ಕೊಟ್ಟಾಯಂನ ನರ್ಸಿಂಗ್ ಕಾಲೇಜಿನ ಐದು ವಿದ್ಯಾರ್ಥಿಗಳು ಭಯಾನಕ ರ‍್ಯಾಗಿಂಗ್ ಪ್ರಕರಣದಲ್ಲಿ ಉಚ್ಚಾಟನೆಗೆ ಒಳಗಾದ ಕೇವಲ 24 ಗಂಟೆಗಳ ನಂತರ ಕೇರಳದಲ್ಲಿ ಮತ್ತೊಂದು ಕ್ರೂರ ಪ್ರಕರಣ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಬೆಳಕಿಗೆ ಬಂದಿರುವ ಪ್ರಕರಣದಲ್ಲಿ, 11 ನೇ ತರಗತಿ ವಿದ್ಯಾರ್ಥಿಯ ಎಡಗೈಯಲ್ಲಿ ಮೂಳೆ ಮುರಿತ ಉಂಟಾಗಿದೆ. ಹಿರಿಯ ವಿದ್ಯಾರ್ಥಿಗಳು ತಮ್ಮನ್ನು ಗೌರವಿಸದ ಕಾರಣಕ್ಕಾಗಿ ಸಂತ್ರಸ್ತನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊಸ ಪ್ರಕರಣದ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಕೊಟ್ಟಾಯಂ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ನಡೆದ ಇನ್ನೊಂದು ರ‍್ಯಾಗಿಂಗ್ ಪ್ರಕರಣದಲ್ಲಿ, ಹಿರಿಯ ವಿದ್ಯಾರ್ಥಿಗಳು ಜೂನಿಯರ್ ವಿದ್ಯಾರ್ಥಿಯನ್ನು ಹಾಸಿಗೆಗೆ ಕಟ್ಟಿಹಾಕಿ ಥಳಿಸಿದ್ದು, ಅವನ ಜನನಾಂಗಗಳ ಮೇಲೆ ಡಂಬಲ್ಸ್‌ಗಳನ್ನು ಇರಿಸಿ ವಿಕೃತಿ ಮೆರೆದಿದ್ದಾರೆ. ಹಿಂಸೆ ನೀಡುವುದರಲ್ಲಿ ವಿಕೃತ ಆನಂದ ಅನುಭವಿಸುತ್ತಿದ್ದ ಅವರು, ಅಶ್ಲೀಲವಾಗಿ ಮಾತನಾಡುತ್ತಿರುವ ವೀಡಿಯೊವೊಂದು ವೈರಲ್ ಆಗಿದೆ. ಕಿರಿಯ ವಿದ್ಯಾರ್ಥಿಗಳಿಗೆ ಅವರು ಕಂಪಾಸ್‌ನಿಂದ ಚುಚ್ಚಿದ್ದಾರೆ.
ಐದು ಜನ ಮೂರನೇ ವರ್ಷದ ವಿದ್ಯಾರ್ಥಿಗಳನ್ನು ನಿನ್ನೆ ಬಂಧಿಸಲಾಗಿದೆ. ಅವರನ್ನು ಕಾಲೇಜಿನಿಂದ ಹೊರಹಾಕಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ. ಜೂನಿಯರ್ ವಿದ್ಯಾರ್ಥಿಗಳು ಸುಮಾರು ಮೂರು ತಿಂಗಳಿನಿಂದ ಈ ವಿಸ್ಕಾಟಿಕ್ ರ‍್ಯಾಗಿಂಗ್ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರಾಜ್ಯ ಪೊಲೀಸರಿಂದ 10 ದಿನಗಳಲ್ಲಿ ವರದಿ ಕೇಳಿದೆ.
ಇದನ್ನೂ ಒದಿ; ಕೇರಳ| ನರ್ಸಿಂಗ್ ಕಾಲೇಜಿನ ರ‍್ಯಾಗಿಂಗ್ ವೀಡಿಯೊ ವೈರಲ್; ಬಲಿಪಶುವನ್ನು ಕಟ್ಟಿಹಾಕಿ ಚಿತ್ರಹಿಂಸೆ


