ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಶುಕ್ರವಾರ ಬೂತ್ ಮಟ್ಟದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದ ಕೆಲಸದ ಒತ್ತಡದಿಂದಾಗಿ ಅವರು ಈ ನಿರ್ಧಾರ ಮಾಡಿದ್ದಾರೆ ಎಂದು ಕುಟುಂಬ ಆರೋಪಿಸಿದೆ.
30 ವರ್ಷದ ಬೂತ್ ಮಟ್ಟದ ಅಧಿಕಾರಿ ಉಮೇಶ್ ಎಂದು ಗುರುತಿಸಲಾಗಿದ್ದು, ಅವರು ಅಟಾರಿಯಾ ಪಟ್ಟಣದಲ್ಲಿ ವಾಸಿಸುತ್ತಿದ್ದರು. ದರಿಯಾಪುರ ಪೂರ್ವ-ಮಾಧ್ಯಮಿಕ ಶಾಲೆಯಲ್ಲಿ ಬೋಧಕರಾಗಿ ಕೆಲಸ ಮಾಡುತ್ತಿದ್ದರು.
ಉಮೇಶ್ ಆತ್ಮಹತ್ಯೆ ಮಾಡಿಕೊಂಡಾಗ ತನ್ನ ಕೋಣೆಯಲ್ಲಿ ಒಬ್ಬಂಟಿಯಾಗಿದ್ದರು ಎಂದು ಅಟಾರಿಯಾ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ರಾಕೇಶ್ ಕುಮಾರ್ ಗುಪ್ತಾ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
“ಬಾಗಿಲು ದೀರ್ಘಕಾಲದವರೆಗೆ ತೆರೆಯದ ನಂತರ, ಪೊಲೀಸರಿಗೆ ಮಾಹಿತಿ ನೀಡಲಾಯಿತು. ಕಬ್ಬಿಣದ ಬಾಗಿಲು ಒಳಗಿನಿಂದ ಲಾಕ್ ಆಗಿದ್ದರಿಂದ, ಅದನ್ನು ಕತ್ತರಿಸಲಾಯಿತು, ನಂತರ ಉಮೇಶ್ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ” ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ.
ಪರಿಷ್ಕರಣಾ ಕಾರ್ಯದ ಸಮಯದಲ್ಲಿ ಅವರನ್ನು ಬೂತ್ ಮಟ್ಟದ ಅಧಿಕಾರಿಯಾಗಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು, ಹೆಚ್ಚಿದ ಕೆಲಸದ ಹೊರೆಯಿಂದಾಗಿ ಒತ್ತಡದಲ್ಲಿದ್ದರು ಎಂದು ಉಮೇಶ್ ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಮತದಾರರ ಪಟ್ಟಿಗಳ ಪರಿಷ್ಕರಣೆಯ ನಡುವೆ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕೇರಳ ಮತ್ತು ರಾಜಸ್ಥಾನದಲ್ಲಿ ಕೆಲಸದ ಒತ್ತಡದಿಂದಾಗಿ ಕನಿಷ್ಠ ಒಂಬತ್ತು ಆತ್ಮಹತ್ಯೆಗಳು ಮತ್ತು ಪಾರ್ಶ್ವವಾಯುವಿನಿಂದ ಎರಡು ಸಾವುಗಳು ವರದಿಯಾಗಿವೆ.


