ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ ‘ಕರ್ಮಶ್ರೀ’ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ.
ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ ಎಂದ ಮಮತಾ ಬ್ಯಾನರ್ಜಿ, ರಾಷ್ಟ್ರಪಿತನಿಗೆ ಅವರು ಗೌರವ ಸಲ್ಲಿಸದಿದ್ದರೆ ನಾನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಕೋಲ್ಕತ್ತಾದ ಧೋನೋ ಧನ್ಯೋ ಸಭಾಂಗಣದಲ್ಲಿ ನಡೆದ ವ್ಯಾಪಾರ ಮತ್ತು ಕೈಗಾರಿಕಾ ಸಮಾವೇಶದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)’ಯ ಹೆಸರು ಮತ್ತು ನಿಬಂಧನೆಗಳನ್ನು ಬದಲಿಸುವ ‘ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಝ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) 2025 (ವಿಬಿ-ಜಿ ರಾಮ್-ಜಿ) ಎಂಬ ಹೊಸ ಮಸೂದೆಗೆ ಗುರುವಾರ (ಡಿಸೆಂಬರ್ 18) ಲೋಕಸಭೆಯ ಅನುಮೋದನೆ ಪಡೆದಿದೆ.
ಈ ಮಸೂದೆ 2005ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದ ನರೇಗಾ ಕಾಯ್ದೆ ಮತ್ತು ಯೋಜನೆಯ ಹೆಸರು, ನಿಬಂಧನೆಗಳನ್ನು ಬದಲಿಸಲಿದೆ. ಮುಖ್ಯವಾಗಿ ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದು ಹಾಕಲಿದೆ.
ನರೇಗಾ ಕಾಯ್ದೆಯ ಹೆಸರು ಬದಲಿಸಿರುವ ಕೇಂದ್ರ ಕೆಲಸದ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಳ ಮಾಡುವುದಾಗಿ ಹೇಳಿದೆ. ಇದಕ್ಕೆ ಟಕ್ಕರ್ ಕೊಟ್ಟಿರುವ ಮಮತಾ ಬ್ಯಾನರ್ಜಿ ‘ಕರ್ಮಶ್ರೀ’ ಯೋಜನೆಯಡಿ ಪ್ರಸ್ತುತ ಇರುವ ಕೆಲಸದ ದಿನಗಳು 75 ಅನ್ನು100ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ.
“ನಾವು ಈಗಾಗಲೇ ‘ಕರ್ಮಶ್ರೀ’ ಅಡಿಯಲ್ಲಿ ಸಾಕಷ್ಟು ಕೆಲಸದ ದಿನಗಳನ್ನು ಸೃಷ್ಟಿಸಿದ್ದೇವೆ. ಅದನ್ನು ನಾವು ನಮ್ಮ ಸ್ವಂತ ಸಂಪನ್ಮೂಲಗಳಿಂದ ನಡೆಸುತ್ತಿದ್ದೇವೆ. ಕೇಂದ್ರ ನಿಧಿಯನ್ನು ನಿಲ್ಲಿಸಿದರೂ, ಜನರಿಗೆ ಕೆಲಸ ಸಿಗುವಂತೆ ನೋಡಿಕೊಳ್ಳುತ್ತೇವೆ. ನಾವು ಭಿಕ್ಷುಕರಲ್ಲ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಪಾಲಿಸದ ಕಾರಣ ನೀಡಿ 2005ರ ನರೇಗಾ ಕಾಯ್ದೆಯ ಸೆಕ್ಷನ್ 27 ಅನ್ನು ಅನ್ವಯಿಸಿ ಕೇಂದ್ರ ಸರ್ಕಾರ ಮಾರ್ಚ್ 9, 2022ರಿಂದ ಪಶ್ಚಿಮ ಬಂಗಾಳಕ್ಕೆ ಯೋಜನೆಯ ಹಣ ಬಿಡುಗಡೆ ಮಾಡುವುದನ್ನು ಸ್ಥಗಿತಗೊಳಿಸಿದೆ.
ಅಂದಿನಿಂದ, ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಯಾವುದೇ ಕೆಲಸ ನಡೆದಿಲ್ಲ. ಯೋಜನೆಯನ್ನು ಸ್ಥಗಿತಗೊಳಿಸುವ ಮೊದಲು, 2014-15 ಮತ್ತು 2021-22 ರ ನಡುವೆ ಪಶ್ಚಿಮ ಬಂಗಾಳದ 51 ಲಕ್ಷದಿಂದ 80 ಲಕ್ಷ ಕುಟುಂಬಗಳು ವಾರ್ಷಿಕವಾಗಿ ಅದರ ಲಾಭ ಪಡೆಯುತ್ತಿದ್ದವು.
ಕೇಂದ್ರ ಸರ್ಕಾರ ಹಣ ನೀಡುವುದನ್ನು ನಿಲ್ಲಿಸಿರುವುದರ ವಿರುದ್ದ ಪಶ್ಚಿಮ ಬಂಗಾಳ ಸರ್ಕಾರ ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಆಗಸ್ಟ್ 1, 2025ರಿಂದ ಪಶ್ಚಿಮ ಬಂಗಾಳದಲ್ಲಿ ಯೋಜನೆಯನ್ನು ಪುನರ್ ಅನುಷ್ಠಾನಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಅಕ್ಟೋಬರ್ 27, 2025ರಂದು ಕೇಂದ್ರದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನೆಡೆಯಾದ ಕಾರಣ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಪಶ್ಚಿಮ ಬಂಗಾಳದಲ್ಲಿ ವಿಶೇಷ ಷರತ್ತುಗಳೊಂದಿಗೆ ಯೋಜನೆ ಪುನರಾರಂಭಿಸಲು ಮುಂದಾಗಿದೆ ಎಂದು ವರದಿಯಾಗಿದೆ.


