ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರನ್ನು “ಅವಮಾನಿಸಿದ” ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾಯಿಸಿ, ಕಾಂಗ್ರೆಸ್ ಪಕ್ಷವೂ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್’ ಅಭಿಯಾನವನ್ನು ಪ್ರಾರಂಭಿಸಿರುವುದಾಗಿ ಶನಿವಾರ ಹೇಳಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಪವನ್ ಖೇರಾ ಮಾತನಾಡಿ, ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಗೃಹ ಸಚಿವ ಅಮಿತ್ ಶಾ ಅವರನ್ನು ವಜಾಗೊಳಿಸಬೇಕೆಂಬ ನಮ್ಮ ಬೇಡಿಕೆಯನ್ನು ನಾವು ಪುನರುಚ್ಚರಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಅಂಬೇಡ್ಕರ್ ವಿರೋಧಿ
ಅಭಿಯಾನದಡಿಯಲ್ಲಿ ಪಕ್ಷದ ಮುಖಂಡರು ಪ್ರತಿ ಜಿಲ್ಲೆಯಲ್ಲೂ ‘ಸಭೆ’ಗಳನ್ನು ಆಯೋಜಿಸಿ, ಬಿಜೆಪಿ ಮತ್ತು ಆರ್‌ಎಸ್‌ಎಸ್ ದಶಕಗಳಿಂದ ಹೇಗೆ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಅವಮಾನಿಸುತ್ತಿವೆ ಎಂಬುದನ್ನು ಜನರಿಗೆ ತಿಳಿಸಲಿದ್ದಾರೆ ಎಂದು ಪವನ್ ಖೇರಾ ಹೇಳಿದ್ದಾರೆ. ಅಂಬೇಡ್ಕರ್ ವಿರೋಧಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅಭಿಯಾನವು ಜನವರಿ 26ರ ವರೆಗೆ ನಡೆಯಲಿದ್ದು, ಅಂದು ಅಂಬೇಡ್ಕರ್ ಅವರ ಜನ್ಮಸ್ಥಳವಾದ ಮಧ್ಯಪ್ರದೇಶದ ಮ್ಹೋವ್‌ನಲ್ಲಿ ಸಂವಿಧಾನ ಮತ್ತು ಗಣರಾಜ್ಯದ 75 ವರ್ಷಗಳ ಸ್ಮರಣಾರ್ಥ ಬೃಹತ್ ರ್ಯಾಲಿಯೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಪವನ್ ಖೇರಾ ಹೇಳಿದ್ದಾರೆ.
“ಅಂಬೇಡ್ಕರ್ ಅವರ ಪರಂಪರೆ ಮತ್ತು ಮೌಲ್ಯಗಳನ್ನು ಕಾಪಾಡಲು, ‘ಸಂವಿಧಾನ್ ಬಚಾವೋ ರಾಷ್ಟ್ರೀಯ ಪಾದಯಾತ್ರೆ’ ಜನವರಿ 26, 2025 ರಿಂದ ಜನವರಿ 26, 2026 ರವರೆಗೆ ನಡೆಯಲಿದೆ. ಏಕತೆ ಮತ್ತು ಸಾಮಾಜಿಕ ನ್ಯಾಯದ ಪ್ರಬಲ ಸಂದೇಶದೊಂದಿಗೆ ಭಾರತದಾದ್ಯಂತ ಹಳ್ಳಿಗಳು ಮತ್ತು ಪಟ್ಟಣಗಳನ್ನು ಈ ಪಾದಯಾತ್ರೆ ಸಂಚರಿಸಲಿದೆ” ಎಂದು ಪವನ್ ಖೇರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದೇಶದ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಮಹಾತ್ಮಾ ಗಾಂಧಿ, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಜವಾಹರಲಾಲ್ ನೆಹರು ಅವರಂತಹ ರಾಷ್ಟ್ರೀಯ ನಾಯಕರನ್ನು ರಾಕ್ಷಸೀಕರಣ ಮಾಡುವುದನ್ನು ಸಾಮಾನ್ಯೀಕರಿಸಲು ಬಿಜೆಪಿ ನಾಯಕತ್ವ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಡಿಸೆಂಬರ್ 17 ರಂದು ರಾಜ್ಯಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಗೆ ಉತ್ತರಿಸುತ್ತಾ ಮಾತನಾಡಿದ್ದ ಅಮಿತ್ ಶಾ, ಕಾಂಗ್ರೆಸ್ ಪದೇ ಪದೇ ಅಂಬೇಡ್ಕರ್ ಹೆಸರನ್ನು ತೆಗೆದುಕೊಳ್ಳುತ್ತಿದೆ ಎಂದು ಟೀಕಿಸಿದ್ದರು. ಈ ವೇಳೆ ಅವರು, “ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎಂದು ಹೇಳುವುದು ಫ್ಯಾಷನ್ ಆಗಿಬಿಟ್ಟಿದೆ… ಇಷ್ಟು ಬಾರಿ ದೇವರ ನಾಮಸ್ಮರಣೆ ಮಾಡಿದ್ದರೆ ಸ್ವರ್ಗದಲ್ಲಿ ಸ್ಥಾನ ಪಡೆಯುತ್ತಿದ್ದರು” ಎಂದು ಹೇಳಿದ್ದರು.
