ಕೇರಳದ ಅಥುಲ್ಯಾ ಶೇಖರ್ ಎಂಬ ಮಹಿಳೆ ಶನಿವಾರ (ಜು.19) ಮುಂಜಾನೆ ಯುಎಇಯ ಶಾರ್ಜಾದ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಈ ಸಂಬಂಧ ಕೇರಳ ಪೊಲೀಸರು ಆಕೆಯ ಪತಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ತನ್ನ 30ನೇ ಹುಟ್ಟುಹಬ್ಬ ಮತ್ತು ಹೊಸ ಕೆಲಸದ ಮೊದಲ ದಿನದಂದೇ ಅಥುಲ್ಯಾ ಅವರ ಸಾವು ಸಂಭವಿಸಿದೆ ಎಂದು ಅವರ ಕುಟುಂಬವನ್ನು ಉಲ್ಲೇಖಿಸಿ ಗಲ್ಫ್ ನ್ಯೂಸ್ ವರದಿ ಮಾಡಿದೆ.
ಮಹಿಳೆಯ ತಾಯಿ ನೀಡಿದ ದೂರಿನ ಪ್ರಕಾರ, ಜುಲೈ 18 ಮತ್ತು 19 ರ ನಡುವೆ ಅಥುಲ್ಯಾ ಅವರ ಪತಿ ಸತೀಶ್ ಆಕೆಯ ಕತ್ತು ಹಿಸುಕಿ, ಹೊಟ್ಟೆಗೆ ಒದ್ದು, ತಲೆಗೆ ತಟ್ಟೆಯಿಂದ ಹೊಡೆದು ಹಿಂಸಿದಿದ್ದಾರೆ. ಇದರಿಂದ ಆಕೆ ಸಾವನಪ್ಪಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಶಾರ್ಜಾದಲ್ಲಿ ವಾಸಿಸುತ್ತಿರುವ ಅವರ ಸಹೋದರಿ ಮತ್ತು ಸೋದರ ಮಾವನ ಪ್ರಕಾರ, ಅಥುಲ್ಯಾ ಶೇಖರ್ ರೋಲ್ಲಾ ಪ್ರದೇಶದ ತಮ್ಮ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
10 ವರ್ಷದ ಬಾಲಕಿಯ ತಾಯಿ ಅಥುಲ್ಯಾ ಅವರ ಸಾವು ಯುಎಇಯಲ್ಲಿರುವ ಭಾರತೀಯ ಸಮುದಾಯದಲ್ಲಿ ಹೊಸ ಆಘಾತದ ಉಂಟುಮಾಡಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಶಾರ್ಜಾದಲ್ಲಿ ಮತ್ತೊಬ್ಬರು ಮಲಯಾಳಿ ಮಹಿಳೆ ಮತ್ತು ಆಕೆಯ 16 ತಿಂಗಳ ಮಗು ಸಾವಿಗೀಡಾದ ವಾರದೊಳಗೆ ಈ ಘಟನೆ ನಡೆದಿದೆ.
ಜುಲೈ 8ರಂದು ವಿಪಂಚಿಕಾ ಎಂಬ ಮಹಿಳೆ ಗಂಡನ ಚಿತ್ರಹಿಂಸೆ ತಾಳಲಾರದೆ ತನ್ನ ಮಗಳನ್ನು ಕೊಂದು, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೊಲ್ಲಂ ಜಿಲ್ಲೆಯ ಕುಂದರಾ ಪೊಲೀಸರು ವಿಪಂಚಿಕಾ ಅವರ ಗಂಡ ನಿತೀಶ್, ಅತ್ತಿಗೆ ನೀತು ಮತ್ತು ಮಾವ ಮೋಹನನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ವರದಕ್ಷಿಣೆ ಕಿರುಕುಳ ಆರೋಪ
ಅಥುಲ್ಯಾ ಪ್ರಕರಣದಲ್ಲಿ ವರದಕ್ಷಿಣೆ ಕಿರುಕುಳದ ಆರೋಪ ಕೇಳಿ ಬಂದಿದೆ. 2014ರಲ್ಲಿ ಅಥುಲ್ಯಾ ಅವರ ಮದುವೆ ಸಮಯದಲ್ಲಿ ಒಂದು ಬೈಕ್ ಮತ್ತು 43 ಪೌಂಡ್ ಚಿನ್ನ ನೀಡಿದ್ದರೂ, ಸಾಕಷ್ಟು ವರದಕ್ಷಿಣೆ ನೀಡಿಲ್ಲ ಎಂದು ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು ಎಂದು ಆಕೆಯ ತವರು ಮನೆಯವರು ಆರೋಪಿಸಿದ್ದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ನಿರಂತರ ವರದಕ್ಷಿಣೆ ಕಿರುಕುಳದಿಂದ ಅಥುಲ್ಯಾ ಹಲವು ವರ್ಷಗಳಿಂದ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ಅನುಭವಿಸುತ್ತಿದ್ದರು ಎಂದು ಆಕೆಯ ಕುಟುಂಬ ಆರೋಪಿಸಿದೆ.
ಅಥುಲ್ಯಾ ಪತಿ ಸತೀಶ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ, 1961 ರ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪ ನಿರಾಕರಿಸಿದ ಪತಿ
ಯುಎಇಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಥುಲ್ಯಾ ಪತಿ ಸತೀಶ್ ತನ್ನ ವಿರುದ್ದದ ಆರೋಪಗಳನ್ನು ನಿರಾಕರಿಸಿದ್ದಾರೆ. ಅಥುಲ್ಯಾ ಸಾವಿನಲ್ಲಿ ತನ್ನ ಪಾತ್ರವಿಲ್ಲ ಎಂದು ಹೇಳಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದನ್ನು ನಾನು ನಂಬುವುದಿಲ್ಲ. ನಾನು ಕೂಡ ಆಕೆಯ ಸಾವಿಗೆ ಕಾರಣ ಹುಡುಕುತ್ತಿದ್ದೇನೆ ಎಂದು ಹೇಳಿದ್ದಾರೆ.
ಅಥುಲ್ಯಾ ತಂದೆ ಕೂಡ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. “ನನ್ನ ಮಗಳು ಆತ್ಮಹತ್ಯೆಯಿಂದ ಸಾಯುತ್ತಾಳೆ ಎಂದು ನಾನು ನಂಬುವುದಿಲ್ಲ. ಆಕೆ ತನ್ನ ಮಗಳೊಂದಿಗೆ ಬಹಳ ಆತ್ಮೀಯ ಸಂಬಂಧವನ್ನು ಹೊಂದಿದ್ದಳು. ಎಲ್ಲವನ್ನೂ ಆಕೆಯ ಜೊತೆ ಹಂಚಿಕೊಳ್ಳುತ್ತಿದ್ದಳು. ಅವಳ ಸಾವು ನಿಗೂಢವಾಗಿದೆ. ಅವಳಿಗೆ ನಿಖರವಾಗಿ ಏನಾಯಿತು ಎಂಬುದನ್ನು ನಾವು ಕಂಡುಹಿಡಿಯಬೇಕಿದೆ” ಎಂದಿದ್ದಾರೆ.
ಅಥುಲ್ಯಾ ಗಂಡನ ಕುರಿತು ಪ್ರತಿಕ್ರಿಯಿಸಿದ ಅವರು, “ಅವನೊಬ್ಬ ಮದ್ಯವ್ಯಸನಿ. ಯಾವಾಗಲೂ ಆಕೆಗೆ ಹಿಂಸೆ ನೀಡುತ್ತಿದ್ದ. ಆದರೆ, ಆಕೆ ಎಲ್ಲವನ್ನೂ ಸಹಿಸಿಕೊಂಡಿದ್ದಳು. ಈ ಹಿಂದೆಯೂ ಸಹ ಅಂತಹ ಸಮಸ್ಯೆಗಳು ಸಂಭವಿಸಿದ್ದವು. ಪೊಲೀಸ್ ಪ್ರಕರಣ ದಾಖಲಾಗಿತ್ತು. ಆದರೆ, ಈಗ ಆಕೆಗೆ ಏನಾಯಿತು ಎಂದು ನಿಖರವಾಗಿ ನಾವು ತಿಳಿದುಕೊಳ್ಳಬೇಕಿದೆ” ಎಂದು ಹೇಳಿದ್ದಾರೆ.
ಅಥುಲ್ಯಾ ಮೈ ಮೇಲೆ ಗಾಯದ ಗುರುತುಗಳು ಕಂಡು ಬಂದಿವೆ. ಆಕೆಯ ಪತಿ ಪ್ಲಾಸ್ಟಿಕ್ ಸ್ಟೂಲ್ ಎತ್ತಿ ಹೊಡೆಯುತ್ತಿರುವುದನ್ನು ತೋರಿಸುವ ವೀಡಿಯೊಗಳನ್ನು ಆಕೆಯ ಕುಟುಂಬ ಬಿಡುಗಡೆ ಮಾಡಿದೆ.
“ನಾವು ನಾಳೆ ಶಾರ್ಜಾ ಪೊಲೀಸರನ್ನು ಭೇಟಿ ಮಾಡಿ ಪ್ರಕರಣ ದಾಖಲಿಸುವ ಕುರಿತು ಚರ್ಚಿಸುತ್ತೇವೆ. ನಾವು ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನೂ ಸಹ ಸಂಪರ್ಕಿಸುತ್ತಿದ್ದೇವೆ” ಎಂದು ಅಥುಲ್ಯಾ ಅವರ ಸೋದರ ಮಾವ ಭಾನುವಾರ ಹೇಳಿರುವುದಾಗಿ ಗಲ್ಫ್ ನ್ಯೂಸ್ ವರದಿ ಮಾಡಿದೆ.
ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ: ವರದಕ್ಷಿಣೆ ಕಿರುಕುಳ ಆರೋಪ


