ವಿದೇಶಗಳಿಂದ ಪಡೆದ ನಿಧಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಅವರಿಗೆ ದೆಹಲಿ ಹೈಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ಏಕ ಸದಸ್ಯ ಪೀಠ ಪುರ್ಕಾಯಸ್ಥ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ. ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ದಾಖಲಿಸಿದ್ದ ಪ್ರಕರಣ ಆಧರಿಸಿ ಪುರ್ಕಾಯಸ್ಥ ವಿರುದ್ದ ಇಡಿ ತನಿಖೆ ಕೈಗೊಂಡಿತ್ತು.
ಫೆಬ್ರವರಿ 2021ರಲ್ಲಿ, ಇಡಿ ನ್ಯೂಸ್‌ಕ್ಲಿಕ್ ಸಂಸ್ಥಾಪಕರು ಮತ್ತು ಉದ್ಯೋಗಿಗಳ ಮನೆಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿತ್ತು. ನಾಲ್ಕು ದಿನಗಳಿಗೂ ಹೆಚ್ಚು ಕಾಲ ಪರಿಶೀಲನೆ ಕೈಗೊಂಡಿತ್ತು. ಪುರ್ಕಾಯಸ್ಥ ಅವರನ್ನು ಮನೆಯಲ್ಲಿ ಬಂಧಿಸಿಡಲಾಗಿತ್ತು.
ನ್ಯೂಸ್‌ಕ್ಲಿಕ್ ವಿರುದ್ಧ ಮಾಡಲಾದ ಆರೋಪಗಳಲ್ಲಿ ಷೇರುಗಳ ಅತಿಯಾದ ಮೌಲ್ಯಮಾಪನ, ಹಣವನ್ನು ಬೇರೆಡೆಗೆ ತಿರುಗಿಸುವುದು ಮತ್ತು ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನಿಯಮಗಳ ಉಲ್ಲಂಘನೆ ಸೇರಿವೆ.
ಪ್ರಕರಣ ಸಂಬಂಧ ಇಸಿಐಆರ್ ಪ್ರತಿಯನ್ನು ನೀಡುವಂತೆ ಇಡಿಗೆ ನಿರ್ದೇಶನ ನೀಡಲು ಕೋರಿ ನ್ಯೂಸ್‌ಕ್ಲಿಕ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು ಮತ್ತು ಈ ಮಧ್ಯೆ ಯಾವುದೇ ರೀತಿಯ ಬಲವಂತದ ಕ್ರಮದಿಂದ ರಕ್ಷಣೆ ನೀಡುವಂತೆಯೂ ಅದು ಕೋರಿತ್ತು.
ಜೂನ್ 2021ರಲ್ಲಿ ಪುರ್ಕಾಯಸ್ಥ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ನಿರ್ದೇಶಿಸಿತ್ತು.
ಧನಕರ್ ರಾಜೀನಾಮೆ ಬೆನ್ನಲ್ಲೇ ನ್ಯಾ. ವರ್ಮಾ ಪದಚ್ಯುತಿ ಪ್ರಕ್ರಿಯೆ ಪ್ರಾರಂಭಿಸಿದ ಕೇಂದ್ರ