ಈ ವಿಚಾರದಲ್ಲಿ ಗೃಹ ಸಚಿವರು ಕ್ಷಮೆಯಾಚಿಸುತ್ತಾರೆ ಮತ್ತು ಪ್ರಧಾನಿ ಮಧ್ಯಸ್ಥಿಕೆ ವಹಿಸುತ್ತಾರೆ ಎಂದು ನಾವು ಆಶಿಸಿದ್ದೆವು. ಆದರೆ ಪ್ರಧಾನಿ ಮೋದಿ ಅವರು ಗೃಹ ಸಚಿವರನ್ನು ಬೆಂಬಲಿಸಿ ಅಂಬೇಡ್ಕರ್ ಅವರನ್ನು ಅವಮಾನಿಸುವಲ್ಲಿ ಪಾಲುದಾರರಾದರು ಎಂದು ಪವನ್ ಖೇರಾ ಹೇಳಿದ್ದಾರೆ.
ಬೆಳಗಾವಿಯ ಸಭೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸಲಾಗಿದ್ದು, ಅಲ್ಲಿ ಪಕ್ಷವು ದೇಶಾದ್ಯಂತ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್’ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಲಾಯಿತು ಎಂದು ಅವರು ಹೇಳಿದ್ದಾರೆ. “ಈ ಅಭಿಯಾನದ ಅಡಿಯಲ್ಲಿ, ನಾವು ಪ್ರತಿ ಜಿಲ್ಲೆಯಲ್ಲೂ ‘ಜನಸಂಪರ್ಕ ಸಭೆ’ಗಳನ್ನು ಆಯೋಜಿಸುತ್ತೇವೆ ಮತ್ತು ಬಿಜೆಪಿ-ಆರ್‌ಎಸ್‌ಎಸ್ ದಶಕಗಳಿಂದ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಹೇಗೆ ಅವಮಾನಿಸುತ್ತಿದೆ ಎಂಬುದನ್ನು ಜನರಿಗೆ ತಿಳಿಸುತ್ತೇವೆ ಎಂದು ಪವನ್ ಖೇರಾ ಹೇಳಿದ್ದಾರೆ.
ನವೆಂಬರ್ 30, 1949 ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತನ್ನ ಮುಖವಾಣಿ ‘ಆರ್ಗನೈಸರ್’ ನಲ್ಲಿ ಸಂವಿಧಾನವನ್ನು “ಭಾರತೀಯತೆ ಇಲ್ಲದ್ದು” ಎಂದು ವಿವರಿಸಿತ್ತು ಎಂಬುದನ್ನು ಪವನ್ ಖೇರಾ ನೆನಪಿಸಿಕೊಂಡಿದ್ದಾರೆ. ಅಂಬೇಡ್ಕರ್ ಅವರು ಮಹಿಳೆಯರಿಗೆ ಸಮಾನ ಹಕ್ಕುಗಳ ಬಗ್ಗೆ ಮಾತನಾಡುವ ವೇಳೆ ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದ ಆರೆಸ್ಸೆಸ್, ದೆಹಲಿಯ ರಾಮಲೀಲಾ ಮೈದಾನದಲ್ಲಿ ಅವರ ಪ್ರತಿಕೃತಿ ದಹಿಸಿತ್ತು. ಅಂಬೇಡ್ಕರ್ ಅವರಷ್ಟೇ ಅಲ್ಲ, ಗಾಂಧೀಜಿಯವರ ಪರಂಪರೆಯ ಮೇಲೂ ಇಂದು ದಾಳಿ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂಓದಿ: ಕ್ಯಾಮೆರಾ ಮುಂದೆಯೆ ಯುವಕನಿಗೆ ಜನಾಂಗೀಯ ನಿಂದನೆ ಮಾಡಿದ ರಿಪಬ್ಲಿಕ್ ಕನ್ನಡ ವರದಿಗಾರ
ಕ್ಯಾಮೆರಾ ಮುಂದೆಯೆ ಯುವಕನಿಗೆ ಜನಾಂಗೀಯ ನಿಂದನೆ ಮಾಡಿದ ರಿಪಬ್ಲಿಕ್ ಕನ್ನಡ ವರದಿಗಾರ


