವಿಚಾರವನ್ನು ಕಾರ್ಯಕರ್ತೆ ನನ್ನ ಗಮನಕ್ಕೆ ತಂದ ಬಳಿಕ, ಜುಲೈ 10ರಂದು ಬೆಳಿಗ್ಗೆ 9ರ ಸುಮಾರಿಗೆ ಹೋಗಿ ‘ಟೀಚರ್ ಹತ್ರ ಹೇಳಿ ಕಳುಹಿಸಿದ್ದೀರಲ್ಲಾ ಏನೆಂದು ಕೇಳಿದೆ. ಆಗ, ಹೌದು ನಾವು ಹೇಳಿದ್ದು ನಿಜ. ನೀನು ಹೊರಗಡೆಯೇ ನಿಲ್ಲಬೇಕು. ಹೊಲೆಯ ಜಾತಿಗೆ ಸೇರಿದ ಶೂದ್ರ ಮುಂಡೇವು. ನಿನ್ನ ಸ್ಥಾನ ಆಚೆಯೇ ಇರಬೇಕು. ನೀನು ನಮ್ಮನೆಯ ಒಳಗೆ ಏಕೆ ಬಂದೆ? ಎಂದು ಕುಮಾರಸ್ವಾಮಿ, ಶೃತಿ ಹಾಗೂ ಭಾನುಮತಿ ಎಂಬುವವರು ನನ್ನನ್ನು ಥಳಿಸಲು ಮುಂದಾದರು” ಎಂದು ಅವಲತ್ತುಕೊಂಡಿದ್ದಾರೆ.

“ನಮ್ಮನ್ನು ಕುಮಾರಸ್ವಾಮಿಯವರು ಒಳಗೆ ಬನ್ನಿ ಎಂದು ಕರೆದ ಮೇಲೆಯೇ ನಾನು ಒಳಗೆ ಬಂದೆ. ನಾನಾಗಿ ಅಥವಾ ನನ್ನ ವೈಯಕ್ತಿಕ ವಿಚಾರಕ್ಕೆ ನಿಮ್ಮ ಮನೆಗೆ ಬಂದಿಲ್ಲ. ನಾನು ಕೆಲಸದ ವಿಚಾರವಾಗಿ ಬಂದು ನನ್ನ ಕರ್ತವ್ಯ ನಿಭಾಯಿಸಿದ್ದೇನೆಂದು ಹೇಳಿದರೂ ಕೂಡಾ, ‘ಮನೆಯಿಂದ ಹೊರಗೆಯೇ ನಿಂತು ಹೇಳಬೇಕಾಗಿತ್ತು. ನಿಮ್ಮ ಜಾತಿಯವರು ನಮ್ಮ ಮನೆಗೆ ಬರಬಾರದು, ನೀನು ಬಂದಿದ್ದು ತಪ್ಪು’ ಎಂದು ನನ್ನನ್ನೇ ದಬಾಯಿಸಿದ್ದಾರೆ” ಎಂದು ತೇಜ ಹೇಳಿದ್ದಾರೆ.

ಇದನ್ನೂ ಓದಿ : ಸಂವಿಧಾನ ಇಲ್ಲದಿದ್ದರೆ ನಮಗೆ ಅಂಗಿ ಧರಿಸಲು ಬಿಡುತ್ತಿರಲಿಲ್ಲ: ಸಂಸದ ಸಸಿಕಾಂತ್ ಸೆಂಥಿಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...