ಮೇಲ್ವರ್ಗದ ಜನರಿಗಾಗಿ ಮೀಸಲಾದ ಪಾತ್ರೆಯಲ್ಲಿ ನೀರು ಕುಡಿದಿದ್ದಕ್ಕಾಗಿ ದಲಿತ ವ್ಯಕ್ತಿಯೊಬ್ಬರಿಗೆ ದುಷ್ಕರ್ಮಿಗಳ ಗುಂಪೊಂದು ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಥಳಿಸಿರುವ ಘಟನೆ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ದಿಗ್ಗಾ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಹಲ್ಲೆ ನಡೆಸಿದ್ದಲ್ಲದೆ ತನ್ನ ಮೇಲೆ ದುಷ್ಕರ್ಮಿಗಳು ಗುಂಡು ಕೂಡಾ ಹಾರಿಸಿದ್ದಾರೆ ಎಂದು ಸಂತ್ರಸ್ತ ಹೇಳಿಕೊಂಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮಂಗಳವಾರ ಸಂಜೆ ಚತುರ ರಾಮ್ ತನ್ನ ಪತ್ನಿಯೊಂದಿಗೆ ದಿಗ್ಗಾಕ್ಕೆ ಹೋಗುತ್ತಿದ್ದಾಗ ಕಿರಾಣಿ ಅಂಗಡಿಯೊಂದರ ಬಳಿ ಅಂಗಡಿಯ ಹೊರಗೆ ಇಟ್ಟಿದ್ದ ಪಾತ್ರೆಯಲ್ಲಿದ್ದ ನೀರು ಕುಡಿದಿದ್ದಾರೆ. ಈ ವೇಳೆ ನಾಲ್ಕೈದು ಜನರು ಅವರನ್ನು ನಿಂದಿಸಿ ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಥಳಿಸಿದ್ದಾರೆ.
ಮೇಲ್ವರ್ಗದ ಜನರಿಗೆ ಇಟ್ಟಿದ್ದ ಪಾತ್ರೆಯಿಂದ ನೀರು ಕುಡಿದಿದ್ದಕ್ಕಾಗಿ ದುಷ್ಕರ್ಮಿಗಳು ಅವರಿಗೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚತುರ ರಾಮ್ ಅವರ ಕಿವಿಯ ಹಿಂದೆ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ದು ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ದಲಿತರಿಗಾಗಿ ಮೀಸಲಿಟ್ಟ ಹಣದ ದುರ್ಬಳಕೆ ಆರೋಪ: ಮಕ್ಕಳಿಗೆ ವೇದಗಣಿತ ಕಲಿಸುವುದಕ್ಕೆ ತಜ್ಞರು, ಹೋರಾಟಗಾರರ ವಿರೋಧ
ಸಂತ್ರಸ್ತ ಚತುರ ರಾಮ್ ಅವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಗುಂಡು ಹಾರಿಸಿದ್ದಾರೆ ಎಂಬ ಚತುರ ರಾಮ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು ಈ ಹೇಳಿಕೆಯನ್ನು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ನೀರಿನ ಮಡಕೆಯನ್ನು ಮುಟ್ಟಿದ ಆರೋಪದ ಮೇಲೆ ಒಂಬತ್ತು ವರ್ಷದ ದಲಿತ ವಿದ್ಯಾರ್ಥಿ ತನ್ನ ಶಿಕ್ಷಕನಿಂದ ಥಳಿಸಲ್ಪಟ್ಟು ಸಾವಿಗೀಡಾಗಿದ್ದರು. ಈ ಪ್ರಕರಣದಲ್ಲಿ ಶಿಕ್ಷಕನನ್ನು ಬಂಧಿಸಿ ಭಾರತೀಯ ದಂಡ ಸಂಹಿತೆ (IPC) ಮತ್ತು SC/ST ಕಾಯಿದೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.