ಬೆಂಗಳೂರು: ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ರಾಜ್ಯದ ಆಶಾ ಕಾರ್ಯಕರ್ತೆಯರು ಆಗಸ್ಟ್ 12 ರಿಂದ 14ರ ವರೆಗೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಅವರು ಮಾತನಾಡಿ, “ಕಳೆದ ಹಲವು ವರ್ಷಗಳಿಂದ ನಾವು ನಮ್ಮ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿದ್ದೇವೆ. ಈ ಹಿಂದೆ ಅನಿರ್ದಿಷ್ಟಾವಧಿ ಧರಣಿ ನಡೆಸಿದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹10,000 ಗೌರವಧನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಏಳು ತಿಂಗಳು ಕಳೆದರೂ ಆ ಭರವಸೆ ಈಡೇರಿಲ್ಲ” ಎಂದು ತಿಳಿಸಿದರು.
ಅಲ್ಲದೆ, “ಕಳೆದ ಬಜೆಟ್‌ನಲ್ಲಿ ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸಲಾಗಿದೆ. ಆದರೆ, ಆಶಾ ಕಾರ್ಯಕರ್ತೆಯರನ್ನು ಮಾತ್ರ ನಿರ್ಲಕ್ಷಿಸಲಾಗಿದೆ. ₹42,000 ಆಶಾ ಕಾರ್ಯಕರ್ತೆಯರಿಗೆ ₹1,000 ಗೌರವಧನ ಹೆಚ್ಚಿಸುವುದಾಗಿ ಸರ್ಕಾರ ಹೇಳಿದ್ದರೂ, ಅದು ಕೇವಲ ಭರವಸೆಯಾಗಿಯೇ ಉಳಿದಿದೆ” ಎಂದು ನಾಗಲಕ್ಷ್ಮಿ ಅವರು ಬೇಸರ ವ್ಯಕ್ತಪಡಿಸಿದರು.
ಪ್ರಮುಖ ಬೇಡಿಕೆಗಳು
- ಮುಖ್ಯಮಂತ್ರಿಗಳು ಘೋಷಿಸಿದಂತೆ, ಮಾಸಿಕ ₹10,000 ಗೌರವಧನವನ್ನು ಏಪ್ರಿಲ್ ತಿಂಗಳಿನಿಂದ ಜಾರಿಗೆ ತರಬೇಕು.
- 60 ವರ್ಷ ಪೂರೈಸಿದ ಆಶಾ ಕಾರ್ಯಕರ್ತೆಯರನ್ನು ಯಾವುದೇ ಪೂರ್ವ ಸೂಚನೆ ಅಥವಾ ಪರಿಹಾರ ನೀಡದೆ ಸೇವೆಯಿಂದ ತೆಗೆದುಹಾಕುವುದನ್ನು ನಿಲ್ಲಿಸಬೇಕು. ನಿವೃತ್ತರಾದ ಆಶಾ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು (ಒಟ್ಟು ಮೊತ್ತದ ಪರಿಹಾರ) ನೀಡಬೇಕು.
- ನಗರ ಪ್ರದೇಶಗಳಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿಯಾಗಿ ₹2,000 ಗೌರವಧನ ನೀಡಬೇಕು.
- ಕೇಂದ್ರ ಸರ್ಕಾರ ಜೂನ್-ಜುಲೈನಲ್ಲಿ ಹೆಚ್ಚಿಸಿದ ಪ್ರೋತ್ಸಾಹಧನವನ್ನು ರಾಜ್ಯದಲ್ಲೂ ಜಾರಿಗೆ ತರಬೇಕು.
- ಜನಸಂಖ್ಯೆ ಮಿತಿಯ ಹೆಸರಿನಲ್ಲಿ ಯಾವುದೇ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು.
- ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು.
ಈ ಸತ್ಯಾಗ್ರಹದಲ್ಲಿ ಸಂಘದ ಉಪಾಧ್ಯಕ್ಷೆ ಟಿ.ಸಿ. ರಮಾ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪಾಧ್ಯಕ್ಷೆ ನಾಗರತ್ನ, ಮತ್ತು ಇತರ ಕಾರ್ಯಕರ್ತೆಯರು ಭಾಗವಹಿಸಲಿದ್ದಾರೆ. ತಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟವನ್ನು ಮುಂದುವರೆಸುವ ನಿರ್ಧಾರಕ್ಕೆ ಬಂದಿರುವುದಾಗಿ ಸಂಘದ ಮುಖಂಡರು ತಿಳಿಸಿದ್ದಾರೆ.
ಎಸ್‌ಸಿಪಿ-ಟಿಎಸ್‌ಪಿ ಹಣ ಗ್ಯಾರಂಟಿ ಯೋಜನೆಗೆ ಬಳಕೆ ಖಂಡಿಸಿ ಆ.18ಕ್ಕೆ ದಲಿತ ಸಂಘಟನೆಗಳಿಂದ ವಿಧಾನಸೌಧ ಚಲೋ


