Homeಅಂತರಾಷ್ಟ್ರೀಯ'ಮತ್ತೊಂದು ನಕ್ಬಾ': ಗಾಝಾ ಚೇತರಿಕೆಗೆ ತಲೆಮಾರುಗಳೇ ಬೇಕು ಎಂದ ಯುಎನ್ ತಜ್ಞರು

‘ಮತ್ತೊಂದು ನಕ್ಬಾ’: ಗಾಝಾ ಚೇತರಿಕೆಗೆ ತಲೆಮಾರುಗಳೇ ಬೇಕು ಎಂದ ಯುಎನ್ ತಜ್ಞರು

- Advertisement -
- Advertisement -

ಕಳೆದ ಎರಡು ವರ್ಷಗಳಲ್ಲಿ ಇಸ್ರೇಲ್ ಗಾಝಾ ಮೇಲೆ ನಡೆಸಿದ ಆಕ್ರಮಣವನ್ನು ಮತ್ತೊಂದು ನಕ್ಬಾ (ದುರಂತ) ಎನ್ನಬಹುದು. ಗಾಝಾ ಚೇತರಿಸಿಕೊಳ್ಳಲು ತಲೆಮಾರುಗಳೇ ಬೇಕು ಎಂದು ವಿಶ್ವಸಂಸ್ಥೆಯ ತಜ್ಞರು ಹೇಳುತ್ತಾರೆ.

ಕದನ ವಿರಾಮ ಜಾರಿಯಾದ ಹಿನ್ನೆಲೆ, ಸದ್ಯಕ್ಕೆ ಇಸ್ರೇಲ್ ಬಾಂಬ್ ದಾಳಿಯನ್ನು ನಿಲ್ಲಿಸಿದೆ. ಒತ್ತಾಯಪೂರ್ವಕವಾಗಿ ಸ್ಥಳಾಂತರಿಸಲ್ಪಟ್ಟಿದ್ದ ಸಾವಿರಾರು ಪ್ಯಾಲೆಸ್ತೀನಿಯರು ತಮ್ಮ ಊರುಗಳಿಗೆ ಮರಳುತ್ತಿದ್ದಾರೆ. ಈಗಾಗಲೇ ಉತ್ತರ ಗಾಝಾ ತಲುಪಿದವರ ಪೈಕಿ ಕೆಲವರು ರಕ್ಷಣಾ ತಂಡಗಳ ಜೊತೆಗೂಡಿ ತಮ್ಮವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೂ ಕೆಲವರು ಕುಸಿದ ಕಟ್ಟಡಗಳ ಅವಶೇಷಗಳನ್ನು ಬುಲ್ಡೋಝರ್ ಮೂಲಕ ತೆರವುಗೊಳಿಸಿ ಹೊಸ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ತಮ್ಮ ಊರುಗಳತ್ತ ಮರಳುತ್ತಿರುವ ಜನರ ಮನೆಗಳು ಸಂಪೂರ್ಣ ನಾಶವಾಗಿರುವುದರಿಂದ ಅವರಿಗೆ ತಾತ್ಕಾಲಿಕವಾಗಿ ತಂಗಲು ಡೇರೆಗಳು ಮತ್ತು ಕಾರವಾನ್‌ಗಳ ಅಗತ್ಯವಿದೆ. ಅದು ತಕ್ಷಣವೇ ತಲುಪಿಸಲು ಅವಕಾಶ ನೀಡಬೇಕು. ಗಾಝಾದ ಗಡಿಗಳನ್ನು ತೆರೆಯಬೇಕು ಎಂದು ವಿಶ್ವಸಂಸ್ಥೆ ಆಗ್ರಹಿಸಿದೆ.

ಉತ್ತರ ಗಾಝಾದಿಂದ ಇಸ್ರೇಲ್ ತನ್ನ ಸೇನೆಯನ್ನು ಹಿಂತೆಗೆದುಕೊಂಡಿದೆ. ಅಲ್ಲಿಗೆ ಜನರು ಮರಳುತ್ತಿದ್ದಾರೆ. ಆದರೆ, ಕಣ್ಣು ಹಾಯಿಸಿದಷ್ಟು ಪ್ರದೇಶದಲ್ಲಿ ಕೇವಲ ಕಟ್ಟಡಗಳ ಅವಶೇಷಗಳು ಹೊರತು ಇನ್ನೇನು ಕಾಣುತ್ತಿಲ್ಲ ಎಂದು ಜನರ ವಸತಿ ಹಕ್ಕಿನ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರ ಬಾಲಕೃಷ್ಣನ್ ರಾಜಗೋಪಾಲ್ ಹೇಳಿದ್ದಾರೆ.

“ಮಾನಸಿಕ ಪರಿಣಾಮಗಳು ಮತ್ತು ಆಘಾತವು ಆಳವಾದವು. ಉತ್ತರ ಗಾಝಾಗೆ ಹಿಂದಿರುಗುತ್ತಿರುವ ಜನರಲ್ಲಿ ನಾವೀಗ ನೋಡುತ್ತಿರುವುದು ಅದನ್ನೇ ಎಂದು ಶನಿವಾರ ಅಲ್- ಜಝೀರಾಗೆ ನೀಡಿದ ಸಂದರ್ಶನದಲ್ಲಿ ರಾಜಗೋಪಾಲ್ ತಿಳಿಸಿದ್ದಾರೆ.

ಇಸ್ರೇಲ್ ಆಕ್ರಮಣದಿಂದ ಗಾಝಾ ಶೇಕಡ 92ರಷ್ಟು ವಸತಿ ಕಟ್ಟಡಗಳು ಹಾನಿಗೊಳಗಾಗಿವೆ ಅಥವಾ ಧ್ವಂಸಗೊಂಡಿವೆ. ಹಾಗಾಗಿ, ಲಕ್ಷಾಂತರು ಜನರು ಡೇರೆಗಳು ಮತ್ತು ಇತರ ತಾತ್ಕಾಲಿಕ ಆಶ್ರಯಗಳಲ್ಲಿ ವಾಸಿಸಬೇಕಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.

ಈ ವರ್ಷದ ಆರಂಭದಲ್ಲಿ ತಾತ್ಕಾಲಿಕ ಕದನ ವಿರಾಮ ಜಾರಿಯಾದಾಗ ಗಾಝಾಗೆ ಡೇರೆಗಳು ಮತ್ತು ಕಾರವಾನ್‌ಗಳನ್ನು ತಲುಪಿಸಬೇಕಾಗಿತ್ತು. ಆದರೆ, ಇಸ್ರೇಲ್‌ನ ಕಟ್ಟುನಿಟ್ಟಿನ ದಿಗ್ಬಂಧನದಿಂದಾಗಿ ಅದು ಸಾಧ್ಯವಾಗಿಲ್ಲ ಎಂದು ರಾಜಗೋಪಾಲ್ ಹೇಳಿದ್ದಾರೆ.

ಈಗ ತಕ್ಷಣ ಗಾಝಾದ ಗಡಿಗಳನ್ನು ತೆರೆದು ನೆರವು ಸಾಮಾಗ್ರಿಗಳನ್ನು ಜನರಿಗೆ ತಲುಪಿಸಲು ಅನುಮತಿಸಬೇಕು. ಯುದ್ಧ ಭೂಮಿಯಲ್ಲಿ ಕಟ್ಟಡಗಳ ಅವಶೇಷಗಳು ಹೊರತು ಜೀವಿಸಲು ಬೇಕಾದ ಏನೂ ಇಲ್ಲ. ಗಡಿ ತೆರೆಯದ ಹೊರತು ಗಾಝಾಗೆ ಹಿಂದಿರುಗಿದ ಜನರಿಗೆ ಯಾವುದೇ ಪ್ರಯೋಜನ ಆಗದು ಎಂದು ರಾಜಗೋಪಾಲ್ ತಿಳಿಸಿದ್ದಾರೆ.

ಗಾಝಾ ಪಟ್ಟಿಯಾದ್ಯಂತ ಮನೆಗಳ ನಾಶವನ್ನು ವಿವರಿಸಲು ‘ದೇಶ ಹತ್ಯೆ’ ಎಂಬ ಪದವನ್ನು ಬಳಸಿದ ರಾಜಗೋಪಾಲ್, ಗಾಝಾದಲ್ಲಿನ ವಸತಿ ನಾಶವು ಪ್ಯಾಲೆಸ್ತೀನಿಯರ ವಿರುದ್ಧ ಇಸ್ರೇಲ್ ನಡೆಸಿದ ನರಮೇಧದ ಪ್ರಮುಖ ಅಂಶ ಎಂದಿದ್ದಾರೆ.

ಮನೆಗಳನ್ನು ನಾಶಪಡಿಸುವುದು, ಒಂದು ಪ್ರದೇಶದಿಂದ ಜನರನ್ನು ತೆರವುಗೊಳಿಸುವುದು ಮತ್ತು ಆ ಪ್ರದೇಶವನ್ನು ವಾಸಯೋಗ್ಯವಲ್ಲದವನ್ನಾಗಿ ಮಾಡುವುದು ನರಮೇಧದಕ್ಕೆ ಪ್ರಮುಖ ಉದಾಹರಣೆಗಳಾಗಿವೆ. ಗಾಝಾ ಚೇತರಿಸಿಕೊಳ್ಳಲು ತಲೆಮಾರುಗಳೇ ಬೇಕು ಎಂದು ರಾಜಗೋಪಾಲ್ ಹೇಳಿದ್ದಾರೆ.

1948ರಲ್ಲಿ ಇಸ್ರೇಲ್ ರಚನೆಯಾದಾಗ ಪ್ಯಾಲೆಸ್ತೀನ್‌ನಲ್ಲಿ ನಡೆದ ಜನಾಂಗೀಯ ಉಲ್ಲೇಖಿಸಿದ ಅವರು, “ಇದು ಮತ್ತೊಂದು ನಕ್ಬಾದಂತಿದೆ. ಏಕೆಂದರೆ, 1948ರಲ್ಲಿ ಏನು ನಡೆದಿತ್ತೋ ಅದೇ ಕಳೆದ ಎರಡು ವರ್ಷಗಳಲ್ಲಿ ನಡೆದಿದೆ ಎಂದಿದ್ದಾರೆ.

ಕದನ ವಿರಾಮ| ಮನೆಗೆ ಮರಳುತ್ತಿರುವ ಗಾಝಾ ಜನತೆ; ಅವಶೇಷಗಳಡಿ ತಮ್ಮವರಿಗಾಗಿ ಹುಡುಕಾಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -